ತುಂಬಲಾರದ ನಷ್ಟವಾದರೂ ತುಂಬಲೇಬೇಕಾದ ಅನಿವಾರ್ಯತೆ



ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ರಂತಹಾ ಒಬ್ಬ ಧೀಮಂತ ಸೇನಾ ನಾಯಕರು. ನಾಲ್ಕು ದಶಕಗಳ ಕಾಲ ನಿರಂತರವಾಗಿ ತಾಯ್ನಾಡಿನ ಸೇವೆ ಸಲ್ಲಿಸಿದ ಕೆಚ್ಚೆದೆಯ ಕಲಿ ಜನರಲ್ ಬಿಪಿನ್ ರಾವತ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೆಯೇ ಅವರೊಂದಿಗೆ ಮಡಿದ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಇತರೆ ಹನ್ನೊಂದು ಮಂದಿಯವರ ಆತ್ಮಕ್ಕೂ ಶಾಂತಿ ಸಿಗಲೆಂದು ಪ್ರಾರ್ಥಿಸೋಣ. ಲೇಖಕ ಹಿರಿಯೂರು ಪ್ರಕಾಶ್ ಅವರಿಂದ ಅಕ್ಷರ ನಮನ…

ಎಲ್ಲೋ ಒಂದೆಡೆ ‌ಭರಪೂರ ಭರವಸೆ, ಅದಮ್ಯ ಸುರಕ್ಷತೆ, ಅಸೀಮ‌ ಭದ್ರತೆ ಹಾಗೂ ಎಂತಹಾ ಶತ್ರುಗಳಿಗೂ ಜಗ್ಗದ, ಬಗ್ಗದ, ಕೆಚ್ಚೆದೆಯ ಭಾರತೀಯ ಸೇನಾಪಡೆ ಮತ್ತದರ ಧೀಮಂತ ಮುಖ್ಯಸ್ಥ. ಈ ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ನಾಡಿನ ಪ್ರಜೆಗಳೆಲ್ಲರೆದೆಯಲ್ಲಿ ತುಂಬಿ ಇಡೀ ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ, ಶತ್ರು ದೇಶಗಳ ನರನಾಡಿಗಳಲ್ಲಿ ದಿಗಿಲು ಹುಟ್ಟಿಸುವಂತೆ , ಮಿತ್ರ ದೇಶಗಳಲ್ಲಿ ಮೆಚ್ಚುಗೆ ಮೂಡಿಸುವಂತೆ ನಮ್ಮ ಸೇನಾಪಡೆಗಳನ್ನು ಮುನ್ನಡೆಸುತ್ತಿದ್ದ #ಭಾರತೀಯ_ರಕ್ಷಣಾಪಡೆಯ ಮೊದಲ ಮುಖ್ಯಸ್ಥರೂ (CDS), ಭಾರತದ ಮೂರೂ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ಲ‍ಕ್ಶ್ಮನ್ ಸಿಂಘ್ ರಾವತ್ ಇಂದು ತಮಿಳುನಾಡಿನ ಕುನೂರ್ ಬಳಿ ನೆಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಪ್ರಾಣತ್ಯಾಗ ಮಾಡಿರುವುದು ನಮ್ಮ ರಕ್ಷಣಾ ವಲಯಕ್ಕೆ ಬಿದ್ದ ಭಾರೀ ಪೆಟ್ಟು ಮಾತ್ರವಲ್ಲದೇ ಅವರೊಂದಿಗಿದ್ದ ಅವರ ಪತ್ನಿಯೂ ಸೇರಿದಂತೆ ಇತರೆ ಹನ್ನೊಂದು ಮಂದಿಯ ಸಾವಿನ ದುರ್ಘಟನೆ ದೇಶದ ಕರಾಳ ಅಧ್ಯಾಯಕ್ಕೆ ಸೇರ್ಪಡೆಯಾಗಿದೆ.

ಫೋಟೋ ಕೃಪೆ : India.com

ಉತ್ತರಾಖಂಡದ ದೇಶಸೇವೆಯ ಕುಟುಂಬದಲ್ಲಿ ಜನಿಸಿದ ಅರವತ್ಮೂರು ವರ್ಷಗಳ ಬಿಪಿನ್ ರಾವತ್ ಈ ನಾಡು ಕಂಡ ಸೇನಾಪಡೆಯ ಶ್ರೇಷ್ಠ ಮುಖ್ಯಸ್ಥರಾಗಿ ಭಾರತದ ರಕ್ಷಣಾ ಹಾಗೂ ಸೇನಾ ವಲಯದಲ್ಲಿ ಮಹೋನ್ನತ ಕೊಡುಗೆ ನೀಡಿದವರು. ಅವರ ತಂದೆ ಸಹಾ ಸೇನೆಯ ಲೆಫ಼್ಟಿನೆಂಟ್ ಜನರಲ್ ಆಗಿ ದೇಶ ಸೇವೆ ಸಲ್ಲಿಸಿದ್ದವರು. ಹೀಗಾಗಿ ಸಹಜವಾಗಿಯೇ ಅವರಲ್ಲಿ ದೇಶಪ್ರೇಮದ ಕೆಚ್ಚು, ದೇಶ ಭಕ್ತಿಯ ಬದ್ಧತೆ ಮೂಡಿಬರಲು ಸಾಧ್ಯವಾಗಿತ್ತು. ಕೇವಲ ಇಪ್ಪತ್ತನೇ ವಯಸ್ಸಿಗೇ ( ಡಿಸೆಂಬರ್ 1978) ಸೇನೆ ಸೇರಿದ ಇವರು‌ ಭರ್ತಿ 43 ವರ್ಷಗಳ ಕಾಲ ಸೇನೆಯ ವಿವಿಧ ಹಂತಗಳಲ್ಲಿ ದಕ್ಷತೆಯಿಂದ ಕಾರ್ಯ‌ ನಿರ್ವಹಿಸಿದ್ದರು.

ಸೇನಾ ಮೆಡಲ್, ಉತ್ತಮ್ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್ ಹಾಗೂ ಪರಮ್ ಸೇವಾ ಮೆಡಲ್….ಹೀಗೆ ಅನೇಕ ಅತ್ಯುನ್ನತ ಪದವಿ ಪುರಸ್ಕಾರಗಳನ್ನು ಪಡೆದು ಸೇನಾ ವಲಯದಲ್ಲಿ ಅತ್ಯಂತ ಖಡಕ್ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ರವರು ನೇಪಾಳ , ಭೂತಾನ್, ಬಾಂಗ್ಲಾ, ಮ್ಯಾನ್ಮಾರ್, ಕಜ಼ಕಿಸ್ತಾನ್, ಶ್ರೀಲಂಕಾ, ರಷ್ಯಾ ಮುಂತಾದ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ಯಶಸ್ವಿಯಾಗಿ ನೆಡೆಸಿದ್ದ ಮೇಧಾವಿ ಅಧಿಕಾರಿ ಯಾಗಿದ್ದರು. ಅದರಲ್ಲೂ ನಮ್ಮ ಮಗ್ಗುಲ ಮುಳ್ಳು ಚೀನಾದವರ ಯಾವ ಆಟಕ್ಕೂ ಬಗ್ಗದೇ ಅವರಲ್ಲಿ‌ ಭಾರತದ ಬಗೆಗೆ ಅಳುಕನ್ನು ಹುಟ್ಟಿಸುವಲ್ಲಿ‌ ಜನರಲ್ ಬಿಪಿನ್ ರಾವತ್ ರ ಪಾತ್ರ ದೊಡ್ಡದಿತ್ತು. ಅವರ ಈ ಸಾವು ದೇಶದ ಸೇನಾ ವಲಯಕ್ಕೆ ಬಂದೆರಗಿದ ಮಹಾ ದುರಂತವೆನ್ನುವುದು ಸುಳ್ಳಲ್ಲ. “ತುಂಬಲಾರದ ನಷ್ಟ” ಎಂಬ ಪದಕ್ಕೆ ಅನ್ವರ್ಥವಾಗಿ ಈ ದುರಂತ ಸೇನಾವಲಯದಲ್ಲಿ ಕಾಡುತ್ತಲಿದೆ.


(ಪತ್ನಿ ಮಧುಲಿಕಾ ರಾವತ್ ಅವರೊಂದಿಗೆ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್)

ದೇಶದ ಸೈನ್ಯ #ಸೈನಿಕರು ಎಷ್ಟೇ ಬಲಶಾಲಿ ಯಾಗಿದ್ದರೂ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಸಂಖ್ಯೆಯಲ್ಲಿ ಎಷ್ಟೇ ದೊಡ್ಡದಿದ್ದರೂ ಅಂತಹಾ ಸೈನ್ಯಪಡೆಯನ್ನು ಮುನ್ನಡೆಸಲು , ಸೂಕ್ಷ್ಮ ಸಂಧರ್ಭಗಳಲ್ಲಿ ಸೂಕ್ತ‌ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ರಾಜಕೀಯ ನಾಯಕರಿಗೆ ಸರಿಯಾದ ಮಾರ್ಗದರ್ಶನ ಮಾಡಲು ಒಬ್ಬ ದಕ್ಷ ಸೇನಾ ನಾಯಕರ ಅಗತ್ಯವಿದ್ದೇ ಇರುತ್ತದೆ. ಅದರಲ್ಲೂ ನಮ್ಮ ಅಕ್ಕಪಕ್ಕದಲ್ಲಿ ಪಾಕಿಸ್ತಾನ ಮತ್ತು ಚೀನಾದಂತಹಾ ಕಪಟಿ ಶತ್ರು ದೇಶಗಳು ಇರುವಾಗ ಮೈಯೆಲ್ಲಾ ಕಣ್ಣಾಗಿ ಸೇನಾಪಡೆಯನ್ನು ಎಚ್ಚರಿಸಿ ಮುನ್ನೆಡೆಸುವ ಛಾತಿಯಿರುವ ಕುಶಾಗ್ರಮತಿ ಸೇನಾ‌ನಾಯಕ ದೇಶಕ್ಕೆ ಅತ್ಯಗತ್ಯ.

(ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಮತ್ತು ಮಕ್ಕಳು)

ಅಂತಹಾ ಜವಾಬ್ದಾರಿಯನ್ನು #ಜನರಲ್_ಬಿಪಿನ್_ರಾವತ್ ಸಮರ್ಥವಾಗಿಯೇ ನಿಭಾಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗಂತೂ ಬಿಪಿನ್ ರಾವತ್ ರ ಮೇಲೆ ಅದಮ್ಯ‌ ವಿಶ್ವಾಸವಿದ್ದು ಸೇನಾವಲಯದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆಯುತ್ತಿದ್ದರು. ಹೀಗಾಗಿಯೇ ಭಾರತೀಯ ಸೇನೆಯೆಂದರೆ ಪ್ರಪಂಚದ ಎಲ್ಲಾ ರಾಷ್ಟ್ರಗಳೂ ಮೆಚ್ಚುಗೆ, ಗೌರವ, ಹೆದರಿಕೆ ಹಾಗೂ ಎಚ್ಚರದಿಂದ ನೋಡುವಂತಾಗಿತ್ತು.



** ಮರೆಯುವ ಮುನ್ನ **

ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ರಂತಹಾ ಒಬ್ಬ ಧೀಮಂತ ಸೇನಾ ನಾಯಕನನ್ನು ಅತ್ಯಂತ ಘೋರ ದುರಂತದಲ್ಲಿ ಭಾರತವಿಂದು ಕಳೆದುಕೊಂಡಿದ್ದು ನಮ್ಮ ದುರಾದೃಷ್ಟ. ಸಾವೆನ್ನುವುದಕ್ಕೆ ಸೇನಾ ಜನರಲ್ ಅಥವಾ ಕಾಮನ್ ಪೀಪಲ್ ಎಂಬ ಭೇದವಿರದು ನಿಜ. ಆದರೆ ಹನ್ನೊಂದು‌ ಮಂದಿಯನ್ನು ಅನಾಮತ್ತಾಗಿ, ಅನ್ಯಾಯವಾಗಿ ಆಪೋಷನ ತೆಗೆದುಕೊಂಡ ಈ ಹೆಲಿಕಾಪ್ಟರ್ ದುರಂತದಿಂದ ಭಾರತಕ್ಕಾದ ನಷ್ಟ ಮಾತ್ರ ಅತೀ ದೊಡ್ಡದು. ಮುಂಬರುವ ಸೇನಾಪಡೆಯ ಮುಖ್ಯಸ್ಥರು ಜನರಲ್ ಬಿಪಿನ್ ರಾವತ್ ರ ಸಮರ್ಥ ಸ್ಥಾನವನ್ನು ತುಂಬಿ ಈ ನಷ್ಟವನ್ನು ಸರಿದೂಗಿಸಿಕೊಂಡು ಹೋಗಲೆಂದು ಬಯಸುವುದೇ ಭಾರತೀಯರೆಲ್ಲರ ಸಧ್ಯದ ಅಭೀಪ್ಸೆ.

ನಾಲ್ಕು ದಶಕಗಳ ಕಾಲ ನಿರಂತರವಾಗಿ ತಾಯ್ನಾಡಿನ ಸೇವೆ ಸಲ್ಲಿಸಿದ ಕೆಚ್ಚೆದೆಯ ಕಲಿ ಜನರಲ್ ಬಿಪಿನ್ ರಾವತ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೆಯೇ ಅವರೊಂದಿಗೆ ಮಡಿದ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಇತರೆ ಹನ್ನೊಂದು ಮಂದಿಯವರ ಆತ್ಮಕ್ಕೂ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.

#ಭಾವಪೂರ್ಣ_ಶ್ರದ್ಧಾಂಜಲಿ.

ಕಂಬನಿಯಿಂದ…..


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading