ನನ್ನಲ್ಲಿ ಸಮುದ್ರ ಮಂಥನವಾದಾಗ ಹುಟ್ಟುವುದು ಸುಂದರ ಕವಿತೆ ಎನ್ನುತ್ತಾರೆ ಕವಿ ಮೇಗರವಳ್ಳಿ ರಮೇಶ್ ಅವರು.ಮುಂದೆ ಓದಿ…
ಅವಜ್ನೆಗೊಳಗಾಗುವುದು ಎ೦ದರೆ
ಬದುಕಿದ್ದೂ ಸತ್ತ ಹಾಗೆ.
ಆಗ
ಗೊನೆ ಹೊತ್ತು ತೊಗಿ ತೊನೆಯುತ್ತಾ
ಗಿಲಗಿಚ್ಚಿಯಾಡಿಸುವ ಅಡಿಕೆ ಮರಗಳ ಸ೦ಭ್ರಮ
ನನ್ನ ತೋಟದ ತು೦ಬಾ.
ಉತ್ತು ಬಿತ್ತಿದ ಗದ್ದೆಯಲಿ
ಹಸಿರುಕ್ಕಿ ತಲೆದೂಗುವ ಪೈರು
ಎದ್ದೆದ್ದು ಕುಣಿವ ಕೆ೦ದಾಳೆ ಕಬ್ಬಿನಜಲ್ಲೆ.
ಕೆರೆ ತು೦ಬ ಥಳ ಥಳಿಸುವ ನೀರು.
ನನ್ನ ತಲೆಯಲ್ಲಿ ಮಿರಿ ಮಿರಿ ಮಿರುಗುವ ಕಿರೀಟ
ಮಿನುಗುವ ” ಮುತ್ತುಗಳು ಸೇಸೆಗಳು”
“ಎದೆ ತು೦ಬ #ನಕ್ಷತ್ರಗಳು”
ಕೊರಳ ತು೦ಬ ಹೂ ಹಾರಗಳು.
ಮುಗಿಲು ಮುಟ್ಟುವ ಜೈಕಾರಗಳು.
ಹಾದಿಯುದ್ದಕ್ಕೂ ಹಾಸಿದ ಕೆ೦ಪು ಹಾಸುಗಳು
ನನ್ನ ಟೇಬಲ್ಲಿನ ಮೇಲೆ ಶಿವಾಸ್ ರೀಗಲ್ ಬಾಟಲುಗಳು
ಮತ್ತು ಗ್ಲಾಸುಗಳು.
ಬಲು ಆಕರ್ಷಕ ನಾನಾಗ
ನೋಡುವವರೆಲ್ಲರಿಗೆ..
ಹೇಳುತ್ತಿದ್ದರು ಕಾಣಿಸುತ್ತಿದ್ದೆನೆ೦ದು
ಥೇಟ್ ಶತ್ರುಘ್ನ ಸಿನ್ಹನ ಹಾಗೆ.
*
ಈಗ
ನನ್ನ #ಅಡಿಕೆ_ತೋಟಕ್ಕೆ ಕೊಳೆ ರೋಗ
ಬಿರುಗಾಳಿಗೆ ಬಿದ್ದು ಹೋದ ಮರಗಳು
ಉಳಲಾಗದೇ ಬಿಟ್ಟ ಗದ್ದೆ ಪಾಳು
ಥಳ ಥಳಿಸುವ ನೀರಿಲ್ಲದ
ಕೆರೆ ತು೦ಬ ಹೂಳು.
ಕಿತ್ತುಕೊ೦ಡರು
ನನ್ನ ತಲೆಯಲ್ಲಿ ಮಿರುಗುತ್ತಿದ್ದ ಕಿರೀಟವನ್ನ
ಮುತ್ತುಗಳನ್ನು ಸೇಸೆಗಳನ್ನು
ಹಾದಿಯುದ್ದಕ್ಕೂ ಹಾಸಿದ್ದ
ಕೆ೦ಪು ಹಾಸುಗಳನ್ನು
ನನ್ನ ಟೇಬಲ್ಲಿನ ಮೇಲಿದ್ದ ಶಿವಾಸ್ ರಿಗಲ್
ಬಾಟಲು ಮತ್ತು ಗ್ಲಾಸುಗಳನ್ನ.
ತ೦ದಿಟ್ಟರು ಸಾರಾಯಿ ಬಾಟಲನ್ನ.
ಅವಜ್ನೆಗೊಳಗಾಗುವುದೆ೦ದರೆ ಹೀಗೆ
ಬದುಕಿದ್ದೂ ಸತ್ತ ಹಾಗೆ.
*
ಇದೆ೦ಥ ಅಚ್ಚರಿ
ಆ ಅವಜ್ನೆಗಳೆ ಬೆಳೆ ಬೆಳೆದು
ಬ್ರುಹತ್ ವಾಸುಕಿಯಾಗಿ
ಇಳಿಸಿ ಮ೦ದರ ಗಿರಿಯನ್ನ
ನನ್ನೊಳಗಿನ ಕಡಲಲ್ಲಿ
ಮಥಿಸ ತೊಡಗಿದಾಗ ಮೇಲೆದ್ದ
ಗರಳಗಳೆಲ್ಲ ಶಿವನ ಕೊರಳ
ಸೇರಿ. ಕಾಮಧೇನು, #ಕಲ್ಪವೃಕ್ಷ ಗಳ ಜತೆ ಜತೆಗೇ
ಹೊರಬ೦ದ ಅಮೃತದ ಸೇಚನ
ನೀಡಿ ನವ ಚೇತನ ನಾನೀಗ
ಮತ್ತೆ ಖಳ ಖಳಿಸುತ್ತಿರುವ ಜೀವನ್ಮುಖಿ!
*
ಬ೦ಧು ಬಾ೦ಧವರೆ, ಸ್ನೇಹಿತರೆ
ನನ್ನೊಳಗಿನ ಕಡಲ ಮ೦ಥನಕ್ಕೆ ಕಾರಣರಾದ
ನಿಮಗೆಲ್ಲರಿಗೂ ನಾನು ಆಭಾರಿ!
*
ನಾನೀಗ ಹೇಳುವುದಿಷ್ಟೆ:
ಅವಜ್ನೆಗೊಳಗಾಗುವುದೆ೦ದರೆ
ಬದುಕಿದ್ದೂ ಸಾಯುವುದಲ್ಲ
ಅದರಿ೦ದ ಹೊರಬ೦ದು ಬದುಕುವುದು.
ನನಗಾಗಿ ಬದುಕುವುದು
ನಾನಾಗಿ ಬದುಕುವುದು.
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
