ಮಕ್ಕಳು ಪ್ರಶ್ನೆ ಕೇಳುವಂತವರಾಗಬೇಕು – ಶಿವಕುಮಾರ್ ಬಾಣಾವರ



ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭೂಮಿಕೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವಲ್ಲಿ ಯಾವುದೇ ಸಂಶಯವಿಲ್ಲ. ಮಕ್ಕಳ ಬಗ್ಗೆ ಲೇಖಕ ಶಿವಕುಮಾರ್ ಬಾಣಾವರ ಅವರ ಚಿಂತನ ಲೇಖನ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

ಅದೊಂದು ದಿನ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಹೆಚ್ ನರಸಿಂಹಯ್ಯನವರನ್ನು ಕಾಣಲು ಹೋಗಿದ್ದೆ. ಬಿಳಿ ಪಂಚೆ, ಅರ್ಧ ತೋಳಿನ ಬಿಳಿ ಶರ್ಟು, ತಲೆಗೆ ಗಾಂಧಿ ಟೋಪಿ ಧರಿಸಿ ಕೊಠಡಿಯಲ್ಲಿ ಓದುತ್ತಾ ಕುಳಿತಿದ್ದರು. ಅಪ್ಪಟ ಗಾಂಧಿಯಂತೆ ಕಾಣಿಸುತ್ತಿದ್ದ ಅವರಿಗೆ ನಮಸ್ಕರಿಸಿ, ಮುಂದೆ ಕುಳಿತಾಗ ನನಗೆ ಆಶ್ಚರ್ಯ ಕಾದಿತ್ತು. ಅವರು ಕುಳಿತ ಕುರ್ಚಿಯ ಹಿಂದೆ ಗೋಡೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯ ಲಾಂಛನವಿತ್ತು. ಮೌಢ್ಯ, ಕಂದಾಚಾರ ಹಾಗೂ ಪವಾಡ ಪುರುಷರ ಬಗ್ಗೆ ಸುಮಾರು ಅರ್ಧ ಗಂಟೆ ಸಮಯ ಅವರ ಜೊತೆ ಚರ್ಚಿಸಿ ಹೊರ ಬಂದೆ. ಸತ್ಯಾನ್ವೇಷಣೆಯ ಹಾದಿಯೇ ಪ್ರಶ್ನೆ ಕೇಳುವುದು ಎಂದು ಹೆಚ್ ಎನ್ ರವರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಕಾಡತೊಡಗಿತು.

Dr. H Narasimhaiah

ಹೌದು…ಮಕ್ಕಳು ಎಷ್ಟು ಪ್ರಯತ್ನಿಸಿದರೂ ಪ್ರಶ್ನೆ ಕೇಳುತ್ತಿಲ್ಲ. ಮನೆ, ಶಾಲೆ, ಕಾಲೇಜು ಹೀಗೆ ಎಲ್ಲಿ ಹೋದರೂ ಮಕ್ಕಳು ಪ್ರಶ್ನೆ ಕೇಳುವುದಿಲ್ಲ, ಕೇಳುವಂತಿಲ್ಲ. ಮಕ್ಕಳು ಎಂಥ ಪ್ರಶ್ನೆ ಕೇಳಿ ಬಿಡುತ್ತಾರೋ? ಎಂದು ಹಿರಿಯರಿಗೆ, ಶಿಕ್ಷಕರಿಗೆ ಭಯ ಕಾಡುತ್ತಿರಬೇಕು. ಏಕೆಂದರೆ ಬಹುತೇಕ ಜನ ಸುಳ್ಳಿನ ನೆರಳಿನಲ್ಲೇ ಬದುಕುತ್ತಿರುವುದು. ಟಿ.ವಿ. ಚಾನೆಲ್ ಗಳನ್ನು ನೋಡಿ. ಎಷ್ಟೊಂದು ಜಾಹಿರಾತುಗಳು. ಎಷ್ಟೊಂದು ಪವಾಡ ಪುರುಷರು ಸುಳ್ಳು ಹೇಳುತ್ತಾರೆಂದು. ಗಾಂಧೀಜಿಯವರು ಕೂಡ ದಶಕಗಳ ಕಾಲ ದೇವರೇ ಸತ್ಯವೆಂದು ಪ್ರತಿಪಾದಿಸುತ್ತಿದ್ದರು. ನಂತರ ಅವರು ಸತ್ಯವೇ ದೇವರೆಂದು ತಿದ್ದಿಕೊಂಡರು. ಅನೇಕ ಸಂದರ್ಭಗಳಲ್ಲಿ ಹಿರಿಯರು ಮಾತನಾಡುವಾಗ ಸತ್ಯ, ಧರ್ಮ, ಪ್ರಾಮಾಣಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರವಚನ ನೀಡುತ್ತಾರೆ. ತಮಗೆ ಅನುಕೂಲವಾಗುತ್ತದೆ ಎಂದಾಗ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಮಕ್ಕಳ ಮನಸ್ಸು ಪರಿಶುದ್ಧವಾದುದು. ಮಕ್ಕಳು ದೇವರ ಸಮಾನ. ಮಕ್ಕಳ ಭವಿಷ್ಯ ಶಾಲಾ ಕೊಠಡಿಯಲ್ಲಿ ಸೃಷ್ಟಿಯಾಗುತ್ತದೆ. ದಿನವೂ ಮಕ್ಕಳೊಡನೆ ಕಾಲ ಕಳೆದು ಮನಸ್ಸು ಹಗುರ ಮಾಡಿಕೊಳ್ಳಿ. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ನೀಡಿ, ಹೀಗೆ ಮಕ್ಕಳ ಬಗ್ಗೆ ಎಷ್ಟೊಂದು ಕಾಳಜಿಯ ಉಪದೇಶ ನೀಡುತ್ತೇವೆ.



ಆದರೆ ಅವಲೋಕನ ಮಾಡಿದರೆ ಮಕ್ಕಳ ಭವಿಷ್ಯ ಹಳಿ ತಪ್ಪಿದ ರೈಲಿನಂತೆ ಎಲ್ಲಿಯೂ ನಿಲ್ಲದೆ ಓಡುತ್ತಿದೆ. “ಅಜ್ಜ ನೆಟ್ಟ ಆಲದ ಮರಕ್ಕೆ ಮೊಮ್ಮಗ ಜೋತು ಬಿದ್ದಂತೆ” ಇದು ತುಂಬಾ ಹಳೆಯ ಗಾದೆ ಮಾತಾದರೂ ಅದು ಅರ್ಥಪೂರ್ಣ. ಅಂದರೆ ನಾವು ಹಳೇ ಸಂಪ್ರದಾಯ, ಕಂದಾಚಾರ, ರೂಢಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಮಕ್ಕಳೂ ನಮ್ಮನ್ನು ನೋಡಿ ಅನುಸರಿಸುತ್ತಾರೆ. ಹಿರಿಯರಾದವರು ಮಕ್ಕಳಿಗೆ ಹೀಗೇ ಇರಬೇಕು, ಇಂಥದ್ದನ್ನೇ ಮಾಡಬೇಕು ಎಂದು ಕಟ್ಟಳೆ ರೂಪಿಸುತ್ತಾರೆ. ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸುವ, ಇಷ್ಟಪಟ್ಟದ್ದನ್ನು ಓದುವ, ಬರೆಯುವ ಹಕ್ಕೂ ಇಲ್ಲದಂತಾಗಿದೆ. ಗ್ರಹಣ ವೀಕ್ಷಿಸಬಾರದು, ಮೂರು ಜನ ಒಟ್ಟಿಗೆ ಹೋಗಬಾರದು, ಒಂಟಿ ಸೀನು ಸೀನಬಾರದು, ಆಕಳಿಸಬಾರದು, ಹಲ್ಲಿ ಲೊಚಗುಟ್ಟಬಾರದು, ಬೆಕ್ಕು ಅಡ್ಡ ಹೋಗಬಾರದು, ಇಂಥ ಸಾವಿರಾರು ಮೌಢ್ಯಗಳನ್ನು ಪಟ್ಟಿ ಮಾಡಬಹುದು. ಮಕ್ಕಳು ಇಂತಹ ಅವೈಜ್ಞಾನಿಕ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಮರ್ಪಕ ಉತ್ತರವನ್ನೂ ಪಡೆಯುವಂತಿಲ್ಲ.

ಫೋಟೋ ಕೃಪೆ : indiadidac

ಶತಮಾನಗಳ ಹಿಂದೆಯೇ ಗೌತಮ ಬುದ್ಧ ಹಿಂದಿನಿಂದ ನಡೆದು ಬಂದ ರೂಢಿ ಎಂದು ಅಥವಾ ಯಾರೋ ದೊಡ್ಡವರು ಹೇಳಿದ್ದಾರೆಂದು ಯಾವುದೇ ವಿಷಯವನ್ನು ನಂಬಬೇಡಿ ಎಂದು ಹೇಳಿದ್ದರು. ಪರೀಕ್ಷಿಸಿ, ಪ್ರಶ್ನಿಸಿ, ಪರಾಮರ್ಶಿಸಿ ನಿಮಗೆ ಒಪ್ಪಿಗೆಯಾದರೆ ಮಾತ್ರ ನಂಬಿರಿ ಎಂದು ಹೇಳಿದ್ದರು. ಇಂದು ನಾವು ಕೂಡಾ ಮಕ್ಕಳಿಗೆ ಅದೇ ಮಾತನ್ನು ಹೇಳಬೇಕಾಗಿದೆ. ಮಕ್ಕಳಲ್ಲಿ ಪ್ರಶ್ನಿಸುವ ಗುಣ ಬೆಳೆಸಿ, ವೈಜ್ಞಾನಿಕ ಮನೋಭಾವ ತುಂಬಬೇಕಾಗಿದೆ. ೧೯೮೬ ರ ಶಿಕ್ಷಣ ನೀತಿಯಲ್ಲಿ ಬಹು ಮುಖ್ಯವಾದ ಬೀಜಾಂಶಗಳಲ್ಲಿ ವೈಜ್ಞಾನಿಕ ಮನೋಭಾವವೂ ಒಂದು. ಮಕ್ಕಳ ಎಳೆ ಮನಸ್ಸಿನಲ್ಲಿ ಮೌಢ್ಯದ ಬೀಜವನ್ನು ಬಿತ್ತದೆ ಸುತ್ತ ಮುತ್ತಲಿನ ವಾಸ್ತವಾಂಶಗಳನ್ನು ತಿಳಿಸುವುದು ಎಲ್ಲರ ಕರ್ತವ್ಯ.

ಫೋಟೋ ಕೃಪೆ : biblio

ಸ್ವಾತಂತ್ರ್ಯ ಪೂರ್ವದಲ್ಲೇ ಜವಾಹರ್ ಲಾಲ್ ನೆಹರೂ ಅವರು ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ ವೈಜ್ಞಾನಿಕ ಮನೋಭಾವದ ಬಗ್ಗೆ ಪ್ರಸ್ತಾಪಿಸಿ, ಅದು ನಮ್ಮ ನಿತ್ಯ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ಒತ್ತಿ ಹೇಳಿದ್ದರು. ಸ್ವಾತಂತ್ರ್ಯ ಬಂದ ನಂತರ ವೈಜ್ಞಾನಿಕ ಮನೋಭಾವ ಸಂವಿಧಾನದ ಬೀಜ ಮಂತ್ರವಾಯಿತು. ಚಾಚಾ ನೆಹರೂ ಎಂದೇ ಕರೆಸಿಕೊಂಡಿದ್ದ ನೆಹರೂ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಹಾಗಾಗಿಯೇ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಮಕ್ಕಳಲ್ಲಿ ಹೊಸ ದೃಷ್ಟಿ, ಹೊಸ ಆಲೋಚನಾ ಕ್ರಮ ಬೆಳೆಸಬೇಕಾದರೆ ಶ್ರೇಷ್ಠ ಪುಸ್ತಕ, ಪ್ರಯೋಗ ಶಾಲೆ, ವೈಜ್ಞಾನಿಕ ಚಟುವಟಿಕೆ, ಕ್ರೀಡಾ ಮನೋಭಾವ ಎಲ್ಲದಕ್ಕೂ ಮಿಗಿಲಾಗಿ ಪ್ರಶ್ನೆ ಕೇಳುವ ಮನೋಭೂಮಿಕೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವಲ್ಲಿ ಯಾವುದೇ ಸಂಶಯವಿಲ್ಲ.


  • ಶಿವಕುಮಾರ್ ಬಾಣಾವರ  (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading