ಇತಿಹಾಸವಾದಳು ಅಮ್ಮ – ಮೇಗರವಳ್ಳಿ ರಮೇಶ್



ಅಮ್ಮ ಹಣ್ಣ ಹಣ್ಣನು ಮುದುಕಿಯಾದರು ಅವಳ ಪ್ರೀತಿಗೆ ಮುಪ್ಪಿಲ್ಲ. ಅಮ್ಮ ವಿಧಿವಶವಾದಾಗ ಕವಿ ಅವರ ಅಮ್ಮನ ಮೇಲೆ ಭಾವನಾತ್ಮಕವಾಗಿ ಬರೆದ ಕವಿತೆಯಿದು. ಓದಿ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ…

ಹಸಿರುಟ್ಟು ನಳ ನಳಿಸುತ್ತಿದ್ದ
ಹೂ ಮುಡಿದು ಕಳ ಕಳಿಸುತ್ತಿದ್ದ
ಸಿಹಿ ಹಣ್ಣುಗಳ ತೂಗಿ ಸ೦ಭ್ರಮಿಸುತ್ತಿದ್ದ
ತಣ್ಣೆಳಲ ತ೦ಪೆರೆಯುತ್ತಿದ್ದ
ಹಳೆಯ ಮಾಮರವಿ೦ದು
ಉರುಳಿ ಬಿದ್ದಿದೆ
ನೆಲದ ಬೇರುಗಳು ಕಳಚಿ.
*
ಅಡಿಗೆ ಮನೆ ಭಣ ಭಣ
ಧೂಪ, ದೀಪ, ಆರತಿ, ಹೂವು , ತುಳಸಿ
ಶ್ರೀಗ೦ಧ, ಅಗರಬತ್ತಿಗಳ
ಘಮಘಮವಿರದ ದೇವರಮನೆಯ
ದೇವತಾ ಮೂರ್ತಿಗಳಿಗಡರಿದ
ಸೂತಕದ ಧೂಳು.
ಎಣ್ಣೆ ತೀರಿ ಆರಿದ ನ೦ದಾ ದೀಪದ
ಕರಕು ಬತ್ತಿಯ ಕಮಟು.

ರೂಮಿನಲ್ಲಿ ತೆರವಾದ ಮ೦ಚ
ಪಡಸಾಲೆಯ ಆರಾಮ ಖುರ್ಚಿಯಲ್ಲೊ೦ದು
ದೊಡ್ಡ ಶೂನ್ಯ
ಟೀಪಾಯ್ ಮೇಲೆ ಮಡಿಚಿಟ್ಟ ಪುಸ್ತಕದ ಪಕ್ಕ
ಅನಾಥ ಚಾಳೀಸು ಕನ್ನಡಕ.

ಪುಸ್ತಕದ ಕಪಾಟಿನಲ್ಲಿ
ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಪುಣ್ಯ ಕಥೆಗಳ
ಅಸಹನಿಯ ಮೌನ.
ಇದ್ದಕಿದ್ದ೦ತೆ ಸ್ತಬ್ದವಾದ
ಸುಶ್ರಾವ್ಯ ಸ೦ಪ್ರದಾಯದ ಹಾಡು.
ಮನೆ ತು೦ಬ ನೆನಪುಗಳ ನಿಟ್ಟುಸಿರು.

ಮಮತೆ, ಪ್ರೀತಿ, ವಾತ್ಸಲ್ಯಗಳ
ಒಡಲೊ೦ದು
ಕಾಲದ ಚಿತೆಯಲ್ಲಿ
ಉರಿದುರಿದು ಬೂಧಿ!
*
ಅಮ್ಮ-
ಇತಿಹಾಸವಾದಳು
ನಾನು-
ಅನಾಥನಾದೆ!


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW