ಲಲಿತಾ ರಘುನಾಥ್ ಅವರು ‘ಅನು ವುಡ್ ವರ್ಕ್ಸ್’ ಎಂಬ ಕಿರು ಉದ್ಯಮದ ಮೂಲಕ ಬದುಕನ್ನು ಯಶಸ್ಸಿನ ಹಾದಿಯನ್ನಾಗಿಸಿದ್ದಾರೆ. ಅವರ ಸಾಧನೆಯ ಹಾದಿಯನ್ನು ಬಾಣಾವರ ಶಿವಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಕೂಲಿ ಕೆಲಸಕ್ಕೆ ಹೋಗುವಾಗ ಮಧ್ಯಾಹ್ನ ಎಲ್ಲರೂ ಊಟ ಮಾಡಿ ಮಿಕ್ಕುಳಿದ ಅನ್ನ ಮನೆಗೆ ತಂದು ರಾತ್ರಿ ಮಗ, ಗಂಡನ ಜೊತೆ ಊಟ ಮಾಡುತ್ತಿದ್ದೆ. ಆಗ ಮನೆಗೆ ನೆಂಟರು ಬಂದರೆ ಭಯ ಆಗುತ್ತಿತ್ತು. ಇವತ್ತು ನೂರು ಜನರಿಗೆ ಊಟ ಹಾಕುವ ಸಾಮರ್ಥ್ಯ ಇದೆ “…
“ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಕೆಲಸ ಮಾಡಿದರೆ ೧೫೦ ರೂಪಾಯಿ ಕೂಲಿ ಸಿಗುತ್ತಿತ್ತು. ಹೀಗಾದರೆ ಬದುಕು ಸುಧಾರಿಸುವುದು ಹೇಗೆ? ನಮ್ಮ ಮಕ್ಕಳು ಕೂಡ ಹೀಗೆ ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕಾ ಎಂಬ ಪ್ರಶ್ನೆ ಮೂಡಿದಾಗಲೇ ಸ್ವಂತ ಉದ್ಯಮದ ಯೋಚನೆ ಹೊಳೆಯಿತು. ಈಗ ದಿನಕ್ಕೆ ಐದು ಸಾವಿರದಿಂದ ಆರು ಸಾವಿರ ದುಡಿಯುತ್ತಿದ್ದೇನೆ…”
– ಹೀಗೆ ಹೇಳುತ್ತಲೇ ಭಾವುಕರಾದರು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ತೋವಿನಕೆರೆಯ ಲಲಿತಾ ರಘುನಾಥ್.

ಒಂದು ದಶಕದಿಂದ ಪತಿ ರಘುನಾಥ್ ಜೊತೆಗೆ ಬಡಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಯಂತ್ರೋಪಕರಣ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ. ‘ಅನು ವುಡ್ ವರ್ಕ್ಸ್’ ಎಂಬ ಕಿರು ಉದ್ಯಮದ ಮೂಲಕ ಬದುಕನ್ನು ಯಶಸ್ಸಿನ ಹಾದಿಗೆ ಹೊರಳಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಬುರುಡೆಕಟ್ಟೆ, ಗೌಡನಹಳ್ಳಿ, ಶಿರಾ ಭಾಗದ ಕಳ್ಳಂಬೆಳ್ಳ ಸುತ್ತಮುತ್ತಲಿನ ಗ್ರಾಮಗಳ ಕಾರ್ಪೆಂಟರ್ ಕೆಲಸಕ್ಕೆ ಇವರು ಇರಲೇಬೇಕು. ಮಂಚ, ಸೋಫಾ, ಕಿಟಕಿ, ಬಾಗಿಲು, ಕುರ್ಚಿ, ಕಬೋರ್ಡ್, ಫರ್ನಿಚರ್ ಸೇರಿದಂತೆ ಒಂದು ಮನೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಇವರೇ ತಯಾರಿಸಿ ಪೂರೈಸುತ್ತಾರೆ.
“ಉದ್ಯಮ ಶುರು ಮಾಡುವುದಕ್ಕೂ ಮುನ್ನ ತಿಂಗಳಿಗೆ ೨೦೦/- ರೂಪಾಯಿ ಪಾವತಿಸಿ ಬಾಡಿಗೆ ಮನೆಯಲ್ಲಿದ್ದೆವು. ಸ್ನಾನಕ್ಕೆ, ಶೌಚಾಲಯ, ಪ್ರತ್ಯೇಕ ಅಡುಗೆ ಕೋಣೆ ಸೇರಿದಂತೆ ಯಾವ ಸೌಲಭ್ಯವೂ ಇರಲಿಲ್ಲ. ಒಂದು ಆಲೋಚನೆ ಜೀವನದ ಹಾದಿ ಬದಲಾಯಿಸಿತು. ಚಿಕ್ಕ ವಯಸ್ಸಿನಲ್ಲಿ ಅಪ್ಪ ತೀರಿಕೊಂಡರು. ಆ ಕೊರಗು ನಮ್ಮ ಯಜಮಾನರಿಂದ ಮಾಯವಾಗಿದೆ. ಒಳ್ಳೆಯ ಸ್ನೇಹಿತರಾಗಿ ಜೊತೆಗೆ ನಿಂತು ಮುನ್ನಡೆಸುತ್ತಿದ್ದಾರೆ” ಎಂದು ಲಲಿತಾ ನಗುತ್ತಲೇ ಬದುಕು ಕಂಡುಕೊಂಡ ದಾರಿಯನ್ನು ನೆನಪಿಸಿಕೊಳ್ಳುತ್ತಾರೆ.
ಆರಂಭದಲ್ಲಿ ಗೆಳತಿಯೊಬ್ಬರು ಮನೆಗೆ ಮಂಚ ಬೇಕು. ಅದನ್ನು ನೀವೇ ಮಾಡಿಕೊಟ್ಟರೆ ಉತ್ತಮ ಎಂದು ಲಲಿತಾ ಅವರನ್ನು ಕೋರಿದ್ದರು. ಮಂಚ ತಯಾರಿಸಲು ಬೇಕಾದ ಸಾಮಗ್ರಿ ಖರೀದಿಗೂ ಅವರ ಬಳಿ ಹಣ ಇರಲಿಲ್ಲ. ಧರ್ಮಸ್ಥಳ ಸ್ತ್ರೀಶಕ್ತಿ ಸಂಘದಿಂದ ೧೦,೦೦೦ ರೂಪಾಯಿ ಸಾಲ ಪಡೆದು ಪತಿ ರಘುನಾಥ್ ಜೊತೆಗೆ ಕೆಲಸ ಶುರು ಮಾಡಿದರು. ಮಂಚ ತಯಾರಿಸಿಕೊಟ್ಟರು. ಅವತ್ತು ಅವರ ಸ್ವಂತ ಉದ್ಯಮದ ಕನಸು ಚಿಗುರೊಡೆಯಿತು.
ಆಂಧ್ರ ಪ್ರದೇಶದ ಮಡಕಶಿರಾದಿಂದ ಬಂದು ತೋವಿನಕೆರೆ ಪಟ್ಟಣದಲ್ಲಿ ನೆಲೆಸಿದ್ದಾರೆ. ಇಪ್ಪತ್ತು ವರ್ಷಗಳನ್ನು ಇಲ್ಲಿಯೇ ಕಳೆದಿದ್ದಾರೆ. ಮೊದಲು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೋವಿಡ್ ಸಮಯದಲ್ಲಿಯೇ ವಿವಿಧ ಉಪಕರಣ ತಯಾರಿಸುತ್ತಿದ್ದರು. ಮಾಲೀಕರು ‘ನೀವು ಇರುವುದಕ್ಕೆ ಮಾತ್ರ ಮನೆ ಕೊಟ್ಟಿದ್ದೇವೆ. ಇಲ್ಲಿ ಕೆಲಸ ಮಾಡಿದರೆ ಮನೆ ಖಾಲಿ ಮಾಡಿ’ ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.
ಇದರಿಂದ ಧೃತಿಗೆಡದೆ ಬಾಡಿಗೆ ಮನೆ ತೊರೆದು, ಸಾಲ ಮಾಡಿ ನಿವೇಶನ ಖರೀದಿಸಿ ಒಂದು ಶೆಡ್ ನಿರ್ಮಾಣ ಮಾಡಿದರು. ಕಾರ್ಪೆಂಟರ್ ಕೆಲಸ ಮುಂದುವರಿಸಿದರು ಇದು ಅವರ ಆತ್ಮ ಸ್ಥೈರ್ಯ ಹೆಚ್ಚಿಸಿತು. ಹೇಗಾದರೂ ಮಾಡಿ ಇಲ್ಲಿಯೇ ನೆಲೆ ನಿಲ್ಲಬೇಕು ಎಂಬ ಪಣ ತೊಟ್ಟರು. ಪೂರಕವಾದ ಯೋಜನೆ ರೂಪಿಸಿ, ಉದ್ಯಮ ಶುರು ಮಾಡಿ ಮುನ್ನಡೆಸುತ್ತಿದ್ದಾರೆ.

ಲಲಿತಾ ಉದ್ಯಮ ಆರಂಭಿಸಲು ಮುಂದಾದಾಗ ಅನೇಕ ಅಡ್ಡಿ ಆತಂಕ ಎದುರಿಸಿದರು. ಉಡ್ ವರ್ಕ್ಸ್ ಅಂಗಡಿ ತೆರೆಯಲು ಉದ್ದೇಶಿಸಿದ ಜಾಗದ ಪಕ್ಕದಲ್ಲೇ ಶಾಲೆ ಇರುವುದರಿಂದ ಇಲ್ಲಿನ ಯಂತ್ರಗಳ ಸದ್ದಿಗೆ ಮಕ್ಕಳಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ತೋವಿನಕೆರೆಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಟ್ಟು ಹಿಡಿದಿದ್ದರು.
ಅನುಮತಿ ಪಡೆದುಕೊಳ್ಳಲು ಆರು ತಿಂಗಳು ಕಳೆಯಿತು. ಸ್ವಂತ ಉದ್ಯಮಕ್ಕೆ ಕೈಹಾಕಿದ ಬಗ್ಗೆ ರಘುನಾಥ್ ಸ್ನೇಹಿತರ ವಲಯದಲ್ಲೂ ಚರ್ಚೆಯಾಗುತ್ತಿತ್ತು. ಇದರಿಂದ ಅವರನ್ನು ಬೇರೆ ಕಡೆ ಕೆಲಸಕ್ಕೆ ಕರೆದುಕಳ್ಳುತ್ತಿರಲಿಲ್ಲ. ಇದರಿಂದ ಇಡೀ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿತ್ತು. ದಿಕ್ಕು ತೋಚದಂತಾಗಿತ್ತು.
“ಅತ್ತು ಕರೆದು ಗೋಳಾಡಿದರೂ ನನ್ನ ಕಷ್ಟ ಯಾರೂ ಕೇಳಿಸಿಕೊಳ್ಳಲಿಲ್ಲ. ಆರು ತಿಂಗಳು ಪಂಚಾಯಿತಿಗೆ ಅಲೆದಿದ್ದೇನೆ. ರಾತ್ರಿಯ ಹೊತ್ತು ಮಾತ್ರ ಯಂತ್ರ ಬಳಸಿ ಕೆಲಸ ಮಾಡುತ್ತೇವೆ. ಮಕ್ಕಳಿಗೆ ಸಮಸ್ತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರೂ ಕಿವಿಗೊಡಲಿಲ್ಲ. ಅದೇ ಸಮಯದಲ್ಲಿ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಲಾಯಿತು. ಆಗ ಉದ್ಯಮ ಕಟ್ಟಲು ಮೊದಲ ದಾರಿ ತೆರೆದುಕೊಂಡಿತು” ಎಂದು ತಮಗೆ ಎದುರಾದ ಸವಾಲುಗಳನ್ನು ಬಿಚ್ಚಿಟ್ಟರು.
ಲಲಿತಾ ಬಡಗಿ ಕೆಲಸದ ಜೊತೆಗೆ ಪಿಎಂಶ್ರೀ ಯೋಜನೆಯಡಿ ಆಯ್ಕೆಯಾದ ಶಾಲೆಗಳಿಗೆ ಕಿರು ಧಾನ್ಯದ ಆಹಾರ ತಯಾರಿಸಿ ಸರಬರಾಜು ಮಾಡುತ್ತಿದ್ದಾರೆ. ವಾರಕ್ಕೆ ಎರಡು ದಿನ ಸಿರಿಧಾನ್ಯ ಮಸಾಲೆ ರೊಟ್ಟಿ, ರಾಗಿ ಹಪ್ಪಳ ಮತ್ತು ಲಾಡು, ನವಣೆ ಅಕ್ಕಿ ಪಾಯಸದ ರುಚಿ ತೋರಿಸುತ್ತಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಿಸಲು ಶ್ರಮಿಸುತ್ತಿದ್ದಾರೆ.
ಮಗನ ಆರೋಗ್ಯ ಕೈಕೊಟ್ಟಾಗ ಸಿರಿಧಾನ್ಯದ ಆಹಾರ ಬಳಸಲು ಶುರು ಮಾಡಿದರು. ಇದು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ತಿಳಿಯಿತು. ವಿವಿಧೆಡೆ ಮಳಿಗೆ ತೆರೆದು ರೊಟ್ಟಿ ಮಾರಾಟ ಮಾಡಿದರು. ಇದು ಅವರನ್ನು ಪಿಎಂಶ್ರೀ ಯೋಜನೆಯವರೆಗೆ ಕರೆತಂದಿದೆ. ಕೊರಟಗೆರೆ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ನರೇಗಾ ಯೋಜನೆಯಡಿ ಆರಂಭಿಸಿದ ಕೂಸಿನ ಮನೆ ಅಂಗನವಾಡಿ ಕೇಂದ್ರದ ‘ಕೇರ್ ಟೇಕರ್’ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
- ಬಾಣಾವರ ಶಿವಕುಮಾರ್
