ಬಹುಶಃ ಶೂದ್ರ ಅವರು ಇಲ್ಲದಿದ್ದರೆ ಕನ್ನಡ ಸಾಹಿತ್ಯ ಲೋಕದ ಪ್ರಮುಖರು ಎಂದಿಗೂ ಮುಸಿನಿಂದಲೇ ದೂರವಾಗಿ ಬಿಡುತ್ತಿದ್ದರು. ಇವರೆಲ್ಲರ ಭಿನ್ನಾಭಿಪ್ರಾಯಗಳ ಕಾರಣದ ಮುನಿಸಿಗೆ ಪ್ರೀತಿಯ ಎರಕ ಹಾಕಿ ಒಂದೇ ಬಂಧದಲ್ಲಿ ಇರುವಂತೆ ನೋಡಿಕೊಂಡವರು ಶೂದ್ರ ಶ್ರೀನಿವಾಸ ಸರ್. ವಿಮರ್ಶಕರಾದ ಎಚ್.ದಂಡಪ್ಪ ಅವರ ಸಂಪಾದಕತ್ವದಲ್ಲಿ ‘ಶೂದ್ರ ಶ್ರೀನಿವಾಸ್ ಬದುಕು – ಬರಹ’ ಕೃತಿಯನ್ನು ಓದುಗರಿಗೆ ನೀಡಿದ್ದಾರೆ. ಈ ಕೃತಿಯ ಕುರಿತು ದೀಪಕ್ ಕಲ್ಕೆರೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಶೂದ್ರ” ಪತ್ರಿಕೆ ಮತ್ತು “ಶೂದ್ರ ಶ್ರೀನಿವಾಸ್” ಹೆಸರುಗಳಿಲ್ಲದೆ ಕರ್ನಾಟಕದ ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕಲೆಗಳ ಚರ್ಚೆ ಅಪೂರ್ಣ. ಸುಮಾರು ಅರ್ಧ ಶತಮಾನದಷ್ಟು ಕಾಲ ಈ ಹೆಸರುಗಳು ಈ ಎಲ್ಲಾ ಕ್ಷೇತ್ರಗಳನ್ನು ಉತ್ಕೃಷ್ಟಗೊಳಿಸಿವೆ, ಚರ್ಚೆಗೆ ಒಡ್ಡಿವೆ. ಅನೇಕ ಸಾಹಿತಿಗಳು, ಚಳುವಳಿಗಳು, ಇಸಂಗಳ ಹುಟ್ಟಿಗೆ ಮತ್ತು ಆ ಮೂಲಕ ಚರ್ಚೆಗೆ ವೇದಿಕೆಯಾಗಿದ್ದು “ಶೂದ್ರ” ಪತ್ರಿಕೆ.
ಇನ್ನು ಶೂದ್ರ ಶ್ರೀನಿವಾಸ್ ಸರ್ ( Shudra Srinivas ) ಅವರ ತಾಯ್ತನದ ಗುಣ ಕಂಡವರು ಆ ಬೆಚ್ಚನೆಯ ಪ್ರೀತಿಯನ್ನು ಮರೆಯಲಾರರು. ಬಹುಶಃ ಶೂದ್ರ ಅವರು ಇಲ್ಲದಿದ್ದರೆ ಕನ್ನಡ ಸಾಹಿತ್ಯ ಲೋಕದ ಪ್ರಮುಖರು ಎಂದಿಗೂ ಮುಸಿನಿಂದಲೇ ದೂರವಾಗಿ ಬಿಡುತ್ತಿದ್ದರು. ಇವರೆಲ್ಲರ ಭಿನ್ನಾಭಿಪ್ರಾಯಗಳ ಕಾರಣದ ಮುನಿಸಿಗೆ ಪ್ರೀತಿಯ ಎರಕ ಹಾಕಿ ಒಂದೇ ಬಂಧದಲ್ಲಿ ಇರುವಂತೆ ನೋಡಿಕೊಂಡವರು ಶೂದ್ರ ಶ್ರೀನಿವಾಸ ಸರ್.

ಇರಲಿ, ಇವರ ವ್ಯಕ್ತಿತ್ವದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.ನನಗೆ ಇವರನ್ನು ಸರ್ ಎಂದರೂ ಮೇಷ್ಟ್ರೇ ಅಂದರೂ ಸಮಾಧಾನವೆನಿಸಿಲ್ಲ; ಕೃತಕ ಅನಿಸುತ್ತದೆ. ಒಟ್ಟಾರೆ “ಅವ್ವ” ನ ಗುಣದವರು.
ಈಗ ಎಚ್.ದಂಡಪ್ಪ ಅವರ ಸಂಪಾದಕತ್ವದಲ್ಲಿ ಶೂದ್ರ ಶ್ರೀನಿವಾಸ್ ಬದುಕು ಬರಹ ಎಂಬ ಕೃತಿ ಪ್ರಕಟವಾಗಿದೆ.ಇದು ಕನ್ನಡದ ಮಟ್ಟಿಗೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಒಂದು ಐತಿಹಾಸಿಕ ಕೃತಿ ಎಂದೇ ಹೇಳಬಹುದು. ನಾಡಿನ ಅನೇಕ ಮುಖ್ಯ ಸಾಹಿತಿಗಳು ತಾವು ಕಂಡಂತೆ ಶೂದ್ರ ಅವರ ಬದುಕು ಬರಹಗಳ ಅನೇಕ ಆಯಾಮಗಳ ಬಗ್ಗೆ ಬರೆದಿದ್ದಾರೆ. ಇದು ಶೂದ್ರ ಅವರ ಬದುಕು ಬರಹದ ಜೊತೆಜೊತೆಗೆ ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣದ ಬಗ್ಗೆಯೂ ಮಾತನಾಡಿದಂತಾಗುತ್ತದೆ.
ಶೂದ್ರ ಮತ್ತು ಲಂಕೇಶರ ನಡುವಿನ ಜೀವಾತ್ಮಗಳ ಸಂಬಂಧ ಇಡೀ ಕನ್ನಡ ನಾಡಿಗೆ ತಿಳಿದಿರುವಂಥದ್ದು.ಈ ಕುರಿತು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ತಮ್ಮ ಮತ್ತು ಲಂಕೇಶರ ನಡುವಿನ ಗಾಢ ಸಂಬಂಧದ ಬಗೆಗೆ ಶೂದ್ರ ಅವರು 2020 ರಲ್ಲಿ ” ಮೋಹಕ ರೂಪಕಗಳ ನಡುವೆ ಲಂಕೇಶ್ ” ಎಂಬ ಕೃತಿ ರಚಿಸಿದ್ದರು.ಕೃತಿಯ ಕುರಿತು ಫೇಸ್‌ಬುಕ್ ನಲ್ಲಿ ನಾಲ್ಕು ಸಾಲು ಬರೆದಿದ್ದೆ.ಆ ಪುಟ್ಟ ಲೇಖನವನ್ನು ಶೂದ್ರ ಶ್ರೀನಿವಾಸ್ ಸರ್ ಈ “ಬದುಕು ಬರಹ” ಕೃತಿಯಲ್ಲಿ ಪ್ರಕಟಿಸಿದ್ದಾರೆ!.ಅಲ್ಲಿನ ಶ್ರೇಷ್ಠ ಲೇಖಕರ ಬರೆಹಗಳ ಜೊತೆಯಲ್ಲಿ ನನ್ನಂಥಹ ಸಾಮಾನ್ಯನ ಒಂದು ಪುಟ್ಟ ಲೇಖನವನ್ನೂ ಬಳಸಿಕೊಂಡಿರುವುದ ಕಂಡು ಸಂಕೋಚ,ಖುಷಿಯ ಜೊತೆಗೆ ಕಣ್ಣು ಮಂಜಾಯಿತು.
ನನ್ನನ್ನು ಈ ರೀತಿ ಭಾವನಾತ್ಮಕಗೊಳಿಸಿದ್ದು ಇದು ಎರಡನೆ ಸಂದರ್ಭ. ಇದಕ್ಕೆ ಮೊದಲು 1997 ರಲ್ಲಿ ಲಂಕೇಶರ ಆತ್ಮಕಥನ ” ಹುಳಿ ಮಾವಿನಮರ” ಪ್ರಕಟವಾಗಿತ್ತು. ಆ ಕೃತಿಯ ಕುರಿತು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.ಲಂಕೇಶರು ಕೆಲವರು ಆ ಕೃತಿಯನ್ನು ಸರಿಯಾಗಿ ಗ್ರಹಿಸಿಲ್ಲ ಎಂದು ಸಿಡಿಮಿಡಿಗೊಳ್ಳುತ್ತಲೇ ಇದ್ದರು. ನಾನೂ ಕೂಡ ಕೃತಿಯ ಬಗ್ಗೆ ಭಯದಿಂದಲೇ ದೀರ್ಘ ಪತ್ರ ಬರದೆ.
ಅದಕ್ಕೆ ಲಂಕೇಶರ ಪ್ರತಿಕ್ರಿಯೆಯ ಪತ್ರ ಹೀಗಿತ್ತು.
“ನಾನು ನಿನ್ನ ಕಾಗದವನ್ನು ಆಶ್ಚರ್ಯದಿಂದ ಮತ್ತೆ ಮತ್ತೆ ಓದಿದೆ.ಇಷ್ಟೊಂದು ಸರಾಗವಾಗಿ,ತಪ್ಪುಗಳಿಲ್ಲದೆ,ಸೂಕ್ಷ್ಮವಾಗಿ ಬರೆದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. Thanks for all good opinions!. ಹೆಚ್ಚು ಹೇಳಿದರೆ ಕೃತಕವಾಗುತ್ತದೆ.
ಒಂದು ಸೋಜಿಗದ ವಿಷಯವೆಂದರೆ ಈ ಪುಸ್ತಕ ಇಷ್ಟು ಚೆನ್ನಾಗಿರುವುದನ್ನು ನೋಡಿ ನನ್ನನ್ನು ನಿರ್ಲಕ್ಷಿಸುತ್ತಿದ್ದವರೂ ಶತ್ರುಗಳಾಗಿರುವಂತಿದೆ!.ಎಲ್ಲೆಲ್ಲೂ hostile ವ್ಯಕ್ತಿಗಳು ತೊಂದರೆ ಕೊಡಲು ಕಾಯುತ್ತಿದ್ದಾರೆ.ನನಗೇನೂ perservention complex ಇಲ್ಲ.ಇದನ್ನೆಲ್ಲ ನಕ್ಕು ಒಪ್ಪಿಕೊಂಡುಬಿಡಬಲ್ಲೆ. ನಮ್ಮ ವಾತಾವರಣ ಇಡಿಯಾಗಿ ( ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ) ಎಷ್ಟು ಕೆಟ್ಟಿದೆ ಎಂದರೆ ಇಲ್ಲಿ ಒಂದು ಒಳ್ಳೆಯ ಪುಸ್ತಕ ಬಂದರೆ ಮೆಚ್ಚಿ ನಾಲ್ಕು ಮಾತಾಡುವ ಜನ ಇಲ್ಲದಂತಾಗಿದೆ. ಈ ಕಾಗದವನ್ನು ಅವಸರದಲ್ಲಿ ಬರೆದಿದ್ದೇನೆ.ನನ್ನ ಕೈ ಬರಹ ಬಹಳ ಕೆಟ್ಟಿರುತ್ತದೆ.
ಇಂತಿ,
ಪಿ.ಲಂಕೇಶ್

ಈ ಲೇಖನ ಸ್ವಲ್ಪ ದೀರ್ಘವಾಯಿತು ಅನಿಸುತ್ತೆ. ಶೂದ್ರ ಸರ್ ಯಾವಾಗಲೂ “ಚೆನ್ನಾಗಿ ಬರೆಯುತ್ತೀಯ ಆದರೆ ವಿವರಗಳೊಂದಿಗೆ ದೀರ್ಘವಾಗಿರಬೇಕು.ಬರೆಯುವ ಅವಕಾಶವನ್ನು ಲೇಖಕ ಕಳೆದುಕೊಳ್ಳಬಾರದು.” ಎಂದು ಹೇಳುತ್ತಲೇ ಇರುತ್ತಾರೆ.ಆದರೆ ಫೇಸ್‌ಬುಕ್ ನವರ ತಾಳ್ಮೆ ಅವರಿಗೇನು ಗೊತ್ತು!. ಈ ಮಾತಿಗೂ ಅವರು ಖಂಡಿತ ಬಯ್ಯುತ್ತಾರೆಂದು ಗೊತ್ತು.
ಇಲ್ಲಿ ಪ್ರಕಟವಾಗಿರುವ ಲೇಖನದ ಪಠ್ಯ.
“ಲಂಕೇಶ್ ಮೋಹಕ ರೂಪಕಗಳ ನಡುವೆ”
ಶೂದ್ರ ಶ್ರೀನಿವಾಸ್ ( Shudra Srinivas ) ಅವರು ತಮ್ಮ ಬದುಕಿನ ಒಂದು ಭಾಗವಾದ ಪಿ.ಲಂಕೇಶ್ ಅವರೊಂದಿಗಿನ ಗಾಢ ಸಂಬಂಧವನ್ನು ಕಟ್ಟಿಕೊಟ್ಟಿರುವ ಬೆಚ್ಚನೆಯ ಕಥಾನಕ.
ಶೂದ್ರ ಶ್ರೀನಿವಾಸ್ ಸರ್ ಮತ್ತು ಲಂಕೇಶ್ ಅಂಕಲ್ ಅವರುಗಳನ್ನು ಹಲವು ಸಾರಿ ಹತ್ತಿರದಿಂದ ಕಂಡು ಇಬ್ಬರ ಸಾಮಾನ್ಯ ಗುಣ(Commom Factor) ವಾದ ತಾಯ್ತನದ ಸ್ಪರ್ಶದ ಅನುಭವದಿಂದ “ಲಂಕೇಶ್, ಮೋಹಕ ರೂಪಕಗಳ ನಡುವೆ” ಕೃತಿ ಕುರಿತು ಒಟ್ಟಾರೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಲಂಕೇಶ್ ಅವರ ಕುರಿತ ಮಾತುಗಳೆಂದರೆ ಕರ್ನಾಟಕದ ಒಂದು ಕಾಲಘಟ್ಟದ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವಾತಾವರಣವನ್ನು ಇಡಿಯಾಗಿ ಮಾತನಾಡಿದಂತಾಗುತ್ತದೆ; ಹಾಗೆಯೇ ಈ ಕೃತಿ ಕೂಡ. ಮತ್ತು ಲಂಕೇಶರೇ ಇಡೀ ವಾತಾವರಣದ ಕೀಲಿ ಕೈ ನಂತಿದ್ದರು ಎನ್ನುವುದು ನಿಜ.
” ಶೂದ್ರ ನನ್ನ ಪ್ರಜ್ಞೆಯ ಒಂದು ಭಾಗ ” ಎನ್ನುವ ಲಂಕೇಶರ ಮಾತಿನಲ್ಲಿ ಶೂದ್ರ ಅವರು ಲಂಕೇಶರನ್ನು ಹೇಗೆ ಆವರಿಸಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಜಗತ್ತಿನ ಬಹುತೇಕ ರೂಪಕ ಲೇಖಕರಂತೆಯೇ ಸಂಕೀರ್ಣ ವ್ಯಕ್ತಿತ್ವದವರಾಗಿದ್ದ ಲಂಕೇಶರು ಅನೇಕ ಸಾರಿ ಜೋಲಿ ತಪ್ಪಬಹುದೆನ್ನುವ ಸಂದರ್ಭಗಳಲ್ಲಿ ಶಿಷ್ಯ,ಗೆಳೆಯ, ಸಖ,ವಿಮರ್ಶಕನಾಗಿ ಶೂದ್ರ ಅವರು ಸರಿದೂಗಿಸಬಲ್ಲ ಗಾರುಡಿಗನಾಗಿದ್ದರು ಎಂಬುದನ್ನು ಕೃತಿಯಲ್ಲಿ ದಟ್ಟವಾಗಿ ಕಾಣಬಹುದು. ಆದರೆ ಲಂಕೇಶರಂಥ ದೈತ್ಯ ಪ್ರತಿಭೆಯೊಂದಿಗೆ ಇದು ಅಷ್ಟು ಸುಲಭದ ಮಾತಲ್ಲ. ಪರಸ್ಪರ ಅಂತರಂಗವನ್ನು ಧ್ಯಾನಿಸುವುದರಿಂದ ಮಾತ್ರ ಸಾಧ್ಯವಾಗಬಲ್ಲದು.
ಲಂಕೇಶರಿಗೆ ಶೂದ್ರ ಅವರ ಬಗ್ಗೆ ಅದೆಷ್ಟು ಪ್ರೀತಿ ಮತ್ತು ಒಂದು ಆಯಾಮದಲ್ಲಿ ಲಂಕೇಶರು ಸಾಹಿತ್ಯವನ್ನು ಹೇಗೆ ಗ್ರಹಿಸುತ್ತಿದ್ದರೆಂದರೆ ಒಮ್ಮೆ ಲಂಕೇಶ್ ಪತ್ರಿಕೆ ಯಲ್ಲಿ ” ನಮ್ಮಲ್ಲಿ ಇಬ್ಬರು ಹುಡುಗರಿದ್ದಾರೆ.ಒಬ್ಬ ವ್ಯಾಕರಣ, ಕಾಗುಣಿತಗಳ ದೋಷವಿಲ್ಲದೆ ಅಚ್ಚುಕಟ್ಟಾಗಿ ಬರೆಯಬಲ್ಲ ಮತ್ತೊಬ್ಬನ ಬರಹದಲ್ಲಿ ಈ ದೋಷಗಳಿದ್ದರೂ ಇವನ ಬರೆಹ ಹೆಚ್ಚು ಆಪ್ತ ” ಎನ್ನುವ ಅರ್ಥದಲ್ಲಿ ಬರೆದಿದ್ದರು.

ಲಂಕೇಶ್ ಮತ್ತು ಶೂದ್ರ ಅವರ ನಡುವೆ ಅಸಂಖ್ಯಾತ ಮುನಿಸು – ರಾಜಿ ಚಕ್ರ ತಿರುಗಿದೆ.ಮುನಿದಾಗ ಪ್ರೀತಿಯನ್ನು ಹಂಬಲಿಸುತ್ತಿರುವಂತೆ ಪ್ರೀತಿಯಲ್ಲಿ ಜಗಳವನ್ನು ನಿರೀಕ್ಷಿಸುತ್ತಿರುವಂತೆ ಭಾಸವಾಗುತ್ತದೆ. ಒಂದು ಸನ್ನಿವೇಶ ನೆನಪಿಗೆ ಬರುತ್ತಿದೆ. ಅದು “ಲಂಕೇಶ್ ಪತ್ರಿಕೆ” ಯ ಹದಿನೆಂಟನೆಯ ವಾರ್ಷಿಕ ಕಾರ್ಯಕ್ರಮ. ಆಗ ಲಂಕೇಶ್-ಶೂದ್ರ ಮುನಿಸಿನ ಋತುಮಾನ ಚಾಲ್ತಿಯಲ್ಲಿತ್ತು.ಇನ್ನೇನು ಪರಸ್ಪರ ಮಾತನಾಡುವ ಸಾಧ್ಯತೆಯೇ ಇಲ್ಲ ಎನ್ನುವ ಅಭಿಪ್ರಾಯ ಒಂದು ಪ್ರೇಕ್ಷಕ ವಲಯದಲ್ಲಿತ್ತು.ಕಾರ್ಯಕ್ರಮ ಪ್ರಾರಂಭವಾಗುವ ಸಮಯವಾದರೂ ಶೂದ್ರ ಅವರು ಬರಲಿಲ್ಲ.ಕಾರ್ಯಕ್ರಮಕ್ಕೆ ಬಂದಿದ್ದವರ ನಡುವೆ ಶೂದ್ರ ಬರುವುದಿಲ್ಲವೆ?,ಶೂದ್ರ ಬರುತ್ತಾರ?, ಶೂದ್ರ ಬರುತ್ತಾರೆ, ಶೂದ್ರ ಬರುವುದಿಲ್ಲ ಎನ್ನುವ ಪ್ರಶ್ನೆ, ಕುತೂಹಲ, ಊಹೆ ಹರಿದಾಡುತ್ತಿದ್ದವು. ಕಾರ್ಯಕ್ರಮ ಮುಗಿದರೂ ಶೂದ್ರ ಅವರು ಬರಲಿಲ್ಲ. ಲಂಕೇಶರು ಚಡಪಡಿಸುವಂತಿದ್ದರು. ಲಂಕೇಶರು ಆಪ್ತ ಗೆಳೆಯರೊಂದಿಗೆ ತಮ್ಮ ಕೊಠಡಿಗೆ ಹೋದರು. ಅಷ್ಟರಲ್ಲಿ “ಶೂದ್ರ ಬಂದರು” ಎಂಬ ಧ್ವನಿ ಕೇಳಿತು.ಶೂದ್ರ ಆತುರಾತುರವಾಗಿ ಮೆಟ್ಟಿಲೇರಿ ಬಂದು ಲಂಕೇಶರ ಕೊಠಡಿ ಬಾಗಿಲ ಬಳಿ ಬರುತ್ತಿದ್ದಂತೆ “ಓ ಶೂದ್ರ… ಬಾ ಶೂದ್ರ” ಎಂದ ಲಂಕೇಶರ ಮುಖದಲ್ಲಿ ಸಂತಸ, ಹೆಮ್ಮೆ ಹೊಳೆಯುತ್ತಿತ್ತು; ಇಡೀ ದೇಹ ಖುಷಿಗೆ ಸ್ಪಂದಿಸುತ್ತಿರುವಂತಿತ್ತು .ಹೆಮ್ಮೆಯಿಂದ ಗೆಳೆಯರತ್ತ ನೋಡತೊಡಗಿದರು. ಲಂಕೇಶರ ಆ ಕ್ಷಣ ಕಂಡು ಮನಸು ತೇವಗೊಂಡಿತು.
ಬಹುಶಃ ಶೂದ್ರ ಅವರು ಲಂಕೇಶರ ಬದುಕಿನ ಭಾಗವಾಗದೆ ಹೋಗಿದ್ದರೆ ಲಂಕೇಶರು ತಮ್ಮ ಅನೇಕ ಆತ್ಮೀಯ ಗೆಳೆಯರ ಮನಸ್ತಾಪವನ್ನು ಹಾಗೆಯೇ ಉಳಿಸಿಕೊಂಡುಬಿಡುತ್ತಿದ್ದರು ಅನಿಸುತ್ತದೆ ; ಅಷ್ಟರಮಟ್ಟಿಗೆ ಶೂದ್ರ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಕೊಂಡಿಯಾಗಿದ್ದರು. ಕೃತಿಯ ಉದ್ದಕ್ಕೂ ಈ ಮಾತಿಗೆ ಸಮರ್ಥನೆಗಳಿವೆ.
ಲೋಕ ತಿಳಿದುಕೊಂಡಂತೆ ಅಥವಾ ಕೆಲವರು ಪ್ರಜ್ಞಾಪೂರ್ವಕವಾಗಿ ಚಿತ್ರಿಸಿರುವಂತೆ ಲಂಕೇಶರು ಮಹಾ ಒರಟು,ಸಿಡುಕು,ಸಿನಿಕ,ಅಹಂಕಾರ, ಪ್ರತಿಷ್ಠೆಯ ವ್ಯಕ್ತಿಯಾಗಿರದೆ ಅತಿ ಸಂಕೋಚದ, ತಾಯ್ತನದ ಪ್ರೀತಿಯ, ಸಣ್ಣ ತಪ್ಪುಗಳಿಗೂ ಪಾಪಪ್ರಜ್ಞೆಯಿಂದ ವ್ಯಥೆಪಡುವ,ಜೀವಪ್ರೇಮಿ, ಸೂಕ್ಷ್ಮ ವ್ಯಕ್ತಿತ್ವದವರಾಗಿದ್ದರು ಎನ್ನುವುದನ್ನು ಈ ಕೃತಿ ತಿಳಿಸುತ್ತದೆ. ಹಾಗೆಯೇ ಲಂಕೇಶರನ್ನು ತುಂಬಾ ಹತ್ತಿರದಿಂದ ಬಲ್ಲವರಿಗೆ ಇದರ ಅನುಭವವಾಗಿರುತ್ತದೆ. ಲಂಕೇಶರು ತಮ್ಮ ಇಷ್ಟದ ಏಕಾಂತವನ್ನು ಯಾರಾದರೂ ನುಂಗಬಹುದು ಅಥವಾ ಯಾರಾದರೂ ತನ್ನನ್ನು ದುರುಪಯೋಗಪಡಿಸಿಕೊಳ್ಳಬಹುದು ಎನ್ನುವ ಆತಂಕದಿಂದ ತನ್ನ ಸುತ್ತಲೂ ಒಂದು ದಾರ್ಷ್ಟ್ಯದ ಪ್ರಭಾವಳಿಯನ್ನು ನಿರ್ಮಿಸಿಕೊಂಡಿದ್ದರು ಅನಿಸುತ್ತದೆ.
ಕೃತಿಯ ಅಂತಿಮ ಪುಟಗಳಲ್ಲಿ ಲಂಕೇಶರ ಕನಸಿನ ತೋಟ ರಿಯಲ್ ಎಸ್ಟೇಟ್ ಗಳ ಪಾಲಾಗಿರುವುದನ್ನು ದಾಖಲಿಸುವ ಸಾಲುಗಳೇ ಆರ್ದ್ರಗೊಂಡು ಯಾತನೆ ಅನುಭವಿಸಿವೆ ; ಎದೆ ಭಾರವೆನಿಸುತ್ತದೆ. ಲಂಕೇಶರ ವಿದಾಯದ ದಿನಗಳವರೆಗೂ ಇದ್ದ ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಪಿಳ್ಳಗಾನಹಳ್ಳಿ ತೋಟದವರೆಗಿನ ಗ್ರಾಮೀಣ ಪರಿಸರ ನೆನಪಿಸುವ ಕೆಂಪು ಮಣ್ಣಿನ ಗಾಡಿಜಾಡಿನಂಥ ರಸ್ತೆ, ಮರ-ಗಿಡ,ಪಕ್ಷಿ ಸಂಕುಲಗಳಿಂದ ತುಂಬಿದ್ದ ತೋಟ,ಒಂದು ಕಾಲದ ಸಾಂಸ್ಕೃತಿಕ ವೈಭವಗಳಿಗೆ ಸಾಕ್ಷಿಯಾದ ಸುಂದರ ಮನೆ,ಇಡೀ ಬದುಕನ್ನು ಒತ್ತಡದಲ್ಲಿಯೇ ಕಳೆದು ಮೊದಲ ಬಾರಿ ನಿರ್ಭಾವುಕವಾಗಿ ತಣ್ಣಗೆ ಮಲಗಿದ್ದ ಲಂಕೇಶ್ ಅಂಕಲ್ ನೆನಪಾಗಿ ಈಗಿನ ವಿಲಕ್ಷಣ ಬದಲಾವಣೆ ಕಲ್ಪಿಸಿಕೊಂಡರೆ ನಾಡಿನ ಒಂದು ಭಾವನಾತ್ಮಕ ಸಂಬಂಧವೇ ನಾಶವಾದಂತೆನಿಸಿ ಅಸಹನೀಯ ದುಃಖವಾಗುತ್ತದೆ.
ಲಂಕೇಶರೆಂಬ “ಹುಳಿ ಮಾವಿನಮರ” ದ ಆಶ್ರಯದಲ್ಲಿ ಬೆಳೆದು “ಮರ” ಕ್ಕೇ ಆಸರೆಯಾಗಿದ್ದ ಶೂದ್ರ ಎಂಬ ಗುರು-ಶಿಷ್ಯರದ್ದು ನಿಜಕ್ಕೂ ಜೀವಾತ್ಮ ಸಂಬಂಧ.
- ದೀಪಕ್ ಕಲ್ಕೆರೆ
