‘ ಚಿತ್ರ ಚಿಗುರುವ ಹೊತ್ತು’ ಕವನ ಸಂಕಲನ

ಕಲ್ಬುರ್ಗಿ ಜಿಲ್ಲೆಯ “ಮಂದೆವಾಲ” ಗ್ರಾಮದವರಾದ ಚಾಂದಪಾಷ ಎನ್ ಎಸ್ ಅವರ “ಚಿತ್ರ ಚಿಗುರುವ ಹೊತ್ತು” ಕವನ ಸಂಕಲನದ ಕುರಿತು ಲೇಖಕರಾದ ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚಿತ್ರ ಚಿಗುರುವ ಹೊತ್ತು (ಕವಿತೆಗಳು )
ಲೇಖಕರು : ಚಾಂದಪಾಷ ಎನ್ ಎಸ್.
ಪ್ರಕಾಶಕರು : ಕಾವ್ಯಮನೆ ಪ್ರಕಾಶನ ಕಲ್ಬುರ್ಗಿ,
ಬೆಲೆ : ೧೨೦ ರೂಪಾಯಿ.

“ಚಿತ್ರ ಚಿಗುರುವ ಹೊತ್ತು” ಕವನ ಸಂಕಲನದ ಲೇಖಕರಾದ ಶ್ರೀ ಚಾಂದಪಾಷ ಎನ್ ಎಸ್ ಇವರು ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ “ಮಂದೆವಾಲ” ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಮಹಾಪ್ರಬಂಧ ಮಂಡಿಸಿ ಪಿ. ಎಚ್. ಡಿ. ಪಡೆದಿರುತ್ತಾರೆ.

ಕವಿ ಚಾಂದ ಪಾಷ ಎನ್. ಎಸ್. (ಕವಿಚಂದ್ರ ) ಇವರು ಒದ್ದೆ ಗಣ್ಣಿನ ದೀಪ, ಚಿತ್ರ ಚಿಗುರುವ ಹೊತ್ತು ಕವನ ಸಂಕಲನಗಳು ಸೇರಿದಂತೆ ಹಲವಾರು ಕೃತಿಗಳನ್ನು ಬರೆದು ಕನ್ನಡ ಸಾರಸತ್ವ ಲೋಕಕ್ಕೆ ತಮ್ಮದೇಯಾದ ಕೊಡಗೆಯನ್ನು ನೀಡಿದ್ದಾರೆ.

ಇವರು ಮುಳ್ಳುರ ನಾಗರಾಜ ಕಾವ್ಯ ಪ್ರಶಸ್ತಿ, ಕಲ್ಬುರ್ಗಿ ವಿಶ್ವ ವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿ. ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಸಿಪಿಕೆ ಕಾವ್ಯ ಪ್ರಶಸ್ತಿ, ಈ ಹೊತ್ತಿಗೆ ಕಾವ್ಯ ಪ್ರಶಸ್ತಿ, ಅಪ್ಪ ಪ್ರಶಸ್ತಿ, ಬಸವ ಪುರಸ್ಕಾರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಗೌರವ ಸನ್ಮಾನಕ್ಕೆ ಭಾಜನರಾಗಿರುವರು.

“ಚಿತ್ರ ಚಿಗುರುವ ಹೊತ್ತು” ಕವನ ಸಂಕಲನವು ೨೦೨೦ ರಲ್ಲಿ ಮೊದಲ ಮುದ್ರಣ ಕಂಡಿದೆ, ೨೦೨೬ ರಲ್ಲಿ ಮತ್ತೆ ಎರಡನೇ ಬಾರಿಗೆ ಮುದ್ರಣ ಗೊಂಡಿದ್ದು ಇದುವರೆಗೂ ಸುಮಾರು ೪೦೦ ಪುಸ್ತಕಗಳು ಮಾರಾಟವಾಗಿರುವ ಈ ಕವನ ಸಂಕಲವು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಅನ್ನಬಹುದು.

ಪಿ. ಲಂಕೇಶ ಅವರು ಹೇಳಿದಂತೆ, “ನಿಶಬ್ದದಿಂದ ಸದ್ದುಗಳನ್ನು ಏಳಿಸುವುದು ಶೂನ್ಯದಿಂದ ಆಕಾರಗಳನ್ನು ಹೊರಡಿಸುವುದು ಬರಹಗಾರನಿಗೆ ಅಂಟಿದ ಶಾಪ” ಅನ್ನುವ ಮಾತಿನಂತೆ ಕವಿಗೆ ಕಾವ್ಯ ಬರೆಯುವುದು ಜಟೀಲವಾದ ಸಾಹಿತ್ಯ ಪ್ರಕಾರವೆಂದು ಅನಿಸದೆ ಇರದು, ಅಂತಃ ಜಟಿಲ ಸಾಹಿತ್ಯ ಪ್ರಕಾರವನ್ನು ಸುಲಭವಾಗಿಸಿದವರು ಕವಿ ಚಂದ್ರ ಚಾಂದಪಾಷ ಅವರು.

ಕವಿ ಚಾಂದ ಪಾಷ ಅವರು ಬರೆದ “ಚಿತ್ರ ಚಿಗುರುವ ಹೊತ್ತು” ಕವನ ಸoಕಲನದ ಕುರಿತು ಹೇಳುವದಾದರೆ ಈ ಪುಸ್ತಕವು ಕೇವಲ ಕವನ ಸಂಕಲನ ಅಲ್ಲ, ಈ ಕೃತಿಯು ಕವಿಯ ಲೇಖನಿಯಿಂದ ಶಬ್ದದ ರೂಪವಾಗಿ ಬರೆಯಲ್ಪಟ್ಟ ಭಾವನಾತ್ಮಕ ಭಾವನೆಗಳು, ಇಲ್ಲಿ ಬೆಳಕು, ಕತ್ತಲು, ಪ್ರೀತಿ, ಪ್ರೇಮ, ನೋವು,ಮತ್ತು ಭರವಸೆಗಳ ನಡುವೆ ಚಿಗುರುವ ಜೀವನವನ್ನು ಇಲ್ಲಿ ಚಿತ್ರಿಸಲಾಗಿದೆ.

“ಚಿತ್ರ ಚಿಗುರುವ ಹೊತ್ತು” ಕವನ ಸಂಕಲನದಲ್ಲಿ ಬಣ್ಣ ಮಾಸುವ ಮುನ್ನ, ಸಂತಾಪ ಸುಚಿಸು, ಅವನು, ಒದ್ದೆಗಣ್ಣಿನ ದೀಪ, ಸೀತಾ ದಹನ ಸೇರಿದಂತೆ ಒಟ್ಟು ೪೮ ಕವಿತೆಗಳಿವೆ. ಕವಿಗಳು ಕವಿತೆಗಳಲ್ಲಿ ಸರಳ ಭಾಷೆಯನ್ನು ಬಳಸುವ ಜೊತೆಗೆ ಪ್ರತಿ ಕವಿತೆಯ ಸಾಲುಗಳು ಓದುತ್ತ ಹೋದರೆ ಎದೆಗೆ ಚುಚ್ಚಿದಂತೆ ಭಾಸವಾಗುತ್ತದೆ.

ಬಣ್ಣ ಮಾಸುವ ಮುನ್ನ : ಶೀರ್ಷಿಕೆಯುಳ್ಳ ಕವಿತೆಯು ನೆನಪು, ಸಮುದ್ರ ತಾರೆಗಳ ಸಾಕ್ಷಿಯಲ್ಲಿ ಪ್ರೇಮವನ್ನು ಹುಡುಕುವ ಪರಿ ಕವಿಗಳಾದ ಚಾಂದಪಾಷ ಅವರ ವೈಕ್ತಿಕ ದ್ವನಿಯ ಮೃದುತ್ವವನ್ನು ತೋರಿಸುತ್ತದೆ.

ಒದ್ದೆಗಣ್ಣಿನ ದೀಪ: ಇಲ್ಲಿ ಉತ್ತರ ಸಿಗದ ಪ್ರಶ್ನೆಗಳು ಕವಿಯನ್ನು ಕಾಡುತ್ತಿವೆ. ಅಳಲಾಗದೆ, ಉಳಿದ ಕಣ್ಣೀರ ಜೊತೆ ಬದುಕುವ ಈ ಕಾಲದ ಮನುಷ್ಯನನ್ನು ಕವಿಗಳು “ಒದ್ದೆಗಣ್ಣಿನ ದೀಪ ” ಎಂದು ಗುರುತಿಸಿದ್ದಾರೆ. ನೋವಿನ ನಡುವೆಯೂ ಬೆಳಕು ಕೊಡುವ ಧ್ಯೇಯವೇ ಇಲ್ಲಿನ ತತ್ವ.

ಮಸೀದಿಯೊಳಗೊಂದು ಹೆಣ್ಣು ದೀಪ: ಧೈರ್ಯದ ಧ್ವನಿ ನಂಬಿಕೆಯೊಳಗಿನ ತಾರತಮ್ಯ ಪ್ರಶ್ನಿಸುತ್ತದೆ. “ಭುರ್ಖ ತೊಡೆದ ಬೆಳಕು ಬಂದಿದೆ, ಎಂದು ಅಜಾನ್ ನ ಮೈಕ್ ಅರಚುತ್ತಿದೆ. ಶತಕೋಟಿ ದಿನಗಳಿಂದಲೂ ಆಕೆ ಹೊರಗೆ ಇದ್ದಾಳೆ ”

ಇ ಮಾತು ಯುವುದೇ ಧರ್ಮದ ವಿರುದ್ಧವಲ್ಲ “ಭಕ್ತಿಯ ಬೆಳಕನ್ನು ಬಟ್ಟೆಯಿಂದ ಮುಚ್ಚಿಡಲು ಆಗುವುದಿಲ್ಲ ಎಂಬ ಮಾನವೀಯ ಘೋಷಣೆಯನ್ನು ಕವಿ ಚಾoದಪಾಷ ಇಲ್ಲಿ ಧರ್ಮಗ್ರಂಥದ ಪುರುಷರ ಕೈ ಬರಹವನ್ನು ಪ್ರಶ್ನಿಸುತ್ತಾರೆ.

ಚಿತ್ರ ಚಿಗುರುವ ಹೊತ್ತು: ಈ ಕವಿತೆಯ ಶೀರ್ಷಿಕೆಯನ್ನೇ ಸoಕಲಕ್ಕೆ ಹೆಸರಿಟ್ಟ ಕವಿ ಬೀದಿಗೆ ಬಿದ್ದ ಕುಂಚ, ಮುರಿದ ಚಂದ್ರನ ಕನ್ನಡಿ ಆದರೂ ನಗುವಿನ ಬಣ್ಣ ಹುಡುಕುವ ಚಿತ್ರಕಾರ, “ಬೇನೆಯ ಬೆರಳಿಗೆ ಕುಂಚ ಮುಲಾಮಾಗದೆ ” ಇದ್ದರೂ ಬಣ್ಣ ಕಳಚುವ ಹೊತ್ತಾದರೂ ಮಳೆಯ ಹೆಜ್ಜೆ ಮೂಡಿಲ್ಲ ” ಅಂದರೆ ಕಷ್ಟ ಎಷ್ಟೇ ಬಂದರೂ ಸೃಷ್ಟಿ ನಿಲ್ಲುವುದಿಲ್ಲ, ಈ ಮಾತು ಪ್ರತಿಯೊಬ್ಬ ಹೋರಾಟಗಾರನಿಗೆ ಪ್ರೇರಣೆ ನೀಡುವ ಕವಿತೆಯಾಗಿದೆ.

“ಈ ಧರ್ಮದಲ್ಲಿ ಹಲಾಲ್ ಆಗದ ನಮ್ಮ ಪ್ರೇಮವನ್ನು ಕತ್ತರಿಸಿ ಎಸೆದ ಮಾoಸದಂಗಡಿಯ ವಿಳಾಸ ತಿಳಿಸು ” ಅನ್ನುವ ಮುಖಪುಟದಲ್ಲಿ ಬರೆದಿರುವ ಸಾಲನ್ನು ಅರ್ಥೈಸುವದಾದರೆ ಕವಿಗಳು ಪ್ರೇಮವನ್ನು ಮಾoಸಕ್ಕೆ ಬಿರಿಯಾನಿ ಮೊಸರನ್ನು ಕುಲಕ್ಕೆ ಹೋಲಿಸಿ ಸಮಾಜದ ಕೌರ್ಯತೆಯನ್ನು ಬಯಲು ಮಾಡಿದ್ದಾರೆ.

ಬೆಳಕು-ಕತ್ತಲು, ನೋವು-ನಲಿವು ಪ್ರೇಮ-ಧರ್ಮ,ಬಂಡಾಯ-ಮೌನ, ಈ ಎಲ್ಲ ಸಂಘರ್ಷಗಳ ಸಮ್ಮಿಳತವನ್ನೋಳಗೊಂಡ ವಿಷಯಗಳೇ ಕವಿತೆಗಳಿಗೆ ಶಕ್ತಿ ತುಂಬಿರುವಂತಿದೆ.

ಸಮಾಜದಲ್ಲಿ ಧರ್ಮ ಕುಲದ ಹೆಸರಲ್ಲಿ ನಡೆಯುವ ಅನ್ಯಾಯವನ್ನು ಒಪ್ಪಿಕೊಂಡು ಕಣ್ಣಿದ್ದು ಕುರುಡರಂತೆ ಕೂಡದಿರಿ ಎಂಬ ಸಂದೇಶ ನೀಡುವದರೊಂದಿಗೆ ಕವಿಗಳು ಸಮಾಜವನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವದಾದರೆ ಕವಿ ಚಾಂದಪಾಷ ಅವರ ಈ ಕವನ ಸಂಕಲನ ನೋವಿನ ನಡುವೆ “ಚಿತ್ರ ಚಿಗುರಿಸುವ ದೀಪ ಉರಿಸುವ ಉತ್ತಮ ಕೃತಿಯಾಗಿದೆ.


  • ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading