ಹೆಣ್ಣುಮಕ್ಳು ಸೇರಿದರೆ ಹರಟೆ, ನಗು, ಗಲಾಟೆಗೇನು ಕಮ್ಮಿ ಇರೋಲ್ಲ. ಅಕ್ಕ ಪಕ್ಕದ ಮನೆಯ ಹೆಂಗಸರ ಮಾತುಕತೆಯನ್ನೇ ಇಟ್ಟುಕೊಂಡು ಸರ್ವಮಂಗಳ ಜಯರಾಮ್ ಅವರು ಕಲ್ಪನೆಯ ಬರಹವೊಂದನ್ನು ‘ಚೌಚೌ ಬಾತ್’ ಅಂಕಣದಲ್ಲಿ ‘ಊರ್ ಉಸಾಬರಿ ನಮಗ್ಯಾಕೆ’ ಅಂತ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ …
ನಮ್ ಹೆಣ್ ಮಕ್ಳು ಊರ್ ಉಸಾಬರಿ ನಮಗ್ಯಾಕೆ ಅಂತಾನೇ ಊರು ಕೇರಿ ದಾಟಿ ಮೂಲೆ ಮನೆ ಗಂಗಮ್ಮನ ವಿಚಾರದಿಂದ ಹಿಡಿದು ರಾಜ್ಯ ರಾಜಕಾರಣದವರೆಗೂ ಮಾತಾಡ್ತಾನೇ ಇರ್ತಾರೆ…. ಅವರ ಮಾತುಗಳಲ್ಲಿ ಹಾಸ್ಯ, ವ್ಯಂಗ್ಯ ಅಷ್ಟೇ ಅಲ್ಲದೆ ಅಲ್ಪ ಸ್ವಲ್ಪ ಸತ್ಯಾನೂ ಇರುತ್ತಲ್ವ… ಆಲಿಸುವ ತಾಳ್ಮೆ ಇರ್ಬೇಕಷ್ಟೇ…. ಹಾಗೇ ಸುಮ್ಮನೆ ಅಕ್ಕ ಪಕ್ಕದ ಮನೆಯ ಹೆಂಗಸರ ಮಾತುಕತೆ ಇಲ್ಲಿ ಕಲ್ಪನೆಯ ಬರಹವಾಗಿ ಮೂಡಿ ಬಂದಿದೆ… ಮುಂದೆ ಓದಿ.
ಶಾಂತಮ್ಮ – ರೀ…… ಕಾಂತಮ್ಮ, ಊಟ ಆಯ್ತೇನ್ರಿ.
ಕಾಂತಮ್ಮ- ಹೂನ್ ರಿ ಆಯ್ತು ನಿಮ್ಮದು ಆಯ್ತಾ , ಏನ್ ಸಾಂಬಾರ್ ಮಾಡಿದ್ರಿ.
ಶಾಂತಮ್ಮ- ಇವತ್ತು ಸೋಮವಾರ ಅಲ್ವೇನ್ರಿ, ಸ್ನಾನ ಪೂಜೆ, ತಿಂಡಿ ಎಲ್ಲಾ ಆಗೋ ಹೊತ್ತಿಗೆ ಮಧ್ಯಾಹ್ನ 12 ಆಯ್ತು. ಬೆಳಗ್ಗೆ ತಿಂಡಿಗೆ ಅವಲಕ್ಕಿ ಒಗ್ಗರಣೆ ಮಾಡಿದ್ದೆ. ತಿಂದು ಯಜಮಾನ್ರು ಆಫೀಸಿಗೆ ಹೋದರು. ಮಕ್ಕಳು ಸ್ಕೂಲಿಗೆ ಹೋದರು.ನಾನು ಈಗ ತರಕಾರಿ ಹುಳಿ ಮಾಡಿ ಊಟ ಮಾಡಿದೆ. ಅದ್ಸರಿ ನೀವೇನ್ ಸಾಂಬಾರ್ ಮಾಡಿದ್ರೀ…
ಕಾಂತಮ್ಮ- ನಿನ್ನೆ ಭಾನುವಾರ ಅಲ್ವೇನ್ರಿ, ಮಕ್ಕಳು ಬಂದಿದ್ದರು ಹಾಸ್ಟೆಲ್ನಿಂದ, ನಮ್ಮೆಜಮಾನ್ರು ರಾತ್ರಿ ಒಂದು ಕೆಜಿ ಚಿಕನ್ ತಂದಿದ್ದರು. ಸಾಂಬಾರ್ ಮಾಡಿ ಮುದ್ದೆ ಮಾಡಿದ್ದೆ. ಇನ್ನೂ ಸ್ವಲ್ಪ ಮಿಕ್ಕಿತ್ತು. ಅದಿಕ್ಕೆ ಚಪಾತಿ ಮಾಡಿಕೊಟ್ಟಿದ್ದೆ. ತಿಂದು ಕೆಲಸಕ್ಕೆ ಹೋದರು ನಮ್ಮವರು. ಮಕ್ಕಳು ಕಾಲೇಜಿಗೆ ಹೋದರು.
ಶಾಂತಮ್ಮ- ಅಯ್ಯೋ ಏನ್ರೀ ಇದು ಅಪಚಾರ , ಇವತ್ತು ಸೋಮವಾರ ಅಲ್ವೇನ್ರಿ… ಚಿಕನ್ ತಿಂತಾರೇನ್ರೀ.
ಕಾಂತಮ್ಮ – ಅಯ್ಯೋ ಏನ್ ಮಾಡೋದು ಹೇಳಿ , ಈಗಿನ ಕಾಲದ ಮಕ್ಕಳು ಅವೆಲ್ಲ ಕೇಳ್ತಾರ, ನೀನು ಬೇಕಾದ್ರೆ ತಿನ್ಬೇಡಮ್ಮ,ನಮಗೆ ಮಾಡಿ ಕೊಡು, ನಾವು ತಿಂತೀವಿ ಅಂತಾರೆ, ಅಲ್ಲದೆ ಸಿಟಿಗಳಲ್ಲಿ ಶನಿವಾರ ಸೋಮವಾರ ಅಂತ ಏನು ಇಲ್ವಂತೆ, ಎಲ್ಲ ದಿನವೂ ನಾನ್ ವೆಜ್ ಸಿಗುತ್ತಂತೆ, ಈ ಹುಡುಗರಿಗೂ ಅದೇ ರೂಡಿ ಆಗ್ಬಿಟ್ಟೈತೆ, ನಾನ್ ಮಾಡ್ಲಿಲ್ಲ ಅಂದ್ರೆ ಹೋಟೆಲ್ನಲ್ಲಿ ತರಿಸಿ ಕೊಡು ಅಂತಾರೆ. ಹೋಟೆಲ್ ನಲ್ಲಿ ಒಂದು ಪ್ಲೇಟ್ ಗೆ ಚಿಕನ್ ಗೆ ಕೊಡುವಷ್ಟು ದುಡ್ಡಲ್ಲಿ ಮನೆ ಮಕ್ಕಳೆಲ್ಲ ಚಿಕನ್ ತಿನ್ನಬಹುದು ಅಂತ ನಮ್ಮನೆವ್ರು ರಾತ್ರಿ ಚಿಕನ್ ತಂದಿದ್ರು,
ಶಾಂತಮ್ಮ – ಒಂದರ್ಧ ಕೆ. ಜಿ ತರ್ಸೋದಲ್ವೇನ್ರಿ… ಒಂದು ಹೊತ್ತಿಗೆ ಆಗುವಷ್ಟು.
ಕಾಂತಮ್ಮ – ಅಯ್ಯೋ…. ನಿಮಗಿನ್ನು ಗೊತ್ತಿಲ್ಲ ನಮ್ಮ ಮಕ್ಕಳ ಕಥೆ, ಅವರಿಗೆ ಚಿಕ್ಕನ್ ಮಟನ್ ಒಂದ್ಸಲ ತಿಂದ್ರೆ ಸಮಾಧಾನನೇ ಆಗಲ್ಲ. ಕನಿಷ್ಠ ಎರಡು ಸರ್ತಿ ಆದ್ರೂ ತಿನ್ನಲೇಬೇಕು. ನಾನಂತೂ ಶನಿವಾರ ಸೋಮವಾರ ತಿನ್ನಲ್ಲ. ಅಪ್ಪ ಮಕ್ಕಳು ತಿಂತಾರೆ, ತಿಂದುಕೊಳ್ಳಲಿ ಬಿಡಿ, ನನಗೆ ಒಗ್ಗಲ್ಲ, ನಾನು ತಿನ್ನಲ್ಲ ಅಷ್ಟೇ.
ಶಾಂತಮ್ಮ- ನಾನೂ ತಿನ್ನಲ್ಲಪ್ಪ ಭಾನುವಾರ ಚಿಕನ್ ಮಾಡಿದ್ರೆ ಮತ್ತೆ ಉಳಿಯುತ್ತೆ ಅಂತ ಭಾನುವಾರ ಚಿಕನ್ನೇ ತರ್ಸಲ್ಲ ನಾನು, ನಾವೇನಿದ್ದರೂ ಮಂಗಳವಾರದ ಮೇಲೇನೇ ಚಿಕನ್ ತರಿಸೋದು, ಅಷ್ಟೊಂದು ದುಡ್ಡು ಕೊಟ್ಟು ತಂದಿರುತ್ತೇವೆ, ಬಿಸಾಕೋದು ಹೆಂಗೆ ಹೇಳಿ… ಹೊಟ್ಟೆ ಉರಿಯುತ್ತಪ್ಪ ನಂಗಂತೂ…
ಕಾಂತಮ್ಮ – ಅಯ್ಯೋ ಇನ್ನೊಂದು ವಿಷ್ಯ ಗೊತ್ತೇನ್ರೀ ನಿಮಗೆ, ಕೆಲವರು ಭಾನುವಾರ ಮಾಡಿರೋ ಚಿಕನ್ ಸಾಂಬಾರನ್ನ ಫ್ರಿಡ್ಜ್ ನಲ್ಲಿ ಇಟ್ಟು ಮಂಗಳವಾರ ತಿಂತಾರಂತೆ.
ಶಾಂತಮ್ಮ – ಈಗಿನ ಕಾಲದ ಜನ ಅಂತೂ ಕೆಟ್ಟೋಗ್ ಬಿಟ್ಟವರೆ, ಒಂದು ಸಂಸ್ಕೃತಿ ಇಲ್ಲ, ಒಂದು ಸಂಸ್ಕಾರ ಇಲ್ಲ, ಇಷ್ಟ ಬಂದಂಗ್ ಇರ್ತಾರೆ. ನಾನಂತೂ ನನ್ನ ಮಕ್ಕಳಿಗೆ ಇವೆಲ್ಲ ಮಾಡೋಕೆ ಬಿಡಲ್ಲ ನೋಡಿ, ಅದರಲ್ಲೂ ಶನಿವಾರ ಸೋಮವಾರ ನಾನ್ ವೆಜ್ ತಿನ್ನಲೇಬಾರದು. ಮನೆ ಒಳಗೆ ತರಲೇ ಬಾರದು, ಸೋಮವಾರ ಚಿಕನ್ ತಿಂದ್ರೆ ಶಿವ ಮೆಚ್ತಾನಾ, ಶನಿವಾರ ಆಂಜನೇಯನ ದಿನ ಅಲ್ವಾ,
ಕಾಂತಮ್ಮ- ಅಲ್ರಿ ಶಾಂತಮ್ಮ ಈ ದೇವರುಗಳಲ್ಲಿ ವೆಜ್ ದೇವರು ನಾನ್ವೆಜ್ ದೇವರು ಅಂತ ಇದ್ದಾವಾ? ಎಲ್ಲ ನಾವೇ ಮಾಡಿಕೊಂಡಿರೋದು ತಾನೆ.
ಶಾಂತಮ್ಮ- ಹೂನ್ ರಿ ಇದಾವಲ್ಲ, ಈಗ ನೀವೇ ನೋಡ್ರಿ ಸೋಮವಾರ ಸೋಮೇಶ್ವರನಿಗೆ, ನಂಜುಂಡೇಶ್ವರನಿಗೆ ಪೂಜೆ, ಗುರುವಾರ ಗುರುರಾಯರಿಗೆ ಆರಾಧನೆ, ಶುಕ್ರವಾರ ಲಕ್ಷ್ಮಿ ಪೂಜೆ, ಈಶ್ವರ, ಆಂಜನೇಯ, ರಾಘವೇಂದ್ರ, ಲಕ್ಷ್ಮಿ ,ಸರಸ್ವತಿ ,ಗೌರಿ ,ವಿಷ್ಣು, ಗಣೇಶ ಇವರೆಲ್ಲ ವೆಜ್ ದೇವರುಗಳೇ ಅಲ್ವಾ, ಇವರಿಗೆಲ್ಲ ಪೂಜೆ ಮಾಡಿ ಸಿಹಿ ನೈವೇದ್ಯ ಅರ್ಪಿಸಬೇಕು. ಇನ್ನು ನಾನ್ ವೆಜ್ ದೇವರುಗಳೆಂದರೆ ಭದ್ರಕಾಳಿ, ಮಹೇಶ್ವರಿ, ಚಂಡಿ, ಚಾಮುಂಡಿ, ಚೌಡೇಶ್ವರಿ, ಸಪ್ಲಮ್ಮ,ದುರ್ಗಮ್ಮ ,ಮರಿಗಮ್ಮ ಹೀಗೆ ಶಕ್ತಿ ದೇವತೆಗಳು. ಇವರಿಗೆ ಕೋಳಿ ಕುರಿ ಮೇಕೆ ಬಲಿ ಕೊಟ್ಟರೆನೆ ಶಾಂತವಾಗುವುದು. ಇದೆಲ್ಲಾ ಪುರಾಣದಲ್ಲೇ ಐತಲ್ಲ.
ಕಾಂತಮ್ಮ- ಅಲ್ರೀ ಅದ್ಯಾರೋ ಶಾಸಕರು ಚಿಕನ್ ತಿಂದು ದೇವಸ್ಥಾನಕ್ಕೆ ಹೋಗಿದ್ರಂತೆ, ಅವರಿಗೆ ಏನು ಆಗಲ್ವಾ ಹಾಗಾದ್ರೆ, ಅದೂ ಹನುಮನ ದೇವಸ್ಥಾನಕ್ಕೆ,
ಶಾಂತಮ್ಮ- ಅಯ್ಯೋ ಅವರೆಲ್ಲ ದೊಡ್ಡೋರು ಬಿಡ್ರಿ, ದುಡ್ಡಿರೋರು ದುಡ್ಡು ಕೊಟ್ಟು ದೇವರನ್ನೂ ಕೊಂಡುಕೊಳ್ಳುತ್ತಾರೆ. ಅವರು ಏನು ತಪ್ಪು ಮಾಡಿದ್ರು ದೇವರು ಹರಸ್ತಾನೆ. ನಮ್ ನಿಮ್ಮಂತೋರಿಗೆ ಕಷ್ಟ. ಬಡವ ನೀ ಮಡಗಿದಂಗೆ ಇರು ಅಂತ ಗಾದೆನೇ ಐತಲ್ವಾ, ಊರ್ ಉಸಾಬರಿ ನಮಗ್ಯಾಕೆ ಬಿಡ್ರೀ ಅಲ್ವಾ.
ಕಾಂತಮ್ಮ- ಅಲ್ರಿ ಶಾಂತಮ್ಮ ಈಶ್ವರನ್ನ, ಹನುಮಂತನ್ನ ವೆಜ್ ದೇವ್ರು ಅಂತಿರಲ್ರಿ, ಅದ್ಯಾವುದೋ ಹಳ್ಳಿಯಲ್ಲಿ ಬಯಲಾಂಜನೇಯನಿಗೆ ಕುರಿ ಮೇಕೆ ಬಲಿಕೊಡುತ್ತಾರಂತೆ, ನೀವ್ ಕೇಳಿಲ್ವಾ ಈ ವಿಷ್ಯ. ಅಲ್ಲದೆ ನಮ್ಮ ಶಿವಪ್ಪ …ಅದೇ ಈಶ್ವರ, ರಾತ್ರಿಯೆಲ್ಲಾ ಜಾಗರಣೆ ಇದ್ದ ಬೇಡರ ಕಣ್ಣಪ್ಪನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವನಿಟ್ಟ ಜಿಂಕೆ ಮಾಂಸವನ್ನು ತಿಂದನಂತೆ, ಇದನ್ನೂ ಪುರಾಣದಲ್ಲಿ ಹೇಳವ್ರೆ ಅಲ್ವಾ?
ಶಾಂತಮ್ಮ- ಅಯ್ಯೋ ಬಿಡ್ರಿ ಈಗಿನ ಕಾಲದಲ್ಲಿ ಆಗಿರೋದು ಅದೇ ಅಲ್ವಾ, ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ ಅಂತಾರಲ್ಲ ಹಾಗೆ, ಆದರೂ ಶನಿವಾರ ಚಿಕನ್ ತಿನ್ನಬಾರದು ಬಿಡಿ, ಮುಂದೆ ಹುಟ್ಟೋ ಮಕ್ಕಳು ಕೋತಿ ತರ ಹುಟ್ತಾವಂತೆ, ಇದು ಆಂಜನೇಯನ ಶಾಪನಂತೆ,
ಕಾಂತಮ್ಮ- ಅಯ್ಯೋ ಕಂಡೋರ್ ಯಾರು ಬಿಡ್ರಿ, ಸಾಯದೆ ಬದುಕಿದ್ದರೆ ಅದನ್ನು ನೋಡೋಣ.
ಶಾಂತಮ್ಮ- ಹೂ ಹೌದು ಬಿಡ್ರಿ, ಮತ್ತೆ ಇನ್ನೊಂದು ವಿಷಯ ಗೊತ್ತಾ ನಿಮ್ಗೆ, ಮೂಲೆ ಮನೆ ಗಂಗಮ್ಮ ಇಲ್ವಾ…
ಕಾಂತಮ್ಮ- ಇದಾಳೆ ,ಏನಾಯ್ತು ಅವಳಿಗೆ.
ಶಾಂತಮ್ಮ- ಅವಳ ಮಗಳಿಗೆ ಮೊನ್ನೆ ಮೊನ್ನೆ ತಾನೆ ಮದುವೆ ಮಾಡಿದ್ರಲ್ಲ, ಈಗ ನೋಡಿದ್ರೆ ಗಂಡನಿಗೆ ಡೈವೋರ್ಸ್ ಕೊಟ್ಟು ಬಂದಿದ್ದಾಳಂತೆ,
ಕಾಂತಮ್ಮ- ಅಯ್ಯೋ ಹೌದಾ ಯಾಕಂತೆ,
ಶಾಂತಮ್ಮ- ಅಯ್ಯೋ ನನಗೂ ಸರಿಯಾಗಿ ಗೊತ್ತಿಲ್ಲ ಕಣ್ರೀ. ಅದೇನೋ ಅವಳು ಯಾವನ್ನೋ ಲವ್ ಮಾಡಿದ್ಲಂತೆ, ಎರಡು ವರ್ಷದಿಂದ. ಈಗ ಅವನು ಗಂಡನಿಗೆ ಡೈವೋರ್ಸ್ ಕೊಟ್ಟು ಬಾ, ನಾನು ನಿನ್ನ ಮದುವೆ ಆಗ್ತೀನಿ ಅಂತ ಹೇಳಿದನಂತೆ, ಹುಚ್ಚು ಹುಡುಗಿ ಡಿವೋರ್ಸ್ ಕೊಟ್ಟು ಬಂದವ್ಳೆ,
ಕಾಂತಮ್ಮ- ಹೌದಾ…. ಇಷ್ಟೆಲ್ಲ ರಾಮಾಯಣ ಆಯ್ತಂತ ,ನಂಗೊತ್ತೇ ಇರ್ಲಿಲ್ಲ. ಈಗ ಅವನು ಮದುವೆ ಆಗ್ತಾನಂತ.
ಶಾಂತಮ್ಮ- ಎಲ್ಲಿ ಆಗ್ತಾನೆ, ಅವನು ಇದ್ರೆ ತಾನೇ ಮದುವೆ ಆಗೋಕೆ, ಮನೆಯಲ್ಲಿ ಕ್ಯಾಕರಿಸಿ ಉಗಿಯಲ್ವಾ, ಡೈವೋರ್ಸ್ ಆಗಿರೋ ಹುಡುಗಿನ ಮದುವೆ ಆದ್ರೆ, ಅದಿಕ್ಕೆ ಅವನು ಮೂರು ದಿನದಿಂದ ಮನೆ ಬಿಟ್ಟು ಪರಾರಿ ಆಗವ್ನಂತೆ, ಆ ಹುಡುಗಿನ ಅವರ ಮನೆಗೂ ಸೇರಿಸ್ತಿಲ್ವಂತೆ,ಇವ್ರ್ ಮನೆಗೂ ಸೇರಿಸ್ತಿಲ್ವಂತೆ.
ಕಾಂತಮ್ಮ- ಅಯ್ಯೋ ಹೌದೇನ್ರೀ…. ಪಾಪ ಹಾಗಾದರೆ ಅವಳ್ಗತಿ .
ಶಾಂತಮ್ಮ – ಗತಿ ಗೋವಿಂದ, ಅಷ್ಟೇ ಬಿಡ್ರಿ ಯಾವುದಾದ್ರೂ ಕೆರೆನೋ ಬಾವಿನೋ ನೋಡ್ಕೊಂತಾಳೆ ಅಷ್ಟೇ.
ಕಾಂತಮ್ಮ- ಅಯ್ಯೋ ಇವರಿಬ್ಬರ ಜಗಳದಲ್ಲಿ ನಮ್ ಗೋವಿಂದ ಸ್ವಾಮಿ ಹೆಸರನ್ನ ಯಾಕ್ ತರ್ತಿರ ಬಿಡ್ರೀ, ಅವನೆಲ್ಲೋ ಏಳು ಬೆಟ್ಟಗಳ ಮೇಲೆ ನೆಮ್ಮದಿಯಾಗಿದ್ದಾನೆ. ಇಬ್ರು ಹೆಂಡಿರು ಇದ್ದರೂ ಒಂದು ದಿನನೂ ಅವರ ಮಧ್ಯೆ ಜಗಳ ಆಗದಂತೆ ಮೆಂಟೇನ್ ಮಾಡುತ್ತಿದ್ದಾನೆ ನಮ್ ಸ್ವಾಮಿ. ಈ ಮನುಷ್ಯರೇ ಈ ರೀತಿ ಜಗಳ ಆಡಿಕೊಂಡು ಸಾಯುವುದು.
ಶಾಂತಮ್ಮ- ಅಲ್ವೇನ್ರೀ… ಅದಕ್ಕೆ ಅಲ್ವಾ ಹೇಳೋದು ದೇವರು ದೇವರೇ…. ಮನುಷ್ಯರು ಮನುಷ್ಯರೇ ಅಂತ. ದೇವರು ಮಹಾನುಭಾವರು ಶಾಂತಂ ಪಾಪಂ ಶಾಂತಂ ಪಾಪಂ,
ಕಾಂತಮ್ಮ- ಹೂನ್ರೀ ಅದೂ ನಿಜಾನೆ, ಮಾಡ್ದೋರ್ ಪಾಪ ಆಡ್ದೋರ್ ಬಾಯಾಗೆ ಅನ್ನೋ ಹಂಗೆ ನಮಗ್ಯಾಕೆ ಬೇಕು ಬಿಡಿ ಊರ್ ಉಸಾಬರಿ. ಆದ್ರೂ ಬಡವರು ಸಾಹುಕಾರರು ಎಂಬ ಭೇದ ಭಾವ ಇಲ್ಲದೆ ಎಲ್ಲರಿಂದಲೂ ಕಾಣಿಕೆ ಸ್ವೀಕರಿಸುತ್ತಾ, ಎಲ್ಲರನ್ನೂ ಕಾಪಾಡ್ತಾ ಇದಾನಲ್ಲ ನಮ್ಮ ಗೋವಿಂದ ಸ್ವಾಮಿ, ಅವನಿಗೆ ಜೈಕಾರ ಹೇಳಲೇಬೇಕು, ತಿರುಪತಿಗೆ ಹೋಗುವಾಗ ಅದೆಷ್ಟೇ ದುಡ್ಡು ತಗೊಂಡು ಹೋದ್ರು ವಾಪಸ್ಸು ಬರುವಾಗ ಐದು ಪೈಸೆನೂ ಉಳಿಯಲ್ವಂತೆ. ಜೇಬಿಗೆ ಕತ್ತರಿ, ಹಣ ಉಳಿಯದ ಹಾಗೆ ಗೋವಿಂದ ನೋಡ್ಕೋತಾನಂತೆ, ಅದೇ ಅವನ ಮಹಿಮೆ ಕಣ್ರೀ, ಅದಕ್ಕೆ ಅವನನ್ನು ಗೋವಿಂದ ಅನ್ನೋದು.
ಶಾಂತಮ್ಮ- ಆ…. ಆ… ಆ…. (ಆಕಳಿಸುತ್ತ) …ಸರಿ ಕಣ್ರೀ ನಾನು ಹಂಗೆ ರವಷ್ಟು ಹೊತ್ತು ಉಳ್ಕಂಡು ಬರ್ತೀನಿ, ಬೆಳಗ್ಗೆಯಿಂದ ನಿಂತು ನಿಂತು ಸೊಂಟ ಒಡಿತಾ ಇದೆ. ಊರ್ ಉಸಾಬರಿ ನಮಗ್ಯಾಕ್ ಬಿಡ್ರಿ.
ಕಾಂತಮ್ಮ- ನಿಜ ನಿಜ ನಿಮ್ ಮಾತು, ಊರ್ ಉಸಾಬರಿ ನಮಗ್ಯಾಕೆ ಬಿಡ್ರಿ ಅಲ್ವಾ….
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ಸರ್ವ ಮಂಗಳ ಜಯರಾಮ್- ಗೌರಿಬಿದನೂರು.
