‘ಸೂರ್ಯನ್ ಪರ್ಪಂಚ’ ಕೃತಿ ಪರಿಚಯ

ಓದುಗರಲ್ಲಿ ಕುತೂಹಲ ಮೂಡಿಸುವ ವಿಭಿನ್ನ ಕಾದಂಬರಿಯೇ ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ‘ಸೂರ್ಯನ್ ಪರ್ಪಂಚ’ ದ ಕುರಿತು ಕಾದಂಬರಿಗಾರ್ತಿ ಸರ್ವಮಂಗಳ ಜಯರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

2022 ನೇ ಸಾಲಿನ ಡಾ.ವಿ.ಬಿ.ಹಿರೇಮಠ್ ದತ್ತಿ ಪ್ರಶಸ್ತಿ ಹಾಗೂ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ಕೊಡ ಮಾಡುವ ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿರುವ ಕಾದಂಬರಿ ಸೂರ್ಯನ್ ಪರ್ಪಂಚ ದ ಲೇಖಕರಾದ ಶ್ರೀಯುತ ಸೂರ್ಯಸಖ ಪ್ರಸಾದ್ ಕುಲಕರ್ಣಿಯವರಿಗೆ ಶುಭಾಭಿನಂದನೆಗಳನ್ನು ತಿಳಿಸುತ್ತ ಸೂರ್ಯನ್ ಪರ್ಪಂಚದ ಬಗ್ಗೆ ಒಂದೆರಡು ಮಾತುಗಳನ್ನಾಡಲು ಬಯಸುತ್ತೇನೆ.

ಈ ಕಾದಂಬರಿಯ ಹೆಸರಿನಲ್ಲೇ ಒಂದು ವೈಶಿಷ್ಟ್ಯ ಪೂರ್ಣವಾದ ನಾವೀನ್ಯತೆ ಇದೆ. ಲೇಖಕರೇ ಹೇಳಿರುವಂತೆ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳಾದ ಜಿ.ಪಿ.ರಾಜರತ್ನಂ ರವರ ರತ್ನನ್ ಪರ್ಪಂಚದಂತೆ ಇದು ಸೂರ್ಯನ್ ಪರ್ಪಂಚ.ಈ ಪರ್ಪಂಚದಲ್ಲಿ ಹಲವಾರು ಪಾತ್ರಗಳು ಮಾತನಾಡುತ್ತವೆ,ವಿಭಿನ್ನ ಭಾವಗಳು ಮಿಡಿಯುತ್ತವೆ ವಿಚಿತ್ರ ವ್ಯಕ್ತಿತ್ವಗಳ ವಿಕ್ಷಿಪ್ತ ಮನಸ್ಥಿತಿ ಅನಾವರಣಗೊಳ್ಳುತ್ತದೆ.ಸೂರ್ಯನಾರಾಯಣ ಕರಿಕಟ್ಟೆ ಎಂಬ ಪತ್ರಕರ್ತ ಹಾಗೂ ಕಥೆಗಾರನ ಮೂಲಕ ತೆರೆದುಕೊಳ್ಳುವ ಸೂರ್ಯನ್ ಪರ್ಪಂಚ ಹಲವು ಕೌತುಕಗಳ ಆಗರವಾಗಿದೆ. ವಿಭಿನ್ನ ನೆಲಗಟ್ಟಿನಲ್ಲಿ ಮೂಡಿ ಬಂದ ರೋಚಕ ತಿರುವುಗಳ ಸಮ್ಮಿಳಿತವಾಗಿದೆ.

ನೈತಿಕ ಅಧಃಪತನ ಎಂಬ ಒಂದೇ ಒಂದು ಸಣ್ಣ ಎಳೆಯನ್ನು ಹಿಡಿದು ಕಾದಂಬರಿ ಬರೆಯಲು ಹೊರಟ ಸೂರ್ಯಸಖರು ಸುಮಾರು 214 ಪುಟಗಳ ಸುದೀರ್ಘ ಹಾಗೂ ಕೌತುಕದ ಕೌದಿಯನ್ನೇ ಹೆಣೆದಿದ್ದಾರೆ.ಮೊದಲ ಪ್ರಯತ್ನದಲ್ಲೇ ಯಶಸ್ವಿ ಕಾದಂಬರಿಕಾರರಾಗಿ ಹೊರಹೊಮ್ಮಿದ್ದಾರೆ. ಕಾದಂಬರಿಯ ಆರಂಭದಲ್ಲಿ ಒಂದು ಸಾಧಾರಣ ಕೌಟುಂಬಿಕ ಕಾದಂಬರಿಯಂತೆ ಮೂಡಿ ಬರುವ ಸೂರ್ಯನ್ ಪರ್ಪಂಚ ಓದುತ್ತಾ ಓದುತ್ತಾ ಒಂದು ವಿಸ್ಮಯ ಹಾಗೂ ಮಂತ್ರಮುಗ್ಧಗೊಳಿಸುವ ಲೋಕಕ್ಕೆ ಸೆಳೆದೊಯ್ಯುತ್ತದೆ ಪತ್ತೆದಾರಿ ಕಾದಂಬರಿಯಂತೆ ರೋಚಕ ತಿರುವುಗಳನ್ನು ಪಡೆಯುತ್ತಾ ಥ್ರಿಲ್ಲಿಂಗ್ ನ ಅನುಭವವನ್ನು ನೀಡುತ್ತದೆ.ಮುಂದೇನು ನಡೆಯುತ್ತದೆ ಎಂಬ ಕುತೂಹಲಕಾರಿ ಪ್ರಶ್ನೆಯೊಂದಿಗೆ ಓದುಗರ ಮನದಲ್ಲಿ ಕೊನೆಯವರೆಗೂ ನಿಗೂಢತೆಯನ್ನು ಕಾಪಾಡಿಕೊಂಡು ವಿಶಿಷ್ಟ ಕಾದಂಬರಿಗಳ ಸಾಲಿನಲ್ಲಿ ನಿಲ್ಲುತ್ತದೆ ಈ ನಿಟ್ಟಿನಲ್ಲಿ ಕಾದಂಬರಿ ಕಾರರು ವಿಶಿಷ್ಟ ಹಾಗೂ ಸೃಜನಶೀಲ ಬರಹಗಾರರಾಗಿ ಗಮನ ಸೆಳೆದಿದ್ದಾರೆ. ಈ ಕಾದಂಬರಿಯಲ್ಲಿ ಪ್ರಮುಖವಾಗಿ ಗಮನ ಸೆಳೆಯ ಬಹುದಾದ ಪಾತ್ರಗಳೆಂದರೆ ವೃಶಾಲಿ ಶಾಲ್ಮಲಾ ಹಾಗೂ ರಾಗಿಣಿ.ಮೂರೂ ಪಾತ್ರಗಳು ವಿಭಿನ್ನ ಹಿನ್ನೆಲೆಯಲ್ಲಿ ಮೂಡಿಬಂದು ಹೆಣ್ಣಿನ ಅಂತರಾಳವನ್ನು ತೆರೆದಿರುತ್ತವೆ. ಕಷ್ಟವೋ ಸುಖವು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಬದುಕನ್ನು ಸ್ವೀಕರಿಸಿ ಕೈಹಿಡಿದ ಗಂಡ ಅದೆಷ್ಟೇ ಮಾನಸಿಕ ಹಿಂಸೆ ಕೊಟ್ಟರು, ಅಸಂಬದ್ಧ ವರ್ತನೆ ತೋರಿಸಿದರು ಸಹಿಸಿಕೊಂಡು ಪ್ರಕಾಶ ನಂತಹ ವಿಕ್ಷಿಪ್ತ ಮನಸ್ಥಿತಿಯವನೊಂದಿಗೆ ಬದುಕನ್ನು ಸವೆಸುವ ವೃಶಾಲಿ ಸ್ವತಂತ್ರ ಮನೋಭಾವದ ವಕೀಲೆ.ಕಾಲು ಸ್ವಲ್ಪ ಊನ ವಾಗಿ ಪೋಷಕರಿಂದ ತಿರಸ್ಕರಿಸಲ್ಪಟ್ಟರು ಪುಟಿದೇಳುವ ಚೆಂಡಿನಂತೆ ಜೀವನದಲ್ಲಿ ಮೇಲೆದ್ದು ನಿಂತು ತನ್ನ ಬದುಕನ್ನು ರೂಪಿಸಿಕೊಂಡವಳು. ಚಿಕ್ಕಂದಿನಲ್ಲೇ ತನ್ನ ತಾಯಿಯನ್ನು ಬೆಂಕಿ ಅಪಘಾತದಲ್ಲಿ ಕಳೆದುಕೊಂಡು ಹೆತ್ತ ತಂದೆ ಹಾಗೂ ಚಿಕ್ಕಮ್ಮನ ಅನಾದರಕ್ಕೆ ಒಳಗಾಗುತ್ತಾಳೆ.ಸಾಧಾರಣ ರೂಪದವಳಾದ ವೃಶಾಲಿ ಓದಿನಲ್ಲಿ ಮಾತ್ರ ಬಹಳ ಚುರುಕು. ವೃಶಾಲಿಯ ತಂಗಿ ವೈಶಾಲಿ ರೂಪದಲ್ಲಿ ತಿದ್ದಿ ತಿಡಿದ ಬೊಂಬೆಯಂತಿದ್ದಳು ಆದರೆ ವಿದ್ಯೆ ಮಾತ್ರ ನೈವೇದ್ಯೆ.ಎಷ್ಟು ಪ್ರಯತ್ನಿಸಿದರು ಓದುಬರಹ ಅವಳ ತಲೆಗೆ ಹತ್ತಲಿಲ್ಲ ಆದರೆ ಅವಳ ತಂದೆ ಚಂದ್ರಮೌಳಿ ಅವಳನ್ನು ಜಗದೇಕ ಸುಂದರಿ ಎಂದು ಹೊಗಳುತ್ತಾ ನೆತ್ತಿಯ ಮೇಲೆ ಕೂಡಿಸಿಕೊಂಡಿದ್ದರು. ಚಿಕ್ಕಮಗಳು ವೈಶಾಲಿ ಅದೃಷ್ಟದೇವತೆ ಅವಳು ಹುಟ್ಟಿದ ಮೇಲೆಯೇ ಏಲಕ್ಕಿ ಬೆಳೆ ಚೆನ್ನಾಗಿ ಬಂದು ಲಾಭಗಳಿಸಿದ್ದು ವ್ಯಾಪಾರ ಕೈ ಹಿಡಿದಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ವೃಶಾಲಿಯ ಅಣ್ಣ ಮನೋಹರನನ್ನು ಹಿರಿ ಮಗನೆಂದು ಮುದ್ದಿಸುತ್ತ ವಂಶೋದ್ಧಾರಕನೆಂದು ಕೊಂಡಾಡುತ್ತಿದ್ದರು.

ಪ್ರತಿದಿನ ಸಂಜೆ ಮನೆಯಲ್ಲಿಯೇ ಕುಡಿದು ತೂರಾಡುತ್ತ ದೊಡ್ಡ ಮಗ ಮನೋಹರ ಹಾಗೂ ಚಿಕ್ಕ ಮಗಳು ವೈಶಾಲಿಯ ಗುಣಗಾನ ಮಾಡುವುದು ಇದು ಪ್ರತಿದಿನದ ದಿನಚರಿಯಾಗಿತ್ತು. ಪ್ರತಿದಿನ ಪ್ರತಿ ಕ್ಷಣ ತಂದೆ ಆಡುತ್ತಿದ್ದ ಚುಚ್ಚು ಮಾತುಗಳನ್ನು ಕೇಳಿ ಕೇಳಿ ವೃಶಾಲಿಯ ವ್ಯಕ್ತಿತ್ವ ಗಟ್ಟಿಯಾಗ ತೊಡಗಿತ್ತು ಒಟ್ಟಿನಲ್ಲಿ ವೃಶಾಲಿ ತನ್ನ ತಂದೆಗೆ ಬೇಡದ ಕೂಸಾಗಿದ್ದಳು ತಂದೆ ಎಷ್ಟೇ ನಿರ್ಲಕ್ಷಿಸಿದರು ಜೀವನದಲ್ಲಿ ಹಲವಾರು ಎಡರು ತೊಡರುಗಳು ಎದುರಾದರೂ ಎದೆಗುಂದದೆ ಓದಿ ಮುಂದೆ ಪ್ರಖ್ಯಾತ ವಕೀಲೆಯಾಗುತ್ತಾಳೆ. ತನ್ನ ಜೀವದ ಗೆಳೆಯ ಆಪ್ತ ಸ್ನೇಹಿತ ಸೂರ್ಯನಾರಾಯಣ ಕರಿಕಟ್ಟೆಯೊಂದಿಗೆ ಸ್ನೇಹ ಬಾಂಧವ್ಯವನ್ನು ಹೊಂದಿ ಕೊನೆಯವರೆಗೂ ಉತ್ತಮ ಸ್ನೇಹಿತಳಾಗಿ ಉಳಿಯುತ್ತಾಳೆ. ಒಂದು ಹರೆಯದ ಹೆಣ್ಣು ಗಂಡಿನ ನಡುವೆ ಪ್ರೀತಿಯ ಹೊರತಾಗಿ ಸ್ನೇಹಭಾವವೂ ಸೃಜಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ನಿರ್ಮಲ ಸ್ನೇಹವೂ ಅವರಿಬ್ಬರ ನಡುವಿನ ಬಾಂಧವ್ಯವನ್ನು ಸ್ಥಿರಗೊಳಿಸಿತ್ತು.ವೃಶಾಲಿ ಮದುವೆಯಾದ ನಂತರವೂ ಸೂರ್ಯನಾರಾಯಣನೊಂದಿಗಿನ ಸ್ನೇಹವನ್ನು ಕಡಿದುಕೊಂಡಿರಲಿಲ್ಲ ಇದರಿಂದ ಅಸಂತೃಷ್ಟನಾದ ವೃಶಾಲಿಯ ಗಂಡ ಪ್ರಕಾಶನ ನಡವಳಿಕೆ ಆಗಾಗ ಅಸಹನೆಯ ಸ್ಫೋಟ ವಾಗಿ ಸಿಡಿಯುತ್ತಿತ್ತು. ಆದರೆ ಇದಾವುದನ್ನು ಗಣನೆಗೆ ತೆಗೆದುಕೊಳ್ಳದ ವೃಶಾಲಿ ತನ್ನ ಗಂಡನ ಮಾನಸಿಕ ಅಸ್ವಸ್ಥತೆಗೆ ಮರುಗುತ್ತಿದ್ದಳು. ಪ್ರಕಾಶನದ್ದು ಜ್ಞಾನವೂ ಅಜ್ಞಾನವೂ ವಿವೇಕವು, ಅವಿವೇಕವು ಸಮ್ಮಿಳಿತವಾದ ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿತ್ವವಾಗಿತ್ತು.ವೃಶಾಲಿಗೆ ಅವನನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಸವಾಲಾಗಿತ್ತು.

ಈ ಕಾದಂಬರಿಯಲ್ಲಿ ವಿವಾಹ ಪೂರ್ವ ಲೈಂಗಿಕತೆಯ ಬಗ್ಗೆಯೂ ಪ್ರಸ್ತಾಪವಿದೆ. ಮಂಜುಳಾ ಎಂಬ ಲೇಖಕಿಯ ವಿವಾಹ ಪೂರ್ವ ಲೈಂಗಿಕತೆಯ ಪರವಾದ ಅವರ ಲೇಖನವನ್ನು ಉಲ್ಲೇಖಿಸುತ್ತಾ ವೃಶಾಲಿಯ ತಂಗಿ ವೈಶಾಲಿ ಮಾಡಿಕೊಂಡ ಎಡವಟ್ಟನ್ನು ಲೇಖಕರು ರಸವತ್ತಾಗಿ ವಿವರಿಸಿದ್ದಾರೆ.”ಆಳು ನೋಡಿದ್ರೆ ಅಲಂಕಾರ ಬಾಳು ನೋಡಿದ್ರೆ ಬಡ್ಕೊಂಡ್ ಸಾಯಿ” ಎಂಬ ಗಾದೆ ಮಾತಿನಂತೆ ನೋಡಲು ಸುಂದರವಾಗಿದ್ದ ವೈಶಾಲಿಯ ವ್ಯಕ್ತಿತ್ವ ಮಾತ್ರ ಸುಂದರವಾಗಿರಲಿಲ್ಲ.ಯಾವನೋ ತಲೆಮಾಸಿದ ಡೆಲಿವರಿ ಬಾಯ್ ನೊಂದಿಗೆ ವಿವಾಹ ಪೂರ್ವ ಲೈಂಗಿಕ ಸಂಬಂಧ ಹೊಂದಿ ಹೋಟೆಲ್ ರೂಮ್ನಲ್ಲಿ ಸಿಕ್ಕಿಹಾಕಿಕೊಂಡ ಪ್ರಸಂಗವನ್ನು ಲೇಖಕರು ಇಂದಿನ ಯುವ ಪೀಳಿಗೆಯ ಮನಸ್ಥಿತಿಗೆ ತಳುಕು ಹಾಕುತ್ತಾ ವಿವರಿಸಿದ್ದಾರೆ. ವಿವಾಹ ಪೂರ್ವ ಲೈಂಗಿಕತೆ , ಲೀವ್ ಇನ್ ರಿಲೇಶನ್ಶಿಪ್ ಎಂಬುದು ಇಂದಿನ ಆಧುನಿಕ ಸಮಾಜದಲ್ಲಿ ಒಂದು ಟ್ರೆಂಡ್ ಹಾಗೂ ಫ್ಯಾಷನ್ ಕೂಡ ಆಗಿದೆ ಎಂಬುದನ್ನು ವಿಡಂಬನಾತ್ಮಕವಾಗಿ ಹೇಳಿದ್ದಾರೆ.ಮದುವೆ ಎಂಬ ಪವಿತ್ರ ಬಂಧನವು ನೈತಿಕ ಅಧಃಪತನದತ್ತ ವಾಲುತ್ತಿರುವುದನ್ನು ಸೂಚ್ಯವಾಗಿ ವಾಗಿ ಹೇಳಿದ್ದಾರೆ.

ಅಸಂಬದ್ಧ ನಡವಳಿಕೆಯ,ವಿಚಿತ್ರ ವರ್ತನೆಯ ಪ್ರಕಾಶನೊಂದಿಗೆ ವೃಶಾಲಿಯ ಜೀವನ ಹಸನಾಗದಿದ್ದರೂ ಇತರರ ಒಳಿತಿಗಾಗಿ ಸದಾ ಮಿಡಿಯುವ ಅಂತಃಕರಣ ವೃಶಾಲಿಯದ್ದು. ವರಸೆಯಲ್ಲಿ ತಂಗಿ ಆಗಬಹುದಾದ ಶಾಲ್ಮಾಲಾಳ ಹದಗೆಟ್ಟ ಬದುಕನ್ನು ತಹಬದಿಗೆ ತರುವಲ್ಲಿ ವೃಶಾಲಿಯ ಅವಿರತ ಪ್ರಯತ್ನ ಶ್ಲಾಘನೀಯ. ಸಂಬಂಧವೇ ಇಲ್ಲದ ಶಾಲ್ಮಲಳ ಅಂತರಂಗವನ್ನು ಕಥೆಯ ಮೂಲಕ ತೆರೆದಿಟ್ಟು ಕುತೂಹಲ ಮೂಡಿಸಿ ಓದುಗರ ಮನ ಸೂರೆಗೊಳ್ಳುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಶಾಲ್ಮಲಾ …..ಆಹಾ ! ಅದೆಂತಹ ಸುಂದರ ಶಬ್ದ, ಕೇಳಲು ಕಿವಿಗೆ ಹಿತವೆನಿಸುವ, ಮನಕ್ಕೆ ಮುದನೀಡುವ ಅನನ್ಯ ಅನುಭೂತಿಯನ್ನು ನೀಡುವ ಮನಮೋಹಕ ಪದ. ಲೇಖಕರು ಈ ಕಾದಂಬರಿಯಲ್ಲಿ ಬಳಸಿರುವ ಬಹುತೇಕ ಹೆಸರುಗಳು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ನವಿರು ಸ್ಪರ್ಶದ ಭಾವಗಳು , ಸದಾ ಕಾಲ ಕಾಡುವ ಜೀವಂತಿಕೆಯ ಪಪಾತ್ರಗಳು.

ಶಾಲ್ಮಲ …. ಮುದ್ದಾದ ಹೆಸರು , ಸರಳ ಸುಂದರ ವ್ಯಕ್ತಿತ್ವ . ತನ್ನ ಬದುಕಿನ ಬಗ್ಗೆ ಸುಂದರ ಕನಸನ್ನು ಕಂಡ ಮಹತ್ವಕಾಂಕ್ಷಿ. ಜೀವನ ಪ್ರೀತಿಯನ್ನು ಬೊಗಸೆಯಲ್ಲಿ ತುಂಬಿಕೊಂಡು ಜೀವನವನ್ನು ಬಹುವಾಗಿ ಪ್ರೀತಿಸುವ ಮನೋಭಿಲಾಷಿ. ಆದರೆ ಅಂದುಕೊಂಡಂತೆ ಇವಳ ಬದುಕು ಸುಂದರವಾಗಿ ರೂಪುಗೊಳ್ಳಲಿಲ್ಲ. ಚಿಕ್ಕಂದಿನಿಂದಲೂ ತನ್ನ ಸೋದರತ್ತೆಯ ಮಗ ಗುರುವನ್ನು ಬಹುವಾಗಿ ಪ್ರೀತಿಸತೊಡಗಿದ್ದಳು. ಭವಿಷ್ಯದಲ್ಲಿ ಅವನೊಂದಿಗಿನ ಜೀವನವನ್ನು ಕಲ್ಪಿಸಿಕೊಂಡು ಉತ್ಸಾಹದ ಚಿಲುಮೆಯಾಗಿದ್ದಳು ಗುರುವಿನ ಮಾತುಗಾರಿಕೆ ಹಾಗೂ ಪಾಂಡಿತ್ಯಕ್ಕೆ ಸೋತು ತನ್ನ ಜೀವನದಲ್ಲಿ ಮಹತ್ತರ ಸ್ಥಾನವನ್ನು ನೀಡಿದ್ದಳು. ಆಕರ್ಷಕ ವ್ಯಕ್ತಿತ್ವದ ಗುರು ಕವಿಯೂ ಸಾಹಿತಿಯೂ ಆಗಿದ್ದ. ಅವನ ಆದರ್ಶ ನಡೆ ನುಡಿಗೆ ಸೋತಿದ್ದ ಶಾಲ್ಮಲಾ ಮನದಲ್ಲೇ ಅವನನ್ನು ಆರಾಧಿಸ ತೊಡಗಿದ್ದಳು. ಆದರೆ ಶಾಲ್ಮಲಾಳ ಆಪ್ತ ಗೆಳತಿ ಕಮಲಿಯೊಂದಿಗಿನ ಅವನ ಅಸಭ್ಯ ವರ್ತನೆ ಶಾಲ್ಮಲಾಳ ನಿದ್ದೆ ಕೆಡಿಸಿತ್ತು. ಗುರುವಿನೊಂದಿಗೆ ಕಂಡಿದ್ದ ಕನಸೆಲ್ಲವೂ ನುಚ್ಚುನೂರಾಯಿತು. ಕಮಲಿಯೊಂದಿಗಿನ ನಿರ್ಮಲ ಸ್ನೇಹ , ಗುರುವಿನೊಂದಿಗೆ ನಿಷ್ಕಲ್ಮಶ ಪ್ರೀತಿ ಎರಡೂ ಶಾಲ್ಮಲಾಳ ಎದೆಗೆ ಚೂರಿ ಹಾಕಿದ್ದವು .

ಮುಂದೆ ಹಿರಿಯರ ಆಣತಿಯಂತೆ ಶ್ರೀನಿವಾಸ್ ಆಚಾರ್ಯರ ಕೈ ಹಿಡಿದು ನಿರ್ಲಿಪ್ತಳಾಗಿದ್ದಳು. ವಾಸ್ತವದ ಬದುಕಿಗೆ ಹೊಂದಿಕೊಂಡು ಬದುಕಿನ ಹಾದಿ ಸವೆಸುತ್ತಿದ್ದಾಗ ಧುತ್ತೆಂದು ಅಡ್ಡಗಾಲು ಹಾಕುತ್ತಾನೆ ರಾಕ್ಷಸನಂತ ಮೈದುನ ಮಾಧವ. ಶಾಲ್ಮಲಾ ಸ್ನಾನ ಮಾಡುತ್ತಿರುವಾಗ ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕುತ್ತಾ ಅವಳು ಏಕಾಂಗಿಯಾಗಿದ್ದಾಗ ಮೈಮೇಲೆ ಬೀಳಲು ಹವಣಿಸುತ್ತ ಲೈಂಗಿಕ ಕಿರುಕುಳ ಕೊಡುತ್ತಿದ್ದ ಮಾಧವ ವಿಕೃತಕಾಮಿಯಾಗಿದ್ದ. ತಾಯಿ ಯಂತಿದ್ದ ಅತ್ತಿಗೆಯನ್ನೇ ಕಾಮಿಸಿ ಇದ್ದಕ್ಕಿದ್ದಂತೆ ನಿಗೂಢವಾಗಿ ಕೊಲೆಯಾಗುತ್ತಾನೆ. ಒಮ್ಮೆ ಶಾಲ್ಮಲ ಅಡುಗೆಮನೆಯಲ್ಲಿ ಒಂಟಿಯಾಗಿದ್ದಾಗ ಅವಳನ್ನು ಕೆಣಕಲು ಬಂದ ಮಾದವನನ್ನು ಮಚ್ಚು ಹಿಡಿದು ಊರಲ್ಲೆಲ್ಲ ಅಟ್ಟಾಡಿಸಿದ್ದಳು. ಇದನ್ನು ಕಣ್ಣಾರೆ ಕಂಡಿದ್ದ ಊರ ಜನ ದಿಗ್ಭ್ರಮೆಗೊಂಡಿದ್ದರು. ಆದ್ದರಿಂದಲೇ ಏನೋ ಮಾದವನ ಕೊಲೆ ಆಪಾದನೆ ಶಾಲ್ಮಲಾಳ ಮೇಲೆ ಬಂದಿತ್ತು. ಅವನ ಅಸಭ್ಯ ವರ್ತನೆಯ ಬಗ್ಗೆ ಅಣ್ಣನಾದ ಶ್ರೀನಿವಾಸ್ ಆಚಾರ್ಯರಿಗೆ ಎಷ್ಟು ಬಾರಿ ಹೇಳಿದರು ಶಾಲ್ಮಲಾಳ ಮಾತನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಿನಗೆಲ್ಲೋ ಭ್ರಮೆ ಎಂದು ಹೇಳಿ ಹೆಂಡತಿಯ ಬಾಯಿ ಮುಚ್ಚಿಸುತ್ತಿದ್ದ. ಒಮ್ಮೆ ತನ್ನ ಅಣ್ಣನ ಮುಂದೆಯೇ ತನ್ನ ಅತ್ತಿಗೆಯನ್ನು ಶಾಮಿ ಡಿಯರ್ ಎನ್ನುತ್ತ ಅಸಭ್ಯವಾಗಿ ಮಾತನಾಡುತ್ತಾನೆ. ಬುದ್ಧಿವಾದ ಹೇಳಲು ಹೋದ ಅಣ್ಣನನ್ನು ಸುಮತಿಯ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಾನೆ ಸುಮತಿ ಹೆಸರು ಕಿವಿಗೆ ಬೀಳುತ್ತಿದ್ದಂತೆ ಶ್ರೀನಿವಾಸ್ ಆಚಾರ್ಯರು ತೆಪ್ಪಗಾಗುತ್ತಾರೆ. ಏಕೆಂದರೆ ಆಚಾರ್ಯರು ಮದುವೆಗೂ ಮುನ್ನ ಸುಮತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತಾರೆ .”ನಿನ್ನದು ನೀನು ನೋಡಿಕೋ ನನಗೆ ನೀತಿ ಹೇಳಬೇಡ ನಿನ್ನ ಕಥೆ ಏನಂತ ನನಗೆ ಗೊತ್ತು” ಎಂದು ಮಾದವ ಶ್ರೀನಿವಾಸ್ ಆಚಾರ್ಯನ ಜಾತಕ ಬಯಲು ಮಾಡುತ್ತಾನೆ . “ನೀನೇ ಮಾಧವನಿಗೆ ಹೊಂದಿಕೊಂಡು ಹೋಗು ಶಾಲ್ಮಲ… ಇಂತದ್ದು ಇಂದು ನೆನ್ನೆಯದ್ದಲ್ಲ ಮಹಾಭಾರತದ ಕಾಲದಿಂದಲೂ ನಡೆದು ಬಂದಿರುವಂತದ್ದೆ ಮನೆ ವಿಷಯ ಯಾರಿಗೂ ಗೊತ್ತಾಗುವುದಿಲ್ಲ” ಎಂದು ತನ್ನ ಹೆಂಡತಿಗೆ ಉಪದೇಶ ಮಾಡುತ್ತಾನೆ.ಶಾಲ್ಮಲಾಳಿಗೆ ಷಂಡ ಗಂಡನೊಂದಿಗೆ ಲಂಪಟ ಮೈದುನನೊಂದಿಗೆ ಜೀವನ ಅಸಹ್ಯವೆನಿಸುತ್ತದೆ.ಅಷ್ಟರಲ್ಲೇ ಇದ್ದಕ್ಕಿದ್ದಂತೆ ಮಾದವನ ಕೊಲೆಯಾಗುತ್ತದೆ. ಕೊಲೆ ಆಪಾದನೆ ಶಾಲ್ಮಲಾ ಹಾಗೂ ಶ್ರೀನಿವಾಸ್ ಆಚಾರ್ಯರ ಮೇಲೆ ಬರುತ್ತದೆ . ಆದರೆ ಶಾಲ್ಮಲಾಳ ಅತ್ತೆ ಮಾವ ತನ್ನ ಸೊಸೆ ಮಾಧವನನ್ನು ಕೊಲೆ ಮಾಡುವಷ್ಟು ಕ್ರೂರಿ ಅಲ್ಲ ಎಂದು ಕೊಲೆ ಆಪಾದನೆಯನ್ನು ತಿರಸ್ಕರಿಸುತ್ತಾರೆ. ಆದರೆ ಸ್ವತಃ ಶ್ರೀನಿವಾಸ್ ಆಚಾರ್ಯರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.ಅವರು ಶಾಲ್ಮಲಾಳೇ ಮಾಧವನ ಕೊಲೆಗಾರ್ತಿ ಎಂದು ತೀರ್ಮಾನಿಸಿ ಬಿಟ್ಟಿದ್ದರು. ಮುಂದೆ ಕೊಲೆಗಾರ ಯಾರೆಂದು ಪತ್ತೆ ಹಚ್ಚಿ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ.

ಇನ್ನು ಈ ಕಾದಂಬರಿಯಲ್ಲಿ ಹಲವಾರು ಪಾತ್ರಗಳ ಮೂಲಕ ಹರಿದು ಬರುವ ನಗೆ ಚಟಾಕಿಗಳು ನವಿರು ಹಾಸ್ಯ ಮೂಡಿಸಿ ಮನಕ್ಕೆ ಕಚಗುಳಿ ಇಡುತ್ತವೆ.ಈ ಕಾದಂಬರಿಯಲ್ಲಿ ಸುಳಿಯುವ ಗುಲ್ಮೊಹರ್ ಎಂಬ ಕೋಲ್ಮಿಂಚು ಓದುಗರ ಹೃದಯಕ್ಕೆ ಲಗ್ಗೆ ಇಡುವುದರಲ್ಲಿ ಅನುಮಾನವಿಲ್ಲ .

ಅವಳು ನನ್ನವಳು ನನ್ನನ್ನೇ ನಂಬಿ ಬಂದವಳು ಅವಳಿಗೆ ಎಂದೆಂದಿಗೂ ದ್ರೋಹ ಬಗೆಯಲಾರೆ. ಅವಳೇ ನನ್ನ ಸರ್ವಸ್ವ , ನನ್ನ ಹೃದಯದ ರಾಣಿ ರಾಗಿಣಿಯೇ ಹೊರತು ಬೇರಾರು ಅಲ್ಲ ಇದನ್ನು ರಾಗಿಣಿ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹಲುಬುತ್ತ ಶ್ರೀವತ್ಸ ರಾಗಿಣಿಯಲ್ಲಿ ಗುಲ್ಮೊಹರ್ ನ ಮಧುರ ಗಂಧವನ್ನು ಹುಡುಕುತ್ತಲೇ ಇರುತ್ತಾನೆ. ರಾಗಿಣಿ ಹೆಜ್ಜೆ ಹೆಜ್ಜೆಗೂ ಶ್ರೀವತ್ಸನನ್ನು ಅನುಮಾನಿಸುತ್ತ ನಾಗಿಣಿಯಂತೆ ಬುಸುಗುಡುತ್ತಿರುತ್ತಾಳೆ.ಮುಂದೆ ಶ್ರೀವತ್ಸ ಹಾಗೂ ರಾಗಿಣಿಯ ಜೀವನದಲ್ಲಿ ತಂಗಾಳಿ ಬೀಸಿತೋ ಬಿರುಗಾಳಿ ಎದ್ದಿತೋ ಎಂಬುದನ್ನು ಕಾದಂಬರಿ ಓದಿಯೇ ತಿಳಿಯಬೇಕಾಗುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿ ಯು ಓದುಗರಿಗೆ ನವರಸಗಳಿಂದ ಹದವಾಗಿ ಪಕ್ವಗೊಂಡು ಸಮ್ಮಿಳಿತಗೊಂಡ ಸುಗ್ರಾಸ ಭೋಜನಂತಿದೆ. ಅಲ್ಲಲ್ಲಿ ಸಂದರ್ಭಾನುಸಾರ ಲೇಖಕರು ತಮ್ಮ ಕಾವ್ಯ ಪ್ರೌಢಿಮೆಯನ್ನು ಹೊರಹೊಮ್ಮಿಸಿದ್ದಾರೆ. ಸನ್ನಿವೇಶಗಳಿಗೆ ತಕ್ಕಂತೆ ಜ್ಞಾನದ ವಿವಿಧ ಮಜಲುಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯಸಖರಿಂದ ಮತ್ತಷ್ಟು ಮಗದಷ್ಟು ಇಂತಹ ವಿಭಿನ್ನ ಹಾಗು ವಿಶಿಷ್ಟ ಕೃತಿಗಳು ಮೂಡಿ ಬರಲೆಂದು ಆಶಿಸುವೆ.


  •  ಸರ್ವಮಂಗಳ ಜಯರಾಂ – ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading