ಸಯಾಟಿಕ್ ನೋವು ಮತ್ತು ಪರಿಹಾರ

ಸಯಾಟಿಕಾ ನರಗಳ ಮೇಲೆ ಒತ್ತಡ ಬೀಳುತ್ತದೆಯೋ ಆವಾಗ ಬರುವ ನೋವನ್ನು ಸಯಾಟಿಕಾ ನೋವು ಎಂದು ಕರೆಯಲಾಗುತ್ತದೆ. ಇದಕ್ಕೆ ಪರಿಹಾರ ಇದೆಯೇ? ಇಲ್ಲವೇ? ಮಂಜುನಾಥ್ ಪ್ರಸಾದ್ ಅವರು ಸಯಾಟಿಕಾ ಕುರಿತು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಜೀವನ ಶೈಲಿಯ ಕಾರಣ ಹೆಚ್ಚು ಹೆಚ್ಚು ಜನರಿಗೆ ಕಾಣಿಸಿಕೊಳ್ಳುತ್ತಿರುವ ಮತ್ತೊಂದು ದೈಹಿಕ ಸಮಸ್ಯೆ ಎಂದರೆ ಈ ಸಯಾಟಿಕಾ ಸಮಸ್ಯೆ.ಅದರಲ್ಲೂ 30 ರಿಂದ 50ರ ಮಧ್ಯ ವಯಸ್ಸಿನಲ್ಲಿ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಅತೀ ಹೆಚ್ಚು. ಸ್ತ್ರೀ ಮತ್ತು ಪುರುಷ ಇಬ್ಬರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸಯಾಟಿಕಾ ಎಂದು ಕರೆಯಲಾಗುವ ನರ ನಮ್ಮ ಶರೀರದಲ್ಲಿರುವ ಎಲ್ಲ ನರಗಳಿಗಿಂತಲೂ ತುಂಬಾ ಉದ್ದವಾದುದು. ಈ ನರ ಬೆನ್ನು ಹುರಿ (Spinal Cord) ನಿಂದ ಪ್ರಾರಂಭವಾಗಿ ಪುಷ್ಠ (Buttock), ತೊಡೆಯ ಹಿಂಭಾಗ. ಅಲ್ಲಿಂದ ಮೀನಖಂಡ ಮತ್ತು ಪಾದಗಳವರೆಗೂ ಮುಂದುವರಿಯುತ್ತದೆ.

ಈ ಸಯಾಟಿಕಾ ನರಕ್ಕೆ, ತೊಡೆಯಿಂದ ಹಿಡಿದು ಸಂಪೂರ್ಣ ಕಾಲು ಮತ್ತು ಪಾದಗಳಲ್ಲಿ ಸ್ಪರ್ಶ ಮತ್ತು ಚಲನೆಯನ್ನು ನಿಯಂತ್ರಿಸುವ ಕೆಲಸ. ಇದು ಒಟ್ಟು ಐದು ಇತರ ನರಗಳ ಸಮೂಹದ ಸಂಕೀರ್ಣ. ಯಾವಾಗ ಈ ನರಗಳ ಮೇಲೆ ಮುಖ್ಯವಾಗಿ ಸಯಾಟಿಕಾ ನರಗಳ ಮೇಲೆ ಒತ್ತಡ ಬೀಳುತ್ತದೆಯೋ ಆವಾಗ ಬರುವ ನೋವನ್ನು ಸಯಾಟಿಕಾ ನೋವು ಎಂದು ಕರೆಯಲಾಗುತ್ತದೆ.

ಇದರ ನೋವು ಕೆಳಬೆನ್ನು, ಸೊಂಟದ ಬಾಗ, ಪೃಷ್ಠದ ಭಾಗ, ತೊಡೆಯಿಂದ ಹಿಡಿದು ಸಯಾಟಿಕ ನರಮಂಡಲ ಎಲ್ಲೆಲ್ಲಿ ಹರಡಿದೆಯೋ ಅಲ್ಲೆಲ್ಲಾ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಯಾವುದಾದರು ಒಂದು ಭಾಗದಲ್ಲಿ ಮಾತ್ರ ಸಹಿಸಲಾರದ ನೋವಿರಬಹುದು ಅಥವಾ ಸೊಂಟದಿಂದ ಸಂಪೂರ್ಣ ಕಾಲಿಗೂ ಸಹ ವ್ಯಾಪಿಸಬಹುದು. ಆದರೆ ಯಾವಾಗಲೂ ಒಂದೇ ಕಾಲಿಗೆ ಮಾತ್ರ ಈ ಸಯಾಟಿಕ ನೋವು ಬರುವುದು.

ಸಯಾಟಿಕ ನೋವೆಂದರೆ ಸಾಮಾನ್ಯ ನೋವಿನಿಂದ ಪ್ರಾರಂಭವಾಗಿ ಮುಂದೆ ಸಹಿಸಲು ಸಾಧ್ಯವಾಗದಷ್ಟು ತೊಂದರೆ ಕೊಡುತ್ತೆ. ಜೊತೆಗೆ ಕಾಲುಗಳಲ್ಲಿ ಜೋಮು, ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು, ಉರಿ, ಮೊಳೆ, ಸೂಜಿಗಳಿಂದ ಚುಚ್ಚಿದ ಅನುಭವಗಳು ಉಂಟಾಗುವುದು. ಕೂರಲು, ನಡೆಯಲು, ಬಗ್ಗಲು ಸಹ ಅಸಾಧ್ಯವಾಗುತ್ತದೆ. ಒಟ್ಟಾರೆ ಅತ್ಯಂತ ಯಾತನೆ.

ಫೋಟೋ ಕೃಪೆ : ಅಂತರ್ಜಾಲ

ಸಯಾಟಿಕ ಉಂಟಾಗಲು ಐದು ಮುಖ್ಯ ಕಾರಣಗಳನ್ನು ಹೇಳಬಹುದು ಅವುಗಳೆಂದರೆ :

  • ಹರ್ನಿಯೇಟೆಡ್ ಡಿಸ್ಕ್ ( Herniated disc ) : ಅಂದರೆ ಎರಡು ಬೆನ್ನು ಮೂಳೆಗಳ ಮದ್ಯದ ಭಾಗ ಹೊರಬಂದಿರುವುದು.
  • Bone spur :  ಬೆನ್ನು ಮೂಳೆ ಹೊರಚಾಚಿರುವುದು.
  • Lumbar Stenosis : ಅಂದರೆ ಬೆನ್ನು ಮೂಳೆಯೊಂದು ಕುಗ್ಗಿ ಒಳಗಿರುವ ನರಕ್ಕೆ ಒತ್ತಡ ಹಾಕುವುದು.
  • Irritation of lower Spine : ಹೆಚ್ಚು ಒತ್ತಡದ ಕಾರಣ ಕೆಳ ಬೆನ್ನು ಮೂಳೆ ಸವೆದಿರುವುದು.
  • Degenerative disc disease : ಅಂದರೆ ಇತರೇ ಕಾರಣಗಳಿಂದ ಮೂಳೆ ಸವೆತದ ಖಾಯಿಲೆಗೆ ಒಳಗಾಗಿರುವುದು.

ಅಲ್ಲದೆ ಗರ್ಭಿಣಿಯರಲ್ಲಿ ಕೊನೆಯ ತಿಂಗಳುಗಳ ಸಮಯದಲ್ಲಿ ಮಗುವಿನ ಭಾರ ಹೆಚ್ಚಾಗುವುದರಿಂದ ಬೆನ್ನು ಮೂಳೆಗಳ ಮೇಲೆ ಒತ್ತಡ ಹೆಚ್ಚಾಗುವುದರಿಂದ ಸಹಾ ಸಯಾಟಿಕಾ ಸಮಸ್ಯೆ ಬರಬಹುದು. ಇದು ತಾತ್ಕಾಲಿಕ. ಇದಕ್ಕೆ ಪರಿಹಾರ ನಿಮ್ಮನ್ನು ತಿಂಗಳೂ ಪರೀಕ್ಷಿಸುತ್ತಿರುವ ವೈದ್ಯರು ಹೇಳುತ್ತಾರೆ. ಬೇರೆಯವರ ಪುಕ್ಕಟೆ ಸಲಹೆ ಕೇಳಬೇಡಿ.

ಸಯಾಟಿಕಾ ನೋವು ಮೊದಲು ಸೊಂಟದಿಂದ ಪ್ರಾರಂಭವಾಗಿ ಅಲ್ಲಿಂದ ಪುಷ್ಠ, ತೊಡೆಗಳ ಹಿಂಬದಿ, ಮೀನಖಂಡ ಮತ್ತು ಪಾದಗಳವರೆಗೆ ಹರಡುತ್ತದೆ. ಭಾರ ಎತ್ತಿದಾಗ, ಕೆಮ್ಮುವಾಗ, ಅಧಿಕ ಶ್ರಮಪಟ್ಟಾಗ ನೋವು ಇನ್ನಷ್ಟು ಹೆಚ್ಚಾಗುವ ಸಂಭವ ಇರುತ್ತದೆ. ಕಾಲುಗಳಲ್ಲಿ ನೋವು, ಸೂಜಿಯಿಂದ ಚುಚ್ಚಿದ ಹಾಗೆ ಇರುತ್ತದೆ. ಹೆಚ್ಚು ಹೊತ್ತು ಜೋಮು ಬರುವುದು ಸಹ ಕೆಲವೊಮ್ಮೆ ಸಯಾಟಿಕ ಲಕ್ಷಣ. ಮಾಂಸಖಂಡಗಳಲ್ಲಿ ಬಲಹೀನತೆ, ಸ್ಪರ್ಶ ಇಲ್ಲದಿರುವುದು, ಕೆಲವರಲ್ಲಿ ಮಲ, ಮೂತ್ರಗಳ ನಿಯಂತ್ರಣ ಕಳೆದುಕೊಳ್ಳುವಂತಹ ಲಕ್ಷಣಗಳನ್ನು ಸಹಾ ಗಮನಿಸಬಹುದು.

ಫೋಟೋ ಕೃಪೆ : ಅಂತರ್ಜಾಲ

ಯಾವುದೇ ಔಷಧೀಯ ಸೇವನೆಗಳಿಂದ ಅಥವಾ ಶಸ್ತ್ರಚಿಕಿತ್ಸೆ ಗಳಿಂದ ಶಾಶ್ವತವಾಗಿ ಪರಿಹಾರವಾಗದ ಈ ಸಯಾಟಿಕ ತೊಂದರೆಗೆ Aceclophenac / Diclophenac ನೋವು ನಿವಾರಕಗಳನ್ನು ಅಥವಾ Steroids ಗಳನ್ನು ( ದೀರ್ಘಕಾಲದಲ್ಲಿ ದೇಹಕ್ಕೆ ಹಾನಿಯುಂಟುಮಾಡುವ ಮಾತ್ರೆಗಳು ) ಮಾತ್ರ ವೈದ್ಯರು ಕೊಡಬಲ್ಲರು. ಆದರೆ ಇವೆಲ್ಲವೂ ತಾತ್ಕಾಲಿಕ ಪರಿಹಾರ.

ಸಾಕಷ್ಟು ಸಮಯ ತೊಂದರೆ ಕೊಟ್ಟ ನಂತರ ಬಹುತೇಕ ಇದು ತಾನಾಗೇ ಸರಿಹೋಗಬಹುದು. ಅಲ್ಲಿಯವರೆಗೆ ಹಲವು ವ್ಯಾಯಾಮ ಮತ್ತು ಯೋಗಾಸನಗಳ ಸತತ ಅಬ್ಯಾಸದ ಮೂಲಕ ನೋವು ಕಡಿಮೆಮಾಡಿಕೊಳ್ಳಬೇಕು.

ನಾನು ನೋಡಿದ ಹಾಗೆ ಮತ್ತು ವೈದ್ಯರುಗಳು ವೈಯಕ್ತಿಕವಾಗಿ ನನಗೆ ತಿಳಿಸಿದಂತೆ, ಈ ಸಯಾಟಿಕ ತೊಂದರೆ ಅನುಭವಿಸುತ್ತಿದ್ದವರು ವ್ಯಾಯಾಮ ಮತ್ತು ಯೋಗಾಸನ ಅಭ್ಯಾಸ ನಿರಂತರವಾಗಿ ಮಾಡುವುದರಿಂದ ತಮ್ಮ ತೊಂದರೆಯನ್ನು ಅಲ್ಪ ಸಮಯದಲ್ಲಿ ಸಂಪೂರ್ಣ ನಿವಾರಿಸಿಕೊಂಡಿದ್ದಾರೆ.

ಸಯಾಟಿಕ ನಿವಾರಣೆಗಾಗಿಯೇ ವಿಶೇಷ ಯೋಗಾಸನಗಳಿವೆ. ತೊಂದರೆ ಇರುವವರು ನಿಮ್ಮ ಹತ್ತಿರದ ಅನುಭವಸ್ತ ಯೋಗ ಗುರುಗಳನ್ನು ಸಂಪರ್ಕಿಸಿ, ನಿಮ್ಮ ತೊಂದರೆ ತಿಳಿಸಿ ಅವರ ಸಲಹೆಯಂತೆ ನಡೆಯಿರಿ. ವಾಸಿಯಾಗುತ್ತೆ.

ನೋವು ಕಡಿಮೆಯಾಗಲು ನೋವಿರುವ ಜಾಗದಲ್ಲಿ ಮೃದುವಾದ ಮಸಾಜ್, ಐಸ್ ಪ್ಯಾಕ್ ಕಾಪಡ, ಬಿಸಿನೀರು ಕಾಪಡ, ಬಿಸಿ ಉಪ್ಪಿನ ಕಾಪಡ ಮಾಡಿಕೊಳ್ಳಿ. ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ತೂಕ ಜಾಸ್ತಿ ಇದ್ದಲ್ಲಿ ಕಮ್ಮಿಮಾಡಿಕೊಳ್ಳಿ. ಅರಿಶಿನದ ಹಾಲಿನ ಸೇವನೆ ಸಯಾಟಿಕ ನೋವನ್ನು ಸಾಕಷ್ಟು ಕಡಿಮೆಮಾಡುತ್ತೆ. ( ಈ ಹಿಂದೆ ಅರಿಶಿನದ ಹಾಲು ತಯಾರಿಸುವ ವಿಧಾನ ಕೊಟ್ಟಿದ್ದೇನೆ ನೋಡಿ ).

ಫೋಟೋ ಕೃಪೆ : ಅಂತರ್ಜಾಲ

ಅವಶ್ಯಕತೆ ಇರುವವರಿಗಾಗಿ ಸಯಾಟಿಕ ಪರಿಹಾರದ ವ್ಯಾಯಾಮ ಮತ್ತು ಯೋಗಾಸನಗಳ ಚಿತ್ರ. ವಿವರವಾಗಿ ನಾಲ್ಕಾರು ಸಲ ನೋಡಿ ಅಭ್ಯಾಸ ಮಾಡಿ, ಅದರಂತೆ ತಪ್ಪದೆ ಮಾಡಿ. ಪ್ರಾರಂಭದಲ್ಲಿ ಕಷ್ಟ ಎನಿಸುತ್ತದೆ ಆದರೆ ನಾಲ್ಕಾರು ದಿನಗಳಲ್ಲಿ ನೋವು ಸ್ವಲ್ಪ ಸ್ವಲ್ಪವೇ ಕಮ್ಮಿಯಾಗುತ್ತ ಸಂಪೂರ್ಣ ಪರಿಹಾರ ಸಿಗುತ್ತೆ.


  • ಚಿತ್ರ, ಲೇಖನ : ಮಂಜುನಾಥ್ ಪ್ರಸಾದ್.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading