ಆಕೃತಿಕನ್ನಡದಿಂದ ಅಭಿಜ್ಞಾ ಪಿ.ಎಮ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾ ಅವರ ರಚನೆಯ ಒಂದು ಕವನ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ…
ನಾವು ನಮ್ಮೊಳಗಿನ ಮಾತುಕತೆ
ಹಕ್ಕಿಗಳ ಚಿಲಿಪಿಲಿಯಂತೆಯೇ
ಸ್ವಚ್ಛಂದವಾಗಿ ದೃಗ್ಗೋಚರಿಸುತಿವೆ….!
ಮುಚ್ಚು ಮರೆಯಿಲ್ಲದ್ದು
ಅದೆಷ್ಟು ವಿಚಾರಗಳು
ಅದೆಷ್ಟು ಸಂಗತಿಗಳು
ಅದೆಷ್ಟು ಸಂಭ್ರಮ ಸಡಗರಗಳ
ಬಗ್ಗೆ ನಿಷ್ಕಲ್ಮಶ ಮಾತುಕತೆ…!
ಸತ್ಯಾಸತ್ಯತೆಗಳ ಜಾಡು ಭೇದಿಸಿ
ಚರ್ಚೆಗಳ ಸುರಿಮಳೆ
ವಾಗ್ಯುದ್ಧಗಳ ಆರ್ಭಟ
ಸರಿತಪ್ಪುಗಳ ಜಾಲಾಡಿ
ನ್ಯಾಯಸಮ್ಮತಕೆ ಮಣೆ ಹಾಕಿ
ಪ್ರಾಮಾಣಿಕತೆ ಮೆರೆವ ಜಾಣ್ಮೆ..!
ನಮ್ಮೊಳಗೆ ಹಾಸ್ಯವು ಇತ್ತು
ಗಂಭೀರತೆಯು ಇತ್ತು
ನೈಜವಿಷಯಗಳನ್ನಾಧರಿಸಿ
ಮಾತನಾಡುತಿದ್ದರೆ
ಒಮ್ಮೊಮ್ಮೆ ಚರ್ಚೆ ತಾರಕಕ್ಕೇರಿದ್ದುಂಟು
ತೆಗೆದುಕೊಂಡ ವಸ್ತುವಿಷಯದ
ಪರ ವಿರೋಧಗಳ ಆಟಕ್ಕೆ
ಉಪೋದ್ಘಾತಗಳ ಲೇಪನವಿತ್ತು…
ಎಷ್ಟೆಲ್ಲ ಮಾತಾಡುತಿದ್ದರು
ಪ್ರೀತಿಭಾವ ಮೈದೆಳೆಯಲಿಲ್ಲ
ಸ್ನೇಹಭಾವ ಬಿಟ್ಹೋಗಲಿಲ್ಲ
ಒಂದಷ್ಟು ಆಧ್ಯಾತ್ಮ
ಮತ್ತಷ್ಟು ರಾಜಕೀಯ
ಮಗದಷ್ಟು ಸಾಹಿತ್ಯ
ವಿಷಯಗಳ ಒರೆಹಚ್ಚಿದ
ರೀತಿ ಮಾತ್ರ ಕುತೂಹಲಕ್ಕೆಡೆ ಮಾಡಿ
ಹೀಗೂ ಉಂಟೇ.! ಎಂಬಂತಿತ್ತು
ನಮ್ಮೀ ಮಾತುಕತೆ…!
ಮುಗ್ಧ ಮನದೊಳಗೆ
ಹೊಸ ಹೊಸ ವಿಚಾರಗಳ ಸಂಚಲನ
ಬಿಡದೆ ಕೆಣಕುತಿದ್ದ ಪರಿ
ವೈಜ್ಞಾನಿಕತೆ, ಆಧುನಿಕತೆ
ಹುಟ್ಟು ಸಾವು ,ಆಸೆ ದುಃಖ
ದೇವರು, ದೆವ್ವಗಳ ಸೆಲೆ
ಪಾಪ ಪುಣ್ಯಗಳ ಗಂಟು
ನ್ಯಾಯ ನೀತಿಗಳ ನಂಟು
ಧರ್ಮ ಅಧರ್ಮಗಳಲ್ಲಿರುವ ಕಗ್ಗಂಟು
ಮಾತಾಡಿದ್ದು ಒಂದಾ ಎರಡಾ
ಅಕ್ಕ ಪಕ್ಕದವರು ಬೆರಗುಣ್ಣಿನಿಂದ
ನೊಡುವಷ್ಟರ ಮಟ್ಟಿಗೆ
ಥೇಟ್..! ಬಕಪಕ್ಷಿಯಂತೆ.!
ಮತ್ತೊಬ್ಬರಿಗಾದ ಅನ್ಯಾಯ
ಇನ್ನೊಬ್ಬರ ಅಸಂಬದ್ಧತೆ,ದೌರ್ಜನ್ಯಗಳು
ಅಲ್ಲೊಬ್ಬರ ಸಾಧನೆ ಪುರಸ್ಕಾರಗಳು
ಮೂಕಪ್ರೇಕ್ಷಕರಾಗದೆ
ನಿತ್ಯವು ಚರ್ಚಾಕೂಟಗಳೆ
ನಮ್ಮ ಮಾತುಗಳಲ್ಲೆ ಅವುಗಳು
ತುಲಾಭಾರಗೊಳ್ಳುತಿದ್ದವು…
ಅಲ್ಲೆಲ್ಲೊ ನಡೆದಿಹ ಯುದ್ಧಗಳು
ನಮ್ಮಲ್ಲೆ ನಡೆಯುತಿರೊ ಜಗಳಗಳು
ದುಷ್ಕೃತ್ಯಗಳು, ಅನ್ಯಾಯಗಳು
ಅಪಘಾತ, ಅತ್ಯಾಚಾರ
ಸಾವು ,ನೋವುಗಳು
ದುಃಖ ,ದುಮ್ಮಾನಗಳು
ಅಬ್ಬಬ್ಬಾ.! ಅದೆಷ್ಟೊಂದು ವಿಚಾರಗಳು
ನಮ್ಮೊಳಗೆ ನಿತ್ಯವು
ಹಾಸುಹೊದ್ದಿದ್ದವು
ಚಿಂತನೆಗಳು ಮಂಥನಗಳು
ಜೊತೆಗೊಂದಷ್ಟು ಅವಲೋಕನ
ಆಲೋಚನೆ ಗ್ರಹಿಕೆಗೂ ನಿಲಕದ
ಮಾತುಗಳಿದ್ದು ಈಗಲೂ
ಮೌನ ಶರಧಿಯ ಅಲೆಗಳಂತೆ
ಆಗಾಗ್ಗೆ ನನ್ನೆದೆಯ
ಉದಧಿಯನು ಅಪ್ಪಳಿಸುತಿವೆ..!
- ಅಭಿಜ್ಞಾ ಪಿ.ಎಮ್ ಗೌಡ
