ಕಾಸನೋವವೆಂಬ ಅರ್ವಾಚೀನ ಪ್ರಪಂಚದೊಳಗೆ….

ಅತ್ಯಂತ ರೂಪವತಿ ಮನಃಶಾಸ್ತ್ರ ತಜ್ಞೆಯಾಗಿದ್ದ ಸಲೀನ ಹೀಗೆ ನಚಿಕೇತ ಹೆಣ್ಣುಮಕ್ಕಳನ್ನು ಸೆಳೆಯುವ ಮಾನಸಿಕ ತೊಳಲಾಟದಲ್ಲಿ ಮುಳುಗಿದ್ದ ಕಾರಣ “ಕಾಸನೋವ” ಎಂಬ ಹೆಸರು ಇಟ್ಟಿರಬಹುದೆಂದುಕೊಂಡೆ.ಮನೋಜ್ ಪಿ.ಎಂ ಅವರ ಕಾಸನೋವ ಕಾದಂಬರಿಯ ಕುರಿತು ಲೇಖಕಿ ಅಭಿಜ್ಞಾ ಪಿ.ಎಮ್.ಗೌಡ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿ: ಕಾಸನೋವ
ಕರ್ತೃ: ಮನೋಜ್ ಪಿ.ಎಂ
ಪುಟಗಳು:೨೩೨
ಬೆಲೆ:ರೂ.೨೦೦/-
ಪ್ರಕಾಶಕರು : ಯೋಗಮಾಯ ಪಬ್ಲಿಕೇಷನ್

ನಾನು ಈ ಕಾದಂಬರಿಯನ್ನು ನೋಡಿದಾಕ್ಷಣ “ಕಾಸನೋವ”ವೆಂಬ ಈ ಹೆಸರು ಒಂದು ವಿಶಿಷ್ಟ, ವಿಶೇಷವಾಗಿ ಕಂಡಿದಂತು ಸತ್ಯ. ಇದು ನನ್ನೊಳಗೊಂದು ಕುತೂಹಲ ಕೆರಳಿಸಿ ಓದಿಯೇ ತೀರಬೇಕೆಂದು ಕುಳಿತು ಓದಿಮುಗಿಸಿದೆ.ಈ ಕಾದಂಬರಿಯ ಒಳ ಹೊಕ್ಕಾಗ ನನಗಂತು ಆಶ್ಚರ್ಯ.! ಕಾಸನೋವಗೆ ಒಳಗಾದ ವ್ಯಕ್ತಿಯನ್ನು ಗುಣಪಡಿಸಲು ಮನೋವಿಜ್ಞಾನವನ್ನು ಬಳಸಿಕೊಂಡ ಪರಿ ಹಾಗು ಮಾನಸಿಕವಾಗಿ ಬಳಲುತಿರುವವರನ್ನು ಹೇಗೆ ಸಾಮಾನ್ಯ ಮನುಷ್ಯರಂತೆ ಮಾಡಬಹುದೆಂಬ ಅರಿವು ತುಂಬಾ ಚನ್ನಾಗಿದೆ.ಹಾಗೆಯೆ ಓದುಗರಿಗೆ ಮುಂದೇನಾಗುವುದು ಎಂಬ ಕುತೂಹಲವನ್ನು ಸಹ ಕೆರಳಿಸುವುದು.ಮಾನವನ ಮನಃಸ್ಥಿತಿ, ಮನೋಧರ್ಮ, ವ್ಯಕ್ತಿಯ ಸ್ವಭಾವ ಹಾಗೂ ಅವನ ಪ್ರೇರಣೆಯೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮನೋವಿಜ್ಞಾನವು ಸಮರ್ಪಕವಾದ ಮಾನಸಿಕ ಸ್ಥಿತಿಯ ಏರ್ಪಾಡನ್ನು ಹೇಗೆ.? ಮಾಡುತಿದೆ ಎಂಬುದನ್ನು ತೋರಿಸಿರುವುದು. ಮತ್ತು ಭಾವನೆಗಳು ತಮ್ಮದೇ ಆದ ಪಾತ್ರವನ್ನು ಹೇಗೆ? ನಿರ್ವಹಿಸುತ್ತವೆ ಎಂಬುದರ ಚಿತ್ರಣದ ನಿರೂಪಣ ಶೈಲಿ ಸೊಗಸಾಗಿ ಬಿಂಬಿತವಾಗಿದೆ.ನಾವು ಯಾವುದೆ ಘಟನೆ ಅಥವ ಆಘಾತಗಳನ್ನು ಹಾಗು ವ್ಯಕ್ತಿಯಲ್ಲಿನ ಭಾವನಗೆಳನ್ನು ಕೆಲವೊಮ್ಮೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ.ಯಾವುದೆ ಒಂದು ಪರಿಸರಕ್ಕೆ ಹೊಂದಿಕೊಳ್ಳಲು ಅಸಾಧ್ಯವಾದ ಮನಸ್ಸು ತನ್ನಲ್ಲಿ ಹಲವಾರು ನೋವುಗಳನ್ನು ಅನುಭವಿಸುವುದಲ್ಲದೆ ಚಿಂತನ ಮಂಥನಗಳಲ್ಲಿ ತನ್ನನ್ನು ತಾನು ಮುಳುಗಿಸಿಕೊಳ್ಳುವುದು. ಇಂತಹ ಒಂದು ಮನಸ್ಥಿತಿಯುಳ್ಳ ವ್ಯಕ್ತಿಯು ಹೆಚ್ಚು ಒಂಟಿಯಾಗಿದ್ದು, ಅಂತರ್ಮುಖಿಯಾಗಿ ತನ್ನ ಜೀವನವನ್ನು ಹೇಗೆ ನಡೆಸುತ್ತಾನೆ.? ಎಂಬ ಕಥಾವಸ್ತುವಿನ ಮೇಲೆ ಮನೋಜ್ ರವರು ಅದ್ಭುತವಾಗಿ ತಮ್ಮ ಬರೆಹದ ಬೆಳಕ ಚಲ್ಲಿದ್ದಾರೆ.

ಯಾವೊಬ್ಬ ತಂದೆ–ತಾಯಿಯ ವರ್ತನೆಗಳು ಸರಿಯಿಲ್ಲದಿದ್ದಾಗ ಮಕ್ಕಳು ಯಾವ ರೀತಿ ಘಾಸಿಗೊಳ್ಳುವರು; ಅದು ಹೇಗೆ ಅವರ ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಅಡಚಣೆಯಾಗುತ್ತದೆ.? ಎನ್ನುವುದರ ಚಿಂತನೆ ಮತ್ತು ಚರ್ಚೆ ಪೋಷಕರಿಗೆ ಅತಿ ಅಗತ್ಯ.ಏಕೆಂದರೆ ಮಕ್ಕಳ ಮನಸ್ಸಿಗೆ ನೋವುಂಟುಮಾಡಿ ಅವರ ವ್ಯಕ್ತಿತ್ವವನ್ನೇ ಊನಗೊಳಿಸುವ ತಮ್ಮ ಯಾವುದೇ ವರ್ತನೆಯ ಬಗ್ಗೆ ಪೋಷಕರು ಜಾಗೃತರಾಗಬೇಕು, ತಾವೇ ಜವಾಬ್ದಾರಿ ಹೊತ್ತು, ಮೊದಲ ಆದ್ಯತೆಯಾಗಿ ತಮ್ಮಲ್ಲಿನ ಅಂತಹ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕಾದುದು ಕೇವಲ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಷ್ಟೇ ಅಲ್ಲದೆ, ಸಮಾಜದ ಹಿತದೃಷ್ಟಿಯಿಂದಲೂ ಉಚಿತವಾದದ್ದು ಏಕೆಂದರೆ ಈ ಕಾದಂಬರಿಯಲ್ಲಿ ನಚಿಕೇತ ಮತ್ತು ಚಾರುದತ್ತ ಎಂಬ ಪಾತ್ರವನ್ನು ತೆಗೆದುಕೊಂಡಾಗ ಅವರ ಬಾಲ್ಯದಲ್ಲಿ ಸಂಭವಿಸಿದ ಘಟನೆಗಳು ಸುತ್ತಮುತ್ತಲಿನ ಪರಿಸರ ಅವರು ಕಾಸನೋವ ಆಗಲು ಕಾರಣವೆಂದರೆ ತಪ್ಪಾಗಲಾರದು.

ಇಂತವರಲ್ಲಿ ಅಪರಾಧಿತನ ಹೇಗೆ ಹೆಚ್ಚಾಗುತ್ತದೆ.? ಎಂಬುದರ ವಿಷಯವಸ್ತುವಿನ ವಿಸ್ತಾರತೆ ಹಾಗು ಅವರ ವಿಕೃತ ಮುಖಗಳ ಅನಾವರಣಗಳ ಮೇಲೆ ಮನೋಜ್ ರವರು ಅದ್ಭುತವಾದ ಝಲಕನ್ನು ಮೂಡಿಸಿರುವುದು ಸ್ಪಷ್ಟವಾಗಿ ನೋಡಬಹುದು. ಇಲ್ಲಿ ಮನೋವಿಕಾರಕ್ಕೆ ಒಳಗಾದ ವ್ಯಕ್ತಿಗಳು ಮಾಡುವ ಕೃತ್ಯಗಳು.ತಮ್ಮ ಭಾವನೆಗಳನ್ನು ತಾವಿರುವ ಪರಿಸರದಲ್ಲಿ ಯಾರಿಗೂ ಹೇಳಿಕೊಳ್ಳಲಾರದೆ ತನ್ನ ಗೆಳೆಯರಿಗೂ ಹೇಳದೆ ತನ್ನಲ್ಲಿ ತಾನು ಕೊರಗುತ್ತ ಕೊನೆಗೊಂದು ದಿನ ಮನೋರೋಗಿಯಾಗಿ ರೂಪುಗೊಂಡು ಮತ್ತಷ್ಟು ಬದಲಾವಣೆಯೊಂದಿಗೆ ಜ್ಞಾನೋದಯವಾಗಿ ಒಳ್ಳೆ ಮನುಷ್ಯನಾಗುವ ಚಾರುತ್ತನ ಪಾತ್ರದ ದೃಶ್ಯಾವಳಿಗಳು ಕಣ್ಮುಂದೆ ಬಂದು ನಿಂತತಿವೆ.

ಕಾದಂಬರಿಯ ಆಳಕ್ಕಿಳಿದಂತೆ ಕುತೂಹಲವೆ ಹೆಚ್ಚುತಿತ್ತು.ಇದು ಎರಡು ಭಾಗಗಳಲ್ಲಿ ಬಿತ್ತರವಾಗುತ್ತ ಸಾಗುವುದು.ಮೊದಲಾರ್ಧದಲ್ಲಿ ನಚಿಕೇತನ ವೃತ್ತಾಂತ ಎರಡನೇ ಭಾಗದಲ್ಲಿ ಚಾರುದತ್ತನ ವೃತ್ತಾಂತ ಅದ್ಭುತವಾಗಿ ಮೂಡಿಬಂದಿವೆ.

ಪ್ರಾರಂಭದ ದುಃಸ್ವಪ್ನದಿಂದಿಡಿದು ಚಾರುದತ್ತನ ಪಶ್ಚಾತಾಪದವರೆಗೂ ತುಂಬಾ ಆಸಕ್ತಿಯನ್ನು ಕೆರಳಿಸುತ್ತ ಹೋಯಿತು.ದಿಟ ನನಗನ್ನಿಸಿದ್ದು ಮಕ್ಕಳಲ್ಲಿ ಅಪ್ಪ, ಅಮ್ಮನೆನಿಸಿಕೊಂಡವರು ಹೆಚ್ಚೆಚ್ಚು ಆದರ್ಶಗಳನ್ನು ಬೆಳಸಬೇಕು ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.ಗೆದ್ದಾಗ ಹಿಗ್ಗದಂತೆ, ಸೋತಾಗ ಕುಗ್ಗದಂತೆ ,ಧೈರ್ಯದ ಮಾತುಗಳಿಂದ ಮಕ್ಕಳಿಗೆ ನಂಬಿಕೆ, ವಿಶ್ವಾಸವನ್ನು ತುಂಬಬೇಕು.ಇಲ್ಲಿ ನಚಿಕೇತನ ಬಾಲ್ಯ ಇದಕ್ಕೆ ಹೊರತಾದದ್ದಲ್ಲ;ಭಯದ ವಾತಾವರಣ, ಮಗಳಿಗೆ ಒಂಥರ ,ಮಗನಿಗೆ ಒಂಥರ ಉಪಚಾರ ಹಾಗೆಯೆ ಅಪ್ಪನ ವಿವಾಹೇತರ ಸಂಬಂಧಗಳು, ಇದ್ದಕ್ಕೆ ಇಂಬು ನೀಡುವಂತಿದ್ದ ನೆನೆಹೊರೆ ಆಂಟಿಯ ಅಸಭ್ಯ ವರ್ತನೆಗಳು.ಹಾಗೂ ನಚಿಕೇತ ನೋಡಿದ ಘೋರ ,ಅವಮಾನವೀಯ ದೃಶ್ಯಾವಳಿಗಳು, ಅಪ್ಪನ ಗೆಳೆಯ ತನ್ನ ಮಗಳನ್ನೆ ಅತ್ಯಾಚಾರ ಮಾಡಿ ಸಾಯಿಸಿ ಹೆಗಲ ಮೇಲೆ ಹೊತ್ತುಕೊಂಡು ಹೋದದ್ದು,ತನ್ನ ಅಕ್ಕನ ಪ್ರೇಮ ಪ್ರಸಂಗ, ತನ್ನ ಗೆಳೆಯ ಅವನ ಅಕ್ಕನ ಜೊತೆ ಅಸಭ್ಯ ವರ್ತನೆಗಳೆಲ್ಲ ಅವನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ ಪ್ರಭಾವ ಅವನ ಪ್ರೌಢಾವಸ್ಥೆ ಯೌವ್ವನಾವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದವು.

ಈ ಕಾದಂಬರಿಯ ಮುಖ್ಯ ಭೂಮಿಕೆಯಲ್ಲಿ ನಚಿಕೇತ ಮತ್ತು ಚಾರುದತ್ತ ಎಂಬ ಎರಡು ಪ್ರಮುಖ ಪಾತ್ರಗಳು ಇವರೊಟ್ಟಿಗೆ ವೀರ, ಸಿಂಧೂರಿ, ಸಲೀನ ಎಂಬ ಮೂರು ಪಾತ್ರಗಳು ಸಹ ಅದ್ಭುತವಾಗಿ ಮೂಡಿಬಂದಿವೆ.ಇಲ್ಲಿ ಒಬ್ಬರಿಗಿಂತ ಒಬ್ಬರು ತಮ್ಮ ಪಾತ್ರಕ್ಕೆ ಚನ್ನಾಗಿ ಜೀವ ತುಂಬಿರುವರು.ಇಲ್ಲಿ ಕಾಸನೋವಕ್ಕೆ ಬಲಿಯಾದವರು ನಚಿಕೇತ ಮತ್ತು ಚಾರುದತ್ತ. ಇವರಿಬ್ಬರಲ್ಲೂ ಒಂದೊಂದು ರೀತಿಯ ಕೃತ್ಯಗಳು ಒಬ್ಬರದ್ದು ನಕಾರಾತ್ಮಕವಾದರೆ ಮತ್ತೊಬ್ಬರದ್ದು ಸಕಾರಾತ್ಮಕವಾಗಿದ್ದವು.ಹಾಗಾದರೆ ಈ ಕಾಸನೋವ ಎಂದರೇನು ಎಂಬುದನ್ನು ತಿಳಿಯ ಹೊರಟ್ಟಾಗ ಸಿಕ್ಕ ಉತ್ತರ ಇದೊಂದು ಕೆಟ್ಟ ಘಟನೆಯಾಗಿರಬಹುದು ಅಥವ ದೃಶ್ಯಾವಳಿಗಳಾಗಿರಬಹುದು ಅಂತಹದನ್ನು ನೋಡಿದ ವ್ಯಕ್ತಿಯ ಮನಸ್ಥಿತಿ ವಿಚಿತ್ರ ವಿಶಿಷ್ಟವಾಗಿರುವುದು.ಈ ವ್ಯಕ್ತಿ ಆ ಮನಸ್ಥಿತಿಯಿಂದ ಹೊರಬರಲಾಗದೆ ಒದ್ದಾಡುವ ಸ್ಥಿತಿ. ಅಂದರೆ ಒಂದು ಮನಸ್ಥಿತಿಯಿಂದ ಹೊರಬರಲಾರದೆ ಎಲ್ಲವನ್ನು ತನ್ನೊಳಗೆ ತಾನೆ ಅನುಭವಿಸುವವ.ಆ ವಿಶೇಷ ವ್ಯಕ್ತಿತ್ವವನ್ನೇ ಆಧಾರವಾಗಿಟ್ಟುಕೊಂಡು ಬರೆದ ಕಾದಂಬರಿಯೇ ಈ “ಕಾಸನೋವ”. ಇಲ್ಲಿ ಒಂದೇ ವ್ಯಕ್ತಿತ್ವದ ಎರಡು ಪಾತ್ರಗಳನ್ನು ಧನ ಮತ್ತು ಋಣ ಎಂಬ ಎರಡು ಅಂಶಗಳ ಆಧಾರದ ಮೇಲೆ ಚಿತ್ರಿಸುತ್ತ ಸಾಗಿರುವುದು.ನಚಿಕೇತ ಮೌನಿಯಾಗಿದ್ದು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತಿದ್ದನಾದರು ಕಾಸನೋವಗೆ ಬಲಿಯಾಗಿದ್ದ. ನಚಿಕೇತನ ಸ್ವಾಸ್ಥ್ಯವಿಲ್ಲದ ಮನಸ್ಸು ವಿಲವಿಲನೆ ಒದ್ದಾಡುತ್ತ ತಳಮಳಗೊಳ್ಳುವ ಸ್ಥಿತಿ ಹಾಗು ಅವನೊಳಗೆ ಅಹಸ್ಯ ಭಾವನೆ,ಅಪನಂಬಿಕೆಗಳು, ಕೀಳರಿಮೆ ಮನೆಮಾಡಿರುವುದು.ಇದರಿಂದ ನಮಗೂ ತಿಳಿವ ವಿಷಯವೆನೆಂದರೆ ಯಾರೆ ಪೋಷಕರಾದವರು ಸರಿ ತಮ್ಮ ಮಕ್ಕಳನ್ನು ಸಕಾರಾತ್ಮಕ ದಿಕ್ಕಿನತ್ತ ಕರೆದೊಯ್ಯುವ ಜವಾಬ್ದಾರಿಯನ್ನು ಹೊರಬೇಕು. ಈ ಮುಖೇನ ತಮ್ಮ ಮಕ್ಕಳಿಗೆ ಮಾನಸಿಕ ,ದೈಹಿಕ ಬೆಂಬಲ, ರಚನಾತ್ಮಕ ಹಾಗು ಪ್ರೀತಿಯ ವಾತಾವರಣವನ್ನು ಸೃಷ್ಟಿಸಬೇಕಾದುದ್ದು ಬಹಳ ಅಗತ್ಯವಾಗಿದೆ. ಆದರೆ ಇಲ್ಲಿ ಹೆಚ್ಚು ಗಮನ ಹರಿಸದ ಕಾರಣ ನಚಿಕೇತನಲ್ಲಿ ನಕಾರಾತ್ಮಕತೆ ಎದ್ದು ತೋರಿದೆ.ಎಂಬ ಅಂಶ ಮನನವಾಗುವುದು. ಆದ್ದರಿಂದ ಈ ಕಾದಂಬರಿಯಲ್ಲಿ ಪೋಷಕರ ಕರ್ತವ್ಯಗಳನ್ನು ಎತ್ತಿ ಹಿಡಿದಿರುವ ಸಂದೇಶವನ್ನು ಕಾಣಬಹುದಾಗಿದೆ.

ಕಾಸನೊವಕ್ಕೆ ಒಳಗಾದ ವ್ಯಕ್ತಿಯ ಮಾನಸಿಕ ಸ್ಥಿತಿ ಅವನು ತನ್ನ ಮೇಲೆ ಹೊರಿಸಿಕೊಂಡಿರುವ ಕೀಳರಿಮೆ, ಅಪನಂಬಿಕೆ, ಅಸಭ್ಯ ವರ್ತನೆಗಳು ಈ ಕಾದಂಬರಿಯಲ್ಲಿ ಮನೋಜ್ ರವರು ತುಂಬಾ ಮಾರ್ಮಿಕವಾಗಿ ವಿವರಿಸಿರುವರು. ಓದುತಿದ್ದರಂತು ರೋಚಕತೆ, ಮನಸ್ಸಿನ ತಲ್ಲಣಗಳು, ಹದಿಹರೆಯದ ಹೆಣ್ಮನಗಳ ಒಲವಧಾರೆ, ನಡುವಯಸ್ಸಿನವರ ಅಸಭ್ಯವರ್ತನೆಗಳು ಏಕೆ.? ಎಂಬ ಪ್ರಶ್ನೆ ಆಗಾಗ್ಗೆ ಮೂಡುವುದಂತು ಸತ್ಯ.ಹಾಗು ಅವನ ಮೈಸೂರಿನ ಕಾಲೇಜು ಜೀವನ ವಿಚಿತ್ರವೆ ಬಿ.ಎ ಮಾಡುವಾಗಲೆ ಅಮ್ಮ, ಅಪ್ಪ ,ಅಕ್ಕ ಎಲ್ಲರು ಅಪಘಾತಕ್ಕೀಡಾಗಿ ಸಾವನ್ನಪ್ಪಿ,ಅನಾಥನಾದರು ಇವನೊಬ್ಬ ಚೆಲುವ ತರುಣಿಯರನ್ನು ತನ್ನೆಡೆಗೆ ಸೆಳೆದು, ಅವರೊಂದಿಗೆ ಆಟವಾಡುತ್ತಿದ್ದ ಹೆಣ್ಣುಬಾಕನಾಗಿದ್ದ. ಸಭ್ಯತೆಯ ಮುಖವಾಡ ಧರಿಸಿಕೊಂಡು ಜಾಣನಂತಿದ್ದ ಅವನ ಚಾಲಕಿತನಕ್ಕೆ, ಹೆಣ್ಣುಗಳನ್ನು ಆಕರ್ಷಿಸುವ ಚಮತ್ಕಾರವಿತ್ತು, ಇವನ ಜೀವನದಲ್ಲಿ ಸಂಭ್ರಮ, ಸಮಕ್ಷಮ, ಸೌಪರ್ಣಿಕ, ಕಲ್ಪಕವಲ್ಲಿ, ಹಾಗೂ ಕೀರ್ತನ ಬಂದಿರುತ್ತಾರೆ. ಕೊನೆಗೆ ಅತ್ಯಂತ ರೂಪವತಿ ಮನಃಶಾಸ್ತ್ರ ತಜ್ಞೆಯಾಗಿದ್ದ ಸಲೀನ ಹೀಗೆ ನಚಿಕೇತ ಹೆಣ್ಣುಮಕ್ಕಳನ್ನು ಸೆಳೆಯುವ ಮಾನಸಿಕ ತೊಳಲಾಟದಲ್ಲಿ ಮುಳುಗಿದ್ದ ಕಾರಣ “ಕಾಸನೋವ” ಎಂಬ ಹೆಸರು ಇಟ್ಟಿರಬಹುದೆಂದುಕೊಂಡೆ.

ನಚಿಕೇತನಿಗೆ ವೀರನೆಂಬ ಅತ್ಯಾಪ್ತ ಗೆಳೆಯನಾಗಿದ್ದ. ತನ್ನೊಳಗೆ ಜ್ವಾಲಮುಖಿಯಂತ ಘೋರ ನೋವುಗಳನ್ನಿಟ್ಟುಕೊಂಡು ಪ್ರಶಾಂತನಾಗಿದ್ದವನು. ಅವನು ಹೀಗೆ ಬೆಳೆಯಲು ಕಾರಣಳಾದವಳು ಸಲೀನ‌ ಎಂಬಾಕೆ ಅವಳು ಧರ್ಮದಲ್ಲಿ ಮುಸ್ಲೀಮ್ ಆಗಿದ್ದರು ಕೂಡ ಅವರಿಬ್ಬರ ಸ್ನೇಹ ಅನುರಾಗದ ಬಂಧದಂತಿತ್ತು.

ಅಮ್ಮ ಮಗನ ಬಂಧ.ವೀರನ ತಂದೆಯನ್ನು ಸಾಯಿಸಿದವನೆ ಅವನ ತಾಯಿ ಅತ್ಯಾಚಾರ ಮಾಡಲು ಬಂದಾಗ ಅವಳು ಅವನನ್ನ ಸಾಯಿಸಿ ತಾನು ಸತ್ತಳು. ಇದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಅನುಮಾನವು ಕೂಡ ಇತ್ತು.ಆಗ ವೀರ ಮತ್ತು ಅವನ ತಾಯಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತಿರುವುದನ್ನು ಗಮನಿಸಿದ ಸಲೀನಾ ಮತ್ತು ಅವಳ ತಂದೆ ವೀರನ ರಕ್ಷಣೆಯ ಜವಾಬ್ದಾರಿ ಹೊತ್ತು ಅವನನ್ನು ಬೆಳೆಸಿದ ರೀತಿ ತುಂಬಾ ಚನ್ನಾಗಿದೆ.ಹಾಗೆಯೆ ಸಲೀನ ಅವನಿಗಿಂತ ಏಳು ವರ್ಷ ಹಿರಿಯಳಾಗಿದ್ದರು ಅವಳ ಮನೋಸ್ಥೈರ್ಯ, ಆಲೋಚನೆ ಬಹಳ ಪ್ರಬುದ್ಧವಾದದ್ದು. ಮನಃಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದವಳು. ಆದ್ದರಿಂದ ವೀರ ಸಲೀನಾಳ ಬಳಿಯಲ್ಲಿ ತನ್ನ ಗೆಳೆಯ ನಚಿಕೇತನನ ಕಾಸನೋವ ಮನಸ್ಥಿತಿಯನ್ನು ವಿವರಿಸುತ್ತಾನೆ. ಅವನ ಮನಸ್ಥಿತಿಯ ಸುಧಾರಣೆಗಾಗಿ ಸಲೀನಾಳ ಸಹಾಯ ಕೇಳುತ್ತಾನೆ.

ನಚಿಕೇತನಿಗೆ ಸಿಂಧೂರಿಯ ಮೇಲೂ ಕೋಪವಿರುತ್ತದೆ ಆದರೆ ಗೆಳೆಯನಿಗಾಗಿ ನಿಗ್ರಹಿಸಿಕೊಳ್ಳುವ ಸಂದರ್ಭದ ಸಾಲುಗಳು ಸೂಪರ್.ಇನ್ನು ಸಲೀನಾಳ ಸರದಿ.ಅವಳಂತು ಅಪ್ಪಟ್ಟ ಸುಂದರಿ ಅವನಿಗೆ ಅವಳನ್ನು ಪಡೆದೆ ತೀರಬೇಕು ಎನ್ನುವ ಹಂಬಲ ಅದಕ್ಕೆ ಒಂದು ಸಂಕಲ್ಪ ಮಾಡಿ ಅದನ್ನು ಸಾಧಿಸಿ ಬಾ ಎನ್ನುವ ಅವಳ ಆತ್ಮಸ್ಥೈರ್ಯದ ನುಡಿಯಲ್ಲೆ ಅವಳ ಚಾಲಾಕಿತನದ ವರ್ಣನೆ ಅದ್ಭುತವಾಗಿ ಚಿತ್ರಿಸಿರುವಿರಿ.ನಚಿಕೇತ ಸಲೀನಾಳನ್ನು ಒಲಿಸಿಕೊಳ್ಳಲು, ಸಲೀನಾಳ ಕೆಲವಂದಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧನಾದ ಬಗ್ಗೆ,ಇದರಿಂದ ಕಾಸನೋವದಿಂದ ದೂರ ಸರಿದು ಸಲೀನಾಳ ಅಗಾಧ ಪ್ರೇಮ ನಚಿಕೇತನಲ್ಲಿ ಬಲವಾಗುವುದೆ.? ಅವಳ ಕನಸು ಗುರಿಗಳು ಇವನಲ್ಲಿ ಬೇರೂರಿ, ಪ್ರೀತಿಯೆಂದರೆ ಕೇವಲ ಆಕರ್ಷಣೆಯಲ್ಲದೆ ಪ್ರೀತಿಗಾಗಿ ಜೀವ ಕೊಡುವುದು ಎಂಬ ಮನೋಭಾವ ಫಲಿಸುವುದೆ.?ಇವೆಲ್ಲ ಅಂಶಗಳು ತಿಳಿದ ಮೇಲೆ ನಚಿಕೇತ ಸಂಪೂರ್ಣ ಮನುಷ್ಯನಾಗುತ್ತಾನ ?ಹೀಗೆ ಅವಳ ಪರೀಕ್ಷೆಗೆ ಒಳಗಾಗಿ ಗೆಲ್ಲುವ ಕ್ಷಣದೊಳಗೆ ಸಲೀನಳು ಕೂಡ ಘೋರ ಅಪಘಾತಕ್ಕೆ ಬಲಿಯಾಗುವುದಂತು ವಿಪರ್ಯಾಸವೆ ಸ

ಇನ್ನು ಎರಡನೇ ಭಾಗಕ್ಕೆ ಅಡಿಯಿಡುತಿದ್ದಂತೆಯೆ ಚಾರುದತ್ತನ ಆಗಮನ.ಇವನು ಕೂಡ ಕಾಸನೋವಕೆ ಒಳಗಾದವನೆ.ಇವನೊಳಗೆ ದ್ವೇಷದ ಮಹಾಜ್ವಾಲೆ ಧಗಧಗಿಸುತಿತ್ತು.ವೀರನನ್ನು ಕೊಲ್ಲುವುದೆ ಇವನ ಮಹತ್ ಸಾಧನೆಯಾಗಬೇಕಿತ್ತು. ಆದರೆ ಇವನಿಗೆ ಬೆಳೆದು ನಿಂತ ವೀರುವನ್ನು ಜಾನಕಿಯಮಗನೆಂದು ಗುರುತಿಸಲಾಗದೆ ನಚಿಕೇತನೆ ಜಾನಕಿ ಮಗನೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದು ಇವನ ದುರಾದೃಷ್ಟವಾಗಿತ್ತು. ಇಲ್ಲಿ ನಚಿಕೇತ ಮತ್ತು ಚಾರುದತ್ತರ ದೋರಣೆಗಳು ಧನ ಮತ್ತು ಋಣವಾಗಿದ್ದವು.ನಚಿಕೇತ ಸಲೀನಾಳ ಮಾತಿಗೆ ಒಪ್ಪಿ ಉತ್ತಮವಾದ ಕಾರ್ಯದಲ್ಲಿ ತೊಡಗಿದ್ದನು ಆದರೆ ಚಾರುದತ್ತ ಇವನೆ ವೀರನೆಂದು ತಿಳಿದು ಅವನನ್ನು ಬಹಳ ಕ್ರೂರವಾಗಿ ಕೊಂದಿದ್ದು ಮಾತ್ರ ಘೋರವೆ. ಆತುರಗಾರನಿಗೆ ಬುದ್ದಿಮಟ್ಟ ಎನ್ನುವಂತಾಯಿತು.

“ಪ್ರತ್ಯಕ್ಷ ನೋಡಿದರು ಪ್ರಮಾಣಿಸು ನೋಡಿ” ಎಂಬ ಗಾದೆ ಮಾತು ಸುಳ್ಳಾಗಲಿಲ್ಲ ನೋಡಿ ಇಲ್ಲಿ. ಚಾರುದತ್ತ ನಮ್ಮಪ್ಪನ ಕೊಂದದಕ್ಕೆ ಜಾನಕಿಯನ್ನು ಸಮುದ್ರಕ್ಕೆ ತಳ್ಳಿ ಕೊಂದ. ಆದರೆ ವೀರನ ಅಪ್ಪನ ಸಾಯಿಸಿದ್ದು ಯಾರು ಅಂತ ತಿಳ್ಕೊಳಕೆ ಆಗಲಿಲ್ಲ ಚಾರುದತ್ತನಿಗೆ.ತಾನು ಸಾಯುತಿರುವಾಗ ನಚಿಕೇತ ಬಂದು ನೀರು ಕುಡಿಸಿ ಅವನ ಹಸಿವು ನೀಗಿಸಿ ಹೋಗಿದ್ದು ಗೊತ್ತಾಗಲಿಲ್ಲ.ಬರೀ “ದ್ವೇಷಕ್ಕೆ ದ್ವೇಷ” ,”ಮುಯ್ಯಿಗೆ ಮುಯ್ಯಿ “ಇಡೀ ಕಾದಂಬರಿ ಪೂರ್ತಿ ಹೀಗೆ ಬಾಲ್ಯದ ಕೆಲವೊಂದು ದುರ್ಗಘನೆಗಳು ಫ್ರೌಢಾವಸ್ಥೆಯಲ್ಲಿ ಹಾಗು ಯೌವ್ವನದಲ್ಲಿ ಹೇಗೆ ವ್ಯಕ್ತಿಯನ್ನು ಮಾನಸಿಕರೋಗಿಯನ್ನಾಗಿ ಮಾಡುತ್ತವೆ ಎಂಬುದರ ಆಧಾರದ ಮೇಲೆ ಈ ಕಥಾ ವಸ್ತು ಸಾಗಿದೆ.ಬರೀ ಸಿಟ್ಟು ,ಕೋಪ, ಅಸಹ್ಯ ಭಾವಗಳು ,ಅಸಭ್ಯ ವರ್ತನೆ ,ಪ್ರೀತಿ ,ಪ್ರೇಮ, ಸೆಳೆತ ಹೀಗೆ ಧನ ಮತ್ತು ಋಣಾತ್ಮಕವಾಗಿ ಮಾನಸಿಕ ಸ್ಥಿತಿಯ ಮೇಲೆ ತಮ್ಮದೆ ಆದ ವ್ಯತಿರಿಕ್ತ ಪರಿಣಾಮವನ್ನು ಬೀರಿವೆ. ಕಾಸನೋವ ಕಾದಂಬರಿ ನಿಜಕ್ಕೂ ಪ್ರತಿಯೊಬ್ಬ ಓದುಗನೊಳಗೆ ಕುತೂಹಲವನ್ನು ಹೆಚ್ಚಿಸುವುದಂತು ಸತ್ಯ.ಮೂರು ವಿಭಿನ್ನ ಕಥಾ ಹಂದರದೊಂದಿಗೆ ಹೆಣೆದಿರುವ ಈ ಕಾದಂಬರಿ ಒಂಥರ ವಿಶೇಷವಾಗಿದೆ ಎಂದರೆ ತಪ್ಪಾಗಲಾರದು.ಈ ಕಾದಂಬರಿಯನ್ನು ಓದುತ್ತಿದ್ದರೆ ಪ್ರಶ್ನೆಗಳ ಸುರಿಮಳೆಯೆ ಏಳುವವು. ನಚಿಕೇತ ಹೆಣ್ಣುಮಕ್ಕಳನ್ನು ಸೆಳೆದರು ಯಾಕೆ ಯಾರನ್ನು ಮನಃಪೂರ್ವಕ ಇಷ್ಟಪಡುತ್ತಿರಲಿಲ್ಲ.?ನಚಿಕೇತನಿಗೆ ಹೆಣ್ಣು ಮಕ್ಕಳ ಮೇಲೆ ಯಾವಾಗ ಕೋಪ ಉಂಟಾಗುತ್ತದೆ.? ಅವನ ಜೀವನದಲ್ಲಿ ಬಂದಂತಹ ಹೆಣ್ಣು ಮಕ್ಕಳನ್ನು ಸಾಯಿಸಿದವರು ಯಾರು.? ಪ್ರೀತಿಯ ರೂಪಸಿ ಸಲೀನಳನ್ನು ಕೊಂದವರಾರು.?ನಚಿಕೇತ ಮತ್ತು ಚಾರುದತ್ತರ ಮನದೊಳಗೆ ತಳಮಳ ಹುಟ್ಟಿಸುವ ವಿಷಯಗಳು ಯಾವುದಾಗಿತ್ತು.?ಇವೆಲ್ಲವನ್ನು ತಿಳಿಯಬೇಕಾದರೆ ಈ ಕಾದಂಬರಿಯನ್ನು ಒಮ್ಮೆ ಓದಿ ನಿಜಕ್ಕೂ ಅತ್ಯುತ್ತಮ ಸಂದೇಶಗಳನ್ನೆ ಸಾರುತಿದೆ.

ಈ ಕಾದಬರಿಯ ನಿರೂಪಣಾಶೈಲಿ ವಾಕ್ಯವೃಂದಗಳ ಝಲಕು ಪದಪುಂಜಗಳ ಮೇಳ ಅವುಗಳಿಗೆ ತಕ್ಕಂತೆ ಸಾಗಿರುವ ಕಾಸನೋವವೆಂಬ ಕಾದಂಬರಿ ಮನೋಜ್ಞವಾಗಿ ಮೂಡಿಬಂದಿದೆ. ಇದರಿಂದ ನನಗೆ ತಿಳಿದಂತಹ ವಿಷಯವೆಂದರೆ ಸಂವೇದನೆ ಮತ್ತು ಭಾವನೆಗಳಿಲ್ಲದ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯು ಎಂದಿಗೂ ಸೂಕ್ಷ್ಮ ಮನಸ್ಸಿನಿಂದ ಕೂಡಿರುವುದಿಲ್ಲ ಹಾಗು ಈ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ತಮಗೆ ಹೊಂದಿಕೊಳ್ಳಲಾರದ ವ್ಯಕ್ತಿಗಳಿಂದ ದೂರ ಹೋಗಬಹುದು.ಇಲ್ಲವೇ ಸನ್ನಿವೇಶವನ್ನೇ ಬದಲಾವಣೆ ಮಾಡಬಹುದು.ಅಥವ ಅವರನ್ನು ಮರೆತು ಹೊಸ ವಿಷಯದತ್ತ ಹೊರಳಬಹುದು. ಇನ್ನೂಮುಂದೆ ಹೋಗಿ ಯೋಚಿಸುವುದಾದರೆ ಅವರ ಮಾತುಗಳಿಗೆ ಬೇಸರ ವ್ಯಕ್ತಪಡಿಸಿ ತಮಗನ್ನಿಸಿದನ್ನು ಮಾಡುವರು. ಆದರು ಇದೊಂದು ವಿನೂತನ ಪ್ರಯೋಗವೆಂದರೆ ತಪ್ಪಾಗಲಾರದು.ಓದುಗರನ್ನು ತಮ್ಮದೆ ಲೋಕಕ್ಕೆ ಸೆಳೆಯುವುದಂತು ಸತ್ಯ.ಈ ಒಂದು ಕೃತಿಗೆ ಶ್ರೀ ಪೂರಿಗಾಲಿ ಮರಡೇಶಮೂರ್ತಿಯವರು ಅರ್ಥಪೂರ್ಣ ಹಾಗು ಮನಸೆಳೆವ ಮುನ್ನುಡಿ ಮತ್ತು ಬೆನ್ನುಡಿ ಎರಡನ್ನು ಬರೆದಿರುವರು.ಅರ್ವಾಚೀನ ಕಥೆಯೊಂದಿಗೆ ಹರಿದು ಬಂದ ಈ ಕಾದಂಬರಿಯಂತೆಯೆ ಮನೋಜ್ ರವರಿಂದ ಮತ್ತಷ್ಟು ಮಗದಷ್ಟು ಕೃತಿಗಳು ಬಂದು ನಮ್ಮ ಕನ್ನಡ ಸಾಹಿತ್ಯದೊಡಲನು ಸೇರಿ ನಾಡು ನುಡಿಯು ಬೆಳಗಲೆಂದು ಹಾರೈಸುತ್ತ….

ಧನ್ಯವಾದಗಳೊಂದಿಗೆ….


  • ಅಭಿಜ್ಞಾ ಪಿ.ಎಮ್.ಗೌಡ – ಶಿಕ್ಷಕಿ ಮತ್ತು ಬರಹಗಾರ್ತಿ, ಮಂಡ್ಯ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading