ಕಾವ್ಯಾತ್ಮಕ ಭಾವಾಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯತೆಯನ್ನು ಬೆಂಬಲಿಸುವ ಸಲುವಾಗಿ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಕೇಳುವ ಅವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಯುನೆಸ್ಕೋ ೧೯೯೯ರಲ್ಲಿ ಪ್ಯಾರಿಸ್‌ನಲ್ಲಿ ತನ್ನ ೩೦ ನೇ ಸಾಮಾನ್ಯ ಸಮ್ಮೇಳನದಲ್ಲಿ ಮಾರ್ಚ್ ೨೧ ಅನ್ನು ವಿಶ್ವ ಕಾವ್ಯ ದಿನವನ್ನಾಗಿ ಅಳವಡಿಸಿಕೊಂಡಿತು. ಸಾಹಿತಿ ಮತ್ತು ಶಿಕ್ಷಕಿ ಅಭಿಜ್ಞಾ ಪಿ.ಎಮ್.ಗೌಡ ಅವರು ವಿಶ್ವಕಾವ್ಯದಿನಕ್ಕೆ ಬರೆದ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…
ಪ್ರಸ್ಫುಟ ಮನಸ್ಸಿನ
ಭಾವಾಭಿವ್ಯಕ್ತಿಯ ವದ್ಯಗಳಲ್ಲಿನ
ನೋವು ನಲಿವುಗಳ
ಸಮಾವೇಶ.!
ಉನ್ಮಾದದ ಭಾವಾರ್ಥ
ವಿಶೇಷಣಗಳ ಸತ್ಯಾರ್ಥ
ಕವಿಮನದೊಳಗೆ
ಉದ್ಭವಿಸೊ ಯಥಾವತ್ತಿನ
ಭಾವಾವೇಶ…..!
ಕಾವ್ಯವೆಂದರೆ….
ಝೇಂಕಾರದ ದುಂದುಭಿ
ಓಂಕಾರದ ಸುರಭಿ.!
ಮನಸ್ಸಿನ ಉನ್ಮೀಳಿತದಲ್ಲೇಳುವ
ಸತ್ವಪೂರ್ಣತೆಯ ಯಾನ..!
ಜೀವ ಜೀವನದ
ಅಭೂತಪೂರ್ವ ಸಾರಾಂಶ
ಭಾವಗಳ ತುಲಾಭಾರದಲ್ಲಿನ
ಪದಪುಂಜಗಳ
ಸಮೃದ್ಧ ಸಾಮಗಾನ….
ಕಾವ್ಯವೆಂದರೆ….
ಕವಿಮನದೊಳಗೆ
ಪ್ರರೋಹಿಸುವ ಚಿಂತನೆಗಳ ಸಾಲು
ದುಃಖ ದುಮ್ಮಾನಗಳು
ಸಂತಸ ಸಡಗರಗಳನು
ಪ್ರವಹಿಸುವವು ಮೊದಲು.!
ಅಂತರಂಗದ ಛಾಪಿನಲ್ಲಿನ
ಪ್ರಭೃತಿಯ ಒಳಹರಿವು
ಪ್ರವಣದ ಎರವು
ಭಾವಾಭಿವ್ಯಕ್ತಿ ಮಡಿಲು….!
ಕಾವ್ಯವೆಂದರೆ….
ಲೋಕದೊಳಗಣದ
ಲೋಗರಿಗೊಂದು ಸತ್ವಸಾರ
ಅಗಾಧ ಅರ್ಥವುಳ್ಳದು
ಥೇಟ್ ಉದಧಿಯಂತೆ
ಕುಶಧಿಯಾಳದೊಳಗಣ
ಮುತ್ತು ರತ್ನ ಹವಳಗಳಿದ್ದಂತೆ
ಕಾವ್ಯದೊಳಗಿನ
ಪದ ಲಾಲಿತ್ಯದ ಅರ್ಥ
ಒಂಥರ ಪ್ರಭಾತಫೇರಿಯಂತೆ..!
ಕಾವ್ಯವೆಂದರೆ….
ಖುಷಿಯೊಡಲಿನ ಸಂಭ್ರಮ
ದುಃಖದೊಳಗಿನ
ದುಮ್ಮಾನ
ಅನುಭವ ಅನುಭಾವಗಳ
ವಿಚಾರಸಂಕೀರ್ಣದಂತೆ
ಅದ್ಭುತ ಬರೆಹಗಳ ತೇರು….
ಇದೊಂಥರ
ಮನದೊಳಗೆ ಮೂಡುವ ಚಿತ್ತಾರದ
ಅಚ್ಚುಪಡಿ
ತೋಚಿದ್ದು ಗೀಚುವುದು
ಒಲವಿನ ಪ್ರಸ್ತಾರ
ಚೆಲುವಿನ ಸುಮಹಾರ..!
ಇಂದು ಕಾವ್ಯದ ದಿನವಂತೆ…! ಬರೆಯುವವರಿಗೆ ಇಂದೊಂದು ದಿನವಾದರೆ ಸಾಕೆ..!ಪ್ರತಿದಿನ ಕಾವ್ಯ ಸಂತೆಯಾಗಿದ್ದರಷ್ಟೆ ಉತ್ಕೃಷ್ಟ ಸಾಹಿತ್ಯದ್ಹೂರಣ ಅಲ್ಲವೆ..? ಯಾವ ಮನುಜನಿಗೆ ನೋವಿಲ್ಲ, ನಲಿವಿಲ್ಲ ಹೇಳಿ.? ಮನುಷ್ಯನಾಗಿ ಹುಟ್ಟಿದ ಮೇಲೆ ಬರುವುದೆಲ್ಲವನ್ನು ಸ್ವೀಕರಿಸಿ ಅನುಭವಿಸಲೇ ಬೇಕು. ತನಗೊದಗಿ ಬಂದ ಕೆಟ್ಟ ಪರಿಸ್ಥಿತಿಗಳು ,ಒಳ್ಳೆಯ ಪರಿಸ್ಥಿತಿಗಳಿರಬಹುದು.
ಸಂದರ್ಭ ಸನ್ನಿವೇಶಕ್ಕನುಗುಣವಾಗಿ ತನ್ನೊಳಗೆ ಮೂಡಿಬರುವ ಸಾಲುಗಳು.ತೋಚಿದ್ದು ಗೀಚುವುದಿದೆಯಲ್ಲ; ಅದೆ ನೋಡಿ ಕಾವ್ಯದ ಎಳೆಗಳು ಉದ್ಭವಿಸುವ ಲಕ್ಷಣಗಳು…
ಪ್ರತಿಯೊಂದು ಅನುಭವಗಳನ್ನು ಮಾತುಗಳಲ್ಲಿ ಹೇಳಲಾಗದಿದ್ದಾಗ ಬರೆಹ ರೂಪದಲ್ಲಿ ಅಚ್ಚಿಳಿಸುವುದನ್ನೆ ಕಾವ್ಯವೆನ್ನುವರು. ಕಾವ್ಯಾತ್ಮಕ ಭಾವಾಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯತೆಯನ್ನು ಬೆಂಬಲಿಸುವ ಸಲುವಾಗಿ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಕೇಳುವ ಅವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಯುನೆಸ್ಕೋ ೧೯೯೯ರಲ್ಲಿ ಪ್ಯಾರಿಸ್‌ನಲ್ಲಿ ತನ್ನ ೩೦ ನೇ ಸಾಮಾನ್ಯ ಸಮ್ಮೇಳನದಲ್ಲಿ ಮಾರ್ಚ್ ೨೧ ಅನ್ನು ವಿಶ್ವ ಕಾವ್ಯ ದಿನವನ್ನಾಗಿ ಅಳವಡಿಸಿಕೊಂಡಿತು.
ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ವಿಶ್ವ ಕವನ ದಿನವನ್ನು ಎಲ್ಲೆಡೆ ಆಚರಿಸುತ್ತ ಬಂದಿರುವರು.ಇದರ ಉದ್ದೇಶವಾದರು ಇಷ್ಟೆನೆ.! ಬರೆಯುವ ಮನಸ್ಸುಗಳನ್ನು ಗೌರವಿಸುವುದು , ಬರಗಾರರನ್ನು ಉಳಿಸಿ ಬೆಳೆಸುವ ಸತ್ಕಾರ್ಯ ಮಾಡುವುದು.

ಕವಿಗಳಿಗೆ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವುದರ ಮೂಲಕ ಅವರೆ ರಚಿಸಿರುವ ಕವನಗಳನ್ನು ವಾಚನ ಮಾಡಲು ಅವಕಾಶ ಮಾಡಿಕೊಟ್ಟ; ಅವರಲ್ಲಿರುವ ಪ್ರತಿಭೆಗೆ ನೀರೆರೆದು ಪೋಷಿಸುವುದು. ಈ ಮೂಲಕ ಕವಿತೆಗಳ ತೂಕ/ಘನತೆಯನ್ನು ಹೆಚ್ಚಿಸಿ ಮಾತೃಭಾಷಾ ಸಾಹಿತ್ಯವನ್ನು ಉತ್ಕೃಷ್ಟಗೊಳಿಸುವ ಉದ್ದೇಶ ಹೊಂದಿರುವುದು.
ಇದರಿಂದಾಗಿ ಕವಿತೆಗಳನ್ನು ಗಟ್ಟಿಯಾಗಿ ಓದಲು, ಬರವಣಿಗೆ ಮತ್ತು ಬೋಧನೆಯನ್ನು ಉತ್ತೇಜಿಸಲು, ಕಾವ್ಯ ಮತ್ತು ರಂಗಭೂಮಿ, ನೃತ್ಯ, ಸಂಗೀತ ಮತ್ತು ಚಿತ್ರಕಲೆಯಂತಹ ಇತರ ಕಲೆಗಳ ನಡುವೆ ಕಾವ್ಯ ತನ್ನ ತನವನ್ನು ಬಿಟ್ಟುಗೊಡದೆ ಸಾಗಲು ಸಾಧ್ಯವಾಗುವುದು. ಮಾಧ್ಯಮಗಳ ಮುಖೇನ ತಾವು ರಚಿಸಿರುವ ಕಾವ್ಯದ ಪಾರದರ್ಶಕತೆಯನ್ನು ತೋರಬಹುದು ಮತ್ತು ಕವನಗಳಲ್ಲಿ ಭಾವನಾತ್ಮಕತೆಯನ್ನು ಕಾಣಬಹುದು.ಹಾಗೆಯೇ ವ್ಯಕ್ತಿಯಲ್ಲಿನ ತುಡಿತ ,ಮಿಡಿತಗಳು ಸಹ ಅನಾವರಣಗೊಳ್ಳುವುದು.
ನಿಜವಾದ ಕವಿತೆ ಎಂದರೆ ಆಕರ್ಷಕ ಪದಪುಂಜವಲ್ಲ. ಮನಸ್ಸೋ ಇಚ್ಚೆ ಅರ್ಥವಿಲ್ಲದೆ ಬರೆಯುವುದಲ್ಲ.ಅದೇನಿದ್ದರು ಕವಿಯ ನೈಜ ಭಾವನೆಯಾಗಿದ್ದು ಮನಸ್ಸನ್ನು ತಟ್ಟುವಂತಿರಬೇಕು. ಓದುಗರು ಮತ್ತು ಕವಿಯೊಂದಿಗೆ ಭಾವ ಬೆಸುಗೆಯನ್ನು ಮೂಡಿಸುವಂತಿದ್ದು, ಕವಿತೆಗಳು ಓದುಗರ ಮನಮುಟ್ಟುವಂತಿರಬೇಕು ಹಾಗು ಅರ್ಥಪೂರ್ಣವಾಗಿರಬೇಕು.ತೋಚಿದ್ದೆ ಗೀಚಿದರು ಅದಕ್ಕೊಂದು ಅರ್ಥವಿದ್ದರಷ್ಟೆ ಕವನವಾಗಬಲ್ಲದು.
ಕಲ್ಲಿಗೆ ಉಳಿಪೆಟ್ಟು ನೀಡುತ್ತ ,ನೀಡುತ್ತ ವಿಗ್ರಹರೂಪ ನೀಡಿ ಅದೊಂದು ಶಿಲ್ಪವಾಗಿಸಿ ದೇವರ ಹೆಸರು ಕೊಟ್ಟು ಪ್ರಾಣ ಪ್ರತಿಸ್ಥಾಪನೆ ಮಾಡುವುದರ ಮೂಲಕ ಕಲ್ಲು ದೇವರಲ್ಲು ಕೂಡ ಜೀವ ತುಂಬುವುದಿಯಲ್ಲ ಹಾಗೆ ಮನಸ್ಸಿನಲ್ಲಾಗುವ ತೊಳಲಾಟ ,ಉಲ್ಲಾಸ, ತುಡಿತ ,ಮಿಡಿತಗಳನ್ನು ಬರೆಹರೂಪವನ್ನು ಕಾವ್ಯವಾಗಿಸುವ ಕಲೆ ನಿಜಕ್ಕೂ ಅದ್ಭುತ ,ಅದ್ವೀತಿಯ. ಇಲ್ಲಿ ಕವಿಯ ನೈಜಭಾವನೆಗಳಿಗೆ ಶಬ್ಧರೂಪವನ್ನು ಕೊಟ್ಟು ಅದರೊಳಗೆ ಉಪಮಾನ, ಉಪಮೇಯಗಳೊಂದಿಗೆ ಹೋಲಿಸುವ ಪರಿ ಮಾತ್ರ ಹೂವರಳಿದಂತೆ ಸುಸ್ಪಷ್ಟ.ಇವೆ ಕವಿಯ ಮನದೊಳಗೆ ಅರಳುವ ಸಾಲುಗಳ ತೋರಣ…

ಇಂದು ಬರೆಹವನ್ನು ಆರಾಧಿಸುವ, ಪೂಜಿಸುವ ಮನಸ್ಸುಗಳಿಗೇನು ಬರವಿಲ್ಲ.ಬರೆಯುವ ಮನಸುಗಳು ದಿನೆ ದಿನೇ ಹೆಚ್ಚುತಿದೆ.ಇಂದು ವಿಶ್ವಕಾವ್ಯದಿಂದಾಗಿ ಪ್ರಪಂಚದಾದ್ಯಂತ ಸಂಭ್ರಮ ಹಾಗೂ ಸಡಗರದ ದಿನವಾಗಿದೆ.ಮನುಜ ತನ್ನ ಅನುಭವ ಮತ್ತು ಅನುಭಾವಗಳನ್ನು ಬರೆಹ ರೂಪದಲ್ಲಿ ಹಿಡಿದಿಡುವ ಕ್ರಿಯಾಶೀಲ ಹಾಗು ಸೃಜನಶೀಲ ಕಲ್ಪನೆಯನ್ನು ಉತ್ತೇಜಿಸಲು ಮತ್ತು ವಿಶೇಷ ,ವಿಶಿಷ್ಟ , ವಿಚಾರಗಳು ,ಸಂಗತಿಗಳು ಸಂಸ್ಕೃತಿಗಳು, ಸಂಪ್ರದಾಯಗಳಿಗೆ ಧ್ವನಿ ನೀಡುವ ನಿಟ್ಟಿನಲ್ಲಿ ಹಾಗೆಯೆ ಅವರೊಳಗಣದ ಕಾವ್ಯದ ಉತ್ಕರ್ಷ, ಉತ್ತುಂಗ ಸಾಮರ್ಥ್ಯವನ್ನು ಗುರುತಿಸಿ ಹುರಿತುಂಬಿಸಲು ಇದು ಒಂದು ದಿನವಾಗಿದೆ.ಇಂದು ಹಲವಾರು ದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಕಾವ್ಯದ ದಿನವನ್ನು ಆಚರಿಸಲಾಗುತ್ತದೆ.ಹೀಗೆಯೆ ಬರೆಯುವುದರಿಂದ ಆಯಾಯ ಭಾಷೆಗಳ ಸೊಬಗು ಸೊಗಡು ಹೆಚ್ಚುವುದಲ್ಲದೆ ಆ ಭಾಷೆಗಳ ಸೌಂದರ್ಯ ವನ್ನು ಸಮೃದ್ಧಗೊಳಿಸುವುದು.ಮತ್ತು ನಾಡು, ನುಡಿಯ ಘನತೆ, ವೈವಿಧ್ಯತೆಯನ್ನು ಪ್ರೇರೇಪಿಸುವ ದಿನವಾಗಿದೆ.ಹಾಗಾಗಿ ಈ ದಿನದ ವಿಶೇಷತೆಯನ್ನು ಹೆಚ್ಚಿಸುವ ಸಲುವಾಗಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಕಮ್ಮಟಗಳು,ಪ್ರಬಂಧಸ್ಪರ್ಧೆ, ಚರ್ಚಾಸ್ಪರ್ಧೆಗಳು, ಕವಿಗೋಷ್ಠಿಗಳು ಹೀಗೆ ಸಾಹಿತ್ಯಕ ಕಾರ್ಯಕ್ರಗಳನ್ನು ನೆಡಸುವುದರ ಮೂಲಕ ಈ ದಿನದ ಸಂಭ್ರಮಕ್ಕೆ ಸಾಥ್ ನೀಡುವುದು.ಈ ಎಲ್ಲಾ ಕಾರ್ಯಕ್ರಮಗಳು ವಿಶ್ವ ಕಾವ್ಯದಿನದ ಮಹತ್ವವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ವಿಶ್ವ ಕವನ ದಿನದಂದು ಸ್ಪರ್ಧಾತ್ಮಕ ಕಾರ್ಯಕ್ರಮವು ಕವಿಗಳಿಗೆ ಮತ್ತಷ್ಟು ಉತ್ತೇಜಿಸುತ್ತ ಅವರು ತಮ್ಮ ಕೆಲಸವನ್ನೂ ನಾಡಿನೆಲ್ಲಡೆ ನಿರ್ವಹಿಸಲು ಸಹಕಾರಿಯಾಗುವಂತೆ ಮಾಡುವುದು.
ಈ ಕಾರ್ಯಕ್ರಮಗಳು ಬರೆಯುವವರಿಗೆ ಒಂಥರ ಎನರ್ಜಿ ಬೂಸ್ಟಿನಂತೆ.ಏಕೆಂದರೆ ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಅವರ ಕೆಲಸಗಳಲ್ಲಿ ಸಾಮಾನ್ಯವಾಗಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.ಹಾಗೆಯೇ ಬರಹಗಾರರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿ ಅವರಿಂದ ಉತ್ತಮ ಬರೆಹಗಳು ಹೊರಬರುವಂತೆ ಮಾಡುವುದಾಗಿದೆ. ಮತ್ತು ಇತರ ಬರಹಗಾರರು ಮತ್ತು ಉತ್ಸಾಹಿಗಳೊಂದಿಗೆ ಸಂಪರ್ಕ ಸಾಧಿಸಲು ವೇದಿಕೆಯನ್ನು ಒದಗಿಸುತ್ತದೆ.ಅದು ಸೃಜನಶೀಲತೆ ಮತ್ತು ಸ್ವಯಂ ಅಭಿವ್ಯಕ್ತಿಗೆ ಅವಕಾಶ ಸಿಗುವುದು.ಈ ಮುಖೇನ ಕವಿಯಾದವರಿಗೆ ಸಮಾಜದ ಆಗುಹೋಗುಗಳು ,ಕುಂದು ಕೊರತೆಗಳು ಬಗ್ಗೆ ಬರೆಹದ ಮೂಲಕ ಮನಮುಟ್ಟುವಂತೆ ಹೇಳಲು ಉತ್ತಮ ವೇದಿಕೆ ಸಿಗುವುದು.ಇಲ್ಲಿ ಕವಿಗಳು ಸಮಾಜದ ಅಂಕುಡೊಂಕುಗಳು ,ಮನಸ್ಸಿನ ತೊಳಲಾಟ, ಪ್ರತಿಯೊಂದು ಕ್ಷೇತ್ರಗಳು ಹಾಗೂ ಪ್ರೀತಿ ,ಪ್ರೇಮ, ಅಮ್ಮ ,ಅಪ್ಪ, ಸಹೋದರರು, ಪಕ್ಷಿ ,ಪ್ರಾಣಿಗಳ ಮೇಲೂ ತಮ್ಮ ಬರೆಹವೆಂಬ ಬೆಳಕನ್ನು ಚೆಲ್ಲಿರುವರು.ಹಾಗೆ ಈ ದಿನವು ಕವಿಗಳ ಜೀವನದಲ್ಲಿ ಕಾವ್ಯವು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸುವ ದಿನವಾಗಿದ್ದು ,ಲೋಗರನ್ನು ಒಗ್ಗೂಡಿಸುವ ಕಾರ್ಯ ಮಾಡುವುದಲ್ಲದೆ ಕಾವ್ಯದ ಕಲೆಯನ್ನು ಅದರ ಪ್ರಕಾರಗಳ ಅರಿವು ಹಾಗೂ ಅವುಗಳ ಮಹತ್ವವನ್ನು ತಿಳಿಸುವುದು.ಹೀಗೆ ನಮ್ಮೊಳಗಿನ ಕವಿಭಾವವನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸಿಕೊಳ್ಳುತ್ತ ಕಾವ್ಯದ ಉತ್ಭುಲ್ಲ ಹಾಗೂ ಉತ್ಪುಲಕವನ್ನು ಹೆಚ್ಚಿಸುತ್ತ ನಮ್ಮ ನಾಡು ನುಡಿಯ ಉದ್ಯೋತವನ್ನು ಬೆಳಗಿಸೋಣ.ಇದರಿಂದ ನಮ್ಮ ಕಾವ್ಯದ ಉತ್ಕರ್ಷತೆ ಹೆಚ್ಚುವುದು.

ಕಾವ್ಯವು ಬರೆಹಗಾರರ ಮನೋಧರ್ಮವನ್ನು ಎತ್ತಿಹಿಡಿಯುವುದು. ಆದ್ದರಿಂದ ಕವಿಯನ್ನು ಸ್ವಾಸ್ಥ್ಯ ಸಮಾಜದ ನಿರ್ಮಾತೃ ಎಂದರೆ ತಪ್ಪಾಗಲಾರದು.
ಸಮಾಜದ ಹಿತದೃಷ್ಟಿಯಿಂದ ಸಾಹಿತ್ಯ ರಚಿಸುವ ಕವಿಯು ಭಾವನಾತ್ಮಕ ಜೀವಿಯಾಗಿದ್ದು ,ಸಾಮಾಜಿಕ ಹೊಣೆಗಾರಿಕೆಯಿಂದ ಮುಕ್ತನಲ್ಲ. ಕಾವ್ಯವು ಚಿಂತನ ಮಂಥನ ವಿಚಾರ-ಸಂಕೀರ್ಣಗಳ ಭಾವಕೋಶಗಳನ್ನು ಆಳುವ ಆಣ್ಮನಿದ್ದಂತೆ. ಇಂತಹ ಬರೆಹಗಳ ಉತ್ಪಾದಕನಾಗಿ ಕವಿಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾನೆ.
ಹೀಗಾಗಿ ಕವಿಮನಗಳಿಗೆ ಅನವರತ ಹುರಿದುಂಬಿಸಿ.
ಅವರನ್ನೂ ಉಳಿಸಿ, ಬೆಳೆಸಿ .ಈ ಮುಖೇನ ನಾಡು ನುಡಿಯ ಸೊಬಗು ಸೌಂದರ್ಯವನ್ನು ಕಾಪಾಡೋಣ…
- ಅಭಿಜ್ಞಾ ಪಿ.ಎಮ್.ಗೌಡ – ಸಾಹಿತಿ ಮತ್ತು ಶಿಕ್ಷಕಿ, ಮಂಡ್ಯ.
