ಬೇಸಿಗೆಯ ದಾಹಕ್ಕೆ ತರಾವರಿ ಪಾನೀಯ

ಕಾಲಕಾಲಕ್ಕೆ ಪ್ರಕೃತಿಯ ಜೊತೆಯಲ್ಲಿಯೇ ನಾವು ಬದಲಾಗುತ್ತಾ ಹೋಗುವುದು ಸಾಮಾನ್ಯ. ನೀರಿಗೆ ಮನೆಯಲ್ಲಿಯೆ ದೊರೆಯುವ ವಸ್ತುಗಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ನೀರು ಹೋಗುತ್ತದೆ ಮತ್ತು ಆಯಾಸವೂ ಪರಿಹಾರ ಆಗುತ್ತದೆ. ಬೇಸಿಗೆಗೆ ದೇಹವನ್ನು ತಂಪಾಗಿಸುವ ಕುರಿತು ಆತ್ಮ.ಜಿ.ಎಸ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಋತುಮಾನಗಳು ಬದಲಾದಂತೆ ಪ್ರಕೃತಿಯಲ್ಲಿಯೂ ಬದಲಾವಣೆಯಾಗುತ್ತವೆ. ಎಲ್ಲೆಡೆ ಹಸಿರಿನಿಂದ ಕಂಗೊಳಿಸುವ ವರ್ಷ ಋತು ಮನಸ್ಸಿಗೆ ಮುದ ನೀಡಿದರೆ ಪ್ರಕೃತಿಯೇ ಒಣಗಿದಂತೆ ಕಾಣುವ ಬೇಸಿಗೆ ಇದಕ್ಕೆ ತದ್ವಿರುದ್ಧ . ನಿತ್ಯದ ಚಟುವಟಿಕೆಗಳಿಗೆ ಮನಸ್ಸು ಮತ್ತು ದೇಹವನ್ನು ಒಡ್ಡುವ ಮುನ್ನವೇ ಒಮ್ಮೊಮ್ಮೆ ಸೂರ್ಯನ ತಾಪ ಸಹಿಸಲು ಅಸಾಧ್ಯವಾಗುತ್ತದೆ.ಒಂದು ರೀತಿ ನಿಸ್ತೇಜ ಮನೋಭಾವ, ವಾತಾವರಣದ ಶುಷ್ಕತೆಗೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದೇ ಒಮ್ಮೊಮ್ಮೆ ಸವಾಲು ಎನ್ನಿಸುವ ದಿನಗಳು. ಈ ವರ್ಷದ ವಾತಾವರಣದ ಬಗ್ಗೆ ಕೇಳಲೇ ಬೇಡಿ.ಮಳೆಗಾಲದಲ್ಲಿ ಮಳೆಯೇ ಅತಿಥಿಯಂತೆ ಬಂದು ಹೋಗಿದ್ದರ ಪ್ರಭಾವ ಪೆಬ್ರವರಿಯಲ್ಲಿಯೇ ಬಿರು ಬೇಸಿಗೆಯ ಅನುಭವ ಆಗುತ್ತಿದೆ.

ಕಾಲಕಾಲಕ್ಕೆ ಪ್ರಕೃತಿಯ ಜೊತೆಯಲ್ಲಿಯೇ ನಾವು ಬದಲಾಗುತ್ತಾ ಹೋಗುವುದು ಸಾಮಾನ್ಯ. ಒಂದೊಂದು ಕಾಲಕ್ಕೆ ತಕ್ಕಂತೆ ನಮ್ಮ ಆಹಾರ.ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸಾಗುವುದು ಬದುಕಿನ ಭಾಗವಾಗಿದೆ.ಹಾಗಾಗಿಯೇ ಬೇಸಿಗೆಯ ದಿನಗಳು ಬಂತೆಂದರೆ ಬೆಳಿಗ್ಗೆ ಬೇಗ ಎದ್ದು ಕೆಲಸಗಳನ್ನು ಮಾಡುವುದು.ಮನೆಯಿಂದ ಆದಷ್ಟು ಅನಿವಾರ್ಯತೆ ಇದ್ದಲ್ಲಿ ಹೊರ ಬೀಳುವುದು ಇಂಥ ಸಣ್ಣ ಪುಟ್ಟ ವೈಯುಕ್ತಿಕ ಬದಲಾವಣೆ ಮಾಡಿಕೊಂಡರೆ,ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬಿಸಿಲು ಜಾಸ್ತಿ ಇರುವ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಚೇರಿ ಮತ್ತು ಶಾಲಾ ವೇಳೆಯನ್ನು ಬದಲು ಮಾಡುವುದು ಇದೆ.

ಅಲ್ಲಲ್ಲಿ ನೀರಿನ ಕೊರತೆ, ಲಭ್ಯವಿರುವ ನೀರಿನ ಅಸಮರ್ಪಕ ಪೂರೈಕೆಗೆ ವಿರೋಧ ಇಂಥದ್ದೇ ನೀರಿಗೆ ಸಂಬಂಧಿಸಿದ ಸುದ್ದಿಗಳು ಪತ್ರಿಕೆಗಳ ಪುಟದಲ್ಲಿ ರಾರಾಜಿಸುತ್ತವೆ. ಇವುಗಳ ನಡುವೆಯೇ ನಮ್ಮ ದೇಹ ಮತ್ತು ಅದರ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಸಣ್ಣ ಪುಟ್ಟ ಅಭ್ಯಾಸಗಳನ್ನು ರೂಡಿ ಮಾಡಿಕೊಂಡಲ್ಲಿ ತಕ್ಕ ಮಟ್ಟಿಗೆ ಧಗೆಯನ್ನು ನಿವಾರಿಸಿಕೊಳ್ಳಲು ಸಾಧ್ಯ. ನೀರು ಕುಡಿಯಲು ಬೇಸರ ಎಂಬ ಮನೋಭಾವದವರು ನೀರಿಗೆ ಮನೆಯಲ್ಲಿಯೆ ದೊರೆಯುವ ವಸ್ತುಗಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ನೀರು ಹೋಗುತ್ತದೆ ಮತ್ತು ಆಯಾಸವೂ ಪರಿಹಾರ ಆಗುತ್ತದೆ.

* ಜೀರಿಗೆ ನೀರು : ನಮ್ಮ ಅಳತೆಗೆ ಬೇಕಾಗುವಷ್ಟು ನೀರು ಮತ್ತು ನಾಲ್ಕೈದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಇಟ್ಟರೆ ನೀರಡಿಕೆಯಾದಾಗ ಕುಡಿಯ ಬಹುದು.ದೇಹವನ್ನು ತಂಪಾಗಿ ಇಡುವುದು ಮಾತ್ರವಲ್ಲ ಬೇಸಿಗೆಯ ಸಾಮಾನ್ಯ ಸಮಸ್ಯೆಯಾದ ಉರಿ ಮೂತ್ರವನ್ನು ಕಡಿಮೆ ಮಾಡುತ್ತದೆ.ನಿತ್ಯ ಬಳಸಿದಲ್ಲಿ ಅಂತಹ ಸಮಸ್ಯೆಯೇ ತಲೆದೋರದು.

* ಸೌತೆಕಾಯಿ ನೀರು :  ಶೇ 90 ರಷ್ಟು ನೀರಿನ ಅಂಶವಿರುವ ಸೌತೆಕಾಯಿ ಸಾಮಾನ್ಯವಾಗಿ ಎಲ್ಲರ ಅಚ್ಚುಮೆಚ್ಚು.ಕೆಲವರು ಹಸಿಯಾಗಿ ತಿಂದರೆ ಇನ್ನೂ ಕೆಲವರು ಬಗೆ ಬಗೆಯ ಅಡಿಗೆ,ಸಲಾಡ್ ಮೂಲಕ ಬಳಸುತ್ತಾರೆ. ಸೌತೆಕಾಯಿಯ ಸಣ್ಣ ಸಣ್ಣ ತುಂಡುಗಳನ್ನು ರಾತ್ರಿಯಿಡೀ ನೀರಿನಲ್ಲಿ ಹಾಕಿಟ್ಟು ಮಾರನೇ ದಿನ ಸೇವಿಸಿದಲ್ಲಿ ದೇಹದ ತ್ಯಾಜ್ಯ ನಿವಾರಿಸುವ ಉತ್ತಮ ಮತ್ತು ಸುಲಭ ಡಿಟಾಕ್ಸ್.ಇದು ಚರ್ಮದ ಕಾಂತಿಯನ್ನು ಹೆಚ್ಚಿಸಲು,ನಿರ್ಜಲೀಕರಣ ತಡೆಯಲು ಸಹಕಾರಿ.

* ತಂಪಿನ ಬೀಜದ ನೀರು (sabja seeds) : ಬೆಳಿಗ್ಗೆ ಎದ್ದ ತಕ್ಷಣ ಒಂದು ಚಮಚ ತಂಪಿನ ಬೀಜವನ್ನು ನೀರಿಗೆ ಹಾಕಿಟ್ಟರೆ ಸ್ವಲ್ಪ ಹೊತ್ತಿನ ನಂತರ ಸಣ್ಣ ಸಣ್ಣ ನಕ್ಷತ್ರಗಳ ರೀತಿಯಲ್ಲಿ ನೀರಿನಲ್ಲಿ ಅರಳುತ್ತದೆ. ಆಹಾರದಲ್ಲಿ ವ್ಯತ್ಯಾಸವಾದಾಗ ಉಂಟಾಗುವ ಅಸಿಡಿಟಿ ಸಮಸ್ಯೆಗೆ ಈ ನೀರಿನ ಸೇವನೆ ಉತ್ತಮ ಮನೆ ಮದ್ದು.ನಿತ್ಯ ಸೇವಿಸುವ ಪರಿಪಾಠ ಇದ್ದಲ್ಲಿ ನೀರಿಗೆ ಹಾಕಿ ಸೇವಿಸಬಹುದು.ಅಪರೂಪಕ್ಕೆ ಬಳಸುವವರು ಹಾಲಿನ ಜೊತೆ,ಹಣ್ಣಿನ ಸ್ಮೂದಿ ಜೊತೆ ಸೇವಿಸಲು ರುಚಿಯಾಗಿರುತ್ತದೆ.

* ಅಕ್ಕಿ ಗಂಜಿ : ಬಸಿದು ಅನ್ನ ಮಾಡುವ ಅಭ್ಯಾಸವೇ ತಪ್ಪಿಹೋಗಿರುವ ಇಂದಿನ ದಿನಗಳಲ್ಲಿ ಅಕ್ಕಿ ಗಂಜಿ ಎಂದರೆ ಎಲ್ಲರ ಹುಬ್ಬೇರುವುದು ಸಾಮಾನ್ಯ.ಬಸಿದು ಮಾಡುವ ಅನ್ನದ ತಿಳಿ ಆರೋಗ್ಯಕ್ಕೆ ಒಳ್ಳೆಯದು.ಬೇಸಿಗೆಯ ದಿನಗಳಲ್ಲಿ ಈ ತಿಳಿಗೆ ಸ್ವಲ್ಪ ಮಜ್ಜಿಗೆ ಬೆರೆಸಿ ಕುಡಿದರೆ ದೇಹಕ್ಕೆ ಶಕ್ತಿ ದಾಯಕ.

* ಗುಲಾಬಿ ದಳದ ನೀರು : ಒಂದಷ್ಟು ಗುಲಾಬಿ ದಳಗಳನ್ನು ನೀರಿಗೆ ಹಾಕಿ ಕುದಿಸಿ ತಣ್ಣಗಾದ ನಂತರ ಸೇವಿಸುವುದು.ಚರ್ಮಕ್ಕೆ ಕಾಂತಿ ನೀಡುತ್ತದೆ. ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ನಿವಾರಣೆಗೆ ಈ ನೀರನ್ನು ಹಚ್ಚುವ ಮೂಲಕ ಕಡಿಮೆ ಮಾಡಲು ಸಾಧ್ಯ.

* ಲಿಂಬು ನೀರು : ಬೇಸಿಗೆಯ ತಾಪಮಾನಕ್ಕೆ ನಿಸ್ತೇಜಗೊಂಡ ದೇಹಕ್ಕೆ ಶೀಘ್ರವಾಗಿ ಚೈತನ್ಯ ನೀಡುವ ಶಕ್ತಿ ಇರುವುದು ಲಿಂಬು ನೀರಿಗೆ .ಹೊರಗಿನ ಬಿಸಿಲಿನಿಂದ ಮನೆಗೆ ಕಾಲಿಟ್ಟಲ್ಲಿ ಆಯಾಸ ಪರಿಹರಿಸಲು ಬಿಸಿ/ ತಂಪಾದ ನೀರಿಗೆ ಲಿಂಬು ಹನಿಗಳನ್ನು ಸೇರಿಸಿ ಸೇವಿಸುವುದು ಉತ್ತಮ.

ಬೇಸಿಗೆ ಎಂದರೆ ದಾಹ. ದೇಹದ ದಾಹ ನೀಗಿಸಲು ಮನೆಯಲ್ಲಿಯೇ ದೊರೆಯುವ ವಸ್ತುಗಳಿಗೆ ಮೊರೆ ಹೋದಲ್ಲಿ ಆರೋಗ್ಯವೂ ಉತ್ತಮ ವಾಗಿರುತ್ತದೆ.ಬೇಸಿಗೆಯಲ್ಲಿ ಭೂಮಿಯ ಕೆಳಗೆ ಹೋದ ನೀರಿನಿಂದಾಗಿ ಹಲವಾರು ರೀತಿಯ ಖಾಯಿಲೆಗಳಿಂದ ಬಳಲುವುದನ್ನು ನೋಡುತ್ತೇವೆ.ತಂಪೆಂದು ಬಣ್ಣ ಬಣ್ಣದ ಆಕರ್ಷಕ ತರಾವರಿ ಬಾಟಲ್ ಗಳ ಪಾನೀಯಕ್ಕೆ ಮರುಳಾಗುವುದು ಬಿಟ್ಟು ಶುಚಿಯಾದ ನೀರನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತಾಗಲಿ.


  • ಆತ್ಮ.ಜಿ.ಎಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading