ಪ್ರತಿ ದಿನವೂ ನಿನ್ನದೇ ನೆನಪು ಬಾರೆ ನೀನು ಎಲ್ಲಿರುವೆ?…ಎದೆಯ ದನಿಯ ಕೇಳೊಮ್ಮೆ ನಾನೀಗ ಕೂಗುತಿರುವೆ…ಕವಿ, ಲೇಖಕರಾದ ಗುರುನಾಥ ಶೀಲವಂತರು ಅವರು ಬರೆದ ಈ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಿನ್ನ ಸವಿಯಾದ ಗುಂಗಿನಲಿ
ನಾ ಕಳೆದು ಹೋಗಿರುವೆ!
ಪ್ರತಿ ದಿನವೂ ನಿನ್ನದೇ ನೆನಪು
ಬಾರೆ ನೀನು ಎಲ್ಲಿರುವೆ?
ಎದೆಯ ದನಿಯ ಕೇಳೊಮ್ಮೆ
ನಾನೀಗ ಕೂಗುತಿರುವೆ.
ಯಾರ ಗೊಡವೆ ಇರದೆ ನಾನು
ನಿನಗಾಗಿ ಕಾಯುತಿರುವೆ.
ಪ್ರತಿ ಸಾರಿ ನಿನ್ನೆದುರು ನಾನೇ
ಯಾಕೋ ಸೋಲುತಿರುವೆ.
ಬರೀ ಸೋಲೆಷ್ಟು ಸಖ್ಯವೆಂದು
ನಾ ಈಗಷ್ಟೇ ತಿಳಿದಿರುವೆ.
ಅಳುವೇ ಬಂದು ಸುಳಿದರೂ
ನಗುವನ್ನೇ ಹಂಚುತಿರುವೆ.
ಮೌನ ತಬ್ಬಿದ ಮನದೊಳಗೂ
ರಂಗೋಲಿ ಬಿಡಿಸುತಿರುವೆ.
ಜೊತೆಗೆ ಬಾಳುವ ವಚನವಿದು
ಅದಕೆಂದೇ ಪ್ರೀತಿಸುತಿರುವೆ.
ಜಗದಲಿ ಇರುವ ಪ್ರೇಮವನೆಲ್ಲ
ನಿನಗೆಂದೇ ಚಿತ್ರಿಸುತಿರುವೆ.
ಬಾರದ ನಿದ್ದೆಯಲೀ ಬಯಕೆ
ಬಿಟ್ಟು ಬಿಡದೆ ಕಾಡುತಿವೆ.
ಅಪ್ಪಿ ತಪ್ಪಿ ಬಂದ ನಿದ್ದೆಯಲ್ಲಿ
ಕನಸುಗಳು ಗೀಳಿಡುತಿವೆ.
ನನ್ನ ಪ್ರೇಮದ ಪರಿಯನು ನೀ
ಎಂದಿಗಾದರು ಅರಿಯುವೆ?
ಈ ಭಾವ ಚಿತ್ತ ಭಿತ್ತಿಯಲ್ಲಿ ನೀ
ಯಾವತ್ತು ಬೆರೆಯುವೆ?
ಮುಂಜಾವು ಬಸಿದ ಪನ್ನೀರಿನಲಿ
ಮಿಂದ್ದೆದ್ದು ಬಂದಿರುವೆ.
ಸುಡುತಿರುವ ಸೆಖೆಯಲಿ ಬೆವರಿ
ಬೇಯುತಲೇ ಇರುವೆ.
ನಿನ್ನ ನಗುವ ಸುಮ ಘಮಲಲಿ
ಒಲವು ತೆಳೆದಿರುವೆ
ನಿನ್ನ ಒಂದು ಬೆಚ್ಚನೆ ಅಪ್ಪುಗೆಗೆ
ನಾ ಕಾದು ಕುಳಿತಿರುವೆ.
- ಗುರುನಾಥ ಶೀಲವಂತರ – ಕವಿ/ಲೇಖಕರು
