‘ಬೆಟ್ಟದಂತೆ ಹೊಸೆದ ಬಾಳ ಕನಸ್ಸು, ನಿಗದಿತ ಗುರಿಯ ತಲುಪಿದೆ’….ಕವಿ ಗುರುನಾಥ ಶೀಲವಂತರ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳು ಓದುಗರ ಮುಂದಿದೆ, ತಪ್ಪದೆ ಓದಿ…
ಎದೆಯ ಗೂಡಿನೊಳು ಕುಳಿತು
ಪ್ರೀತಿ ಹಕ್ಕಿ ಹಾಡಿದೆ.
ಹೊಸತು ಆಸೆ ಮೊಟ್ಟೆ ಇಡುತ
ತಾನು ರೆಕ್ಕೆ ಕೊಡವಿದೆ. (ಪ)
ನನ್ನೊಲವ ಸಿಹಿಯ ಸವಿದು
ಬಯಲ ತುಂಬ ಹಾರಿದೆ.
ಹೂವಲಿದ್ದ ತಂಪಾದ ಗಂಧ
ಗಾಳಿಗುಂಟ ಬೆರೆಸಿದೆ.
ಮುಗಿಲ ಕರಿಮೋಡ ಕರೆದು
ಮಳೆ ಹನಿಯ ಸುರಿಸಿದೆ.
ಭಾವ ಲಹರಿ ಕುಶಲ ಕೆಲಸವು
ಕಸರತ್ತನು ನಡೆಸಿದೆ! (೧)
ಮುಡಿಗೆ ಮುಡಿದ ಮೊಲ್ಲೆ ಹೂ
ಮುಖವ ತೆರೆದು ನಕ್ಕಿದೆ.
ಬಾಚಿ ತಬ್ಬಿದ ತೆಕ್ಕೆಯ ತುಂಬ
ಸುಖದ ಸಿರಿಯೇ ದಕ್ಕಿದೆ.
ಕೊಕ್ಕಿನೊಳಗೆ ಹಿಡಿದುಕೊಂಡು
ಓಲೆ ಗರಿಯ ನೀಡಿದೆ.
ಪಟ್ಟಗಟ್ಟುತ ಮೆರೆದ ಜೀವವೂ
ಪ್ರೇಮ ರಾಜ್ಯವ ಕಟ್ಟಿದೆ. (೨)
ಅನ್ಯರ ಹಂಗು ಕಳಚಿದ ಮೇಲೆ
ಸ್ವಾಭಿಮಾನದಿ ಬದುಕಿದೆ.
ದೃಶ್ಯ ಕಲಾ ಸಂಭ್ರಮ ಲೋಕವ
ಅನಾವರಣಗೊಳಿಸಿದೆ.
ನಟ್ಟಿರುಳ ರಾತ್ರಿಯಲಿ ಬರುವಾ
ನಿಟ್ಟಿಸಿರನೇ ತಡೆದಿದೆ.
ಬೆಟ್ಟದಂತೆ ಹೊಸೆದ ಬಾಳ ಕನಸ್ಸು
ನಿಗದಿತ ಗುರಿಯ ತಲುಪಿದೆ. (೩)
- ಗುರುನಾಥ ಶೀಲವಂತರ