ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗಿದ್ದ ಅಣ್ಣಾವ್ರ “ದೇವರು ಕೊಟ್ಟ ತಂಗಿ” ಎಂಬ ಕಪ್ಪು ಬಿಳುಪು ಸಿನಿಮಾವನ್ನು ಇಂದು ಯೂ ಟ್ಯೂಬ್ ನಲ್ಲಿ ನೋಡಿದೆ. ಆಗಾಗ್ಗೆ ಬಿಡುವು ಮಾಡಿಕೊಂಡು ವರನಟ ರಾಜಣ್ಣನ ಹಳೆಯ ಸಿನಿಮಾ ನೋಡೋದು ಅಂದ್ರೆ ನನಗೆ ಯುಗಾದಿ ಹಬ್ಬದಂತೆ.
ಅದಿರಲಿ…ಈ ಸಿನಿಮಾದಲ್ಲಿ ಅಣ್ಣಾವ್ರಿಗೆ ಒಬ್ಬ ತಂಗಿಯನ್ನು ಆ ದೇವರೇ ಕೊಟ್ಟಂತಹ ಭಾವುಕ ಎಳೆಯ ಕತೆ ಇದ್ದರೆ, ನನ್ನ ಈ ಫ಼ೇಸ್ ಗೆ , ಫ಼ೇಸ್ ಬುಕ್ ಎಂಬ ಮಾಯೆ ನಾಲ್ಕಾರು ನೆಚ್ಚಿನ ತಂಗಿಯರನ್ನೇ ಕೊಟ್ಟಿರೋದು ಸಹ ಒಂದರ್ಥದಲ್ಲಿ ನನ್ನನ್ನೂ ಭಾವುಕನನ್ನಾಗಿ ಮಾಡಿದೆ.
ನಾನು ಈ ಫ಼ೇಸ್ ಬುಕ್ಕಿಗೆ ಎಂಟ್ರಿ ಕೊಟ್ಟು ನಾಲ್ಕುವರೆ ವರ್ಷ ಆಗಿರಬಹುದೇನೋ ! ಎಲ್ಲೋ ಮುಖ ಮರೆ ಮಾಡಿಕೊಂಡು ಸುಮ್ಮನಿದ್ದವನ ಮುಖವನ್ನು ಮುಖಪುಟವೆಂಬ ಮಾಯಾ ಮುಖಪುಸ್ತಕದಲ್ಲಿ ತೆರೆಯುವಂತೆ ಮಾಡಿದ್ದು ಅಂದಿನ ನನ್ನ ಒಬ್ಬ ಸಹೋದ್ಯೋಗಿ ಮಿತ್ರ. ಆರಂಭದ ವರ್ಷಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತೆ ಇದ್ದ ನನಗೆ ಅದೀಗ ನನ್ನ ಮನದ ಅನಿಸಿಕೆಗಳನ್ನು ಬರಹದ ರೂಪದಲ್ಲಿ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿ ನಿತ್ಯ ಬದುಕಿನ ಹೆಜ್ಜೆಗಳಿಗೆ ಚಿಕ್ಕ ಸಾಥ್ ನೀಡುತ್ತಾ ಬಂದಿದೆ. ಆದರೆ ” ಈ ಸಫ಼ರ್ ಕಹಾಂ ತಕ್ ಚಲ್ತಾ ಹೈ ” ಅನ್ನೋದು ಮಾತ್ರ ಗೊತ್ತಿಲ್ಲ ಕಣ್ರೀ !
ಈ ಪಯಣದಲ್ಲಿ ಅನೇಕರ ಪ್ರೀತಿ, ಸ್ನೇಹ -ವಿಶ್ವಾಸವನ್ನೂ ಇದು ಕೊಟ್ಟಿದೆ. ಇದರೊಟ್ಟಿಗೇ ಕೆಲವರು ನನ್ನನ್ನು ಬಾಯಿತುಂಬಾ ಅಣ್ಣಾ ಎಂದು ಕರೆದು ನನ್ನ ಬರಹಗಳಿಗೆ ಕಾಮೆಂಟ್ ಹಾಕುವುದನ್ನು ನೋಡುವಾಗ ನನಗೆ ಎಲ್ಲಕ್ಕಿಂತ ಖುಷಿಯಾಗುತ್ತೆ. ಅಷ್ಟೇ ಅಲ್ಲ ಮನದ ಮೂಲೆಯಲ್ಲಿ ಎಲ್ಲೋ ಒಂದೆಡೆ ಆತ್ಮೀಯ ಭಾವ ನವಿರಾಗಿ ಚಿಗುರೊಡೆದು ನಿಲ್ಲುತ್ತದೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಯಾರೂ ಯಾರನ್ನೂ ಹೆಚ್ಚು ನೋಡಿರುವುದಿಲ್ಲ, ಮತ್ತೊಬ್ಬರ ಕುಲ- ಗೋತ್ರ, ಊರು -ಕೇರಿ, ಗುಣ-ಸ್ವಭಾವ, ಜಾತಿ- ಜನಿವಾರ… ಒಂದೂ ಗೊತ್ತಿರುವುದಿಲ್ಲ. ಹೀಗಿದ್ದರೂ ಕೇವಲ ಇಲ್ಲಿನ ಬರಹಗಳನ್ನು ಗುರುತಿಸಿ ಒಬ್ಬರನ್ನು ಅಣ್ಣಾ ಎಂದು ಮನಸಾರೆ ಸ್ವೀಕರಿಸಬೇಕಾದರೆ ನನ್ನ ಪ್ರಕಾರ ಅದೂ ಸಹ ನಮಗೆ ದಕ್ಕಿದ ಮನ್ನಣೆ, ಜವಾಬ್ದಾರಿ ಹಾಗೂ ನಮ್ಮೊಳಗಿನ ಆತ್ಮವಿಮರ್ಶೆಯಂತೆ !
ನನ್ನ ಸ್ನೇಹಿತರ ಲಿಸ್ಟ್ ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ತಮಾಷೆ ಅಂದ್ರೆ ನನ್ನ ಯಾವುದೇ ಬರಹಗಳಿಗೆ ನೂರಕ್ಕಿಂತ ಹೆಚ್ಚು ಕಾಮೆಂಟ್ ಬಂದಿದ್ದೇ ಕಡಿಮೆ. ಪರವಾಗಿಲ್ಲ. ಅಂದರೆ ಇಲ್ಲಿರುವ ಎಲ್ಲರೂ ಸಕ್ರಿಯ ಸ್ನೇಹಿತರಾಗಿರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಲ್ಲಿರುವ ಎಲ್ಲರನ್ನೂ ಸೋದರ -ಸೋದರಿಯೆಂಬ ಮನದಾಳದ ಭಾವದಿಂದ ಐಡೆಂಟಿಫ಼ೈ ಮಾಡಲೂ ಆಗೋಲ್ಲ. ಅಂತಹಾ ಒಂದು ಫ಼ೀಲಿಂಗಿಗೆ ಹೃದಯಕ್ಕೆ ಸಂಬಂಧಿಸಿದ ಸೆಳೆತ ಬೇಕು, ಆತ್ಮೀಯ ಬೆಸುಗೆ ಬೇಕು, ಬರಹಗಳಲ್ಲಿದ್ದಂತೆ ನಿಜ ಬದುಕಿನಲ್ಲೂ ಹಾಗೆಯೇ ಇದ್ದಾನೆಯೇ ಎಂಬ ಪ್ರಾಮಾಣಿಕತೆಯ ಭರವಸೆ ಬೇಕು. ಅದೆಲ್ಲಾ ಒತ್ತಟ್ಟಿಗಿರಲಿ. ನನ್ನಂತಹಾ ಅಂತರ್ಮುಖಿಯಲ್ಲಿ ಇವರೆಲ್ಲಾ ಅದೇನನ್ನು ಕಂಡರೋ ಗೊತ್ತಿಲ್ಲ. ಸ್ನೇಹಿತರ ಲಿಸ್ಟ್ ನಲ್ಲಿರುವ ಕೆಲವರು ಅಣ್ಣಾ ಎಂದೇ ಬಾಯಿತುಂಬಾ ಕರೆಯುತ್ತಾರೆ. ಇದರಲ್ಲಿ ಗಂಡು ಹೆಣ್ಣು ಎಂಬ ಭೇಧವಿಲ್ಲ. ಈಗ ಫ಼ೇಸ್ ಬುಕ್ ಕೊಟ್ಟ ತಂಗಿ ಹೆಡ್ ಲೈನ್ ಆಗಿರೋದ್ರಿಂದ ಸಹೋದರಿಯರ ಬಗೆಗೆ ಸ್ವಲ್ಪ ಗಮನ ಹರಿಸೋಣ.
ಅವರಲ್ಲಿ …
ಶ್ರೀಮತಿ ಮಾಧುರಿ ಕುಲಕರ್ಣಿ, ಪವಿತ್ರನಾಗ್, ಉಷಾರವಿ, ಮಂದಸ್ಮಿತೆ ( ಶೀಲಾ ), ಅರ್ಚನಾ ಜಯರಾಂ, ಜಯಂತಿ… ಮತ್ತಿತರರು.ಮಾಧುರಿಯವರಂತೂ ತಾವೇ ಸ್ವತಃ ಒಬ್ಬ ಅದ್ಭುತ ಬರಹಗಾರ್ತಿಯಾಗಿ ನನ್ನ ಬರಹಗಳನ್ನು ಓದಿ ಅದೆಷ್ಟು ಖುಷಿ ಪಡುತ್ತಾರೆ, ಅದೆಂತಹ ನಿರ್ಮಲ ಮನಸಿನ ಅಕ್ಕರೆ ತೋರುತ್ತಾರೆಂದರೆ ನನಗೇ ಮುಜುಗರವಾಗುವಷ್ಟು. ನನ್ನೆಲ್ಲಾ ಬರಹಗಳಿಗೂ ಮನದಾಳದಿಂದ ” ಪ್ರಕಾಶ್ ಭಾಯ್ ” ಎಂದೇ ಆತ್ಮೀಯತೆ ತೋರುತ್ತಾರೆ. ಅವರ ಯಜಮಾನರಾದ ಗುರುರಾಜ್ ಸರ್ ಕೂಡಾ ಅಷ್ಟೇ. ಪರಿಪೂರ್ಣ ಜೆಂಟಲ್ ಮ್ಯಾನ್. ಇವರು ನನಗೆ ಫ಼ೇಸ್ ಬುಕ್ ಕೊಟ್ಟ ಮೊದಲ ಸಹೋದರಿಯೆನ್ನಲೇ ?
ಹಾಗೆಯೇ ಉಷಾರವಿಯವರು ತಮ್ಮ ಒಂದು ಪೋಸ್ಟ್ ನಲ್ಲಿ ಮೈ ತುಂಬಾ ಸೀರೆ, ಮುಡಿಗೆ ಹೂ, ಕೆನ್ನೆಗೆ ಅರಿಷಿಣ, ಹಣೆಗೆ ಕುಂಕುಮ ಹೀಗೆ… ಅಪ್ಪಟ ಕನ್ನಡದ ಹೆಣ್ಣುಮಗಳಂತಿದ್ದ ಅವರ ಫೋಟೋ ನೋಡಿ…ನನಗೆ ತಕ್ಷಣವೇ ಈಕೆಯನ್ನು ಮನಸಾರೆ ತಂಗಿ ಎಂದೇ ಕರೆಯಬೇಕೆನಿಸಿತು. ಅದೇಕೋ ಗೊತ್ತಿಲ್ಲ ಕಂಡಕೂಡಲೇ ತಂಗಿಯೆಂಬ ಭಾವ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಆದ್ಯಾತ್ಮ ಕುರಿತಾದ ಇವರ ಬರಹಗಳು ತುಂಬಾ ವಿಚಾರಪೂರ್ಣ ವಾಗಿರುತ್ತವೆ. ಉಷಾ ನಾನೇ ಕಂಡುಕೊಂಡ ಸುಶಿಕ್ಷಿತ ಹಾಗೂ ವಿವೇಕವುಳ್ಳ ತಂಗಿ.
ಉಷಾರ ಸಹೋದರಿ ಪವಿತ್ರಾ ಕೂಡಾ ಅಷ್ಟೇ. ನೇರ ಹಾಗೂ ದಿಟ್ಟ ಹೆಣ್ಣುಮಗಳು. ವಿದ್ಯಾವಂತೆ ಜ್ಞಾನವಂತೆ.. ಎಲ್ಲಕ್ಕಿಂತ ಮಿಗಿಲಾಗಿ ಅನಿಸಿದ್ದನ್ನು ಧೈರ್ಯವಾಗಿ ಹೇಳಿಕೊಳ್ಳುವ ಬೋಲ್ಡ್ ನೆಸ್ ಇವರಲ್ಲಿದೆ. ಈಕೆಯನ್ನು ನೋಡಿದಾಗಲೂ ಒಬ್ಬ ತಂಗಿಯನ್ನು ನೋಡಿದಂತೆಯೇ ಮನದಲ್ಲಿ ಅನಿಸಿತು. ಇವರ ಬರಹಗಳೂ ಸಹ ಅದ್ಭುತ ಹಾಗೂ ವೈಶಿಷ್ಟ್ಯ ಪೂರ್ಣ. ಪವಿತ್ರಾ ನನ್ನ ದಿಟ್ಟ ತಂಗಿ.
ಅರ್ಚನಾ ನನಗೆ ದೂರದ ಸಂಬಂಧಿಯಾದರೂ ನಾವು ಭೇಟಿಯಾಗಿದ್ದು ಕಡಿಮೆ. ನನ್ನ ಕೆಲ ಬರಹಗಳಿಗೆ ಅವರು ಅಣ್ಣಾ ಎಂದೇ ಸ್ಪಂದಿಸುವ ಬಗೆ ನೋಡಿದಾಗ ಅವರಲ್ಲಿನ ಸೋದರತ್ವಕ್ಕೆ ಶರಣಾದೆ. ಅವರಲ್ಲಿ ಒಬ್ಬ ನಿರ್ಮಲಂತಃಕರಣದ ಸಹೋದರಿಯನ್ನು ಕಂಡೆ. ಮೊನ್ನೆಯಷ್ಟೇ ಮಗಳ ನಿಶ್ಚಿತಾರ್ಥ ಪೂರೈಸಿ ಖುಷಿಯಾಗಿರುವ ಅರ್ಚನಾ ನಿಮಗೆ ಎಲ್ಲವೂ ಒಳ್ಳೆಯದಾಗಲಮ್ಮಾ.
ಇನ್ನು, ಮಂದಸ್ಮಿತೆ ಎನ್ನುವ ಮುದ್ದಾದ ಹುಡುಗಿ ನನ್ನ ಬರಹಗಳಿಗೆ ಆಗಾಗ್ಗೆ ಲೈಕು -ಕಾಮೆಂಟು ಹಾಕುತ್ತಿದ್ದರು. ಮುದ್ದು ಮುದ್ದಾಗಿರೋ ಈ ಹುಡುಗಿ ಹೆಸರಿಗೆ ತಕ್ಕಂತೆ ಮಂದಸ್ಮಿತೆಯೇ. ಒಬ್ಬ ಸಶಕ್ತ ಬರಹಗಾರ್ತಿ. ಇವರ ಭಾವಚಿತ್ರ ನೋಡಿದಾಗ, ಅಮುಲ್ ಬೇಬಿಯಂತೆ ಕ್ಯೂಟ್ ಆಗಿರುವ ಪುಟ್ಟ ತಂಗಿಯ ಪಟವನ್ನು ನೋಡಿದಂತಹ ಅನುಭವ. ಒಮ್ಮೆ ಇವರೇ ನನಗೆ ” ನಿಮ್ಮನ್ನು ಅಣ್ಣಾ ಎಂದು ಕರೆಯಲೇ ” ಎಂದು ಮೆಸೇಜ್ ಮಾಡಿ ಕೇಳಿದಾಗ ನಿಜಕ್ಕೂ ಹೃದಯ ತುಂಬಿ ಬಂತು. ಈಕೆಯ ಸ್ನಿಗ್ಧ ಮುಗುಳ್ನಗೆಯನ್ನು ನೋಡಿದರೆ ಅದನ್ನು ನನಗೂ ಸ್ವಲ್ಪ ಸಾಲ ಕೊಡಮ್ಮಾ ಎನಿಸಿಬಿಡುತ್ತದೆ. ಅಂದಿನಿಂದ ಶೀಲಾ ನನ್ನ ಮುದ್ದಿನ ತಂಗಿಯಾಗಿದ್ದಾರೆ. ಇವರ ಬರಹಗಳಲ್ಲಿ ಒಂದು ತೆರನಾದ ಫ಼ೋರ್ಸ್ ಹಾಗೂ ಸಾಮಾಜಿಕ ಪ್ರಜ್ಞೆ ಇರುತ್ತದೆ.
ಈಗ ಕೊಪ್ಪಳದಲ್ಲಿರುವ ನಮ್ಮೂರಿನವರೇ ಆದ ಜಯಂತಿಯವರನ್ನು ನಾನು ಎಂದೂ ನೋಡೇ ಇಲ್ಲ. ಆದರೆ ಇವರು ನನ್ನ ಪದ್ದು ಫ಼್ರೆಂಡ್ ಎಂದು ಗೊತ್ತಾಯ್ತು. ಅವರೂ ಸಹ ನನ್ನನ್ನು ಅಣ್ಣಾ ಎಂದೇ ಕರೆಯುವುದು ಖುಷಿಯಾದ ಸಂಗತಿ.
ಮುಖ ಪುಸ್ತಕದಲ್ಲಿ ಹಲವರು ನನ್ನನ್ನು ಅಣ್ಣಾ ಎಂದೇ ಕರೆಯುತ್ತಾರೆ. ನಮ್ಮಮ್ಮನಿಗೆ ನಾನು ಐದನೆಯ ಹಾಗೂ ಕೊನೆಯ ಮಗ. ಹೀಗಾಗಿ ಬೆನ್ನ ಹಿಂದೆ ತಂಗಿ ಅಂತ ಇರದಿದ್ದರೂ ನನ್ನ ಚಿಕ್ಕಮ್ಮನ ಮಕ್ಕಳೇ ನನ್ನ ಸ್ವಂತ ತಂಗಿಯರಂತೆ ಇದ್ದಾರೆ . ಅದು ಕುಟುಂಬದ ವಿಷಯವಾಯಿತು. ಆದರೆ ಈ ಫ಼ೇಸ್ ಬುಕ್ಕಿನಿಂದ ನನಗೆ ಈ ರೀತಿಯ ನಾಲ್ಕಾರು ತಂಗಿಯರು ಸಿಕ್ಕಿದ್ದು ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.
ನಿಮ್ಮೆಲ್ಲರ ಪ್ರೀತಿಗೆ ಹೃದಯಾಳದ ನಮನಗಳು.
ಕೇವಲ ತಂಗಿಯರು ಮಾತ್ರವಲ್ಲ…! ಫ಼ೇಸ್ ಬುಕ್ ಕೊಟ್ಟ ತಮ್ಮಂದಿರೂ ಸಹ ಸಾಕಷ್ಟಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಕೃತಜ್ಞತೆ ಅರ್ಪಿಸುತ್ತೇನೆ. ಅದರಲ್ಲಿ ನಮ್ಮೂರಿನವರೇ ಆದ ಬಹುತೇಕ ಸಹೋದರರು ಇದ್ದಾರೆ. ಅವರೆಲ್ಲರ ಬಗೆಗೆ ಇನ್ನೊಂದು ಬರಹದಲ್ಲಿ ಪ್ರಸ್ತಾಪಿಸುವೆ.
** ಮರೆಯುವ ಮುನ್ನ **
ಅಸಲಿಗೆ ಸಾಮಾಜಿಕ ಜಾಲತಾಣಗಳಿರುವುದೇ ಮನುಷ್ಯರ ನಡುವಿನ ಆತ್ಮೀಯ ಬಂಧವನ್ನು ಬೆಳೆಸಲು. ಎಲ್ಲರ ಬದುಕಿನಲ್ಲಿನ ಒರತೆ ಕೊರತೆಗಳನ್ನು, ಏಕತಾನತೆಯ ನಿಸ್ಸತ್ವವನ್ನು ಹೋಗಲಾಡಿಸಿ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಇದು ಟಾನಿಕ್‌ನಂತೆ ಕೆಲಸ ಮಾಡಬಲ್ಲದು. ಇದರಿಂದ ಹಲವರಿಗೆ ಪ್ರಯೋಜನವೂ ಆಗಬಹುದು ಅಥವಾ ಇದರ ದುರುಪಯೋಗ ಇಲ್ಲವೇ ಅತೀ ಉಪಯೋಗವಾದಲ್ಲಿ ನಿರಾಶೆಯೂ ಆಗಬಲ್ಲದು. ನಾವು ಇದಕ್ಕೆಎಷ್ಟರಮಟ್ಟಿಗೆ, ಯಾವ ರೂಪದಲ್ಲಿ ಅಂಟಿಕೊಂಡಿದ್ದೇವೆಂಬುದರ ಮೇಲೆ ನಮ್ಮ ನೋವು ನಿರಾಶೆಗಳ ಮಟ್ಟ ನಿಂತಿರುತ್ತದೆ.
ಆದರೆ ನನ್ನ ಅನುಭವದಲ್ಲಿ ಇಲ್ಲಿ ಕಳೆದುಕೊಂಡಿದ್ದಕ್ಕಿಂತ ಪಡೆದದ್ದೇ ಹೆಚ್ಚು. ಫ಼ೇಸ್ ಬುಕ್ ನನಗೆ ನನ್ನನ್ನು ಅಣ್ಣಾ ಎಂದು ಕರೆಯುವ ಅನೇಕ ಹೃನ್ಮನಗಳನ್ನು ತಂದುಕೊಟ್ಟಿದೆ, ಸಹೃದಯ ಸ್ನೇಹಿತರನ್ನೂ ಸಂಪಾದಿಸಿ ಕೊಟ್ಟಿದೆ, ಮನದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಟ್ಟಿದೆ. ಇನ್ನೇನು ಬೇಕು ? ಫ಼ೇಸ್ ಬುಕ್ ಸ್ನೇಹ ಸಂಬಂಧಗಳು ಫ಼ೇಕು ಎನ್ನುವವರೂ ಇದ್ದಾರೆ. ಇದ್ದರೂ ಇರಬಹುದು. ಎಲ್ಲವೂ ಅವರವರ ಅನುಭವ ಮತ್ತು ಅನುಭಾವ.
ಯಾವುದು ಹೇಗೇ ಇರಲಿ, ಡಾ. ರಾಜ್ ರ ” ದೇವರು ಕೊಟ್ಟ ತಂಗಿ” ಸಿನಿಮಾ ನೋಡಿದ ಮೇಲೆ ನನಗೆ ಫ಼ೇಸ್ ಬುಕ್ ಕೊಟ್ಟ ತಂಗಿಯರ ಬಗೆಗೆ ನಾಲ್ಕು ಸಾಲುಗಳನ್ನು ಪ್ರಾಮಾಣಿಕವಾಗಿ ಬರೆಯಬೇಕೆನಿಸಿತು.
ಅದನ್ನು ಎಂದಿನಂತೆ ಮನಸಿಗೂ ನಾಲಿಗೆಗೂ ನಡುವೆ ಫ಼ಿಲ್ಟರ್ ಇಲ್ಲದೇ ಮುಕ್ತವಾಗಿ ಹೊರಹಾಕುವ ಚಿಕ್ಕ ಯತ್ನ ಮಾಡಿದ್ದೇನೆ. ನನ್ನೆಲ್ಲಾ ಫ಼ೇಸ್ ಬುಕ್ ಸಹೋದರ- ಸಹೋದರಿಯರೆಲ್ಲರಿಗೂ ಒಳ್ಳೆಯದಾಗಲಿ.
- ಹಿರಿಯೂರು ಪ್ರಕಾಶ್