ಉತ್ತಮ ಆರೋಗ್ಯಕ್ಕೆ ಹಲವಾರು ಮಾರ್ಗಗಳು, ಅವುಗಳಲ್ಲಿ ನಿಮ್ಮ ಸ್ವಲ್ಪ ಸಮಯವನ್ನು ಬಾಲ್ಯದ ಸ್ನೇಹಿತರಿಗೆ ಮೀಸಲಿಡಿ, ಹಳೆಯ ನೆನಪುಗಳು ನಮ್ಮ ಆರೋಗ್ಯವನ್ನು ಚನ್ನಾಗಿ ಇಡಲು ಸಹಾಯವಾಗಿಸುತ್ತದೆ, ಬಿ.ಆರ್.ಯಶಸ್ವಿನಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ …
ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲ್ಲಬಾರದೇ?
ಎರಡು ನೆರಳೇಕೆ ನಾವಿಬ್ಬರು ಒಂದೇ
ಎಂದು ಹೇಳಿದ್ದು ಮರೆತಿರುವೇಕೆ?
ನೀ ಟೂ ಬಿಟ್ಟಾಗ ನಿನ್ನಿಂದೆ
ನಾ ಸುತ್ತಾಡಿದ್ದು ನೆನಪಿಲ್ಲವೇ?
ಇಷ್ಟೊಂದು ಒಲವಲ್ಲಿ ಕೇಳುತ್ತಿರುವೇ
ನೀನೆಲ್ಲಿ ಕಳೆದೋಗಿರುವೇ?
ಎರಡು ಕಂಗಳಲಿ ನೋಡಿದ ನಮ್ಮ
ಚಂದದ ಪ್ರಪಂಚ ನಿನಗಾಗಿ ಎದುರು ನೋಡಿದೆ
ಎಲ್ಲ ಕೆಲಸಗಳನ್ನೂ ಮರೆತು ಬರುವೇಯಾ
ಸ್ನೇಹ ಸಮ್ಮಿಲನಕ್ಕೆ…
ಹೌದಲ್ವಾ… ಸ್ನೇಹ ಅಂದ್ರೆನೇ ಹಾಗೆ. ತುಸು ಕೋಪ, ಜಾಸ್ತಿ ಖುಷಿ,, ಆ ಬಾಲ್ಯದ ಸೊಬಗೇ ಅದ್ಭುತ. ಎರಡು ಜಡೆಯನ್ನು ಹಾಕಿಕೊಂಡು ಕೈ ಕೈ ಹಿಡಿದುಕೊಂಡು ಹೋಗುವಾಗಿನ ಖುಷಿ ದೊಡ್ಡವರಾದ ಮೇಲೆ ಎಲ್ಲಾ ಮರೀಚಿಕೆ ಆಗಿಬಿಡುತ್ತದೆ. ಹೆಗಲ ಮೇಲೊಂದು ಕೈಹಾಕಿ, ಮತ್ತೊಂದು ಕೈ ಜೇಬಿನೊಳಗಿದ್ದ ಚಾಕಲೇಟ್ ಯಾವಾಗ ಹೊರ ತೆಗೆಯೋಣ ಅಂತ ಯೋಚಿಸುತ್ತಾ ಚಾಕಲೇಟ್ ಕವರನ್ನು ಶಬ್ದ ಮಾಡಿದಾಗ ನನಗೆ ಕೊಡದಂತೆ ನಿನ್ನೊಬ್ಬನೇ ತಿನ್ನುತ್ತೀಯಾ ಅಂತ ಸಣ್ಣ ಸಣ್ಣ ಕಿತ್ತಾಟ, ಆಡಿದ ಕಿತ್ತಾಟವನ್ನು ದೂರ ಮಾಡಲು ಬೈ ಟು ಚಾಕಲೇಟ್ ಮಾಡೋದು ಎಂಥಾ ಚಂದ ಅಲ್ವಾ.
ಈಗೆಲ್ಲಾ ಕಳೆದು ಹೋದ ಬಾಲ್ಯದ ನೆನಪು ಸಿಗುವುದು ದೊಡ್ಡವರಾದ ಮೇಲೆ ಒಬ್ಬರಿಗೊಬ್ಬರು ಸಿಕ್ಕಿದಾಗ ಆಗ ಆದ ಸ್ನೇಹ ಸಮ್ಮಿಲನದಲ್ಲಿ ನೀನು ಹೇಗಿದ್ದೀಯಾ? ನೀನೇನು ಮಾಡುತ್ತಿದ್ದೀಯಾ? ಇವೆಲ್ಲವೂ ಮ್ಯಾಟರ್ ಹೊರಗೆ ಬರೋಲ್ಲ. ಬರುವುದೊಂದೇ ಆಗ ನಾವು ಹಿಂಗೆ ಮಾಡಿದ್ದು ನೆನಪಿದೇಯಾ? ನೀನು ಹಾಗೆ ಮಾಡಿ ಪೆಟ್ಟು ತಿಂದೆ ಮರೆತೋಯಿತಾ ಹೀಗೆ ಆನೇಕ ವಿಷಯಗಳದ್ದೇ ಕಾರುಬಾರು.
ಎರಡು ಜಡೆ ಹೋಗಿ ಹೇರ್ ಡೈ ಬಂದ್ಬಿಟ್ಟಿದೆ. ಸೈಕಲ್ ನಲ್ಲಿ ಹಿಂದೆ ನನ್ನ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದೆ ಈಗ ಕಾರು ತಗೊಂಡಿದ್ದೀಯಾ. ಆ ಸೈಕಲ್ ಏನ್ಮಾಡಿದೆ, ಇನ್ನೂ ಇಟ್ಕೊಂಡಿದ್ದೀಯಾ ನಮ್ಮ ಬಾಲ್ಯದ ನೆನಪಿಗಾಗಿ, ಶಾಲೆ ಪ್ರವಾಸ ಹೋದಾಗ ನೀನು ಅತ್ತಿದ್ದು, ನಕ್ಕಿದ್ದು, ಕಳೆದು ಹೋಗಿದ್ದು ಎಲ್ಲಾ ಮರೆತಿದ್ದೀಯಾ ಹೇಗೆ? ಆಟ ಆಡುವಾಗ ನೀ ಬಿದ್ದಾಗ ನಾನು ನಕ್ಕಿದ್ದೆ, ಸಾರಿ ಕಣೆ (ಮಗಾ) ಅಂತ ಸಿಕ್ಕಿದಾಗ ಕೇಳೋದು. ಬರಿ ಇಂತಹ ಬಾಲ್ಯದ ಪುರಾಣಗಳನ್ನೇ ಜಾಸ್ತಿ ಮಾತಾಡುತ್ತೇವೆ.
ಆದರೆ ಈಗೊಂದು ಬೇಜಾರ್ ಕಾಡುತ್ತೆ (ಕಣೆ,ಮಗಾ) ಅಂತ ಒಂದು ಡೈಲಾಗ್ ಬೇರೆ ಹೊರಬರುತ್ತದೆ. ಅದೇನು (ಹೇಳೆ, ಹೇಳು ಮಗಾ) ಅಂದರೆ ಈ ಮೊಬೈಲ್ ಬಂದ್ಬಿಟ್ಟು ನಮ್ಮ ಸ್ನೇಹ ಈಗ ಆಕಾಶ -ಭೂಮಿಯ ಅಂತರದಂತೆ ಆಗಿಬಿಟ್ಟಿದೆ.
ಹೌದು… ಓಡುತ್ತಿರುವ ಜಗತ್ತಿನ ಹಿಂದೆ ಅಷ್ಟೇ ವೇಗದಲ್ಲಿ ಮಾನವನು ಓಡುತ್ತಿರುವಾಗ ಈ ಸ್ನೇಹ ಎಂಬುದು ಮೊಬೈಲ್ ಬಿರುಗಾಳಿಗೆ ಸಿಲುಕಿ ತತ್ತರಿಸಿದೆ. ಸ್ಕ್ರೀನ್ ಹಾವಳಿಯಿಂದ ದೂರ ಬಂದು ಅರೇಗಳಿಗೆಯಾದರೂ ಸ್ನೇಹಿತರೊಡನೆ ಹಾಡುಹರಟೆ ಮಾಡಬೇಕೆಂದು ಮನ ಬಯಸುತ್ತದೆ.. ಆದರೆ ಸಂದರ್ಭ, ಬ್ಯೂಸಿ ಕೆಲಸಗಳ ಒತ್ತಡದ ನಡುವೆ ಸ್ನೇಹ ಸಮ್ಮಿಲನ ಕಣ್ಮರೆಯಾಗಿದೆ.
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎನ್ನುವಾಗೆ ಒಂದಿಷ್ಟು ಸಮಯವನ್ನು ಬಿಡುವು ಮಾಡಿಕೊಂಡು ನಮಗೆ ಹತ್ತಿರವಾಗಿರುವವರ ಜೊತೆ ಕಾಲ ಕಳೆಯುವುದು ಮನಸ್ಸಿಗೂ ಹಿತ ದೇಹಕ್ಕೂ ಹಿತ.
- ಬಿ.ಆರ್.ಯಶಸ್ವಿನಿ – ಕತೆಗಾರ್ತಿ
