ಪ್ರಾಣಿಗಳ ಮೇಲೆ ಪ್ರಯೋಗ: ಒಂದು ಜಿಜ್ಞಾಸೆ

ಇಲಿ, ಮೊಲಗಳಂತಹ ನಿಷ್ಪಾಪಿ ಜೀವಿಗಳ ಮೇಲೆ ಪ್ರಯೋಗಗಳನ್ನು ಮಾಡಿ ಬಂದ ಫಲಿತಾಂಶಗಳನ್ನು ಮನುಷ್ಯನಿಗೆ ಅನ್ವಯಿಸಲಾಗುತ್ತಿದೆ. ಇದು ನಿಜವಾಗಿಯೂ ಕ್ರೂರ ಕೆಲಸ. ಪ್ರಾಣಿಗಳ ಮೇಲೆ ಪ್ರಯೋಗದ ಕುರಿತು ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಹೊಸ ಔಷಧಿಗಳನ್ನು ಕಂಡು ಹಿಡಿಯಬೇಕಾದರೆ ಮೊದಲು ಇಲಿ, ಮೊಲ, ನಾಯಿ ಇತ್ಯಾದಿಗಳ ಮೇಲೆ ಪ್ರಯೋಗ ಮಾಡಿದ ನಂತರ ಅವು ಆ ಪ್ರಾಣಿಗಳಲ್ಲಿ ಪರಿಣಾಮಕಾರಿ ಎಂದು ತಿಳಿದಮೇಲೆ ಮನುಷ್ಯರ ಮೇಲೆಯೇ ಪ್ರಯೋಗ ಮಾಡುತ್ತಾರೆ. ಮನುಷ್ಯನ ಮೇಲೆಯೇ ಮಾಡಿದರೆ ಅತ್ಯಂತ ಖಚಿತ ಫಲಿತಾಂಶ ಬರುತ್ತದೆ. ಒಪ್ಪುವ ಮಾತು. ಆದರೆ ಮನುಷ್ಯನ ಮೇಲೆ ಪ್ರಯೋಗ ಮಾಡಿ ಅವನನ್ನು ವಧಿಸಿ ವಿವಿಧ ಅಂಗಗಳ ಅಂಗಛ್ಚೇದ ಮಾಡಿ ಅಧ್ಯಯನ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾರಣ ಇಲಿ ಮೊಲಗಳಂತಹ ನಿಷ್ಪಾಪಿ ಜೀವಿಗಳ ಮೇಲೆ ಪ್ರಯೋಗಗಳನ್ನು ಮಾಡಿ ಬಂದ ಫಲಿತಾಂಶಗಳನ್ನು ಮನುಷ್ಯನಿಗೆ ಅನ್ವಯಿಸಲಾಗುತ್ತಿದೆ. ಇದು ನಿಜವಾಗಿಯೂ ಕ್ರೂರ ಕೆಲಸ. ಮನುಷ್ಯನ ಲಾಲಸೆಗೆ ಪ್ರಾಣಿಗಳನ್ನು ಬಳಸುವುದು ಅತ್ಯಂತ ತಪ್ಪು. ಆದರೆ ಇದನ್ನು ನಿಯಂತ್ರಿಸಲು ಅತ್ಯಂತ ಕಠಿಣ ನಿರೂಪಿಸುವ ದಿ ಕಮಿಟಿ ಫಾರ್ ಕಂಟ್ರೋಲ್ ಅಂಡ್ ಸೂಪರ್ವಿಶನ್ ಆಫ್ ಎಕ್ಸ್ಪೆರಿಮೆಂಟ್ಸ್ ಆನ್ ಅನಿಮಲ್ಸ್ (ಸಿಸಿಎಸ್ ಸಿ ಎ), ಭಾರತ ಸರ್ಕಾರದ ಉನ್ನತ ಸಂಸ್ಥೆಯಿದೆ. ಪ್ರಾಣಿಗಳ ಮೇಲೆ ಸಂಶೋಧನೆ ಮಾಡುವ ಪ್ರತಿಯೊಂದು ಸಂಸ್ಥೆಯಲ್ಲೂ ಸಹ ಇದರ ಪ್ರತಿರೂಪವಾಗಿ ಸಾಂಸ್ಥಿಕ ಪ್ರಾಣಿ ಕಲ್ಯಾಣ ಸಮಿತಿ ಇರುತ್ತಿದ್ದು ಅದರ ನಾಮನಿರ್ದೇಶಿತ ಸದಸ್ಯರು ಅನುಮತಿ ನೀಡಿದ ನಂತರ ಅವರು ಅನುಮತಿಸಿದ ಪ್ರಾಣಿಗಳ ಸಂಖ್ಯೆಯ ಮೇಲೆ ಮಾತ್ರ ಪ್ರಯೋಗ ಮಾಡಬೇಕು. ಈ ಸಮಿತಿಯ ಸಭೆಯ ಸಭೆಯನ್ನು ಪ್ರಾಣಿಗಳ ಪ್ರಯೋಗ ಇರಲಿ ಅಥವಾ ಇಲ್ಲದಿರಲಿ ವರ್ಷಕ್ಕೆ ೨ ಬಾರಿ ಅಥವಾ ೬ ತಿಂಗಳಿಗೊಮ್ಮೆ ಕರೆದು ೧೫ ದಿನಗಳ ಮೊದಲೇ ಎಲ್ಲಾ ಪ್ರಸ್ತಾವನೆಗಳನ್ನು ಇವರಿಗೆ ಕಳಿಸಿ ನಂತರ ಸಭೆಯಲ್ಲಿ ಅನುಮೋದನೆಯಾದ ನಂತರ ದೊಡ್ಡ ಪ್ರಾಣಿಗಳ ಪ್ರಯೋಗವನ್ನು ನವದೆಹಲಿಗೆ ಕಳಿಸಿ ಅನುಮತಿ ಪಡೆಯಬೇಕು. ಈ ಕಾರಣದಿಂದ ದನ, ಎಮ್ಮೆ, ಕುರಿ, ಹಂದಿ ಇತ್ಯಾದಿಗಳ ಮೇಲೆ ಭಾರತದಲ್ಲಿ ಸಂಶೋಧನೆ ನಿಂತು ೧೦ ವರ್ಷಗಳ ಮೇಲಾದವು.

ಫೋಟೋ ಕೃಪೆ : ಅಂತರ್ಜಾಲ

ಮೊದಲೇ ಸಂಶೋಧನೆ ಎಂದರೆ ನಮ್ಮವರಿಗೆ ಅಲರ್ಜಿ. ಸಂಶೋಧನ ದುಬಾರಿ ಸಹಾ. ಇನ್ನು ಕಾನೂನಿನ ನೆಪ ಹೇಳಿ ಯಾರೂ ದನ, ಎಮ್ಮೆ, ಕುರಿ, ಆಡುಗಳ ಮೇಲೆ ಪ್ರಯೋಗವನ್ನೇ ಮಾಡುವುದಿಲ್ಲ. ಪರಿಣಾಮ? ನಮ್ಮ ಅಗತ್ಯಕ್ಕೆ ತಕ್ಕ ಯಾವುದೂ ಸಂಶೋಧನೆಯಾಗುವುದಿಲ್ಲ. ಇನ್ನು ನಾಯಿಗಳ ಮೇಲೆ ಸಂಶೋಧನೆ ಮಾಡಲು ಅತ್ಯಂತ ಕಠಿಣ ನಿಯಮಗಳಿವೆ. ಅವುಗಳ ಮೇಲೆ ಮಾತ್ರ ಬೇರೆ ದೇಶದಲ್ಲಿ ಉತ್ತಮ ಸಂಶೋಧನೆಯಾಗುವುದರಿಂದ ಅದನ್ನೇ ಎರವಲು ಪಡೆಯಬಹುದು.

ನಮ್ಮ ದೇಶದಲ್ಲಿ ಪಶುರೋಗಗಳನ್ನು ಪತ್ತೆ ಮಾಡಲು, ವಿಷಬಾಧೆಯನ್ನು ಪತ್ತೆ ಮಾಡಲು ಪ್ರಯೋಗಕ್ಕೆ ಕೆಲವೇ ಕೆಲವು ಪ್ರಾಣಿಗಳನ್ನು ಬಳಸಲು ಅವುಗಳ ಜೀವಹರಣ ಮಾಡಿ ಅಂಗಾಂಗಗಳ ಪರೀಕ್ಷೆ ಮಾಡುವುದು ಅತ್ಯಂತ ಕಷ್ಟದ ಕೆಲಸ. ಪ್ರಾಣಿಪ್ರಿಯರ ಅತಿಪ್ರಾಣಿ ಪ್ರೇಮದಿಂದ ಹೊಸ ಕಾಯಿಲೆ ಬಂದಾಗ ಅವುಗಳಿಗೆ ಸೂಕ್ತ ಔಷಧಿ ಪತ್ತೆ ಮಾಡಲು ಪ್ರಾಣಿಗಳನ್ನು ಬಳಸಲು ಅತ್ಯಂತ ಕಠಿಣ ನಿಯಮಗಳಿರುವುದರಿಂದ ಮತ್ತು ಕಟ್ಟಬೇಕಾದ ಶುಲ್ಕವೂ ಸಹ ದುಬಾರಿಯಾಗಿರುವುದರಿಂದ ರೋಗ ಪತ್ತೆ ಮಾಡಲು ಸಾಧ್ಯವಿಲ್ಲದೇ ತೊಂದರೆಗೊಳಪಡುವುದು ಪಶುಗಳೇ.

ಭಾರತದಲ್ಲಿ ಕಳೆದ ೧೦೦೦ ವರ್ಷಗಳಿಂದ ಯಾವುದೇ ಹೊಸ ವೈಜ್ಞಾನಿಕ ಆವಿಷ್ಕಾರ ನಡೆದಿಲ್ಲ !

ಇದು ಕಹಿ ಸತ್ಯ. ಈ ಕಾರಣದಿಂದ ಚರ್ಮಗಂಟು ಕಾಯಿಲೆ, ವಿವಿಧ ಹೊಸ ವಿಷಗುಣವನ್ನು ಪ್ರಾಣಿಗಳ ಮೇಲೆ ಅಧ್ಯಯನ ಮಾಡಲು ಸಾಧ್ಯವೇ ಇರದಂತೆ ಪರಿಸ್ಥಿತಿ ಒದಗಿ ಈವಾರೆಗೂ ಸಹ ಚರ್ಮಗಂಟು ಕಾಯಿಲೆಗೆ ಹೊಸ ಲಸಿಕೆ ಅಥವಾ ಔಷಧಿ ಕಂಡು ಹಿಡಿಯಲು ನಮಗೆ ಸಾಧ್ಯವಾಗಿಲ್ಲ. ಒಂದೇ ಒಂದು ಹೆಚ್ಚಿನ ಪ್ರಾಣಿಯನ್ನು ಪ್ರಯೋಗಕ್ಕೆ ಬಳಸಿದರೆ ಪ್ರಾಣಿಪ್ರಿಯರು ಆರ್ಭಟಿಸಿ ಬೊಬ್ಬಿರಿಯುತ್ತಾರೆ.

ಮನುಷ್ಯನ ಔಷಧಿಗಳನ್ನು ಕಂಡು ಹಿಡಿಯಲು ಮನುಷ್ಯನ ಮೇಲೆಯೇ ಪ್ರಯೋಗ ಮಾಡಿ ಆತನನ್ನು ವಧಿಸಿ ಅಂಗಗಳನ್ನು ಮತ್ತು ರಕ್ತಸಾರ ಇತ್ಯಾದಿಗಳನ್ನು ಸಂಗ್ರಹಿಸಿ ಪ್ರಯೋಗ ಫಲಿತಾಂಶವನ್ನು ಮಾಡಲು ಕಾನೂನಿನ ಬದಲಾವಣೆ ಆಗಬೇಕು. ಸದ್ಯಕ್ಕೆ ಆತನ ಜೀವಕ್ಕೆ ತೊಂದರೆಯಾಗದ ಕ್ಲಿನಿಕಲ್ ಪ್ರಯೋಗಗಳು ಮಾತ್ರ ನಡೆಯುತ್ತಿವೆ. ಮನುಷ್ಯರ ಮೇಲೆಯೂ ಸಹ ಅವರ ಒಳಿತೆಗೆಂದು ಕಂಡು ಹಿಡಿಯುವ ಪ್ರಯೋಗಕ್ಕೆ ಅವರನ್ನೇ ಬಳಸಿ ಪ್ರಾಣಿಗಳಂತೆ ವಧಿಸುವ ಬಗ್ಗೆ ಕಾನೂನನ್ನು ತಂದಲ್ಲಿ ಅನೇಕ ಪ್ರಾಣಿಪ್ರಿಯರು ಬೆಂಬಲಿಸಬಹುದು.

ಒಂದು ವಿಷಯ ತಿಳಿಯಿರಿ. ಪ್ರಾಣಿ ಸಂಕುಲದಲ್ಲಿ ಮನುಷ್ಯ ಅತ್ಯಂತ ತುತ್ತತುದಿಯಲ್ಲಿದ್ದು ಇತರ ಪ್ರಾಣಿಗಳ ಜೀವನದ ಬಗ್ಗೆ ತೀರ್ಮಾನಿಸುವ ಅಧಿಕಾರ ಆತ ಹೊಂದಿದ್ದಾನೆ. ಬಲಶಾಲಿಯದೇ ಬದುಕು ಎಂಬ ಕಾಡಿನ ನ್ಯಾಯವು ಇಲ್ಲಿಯೂ ಸಹ ಅನ್ವಯವಾಗುವುದಾದರೆ ಮಾನವ ಸಹಾ ಒಂದು ಬುದ್ಧಿವಂತ ಪ್ರಾಣಿ. ಆತನ ಒಳಿತಿಗೆ ಆತ ಯಾವ ಪ್ರಾಣಿಯನ್ನಾದರೂ ಸಹ ಹಿಂಸಿಸಬಲ್ಲ.

ಇದರ ಮತ್ತೊಂದು ಮತ್ತೊಂದು ಆಯಾಮವಿದೆ. ಮನುಷ್ಯರು ಮಾಂಸಕ್ಕೆಂದು ಸಾಕುವ ಆಡು, ಕುರಿ, ಕೋಳಿ, ಹಂದಿ, ದನ, ಎಮ್ಮೆ ಇವುಗಳೂ ಪ್ರಾಣಿಗಳಲ್ಲವೇ? ಇವುಗಳನ್ನೂ ಅಮಾನವೀಯವಾಗಿ ಹೇಗೆ ಬೇಕೆಂದ ಹಾಗೆ ನಿಯಮಬಾಹೀರವಾಗಿ ವಧಿಸುವರಲ್ಲವೇ? ಅವುಗಳಿಗೆ ಜೀವ ಇಲ್ಲವೇ? ಬದುಕುವ ಹಕ್ಕು ಇಲ್ಲವೇ? ಹೋಗಲಿ ನೊವಿಲ್ಲದೇ ಸಾಯುವ ಹಕ್ಕು ಇಲ್ಲವೇ? ಇಲಿ ಮೊಲಗಳಂತಹ ನಿಷ್ಪಾಪಿ ಜೀವಿಗಳ ಮೇಲಿರುವ ಕರುಣೆ ಇವುಗಳ ಮೇಲೆ ನಿಮಗೇಕೆ ಇಲ್ಲ? ಹೋಗಲಿ, ಗೋವುಗಳನ್ನು ಮಾತ್ರ ಹತ್ಯೆ ಮಾಡಬಾರದು ಎಂಬ ನಿಯಮವಿದೆ. ಎಮ್ಮೆಗಳನ್ನು ೧೩ ವರ್ಷಗಳ ನಂತರ ವಧಿಸಬಹುದು. ಒಂದು ಜೀವವೆಂದು ಪರಿಗಣಿಸಿದರೆ ಎಮ್ಮೆ ಯಾವುದರಲ್ಲಿ ಆಕಳಿಗಿಂತ ಕೀಳು? ಪಶುವೈದ್ಯರಾಗಿ ನೀವೇ ತಿಳಿಸಿ. ಇದು ಪ್ರಾಣಿಗಳಲ್ಲಿಯೂ ಸಹ ಮಾಡುವ ಜಾತಿ ಬೇಧವಲ್ಲವೇ? ಒಂದನ್ನು ವಧಿಸಿದರೆ ಅದು ಪಾಪ. ಮತ್ತೊಂದು ಆಹಾರ.. ಇದು ಯಾವ ನ್ಯಾಯ? ಒಂದು ಪ್ರಾಣಿಗೆ ನೋವು, ಇನ್ನೊಂದು ಪ್ರಾಣಿಗೆ ಬದುಕುವ ಹಕ್ಕೇ ಇಲ್ಲ. ಹೋಗಲಿ, ನೋವಿಲ್ಲದೇ ಸಾಯುವ ಹಕ್ಕೂ ಇಲ್ಲವೇ?

ಫೋಟೋ ಕೃಪೆ : ಅಂತರ್ಜಾಲ

ಏನು ಸಮಸ್ಯೆ?

ಭಾರತದಲ್ಲಿ ಏನು ಸಮಸ್ಯೆ ಬಂದರೂ ಅದನ್ನು ಅತಿರೇಕಕ್ಕೆ ಒಯ್ದು ಅದಕ್ಕೊಂದು ಕಠಿಣ ಕಾನೂನು ಮಾಡುವ ವಿಧಾನವಿದೆ. ಆದರೆ ಇದರ ಮತ್ತೊಂದು ಮುಖವನ್ನೂ ಸಹ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಕಾಡುಪ್ರಾಣಿಗಳಾದ ಮಂಗ, ಕಾಡು ಹಂದಿ ಇವೆಲ್ಲಾ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಬರುವುದರಿಂದ ಇವುಗಳು ರೈತರು ಇಡೀ ವರ್ಷ ಬೆಳೆದ ಬೆಳೆಯನ್ನು ಒಂದು ಗಂಟೆಯಲ್ಲಿ ನಾಮಾವಶೇಷ ಮಾಡಿದರೂ ಸಹ ಅವುಗಳ ನಿಯಂತ್ರಣ ಮಾಡಲಾಗದ ಅಸಹಾಯಕ ಹಂತಕ್ಕೆ ತಲುಪಿದ್ದೇವೆ.

ವನ್ಯಜೀವಿಗಳೆಂಬ ವಿಐಪಿ ಪ್ರಾಣಿಗಳು !

ಇನ್ನು ವನ್ಯ ಜೀವಿಗಳ ಹೆಸರೇ ಹೇಳಲು ಸಾಧ್ಯವಿಲ್ಲ. “ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದ ತಕ್ಷಣ ನೀರು ಬರುತ್ತದೆ. ನಮ್ಮ ನಲ್ಲಿಯಲ್ಲಿ ನೀರು ಬರಬೇಕು ಎಂದರೆ, ದೂರದ ಕಾಡಿನಲ್ಲಿ ಹುಲಿ ಇರಬೇಕುಎನ್ನುವ ಹುಲಿಪ್ರಿಯರು ವಾಟ್ಸಪ್ ವಿಶ್ವವಿದ್ಯಾಲಯದ ಮೂಲಕ ಸಂಶೋಧನೆ ಮಾಡಿ ಅಂದಾಜಿಗೆ ಕಂಡು ಹಿಡಿದ ಘನ ಸಂಶೋಧನೆ. ನಿಜವಾಗಿ ಹೇಳಬೇಕೆಂದರೆ ಅವುಗಳಿಗೆ ಖರ್ಚು ಮಾಡುವ ಸಾರ್ವಜನಿಕ ತೆರಿಗೆ ಹಣಕ್ಕೆ ಹೋಲಿಸಿದಾಗ ಎಂತೆಂಥ ಸತ್ಯಗಳಿವೆ ಎಂಬುದು ಅರ್ಥವಾಗುತ್ತದೆ. ಹುಲಿ ಆಧಾರಿತ ಪ್ರವಾಸೋಧ್ಯಮದಿಂದ ಅವುಗಳ ಸ್ವಯಂ ನಿರ್ವಹಣೆ ಆಗುತ್ತಿದ್ದರೆ ಅಥವಾ ಸಾರ್ವಜನಿಕ ತೆರಿಗೆಯ ಬಿಡಿಕಾಸು ಖರ್ಚಾಗದೇ ಸ್ವಂತ ಅನುದಾನದಲ್ಲಿ ಹುಲಿಗಳ ಪಾಲನೆ ಮತ್ತು ಪೋಷಣೆ, ಸಂರಕ್ಷಣೆ ನಡೆಯುತ್ತಿದೆ ಎಂದರೆ ಸಾರ್ವಜನಿಕರು ಕೇಳಲು ಹಕ್ಕು ಹೊಂದಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಖರ್ಚು ಮಾಡಿದಾಗ ಅದಕ್ಕೆ ಉತ್ತರದಾಯಿತ್ವದ ನಿರೀಕ್ಷೆ ಸಹಜ.

ನಾನೊಮ್ಮೆ ಫೇಸ್ಬುಕ್ಕಿನಲ್ಲಿ ಭಾರತದ ಆರ್ಥಿಕತೆಗೆ ಆರ್ಥಿಕತೆಗೆ ಹುಲಿಗಳ ಕೊಡುಗೆ ಶೂನ್ಯ ಎಂದು ಲೇಖನ ಬರೆದಿದ್ದೆ. ಆಗ ಪರಿಸರವಾದಿಗಳಿಗೆ ಭಯಂಕರ ಕೋಪ ಬಂದು ಎಂದಿನಂತೆ ಸಹಸ್ರನಾಮ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಹುಲಿಗಳು ಸಾರ್ವಜನಿಕ ಹಣವನ್ನು ಹೀರುವ ಬಿಳಿಯಾನೆಗಳೋ ಅಥವಾ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಪ್ರಕೃತಿಯ ಸಮತೋಲನ ಜೀವ ವೈವಿಧ್ಯ, ಆಹಾರ ಸರಪಳಿ ಇತ್ಯಾದಿಗಳಿಗೆ ನೀಡಿರುವ ಕೊಡುಗೆಯ ಕಡೆಗಣನೆ ಆಗುತ್ತಿದೆಯೇ ಎಂಬ ಬಗ್ಗೆ ವಾಸ್ತವಿಕತೆಯ ಜಿಜ್ಞಾಸೆ ಆಗಬೇಕು.

ಸಾರ್ವಜನಿಕರು ಮುಂದಿಡುವ ಪ್ರಶ್ನೆಗಳಿಗೆ ಉತ್ತರಿಸಿದರೇ ಹೋಗುವುದು ನಿರುಂಕುಶ ಮನೋಭಾವ. ಕಾಡು ಪ್ರಾಣಿಯ ಜೀವಕ್ಕೆ ಜಾಸ್ತಿ ಬೆಲೆ, ನಾಡಪ್ರಾಣಿಗಳ ಜೀವಕ್ಕೆ ಕಡಿಮೆ ಬೆಲೆ ಎಂಬುದು ಪ್ರಾಣಿಗಳಲ್ಲೇ ಮಾಡುವ ಜಾತಿ ಬೇಧವೇ? ಹುಲಿಯಂತ ಕೆಲವೊಂದು ಪ್ರಾಣಿಗಳಿಗೆ ವಿಐಪಿ ಸ್ಥಾನಮಾನ, ಸಾಕು ಪ್ರಾಣಿಗಳಿಗೆ ನೋವಿಲ್ಲದೇ ಸಾಯುವ ಹಕ್ಕೂ ಇಲ್ಲದಿರದಿರುವುದು ಪ್ರಾಣಿಗಳಲ್ಲಿಯೇ ಮಾಡುತ್ತಿರುವ ತಾರತಮ್ಯವೇ? ಎಂಬ ಬಗ್ಗೆಯೂ ಸಹ ನೈಜ ಪ್ರಾಣಿಪ್ರಿಯರು ವಿಚಾರ ಮಾಡಬೇಕಿದೆ.

ಫೋಟೋ ಕೃಪೆ : ಅಂತರ್ಜಾಲ

ಹುಲಿ ಸಂರಕ್ಷಣೆಗೆ ತೆರಿಗೆದಾರರ ಹಣ

ಹುಲಿ ಸಂರಕ್ಷಣೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅನೇಕ ಪ್ರಾಧಿಕಾರಗಳು, ವಿದೇಶದಿಂದ ಹಣವನ್ನು ಪಡೆಯುವ ವಿವಿಧ ಸಂಘ ಸಂಸ್ಥೆಗಳು ಹೀಗೆ ಹಲವು ಹತ್ತು ಮೂಲಗಳಿಂದ ಹಣ ಸಂಗ್ರಹವಾಗುತ್ತದೆ. ವಾರ್ಷಿಕವಾಗಿ ಎಲ್ಲವನ್ನು ಲೆಕ್ಕ ಹಾಕಿದರೆ ಒಟ್ಟು ರೂ ೧೭,೫೦೦ ಕೋಟಿಯನ್ನು ೨೦೨೫-೨೬ ನೇ ಸಾಲಿಗೆ ಹುಲಿ ಸಂರಕ್ಷಣೆಗೆ ಮೀಸಲಿಡಲಾಗಿದೆ. ಇದರ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ ಪ್ರತಿ ಹುಲಿಗೆ ಸರಾಸರಿ ರೂ: ೭೦ ಕೋಟಿ ಖರ್ಚು ಮಾಡಲಾಗುತ್ತಿದೆ. ಭಾರತದಂತ ಅಭಿವೃದ್ಧಿಶೀಲ ದೇಶಕ್ಕೆ ಇದು ದೊಡ್ಡ ಮೊತ್ತ. ಇನ್ನು ಇದನ್ನು ಬೇರೆ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತ ಹುಲಿಗಳ ರಕ್ಷಣೆಗೆ ಖರ್ಚು ಮಾಡುವ ವೆಚ್ಚ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು. ಇದು ತೆರಿಗೆದಾರರ ಹಣದಿಂದ ಎಂಬುದನ್ನು ಗಮನಿಸಬೇಕು. ಪ್ರಪಂಚದ ಇತರ ದೇಶಗಳಲ್ಲಿಯೂ ಸಹ ಹುಲಿಗಳು ಇವೆ. ಅವೂ ಸಹ ಹುಲಿ ರಕ್ಷಣೆಗೆ ಹಣ ತೊಡಗಿಸುತ್ತವೆ.

ದೇಶದ ಆರ್ಥಿಕತೆಗೆ ಆಕಳು ಮತ್ತು ಎಮ್ಮೆಗಳು ರೂ:12, 27, 766 ಕೋಟಿ ದುಡಿದು ಕೊಡುತ್ತವೆ. ದೇಶದ 2೦ ಮಿಲಿಯನ್ ಜನರಿಗೆ ಅದರಲ್ಲೂ ಮಹಿಳೆಯರಿಗೆ ಉದ್ಯೋಗವಾಗಿದೆ. ನಮ್ಮ ದೇಶದಲ್ಲಿರುವ ಪ್ರತಿ ಜಾನುವಾರುಗಳ ಮೇಲೆ ಎಲ್ಲಾ ಮೂಲದ ಖರ್ಚು ಎಷ್ಟು ಗೊತ್ತೇ ವಾರ್ಷಿಕ ರೂ:3,062 ಕೋಟಿ ಮಾತ್ರ. ಅಂದರೆ ತಲಾ ಹಸು/ಎಮ್ಮೆಗೆ ಖರ್ಚು ಮಾಡುವುದು ಕೇವಲ ರೂ:೬೩ ಮಾತ್ರ. ಹುಲಿಗಳು ಈ ರೀತಿ ಸತ್ತಾಗ ಮಾಧ್ಯಮದಲ್ಲಿ ಆಗುವ ದೊಡ್ಡ ಮಟ್ಟದ ಸುದ್ಧಿ, ಅದರ ತನಿಖೆ, ಸಂಚಲನ ಇತರ ಪ್ರಾಣಿಗಳಾದ ಹಸು, ಎಮ್ಮೆ, ಕುರಿ ಇವು ನೂರಾರು ಸಂಖ್ಯೆಯಲ್ಲಿ ಸತ್ತಾಗ ಆಗುವುದಿಲ್ಲವಲ್ಲ? ಮತ್ತು ಇವುಗಳನ್ನು ಇಷ್ಟೇಕೆ ಕೀಳಾಗಿ ನೋಡಲಾಗುತ್ತಿದೆ ಎಂಬುದು ಪಶುಪಾಲಕರ ಚಿಂತನೆ.

ರಾಜ್ಯದಲ್ಲಿ ವನ್ಯಜೀವಿ ತಜ್ಞ ಪಶುವೈದ್ಯರಿಲ್ಲ !

ಹೌದು. ವನ್ಯಜೀವಿಗಳ ಬಗ್ಗೆ ಕಾಳಜಿ ಇರುವವರು ಅವುಗಳ ಆರೋಗ್ಯ ರಕ್ಷಣೆ ಮಾಡುವ ಪಶುವೈದ್ಯರ ವಿಚಾರಕ್ಕೆ ಬಂದಾಗ ಜಾಣ ಮೌನಕ್ಕೆ ಜಾರಿಬಿಡುತ್ತಾರೆ. ಕರ್ನಾಟಕದ ಇಡೀ ರಾಜ್ಯಕ್ಕೆ ಮಂಜೂರಾದ ವನ್ಯಜೀವಿ ಪಶುವೈದ್ಯಾಧಿಕಾರಿಗಳ ಹುದ್ದೆ ಕೇವಲ ೬. ಮೊದಲು ಇದ್ದ ೧೨ ಹುದ್ದೆಗಳು ಒಂದೂ ಭರ್ತಿಯಾಗದೇ ಪಶುಪಾಲನಾ ಇಲಾಖೆಯ ದನ, ಕುರಿ, ಆಡು, ಕುರಿಗಳ ಚಿಕಿತ್ಸೆಗೆ ಕಡಿಮೆಯಿರುವ ಪಶುವೈದ್ಯರ ಎರವಲು ಸೇವೆಯ ಮೂಲಕ ಭರ್ತಿಯಾಗುತ್ತಿದ್ದವು. ಈಗ ಗುತ್ತಿಗೆ/ನಿವೃತ್ತ ಪಶುವೈದ್ಯರ ಮೇಲೆ ನಡೆಯುತ್ತಿವೆ.ಇವರಾರಿಗೂ ಸಹ ವನ್ಯಜೀವಿ ಚಿಕಿತ್ಸೆಯಲ್ಲಿ ತಜ್ಞತೆ ಇಲ್ಲ.

ಹೀಗೇಕೆ?

ನಮ್ಮಲ್ಲಿ ಪ್ರಶ್ನಿಸಿ ಒಪ್ಪುವ ವೈಜ್ಞಾನಿಕ ಮನೋಭಾವಕ್ಕಿಂತ ಯಾರೋ ಪದೇ ಪದೇ ಹೇಳಿದ ಸುಳ್ಳನ್ನೇ ಸತ್ಯವೆಂದು ನಂಬುವ ಜನರ ಸಂಖ್ಯೆ ಶೇ: ೯೫. ಹಾಗಿದ್ದಾಗ ಇವೆಲ್ಲಾ ಸಹಜ. ಈ ರೀತಿಯ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿ ಅವರು ಪ್ರಶ್ನಿಸಲು ಪ್ರಾರಂಭಿಸಿದರೆ ಮಾತ್ರ ಇನ್ನು ೫೦-೬೦ ವರ್ಷದಲ್ಲಿ ಒಂದಿಷ್ಟು ಬದಲಾವಣೆಯಾಗಬಹುದು ಎಂಬುದು ಆಶಯ.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading