ಯೋಗ ಎನ್ನುವುದು ಕೇವಲ ದೇಹವನ್ನು ಬಾಗಿಸುವ ಕಲೆ ಮಾತ್ರವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಜೀವನಶೈಲಿ. ನನ್ನ ಜೀವನದಲ್ಲಿ ಯೋಗವು ಆರೋಗ್ಯದ ಜೊತೆಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಹೊಸ ದೃಷ್ಟಿಕೋನವನ್ನು ನೀಡಿದ ಪರಿವರ್ತನೆಯ ಪಯಣವಾಗಿದೆ. ವೈವಿಧ್ಯತೆಯನ್ನು ಅಪ್ಪಿಕೊಳ್ಳುವ ಆರೋಗ್ಯದ ಹಾದಿಯೇ ಯೋಗ.

ಕೆಲವು ವರ್ಷಗಳ ಹಿಂದೆ ನನ್ನ ಯೋಗಯಾತ್ರೆ ಒಂದು ಸವಾಲಿನಿಂದ ಆರಂಭವಾಯಿತು. ನಮ್ಮ ಊರಿನ ಒಬ್ಬ ಹಿರಿಯ ಯೋಗಾಭ್ಯಾಸಿಯನ್ನು ಭೇಟಿ ಮಾಡಿ, “ನನಗೂ ಯೋಗ ಕಲಿಯಬೇಕು” ಎಂದು ಕೇಳಿದೆ. ನನ್ನ ಚಲನಾಂಗ ವೈಕಲ್ಯವನ್ನು ಗಮನಿಸಿದ ಅವರು, “ಅಂಗವೈಕಲ್ಯ ಇರುವವರು ಯೋಗ ಏನು ಮಾಡುತ್ತಾರೆ?” ಎಂದು ಪ್ರಶ್ನಿಸಿದರು. ಆ ಮಾತುಗಳು ನನಗೆ ನೋವುಂಟುಮಾಡಿದರೂ, ಅವೇ ನನ್ನೊಳಗೆ ಹೊಸ ಸಂಕಲ್ಪವನ್ನು ಹುಟ್ಟಿಸಿದವು. ಯೋಗ ಎಲ್ಲರಿಗೂ ಎಂಬುದನ್ನು ಸಾಬೀತುಪಡಿಸಬೇಕೆಂಬ ದೃಢನಿಶ್ಚಯ ಮೂಡಿತು.
ನಂತರ ನಾನು ಕೊಡಗಿನ ವಿದ್ಯಾಭವನದಲ್ಲಿ ಯೋಗ ತರಗತಿಗಳಿಗೆ ಸೇರಿದೆ. ಅಲ್ಲಿ ನನಗೆ ಸಿಕ್ಕ ಯೋಗ ಶಿಕ್ಷಕರು ನಿಜವಾದ ಅರ್ಥದಲ್ಲಿ ಒಳಗೊಳ್ಳುವಿಕೆಯ ಮೌಲ್ಯವನ್ನು ಅರಿತವರಾಗಿದ್ದರು. ಅವರು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಸನಗಳನ್ನು ರೂಪಾಂತರಿಸಿದರು. ಕುಳಿತುಕೊಂಡು ಅಥವಾ ಮಲಗಿಕೊಂಡು ಮಾಡಬಹುದಾದ ಯೋಗಾಭ್ಯಾಸಗಳನ್ನು ಕಲಿಸಿದರು. ನಿಧಾನವಾಗಿ ನನ್ನ ದೇಹದ ನಮ್ಯತೆ, ಶಕ್ತಿ ಮತ್ತು ಸಮತೋಲನ ಹೆಚ್ಚಾಯಿತು. ಅದಕ್ಕಿಂತ ಮುಖ್ಯವಾಗಿ, ನನ್ನಲ್ಲಿ ಆತ್ಮವಿಶ್ವಾಸ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಯಿತು.

- ಚೇರ್ ಯೋಗ – ಎಲ್ಲರಿಗೂ ಸಾಧ್ಯವಾದ ಯೋಗಯೋಗ ಎಂದರೆ ನೆಲದ ಮೇಲೆ ಕುಳಿತುಕೊಂಡು ಅಥವಾ ನಿಂತು ಮಾಡುವ ಆಸನಗಳೆಂದು ಹಲವರು ಭಾವಿಸುತ್ತಾರೆ. ಆದರೆ ಎಲ್ಲರಿಗೂ ಆ ರೀತಿಯ ಯೋಗ ಸಾಧ್ಯವಾಗುವುದಿಲ್ಲ. ವಯಸ್ಸು, ಆರೋಗ್ಯ ಸಮಸ್ಯೆಗಳು ಅಥವಾ ಅಂಗವೈಕಲ್ಯದ ಕಾರಣದಿಂದ ಕೆಲವರಿಗೆ ನೆಲದ ಮೇಲೆ ಕುಳಿತುಕೊಳ್ಳುವುದು ಕಷ್ಟವಾಗಬಹುದು. ಅಂತಹವರಿಗಾಗಿ ರೂಪುಗೊಂಡಿರುವ ವಿಶೇಷ ಯೋಗ ವಿಧಾನವೇ ಚೇರ್ ಯೋಗ (Chair Yoga).
ಚೇರ್ ಯೋಗದಲ್ಲಿ ಗಟ್ಟಿಯಾದ ಕುರ್ಚಿಯನ್ನು ಆಧಾರವಾಗಿ ಬಳಸಿಕೊಂಡು ವಿವಿಧ ಆಸನಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನಾಭ್ಯಾಸಗಳನ್ನು ಮಾಡಲಾಗುತ್ತದೆ. ಇದರಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡೇ ಕೈ, ಕಾಲು, ಕುತ್ತಿಗೆ, ಭುಜ ಹಾಗೂ ಬೆನ್ನಿನ ಚಲನೆಗಳನ್ನು ಮಾಡಬಹುದು. ಅಗತ್ಯವಿದ್ದರೆ ಕುರ್ಚಿಯ ಬೆಂಬಲದೊಂದಿಗೆ ನಿಂತು ಕೆಲವು ಸರಳ ಆಸನಗಳನ್ನೂ ಅಭ್ಯಾಸಿಸಬಹುದು.

ಚೇರ್ ಯೋಗದ ಪ್ರಯೋಜನಗಳು :
- ದೈಹಿಕ ಆರೋಗ್ಯ ಸುಧಾರಣೆ : ಚೇರ್ ಯೋಗವು ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ. ಕೀಲುಗಳ ಚಲನೆ ಸುಧಾರಿಸುತ್ತದೆ. ಸ್ನಾಯುಗಳಿಗೆ ಬಲ ನೀಡುತ್ತದೆ ಮತ್ತು ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ.
- ಮಾನಸಿಕ ನೆಮ್ಮದಿ : ಯೋಗದ ಉಸಿರಾಟದ ಅಭ್ಯಾಸಗಳು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆಯನ್ನು ನೀಡುತ್ತವೆ.
- ಸಮತೋಲನ ಮತ್ತು ಆತ್ಮವಿಶ್ವಾಸ : ಕುರ್ಚಿಯ ಬೆಂಬಲದಿಂದ ಸುರಕ್ಷಿತವಾಗಿ ವ್ಯಾಯಾಮ ಮಾಡುವ ಅವಕಾಶ ಸಿಗುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆ ಬೆಳೆಯುತ್ತದೆ.
- ನೋವು ನಿವಾರಣೆ : ಕುತ್ತಿಗೆ, ಬೆನ್ನು, ಭುಜ ಹಾಗೂ ಮೊಣಕಾಲು ನೋವುಗಳನ್ನು ಕಡಿಮೆ ಮಾಡಲು ಚೇರ್ ಯೋಗ ಸಹಕಾರಿ. ದೀರ್ಘಕಾಲ ಕುಳಿತು ಕೆಲಸ ಮಾಡುವವರಿಗೂ ಇದು ಉಪಯುಕ್ತ.
- ಸಾಮಾಜಿಕ ಒಳಗೊಳ್ಳುವಿಕೆ : ಚೇರ್ ಯೋಗವು “ಯೋಗ ಎಲ್ಲರಿಗೂ” ಎಂಬ ಸಂದೇಶವನ್ನು ಸಾರುತ್ತದೆ. ದೈಹಿಕ ಸಾಮರ್ಥ್ಯದ ವ್ಯತ್ಯಾಸವಿದ್ದರೂ ಪ್ರತಿಯೊಬ್ಬರೂ ಯೋಗದ ಲಾಭ ಪಡೆಯಬಹುದು.

ಯಾರು ಚೇರ್ ಯೋಗ ಮಾಡಬಹುದು?
ಚಲನಾಂಗ ವೈಕಲ್ಯ ಹೊಂದಿರುವ ವ್ಯಕ್ತಿಗಳು, ಹಿರಿಯ ನಾಗರಿಕರು, ವೀಲ್ಚೇರ್ ಬಳಸುವವರು, ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವವರು, ಸಮತೋಲನ ಸಮಸ್ಯೆ ಇರುವವರು, ಸಂಧಿವಾತ, ಮೊಣಕಾಲು ಅಥವಾ ಬೆನ್ನುನೋವಿನಿಂದ ಬಳಲುವವರು, ಗರ್ಭಿಣಿಯರು (ತಜ್ಞರ ಸಲಹೆಯೊಂದಿಗೆ), ಕಚೇರಿಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವವರು, ಚೇರ್ ಯೋಗವು, ಯೋಗವನ್ನು ಎಲ್ಲರಿಗೂ ತಲುಪಿಸುವ ಸೇತುವೆಯಾಗಿದೆ.
ಒಂದು ಮರೆಯಲಾಗದ ಅನುಭವ
ಯೋಗದಿಂದ ನನಗೆ ದೊರೆತ ಬದಲಾವಣೆಯಿಂದ ಪ್ರೇರಿತಳಾಗಿ, ಕೊಡಗಿನಲ್ಲಿ ಚಲನಾಂಗ ವೈಕಲ್ಯ ಹೊಂದಿರುವ ವ್ಯಕ್ತಿಗಳಿಗಾಗಿ ಮೊದಲ ಬಾರಿಗೆ ಚೇರ್ ಯೋಗ ಕಾರ್ಯಾಗಾರವನ್ನು ಆಯೋಜಿಸಿದೆ. ನನ್ನ ಯೋಗ ಶಿಕ್ಷಕರು ತರಬೇತಿ ನೀಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂತಹ ಒಳಗೊಳ್ಳುವಿಕೆಯ ಯೋಗ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳಿದರು.
ಈ ಕಾರ್ಯಕ್ರಮಕ್ಕೆ ನಾನು ಒಂದು ವಿಶೇಷ ಅತಿಥಿಯನ್ನು ಆಹ್ವಾನಿಸಿದೆ. ಯೋಗ ಕಲಿಯಲು ಮೊದಲ ಬಾರಿ ಕೇಳಿದಾಗ “ಅಂಗವೈಕಲ್ಯ ಇರುವವರು ಯೋಗ ಹೇಗೆ ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದ ಅದೇ ಹಿರಿಯ ವ್ಯಕ್ತಿ ಅವರು. ಕಾರ್ಯಕ್ರಮದಲ್ಲಿ ವೀಲ್ಚೇರ್ ಬಳಕೆದಾರರು, ಹಿರಿಯರು ಮತ್ತು ವಿವಿಧ ರೀತಿಯ ಚಲನಾಂಗ ವೈಕಲ್ಯ ಹೊಂದಿರುವವರು ಸಂತೋಷದಿಂದ ಚೇರ್ ಯೋಗ ಅಭ್ಯಾಸ ಮಾಡುತ್ತಿರುವುದನ್ನು ಅವರು ಕಂಡರು. ಅವರ ಕಣ್ಣಲ್ಲಿ ಆಶ್ಚರ್ಯ ಮತ್ತು ಮೆಚ್ಚುಗೆಯ ಮಿಶ್ರ ಭಾವನೆ ಕಾಣಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಅವರು ನನ್ನ ಬಳಿ ಬಂದು, “ನಾನು ತಪ್ಪಾಗಿ ಯೋಚಿಸಿದ್ದೆ. ಯೋಗ ನಿಜವಾಗಿಯೂ ಎಲ್ಲರಿಗೂ” ಎಂದು ಹೇಳಿದರು.
ಆ ಕ್ಷಣ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಯಿತು. ಯೋಗ ಎಲ್ಲರ ಹಕ್ಕು. ಯೋಗವು ನನಗೆ ಒಂದು ಮಹತ್ವದ ಪಾಠ ಕಲಿಸಿದೆ – ಅಂಗವೈಕಲ್ಯ ಎಂದರೆ ಅಸಾಮರ್ಥ್ಯವಲ್ಲ. ಸರಿಯಾದ ಮಾರ್ಗದರ್ಶನ, ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಬಹುದು.
ಇದು ಕೇವಲ ನನ್ನ ವೈಯಕ್ತಿಕ ಕಥೆಯಲ್ಲ. ಇದು ಆಶೆಯ, ಧೈರ್ಯದ ಮತ್ತು ಸಾಧ್ಯತೆಗಳ ಕಥೆ. ಯೋಗವು ನನ್ನ ಆರೋಗ್ಯವನ್ನು ಉತ್ತಮಗೊಳಿಸಿದೆ, ಸಮಾಜದಲ್ಲಿರುವ ಪೂರ್ವಗ್ರಹಗಳನ್ನು ಪ್ರಶ್ನಿಸುವ ಶಕ್ತಿಯನ್ನು ನೀಡಿದೆ ಮತ್ತು ಇತರರಿಗೂ ಸ್ಫೂರ್ತಿಯಾಗುವ ಅವಕಾಶವನ್ನು ಒದಗಿಸಿದೆ.
ನಿಜವಾದ ಯೋಗವು ದೇಹವನ್ನು ಮಾತ್ರವಲ್ಲ, ಮನಸ್ಸುಗಳನ್ನು ಕೂಡ ಸಂಪರ್ಕಿಸುತ್ತದೆ. ಅದು ವೈವಿಧ್ಯತೆಯನ್ನು ಸ್ವೀಕರಿಸುತ್ತದೆ. ಎಲ್ಲರನ್ನೂ ಒಳಗೊಳ್ಳುತ್ತದೆ. ಯೋಗದ ಸೌಂದರ್ಯವೇ ಅದಾಗಿದೆ. “ಯೋಗ ಎಲ್ಲರಿಗೂ – ಏಕೆಂದರೆ ಆರೋಗ್ಯ ಮತ್ತು ಆತ್ಮವಿಶ್ವಾಸ ಪ್ರತಿಯೊಬ್ಬರ ಹಕ್ಕು”.
- ದೀಪ ವಿ – ದಂತ ವೈದ್ಯರು, ಲೇಖಕರು, ಬೆಂಗಳೂರು.
