ಕೆಲವು ಮರಗಳು ಹೀಗೇ ಇರುತ್ತವೆ

ದಾರಿಹೋಕರು ಪ್ರಶ್ನಿಸುತ್ತಾರೆ, ಏಕೆ ಮರ ಇಷ್ಟು ನಿಶ್ಯಬ್ದವಾಯಿತೆಂದು…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಕೆಲವು ಮರಗಳು ಹೀಗೇ ಇರುತ್ತವೆ
ಕಲ್ಲೆಸೆದ ಕೈಗಳಿಗೂ
ಹೂವನ್ನೇ ಕೊಡುತ್ತವೆ!
ಕೊಂಬೆಗಳನ್ನು ಮುರಿದವರಿಗು
ಹಣ್ಣನ್ನೇ ಉಣಿಸುತ್ತವೆ!
ಬಿಸಿಲಿನ ದಾಹದಲ್ಲಿ
ತಾವೇ ಒಣಗುತ್ತಾ
ಇನ್ನೊಬ್ಬರ ತಲೆಗೆ ತಂಪಾಗಿರುತ್ತವೆ!
ಉಸಿರಿಗೆ ಜೀವವಾಗಿರುತ್ತವೆ!

ಕೆಲವೊಮ್ಮೆ
ಬೀಸುವ ಗಾಳಿಯು ಬಿರುಗಾಳಿಯಾಗಿ
ತುಂಬಾ ಕ್ರೂರವಾಗುತ್ತದೆ!
ಮರದ ದಯೆಯನ್ನು
ದುರ್ಬಲತೆ ಎಂದುಕೊಂಡು
ಅದರ ಬೇರುಗಳನ್ನೇ ಅಲುಗಾಡಿಸುತ್ತದೆ!

ಕೊನೆಗೊಮ್ಮೆ
ಒಂದು ಕಾಲದಲ್ಲಿ
ಹಕ್ಕಿಗಳ ಹಾಡಿನಿಂದ ತುಂಬಿದ್ದ
ಜನರ ತನುಮನದ ಧನಿಯಾಗಿದ್ದ
ಮರ ಮೌನದ ಅಸ್ಥಿಪಂಜರವಾಗಿ
ನಿಂತುಬಿಡುತ್ತದೆ!

ದಾರಿಹೋಕರು ಪ್ರಶ್ನಿಸುತ್ತಾರೆ
ಏಕೆ ಮರ ಇಷ್ಟು ನಿಶ್ಯಬ್ದವಾಯಿತು!?
ಏಕೆ ಮರದ ನೆರಳು ನಿರ್ಜನವಾಯಿತು!?

ಉತ್ತರಿಸಲು ಮಾತುಗಳಿಲ್ಲ
ಮರ ಮಾತು ಕಳೆದುಕೊಂಡದ್ದಲ್ಲ
ತನ್ನ ಸೌಮ್ಯತೆಯ ಸೊಬಗನ್ನು
ಮೃದುತ್ವದ ಮಮತೆಯನ್ನು
ಕಾಪಾಡಿಕೊಳ್ಳುತ್ತಾ ಕಾಪಾಡಿಕೊಳ್ಳುತ್ತಾ
ದಣಿವಾಗಿಬಿಟ್ಟಿತು!
ಸಾವನ್ನು ಒಪ್ಪಿ ಅಪ್ಪಿಬಿಟ್ಟಿತು!


  • ಟಿ.ಪಿ.ಉಮೇಶ್ – ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಕವಿಗಳು, ಚಿತ್ರದುರ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading