‘ಕಾಂತಾರ’ ಎನ್ನುವುದು ದಂತಕಥೆ. ಕಾಂತಾರ ಎಂದರೆ ಅನೂಹ್ಯವಾದ ಕಾಡು ಎಂಬ ಅರ್ಥವಿದೆ ಎಂದು ಹೇಳುತ್ತಾರೆ. ಕಾಲದಿಂದಲೂ ಪ್ರಕೃತಿ ಮತ್ತು ಮನುಷ್ಯನಿಗಿದ್ದ ಅಪ್ಯಾಯಮಾನ ಸಂಬಂಧವನ್ನು ಅತ್ಯಂತ ಚಂದದಿಂದ ಕಟ್ಟಿಕೊಟ್ಟಿದೆ ಈ ಕಾಂತಾರ ಚಲನಚಿತ್ರ. ಸುಮಾ.ಎಸ್.ಭಟ್ ಅವರ ಲೇಖನಿಯಲ್ಲಿ ಅರಳಿದ ಒಂದು ಲೇಖನ….
ನಾನು ಇತ್ತೀಚೆಗೆ ನೋಡಲೇಬೇಕೆಂದು ಆಸೆಪಟ್ಟು ನೋಡಿದ ಚಲನಚಿತ್ರವೆಂದರೆ ಅದು ಕಾಂತಾರ.ಅರೇ ಎಲ್ಲರೂ ಇದರ ಬಗ್ಗೆ ಇಷ್ಟೊಂದು ಹೊಗಳುತ್ತಾರಲ್ಲಾ ಅಂಥ ಸುದ್ದಿ ವಾಹಿನಿ, ದಿನಪತ್ರಿಕೆಗಳಲ್ಲಿ ಕಂಡು ನೋಡಬೇಕಿನಿಸಿದ್ದಲ್ಲಾ. ನಾನು ಹುಟ್ಟಿದ ಆಗಾಗ ಭೇಟಿ ನೀಡುತ್ತಿದ್ದ ಅದಲ್ಲದೇ ನನ್ನ ತಾಯಿ ಆಡಿ ಬೆಳೆದ ಊರಿನ ನೆನಪುಗಳನ್ನು ಮೆಲುಕು ಹಾಕಬಹುದಲ್ಲಾ ಎಂಬ ದೂರದ ಆಸೆಯಿಂದ ನೋಡಬಯಸಿದ್ದು.ಆದರೇನು ಅದು ತಕ್ಷಣಕ್ಕೆ ಕೈಗೂಡಲಿಲ್ಲಾ.ಆದರೂ ಕೊನೆಗೊಮ್ಮೆ ನಾನು ಹುಟ್ಟಿ, ಆಡಿ ನಲಿದ ಮತ್ತು ನನ್ನ ತಾಯಿಯ ಬಾಲ್ಯ ಮತ್ತು ಯೌವ್ವನದ ಸವಿನೆನಪಿನ ಊರಿನ ವೈಶಿಷ್ಟ್ಯತೆಯ ಬಗ್ಗೆ ಹೇಳುವ ಸಿನಿಮಾವನ್ನು, ನನ್ನ ಅಮ್ಮನೊಂದಿಗೆ ಹೋಗಿ ನೋಡಿದಾಗ ಸಿಕ್ಕ ಆನಂದವಿದೆಯಲ್ಲಾ ಅದು ಅಕ್ಷರಗಳಲ್ಲಿ ಹೇಳುವುದಕ್ಕೂ ಮಿಗಿಲಾದದ್ದು. ಅಲ್ಲಿ ಅರ್ಥವಾಗದ ಕೆಲ ನಾನಿವರೆಗೂ ಕೇಳದ ಕುಂದಾಪುರದ ಭಾಷೆ, ಬೈಗುಳಗಳ ಬಗ್ಗೆ ಮಾಹಿತಿ ನನ್ನಮ್ಮ ಚಲನಚಿತ್ರದ ಕೆಲ ಭಾಗದಲ್ಲಿ ವಿವರಿಸುತ್ತಾ ಸಾಗಿದ್ದರಿಂದಲೂ ಸಿನಿಮಾ ಸರಿಯಾಗಿ ಅರ್ಥವಾಯಿತು. ನಮ್ಮಿಬ್ಬರ ನಿರೀಕ್ಷೆಗೂ ಮೀರಿದ ಸಂತೃಪ್ತ ಭಾವ ಮೂಡಿಸಿತೀ ಕಾಂತಾರ.
ಪ್ರಸ್ತುತವಾಗಿ ಎಲ್ಲರಿಗೂ ಕಾಂತಾರ ಎನ್ನುವುದು ದಂತಕಥೆ ಎಂದೆನಿಸಿದರೆ, ನನಗಿದು ಬದುಕಿನ ನೈಜತೆಯಲ್ಲಿ ದೈವದ ಸಾಕಾರರೂಪವನ್ನು ಸಹಜತೆಯ ಚಿತ್ರಣದಲ್ಲಿ ವೈಶಿಷ್ಟ್ಯಪೂರ್ಣವಾಗಿ ಕಟ್ಟಿಕೊಟ್ಟ ದೃಶ್ಯವೈಭವ ಎನಿಸಿತು. ಕಾಂತಾರ ಎಂದರೆ ಅನೂಹ್ಯವಾದ ಕಾಡು ಎಂಬ ಅರ್ಥವಿದೆ ಎಂದು ಹೇಳುತ್ತಾರೆ, ಆದರೆ ಈ ಚಲನಚಿತ್ರ ಕಾಡು, ಮನುಷ್ಯ, ಪ್ರಕೃತಿ, ದೈವ, ನೆಮ್ಮದಿಯ ಹುಡುಕಾಟ, ಆತ್ಮೀಯತೆಯ ತಂತು, ಸಮುದಾಯವೊಂದರ ಸಹಜ ಬದುಕಿನ ಚಿತ್ರಣ, ಸಮಗ್ರ ದಕ್ಷಿಣ ಕನ್ನಡದ ಅವಿಭಾಜ್ಯ ಅಂಗಗಳಾದ ಕಂಬಳ,ಕೋಳಿ ಪಡಿ, ದೈವಾರಾಧನೆ, ಸಂಪ್ರದಾಯ ಆಚರಣೆ, ದೈವ ನರ್ತನ ಮುಂತಾದ ಅನೇಕ ವಿಷಯಗಳನ್ನು ವಿಶ್ಲೇಷಿಸಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸರಳವಾಗಿ ಹೇಳಿದ ಪರಿಯನ್ನು ಶ್ಲಾಘಿಸದೆ ಇರಲು ಸಾಧ್ಯವಿಲ್ಲ.
ಕಥಾವಸ್ತುವು ಸರಳವಾಗಿದ್ದರೂ ನಿರೂಪಿಸಿದ, ಪ್ರೇಕ್ಷಕರಿಗೆ ಕಟ್ಟಿಕೊಟ್ಟ ಪರಿ ಇದೆಯಲ್ಲಾ ಅದರ ಬಗ್ಗೆ ಎರಡು ಮಾತು ಹೇಳುವಂತಿಲ್ಲಾ.ಇನ್ನು ಪಾತ್ರಗಳ ವಿಚಾರಕ್ಕೆ ಬಂದರೆ ಶಿವ ಪಾತ್ರಧಾರಿ ರಿಷಭ್ ಶೆಟ್ಟಿ ದೈವ ನರ್ತಕನಾಗಿ ನಿರೂಪಿಸಿದ ಪಾತ್ರ, ದೈವ ನರ್ತನೆಯ ವೈಭವದ ಮೆರವಣಿಗೆ ಕನ್ನಡ ಚಿತ್ರರಂಗದ ಅಪರೂಪವಾದ ದೃಶ್ಯಗಳಲ್ಲಿ ಸೇರಿ ಹೋಗಿರುವುದೀಗ ಇತಿಹಾಸ.ಇನ್ನು ಅರಣ್ಯ ಇಲಾಖೆಯ ಅಧಿಕಾರಿಯಾದ ಮುರಳೀಧರ್ ಪಾತ್ರದ ನಟ ಕಿಶೋರ್ ಪಾತ್ರದಲ್ಲಿದ್ದ ಸಹಜತೆ,ಗತ್ತು. ಅಭಿನಯ ಅನ್ನಿಸುವುದಕ್ಕಿಂತ ಅವರೇ ಒಬ್ಬ ಕಾಡಿನ ಅಧಿಕಾರಿ ಎಂಬಂತೆ ಭಾಸವಾಗುತ್ತಾರೆ.ಇನ್ನು ಕಾಡುಬೆಟ್ಟಿನ ಜನಜೀವನವನ್ನು ನಿರ್ದೇಶಕರು ಕಟ್ಟಿಕೊಟ್ಟ ರೀತಿ ನನ್ನ ಬಾಲ್ಯದಲ್ಲಿ ನಾನು ಅಪರೂಪಕ್ಕೆ ಊರಿಗೆ ಹೋದಾಗ ದೊಡ್ಡಮ್ಮ ಮತ್ತು ಅಜ್ಜನ ಮನೆಗಳಲ್ಲಿ ಕಾಣುತ್ತಿದ್ದ ತಿರಿ (ಹುಲ್ಲನ್ನು ನಿಲ್ಲಿಸಿ ಅದಕ್ಕೆ ಹುಲ್ಲಿನಿಂದಲೇ ಮಾಡಿದ ಹಗ್ಗ ಸುತ್ತಿ ಅದರಲ್ಲಿ ಭತ್ತವನಿಟ್ಟು ಕಾಪಾಡುವ ಕರಾವಳಿ ಬದಿಯ ಒಂದು ವಿಧಾನ), ಗದ್ದೆ ಬದುವಿನಲ್ಲಿ ನಡೀ ಬೇಕಾದರೆ ಬಿದ್ದಕಂಡಿದ್ದು, ಮಾವ ರಾತ್ರಿ ವೇಳೆ ಹೇಳುತ್ತಿದ್ದ ಊರಿನಲ್ಲಿ ನಡೆದ ಬೆಚ್ಚಿ ಬೀಳುವಂತಾ ಕಥೆಗಳು, ಅವರು ಕಂಡ ಆ ಕಾಲದ ಮೈಸೂರಿನ ದಸರಾ ವರ್ಣನೆ,ನನ್ನ ತಾಯಿಯ ಬಾಲ್ಯದ ಪ್ರಸಂಗಗಳು ಹೀಗೇ ಹಲವು ಮಧುರ ನೆನಪುಗಳು ಮನದಲ್ಲಿ ಹಾದು ಹೋಯಿತು. ಸಿನಿಮಾದಲ್ಲಿ ಬರುವ ಪೋಷಕ ಪಾತ್ರಗಳೆಂದು ನಾನು ಸಂಭೋದಿಸುವುದಿಲ್ಲಾ, ಕಥೆಗೆ ಪೂರಕ ಪಾತ್ರಗಳಾದ ಪ್ರಕಾಶ್ ತೂಮಿನಾಡ್ (ರಾಂಪ),ಪ್ರಮೋದ್ ಶೆಟ್ಟಿ (ಸುಧಾಕರ),ಶೈನ್ ಶೆಟ್ಟಿ(ದೇವೇಂದ್ರನ ತಂದೆ), ಮಾನಸಿ ಸುಧೀರ್(ಕಮಲಾ), ಸ್ವರಾಜ್ ಶೆಟ್ಟಿ(ಗುರುವ), ಶನಿಲ್ ಗುರು(ಬುಳ್ಳ),ದೀಪಕ್ ರೈ(ಸುಂದರ) ವಿನಯ್ ಬಿದ್ದಪ್ಪ (ರಾಜ), ರಘು ಅಣ್ಣಾ (ರಘು ಪಾಂಡೇಶ್ವರ್) ಹೀಗೆ ಹಲವು ಪಾತ್ರಗಳು ತಮ್ಮ ನಟನೆಯ ಎಲ್ಲೆ ಮೀರದೆ ಸಹಜವಾಗಿ ಅಭಿನಯಿಸಿದ ರೀತಿ ಪದಗಳಲ್ಲಿ ವರ್ಣಿಸಲಂತೂ ಸಾಧ್ಯವಿಲ್ಲಾ.
ಫೋಟೋ ಕೃಪೆ :google
ಇನ್ನು ನಾಯಕಿ ಪಾತ್ರಧಾರಿ ಸಪ್ತಮಿ ಗೌಡ (ಲೀಲಾ) ಹಳ್ಳಿಯ ಸೊಗಡಿನ ಅರಣ್ಯ ಇಲಾಖೆ ಕೆಲಸಗಾರ್ತಿಯಾಗಷ್ಟಲ್ಲದೇ, ಒಂದು ಸಾಮಾನ್ಯ ಹೆಣ್ಣಿನ ಪಾತ್ರಕ್ಕೂ ಸೂಕ್ತ ನ್ಯಾಯ ಓದಗಿಸಿದ್ದಾರೆ.ಇನ್ನು ಅವಕಾಶವಾದಿ ಪಾತ್ರದ ಪ್ರಮೋದ್ ಶೆಟ್ಟಿ(ಸುಧಾಕರ) ಮತ್ತು ಖಳನಾಯಕ ಅಚ್ಯುತ್ ಕುಮಾರ್ (ದೇವೇಂದ್ರ ಸುತ್ತೂರು) ನಟನೆ ಮತ್ತು ಪಾತ್ರಕ್ಕೆ ನ್ಯಾಯ ಓದಗಿಸಿರುವ ರೀತಿ ಚಲನಚಿತ್ರ ನೋಡಿ ಬಂದು ಕೆಲ ದಿನಗಳಾದರೂ ನನ್ನನ್ನು ಇನ್ನೂ ಕಾಡುತ್ತಿದೆ.ರಘು ಪಾಂಡೇಶ್ವರ್ (ಅರಣ್ಯಾಧಿಕಾರಿ) ಅವರ ಹಾಸ್ಯದ ಮಾತುಗಳನ್ನು ಕುಂದಾಪುರದ ಹೆಮ್ಮೆಯ ಶಿಕ್ಷಕ, ಕುಂದಗನ್ನಡದ ಭಾಷಣಕಾರ ಮನು ಹಂದಾಡಿಯವರ ವೀಡಿಯೋ ತುಣಕಲ್ಲಿ ಕಂಡಿದ್ದರಿಂದ ಅವರ ಅಭಿನಯ ಇನ್ನು ಆಪ್ತವೆನಿಸಿದ್ದಂತೂ ಹೌದು.
ಕಾಂತಾರ, ಒಂದು ಪರಿಪೂರ್ಣ ಚಲನಚಿತ್ರಕ್ಕೆ ಬೇಕಾಗುವಂತಾ ನಿರೂಪಣೆ ಪ್ರೇಕ್ಷಕನನ್ನು ಹಿಡಿದಿಡುತ್ತದೆ.ಕಂಬಳದಲ್ಲಿ ಕಾಣುವ ಕೋಣಗಳನ್ನು ಕಂಡರೆ ನಗರವಾಸಿಗಳಾದ ನಾವು ಬೆದರುವಂತಾಗುತ್ತದೆ, ಅದರಲ್ಲಿ ಅದರ ಬಾಲ ಹಿಡಿದು ನೆಟ್ಟಗಿರೋ ರಸ್ತೆಯಲ್ಲಿ ನಡೆಯೋದೇ ಸಾಹಸ ಅದರಲ್ಲಿ ಕೆಸರುಗದ್ದೆಯ ಮೇಲೆ ಮರದ ಪಟ್ಟಿ ಮೇಲೆ ಕಾಲಿಟ್ಟುಕೊಂಡು ಎಣ್ಣೆ ಸವರಿದ ಕೋಣಗಳ ಬಾಲ ಹಿಡಿದುಕೊಂಡು ಸ್ಪರ್ಧೆಗೆ ಭಾಗವಹಿಸೋದಿದೆಯಲ್ಲಾ ಅದು ತುಂಬಾ ಕಷ್ಟದ ಪರಿಸ್ಥಿತಿಯೇ ಸೈ.ಇನ್ನು ಕರಾವಳಿಯ ಈ ಹೆಮ್ಮೆಯ ಕಲೆಯನ್ನು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ನೋಡಿ ಆನಂದಿಸಲು ಕಾರಣರಾದ ರಿಷಬ್ ಸರ್ ಮತ್ತು ನಿಜ ಜೀವನದಲ್ಲಿ ಕಂಬಳ ಸ್ಪರ್ಧೆಗಾಗಿ ಶ್ರಮವಹಿಸುವ ಪ್ರತಿಯೊಬ್ಬ ಶ್ರಮಿಕನಿಗೂ ಧನ್ಯವಾದ ಅರ್ಪಿಸುವುದೊಂದೇ ನಾನು ಮಾಡಬಹುಂದಂತಹಾ ಕೆಲಸ.
ಇನ್ನು ಹಾಡುಗಳ ಬಗ್ಗೆ ಹೇಳಬೇಕೆಂದರೆ ಇರೋದು ಬರೀ ಮೂರೇ ಹಾಡುಗಳಾದರೂ ತುಂಬಾ ಚಂದವಾಗಿ ಪ್ರೇಕ್ಷಕನ ಮನಸೆಳೆದು ಬಿಡುತ್ತದೆ.ಜಾನಪದ ಸೊಗಡಿನ ಕರಾವಳಿಯ ಹಳ್ಳಿಯಲ್ಲಿ ಶಿವ ಲೀಲಾನ ಜೋಡಿ ನೋಡುತ್ತಾ, ಕುಂದಾಪುರದಲ್ಲಿದ್ದೇನೆಂಬ ನನ್ನ ಭಾವನೆಗೆ ಕತ್ತರಿ ಹಾಕಿದ್ದು ನಮ್ಮ ಸಾಂಸ್ಕೃತಿಕ ನಗರಿಯ ಹೆಮ್ಮೆಯ ಗರಿ ವಿಜಯಪ್ರಕಾಶ್ ಸರ್ ಇಂಪಾದ ದನಿ ಮೈಸೂರಿನ ಚಿತ್ರಮಂದಿರದಲ್ಲಿದ್ದೇವೆಂಬ ಸತ್ಯದ ಅರಿವು ಮೂಡಿಸಿದಾಗ.ಆದರೆ ವಿಜಯಪ್ರಕಾಶ್ ಈ ಹಾಡಿನಲ್ಲಿ “ಮಾಡು ಬಾ ಕೊಂಗಾಟವಾ” ಎಂಬ ಸಾಲು ಅವರು ಅಲ್ಲೇ ಹುಟ್ಟಿ ಬೆಳೆದು, ಮಾತಾಡುವ ಸ್ಥಳೀಯರಂತೆ ಹೇಳುತ್ತಿರುವಂತೆ ನನಗನ್ನಿಸಿದ್ದಂತು ಹೌದು.ಭಾಷೆಯ ಸೊಗಡನ್ನು ಹಾಡಿನ ಉಚ್ಛಾರಣೆಯಲ್ಲಿ ಆ ರೀತಿ ನೂರಕ್ಕೆ ನೂರು ಪ್ರತಿಶತಃ ಹಿಡಿದ ವಿಜಯ್ ಸರ್ ನಿಮಗೆ ಕೋಟಿ ನಮನಗಳು.ಇನ್ನು ದೈವ ನರ್ತನದ ವರಾಹ ರೂಪಂ ಹಾಡು ಭಕ್ತಿ ಭಾವದಿಂದ ರಚಿಸಿ ಮತ್ತು ಹಾಡಿ ಭಕ್ತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಸಂಗೀತ ನಿರ್ದೇಶನದ ತಂಡಕ್ಕೆ ಪ್ರೇಕ್ಷಕ ವರ್ಗ ಸದಾಕಾಲ ಚಿರ ಋಣಿ.ಇಂತಹ ಹಾಡುಗಳನ್ನು ನೀಡಿದ ಅಜನೀಶ್ ಲೋಕನಾಥ್ ಅವರಿಗೂ ಸಹಾ ತುಂಬು ಮನಸಿನ ಧನ್ಯವಾದಗಳು.
ಫೋಟೋ ಕೃಪೆ :google
ಇಂದಿನ ನಮ್ಮ ಕಾಲದ ಮಕ್ಕಳಿಗಿರುವ ದೌರ್ಭಾಗ್ಯವೆಂದರೆ ನಮ್ಮ ನಾಡು, ನುಡಿ, ಕಲೆ, ಪ್ರಕೃತಿಯ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿಯದಿರುವುದರಿಂದಲೇ, ಅವಕ್ಕೆ ಅದರ ಬಗ್ಗೆ ಒಲವಿಲ್ಲಾ.ಅದು ಕಾಲದ ಮಹಿಮೆಯಾದರೂ ನಮ್ಮ ಮಣ್ಣಿನ ಹೆಮ್ಮೆಯ ಕಲೆಗಳಾದ ಕಂಬಳ, ಯಕ್ಷಗಾನ, ವೀರಗಾಸೆ, ಡೊಳ್ಳು ಕುಣಿತ, ನಾಟಕ, ದೈವನರ್ತನ, ಕಾಡಿನ ಜನಜೀವನ, ಸೋಲಿಗರಂತ ಬುಡಕಟ್ಟು ಜನಾಂಗ ಮುಂತಾದವುಗಳ ಬಗ್ಗೆ ಕಿಂಚಿತ್ತೂ ಪರಿಚಯವಿಲ್ಲದಿರುವುದು ವಿಪರ್ಯಾಸವೇ ಸೈ.ಇಂತಹಾ ಚಲನಚಿತ್ರಗಳನ್ನು ನೋಡಿಯಾದರೂ ಮಕ್ಕಳಲ್ಲಿ ಈ ಜಾನಪದ ಸೊಗಡಿನ ಮೇಲೆ ಒಲವು ಮೂಡಿದರೆ ಅಳಿವಿನಂಚಿಗೆ ನಮ್ಮ ದೇಶದ ಕೆಲ ಪ್ರಾಣಿ, ಪಕ್ಷಿಗಳು ಹೋದಂತೆ, ಈ ಕಲೆಗಳು ಆ ಮಟ್ಟಕ್ಕೆ ಹೋಗದಂತೆ ತಡೆಯಬಹುದೇನೋ ಎಂಬ ಸಣ್ಣ ತುಡಿತವಷ್ಟೇ.ಇಲ್ಲಿ ಪಾತ್ರಗಳಿಗಿಂತ ಪಾತ್ರಗಳ ಭಾವನೆ ಮಾತನಾಡಿದೆ, ಆ ಕಾಲದಿಂದಲೂ ಪ್ರಕೃತಿ ಮತ್ತು ಮನುಷ್ಯನಿಗಿದ್ದ ಅಪ್ಯಾಯಮಾನ ಸಂಬಂಧವನ್ನು ಅತ್ಯಂತ ಚಂದದಿಂದ ಕಟ್ಟಿಕೊಟ್ಟಿದೆ ಈ ಕಾಂತಾರ ಚಲನಚಿತ್ರ.
ಇನ್ನು ಕಾಂತಾರ ಸಿನಿಮಾ ಬರೀ ಕಥೆಯಿಂದ, ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಿದ್ದರಿಂದ, ದೈವದ ಆಶೀರ್ವಾದದಿಂದ ಗೆದ್ದಿಲ್ಲಾ ಇದರಲ್ಲಿರುವ ನೈಜತೆ…ಪ್ರಕೃತಿ,ಮನುಷ್ಯ ಮತ್ತು ದೈವಗಳಲ್ಲಿರುವ ಸೌಹಾರ್ದತೆ ಚಿತ್ರಿಸಿ ನಮ್ಮ ಮುಂದಿಟ್ಟ ಪರಿಯಿಂದ ಮನಃ ಗೆಲ್ಲುತ್ತದೆ ಎನ್ನುವುದು ನನ್ನ ಅನಿಸಿಕೆಯಷ್ಟೇ. ದೈವಾರಾಧನೆ, ಅದರೊಂದಿಗೆ ಬೆಸೆದ ಪ್ರಕೃತಿಯ ಅನುಬಂಧ, ಆಕಾಶ, ಕಾನನ, ನೀರು ಎಲ್ಲವನ್ನು ಪೂಜ್ಯತೆಯಿಂದ ಕಾಣುತ್ತಿರುವ ನಮ್ಮ ಸಂಸ್ಕೃತಿಯನ್ನು ಮೇಳೈಸಿ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕನನ್ನು ಮೂರು ದಶಕಗಳ ಕಥೆಯಲ್ಲಿ ಹಿಡಿದಿಡುವಲ್ಲಿ ಚಿತ್ರ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಚಲನಚಿತ್ರದ ಮೊದಲ ದೃಶ್ಯಗಳಲ್ಲಿ ಹೇಳಿರುವಂತೆ ಪಂಜುರ್ಲಿ ದೈವ ಕ್ಷಮಿಸುತ್ತದೆ, ಆದರೆ ಮಾತಿಗೆ ತಪ್ಪಿದರೆ ಗುಳಿಗ ಇಲ್ಲಾ ಕ್ಷೇತ್ರಪಾಲನೆಂದು ಕರೆಯೋ ದೈವ ಮಾತ್ರ ಕ್ಷಮಿಸುವುದಿಲ್ಲ ಎಂದು ಕಡೆಯ ದೃಶ್ಯಗಳಲ್ಲಿ ನಿರೂಪಿಸಿರುವುದು ನನ್ನನ್ನು ಈ ಚಲನಚಿತ್ರದಲ್ಲಿ ತುಂಬಾ ಕಾಡಿದ ವಿಷಯ.ಇಲ್ಲಿ ದೈವ, ದೈವನರ್ತಕನಲ್ಲಿ ಆಹ್ವಾನವಾದಾಗ ತಾನೇ ಕೇಳಿ ಪ್ರಶ್ನೆಗಳಿಗೆ ಉತ್ತರಿಸಿದೆ, ಆದರೆ ಅದು ಸಾಮಾನ್ಯ ವ್ಯಕ್ತಿಯಲ್ಲಿ ಬಂದು ಸೇರಿದಾಗ ಬರೀ ಸನ್ನೆಯಲ್ಲಿ ನರ್ತಿಸುತ್ತಲೇ ತನ್ನ ಜಾಗವೆಂದು ಒಡೆಯನಿಗೆ ತೋರಿಸಿ , ಊರಿನವರು ತಂದಿಟ್ಟ ಅರಳನ್ನು ಸ್ವೀಕರಿಸಿ ತನ್ನ ಹಾವಭಾವಗಳಿಂದಲೇ ಪ್ರತಿಯೊಂದು ವಿಚಾರವನ್ನು ತಿಳಿಸಿ, ನಂತರ ಅಂತ್ಯದಲ್ಲಿ ದೈವದ ಆಡು ಭಾಷೆಯಾದ ತುಳುವಿನಲ್ಲಿ ಎರಡು ಸಾಲು ಹೇಳಿ ಆ ದೃಶ್ಯವನ್ನು ಮತ್ತು ದುಷ್ಟ ಶಕ್ತಿಯನ್ನು ಮುಗಿಸಿದ ಪರಿ ನೆಚ್ಚಿನ ದೃಶ್ಯವಾಗಿ ನನ್ನ ಮನದಲ್ಲಿ ಪ್ರತಿಷ್ಟಾಪಿಸಿಬಿಟ್ಟಿದೆ.
ಫೋಟೋ ಕೃಪೆ :google
ಇನ್ನು ಚಲನಚಿತ್ರದ ಕಥೆಗೆ ಬರುವುದಾದರೆ ರಾಜನೊಬ್ಬ ನೆಮ್ಮದಿ ಅರಸಿ ಹೊರಟು ದೈವವೊಂದರ ಸಾನಿಧ್ಯದಲ್ಲಿ ಖಡ್ಗ ಬಿದ್ದು ಸಂತೃಪ್ತ ಭಾವ ಮೂಡಿಸಿದ ದೃಶ್ಯ ಮತ್ತಲ್ಲಿ ಪಂಜುರ್ಲಿ ದೈವವನ್ನು ಬೇಡಿದಾಗ ಸಾಮಾನ್ಯವಾಗಿದ್ದ ಮನುಷ್ಯನೊಬ್ಬನಲ್ಲಿ ಇದ್ದಕ್ಕಿದಂತೆ ಮೈ ಮೇಲೆ ದೈವ ಆಹ್ವಾನವಾಗಿ ಬೊಬ್ಬಿರಿಯುವ ಪ್ರಸಂಗ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎರಡನೇ ತಲೆಮಾರಲ್ಲಿ ದೈವದ ನೆಲೆಗಾಗಿ ಜನರಿಗೆ ಕೊಟ್ಟ ಜಾಗವನ್ನು ಹಿಂಪಡೆಯಲು ಬರುವ ವಂಶಸ್ಥನ ಉದ್ಧಟತನಕ್ಕೆ ದೈವ ಹೇಳಿದ ಮಾತು ಮತ್ತು ಕಾಡು ಸೇರುವ ಮುನ್ನ ತೋರಿದ ಸವಾಲೆಸೆವಂತಾ ಭಾವ ಅದರಿಂದ ಆ ಪಾತ್ರಧಾರಿಗೆ ನ್ಯಾಯಾಲಯದ ಮೆಟ್ಟಿಲು ನೀಡಿದ ನ್ಯಾಯ ಸಮಂಜಸವಾಗಿ ಚಿತ್ರಿಸಲಾಗಿದೆ.ಇನ್ನು ಕಲಿಯುಗದ ಪಕ್ಕಾ ಚಿತ್ರಣವೆಂಬಂತೆ ಎದುರಿಗೆ ಬೆಣ್ಣೆ ಮಾತು ಬೆನ್ನಿಗೆ ಚೂರಿ ಹಾಕೋ ಖಳನಾಯಕ
ದೇವೇಂದ್ರ ಮತ್ತು ಅವಕಾಶವಾದಿ ಸುಧಾಕರ ಇಂತಹಾ ಪಾತ್ರಗಳನ್ನು ಸೂಕ್ತವಾಗಿ ಚಿತ್ರಿಸಿ ಪ್ರೇಕ್ಷಕ ಪ್ರಭುವಿಗೆ ಸತ್ಯದ ದರ್ಶನವನ್ನೇ ಚಲನಚಿತ್ರ ಮಾಡಿದೆ. ಎರಡನೇ ತಲೆಮಾರಿನಲ್ಲಿ ತೋರಿಸಿದ ಪಂಜುರ್ಲಿ ದೈವದ ನರ್ತನ, ಹೊತ್ತಿಸಿದ ದೊಂದಿ, ಹೂಗಳ ಅರ್ಪಣೆಯ ದೃಶ್ಯ ತಂದಂತಹಾ ತೃಪ್ತ ಭಾವ ಅದೇಕೋ ಸಿನಿಮಾದ ಕೊನೆಯಲ್ಲಿ ಬಂದ ಪಂಜುರ್ಲಿಯ ದೈವನರ್ತನಗಳಲ್ಲಿ ನನಗೇಕೋ ಕಾಣಲಿಲ್ಲಾ.ಅದು ಪೀಳಿಗೆಯಿಂದ ಪೀಳಿಗೆಗೆ ದೈವಾರಾಧನೆ ವಿಜೃಂಭಣೆ ಕಮ್ಮಿಯಾದ ಸಂಕೇತವಾಗಿ ನಿರ್ದೇಶಕರು ತೋರಿದ್ದಾರೆನೋ ಅನ್ನಿಸಿತು.ಇನ್ನು ದೈವ ನರ್ತಕ ಎರಡನೇ ತಲೆಮಾರಿನಲ್ಲಿ ಮಾತನಾಡಿ ದೈವದ ಮತ್ತು ಭಕ್ತರ ನಡುವಿನ ಸೇತುವಾಗಿ ವಂಶಜ ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅದನ್ನು ನಿರೂಪಿಸಲು ಕಾಡಿಗೆ ತೆರಳಿಬಿಡುತ್ತದೆ. ಮೂರನೇ ತಲೆಮಾರಲ್ಲಿ ದೈವ ಕಾಡು, ಮನುಷ್ಯ ಮತ್ತು ಪ್ರಕೃತಿಯನ್ನು ಒಂದಾಗಿಸಿ ತನ್ನ ಸೃಷ್ಟಿಯ ನಿಜವಾದ ಧ್ಯೇಯವನ್ನು ಇಲ್ಲಿ ಪ್ರತಿಪಾದಿಸಿದೆ.ಆದರೆ ಆ ಮೂರನೇ ತಲೆಮಾರಿನ ಪಂಜುರ್ಲಿಯು ದೈವದ ಮೂಲ ಸ್ಥಾನಕ್ಕೆ ಹೋದದ್ದೇಕೆ ಎಂಬುದಕ್ಕೆ ಉತ್ತರ ಸಿಗಲಿಲ್ಲಾ.ಅದು ಉತ್ತರವಿಲ್ಲದ ಊಹೆಗೆ ನಿಲುಕದ್ದೋ ಇಲ್ಲಾ ಚಿತ್ರದ ಮುಂದಿನ ಭಾಗ ಬರುವ ಸೂಚನೆಯಾ ತಿಳಿಯಲಿಲ್ಲಾ.
ಇನ್ನು ಈ ಚಿತ್ರದಲ್ಲಿ ಬರುವ ಹಾಸ್ಯ ಸನ್ನಿವೇಶಗಳು ಸಹಜವಾಗಿ ಮೂಡಿದೆ.ಮೊದಲಿಗೆ ತಾಯಿ ಮಗನ ಸಂಭಾಷಣೆ ಅದಕ್ಕೆ ಸಹನಟರು, ಶಿವನ ಸ್ನೇಹಿತರ ಒಗ್ಗರಣೆ ಮಾತುಗಳು ಕುಂದಾಪುರದ ಒಬ್ಬ ತಾಯಿ ದಂಡಿಸುವ ಪರಿ ಸರಿಯಾಗಿ ತೋರಿಸಿದ್ದಾರೆ (ಅದೇ ರೀತಿ ಅಮ್ಮನ ಹತ್ರ ನಾವು ಎಲ್ಲಾ ಅಲ್ಲದಿದ್ದರೂ ಕೆಲವಾದರೂ ಬೈಗುಳ ಕೇಳಿ ಹುಣ್ಸಿ ಅಡ್ರ್ ಏಟ್ ತಿಂದೋರೆ ಅಲ್ಲವಾ).ಇನ್ನು ಜನಪದೀಯ ಕಲೆಯಾದ ಕಂಬಳವನ್ನು ಅಮೋಘವಾಗಿ ಚಿತ್ರಿಸಿದ ಪರಿ ಎಷ್ಟು ಹೊಗಳಿದರೂ ಸಾಲದು ಎಂಬ ಅಭಿಪ್ರಾಯವಿದ್ದ ನನಗೆ ಅಲ್ಲಿಂದ ಬಂದ ಮೇಲೆ ಮುಖಪುಟದಲ್ಲಿ ಕಂಡ ವಿಡೀಯೋ ಅದನ್ನು ತಾವೇ ಓಡಿಸುವ ಉಮೇದಿಗೆ ಹೊರಟ ರಿಷಭ್ ಸರ್ ಅವರ ಹಿಂದಿನ ಶ್ರಮದ ಮಾತುಗಳನ್ನು ಕೇಳಿ ಅಭಿಮಾನ ಮೂಡಿತು.ಇನ್ನು ಕಂಬಳದಂತಹಾ ಸಾಹಸಮಯ ದೃಶ್ಯವಾದ ನಂತರ ನೈ ಜ ಬದುಕಿನ ಚಿತ್ರಣಗಳು, ನಂತರ ಮೋಸವಾಗಿದ್ದಕ್ಕೆ ಸಿಡಿದೆದ್ದು ಬರುವ ನಾಯಕನ ಸಾಹಸ ನೋಡುವುದಾ…ಇಲ್ಲಾ ಕಳ್ಳನಂತೆ ಎಲ್ಲಾ ಮಾಡಿ ಹಾಕಾ..ಹಾಕಾ ಅಂತಾ ಕೆಸರಲ್ಲಿ ಬಿದ್ದು ಕೊಂಡ ಪ್ರಮೋದ್ ಶೆಟ್ಟರ ಹಾಸ್ಯ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುವುದಾ ಎಂಬುದೇ ತಿಳಿಯಲಿಲ್ಲಾ.
ಫೋಟೋ ಕೃಪೆ :google
ಇನ್ನು ರಾತ್ರಿ ದೈವ ಕನಸಲ್ಲಿ ಕಂಡು ಹೆದರಿದ ಶಿವ ಅಮ್ಮನಿಗೆ ಹೆದರಿಕೆ ಆತ್ತ್ ಅಂತ ಹೇಳಿ ಮನೀಗ್ ಹೋಗಿ ಮಲಗಿದ್ ಎಂದಾಗ ನಗೆ ಉಕ್ಕಿ ಬರುತ್ತದೆ.ನಂತರ ಕಾಡಿನಲ್ಲಿ ಅಡಗಿದ್ದ ಶಿವ ಲೀಲಾಳನ್ನು ಕಾಣಲು ಬಂದಾಗ ಲೀಲಾಳ ಮನೆಯವರೆಲ್ಲಾ ಬಂದುಬಿಟ್ಟಾಗ ಕರಟ ತುರಿಯುತ್ತಿದ್ದು ಸಿಕ್ಕಿಹಾಕಿ ಕೊಂಡಾಗ ನಾಯಕ ಪೆದ್ದು ಪೆದ್ದಾಗಿರುವ ದೃಶ್ಯವಂತು ಸೂಪರ್. ಇನ್ನುಳಿದಂತೆ ಕಾಡಲ್ಲಿ ಅರಣ್ಯ ಇಲಾಖೆಯವರಿಗೆ ಹೆದರಿ ಬಚ್ಚಿಟ್ಟುಕೊಂಡ ಶಿವ ಮತ್ತವನ ಸಂಗಡಿಗರು ಆಡುವ ಹಡಿ ಹಡೀ ಮಾತುಗಳು, ಮತ್ತೊಮ್ಮೆ ಊರಿಗೆ ಯಾರಿಗೂ ತಿಳಿಯದಂತೆ ಬಂದರೂ ಒಬ್ಬೊಬ್ಬರು ಹೋಗಿ ಅರಣ್ಯ ಇಲಾಖೆಯವರಿಗೆ ಸಿಕ್ಕಿಹಾಕಿಕೊಳ್ಳೋ ದೃಶ್ಯಗಳು, ಕಥೆಯ ಒಂದು ಗಂಭೀರ ಸನ್ನಿವೇಶದಲ್ಲೂ ಹಾಸ್ಯದ ರಂಗೋಲಿಯ ಚಿತ್ತಾರ ಪ್ರೇಕ್ಷಕನ ಮನದಲ್ಲಿ ಸ್ಥಿರವಾಗಿ ನಿಲ್ಲಿಸುತ್ತದೆ.ಇನ್ನುಳಿದಂತೆ ಪಾತ್ರಧಾರಿ ಶಿವನಿಗೆ ಬರುವ ಕನಸು ಭವಿಷ್ಯದ ದೈವದ ನಿಲುವೆಂದು ಯೋಚಿಸುವಂತಾದರೂ, ಅದರಲ್ಲೂ ಹಾಸ್ಯದಲ್ಲಿ ಪಕ್ಕಾ ಕುಂದಾಪುರ ಕನ್ನಡದಲ್ಲಿ ಸ್ನೇಹಿತರು ಭಯಬಿದ್ದು ಅವನಿಗೆ ಬೈಯುವಾಗ ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಂತು ಹೌದೇ.ಇನ್ನು ದೈವದ ಕೆಲಸದ ದಿನ ಧೈರ್ಯದಿಂದ ನಾಯಕಿಯನ್ನು ಗೋಳಾಡಿಸಿದ ನಾಯಕ, ನಾಯಕಿಯ ಅಪ್ಪ ಬಂದ ವಿಷಯ ಸರಿಯಾಗಿ ಅರಿಯದೇ ಏನೇನೋ ಮಾತಾಡುವುದಿದೇಯಲ್ಲಾ ಅದಂತು ನಗುವಿನ ಕಡಲಲ್ಲಿ ತೇಲಿಸುತ್ತದೆ.ಇನ್ನು ಸೆರೆಮನೆಯ ದೃಶ್ಯವೆಂದರೆ ಅದು ಗೋಳು ಇಲ್ಲಾ ಕುತಂತ್ರದ ದೃಶ್ಯಗಳ ಬಗ್ಗೆ ಇರಬಹುದೆಂದು ಅಪೇಕ್ಷೆಪಟ್ಟರೆ ಅಲ್ಲೂ ಸಹಾ ಹಾಸ್ಯದ ಮಹಾಪೂರವೇ ಹರಿಸಿದ್ದು ಕಂಡಾಗ ಎಷ್ಟು ವಿಭಿನ್ನ ಆಲೋಚನೆ ಎನಿಸಿತು. ರಾಂಪ ಪಾತ್ರಧಾರಿ ಗಂಭೀರವಾಗಿ ಸೆರೆಮನೆಯಲ್ಲಿ ಹೇಳೋ “ ಹೌದ್ ಮಾರಾಯ ನಿನಗೆ ಮಾತ್ರ ಬಾರಿ ಜವಾಬ್ದಾರಿ” ಎಂದಾಗ ನಾನು ಕಣ್ಣಲ್ಲಿ ನೀರು ಬರೋವರೆಗೆ ಚಿತ್ರಮಂದಿರದಲ್ಲಿ ನಕ್ಕಿದ್ದೆ.
ಪ್ರತಿಯೊಂದು ದೃಶ್ಯಗಳಲ್ಲಿರುವ ನೈಜತೆ, ಸಹಜತೆ ಕಂಡಾಗ ಈ ಚಲನಚಿತ್ರ ನಮ್ಮ ಕನ್ನಡ ನಾಡಿನ ಸ್ವಂತಿಕೆಯ ಚಿತ್ರ ಎಂಬ ವಿಷಯ ಅಪಾರ ಹೆಮ್ಮೆ ಮೂಡಿಸುತ್ತದೆ.ಭಾರತದ ಭೂಪಟದಲ್ಲಿ ಕರ್ನಾಟಕವೆಂಬ ರಾಜ್ಯ ದಕ್ಷಿಣ ಭಾಗದಲ್ಲಿದ್ದರೂ, ದಕ್ಷಿಣ ಭಾರತದ ಚಲನಚಿತ್ರ, ದಕ್ಷಿಣ ಭಾರತದ ಅಡುಗೆ ಎಂದರೆ, ಉತ್ತರದ ಮಂದಿ ಓ ನೀವು ತಮಿಳವರಾ ಎಂದೇ ಕೇಳುತ್ತಿದ್ದದ್ದು ಸಾಮಾನ್ಯ. ಏಕೆಂದರೆ ದಕ್ಷಿಣ ಎಂದರೆ ಮದ್ರಾಸ್ ಎಂಬ ಭಾವನೆ ಹೆಚ್ಚಾಗಿ ಎಲ್ಲರಲ್ಲೂ ಬೇರೂರಿರುವುದಂತು ಹೌದು. ಅದರಲ್ಲಿ ಕನ್ನಡದ ಮಣ್ಣಿನ ಸೊಗಡನ್ನು ಕನ್ನಡದ ನೆಲದ ಒಂದು ಪ್ರಾಂತ್ಯದಲ್ಲಿ ಕನ್ನಡಿಗನೊಬ್ಬ ಕನ್ನಡದ ಸಿನಿಮಾವನ್ನು ಕನ್ನಡ ಭಾಷೆಯಲ್ಲೇ ಜಗತ್ತಿನಾದ್ಯಂತ ಕೊಂಡೊಯ್ದದ್ದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತಹಾ ವಿಷಯವೇ ಸೈ ಮತ್ತು ಈ ನವೆಂಬರಿನಲ್ಲಿ ಕನ್ನಡಾಂಬೆಗೆ ಅವಳ ಜನ್ಮದಿನೋತ್ಸವಕ್ಕೆ ಕನ್ನಡಿಗರಿಂದ ಸಿಕ್ಕ ಅಮೂಲ್ಯ ಉಡುಗೊರೆ ಎನ್ನಬಹುದು.
ಇನ್ನು ನಮಗೆಲ್ಲಾ ನಮ್ಮ ತಂದೆ, ತಾಯಿ ಹೇಳುತ್ತಿದ್ದ ಮಾತೆಂದರೆ ದೈವ-ದೇವರನ್ನು ನಂಬಿ, ಪೂಜೆ-ಪುನಸ್ಕಾರ ಆಚರಿಸಿ ಗುರು-ಹಿರಿಯರನ್ನು ಗೌರವಿಸುವವನೇ ಜೀವನದಲ್ಲಿ ಉದ್ಧಾರ ಆಗೋದು ಎಂಬ ಮಾತುಗಳು ಎಷ್ಟು ಅರ್ಥಪೂರ್ಣ ಎಂದು ಈ ಚಲನಚಿತ್ರ ನನಗೆ ಸಾಬೀತುಪಡಿಸಿತು.ಇನ್ನುಳಿದಂತೆ ನಿರ್ದೇಶಕ, ಕಥೆಗಾರ,ನಾಯಕ, ದೈವ ನರ್ತಕ ಹೀಗೆ ಹಲವು ಜವಾಬ್ದಾರಿ ಹೊತ್ತಿರುವ ರಿಷಬ್ ಸರ್ ಪ್ರತಿ ರಂಗಕ್ಕೂ ಅದಕ್ಕೆ ಬೇಕಾಗಿರುವ ಶ್ರಮವಹಿಸಿ, ನ್ಯಾಯಯುತವಾದ ಫಲಿತಾಂಶಕ್ಕೆ ಕಾರಣವಾಗಿರೋದರಿಂದ ಕಾಂತಾರ ಸಿನಿಮಾ ನೋಡಲೇಬೇಕು.ಇಲ್ಲಿ ಆ ಕಲೆ ಮತ್ತು ನಂಬಿಕೆಗಳ ಮೇಲೆ ನಿರ್ದೆಶಕನಿಗೆ ಬರೀ ಬಾಯಿ ಮಾತಿನ ಭಕ್ತಿಯಲ್ಲಾ, ಭಯ-ಭಕ್ತಿ ಇದ್ದು ತನ್ನ ಮಣ್ಣಿನ ಹೆಮ್ಮೆ ಎಂಬ ವಿಶೇಷ ಗುಣ ಮೆಚ್ಚುವಂತದ್ದೇ ಸೈ.ಹೇಗೆ ನಮ್ಮ ಅಖಂಡ ಭಾರತ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ಸಾರುತ್ತದೋ, ಹಾಗೆ ಕರುನಾಡ ಮಣ್ಣಲ್ಲೂ ಇಂತಹ ಮತ್ತೊಂದು ಪ್ರಾಂತ್ಯದ ಕಲೆ ಜನಪದ ಸೊಗಡು ನಮ್ಮ ಮೂಲ ನಿವಾಸಿಗಳಿಗೇ ತಿಳಿದಿರುವುದಿಲ್ಲಾ. ಇಂತಹ ಪ್ರಾಂತ್ಯವಾರು ಕಲೆಗಳ ಮೇಲೆ ಬೆಳಕು ಚಲ್ಲುವಂತಹಾ ಚಲನಚಿತ್ರಗಳು ಅಂದರೆ ವೀರಗಾಸೆ, ಹುಲಿ ಕುಣಿತ,ಯಕ್ಷಗಾನ, ಮಲೆನಾಡಿನ ವೈವಿಧ್ಯ ತಿನಿಸುಗಳು, ಪಶ್ಚಿಮ ಘಟ್ಟದ ಕಾಡುಗಳು ವನ್ಯಸಿರಿ,ಉತ್ತರ ಕರ್ನಾಟಕದ ಕಲೆಗಳು, ಆಚರಣೆ, ವನ್ಯ ಸಂಪತ್ತು ಮುಂತಾದ ಕನ್ನಡದ ವಿವಿಧ ಪ್ರಾಂತ್ಯದ ವಿಶೇಷ ವಿಷಯಗಳ ಮೌಲ್ಯಾಧಾರಿತ ಚಲನಚಿತ್ರಗಳು ನಮ್ಮ ಕನ್ನಡದಲ್ಲಿ ಬಂದರೆ, ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಇದಕ್ಕಿಂತ ಉತ್ತಮ ಉಡುಗೊರೆ ಬೇರೊಂದಿಲ್ಲಾ ಎಂಬುದು ನನ್ನ ಅನಿಸಿಕೆ.
ಹಣವಿದ್ದವರು, ಒಳ್ಳೆಯವರೆಂಬ ಸೋಗು ಹಾಕಿ ನಡೆಯುವವರ ಮುಂದೆ ಶೋಷಿತ ಸಮಾಜದ ಪ್ರತಿನಿಧಿಗಳು ಅವರಿಗಾದ ಮೋಸಗಳ ಬಗ್ಗೆ ಪ್ರತಿಭಟಿಸಿದಾಗ ಆಗುವ ಅನ್ಯಾಯವನ್ನು ಸ್ಪಷ್ಟವಾಗಿ ಚಿತ್ರದಲ್ಲಿ ತೋರಿಸಲಾಗಿದೆ.”ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ” ಎಂಬಂತೆ ದೈವವೊಂದು ಸಾಮಾನ್ಯ ಮನುಷ್ಯನ ಮೇಲೆ ಆವಾಹನೆಯಾಗಿ ಮೋಸವಾದವರ ಬೆಂಬಲಕ್ಕೆ ನಿಂತು ನ್ಯಾಯ ಸಲ್ಲಿಸಿದ ದೃಶ್ಯ ನೋಡಲು ತುಂಬಾ ಅಭಿಮಾನ ಮತ್ತು ಹೆಮ್ಮೆ ಎನಿಸಿ ಅದರಲ್ಲಿ ಕಲಾವಿದನ ಪರಕಾಯ ಪ್ರವೇಶ ರೋಮಾಂಚನಗೊಳಿಸುತ್ತದೆ.ಚಲನಚಿತ್ರದ ಕೊನೆಯ ಭಾಗದಲ್ಲಿ ದೈವ ಆವಾಹನೆಯ ನಂತರದ ರಿಷಬ್ ಅವರ ಅಭಿನಯ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎಂದರೆ ಅತಿಶಯದ ಮಾತಲ್ಲಾ.ದೈವ ನರ್ತನ ಮಾಡಿ ಸೈ ಎನಿಸಿಕೊಂಡ ನಾಯಕನ ಅಭಿನಯ, ದೂರದೃಷ್ಟಿ ಎಲ್ಲವೂ ಮೆಚ್ಚುವಂತದ್ದಾದರೂ ತುಂಬಾ ಮನಸ್ಸಿಗೆ ಹಿಡಿಸಿದ್ದು ಚಿತ್ರದ ಮೊದಲಿಗೆ ಸಾರಿದ ಸಂದೇಶವೆನ್ನಲ್ಲೋ, ಜೀವನದ ಕಟು ವಾಸ್ತವಾಂಶವೆನ್ನಬೇಕೋ
ತಿಳಿಯುತ್ತಿಲ್ಲಾ. ಒಟ್ಟಿನಲ್ಲಿ ನನ್ನ ಮನಸಿಗೆ ಹತ್ತಿರವಾದುದೆಂದರೆ ಹಣ, ಹೆಂಡತಿ, ಮಕ್ಕಳು, ರಾಜ್ಯ, ಸಂಪತ್ತು,ಅಧಿಕಾರವಿದ್ದರೂ ನೆಮ್ಮದಿ ಇರದೇ ಅದನ್ನು ಹಣದಿಂದ ಖರೀದಿಸಲಾಗದೆ ತೊಳಲಾಡುವ ವಿಷಯ.ಇದು ಜೀವನದ ಜ್ವಲಂತ ಸತ್ಯ ಎಂದರೇ ತಪ್ಪಾಗಲಾರದು, ಆದರೆ ಆಸ್ತಿ ಸಂಪಾದನೆಯನ್ನು ಜೀವನದುದ್ದಕ್ಕೂ ಧ್ಯೇಯವಾಗಿಸಿ ಕೊಂಡವರಿಗೆ ಅದು ತಿಳಿಯುವಲ್ಲಿ ಕಾಲ ಮೀರಿ ಹೋಗಿರುತ್ತದೆ.
ಇನ್ನುಳಿದಂತೆ ನಮ್ಮ ನಗೆ ಹಬ್ಬದ ರುವಾರಿ ಕೃಷ್ಣೇಗೌಡರು ಭಾಷಣಗಳಲ್ಲಿ ಹೇಳುವುದೇನೆಂದರೆ ಮಂಗಳೂರು, ಉಡುಪಿ, ಕುಂದಾಪುರ ಅಂದರೆ ಕರಾವಳಿ ಭಾಗದ ಜನರಿಗೆ ಬೈಯಲು ಬರುವುದಿಲ್ಲಾ ಎಂದು ಅಂದರೆ ಬೈಗುಳಗಳಿಲ್ಲವೆಂದು. ಅವರೀ ಚಿತ್ರ ಕಂಡರೆ ಕಿವಿ ಮುಚ್ಚಿಕೊಳ್ಳುವಂತಾ ಬೈಗುಳಗಳ ಬಗ್ಗೆ ಕೆಲ ಸನ್ನಿವೇಶಗಳಲ್ಲಿ ಈ ಚಿತ್ರದಲ್ಲಿ ಕೇಳಿ ಬರುತ್ತದೆ.ಇನ್ನು ಈ ಚಿತ್ರದಲ್ಲಿ ನನಗೆ ಅರ್ಥವಾಗದ ಹಲವು ಸಂಗತಿಗಳಿದ್ದಾವಲ್ಲಾ ಎಂದನಿಸಿದ್ದಂತು ಹೌದು. ಅದು ತುಳು ಭಾಷೆಯಲ್ಲಿ ಮಾತಾಡಿದ್ದು ಸರಿಯಾಗಿ ತಿಳೀಲಿಲ್ಲಾ,ಗುಳಿಗ ಅಥವಾ ಕ್ಷೇತ್ರಪಾಲ, ಪಂಜುರ್ಲಿ ದೈವದ ಬಗ್ಗೆ ತಿಳಿದಿದ್ದರೂ ಸವಿವರವಾಗಿ ತಿಳಿದಿಲ್ಲವಲ್ಲಾ ಎಂದು.ಎರಡನೇ ಪೀಳಿಗೆ ದೈವದ ಚಾಕರಿ ಮಾಡುವ ದೈವನರ್ತಕ ಕಾಡಿನಲ್ಲಿ ಮರೆಯಾಗಲೂ, ಜಾಗವಿತ್ತ ವಂಶದವ ಮಾಡಿದ ಅವಮಾನ ಮತ್ತು ಉದ್ಧಟತನ ಕಾರಣವಾಗಿದ್ದು ಸಹಜ, ಅಲ್ಲದೇ ಭೂಮಿಯ ಒಡೆಯನಿಗೆ ಪಂಜುರ್ಲಿಯ ಕಾರ್ನಿಕದ ಬಗ್ಗೆ ಅರಿವು ಮೂಡಿಸುವ ಜವಾಬ್ಧಾರಿ ಇತ್ತು.ಆದರೆ ದುಷ್ಟತೆಯನ್ನು ಪಂಜುರ್ಲಿ ಕ್ಷಮಿಸಿದರೂ, ಗುಳಿಗ ಕ್ಷಮಿಸದೇ ಇದ್ದು ದುಷ್ಟತೆಯನ್ನು ಸಂಹರಿಸಿದ ನಂತರ.. ದೈವದ ಅಂಶವಿರುವ ದೈವ ನರ್ತಕ ಮನುಷ್ಯ, ಕಾನನ, ಪ್ರಕೃತಿ ಮತ್ತು ಅರಣ್ಯ ರಕ್ಷಿಸುವ ಅಧಿಕಾರ ವರ್ಗ ಒಂದುಗೂಡಿಸಿ ಸಹಬಾಳ್ವೆ, ಸಮನ್ವಯತೆಯನ್ನು ಭೋದಿಸಿದರೂ,.. ಮತ್ತೆ ದೈವ ನರ್ತಕ ಪಂಜುರ್ಲಿಯ ವೇಷ ಧರಿಸಿದಾಗ ಆ ದೈವ ಕಾನನಕ್ಕೆ ಹೋಗಿಬಿಡುವುದೆಂದು ತೋರಿಸಿ ಎರಡನೆ ಪೀಳಿಗೆಯಲ್ಲಿ ಮರೆಯಾದ ದೈವದ ಬಳಿ ಹೋಗುವುದೆಂದು ತೋರಿಸಿದ್ದಾದರೂ ಯಾಕೆ? ಪಂಜುರ್ಲಿ ದೈವ ಈಗಲೂ ಮರೆಯಾಗಿ ಕಾಡಿನಲ್ಲಿರುತ್ತದಾ? ಇನ್ನು ನಿಷ್ಟೆಯಿಂದ ದೈವದ ಕಾರ್ಯ ಮಾಡುತ್ತಿದ್ದ ಗುರವ ಪಾತ್ರಧಾರಿಯ ಅಂತ್ಯ ಘೋರವಾಗಿದ್ದರ ಹಿಂದೆಯಿದ್ದ ದೈವ ಪ್ರೇರಣೆಯಾದರೂ ಏನು? ಚಿತ್ರದ ಕೆಲ ಭಾಗದಲ್ಲಿ ಮಣ್ಣೊಳಗೆ ಸೇರಿ ಹೋಗುವ ದೈವದ ಒಂದು ಭಾಗದ ರಹಸ್ಯ, ಕೊನೆಯಲ್ಲಿ ದೈವ ನರ್ತಕ ಕಾಡಿನಲ್ಲಿ ಮರೆಯಾದ ಹಿಂದಿನ ಮರ್ಮ ಕಾಂತಾರದ ಎರಡನೇ ಭಾಗ ಹೇಳುತ್ತದಾ? ಎಂಬ ಪ್ರಶ್ನೆ ನನ್ನನ್ನು ಕಾಡಿತು.
ಇಲ್ಲಿ ದೈವದ ಆಶೀರ್ವಾದವೂ ಈಡೀ ಚಿತ್ರ ತಂಡದ ಪ್ರತಿಯೊಬ್ಬರ ಶ್ರಮಕ್ಕೆ ಫಲ ನೀಡಿದೆ, ದೈವವಿರಲಿ, ದೇವರಿರಲಿ ಶ್ರಮಕ್ಕೆ ಫಲ ನೀಡುತ್ತದೆ ಎಂಬುದನ್ನು ಈ ಚಿತ್ರದ ಯಶಸ್ಸಿನ ನಾಗಾಲೋಟ ತಿಳಿಸುತ್ತಿದೆ. ಕನ್ನಡ ಚಲನಚಿತ್ರದ ಈ ಸಾಧನೆಗೆ ಬೇರೆ ಬೇರೆ ಭಾಷೆಯ ನಟರು ನೀಡುತ್ತಿರುವ ಮನ್ನಣೆ, ಹೊಗಳಿಕೆಯ ಮಾತುಗಳು,ಕರುನಾಡಿನ ಒಂದು ಸಣ್ಣ ಪ್ರಾಂತ್ಯದ ಸಂಸ್ಕೃತಿಗೆ ತೋರಿಸುತ್ತಿರುವ ಅಭಿಮಾನ, ಸತತವಾದ ಯಶಸ್ವೀ ಪ್ರದರ್ಶನ ಇವೆಲ್ಲವೂ ಒಂದೆಡೆ ಹೆಮ್ಮೆ ತರಿಸಿ, ಇಂಗ್ಲೀಷಿನ Every Cloud has Silver Lining ಎಂಬ ಆಂಗ್ಲ ಗಾದೆಯ ನೆನಪು ನನಗೆ ತರಿಸಿತು.ಚಿತ್ರವೊಂದರ ಹಿಂದಿನ ಯಶಸ್ಸಿನ ಹಿಂದೆ ಹಲವಾರು ಕಾಣದ ಕೈಗಳ ಸಹಕಾರ ಪರಿಶ್ರಮವಿದೆ.ಅಂತಹಾ ಎಲ್ಲಾ ತಂತ್ರಜ್ಞರು, ತಾಂತ್ರಿಕ ವರ್ಗದವರೂ, ಸಲಹಾಗಾರರು, ಕೆಲಸಗಾರರು, ಅದ್ಭುತ ಚಿತ್ರದ ಮೂಲ ರುವಾರಿ ರಿಷಭ್ ಶೆಟ್ಟಿ ಮತ್ತು ತಂಡ, ಅಲ್ಲದೇ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಎಲ್ಲರಿಗೂ ವಂದನೆಗಳನ್ನು ಅರ್ಪಿಸೋದು ಪ್ರತಿಯೊಬ್ಬ ಪ್ರೇಕ್ಷಕನ ಆದ್ಯ ಕರ್ತವ್ಯ ಎನ್ನಬಹುದೇನೋ.
ಶಿವ ಮತ್ತು ಲೀಲಾರ ಸಂಭಾಷಣೆ, ಪ್ರಣಯದ ದೃಶ್ಯಗಳು ಶೃಂಗಾರ ರಸದ, ಚಿತ್ರದ ಅಲ್ಲಲ್ಲಿ ಸಹಜವಾಗಿ ಕಂಡು ಬಂದಿರುವ ಕುಂದಾಪುರ ಕನ್ನಡ ಭಾಷೆಯ ಹಾಸ್ಯರಸ, ದೈವ ನರ್ತಕ ಪ್ರತಿ ಪೀಳಿಗೆಯಲ್ಲೂ ಮಾತಾನಾಡುವಾಗ, ನರ್ತಿಸುವಾಗ ಕಂಡು ಬರೋ ರೌದ್ರ ರಸ,ಕಂಬಳ ಮತ್ತೆ ಆ ಕೆಸರ ಗದ್ದೆಯಲ್ಲಿ ನಡೆಯೋ ಹೊಡೆದಾಟ,ಶಿವನನ್ನು ಸಾಯಿಸಲು ಒಡೆಯನ ಮಂದಿ ಬಂದಾಗ ಶಿವ ಬಡಿದಾಡೋ ದೃಶ್ಯ ಮತ್ತು ಕೊನೆಯಲ್ಲಿ ಸಮುದಾಯ ಒಡೆಯನ ಮೇಲೆ ಸಿಡಿದೆದ್ದಾಗ ನುಗ್ಗಿ ಬರೋ ದೃಶ್ಯಗಳಲ್ಲಿ ವೀರ ರಸ,ಸಮುದಾಯದ ದೈವ ನರ್ತಕ ಗುರುವನ ಸಾವು, ಒಡೆಯನ ದುರಾಸೆಗೆ ಊರಿಗೆ ಊರೇ ಹತ್ತಿ ಉರಿಯುವಾಗ ಮೂಡುವ ಕರುಣಾರಸ, ಜಾಗದ ಆಸೆಗೆ ಒಡೆಯ ಮಾಡುವ ತಂತ್ರಗಾರಿಕೆ, ತನ್ನ ಕಾರ್ಯಸಾಧನೆಗೆ ಕೆಲ ಪಾತ್ರಗಳು ಶೋಷಿತ ಸಮಾಜದವರನ್ನು ಬಳಸಿಕೊಳ್ಳುವ ರೀತಿ, ಆದ ಅವಮಾನಕ್ಕೆ ಹಗೆ ತೀರಿಸಿಕೊಳ್ಳಲು ಅಧಿಕಾರಿ ನೀಡುವ ಶೋಷಣೆ ಇವೆಲ್ಲಾ ತೋರೊ ಜಿಗುಪ್ಸೆಯ ಭೀಭತ್ಸರಸ, ಗುಳಿಗವೆಂಬ ದೈವವೊಂದು ಸಾಮಾನ್ಯ ಮನುಷ್ಯನಲ್ಲಿ ಹೊಕ್ಕಾಗ ಶಿವ ಪಾತ್ರಧಾರಿ ಬರೀ ಸಂಭಾಷಣೆಯಿರದೆ ತನ್ನ ನರ್ತನ, ತನ್ನ ಅಭಿನಯದಲ್ಲೇ ದುಷ್ಟರನ್ನು ಸದೆಬಡಿದು ಆ ಜಾಗ ತನ್ನದೆಂದು ತಿಳಿಸಿ ಕುಣಿವಾಗ ತೋರಿಸೋ ಭಯಾನಕ ರಸ, ಸತ್ಯದ ಗೋಚರವಾದಾಗ ಒಡೆಯನ ಮನೆಗೆ ಬಂದು ಇದೇನು ನೆನೆದು ಬಂದ್ಯಾ ಶಿವ ಎಂದರೆ ಶುದ್ಧ ಆಗಿ ಬಂದದ್ದು ಎಂದು ಸಮಾಧಾನವಾಗಿ ಪ್ರತಿಕ್ರಯಿಸಿ, ಸಮಯ ನನ್ನೊಂದಿಗಿದೆ ಎಂದು ಸೂಚ್ಯವಾಗಿ ಹೇಳುತ್ತಾ, ಶಿವ ಪಾತ್ರ ತೋರೋ ಶಾಂತರಸ,ಚಿತ್ರದ ಪ್ರತಿ ದೃಶ್ಯದಲ್ಲೂ ಸಂಭಾಷಣೆ, ದೈವದ ಮಹತ್ವ ಮತ್ತು ಕಾರ್ನಿಕವನ್ನು ಎತ್ತಿ ಹಿಡಿಯುವಂತಾ ಮತ್ತು ಪ್ರಕೃತಿಯ ಮಡಿಲಲ್ಲಿ ನಾವಿರುವಂತೆ ಅನಿಸುವ ಸಾಮಾನ್ಯ ಜನಜೀವನ ಕಟ್ಟಿಕೊಡುವ, ಅನ್ಯಾಯಕ್ಕೆ ಕಡೆಗೊಮ್ಮೆ ಅಂತ್ಯವಿದೆ ಸತ್ಯಕ್ಕೆ ಎಂದಿಗೂ ಜಯ ಎಂಬ ಸಂದೇಶ
ಸಾರಿದ ಅದ್ಭುತ ರಸ ಹೀಗೆ ಈ ಚಲನಚಿತ್ರದಲ್ಲಿ ನವರಸಗಳು ಸೇರಿ ಪ್ರಾಮಾಣಿಕ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ನವರಸದ ಅಂಶಗಳನ್ನು ಈ ಚಲನಚಿತ್ರ ಉಣಬಡಿಸಿದೆ ಎಂದು ನನಗನಿಸಿತು.
ಊಟದಲ್ಲಿ ನವರಸಗಳಾದ ಉಪ್ಪು, ಹುಳಿ, ಖಾರ,ಸಿಹಿ, ಕಹಿ, ಒಗರು ನಾಲಿಗೆಯ ನವರಂಧ್ರಗಳನ್ನು ಪ್ರಚೋದಿಸಿ ಹೇಗೆ ಊಟದ ಗಮ್ಮತ್ತು ಹೆಚ್ಚಿಸುತ್ತದೋ ಹಾಗೆ ಶೃಂಗಾರ,ಹಾಸ್ಯ,ರೌದ್ರ ಹಾಸ್ಯ,ವೀರ,ಕರುಣಾ,ಭೀಭತ್ಸ,ಭಯಾನಕ,ಅದ್ಭುತ ಈ ನವರಸಗಳು ಅಭಿನಯದ ನಿರೂಪಣೆಯಲ್ಲಿ ಅತಿ ಮುಖ್ಯ. ನಾಟಕವಿರಲಿ, ಚಲನಚಿತ್ರವಿರಲಿ ಅದರಲ್ಲಿ ನಿರೀಕ್ಷಿಸೋದು ಈ ರಸಗಳನ್ನೇ, ಈ ರಸಗಳೆಲ್ಲವೂ ಮೇಳೈಸಿದ ಚಿತ್ರ, ನಾಟಕಗಳೇ ನನಗಿಷ್ಟವಾಗೋದು.ಅದರಲ್ಲೂ ಹಾಸ್ಯ ಮತ್ತು ಭಯಾನಕ ರಸ ಹೆಚ್ಚಾಗಿರುವ ಸಿನಿಮಾ ನೋಡಲಿಚ್ಛಿಸುವ ನನಗೆ ಈ ಚಿತ್ರ ತುಂಬಾ ಮನಸಿಗೆ ಹತ್ತಿರವಾಯಿತು.ನಿಮಗೂ ಒಂದು ವಿಭಿನ್ನವಾದ ಅನುಭವ ಬೇಕೆಂದರೆ ಕಾಂತಾರ – ಒಂದು ದಂತಕಥೆ ಈ ಚಲನಚಿತ್ರ ನೋಡಿ, ನಿಮ್ಮ ಮಕ್ಕಳಿಗೂ ತೋರಿಸಿ..ಮುಂದೊಮ್ಮೆ ನಿಮ್ಮ ಪ್ರಾಂತ್ಯದ ಕಥೆ ನಿಮ್ಮ ಮಗು ಜಗತ್ತಿಗೆ ಯಾವ ಮಾಧ್ಯಮದ ಮೂಲಕ ತೋರುವಂತದಾಗುವುದೇನೋ ಯಾರಿಗೆ ಗೊತ್ತು.ನೋಡಿದ ನಂತರ ನಿಮಗೆ ಯಾವ ಭಾವನೆ ಮೂಡಿಸಿತೆಂದು ಹೇಳಿ.
ನಲ್ಮೆಯಿಂದ
- ಸುಮಾ.ಎಸ್.ಭಟ್