ಕವಿಯಾಗಿದ್ದೇನೆ ಎಂದು ನಾನು ಹೇಳಲಾರೆ.ಏನೋ ನಾನು ಕವಿ ಎಂದು ಹೇಳಿಕೊಳ್ಳಲು ಹಿಂಜರಿಕೆ ಇದೆ. ಈ ಎಲ್ಲ ನನ್ನ ರಗಳೆಗಳಿಂದಾಗಿ ಇವುಗಳನ್ನು ನಾನು ಪ್ರಕಟಿಸಲು ಹೋಗಿರಲಿಲ್ಲ.ಆದರೆ ಗೆಳೆಯ ಮುರುಳಿ ಮೋಹನ್ ಕಾಟಿ ಮತ್ತು ಡಾ. ಮಮತಾ ಕೆ.ಎನ್ ಅವರಿಂದ ‘ಕಾಮಕಸ್ತೂರಿ ಬನ’ ಕವನ ಸಂಕಲನ ಓದುಗರ ಮಡಿಲು ಸೇರಿದೆ, ಓದಿ ನಿಮ್ಮ ಅಭಿಪ್ರಾಯ ತಪ್ಪದೆ ಹಂಚಿಕೊಳ್ಳಿ ನಿಮ್ಮವ ಪ್ರಕಾಶ್ ಮಂಟೇದ…
ಮಾತು ನೆನೆಕೆಗಳಾಗಿ..
ಕಾಮಕಸ್ತೂರಿ ಬನ ನನ್ನ ಮೊದಲ ಸಂಕಲನ. ಬಹಳ ಹಿಂಜರಿಕೆಯಿಂದಲೇ ಇದನ್ನು ಪ್ರಕಟಿಸುತ್ತಿರುವೆ. ಇವು ನನ್ನ ಗೀಳು, ವೈಚಾರಿಕ ಎಚ್ಚರದ ಏಕಾಂಗೀತನದ ಅವೇಗಗಳು, ಓದಿನ ಪ್ರಭಾವ, ಬದುಕಿನ ಹಲವು ಸುಳಿಗಳ ಮೊತ್ತವೂ ಆಗಿವೆ. ಮತ್ತೆ ನನ್ನದೇ ಖಾಸಗಿ ತುಮುಲ, ಒಳ ಘರ್ಷಣೆಗಳ ಆಳ ಅಗಲಗಳ ಹೊರ ಚಾಚುವಿಕೆ ಈ ಕಾಮಕಸ್ತೂರಿ ಬನ.
ಕವಿತ್ವ ಹಾಗೂ ಈ ಕಾವ್ಯದ ಚರ್ಚೆ ವಿಚಾರಗಳ ಒಣಚೂರ್ಣತ್ವದ ಆಚೆಗಿನ ನನ್ನಂಥವರ ಕಾವ್ಯಕಟ್ಟುವ ಪ್ರವೃತ್ತಿಗಳಿಗೆ ಬದುಕೆ ಮೂಲ. ಕಾವ್ಯವೆಂದರೆ, ಅವ್ವ ರೊಟ್ಟಿ ಸುಡುವಾಗ ಅದರ ಮೇಲೆ ತನ್ನ ಬೆರಳುಗಳನ್ನು ನಯವಾಗಿ ಆಡಿಸಿ ಮಗುವನ್ನು ತಟ್ಟುವಂತೆ ತಟ್ಟಿ ರೊಟ್ಟಿ ಮಾಡುವ ಬಗೆಯಂತೆ. ಸೂಜಿದಾರ ಹಿಡಿದ ಹರಿದ ಬಟ್ಟೆ ಹೊಲೆದು ಮೈಮುಚ್ಚುವ ಮಾನ ಕಾಯುವ ಅವಳ ಜೀವಕಾಳಜಿಯ ಮುತುವರ್ಜಿಯಂತೆ. ಅವಳ ಬೆರಳುಗಳಿಗಂಟಿದ ಜೀವನಪ್ರೇಮದ ಸ್ಪರ್ಶವು ನನ್ನ ಕಾವ್ಯದೊಳಗೆ ಮೂಡಬೇಕು ಎಂದೂ ಹಂಬಲಿಸಿದವ.
ಗೊತ್ತಿಲ್ಲ! ಕವಿಯಾಗಿದ್ದೇನೆ ಎಂದು ನಾನು ಹೇಳಲಾರೆ. ಅಥವಾ ನನ್ನ ಓದು ಕೊಟ್ಟ ಸಂವೇದನೆ ಮೇಲೆ ಹೀಗೆ ಮಾತಾಡುತ್ತಿರುವೆನೋ ಅಥವಾ ಈ ನೆಪದಲ್ಲಿ ಬರೀ ಬೌದ್ಧಿಕ ಪ್ರವರಗಳಲ್ಲಿ ಲಂಭಿಸಿರುವೆನೋ ಎಂಬ ಗೊಂದಲಗಳಿವೆ ನನಗೆ. ಈ ಕಾರಣದಿಂದಲೋ ಏನೋ ನಾನು ಕವಿ ಎಂದು ಹೇಳಿಕೊಳ್ಳಲು ಹಿಂಜರಿಕೆ ಇದೆ. ಈ ಎಲ್ಲ ನನ್ನ ರಗಳೆಗಳಿಂದಾಗಿ ಇವುಗಳನ್ನು ನಾನು ಪ್ರಕಟಿಸಲು ಹೋಗಿರಲಿಲ್ಲ. ಮತ್ತೆ ಪ್ರಕಟಿಸಿ ಎಂದು ಯಾರನ್ನಾದರೂ ಕೇಳಲು ನಾಚಿಕೆಯಾಗುತಿತ್ತು. ಏಕೆಂದರೆ ಇವುಗಳಲ್ಲಿ ನನ್ನ ವ್ಯಕ್ತಿಗತವಾದ ಪ್ರವರಗಳಿವೆಯಷ್ಟೆ ಹೊರತು, ಇವುಗಳಿಂದ ನನ್ನಾಚೆಗಿನ ಪ್ರಯೋಜನ ಏನಿದೆ ಎಂದು ನಾನೇ ಕೇಳಿಕೊಳ್ಳುತ್ತಿದ್ದೆ. ಮತ್ತೆ ಈ ತರ ಬರೆಯುತ್ತಿರುವವರು ತುಂಬಾ ಇದ್ದಾರೆ. ನನ್ನ ಕವನಗಳಲ್ಲಿ ಅಂತಹ ವಿಶಿಷ್ಠತೆ ಏನೂ ಇಲ್ಲ ಎಂಬ ಕಾರಣಕ್ಕೆ ನಾನು ಪ್ರಕಟಿಸಲು ಹಿಂಜರಿಯುತ್ತಿದ್ದೆ. ಕೆಲವು ಸ್ನೇಹಿತರು ನೀನು ಚೆನ್ನಾಗಿ ಬರಿತಿಯ ಅಂತಿದ್ರು. ಮತ್ತೆ ಕೆಲವರು ನಿನ್ನ ಪದ್ಯಗಳು ಕೋಲಾಜ್ಡ್ ಆದ ಚಿತ್ರದಂತಿವೆ ಎಂದೂ ಪ್ರತಿಕ್ರಿಯಿಸಿದ್ದುಂಟು. ಇದರ ನಡುವೆ ನಾನು ಸುಮ್ಮನಾಗಿಬಿಟ್ಟಿದ್ದೆ ಮತ್ತೆ ಫೇಸ್‌ಬುಕ್‌ನಲ್ಲಿ ಬರೆಯುತ್ತ ಇರ್ತಿದ್ದೆ ಅಷ್ಟೆ. ಹಾಗಾಗಿ ಇಲ್ಲಿನವು ಹೆಚ್ಚು ಫೇಸ್ಬುಕ್ ಕವಿತೆಗಳೇ ಆಗಿವೆ.
ಗೆಳೆಯ ಮುರುಳಿ ಮೋಹನ್ ಕಾಟಿ ಮತ್ತು ಡಾ. ಮಮತಾ ಕೆ.ಎನ್, ನನ್ನ ಪದ್ಯಗಳ ಬಗ್ಗೆ ಆಸಕ್ತಿ ತೋರಿಸಿ ನನ್ನ ಮೊದಲ ಸಂಕಲನ ತರಲು ಕಾರಣರಾಗಿದ್ದಾರೆ. ಇವರಿಗೆ ನಾನು ಸದಾ ಋಣಿ.
ನನ್ನ ಈ ಸಂಕಲನಕ್ಕೆ ನನ್ನ ಗುರು ಎಂ. ಆರ್ ಕಮಲ ಇವರೇ ಮೊದಲ ಮಾತುಗಳು ಅಥವಾ ಮುನ್ನುಡಿ ತರ ಬರಿಬೇಕೆಂಬುದು ನನ್ನ ಇಂಗಿತವಾಗಿತ್ತು. ಅವರ ಔದಾರ್ಯ ಮತ್ತು ಕಾಳಜಿ ದೊಡ್ಡದು. ಮೇಡಂ ನನ್ನ ಈ ಸಂಕಲನದ ಕವಿತೆಗಳನ್ನು ಓದಿ ತುಂಬು ವಿಶ್ವಾಸ ಕಾಳಜಿಗಳ ಜೊತೆಗೆ ನನ್ನ ಅರಿವನ್ನು ಹೆಚ್ಚಿಸುವ ಪ್ರೇರಣಾದಾಯಕ ಮಾತುಗಳನ್ನು ಬರೆದುಕೊಟ್ಟಿದ್ದಾರೆ. ನಾನು ಅವರ ವಿದ್ಯಾರ್ಥಿ ಎಂಬುದೇ ನನಗೆ ಹೆಮ್ಮೆ. ಅವರ ಪ್ರೀತಿ ಮತ್ತೂ ವಿಶ್ವಾಸದ ಗುರುಕಾರುಣ್ಯಕ್ಕೆ ನಾನು ಸದಾ ತಲೆಬಾಗುತ್ತಲೇ ಇರುತ್ತೇನೆ.
ಅವ್ವನಿಗೆ ಈ ಸಂಕಲನವನ್ನು ಅರ್ಪಿಸಿದ್ದೇನೆ. ಅವಳಿದಿದ್ದರೆ ಬಹಳ ಖುಷಿ ಪಡ್ತಿದ್ದಳು. ನಮ್ಮನ್ನು ಇಷ್ಟು ಬೇಗ ಅಗಲಿ ಹೋಗ್ತಾಳೆ ಎಂದು ನಾವ್ಯಾರೂ ಅಂದುಕೊಂಡಿರಲಿಲ್ಲ. ಅವ್ವ ನನ್ನ ಬಗ್ಗೆ ಬಹಳ ಹೆಮ್ಮೆ ಪಡ್ತಿದ್ಳು. ಆದರೆ ಅದನ್ನು ತೋರಿಸ್ತಿರ್ಲಿಲ್ಲ. ನಾನು ಕವಿ ಅಂತ ಕೇಳಿದ್ರೆ ಅವ್ವ ಅವಳದೆ ಮಾತಲ್ಲಿ ನನ್ನನ್ನ ವ್ಯಂಗ ಮಾಡ್ತಿದ್ಳು ಅನ್ಸುತ್ತೆ. ದುರಂತ ಇದ್ಯಾವುದೂ ನಡೆಯಲಿಲ್ಲ. ಇದಕ್ಕೆ ಕಾರಣ ನನ್ನ ಆಲಸಿತನ, ಸೋಮಾರಿತನ. ಜೊತೆಗೆ ಅವ್ವ ದಿಢೀರನೇ ಕಾಯಿಲೆ ಬಿದ್ದು ಹೋಗಿಬಿಟ್ಟಳು ಎನ್ನುವುದು. ಕನಿಷ್ಠ ಅವಳನ್ನು ಕೊನೆಗಳಿಗೆಯಲ್ಲಾದರೂ ಈ ಕವಿತೆಗಳ ಸಂಕಲನವನ್ನೋ ಅಥವಾ ನನ್ನ ಥೀಸಿಸನ್ನೋ ಪುಸ್ತಕ ಮಾಡಿ ಅವಳಿಗೆ ಅರ್ಪಿಸಿ ಅವಳ ಸಂತಸ, ಖುಷಿಯನ್ನು ನಾನು ಕಣ್ತುಂಬಿಕೊಳ್ಳಬೇಕೆಂದಿದ್ದೆ. ಆದರೆ ಇದ್ಯಾವುದೂ ಹೀಗೆ ಫಲಿಸಲಿಲ್ಲ.
ಗುರುಗಳಾದ ಎಂ. ಆರ್ ಕಮಲ
ಇಂತಹ ಹೊತ್ತಲ್ಲಿ ನನ್ನ ವಿದ್ಯಾಗುರುಗಳು, ಮೇಷ್ಟ್ರು, ಮೇಡಂಗಳನ್ನು ನಾನು ನೆನೆಯಲೇಬೇಕು. ಅಕ್ಷರ ಕೊಟ್ಟು ಅರಿವನ್ನೂ ಕೊಟ್ಟ ಕನ್ನಡದ ಮೇಷ್ಟ್ರು ಪರಂಪರೆಗೆ ಶರಣು. ಅದರಲ್ಲೂ ಕಾವ್ಯವನ್ನು ಓದುವ ತಮ್ಮ ಶೈಲಿಯಲ್ಲಿ ನನ್ನನ್ನು ದಂಗುಬಡಿಸಿದ್ದ ಕಾವ್ಯಮಂಡಲದ ನಿರಂಕುಶಮುನಿ ಕಿರಂ ಮೇಷ್ಟ್ರು ಜೊತೆಗೆ ಕೋಟಿಗಾನಹಳ್ಳಿ ರಾಮಯ್ಯನವರ ಕಾವ್ಯದ ಆವೇಶ ನಾನೂ ಈ ತರದ ಕಾವ್ಯ ಬರಿಬೇಕು ಎಂಬ ಒಳ ಆಸೆಯನ್ನು ಹೆಚ್ಚಿಸಿದ್ದಂತು ಸತ್ಯ. ಹಾಗಾಗಿ ನನಗೆ ಇವರಿಬ್ಬರು ಒಂತರ ಕಾವ್ಯಮುನಿಗಳಿದ್ದ ಹಾಗೆ. ಆದ್ದರಿಂದಲೇ ಇವರನ್ನು ಸದಾ ನೆನೆಯುತ್ತಲೇ ಇರಬೇಕು. (ರಾಮಯ್ಯನವರ ಮೆಟ್ಟಡಿಯ ಅರಿವು ಎಂಬ ಕಲ್ಪನೆಯನ್ನು ನನ್ನ ಕವಿತೆಯಲ್ಲಿ ಬಳಸಿಕೊಂಡಿರುವೆ) ಎಲ್ಲಕ್ಕಿಂತಲೂ ಮಾತೃಚೇತನದಂತಿರುವ ನನ್ನ ಗುರು ಕನ್ನಡದ ಅಕವಿ, ಅಕಾವ್ಯ ತತ್ವದ ಅರಿಗ ಜೇಪಿ (ಡಾ. ಬಂಜಗೆರೆ ಜಯಪ್ರಕಾಶ್) ಸರ್. ಈ ಮಾಂತ್ರಿಕ ವ್ಯಕ್ತಿತ್ವದ ಪ್ರಭಾವ ಮತ್ತು ಒಡನಾಟವೇ ನನಗೆ ವಿಶ್ವವಿದ್ಯಾಲಯವೂ ನೀಡದ ಬದುಕಿನ ವಿವೇಕ ಹಾಗೂ ಸಾಹಿತ್ಯದ ಗ್ರಹಿಕೆಗಳನ್ನು ನೀಡಿದೆ ಎಂದರೆ ತಪ್ಪಾಗದು. ಅವರು ನನ್ನಂಥವರಿಗೆ ಕಲಿಸಿದ ಸಾಹಿತ್ಯ, ರಾಜಕಾರಣದ ಗ್ರಹಿಕೆಗಳು ನನ್ನನ್ನು ಬೆಳೆಸುತ್ತಿವೆ ಹಾಗೂ ನನ್ನ ಕಾವ್ಯ ಗ್ರಹಿಕೆಗಳನ್ನು ಹರಿತಗೊಳಿಸುತ್ತಲೇ ಇವೆ. ಅಸಲಿ ಮನುಷ್ಯ ಪ್ರೀತಿಯ ಅವರ ವ್ಯಕ್ತಿತ್ವ ಹಾಗೂ ವಿನಯ ವಿವೇಕವನ್ನು ನಾನು ನೆನೆಯುತ್ತಲೇ ಇರಬೇಕು. ಎಂ.ಎ ಮುಗಿಸಿ ಏನೂ ಗೊತ್ತುಗುರಿ ಇಲ್ಲದ ನನಗೆ ಬೀದಿನಾಟಕದ ತತ್ವ ಹೇಳಿಕೊಟ್ಟು ನನ್ನ ಅಭಿವ್ಯಕ್ತಿಗೆ ಕಸುವು ತುಂಬಿದ ಖ್ಯಾತ ರಂಗಕರ್ಮಿ ಸಿ. ಬಸವಲಿಂಗಯ್ಯನವರನ್ನು ನಾನು ನೆನೆಯದೆ ಇರಲಾರೆ. ಹಾಗೆ ಮೋಹನ್ ಕೊಂಡಜ್ಜಿ ಸರ್, ಕೆಪಿಎಸ್ಸಿ ಸದಸ್ಯರಾಗಿದ್ದ ದಾಸಯ್ಯ ರಂತಹ ಹಿರಿಯರನ್ನೂ ನಾನು ನೆನೆಯಬೇಕು. ನನ್ನಂತಹ ಅಶಿಸ್ತಿನ ವ್ಯಕ್ತಿಯೊಳಗೆ ಕಾವ್ಯದ ಆಕರ್ಷಣೆ ಮೂಡಿಸಿದ ಡಾ. ಟಿ.ಹೆಚ್ ಲವಕುಮಾರ್ ಅವರನ್ನೂ ಈ ಸಂದರ್ಭದಲ್ಲಿ ನಾನು ನೆನೆಯಲೇಬೇಕು.
ಎಲ್ಲಕ್ಕಿಂತಲೂ ನನ್ನ ಬದುಕಿಗೆ ನೆಲೆಕೊಟ್ಟು ನಾನು ತಲೆಎತ್ತಲು ಕಾರಣಕರ್ತರಾದವರು ಪತ್ರಕರ್ತರಾಗಿದ್ದ ಅಣ್ಣ ಮಂಜುನಾಥ್ ಅದ್ದೆಯವರು. ಅಲ್ಲದೆ ಅವರು ಈ ಸಂಕಲನಕ್ಕೆ ಬೆನ್ನುಡಿಯನ್ನೂ ಬರೆದು ನನ್ನ ಮೇಲೆ ಮತ್ತಷ್ಟು ಪ್ರೀತಿಯ ಸಿಂಚನಗೈದಿದ್ದಾರೆ. ಇವರ ಅವ್ವನತನಕ್ಕೆ ಶರಣು ಶರಣಾರ್ಥಿ.
ನಾಟಕಕಾರರು, ವಿಮರ್ಶಕರೂ ಆದ ಕೆ.ವೈ. ನಾರಾಯಣಸ್ವಾಮಿ ಯವರಂತೂ ನನಗೆ ಪಿಹೆಚ್.ಡಿ ಮಾರ್ಗದರ್ಶಕರಾಗಿದ್ದರೂ ಎನ್ನುವುದಷ್ಟೇ ಅಲ್ಲ, ನನ್ನ ಸಾಹಿತ್ಯಕ ತಿಳಿವು ಹಾಗೂ ವಿಮರ್ಶೆ ಪಾಠಗಳನ್ನು ಹೇಳಿಕೊಟ್ಟು ನನ್ನ ಅರಿವಿನ ಭಾಗವೇ ಆಗಿ ಹೋಗಿದ್ದಾರೆ. ನನ್ನ ಮೇಷ್ಟ್ರು ನಟರಾಜ್ ಹುಳಿಯಾರ್ ರವರ ಲಿಟರರಿ ಕಲ್ಚರ‍್ನ ಗ್ರಹಿಕೆಗಳು ಹಾಗೂ ಮನುಷ್ಯ ಸಂವೇದನೆಯ ನೈತಿಕತೆ ಮತ್ತೂ ಸೂಕ್ಷ್ಮತೆಗಳ ಬಗೆಗಿನ ಅವರ ಪಾಠಗಳು ನನ್ನನ್ನು ತಿದ್ದುತ್ತಲೇ ಇವೆ. ಹಾಗೆಯೇ ಡಾ. ಡೊಮಿನಿಕ್ ಸರ್ ರವರು ನನ್ನ ಜೀವನದಲ್ಲಿ ವಹಿಸಿದ ಪಾತ್ರವನ್ನು ನಾನೆಂದೂ ಮರೆಯುವ ಆಗಿಲ್ಲ. ಆಶ್ವರ್ಯವೆಂದರೆ ನನ್ನನ್ನು ಮಂಟೇದ ಎಂದು ಕರೆದು ನಾನು ’ಪ್ರಕಾಶ್ ಮಂಟೇದ’ನಾಗಲು ಕಾರಣ ಹಾಲು ಮನಸ್ಸಿನ ಡಾ. ಸಿ.ಜಿ ಲಕ್ಷ್ಮೀಪತಿಯವರು, ಇವರೆಲ್ಲರ ಅವ್ವನತನಕ್ಕೆ ಶಬ್ಧಗಳಲ್ಲಿ ನಾನೇನ ಹೇಳಲಿ. ಪತ್ರಕರ್ತರಾದ ಪಾರ್ವತೀಶ್, ಮೈಸೂರಿನ ಸ್ವಾಮೀ ಆನಂದ್ ಸರ್, ಡಾ. ಎಂ.ಬಿ ರಾಮಮೂರ್ತಿ ಸರ್. ಡಾ. ರಾಜರಾಂ ಸರ್ ಇವರುಗಳ ವಿಶ್ವಾಸ ಮತ್ತೂ ಔದಾರ್ಯ ನನ್ನನ್ನು ಸಾಕಿ ಸಲಹುತ್ತಲೇ ಇದೆ ಅಲ್ಲದೆ ಗೆಳೆಯ ಹಾಗೂ ಕವಿ, ನಾಟಕಕಾರ ಡಾ. ರಘುನಂದನ್ ರವರ ಅಸ್ಖಲಿತ ಪ್ರೀತಿಗೆ ಶರಣು. ಡಾ.ಪ್ರಭಾಕರ ಸರ್, ಸ್ಲಂ ಜಗತ್ತು ಪತ್ರಿಕೆಯ ಅಂದಿನ ಟಿ.ಕೆ ದಯಾನಂದ ಹಾಗೂ ಡಾ. ಕುರುವ ಬಸವರಾಜ್ ರವರ ಪ್ರೇರಣಾದಾಯಕ ಒಡನಾಟ ನನಗೆ ಶಕ್ತಿ ನೀಡಿದೆ ಹಾಗೂ ನಾನು ಅಪಾರವಾಗಿ ಗೌರವಿಸುವ ಶ್ರೀಪಾದ್ ಭಟ್ಟರು, ಕವಯತ್ರಿ ಸುಜಾತ ಮೇಡಂ ಹಾಗೂ ನನ್ನ ನೆಚ್ಚಿನ ಕವಿ ಗಂಗಪ್ಪತಳವಾರ್ ಇವರೆಲ್ಲರ ಪ್ರೋತ್ಸಾಹವನ್ನು ನಾನು ನೆನೆಯದೆ ಇರಲಾರೆ.
ಅದರಲ್ಲೂ ಈ ಕವಿತೆಗಳನ್ನು ಶ್ರದ್ಧೆಯಿಂದ ಓದಿ, ಪುಸ್ತಕ ಆಗ್ತಿವೆ ಜವಾಬ್ಧಾರಿಯಿಂದ ನೋಡಬೇಕು, ಉದಾಸೀನ ಬೇಡ ಎಂದೇಳಿ ಇದು ತನ್ನದೇ ಕೆಲಸವೆಂಬಂತೆ ಮುತುವರ್ಜಿ ವಹಿಸಿ ಕವಿತೆಗಳನ್ನು ಒಂದು ವಿನ್ಯಾಸಕ್ಕೆ ಒಳಪಡಿಸಿದ ತಮ್ಮ ಡಿ.ಆರ್ ದೇವರಾಜನ ಪ್ರೀತಿಗೆ ನಾನೇನ ಹೇಳಲಿ. ಈ ವಿಚಾರದಲ್ಲಿ ಇವ ಸದಾ ನನಗೆ ಮಾದರಿ. ನನ್ನ ಜೀವದ ಗೆಳೆಯ ರವಿ ಮಾಮ, ಮತ್ತೊಬ್ಬ ತಮ್ಮ ಮತ್ತು ಕವಿ ಹುಲಿಕುಂಟೆಮೂರ್ತಿ, ಕವಿ ಮಂಜುಸರ್ ಇವರ ಕಾಳಜಿಗೂ ಶರಣು. ವೆಂಕಟಾಚಲ, ಶಾಂತ ಗೋವಿಂದಣ್ಣ, ಜ್ಯೋತಿ ಲಿಂಗ, ಸಂಪತ್, ರಮೇಶ್ ಇವರಿಗೂ ನನ್ನ ಶರಣು.
ನನ್ನ ಅಪಾರ ಸ್ನೇಹಬಳಗದ ತಾಯ್ತನ ಹಾಗೂ ಬಯಲು ಬಳಗದ ನನ್ನ ಬಾಂಧವರ ಪ್ರೀತಿ ನಾನು ರೂಪುಗೊಳ್ಳಲು ಕಾರಣವಾಗಿದೆ ಮತ್ತು ಡಾ. ರಂಗನಾಥ್ ಕಂಟನಕುಂಟೆ, ರೇಣುಕಾರಾಧ್ಯ, ಇವರೆಲ್ಲರ ಸಂಬಂಧದ ಒಡನಾಟ ನಾನು ಕನಿಷ್ಠ ಮನುಷ್ಯನಂತೆ ಬದುಕಲು ಶಕ್ತಿ ನೀಡಿದೆ. ನಿಶಾಂತ ಭಾಗ್ಯ, ಕಡೂರಿನ ನನ್ನ ಆಪ್ತವಲಯ, ರವೀಂದ್ರ ಹಾರೋಹಳ್ಳಿ, ಸುಧೀಂದ್ರಕುಮಾರ್ ರವರ ಪ್ರೋತ್ಸಾಹಕ್ಕೂ ಧನ್ಯವಾದಗಳು.
ಅಲ್ಲದೆ ಸದಾ ನನ್ನ ಹಿತಬಯಸುವ ಹಾಗೂ ನೀವು ಪುಸ್ತಕ ಬರೆಯಲಿಲ್ಲ ಎಂದು ಮುನಿಸಿಕೊಳ್ಳುವ ಆರಡಿಮಲ್ಲೇಶ್, ನವೀನ್ ಮಂಡಗದ್ದೆ ಹಾಗೂ ನನ್ನ ಸ್ನೇಹ ಬಳಗಕ್ಕೆ ಶರಣು ಶರಣಾರ್ಥಿ.
ಮುಖ್ಯವಾಗಿ ಅವ್ವ ಹೋದ ಮೇಲೆ ನನ್ನನ್ನು ಜೋಪಾನ ಮಾಡಿ, ತನ್ನ ಕಟುವಿಮರ್ಶೆಯ ಮೂಲಕ ನನ್ನನ್ನು ಎಚ್ಚರಿಸಿ ನನ್ನ ಆಲಸೀತನ ದೂರ ಮಾಡಿ ನಾನು ಉನ್ನತವಾದ ಸ್ಥಾನಕ್ಕೆ ಹೋಗಬೇಕೆಂದು ಸದಾ ಹಂಬಲಿಸುವ ವಿದ್ಯಾಳ ಅಸ್ಸೀಮ ಪ್ರೀತಿ ಮತ್ತು ಕಾಳಜಿ ಶಬ್ಧಾತೀತವಾದವು. ವಿದ್ಯಾಳಿಂದಲೂ ನಾನು ಕಲಿಯುತ್ತಲೇ ಇದ್ದೇನೆ. ಹಾಗೆ ನನ್ನ ಮುದ್ದು, ನನ್ನ ಜೀವ ಮಗಳು ಕರುಣ, ಪಪ್ಪ ನೀನು ಪುಸ್ತಕವನ್ನು ಗಿಫ್ಟಾಗಿ ಕೊಡಬೇಂದು ನನ್ನನ್ನು ಸದಾ ಎಚ್ಚರಿಸುತ್ತಾಳೆ. ಈ ನನ್ನ ಕಂದನೆಂಬ ತಾಯಿಯೇ ನನಗೆ ಸ್ಫೂರ್ತಿ.
ನನ್ನ ಕುಟುಂಬವನ್ನು ತಮ್ಮ ಕುಟುಂಬವೇ ಎಂದು ಭಾವಿಸಿ ಪೊರೆಯುತ್ತಿರುವ ಅತ್ತೆಮಾವರಾದ ಶಾರದ ಮತ್ತು ಬೋರಲಿಂಗಯ್ಯನವರ ಪ್ರೀತಿ ಮತ್ತು ಕಾಳಜಿಗಳು ನನ್ನನ್ನಾ ದಂಗುಬಡಿಸಿವೆ. ನನ್ನ ಹಿತಕ್ಕಾಗಿ ಸದಾ ತುಡಿವ ಇವರಿಗೆ ನಾ ಏನ ಹೇಳಲಿ. ಎಲ್ಲಕ್ಕಿಂತಲೂ ನನ್ನ ಭಾವ ಶಿವಪ್ರಸಾದ್‌ರ ಪ್ರೀತಿ ಹಾಗೂ ಗೌರವಕ್ಕೆ ನನ್ನಲ್ಲಿ ಶಬ್ಧಗಳಿಲ್ಲ. ಮೇಲಾಗಿ ತಂಗವ್ವ ಲಕ್ಷ್ಮೀ ಮತ್ತೂ ಅದ್ವೀತ್ ರವರ ಪ್ರೀತಿ ನನ್ನನ್ನು ಬೆಚ್ಚಿಬೀಳಿಸಿದೆ. ಇವರಿಗೆ ಹೇಗೆ ಕೃತಜ್ಞತೆ ಹೇಳಲಿ. ಕೊಲೂರಿನ ಸೋದರ ಅರುಣ, ಆತ್ಮೀಯರಾದ ಶ್ರಮಜೀವಿ ಕಂಚಿಯವರು ಹಾಗೂ ಚಿಕ್ಕತ್ತೆ ಚಿಕ್ಕಮಾವ ಅವರ ಪ್ರೀತಿಗೂ ಶರಣು. ಮಡಿಕೇರಿಯ ನನ್ನೆಲ್ಲಾ ಪ್ರೀತಿಯ ಬಂಧುಗಳನ್ನು ನೆನೆಯುವೆ.
ನನ್ನ ಅರಾಜಕ ಅಪ್ಪ ಮತ್ತೆ ಅಣ್ಣ ರಮೇಶ, ಅತ್ತಿಗೆ ರೇಣುಕ, ಅಕ್ಕ ಗೀತಾ, ಮಾಮ ಶಿವಮೂರ್ತಿ, ನೇತ್ರ, ಜಯಂತ್, ತಮ್ಮ ರವಿ, ಪ್ರತಿಭಾ, ನಾನು ಹೆಚ್ಚು ಪ್ರೀತಿಸುವ ತಮ್ಮ ಗೋವಿಂದ ಮತ್ತು ಶಶಿ, ನನ್ನನ್ನು ಬೆಳೆಸಿದ ಚಿಕ್ಕಪ್ಪ ಬೋರಯ್ಯ, ಚಿಕ್ಕವ್ವ ಚೆನ್ನಮ್ಮ ನಮ್ಮೊಡನಿರದ ಸೋದರಮಾವಂದಿರಾದ ಮಾವ ಬೆಟ್ಟಪ್ಪ, ನರಸಿಂಹಯ್ಯ ಹಾಗೂ ದೊಡ್ಡಪ್ಪ ಗಣೇಶಪ್ಪ ದೊಡ್ಡವ್ವ ನರಸಮ್ಮನವರ ಪ್ರೀತಿಯನ್ನು ನೆನೆಯಲೇಬೇಕು. ಹಾಗೂ ದೊಡ್ಡಣ್ಣ ಶ್ರೀನಿವಾಸ್, ಚಿಕ್ಕಣ್ಣ ಪುರುಷೋತ್ತಮ್ ಇವರನ್ನು ನಾನು ನೆನೆಯಲೇಬೇಕು. ನನ್ನ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಇಟ್ಟುಕೊಂಡಿರುವ ಅಕ್ಕನ ಮಗನಾದ ಸಿದ್ಧಾರ್ಥನನ್ನು ನಾನು ನೆನೆಯಲೇಬೇಕು.
ಈ ಸಂಕಲನವನ್ನು ಪ್ರಕಟಿಸುತ್ತಿರುವ ಕೌದಿ ಪ್ರಕಾಶನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ಅಲ್ಲದೆ ನನ್ನ ಕಾಲೇಜಿನ ಸಹೋದ್ಯೋಗಿಗಳು, ಪ್ರಾಂಶುಪಾಲರು, ನನ್ನ ಅಪಾರ ವಿದ್ಯಾರ್ಥಿಗಳ ಪ್ರೀತಿಗೆ ಶರಣು.
ದೇವರದೊಡ್ಡಿ ಮಾರಣ್ಣ, ಅಜ್ಜಂಪುರ ವೆಂಕಟೇಶಣ್ಣ, ಉಮೇಶ್ ಬಿ.ಆರ್, ಗವಿಸಿದ್ಧ, ಸತೀಶ, ಪ್ರಸನ್ನ, ಬಸವರಾಜ, ಸಿದ್ಧರಾಜು ಇವರೆಲ್ಲ ನನ್ನ ಶಕ್ತಿಚೈತನ್ಯಕ್ಕೆ ಕಾರಣೀಭೂತರು. ನನ್ನ ಊರಿನ ಜನರ ಪ್ರೀತಿ ಅಲ್ಲದೆ, ಬಾಲ್ಯದ ಗೆಳಯಾ ರಾಮೂರ್ತಿ, ದೇವರಾಜ, ರಾಜ, ಮಿಲಿಟರಿ ಕರಿಯಪ್ಪ, ತಮ್ಮಂದಿರಾದ ಕಾಂತರಾಜ ಇವರೆಲ್ಲರ ಪ್ರೀತಿ ವಿಶ್ವಾಸಗಳು ನನ್ನ ಜಗತ್ತನ್ನು ಶ್ರೀಮಂತಗೊಳಿಸಿವೆ.
ಕಾಮಕಸ್ತೂರಿ ಬನ ಈ ಸಂಕಲನದಲ್ಲಿನ ಒಂದಷ್ಟು ಕವಿತೆಗಳಲ್ಲಿ ಕಿಂಚಿತ್ತಾದ ಕಾವ್ಯ ಸಂವೇದನೆಯ ಸೆಳೆತಗಳು ಓದುಗರ ಗಮನಕ್ಕೆ ಬಂದರೆ ನನಗಷ್ಟೆ ಖುಷಿ ಸಾಕು.
ವಂದನೆಗಳೊಂದಿಗೆ.
- ಪ್ರಕಾಶ್ ಮಂಟೇದ