ದುಡ್ಡು ನಿನ್ನಲ್ಲಿ ತೀರಿದ ಬಳಿಕ…ನಿನ್ನನೇ ದೂರವೆ ಇಡುತಾರ…ಗುರುನಾಥ ಶೀಲವಂತರ ಅವರ ಲೇಖನಿಯಲ್ಲಿ ಅರಳಿದ ಜೀವನದ ಕಟುಸತ್ಯ, ತಪ್ಪದೆ ಮುಂದೆ ಓದಿ…
ಲೋಕವೇ ಕೆಟ್ಟಿಹುದು | ಮನುಜ
ತಿಳಕೋರ!
ಬಾಳುವೆ ಮಾಡೋದು | ಮೊದಲ
ಕಲಕೋರ! (ಪ)
ದುಡ್ಡು ನಿನ್ನಲ್ಲಿ ಇರುವ ತನಕ
ಎಲ್ಲರೂ ದೊಡ್ಡವ ಎನುತಾರ.
ದುಡ್ಡು ನಿನ್ನಲ್ಲಿ ತೀರಿದ ಬಳಿಕ
ನಿನ್ನನೇ ದೂರವೆ ಇಡುತಾರ.
ಸಿರಿ ಸಂಪತ್ತು ಕೂಡಿದ ಹೊತ್ತಿಗೆ
ನೀನೆ ಅವರಿಗೆ ಸಾಹುಕಾರ.
ಎಲ್ಲವೂ ಕಳೆದು ಹೋದ ಮ್ಯಾಲ
ನಿನ್ನನೇ ನೋಡಿ ನಗುತಾರ! (೧)
ಮೇಲ ಮಜಲಿನ ಬಂಗಲೆ ಕಡೆಗೆ
ಬಂಧು ಬಳಗ ಬರುತಾರ.
ಬೆಲ್ಲಕೆ ಇರುವೆ ಮುತ್ತಿದ ಹಾಂಗ
ನಿನ್ನ ಸುತ್ತಲೂ ಇರತಾರ.
ಇಷ್ಟದ ಬಾಳು ಕಷ್ಟದಲಿ ಇದ್ದಾಗ
ಒಬ್ಬನ ಬಿಟ್ಟು ಹೋಗುತಾರ.
ನೀನು ಯಾರೋ ಗುರುತಿಲ್ಲ ಅಂತ
ಮರೆಗೆ ಸರಿದು ನಿಲ್ಲುತಾರ. (೨)
ಕಾಮ ಕ್ರೋಧ ಮದ ಮಾತ್ಸರಗಳು
ಕೆಡುಕಿಗೆ ಮೂಲ ಎಚ್ಚರ.
ಧ್ಯಾನ ಸಾಧನದಿ ದಾನ ಧರ್ಮದಿ
ಗೆಲ್ಲುತ ಸಾಗು ಇಹ - ಪರ.
ಅರಿತವರ ಸಂಗದಿ ಅನುದಿನವಿದ್ದು
ಜೀವನ ಮಾಡೋ ಹುಷಾರ.
ಗುರುವಿನ ವಚನ ಉಪದೇಶ ಕೇಳಿ
ಬೆಳೆಯೋ ಶಿಖರದ ಎತ್ತರ. (೩)
- ಗುರುನಾಥ ಶೀಲವಂತರ , ಸಾಹಿತಿಗಳು