ಶ್ರಮದ ಸಿಹಿ ಊಟವನ್ನೇ ದೂರುವ…ಉದಾಸೀನತೆಯ ಕುಹಕ ನೋಟಗಳು…ಪಾರ್ವತಿ ಜಗದೀಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳು, ತಪ್ಪದೆ ಮುಂದೆ ಓದಿ…
ಒಂದೊಂದು ದಿನವೇ ಹಾಗೇ..
ಎಂದೂ ಮುಗಿಯದ ಕಾದಂಬರಿಯಂತೆ.
ಕೆಲವು ರಾತ್ರಿಗಳೇ ಹಾಗೇ
ಬುಗಿಲೆದ್ದ ಭೋರ್ಗೆರವ ಸಮುದ್ರದ ಅಲೆಗಳಂತೆ!
ನಸು ನಕ್ಕ ಕ್ಷಣಗಳನ್ನೇ ಮರೆಸುವ
ಬಿಸಿ ಉಸಿರಿನ ಕಣ್ಣ ಬಿಸಿ ಹನಿಗಳು
ತನ್ನವರ್ಯಾರೆಂದು ತನ್ನನ್ನೇ ಕೇಳುವ
ಹೃದಯದ ನಿಟ್ಟುಸಿರ ಭಾವಗಳು!
ಶ್ರಮದ ಸಿಹಿ ಊಟವನ್ನೇ ದೂರುವ
ಉದಾಸೀನತೆಯ ಕುಹಕ ನೋಟಗಳು
ನಿಸ್ವಾರ್ಥ ಕಾಳಜಿಯನ್ನೇ ಕಡೆಗೆಣಿಸಿ
ಅಲ್ಲಗೆಳೆಯುವ ತುಟಿಯ ಕೊಂಕು ಚಲನೆಗಳು!
ತಂಪೆನ್ನಿಯುವ ಸುಮಧುರ ಸ್ನೇಹ ಬಾಂಧವ್ಯಗಳನ್ನೇ
ಅನುಮಾನಿಸಿ ಆಚೆ ಸರಿಸುವ ಸಮಯದಾಟಗಳು
ಕಗ್ಗಂಟುಗಳ ತೊಡಕನ್ನೇ ಬಿಡಿಸಿಕೊಳ್ಳಲಾಗದ
ಸಹ ಬಂಧನಗಳು!
ಒಂದೊಂದು ದಿನಗಳೇ ಹಾಗೇ ತಿಳಿಸಿ ಹೋಗುವವು ಯಾರೆಷ್ಟೇ ಆತ್ಮೀಯರಿದ್ದರೂ ಕೊನೆವರೆಗೂ ನಿನಗೆ ನೀನೇ ಎಂದು ಒಂದೊಂದು ರಾತ್ರಿಗಳೇ ಹಾಗೇ ಬಯಸಿದ್ದೆಲ್ಲ ಬದುಕಿಗೆ ಸಿಕ್ಕರೂ ಉಸಿರಿನ ಅದೃಷ್ಟವಿದ್ದರಷ್ಟೇ ಉಳಿಯುವುದು ಸವಿಬೆಳಗೊಂದು!
- ಪಾರ್ವತಿ ಜಗದೀಶ್