ಕಂಚಿ ಪಣವ್ಯಾಜ್ಯದ ಫರ್ಮಾನು ಅಧ್ಯಯನದ ಹಿನ್ನೆಲೆಯಲ್ಲಿ ರೂಪಿಸಿರುವ ಲೇಖನ ಇದು.ಕೆಂಪು ವಸ್ತ್ರದ ಮಹಿಮೆ – ಮಹತ್ವಗಳ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಲೇಖನದ ಭಾಗ ೩ ಮುಂದೊರೆಯುತ್ತದೆ. ಮುಂದೆ ಓದಿ…
ಕಂಚಿ ಪಣವ್ಯಾಜ್ಯದ ಫರ್ಮಾನು ಅಧ್ಯಯನದ ಹಿನ್ನೆಲೆಯಲ್ಲಿ ರೂಪಿಸಿರುವ ಲೇಖನ ಇದು. ಅಲೆಮಾರಿ ದಕ್ಕಲ ಸಮುದಾಯದವರು ಬಿದಿರು ಕೊಳವೆಯಲ್ಲಿ ಸಂರಕ್ಷಿಸಿಕೊಂಡು ಬಂದಿರುವ ಈ ಫರ್ಮಾನನ್ನು ಪೂರ್ವದಲ್ಲಿ ದಕ್ಕಲಿಗರ ಕಟ್ಟೆಮನೆಯಾಗಿದ್ದ ಹಂಪಿಯಲ್ಲಿ ಶಾಲಿವಾಹನ ಶಕ ೧೧೨೬ ರ ರಾಕ್ಷಸ ಸಂವತ್ಸರ, ಕಾರ್ತಿಕ ಶುದ್ಧ ೫ ರಂದು ಕ್ರಿಶ. ೧೨೦೪ ರಲ್ಲಿ ಬರೆಯಲಾಗಿದೆ ಎಂದು ನಕಲು ಪ್ರತಿಯಲ್ಲಿ ನಮೂದಿತವಾಗಿದೆ.

(ಜನುಮದ ಜೋಡಿ ಸಿನಿಮಾದಲ್ಲಿ ಗಿಣಿವಸ್ತ್ರ ಧರಿಸಿರುವ ನಟ ಶಿವರಾಜ್ ಕುಮಾರ್)
ನನ್ನ ಹಲವಾರು ಗೆಳೆಯರು ಆಗಾಗ ಕುತೂಹಲದಿಂದ “ನೀವು ಕೆಂಪು ವಸ್ತ್ರ ಧರಿಸಲು ಕಾರಣವೇನು, ಮಹತ್ವವೇನು?” ಎಂದು ಹಲವಾರು ಬಗೆಯ ಪ್ರಶ್ನೆಗಳನ್ನು ಎಸೆಯುತ್ತಿದ್ದರು. ಹಾಗಾಗಿ ನಾನು #ಗಿಣಿವಸ್ತ್ರ ಕುರಿತು ವಿಸ್ತಾರವಾದ ಲೇಖನವನ್ನೇ ಬರೆಯಬೇಕಾಯಿತು. ಕುಲಶಾಸ್ತ್ರೀಯ ಅಧ್ಯಯನ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದ ಅಧ್ಯಯನದ ನೆಲೆಗಟ್ಟಿನಲ್ಲಿ ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸುವ ಆಸೆ ನನ್ನದು. ಈ ದಿಸೆಯಲ್ಲಿ ಗಿಣಿವಸ್ತ್ರದ ಬಳಕೆಯ ನೆಲೆಗಳ ಶೋಧವೂ ನನಗೆ ಮುಖ್ಯವಾಗಿ ಕಾಣಿಸುತ್ತಿದೆ.
ಗಿಣಿವಸ್ತ್ರವು ದಕ್ಷಿಣ ಭಾರತಾದ್ಯಂತ ಬಳಸಲ್ಪಟ್ಟ ಧಾರ್ಮಿಕ ರಾಜಕೀಯ ಲಾಂಛನ. ಸಾಮಾಜಿಕ ಸಶಸ್ತ್ರ ದಂಗೆಯ ಕ್ರಾಂತಿಕಾರಿ ಹೋರಾಟಗಾರರು ಕೆಂಪು ಗಿಣಿವಸ್ತ್ರವನ್ನು ಹೆಚ್ಚು ಬಳಕೆ ಮಾಡಿದ ಕಾರಣದಿಂದಾಗಿ ಈ ವಸ್ತ್ರಕ್ಕಿದ್ದ ಸಾಂಸ್ಕೃತಿಕ ಮಹಿಮೆಯನ್ನು ಮರೆತು ಕೇವಲ ಕ್ರಾಂತಿಯ ಲಾಂಛನವನ್ನಾಗಿ ಗ್ರಹಿಸಲಾಯಿತು. ನಮ್ಮ ಪೂರ್ವಿಕ ಸಾಮಾಜಿಕ ತಳಸ್ತರಗಳ ಜನಪದರು ಹೆಗಲ ಮೇಲೆ ಗಿಣಿವಸ್ತ್ರ, ತಲೆಗೆ ಗೀಣಿವಸ್ತ್ರದ ಕಂಬಿಪೇಟ, ಮುಂಗೈಗೆ ಕಡಗ, ಮುಂಗೈ ಮಣಿಕಟ್ಟಿಗೆ ಗುರುಮಣಿ ಬದ್ದು ಮತ್ತು ಬೆಳ್ಳಿ ಸರಿಗೆ, ಕಿವಿಗೆ ಮುರ, ಕೊರಳಿಗೆ ಮುದ್ರಾಮಣಿ, ಅರ್ಧಚಂದ್ರ ಬೋಳಿಸಿದ ತಲೆ, ಹಿಂದಲೆಗೆ ಮುಡಿಕಟ್ಟು, ಮುಡಿಗೆ ಲಕ್ಕಿಪತ್ರೆ- ಹೂ ಧವನ ಧರಿಸುತ್ತಿದ್ದರು.

ಆದಿಜಾಂಬವರು ತಮ್ಮ ಮದುವೆ ಕಾರ್ಯಗಳಲ್ಲಿ ಬಳಸಲು ಹಕ್ಕುದಾರರಾಗಿದ್ದ ಈ ಕೆಂಪು ವಸ್ತ್ರದ ನಾಲ್ಕು ಮೂಲೆಗಳ ತಳಿಯನ್ನು ಹಾಗೂ 12 ಕಂಬ – 12 ಕುಂಭ – 12 ಪಂಜು ಬೆಳಕು – ಜೋಡಿ ಕಳಸ – ಜೋಡಿ ಕನ್ನಡಿ ಮತ್ತಿತರ ಸಾಂಗೇವುಗಳನ್ನು ಛಲವಾದಿ ಹೊಲೆಯರ ವೆಂಕಟರಾಮನು ತನ್ನ ಮಗನ ಮದುವೆಯ ಮೇನರೀಕ ಕಾರ್ಯದಲ್ಲಿ ಬಳಸುವ ಮೂಲಕ ಹೊಲೆಯರು ಪಣಾಚಾರ- ಕುಲಾಚಾರಗಳ ಕಟ್ಟುಗಳನ್ನು ಉಲ್ಲಂಘಿಸಿದರೆಂಬ ಕಾರಣದಿಂದ ಉದ್ಭವಿಸಿದ ಪಣವ್ಯಾಜ್ಯವು ಹಂಪಿಯ ವಿರೂಪಾಕ್ಷಿ ಶೆಟ್ರಮಠದ ಕೋರ್ಟಿನ ಕಟಕಟೆಗೆ ಬರುತ್ತದೆ. ಎಡಗೈ – ಬಲಗೈ ಪಣಗಳ ಸಕಲ ಕುಲಗಳ ಗಣ್ಯರನ್ನು ಒಳಗೊಂಡು ನಡೆಸಿದ ಹಂಪಿಯ ಶೆಟ್ರಮಠದ ನ್ಯಾಯ ಪಂಚಾಯ್ತಿಗಳಲ್ಲಿ ಈ ವ್ಯಾಜ್ಯವು ಬಗೆಹರಿಯದೆ, ವ್ಯಾಜ್ಯದ ಇತ್ಯರ್ಥಕ್ಕಾಗಿ ಮಾದಿಗರ ಗೋಸಂಗಿ ಬಸವನು ನೂರಾರು ಜನರನ್ನು ಒಂದುಗೂಡಿಸಿಕೊಂಡು ಮೈಸೂರು ರಾಜ್ಯದ ಮಂಗಳೂರು ಕಸಬಾ ಮಸುಕೂರು ಗ್ರಾಮದಿಂದ ಕಂಚಿಗೆ ಪ್ರಯಾಣ ಬೆಳೆಸುತ್ತಾನೆ.
ಈ ಪಣವ್ಯಾಜ್ಯವು ಕಂಚಿಯಲ್ಲಿರುವ ಶೃಂಗೇರಿ ಈರಾಯತಿ ಮಠದ ಪಂಚಾಯತರ ಮುಂದೆ ವಿಚಾರಣೆಗೆ ಬರುತ್ತದೆ. ಶೃಂಗೇರಿ ಈರಾಯತಿ ಮಠದ ಸಾಂಸ್ಕೃತಿಕ ನ್ಯಾಯಾಲಯದಲ್ಲಿ ಒಂಭತ್ತು ಪಣದವರ ಮತ್ತು ಹದಿನೆಂಟು ಪಣದವರ ನ್ಯಾಯನಿಗರ ಯಜಮಾನರು ವಾದಿ – ಪ್ರತಿವಾದಿಗಳನ್ನು ಕರೆಯಿಸಿ ಪಾಟಿ ಪ್ರತಿಪಾಟಿ ಹೇಳಿಕೆಗಳನ್ನು ಪಡೆಯುತ್ತಾರೆ. ಅವರು ಕಂಚಿ ತಾಮ್ರಶಾಸನದ ಇಲಾವರಿಯನ್ನು ಪರಿಶೀಲಿಸಿ ಒಂಭತ್ತು ಪಣಕಟ್ಟಿನ ಮಾದಿಗರು ಕೆಂಪುವಸ್ತ್ರವನ್ನೂ ಹದಿನೆಂಟು ಪಣಕಟ್ಟಿನ ಹೊಲೆಯರು ಬಿಳಿವಸ್ತ್ರವನ್ನೂ ಧರಿಸಲು ಹಕ್ಕುದಾರರೆಂದು ಕಂಚಿ ನ್ಯಾಯತೀರ್ಪು ಫರ್ಮಾನು ಹೊರಡಿಸುತ್ತಾರೆ.

(ಪ್ರಖ್ಯಾತ ಕವಿ ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ)

(ಗಿಣಿವಸ್ತ್ರ ಧರಿಸಿರುವ ಕಲಾವಿದೆ ಉಮಾಶ್ರೀ)
ಮಾದಿಗರ ಅರುಂಧತಿ – ಬ್ರಾಹ್ಮಣರ ವಸಿಷ್ಠರ ಮದುವೆ ನಡೆದ ಕಾಲದಲ್ಲಿ ಹಾಗೂ ಯುಗಮುನಿ – ಮಾತಂಗಿಯರ ಮದುವೆ ಕಾಲದಲ್ಲಿ ಕಂಚಿಯಲ್ಲಿ ಶಿವದೇವಸ್ಥಾನದ ಅಲಗು ಮಂಟಪದಲ್ಲಿ ಶಾಸನ ರೂಪವಾಗಿ ಆದಿಜಾಂಬವರಿಗೆ ನೀಡಲಾಗಿರುವ 33 ಬಿರುದುಗಳು ಮತ್ತು ಸಾಂಗೇವುಗಳನ್ನು ಹೊಂದುವ ಕುಲಹಕ್ಕುಗಳನ್ನು ನೀಡಲಾಗಿದೆ. ಹಾಗೂ ಈ ಕುಲಹಕ್ಕುಗಳ ಪ್ರಕಾರ ಕೆಂಪುವಸ್ತ್ರ ಮತ್ತು ಕರಿಯ ಕಂಬಳಿ ಗದ್ದಿಗೆಯನ್ನು ಎಡಗೈಒಂಭತ್ತು ಪಣಸ್ತರಾದ 1)ಮಾದಿಗರು 2)ಜ್ಯೋತಿ ನಗರಶೆಟ್ಟಿ ಅಥವಾ ಭೇರಿ ನಗರ್ತರು ಅಥವಾ ನಗರ್ತ ವಶಿಷ್ಟರು 3)ದೇವಾಂಗ 4) ಗೊಲ್ಲಗೌಡ ವಂಶ 5)ವಿಶ್ವಬ್ರಾಹ್ಮಣ ಪಾಂಚಾಲ ಆಚಾರಿಗಳು (ವಿಶ್ವಕರ್ಮನ ಪಂಚಕುಲಸ್ತ ಪಂಚವಾಳರಾದ ಬಡಗಿ, ಕಂಚುಗಾರ, ಕಮ್ಮಾರ, ಕಲ್ಕುಟಿಗ ಶಿಲ್ಪಿ, ಅಕ್ಕಸಾಲಿಗ (ಚಿನಿವಾರ, ಕಂಚುಗಾರ), 6)ಬೇಡ ಅಥವಾ ವಾಲ್ಮೀಕಿ ಕುಲಸ್ತರು 7)ಏಕಲಿಯವರು, ಯಾಕುಲ ಅಥವಾ ತೊರೆಯ 8)ಕಮ್ಮಾ ಕಾಪು ದೊರೆಗಳು ಹಾಗೂ 9) ವಳ್ಳಿಗರು ಅಥವಾ ಧರ್ಮರಾಯ ವಂಶಸ್ಥ ಪಳ್ಳಿಗರು ಅಥವಾ ಚಂದ್ರವಂಶ ಕ್ಷತ್ರಿಯ ಅಥವಾ ಅಗ್ನಿವಂಶ ಕ್ಷತ್ರಿಯ ವಹ್ನಿಕುಲ ಅಥವಾ ತಿಗಳರು ಮತ್ತು ಮೇಲೆ ತಿಳಿಸಲಾದ ಒಂಭತ್ತು ಪಣಪ್ರಭೇದಕ್ಕೆ ಒಳಪಡುವ ಕೋಮಟಿಗರು, ಲಿಂಗಾಯತರು, ಹೆಗ್ಗಾಣಿಗರು(ಎರಡೆತ್ತು) ಮತ್ತಿತರ ಉಪಕುಲಗಳು ಮಾತ್ರ ಬಳಸಲು ಹಕ್ಕುಳ್ಳವರು. ಈ ಹಕ್ಕುಗಳಿರದ ಬಲಗೈ ಹದಿನೆಂಟು ಪಣದ ಛಲವಾದಿ ಹೊಲೆಯರು ಯಾವುದೇ ತಂಟೆತಕರಾರು ತೆಗೆಯಬಾರದೆಂದು ಈ ಫರ್ಮಾನಿನಲ್ಲಿ ಉಲ್ಲೇಖಿಸಲಾಗಿದೆ.

(ಗಿಣಿವಸ್ತ್ರ ಧರಿಸಿರುವ ಪಿಚ್ಚಳ್ಳಿ ಶ್ರೀನಿವಾಸ್ ಪಿಚ್ಚಳ್ಳಿ)
ಬಲಗೈ ಹದಿನೆಂಟು ಪಣದವರಾದ 1)ಬಣಜಿಗ 2)ಒಕ್ಕಲಿಗ 3)ಗಾಣಿಗ (ಒಂಟೆತ್ತು) 4)ರಂಗಾರೆ(ಬಣ್ಣ ಹಾಕುವವರು) 5)ಲಾಡ (ಮರಾಠಿ ವ್ಯಾಪಾರಸ್ತರು) 6)ಗುಜರಾತಿ(ಗುಜರಾತಿ ವ್ಯಾಪಾರಸ್ತರು) 7)ಕಾಮಾಟಿ(ಕೂಲಿಗಾರರು) 8)ಜೈನ 9)ಕುರುಬ 10)ಕುಂಬಾರ 11)ಅಗಸ 12)ಬೆಸ್ತ 13)ಪದ್ಮಸಾಲೆ 14)ನಾಯಿಂದ 15)ಉಪ್ಪಾರ 16)ಚಿತ್ರಗಾರ 17)ಊರುಗೊಲ್ಲ ಹಾಗೂ 18)ಚೆಲುವಾದಿ ಹೊಲೆಯ ಇವರು ಬಿಳಿವಸ್ತ್ರ, ಹಳದಿ ವಸ್ತ್ರ ಮತ್ತು ಹಸಿರು ವಸ್ತ್ರ ಬಳಸಲು ಮಾತ್ರ ಹಕ್ಕುದಾರರು.

(ಗಿಣಿವಸ್ತ್ರದ ತಳಿ ಹಿಡಿದುಕೊಂಡು ಮದುಮಗನನ್ನು ಕರೆದುಕೊಂಡು ಹೋಗುತ್ತಿರುವುದು)
ಮದುವೆಯಲ್ಲಿ ಬಲಗೈ ಹೊಲೆಯರು ಬಿಳಿ ಮಲ್ಲಿಗೆಯ ಬದಲಾಗಿ ಕೆಂಪು ಕಣಿಗಿಲೆ ಹೂವು, ಮಲ್ಲಿಗೆ ಹೊರತಾದ ಮೂರು ವಿಧದ ಹೂವುಗಳು, ಬಿಳಿ ಛತ್ರಿ, ಹಸಿರು ಹಳದಿ ಬಣ್ಣ, ಬಿಳಿ ಕುದುರೆ ಮೇಲೆ ಅವರವರ ಹಟ್ಟಿಯಲ್ಲಿ ಮಾತ್ರ ಮದುವೆ ಮೆರವಣಿಗೆ ಮಾಡಬೇಕು, ನಡೆಮುಡಿ ಸಾಗುವ ಮತ್ತು ಮೇಲುಡುಗೆ ಧರಿಸುವ ಅಧಿಕಾರವಿಲ್ಲ, 9 ಕಂಬ, 9 ಕುಂಭ, 9 ಪಂಜಿನ ಬೆಳಕು, ಮೂರು ಎಲೆ ಕಳಸ, ಬಾಸಿಂಗ, ಹುಗುಣಿ ನಾರಿನ ಕಂಕಣ, ಮೇಳ- ಗಿಡಿಬಿಡಿ- ಮದ್ದಲೆ, ಜಾಗಟೆ ಶಂಖು, ಮೂರು ಮೂಲೆ ತಾಳಿ, ಬಿಳಿ ವಸ್ತ್ರದ ತಳಿ, ಬಿಳಿ ಶ್ಯಾಲೆ, ಗಂಧೂಡಿ, ಮೂರು ತೋರಣ, ಮಿಂಚು, ಕಡಗ, ಸರಳು, ಹರಿಶಿನ ಕುಂಕುಮ, ಬಿಳಿ ಉಡುಪುಗಳು ಧರಿಸಲು ಬಲಗೈ ಹೊಲೆಯರು ಹಕ್ಕುದಾರರು.

(ಗಿಣಿವಸ್ತ್ರ ಧರಿಸಿರುವ ಕಲಾವಿದ ಪ್ರಕಾಶ್ ರಾಜ್)
ಎಡಗೈ ಗೋಸಂಗಿ ಮಾದಿಗರು ಕೋಣ ಕಡಿದು ಬಲಗಡೆಗೆ ಕೆಡವಿ ಬಲಗಾಲು ಕೊಯ್ದು ಕೋಣದ ತಲೆ ಮೇಲೆ ದೀಪ ಉರಿಸಬೇಕು. ಬಲಗೈನವರು ತಂಟೆ ಮಾಡಬಾರದು. ಕೋಣವನ್ನು ಬಲಗೈನವರು ಹಿಡಿಯಕೂಡದು ಕಡಿಯಕೂಡದು. ಮಾದಿಗರ ಹಳೆಮಗನಾದ ದಕ್ಕಲ ಮಗ ಸತ್ತುಹೋದರೆ ಜಂಗಮನು ಬಂದು ಮೊದಲು ಹಳ್ಳದಲ್ಲಿ ಪೂಜೆ ಮಾಡಿ ವಿಭೂತಿ ನೀರಿನಿಂದ ಮುಕ್ತಿ ಹೊಂದಿಸಬೇಕು. ದಕ್ಕಲರ ಕುಲವನ್ನು ಮಾದಿಗರು ಪೋಷಿಸಬೇಕು. ವಿಶ್ವಕರ್ಮನಿಗೆ ಗುರುವಾದ ಆದಿಜಾಂಬವ ತಾತನ ಮಕ್ಕಳೆನ್ನಿಸಿದ ಎಡಗೈ ಒಂಭತ್ತು ಪಣದವರಿಗೆ ವಿಶ್ವಕರ್ಮ ಆಚಾರಿಗಳು ಮುಖಂಡರು. ಬಲಗೈ ಹದಿನೆಂಟು ಪಣದವರಿಗೆ ಬಣಜಿಗರು ಮುಖಂಡರು. ಬಲಗೈ ಪಣದವರ ಕುಲಹಕ್ಕು ಬಿರುದು ಪಟಾವಳಿಗಳು ಮತ್ತು ಕುಲಚಿಹ್ನೆಗಳಾದ ನೇಗಿಲು, ತಕ್ಕಡಿ, ಚಕ್ರ, ಕತ್ತರಿ, ಗುದ್ದಲಿ, ಕತ್ತಿ ಮುಂತಾದ ಸಂಕೇತಗಳನ್ನು ಹಿತ್ತಾಳೆಯ ದೊಡ್ಡ ಸೌಟಿನ ಮೇಲೆ ಕೆತ್ತಿಸಿಕೊಂಡು ‘ದೇಶಮುದ್ರೆ ಮುದ್ರೆ ಗಂಟೆಬಟ್ಲು’ ಹೊತ್ತು ಸಭೆ ಸಮಾರಂಭ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹಕ್ಕು ಹೊಲೆಯರಿಗಿದೆ. ಹೊಲೆಯರು ಪಾರ್ವತಿಯ ಮುಟ್ಟಿನ ಬಟ್ಟೆಯಲ್ಲಿ ಹುಟ್ಟಿದವರೆಂದು ಇಲಾವರಿ ಬರೆದಿರುವುದರಿಂದ ಮುಟ್ಟಿನ ಬಟ್ಟೆ ಒಗೆಯುವ ಮಡಿವಾಳರು ಹೊಲೆಯರಿಗೆ ಮುಖಂಡರಾಗಿದ್ದಾರೆ.

(ಗಿಣಿವಸ್ತ್ರ ಧರಿಸಿರುವ ಪ್ರಜಾ ನಾಟ್ಯ ಮಂಡಲಿಯ ವಿಪ್ಲವ ಹೋರಾಟಗಾರರು, ಆಂಧ್ರಪ್ರದೇಶ)
ಗೊಲ್ಲರಿಗೆ ಕಟ್ಟುಬಡಿ ಇಲ್ಲ ಕುಪ್ಪಸವಿಲ್ಲ. ವಾಲ್ಮೀಕಿಯವರಿಗೆ ಕಟ್ಟುಬಡಿ ಉಂಟು ಕುಪ್ಪಸವುಂಟು ಮನೆಸಾಲು ಕೆಂಪು ರಂಗೋಲಿವುಂಟು. ಬೇಡನಾಯಕರು ಮಾರಿದೇವರನ್ನು ಗಂಗದೇವತೆಯನ್ನು ಹೊತ್ತು ತರಬೇಕು. ಪೆದ್ದೇಟಿ ಗೊಲ್ಲರು ವಾಲ್ಮೀಕಿಯರು ಗೋಸಂಗಿಯವರು, ಬುಡಬುಡುಕೆಯವರು, ಕಾಡುಸಿದ್ಧರು, ಕರಡಿಯವರು, ಗಾರುಡಿಯವರು ಎಡಗೈ ಪಣಸ್ಥರಾಗಿ ಲಿಂಗ- ಜನಿವಾರ – ಕರಿಕಂಬಳಿ -ಕೆಂಪು ಛತ್ರಿ –ಕೆಂಪುಕುದುರೆ ರಾಜಬೀದಿ ನಡೆಮುಡಿ ಮೆರವಣಿಗೆ ಹೋಗಲು, ಮೇಲ್ಕೊಪ್ಪು ಧರಿಸಲು ಕಡಪ – ಕಂಚಿಯ ಕಲ್ಲು ಶಾಸನದ ಇಲಾವರಿಯ ಪ್ರಕಾರ ಹಕ್ಕುದಾರರಾಗಿದ್ದಾರೆ. ಈ ಕಂಚಿಯ ಫರ್ಮಾನನ್ನು ಪಠಣ ಮಾಡಲಿಚ್ಛಿಸುವವರು ಮಾದಿಗರ ಮೂಲಕ ಭೂಮಿಪುತ್ರನಾದ ದಕ್ಕಲ ಮಗನಿಗೆ ಕಾಣಿಕೆ ಸಂದಾಯ ಮಾಡಿ ಮನಸಂತೋಷಪಡಿಸಿ ನಕಲು ಪ್ರತಿಮಾಡಿಕೊಳ್ಳತಕ್ಕದ್ದು. ಹೀಗೆಂದು ಕಂಚಿ ಫರ್ಮಾನಿನಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಪಣಕಟ್ಟಿನ ಸಾಮಾಜಿಕ ವ್ಯವಸ್ಥೆ ದಕ್ಷಿಣ ಭಾರತದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಪಣಕಟ್ಟಿನ ವ್ಯವಸ್ಥೆ ಮತ್ತು ಕಟ್ಟುಪಾಡುಗಳು ಈಗ ಅಸ್ತಿತ್ವದಲ್ಲಿಲ್ಲ. ಹೊಲೆಮಾದಿಗರು ಮಾತ್ರ ಪೂರ್ವದ ಪಣನ್ಯಾಯ ಸ್ಮರಣೆಯ ಸಂಕೇತವೆಂಬಂತೆ ಎಡಗೈ – ಬಲಗೈ ಎಂದು ಪಣಕಟ್ಟಿನ ವಿಭಜಕ ಭೇದನ್ಯಾಯದ ಗೂಟಕ್ಕೆ ಇಂದಿಗೂ ತಮ್ಮನ್ನು ಮೂಕದನಗಳಂತೆ ಬಿಗಿದುಕೊಂಡಿದ್ದಾರೆ. ಪಣವ್ಯಾಜ್ಯಕ್ಕೆ ಕಾರಣವಾಗಿದ್ದ ಕೆಂಪು ಗಿಣಿವಸ್ತ್ರ ಮಾತ್ರ ಇಂತಹ ಪಣಾಚಾರದ ಕಟ್ಟುಗಳನ್ನು ಮೀರಿ ವಿಶಾಲವಾದ ಜನಸಮೂಹವನ್ನು ತಲುಪಿಕೊಂಡಿದೆ.
- ದಕ್ಷಿಣ ಭಾರತದ ಗಿಣಿವಸ್ತ್ರದ ಮಹತ್ವ (ಭಾಗ ೧ ) – ಡಾ.ವಡ್ಡಗೆರೆ ನಾಗರಾಜಯ್ಯ
- ದಕ್ಷಿಣ ಭಾರತದ ಗಿಣಿವಸ್ತ್ರದ ಮಹತ್ವ (ಭಾಗ ೨) – ಡಾ.ವಡ್ಡಗೆರೆ ನಾಗರಾಜಯ್ಯ
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)
