ಆಕೆಯ ಹುಟ್ಟುಹಬ್ಬಕ್ಕೆ ಅವನು ಸಂಭ್ರಮಿಸಿದ. ಅವಳಿಗಾಗಿ ಕೇಕ್, ಡೆಕೋರೇಷನ್ ನೆಲ್ಲ ಮಾಡಿ ಅವಳಿಗೆ ಸಂತೋಷ ಪಡಿಸಿದ. ಅವಳ ಸಂತೋಷ ನೋಡಿ ಅವನು ಹಿಗ್ಗಿದ. ಕೊನೆಗೆ ಅವಳು ಇಲ್ಲವಾದಳು…ಏನಿದು ಕತೆ?ಗುರು ಮೂರ್ತಿ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ಆವತ್ತು ಅಮವಾಸ್ಯೆ. ಅವಳು ಹುಟ್ಟಿದ್ದು ಅಮವಾಸ್ಯೆಗೆ ಅಲ್ಲ. ಅವಳು ಹುಟ್ಟಿದ್ದು ಪೂರ್ಣ ಪೌರ್ಣಿಮೆ. ಆದರೆ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಈ ದಿನವೇ ಅವಳ ಹುಟ್ಟಿದ ಹಬ್ಬ. ನನಗೆ ಚೆನ್ನಾಗಿ ನೆನಪಿದೆ ಅವಳು ಹುಟ್ಟಿದ್ದು ಆರನೇಯ ಜುಲೈ. ಇಂದಿಗೆ ಅವಳು ಹುಟ್ಟಿ ಇಪ್ಪತೈದು ವರ್ಷಗಳಾಗಿವೆ. ಜೀವನದ ಬೆಳ್ಳಿಹಬ್ಬ. ನಮ್ಮೂರು ಕಾಡು ಹಳ್ಳಿ. ಕಾಡಿನ ಮಧ್ಯೆ ಇರುವ ಸಣ್ಣ ಹಳ್ಳಿ. ನಮ್ಮ ಹಳ್ಳಿಯಲ್ಲಿ ಕೈಗಳಬೆರಳಿನಷ್ಟು ಮನೆ. ನಮ್ಮ ಮನೆಯೇ ದೊಡ್ಡ ಮನೆ. ಅವಳ ಹುಟ್ಟಿದ ಹಬ್ಬಕ್ಕೆ ಏನಾದರು ಉಡುಗೊರೆ ಕೊಡಬೇಕು ಆ ಉಡುಗೊರೆ ವಿಶೇಷವಾಗಿರಬೇಕು ಅಂತಹ ಉಡುಗೊರೆಯನ್ನು ಕೊಡಬೇಕು ಎಂಬ ಆಸೆ ಮನದಲ್ಲಿ ಕೊರಿತಾ ಇತ್ತು.
ಈ ಇಪ್ಪತೈದು ವರ್ಷಗಳಲ್ಲಿ ಅವಳು ಯಾವತ್ತು ತನ್ನ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡಿಲ್ಲ. ಊರಲ್ಲಿ ಆಗಲಿ, ಮನೆಯವರು ಆಗಲಿ ಅವಳ ಹುಟ್ಟಿದ ಹಬ್ಬವನ್ನು ಜ್ಞಾಪಕ ಇಟ್ಟುಕೊಂಡು ಶುಭ ಕೋರಿದವರೆ ಇಲ್ಲ. ಮೊನ್ನೆ ಹಳೆಯ ಸಾಮಾನುಗಳನ್ನು ಹೊರ ತೆಗೆದು ಜೋಡಿಸಿಡುವಾಗ ಹಳೆಯ ಕಾಗದಗಳ ಮಧ್ಯೆ ಅವಳ ಜಾತಕ ಸಿಕ್ಕಿತು. ಹೀಗಾಗಿ ಅವಳ ಹುಟ್ಟಿದ ಹಬ್ಬ ಆರನೇಯ ಜುಲೈ ಅಂತ.
ಆರನೇಯ ಜುಲೈ ಮರೆಯದ ಹಾಗೆ ಜ್ಞಾಪಕ ಇಟ್ಟುಕೊಂಡು ಆ ದಿನಕ್ಕಾಗಿ ಕಾದೆ. ಅಮವಾಸ್ಯೆ ಇವತ್ತು ತಲೆ ಸ್ನಾನ ಮಾಡು ಎಂದು ಅವಳ ಅಮ್ಮ ಕೂಗಿ ಹೇಳಿದಳು. ಅಮ್ಮನ ಮಾತಿನಂತೆ ತಲೆ ಸ್ನಾನ ಮಾಡಿ ಹೊರ ಬಂದಳು. ತನ್ನ ಉದ್ದನೇಯ ಕೂದಲನ್ನು ಇಳಿ ಬಿಟ್ಟು ಟವೆಲ್ ನಿಂದ ಒರೆಸಿಕೊಳ್ಳುತ್ತಾ ಇದ್ದ ಅವಳನ್ನೆ ನೋಡುತ್ತಾ ನಿಂತೆ. ಹೇ ಇವತ್ತು ನಿನ್ನ ಹುಟ್ಟಿದ ಹಬ್ಬ ಕಣೆ, ಹುಟ್ಟಿದ ಹಬ್ಬದ ಶುಭಾಶಯಗಳು ಎಂದು ಕೈಯ ಮುಂದೆ ಚಾಚಿದೆ. ಆಶ್ಚರ್ಯದಿಂದ ಹೌದಾ ಎಂದು ತನ್ನ ಕೈಚಾಚಿದಳು.
ತನ್ನ ಹುಟ್ಟಿದ ಹಬ್ಬದ ಅವಳಿಗೆ ಅರಿವಿಲ್ಲ…ಎಂಥಾ ಹುಡುಗಿ ಇವಳು?. ನಾನು ಬೆಂಗಳೂರಿನಿಂದ ಅವಳಿಗಾಗಿ ತಂದ ಹೊಸ ಸೀರೆಯನ್ನು ತೆಗೆದು ಅವಳ ಕೈಗೆ ಕೊಟ್ಟೆ. ಕಣ್ಣರಳಿಸಿ ನೋಡಿದಳು ಸೀರೆಯನ್ನು. ಅದನ್ನು ಉಟ್ಟು ಹೊರ ಬಂದಾಗ, ಅವಕ್ಕಾಗಿ ನೋಡಿದೆ. ಆಕಾಶ ನೀಲಿ ಬಣ್ಣದ ಸೀರೆ, ಅದಕ್ಕೆ ಒಪ್ಪುವ ನೀಲಿ ಬಣ್ಣದ ರೆಡಿಮೆಡ್ ಕುಪ್ಪಸ, ಉದ್ದನೇಯ ಸೆರಗು, ನಾಭಿಯ ಕೆಳಗಿನ ನಾಚೂಕಾಗಿ ಕಟ್ಟಿದ ನೆರಿಗೆಗಳು. ಗಾಳಿಯಲ್ಲಿ ಹಾರಿ ಬಿಟ್ಟ ಕೇಶರಾಶಿ. ಕಿವಿಯಲ್ಲಿ ಜೋಗಾಲಿಯಂತೆ ತೂಗಾಡುವ ಚುಮುಕಿಗಳು ಅವಳ ಅಂದವನ್ನು ಇಮ್ಮಡಿಗೊಳಿಸಿದ್ದವು.

ಫೋಟೋ ಕೃಪೆ : google
ದೇವ ಲೋಕದ ಅಪ್ಸರೆಯಂತೆ ಕಂಡಳು. ಅವಳಮ್ಮ ಕೂಗಿ ಹೇಳಿದ ಹಾಗೆ ಇಬ್ಬರು ದೇವಸ್ಥಾನ ಕ್ಕೆ ಹೋಗಿ ಬಂದೆವು. ದೇವರಿಗೆ ಜೋಡಿಗಾಯಿ ಒಡೆಸಿಕೊಂಡು ಮನೆಗೆ ಬಂದಾಗ ಅವರಮ್ಮ ಪಾಯಸದ ಊಟ ಮಾಡಿದ್ದರು. ಇಬ್ಬರು ಸೇರಿ ಪಾಯಸ,ಚಿತ್ರಾನ್ನದ ಊಟ ಮಾಡಿ ಮನೆಯಿಂದ ಹೊರ ಬಂದಾಗ ಕೇಳಿದಳು,ಹುಟ್ಟಿದ ಹಬ್ಬ ಅಂದ್ರೆ ಪೇಟೆ ಜನರು ಕೇಕ್ ಕತ್ತರಿಸಿ,ಮೇಣದ ಬತ್ತಿ ಆರಿಸುತ್ತಾರಲ್ಲ ಎಂದು.ನನಗೂ ಆ ರೀತಿ ಮಾಡಬೇಕೆಂಬುದು ಆಸೆ ಇದೆ ಎಂದು ತನ್ನಾಸೆಯ ಆಸೆಯನ್ನು ಹೇಳಿಕೊಂಡಳು.
ಹತ್ತಿರದ ಪೇಟೆಗೆ ಹೋಗಿ ಅವಳು ಬಯಸಿದ ಕೇಕ್ ಮೇಣದ ಬತ್ತಿ, ಬಣ್ಣದ ರಿಬ್ಬನ್ ಬಣ್ಣದ ಕಾಗದಗಳನ್ನು ಬೈಕ್ ಹಾಕಿಕೊಂಡು ಹೋಗಿ ಬಂದೆ. ಅವಳು ಹೇಳಿದ ಹಾಗೆ ಗುಟ್ಟಾಗಿ ಕೋಣೆಯ ಸಿಂಗಾರ ಮಾಡಿದೆ. ಬಲೂನ್ ಗಳ ಕೋಣೆ ತುಂಬಾ ಕಟ್ಟಿದೆ. ಹ್ಯಾಪಿ ಬರ್ತಡೇ ಎಂಬ ತೋರಣವನ್ನು ಕಟ್ಟಿದೆ. ಸಣ್ಣ ಮೇಜಿನ ಮೇಲೆ ಬಟ್ಟೆಯ ಹಾಸಿ ಕೇಕ್ ನ್ನು ಇಟ್ಟು ಅದರ ಮೇಲೆ ಎರಡು ಮತ್ತು ಐದು ಸಂಖ್ಯೆಯ ಕ್ಯಾಂಡಲ್ ಗಳನ್ನು ಇಟ್ಟೆ.
ಅಮವಾಸ್ಯೆಯ ಆ ಸಂಜೆ ಮನೆಯ ಅಕ್ಕಪಕ್ಕದವರ ಕರೆದು ಅವಳನ್ನು ರೂಮಿಗೆ ಕರೆದ್ಯೊಯ್ದೆ. ಹುಣ್ಣಿಮೆಯ ಚಂದಿರನಂತೆ ಅರಳಿತು ಅವಳ ಮುಖ. ಈ ಹಿಂದೆ ತಾನು ಯಾವ ಹುಟ್ಟಿದ ಹಬ್ಬವನ್ನು ಆಚರಿಸಿದ ಅವಳು ಆ ಕೋಣೆಯ ಅಲಂಕಾರ ದುಂಡಾದ ಕೇಕ್ ನ್ನು ಕಂಡು ಬೆರಗಾದಳು. ಸೇರಿದ ಐದಾರು ಮಂದಿಯ ಮುಂದೆ ಕೇಕ್ ನ್ನು ಕತ್ತರಿಸಲು ಚಾಕುವನ್ನು ಕೈಹಿಡಿದಳು. ಮೂಲೆಯಲ್ಲಿಟ್ಟಿದ್ದ ಟೇಪ್ ರೇರ್ಕಾಡ್ ಹಾಡಿತು. ಹ್ಯಾಪಿ ಬರ್ತಡೇ ಟೂ ಯೂ…. ಹಚ್ಚಿದ್ದ ಮೇಣದ ಬತ್ತಿಯನ್ನು ಮೆಲ್ಲಗೆ ಊದಿದಳು.
ಚಾಕುವಿನಿಂದ ಮೆಲ್ಲಗೆ ಮೃದವಾದ ಕೇಕ್ ಕತ್ತರಿಸಿ ತುಂಡನ್ನು ನನ್ನ ಬಾಯಲ್ಲಿಟ್ಟು, ಉಳಿದ ತುಂಡುಗಳನ್ನು ಎಲ್ಲರಿಗೂ ಹಂಚಿದಳು.ಟಿವಿಯಲ್ಲಿ ಮಾಡಿದ ಹಾಗೆ ನನ್ನ ಹುಟ್ಟಿದ ಹಬ್ಬವನ್ನು ಮಾಡಿದೆ ಅಲ್ಲ ಎಂದು ಕೇಳಿದಳು.
ಖುಷಿ ಆಯಿತಾ ಕೇಳಿದೆ, ತುಂಬಾನೆ ಖುಷಿಯಾಯಿತು. ಈ ತರಹದ ಹುಟ್ಟಿದ ಹಬ್ಬವನ್ನು ನಾನು ಮಾಡಿಕೋತೀನಿ ಅಂತ ಕನಸಿನಲ್ಲೂ ಎಣಿಸಿರಲಿಲ್ಲ ಎಂದು ನಕ್ಕಳು. ಇಪ್ಪತ್ತೈದನೇಯ ಹುಟ್ಟಿದ ಹಬ್ಬ ಅವಳ ಜೀವನವನ್ನೆ ಬದಲಾಯಿಸುತ್ತೆ ಎಂದು ಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. ಹುಟ್ಟಿದ ಹಬ್ಬದ ಕೇಕ್ ಕತ್ತರಿಸಿ,ಎಲ್ಲರ ಬಾಯಿಗೆ ಕೇಕ್ ನ ಸಿಹಿ ಹಂಚಿದವಳು.ಅಮ್ಮ ಹೇಳಿದಳು ಅಂತ ಬಾಳೆ ಎಲೆಯನ್ನು ತರಲು ತೋಟಕ್ಕೆ ಓಡಿದಳು.

ಫೋಟೋ ಕೃಪೆ : google
ಅಮವಾಸ್ಯೆ ಯ ಕತ್ತಲು,ಕತ್ತಲಿನಲ್ಲಿ ಬಾಳೆಗಿಡದ ಬುಡದಲ್ಲಿ ಅವಳಿಗಾಗಿ ಕಾದು ಕುಳಿತಿತ್ತು ನಾಗರಹಾವೊಂದು.ಅದಕ್ಕೆ ಗೊತ್ತಿರಲಿಲ್ಲ ಅಂದು ಅವಳ ಹುಟ್ಟಿದ ಹಬ್ಬವೆಂದು. ಆ ಕಡು ಕತ್ತಲಲ್ಲಿ ಬಾಳೆ ಎಳೆ ಕೀಳಲು ಹೋದವಳು,ಬಾಳೆ ಬುಡದಲ್ಲಿ ಮಲಗಿದ್ದ ಹಾವನ್ನು ತುಳಿದಳು.ಅವಳ ದೇಹದ ಭಾರ ಹೊರಲಾಗದೆ, ಸಿಟ್ಟಿಗೆದ್ದು ಅವಳ ಕಾಲಿಗೆ ಮುತ್ತಿಟ್ಟಿತ್ತು ಹಾವು. ಆ ಕಡಿತಕ್ಕೆ ಜೋರಾಗಿ ಕೂಗಿದಳು. ಆ ಕತ್ತಲಲ್ಲೂ ಕಚ್ಚಿದ್ದು ಹಾವೆಂದು ಗುರುತಿಸಿ ಹಾವು ಹಾವು ಎಂದು ಜೋರಾಗಿ ಕಿರುಚಿದಳು.
ಅಂಗಳದಲ್ಲಿದ್ದ ನಾನು, ಅವಳ ಕೂಗು ಕೇಳಿ ಓಡಿದೆ. ಬಾಳೆ ಬುಡದ ಕೆಳಗೆ ಬಿದ್ದಿದ್ದಳು. ಹೋಗಿ ಎತ್ತಿಕೊಂಡು ಮನೆಯ ಅಂಗಳಕ್ಕೆ ಬಂದೆ.ಕಚ್ಚಿದ ಜಾಗದ ಮೇಲೆ ಬಲವಾಗಿ ಬಟ್ಟೆ ಕಟ್ಟಿದೆ.ಕಣ್ಣು ಗಳನ್ನು ಮುಚ್ಚಿದಳು.ಅಳುತ್ತಾ ಅವಳಮ್ಮ ಅಂಗಳಕ್ಕೆ ಓಡಿ ಬಂದರು. ಜೀಪಿನಲ್ಲಿ ಪೇಟೆಗೆ ಕರೆದು ಕೊಂಡು ಹೋದೆ.ಆಸ್ಪತ್ರೆಗೆ ಕರೆದುಕೊಂಡು ಹೋದೆ. ಸಾಮಾನ್ಯವಾಗಿ ಹಾವು ಕಚ್ಚಿದವರು ಬದುಕುಳಿಯುತ್ತಾರೆ ಎಂದು ಕೇಳಿದ್ದೆ. ಆದರೆ ಹಾಗಾಗಲಿಲ್ಲ, ಅವಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗುವುದರೊಳಗೆ ವಿಷ ಏರಿ ಈ ಲೋಕವನ್ನು ತ್ಯಜಿಸಿದ್ದಳು.
ಆಸ್ಪತ್ರೆಗೆ ಕಾಲಿಟ್ಟಾಗಲೇ ಅವಳ ಜೀವದ ಆಸೆ ಹೊರಟು ಹೋಗಿತ್ತು.ಆಸ್ಪತ್ರೆಯಲ್ಲಿ ಪರೀಕ್ಷಿಸಿದ ಡಾಕ್ಟರ್ No More ಎಂದು ಹೇಳಿ ಕೈಚೆಲ್ಲಿದರು. ಅವಳು ಸಾಯ್ತಳೆ ಅಂತ ನಿರೀಕ್ಷಿಸಿರಲಿಲ್ಲ. ಅದು ಅವಳು ತನ್ನ ಇಪ್ಪತೈದನೇಯ ಹುಟ್ಟಿದ ಹಬ್ಬದ ದಿನದಂದು. ತನ್ನ ಇಪ್ಪತೈದು ವರ್ಷಗಳಲ್ಲಿ ಎಂದೂ ಆಚರಿಸಲಾರದಂತೆ ಹುಟ್ಟಿದ ಹಬ್ಬವನ್ನು ಆಚರಿಸಿ, ಸತ್ತು ಹೋದಳು.
ಪದೇ ಪದೇ ಅವಳನ್ನೆ ಕಾಡಿತು ಮನಸ್ಸು. ಅವಳಿಗೆ ತಾನು ಸತ್ತು ಹೋಗುತ್ತೇನೆ ಎಂಬುದು ಮೊದಲೆ ತಿಳಿದಿತ್ತು. ಏಕೋ ಮನಸ್ಸು ನೀರಿನಿಂದ ಹೊರ ಬಿದ್ದ ಮೀನಿನಂತಾಯಿತು. ನಾನು ಅವಳ ಹುಟ್ಟಿದ ಹಬ್ಬವನ್ನು ಆಚರಿಸದೆ ಸುಮ್ಮನೆ ಬಿಟ್ಟಿದ್ರೆ, ಅವಳು ಬದುಕಿ ಉಳಿತಾ ಇದ್ದಳೇನೊ? ಪ್ರಶ್ನೆಗಳು ಕಾಡಿದವು. ಆ ಹುಟ್ಟಿದ ಹಬ್ಬದ ಅವಳ ಸಡಗರ, ಕೇಕ್ ಕತ್ತರಿಸುವಾಗ ಕಂಡ ಅವಳ ಅರುಳಿದ ಮುಖ ಅವಳು ಉಟ್ಟಿದ ಸೀರೆ, ಅವಳ ಆನಂದ, ಸಂತೋಷ ಆ ಕ್ಷಣಗಳು ಪದೇ ಪದೇ ಕಾಡಿದವು.
ಕಾಡಿದ ನೆನಪುಗಳು ನನ್ನ ಮನದಿಂದ ಆಚೆ ಹೋಗಲಿಲ್ಲ. ಅವುಗಳು ಮನದಲ್ಲಿ ಮನೆಕಟ್ಟಿಕೊಂಡು ಶಾಶ್ವತವಾಗಿ ಉಳಿದು ಹೋದವು. ಆ ನಂತರದ ಪ್ರತಿ ಹುಟ್ಟಿದ ಹಬ್ಬಗಳಲ್ಲಿ ಆ ಕೋಣೆ ಅಂದಿನಂತೆ ಸಿಂಗಾರ ಗೊಳ್ಳುತಿತ್ತು, ಅದೇ ದುಂಡನೇಯ ಕೇಕ್, ಮೇಣದ ಬತ್ತಿಗಳ ಸಂಖ್ಯೆ ಬದಲಾಗುತಿತ್ತು,ಆದರೆ ಆ ಕೇಕ್ ನ್ನು ಕತ್ತರಿಸಲು ಅವಳು ಇರುತ್ತಿರಲಿಲ್ಲ. ಅವಳಿಲ್ಲದ ಹುಟ್ಟಿದ ಹಬ್ಬಗಳನ್ನು ಒಂಟಿಯಾಗಿ ಆಚರಿಸತೊಡಗಿದೆ.ಹ್ಯಾಪಿ ಬರ್ತಡೇ ಟೂ ಯೂ….ಟೇಪ್ ರೆರ್ಕಾಡ್ ನಿಂದ ಹಾಡಿನ ತರಂಗಗಳು ಹೊರ ಬರುತ್ತಿತ್ತು.ಆದರೆ…!!!?
- ಗುರು ಮೂರ್ತಿ
