ಜಾಜಿಮಲ್ಲಿಗೆ ಮಾಲೆ ತೊಟ್ಟ ಹುಡುಗಿ, ಪ್ರೇಮದ ಖಾಯಿಲೆ ಹುಚ್ಚು ಹಿಡಿಸಿದ್ದು ಪರಿಯನ್ನು ಕವಿಯತ್ರಿ ಟಿ.ಎನ್.ಸರಸ್ವತಿ ಅವರು ಸುಂದರವಾಗಿ ವರ್ಣಿಸಿದ್ದಾರೆ. ನಿಮ್ಮ ಹೃದಯದಲ್ಲಿ ಅಡುಗಿದ ಜಾಜಿ ಮಲ್ಲಿಗೆ ಹುಡುಗಿಯ ಬಗ್ಗೆ ಮೂಡಿದ ಕವಿತೆಯನ್ನು ಬರೆದು ಕಳುಹಿಸಿ
ಅಂದ ಚೆಂದದ ಮುದ್ದು ಮುದ್ದಾದ ಬಾಲೆ
ಮುಡಿದಿಹಳು ಘಮಘಮದ ಜಾಜಿಮಲ್ಲಿಗೆ ಮಾಲೆ
ರಂಗು ರಂಗಾದ ಉಡುಗೆತೊಡುಗೆಯೊಡನೆ
ಗೆಜ್ಜೆ ಘಲುಘಲುರೆನುತ ಹೆಜ್ಜೆಯಿಟ್ಟಿಹಳು ಹೆಜ್ಜೆಯ ಮೇಲೆ
ಕೆಂಪು ಕೆಂಪಾದ ಸೊಗದ ಮೊಗದ ಮೇಲೆ
ಫಳಫಳ ಹೊಳೆವ ಬೆವರ ಮುತ್ತಿನ ಮಾಲೆ
ಮುಸಿಮುಸಿ ನಗುವ ತುಟಿಯ ಲೀಲೆ
ತನುಮನಗಳಲಿ ಎಬ್ಬಿಸಿದೆ
ಬಿಸಿಬಿಸಿ ಜ್ವಾಲೆ.
ಪಟಪಟನೆ ಬಡಿವ ಕಣ್ಣುರೆಪ್ಪೆ ನೋಡಿದ ಕ್ಷಣದಲೆ
ಬೇಡ ಬೇಡವೆಂದರೂ ಹೃದಯ ಶರಣಾಯ್ತು ಹಠಮಾಡದಲೆ
ಗುಂಗುರು ಗುಂಗುರಾದ ಕೂದಲಿನ ಬಲೆ
ಸೆರೆಯಾಗಿಸಿತು ಜೀವಭಾವಗಳ ಮೊದಲಸಲದಲೆ.
ಎದುರು ಬದುರಾದಾಗ ಸುಮ್ಮಸುಮ್ಮನೆ ನಗುತಲೆ
ಕಾಡಿಹಳು ಮನವ ಹಗಲಿರುಳು ಎನ್ನದಲೆ
ಎದೆಯಲೆಬ್ಬಿಸುತ ಅಶಾಂತಿಯ ಅಲೆ ಅಲೆ
ಹಿಡಿಸಿಹಳು ಹುಚ್ಚುಹುಚ್ಚಾಗಿಸುವ ಪ್ರೀತಿ ಪ್ರೇಮದ ಖಾಯಿಲೆ.
- ಟಿ.ಎನ್.ಸರಸ್ವತಿ (ಕವಿಯತ್ರಿ ,ಶಿವಮೊಗ್ಗ)
