ಅಂಚೆಯಣ್ಣನ ಇಂಪಾದ ಕೂಗು ನೆನಪಾಯಿತು – ಸುಮಾರಾಣಿ.ಕೆ.ಹೆಚ್



ಮೊಬೈಲ್ ಎಲ್ಲರ ಕೈ ಬಂದ ಮೇಲೆ ಅಂಚೆಯಣ್ಣನ ‘ಪೋಸ್ಟ್ …ಪೋಸ್ಟ್…ಕಾಗದ ಬಂದಿದೆ’ ಎನ್ನುವ ಇಂಪಾದ ಕೂಗು ಈಗ ನೆನಪಾಗುತ್ತಿದೆ. ಅಂಚೆಯಣ್ಣ ಕೊಡುತ್ತಿದ್ದ ಕಾಗದದಲ್ಲಿ ಮುತ್ತಿನಂತ ಹಸ್ತಾಕ್ಷರಗಳಿದ್ದವು, ಭಾವನಗಳಿದ್ದವು, ಪ್ರೀತಿಯಿತ್ತು. ಅವೆಲ್ಲವೂ ಇಂದು ಮರೆಯಾಯಿತು ಎನ್ನುವ ಬೇಸರ. ಅಂಚೆಯಣ್ಣನ ಕಾಗದ ಜೊತೆ ಹಳೆಯ ಬಾಂಧವ್ಯವನ್ನು ಮತ್ತೆ ನೆನಪಿಸುತ್ತಿದ್ದಾರೆ ಲೇಖಕಿ ಸುಮಾರಾಣಿ.ಕೆ.ಹೆಚ್ ಅವರು. ಮುಂದೆ ಓದಿ…

ಅಹಾ… ಈ ಶಬ್ದಕ್ಕಾಗಿ ಕಾದು ಕುಳಿತಿರುತಿದ್ದ ದಿನಗಳವು.ದೂರದ ಬೆಳಗಾಂ ನಲ್ಲಿ ಉದ್ಯೋಗ ಮಾಡುತ್ತಿದ್ದ ಅಣ್ಣ. ಬೆಂಗಳೂರಿನಲ್ಲಿದ್ದ ಸೋದರತ್ತೆ ಮಾವ,ದೂರದೂರಿನಲ್ಲಿದ್ದ ಗೆಳತಿಯರು ಹೀಗೆ ಯಾರದ್ದಾದ್ರೂ ಪತ್ರ ಇದ್ದೇ ಇರ್ತಿದ್ವು. ಮದುವೆಯಾಗಿದ್ದ ಅಕ್ಕ ತವರಿಗೆ ಬಂದಾಗ ಬರುತ್ತಿದ್ದ ಭಾವನ ಪ್ರೇಮಪತ್ರ ಅವಳ ಕೈಗೆ ಕೊಡದೆ ಸತಾಯಿಸುತ್ತಿದ್ದ ನೆನಪುಗಳು ಮನದಲ್ಲಿ ಅಚ್ಚೊತ್ತಿವೆ. ನನ್ನ ಮದುವೆಯಾಗುವ ಹೊತ್ತಿಗೆ ಪತ್ರ ಬರೆಯುವ ಖಯಾಲಿ ಕಡಿಮೆಯಾಗಿತ್ತು. ಶಿವಮೊಗ್ಗದಿಂದ ಬೈಕ್ ಏರಿ ವಾರಕ್ಕೊಮ್ಮೆ ಯಜಮಾನರು ಹಾಜರಾಗಿ ಬಿಡುತ್ತಿದ್ದರು. ಕೆಲವೊಮ್ಮೆ ಹದಿನೈದು ದಿನಗಳಾದರೂ ಬರದೇ ಇದ್ದಾಗ ನಾನು ಪತ್ರ ಬರೆದಿದ್ದು ಉಂಟು.

ನಮ್ಮದೇ ಹಸ್ತಾಕ್ಷರಗಳಿಂದ ಕೂಡಿರುತ್ತಿದ್ದ ಆ ಪತ್ರಗಳಲ್ಲಿ ಪ್ರತಿಯೊಂದು ಅಕ್ಷರದ ಜೊತೆಗೂ ಭಾವನೆಗಳು ಮೇಳೈಸಿರುತ್ತಿದ್ದವು. ಪತ್ರ ಬರೆಯುತ್ತಾ ಬರೆಯುತ್ತಾ ಕೆಲವೊಮ್ಮೆ ಕವಿಗಳಾಗಿಬಿಡುತ್ತಿದ್ದೆವು.
ಆಡಲಾರದೆ ಉಳಿದಿದ್ದ, ತುಟಿಯವರೆಗೂ ಬಂದು ಹಾಗೆಯೇ ನುಂಗಿಕೊಂಡ ಎಷ್ಟೋ ಮಾತುಗಳು ಪತ್ರದಲ್ಲಿ ಅಕ್ಷರಗಳಾಗುತ್ತಿದ್ದವು.

ಈಗಿನವರ ಹಾಗೆ ಮಾತು ಮಾತಿಗೂ ಐ ಲವ್ ಯೂ..ಹೇಳದೇ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಬಗೆಯನ್ನು, ಮನದಾಳದಲ್ಲಿದ್ದ ಪ್ರೀತಿಯನ್ನುಅಕ್ಷರ ರೂಪದಲ್ಲಿ ಬರೆದು ಕಳಿಸುತ್ತಿದ್ದೆವು. ಮನೆಯಲ್ಲಿ ಎಲ್ಲರ ಕಣ್ಣು ತಪ್ಪಿಸಿ ರೂಮಿನ ಬಾಗಿಲು ಹಾಕಿ ಪ್ರತಿ ಅಕ್ಷರವನ್ನು ಬಿಡದೆ ಏರುತ್ತಿದ್ದ ಎದೆಬಡಿತದೊಂದಿಗೆ ಓದುತ್ತಿದ್ದ ಆ ಅನುಭವ ನೆನದರೆ ಇಂದಿಗೂ ಮೈ ನವಿರೇಳುತ್ತದೆ. ಅಣ್ಣ , ಚಿಕ್ಕಪ್ಪ ,ಮಾವ ಹೀಗೆ ಯಾರದ್ದಾದರೂ ಪತ್ರ ಬಂದರೆ ನಡುಮನೆಯಲ್ಲಿ ಕುಳಿತು ಯಾರಾದರೊಬ್ಬರು ಜೋರಾಗಿ ಓದಬೇಕು ಅದನ್ನು ಮನೆಯವರೆಲ್ಲ ಕೇಳಿಸಿಕೊಳ್ಳಬೇಕು.

ಶಾಲೆಗಳಲ್ಲಿ ತಂದೆ ತಾಯಿಗೆ,ಅಣ್ಣ ಅಕ್ಕನಿಗೆ,ಗುರುಗಳಿಗೆ ಹೇಗೆ ಪತ್ರ ಬರೆಯಬೇಕೆಂಬುದನ್ನು ಹೇಳಿಕೊಡುತ್ತಿದ್ದರು.ತನ್ಮೂಲಕ ಹಿರಿಯರಿಗೆ ಗೌರವ ಸೂಚಿಸುವ ಚಿಕ್ಕವರಿಗೆ ಪ್ರೀತಿ ಹಂಚುವ ಪರಿಪಾಠ ಆಗಲೇ ಬೆಳೆಸಿಕೊಳ್ಳುತ್ತಿದ್ದೆವು.

 

ಹೈಸ್ಕೂಲು ಪಿಯುಸಿ ದಿನಗಳಲ್ಲಿ ಹದಿಹರೆಯದ ವಯಸ್ಸು ಯಾರ ಮೇಲೋ ಕ್ರಷ್ ಆದಾಗ ಮನೆಯಲ್ಲಿ ಕುಳಿತು ಅವರ ಹೆಸರಿನಲ್ಲಿ ಇಡೀ ಒಂದು ಬಿಳಿಹಾಳೆಯ ಪುಸ್ತಕ ಖಾಲಿ ಆಗುವವರೆಗೂ ಗೀಚುವ ಚಟ. ಇದು ಸರಿಯಿಲ್ಲ, ಇದರಲ್ಲಿ ಏನೋ ಮಿಸ್ ಮಾಡ್ದೆ, ಅಕ್ಷರ ದುಂಡಾಗಿಲ್ಲ ಹೀಗೆ ನೋರೆಂಟು ಕಾರಣಗಳಿಂದ ಹರಿದು ಹಾಕಿ. ಕೊನೆಗೊಂದು ಪತ್ರ ಬರೆದು ನೋಟ್ಸ್ ನಲ್ಲಿ ಮುಚ್ಚಿಟ್ಟು ಕೊಡದೇ ಹಾಗೆ ಉಳಿದ ಪ್ರಸಂಗಗಳೇ ಹೆಚ್ಚು. ಕೊಟ್ಟು ವಾಪಸ್ ಪ್ರೇಮಪತ್ರ ಪಡೆದವರೂ ಉಂಟೂ,ಪತ್ರ ಬರೆದು ಅದು ಬೇರೆಯವರ ಕೈಗೆ ಸಿಕ್ಕು ಶಾಲಾ ಕಾಲೇಜಿನಲ್ಲಿ ಪ್ರಚಾರವಾಗಿ “ಲವ್ ಲೆಟರ್ ಬರೆದಿದ್ದಾನೆ ಕಣೇ !!! ಅಬ್ಬಾ ಎಷ್ಟು ಧೈರ್ಯ ಎಂದು ಬರೆದವರನ್ನು ಅಪರಾಧಿಯಂತೆ ನೋಡುತ್ತಿದ್ದ ಘಟನೆಗಳೂ ಉಂಟೂ. ಅವಳಿಗೆ ಲವ್ ಲೆಟರ್ ಬರೆದಿದ್ದಾರಂತೆ ಎಂದು ಗುಸು ಗುಸು ಸುದ್ದಿ ಹರಡಿ ಕೊನೆಗೆ ಕಾಲೇಜಿನಲ್ಲಿ ಅವಳೊಬ್ಬ ಹೀರೋಯಿನ್ ಆಗಿಬಿಡುತ್ತಿದ್ದಳು.

ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ನೆಡೆದ ಘಟನೆಗಳು ಚಕ್ ಚಕ್ ಅಂತ ಕ್ಷಣಮಾತ್ರದಲ್ಲಿ ಮೊಬೈಲ್ ನಲ್ಲಿ ಶೇರ್ ಆಗಿ ವಿಡಿಯೋ ಮೂಲಕ ರೆಕಾರ್ಡ್ ಆಗಿ ಹೋಗುವ ಈಗಿನ ಪೀಳಿಗೆಯವರಿಗೆ ಆ ಪತ್ರದಲ್ಲಿರುತ್ತಿದ್ದ ಭಾವನೆಗಳು ತುಂಬಿದ ಮನದಾಳದ ಮಾತುಗಳು ತಲುಪಲು ಸಾಧ್ಯವಾಗದೇ ಕೇವಲ ಯಂತ್ರಗಳ ಮೂಲಕ ಹಂಚಿಹೋಗಿ ಜೀವನವೇ ಯಾಂತ್ರಿಕವಾಗಿ ಹೋಗಿರುವುದು ದುರಂತ. ಅಷ್ಟೇ ಬೇಗ ಸಂಭಂದಗಳೂ ಹಳಸುತ್ತಿರುವುದೂ ಸತ್ಯ. ಪುರಂದರ ದಾಸರು ನೂರಾರು ವರ್ಷಗಳ ಹಿಂದೆಯೇ ” ಕಾಗದ ಬಂದಿದೆ ಕಮಲನಾಭನದು ಎಂದು ತಮ್ಮ ಪದದಲ್ಲಿ ಕಾಗದದ ಮಹಿಮೆಯನ್ನು ವರ್ಣಿಸಿದ್ದಾರೆ.

ಪ್ರೇಮ ಕವಿ ನರಸಿಂಹಸ್ವಾಮಿ ಯವರು… ತವರಿನಲ್ಲಿದ್ದ ಹೆಂಡತಿ ತನ್ನ ಗಂಡನಿಗೆ ಬರೆದ ಪತ್ರವನ್ನು ವರ್ಣಿಸುತ್ತಾ … “ತವರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೆ ಒರೆಯನ್ನಿಟ್ಟು . ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲ್ಲಿ ,ಇರುಳಿನಲಿ ಕಾಡುವುದು ನಿಮ್ಮ ನೆನಪೂ.. ”ಎಂದು ಸುಂದರವಾಗಿ ವರ್ಣಿಸಿದ್ದಾರೆ.

ಚಿ. ಉದಯಶಂಕರ್ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಪ್ರೇಮಿಯೊಬ್ಬಳ ಮನದಾಳದ ಮಾತುಗಳನ್ನು ಪತ್ರದ ಮೂಲಕ ಬರಯುವ ಸನ್ನಿವೇಶ ಕನ್ನಡ ಚಿತ್ರವೊಂದರಲ್ಲಿ ರಾಜನ್ ನಾಗೇಂದ್ರ ಅವರ ಸಂಗೀತದಲ್ಲಿ ಚಿತ್ರಿತವಾಗಿ ಅತ್ಯಂತ ಯಶಸ್ವಿಯಾಗಿತ್ತು.

“ನಲ್ಲ ಎಂದು ಕೂಗಲೇ ನಿನ್ನ …
ಇನಿಯ ಎಂದು ಕರೆಯಲೇ ನಿನ್ನ ..
ನನ್ನದೆಯಾಳದಲಿ ನೆಲಸಿರುವ ದೇವನೇ ನಿನ್ನ ಏನೆಂದು ಕರೆಯಲಿ..
ಒಲವಿನ ಗೆಳಯನೆ ನಿನಗೆ ಕೈ ಮುಗಿವೆ ನಾ ಬರೆವೆ ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ…”

ಹಾಗೆ ಹಿಂದಿಯ ಸಂಗಮ್ ಚಿತ್ರದ ಮೊಹಮ್ಮದ್ ರಫಿ ಹಾಡಿರುವ

“ಯೇ ಮೇರಾ ಪ್ರೇಮ್ ಪತ್ರ ಪಡ್ಕರ್ ಕೆ ತುಮ್ ನಾರಾಜ್ ಮತ್ ಹೋನಾ ತುಮ್ ಮೇರೆ ಜಿಂದಗೀ ಹೋ …ತುಮ್ ಮೇರೆ ಬಂದಗೀ ಹೋ…” ಎಂಬ ಪತ್ರದ ಹಾಡು ಅರವತ್ತರ ದಶಕದ ಪ್ರೇಮಿಗಳ ಫೇವರಿಟ್ ಸಾಂಗ್ ಆಗಿತ್ತು.



ಈಗೇನಿದ್ದರೂ

ಮಾತುಗಳು ಮೆಸೇಜ್ ಗಳಾಗಿವೆ, ಚರ್ಚೆಗಳು ಪೋನ್ ಕಾಲ್ ಗಳಾಗಿವೆ, ಭಾವನೆಗಳು ಸ್ಟೇಟಸ್ ಗಳಾಗಿವೆ. ೧೫೦ ಕ್ಕೂ ವರ್ಷಕ್ಕೂ ಮುಂಚೆ ಶುರುವಾದ ಕೇಂದ್ರ ಸರ್ಕಾರದ ಪೋಸ್ಟಲ್ ಡಿಪಾರ್ಟ್ಮೆಂಟ್ ಈಗ ಕೇವಲ ಪಾರ್ಸೆಲ್ ಗಳನ್ನು ತಲುಪಿಸಲು,ಹಣ ಡಿಪಾಸಿಟ್ ಮಾಡಲು ,ಯಾವುದೊ ಸಂಘ ಸಂಸ್ಥೆಗಳ ಆಹ್ವಾನ ಪತ್ರಿಕೆಗಳನ್ನು ತಲುಪಿಸಲು ಮಾತ್ರ ಸೀಮೀತವಾಗಿದೆ.

ಅಣ್ಣ ತಮ್ಮಂದಿರ,ಮಕ್ಕಳ, ಸಂಗಾತಿಯ ಪತ್ರಗಳಿಗೆ ಜಾತಕ ಪಕ್ಷಿಯಂತೆ ಕಾದು ಕುಳಿತು “ಪೋಸ್ಟ್ ಪೋಸ್ಟ್ ..ಎಂಬ ಇಂಪಾದ ಅಂಚೆಯಣ್ಣನ ಕೂಗು ಕೇಳಿಸಿಕೊಳ್ಳಲು ಕಾತರಿಸುವ ಕ್ಷಣಗಳು ಮರೆಯಾಗಿ ಹೋಗಿ ದಶಕಗಳೇ ಕಳೆದಿವೆ.

ಈಗಿನ ಫೋನ್ ಕಾಲ್ ಗಳು, ನಿಮಿಷಕ್ಕೊಮ್ಮೆ ಮಾಡುವ ಮೆಸೇಜ್ ಗಳು, ವಿಡಿಯೋ ಕಾಲ್ ಗಳು ಖಂಡಿತ ಆ ಪತ್ರಗಳಿಗೆ ಸರಿ ಸಮಾನವಾಗಲಾರವು.


  • ಸುಮಾರಾಣಿ.ಕೆ.ಹೆಚ್, ಶಿವಮೊಗ್ಗ .

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading