ಹಾವೇರಿಯ ‘ನರ್ಗಿಸ್ ಮಂಡಕ್ಕಿ’ ಸ್ಪೇಷಲ್ – ಡಾ. ಪ್ರಕಾಶ ಬಾರ್ಕಿ



ಹಾವೇರಿಯ_ಚನ್ನಬಸಪ್ಪ_ಹೋಟೆಲ್ನ್_ಸ್ಪೇಷಲ್. ಆ ನರ್ಗಿಸ್ ಗೂ ಈ ಮಂಡಕ್ಕಿಗೂ ಎತ್ತಣದೆತ್ತ ಸಂಬಂಧ.!!! ಅಂತೀರಾ..!!! ಡಾ. ಪ್ರಕಾಶ ಬಾರ್ಕಿ ಅವರ ಈ ಲೇಖನೊಮ್ಮೆ ಓದಿ…ಆ ನರ್ಗಿಸ್ ಮಂಡಕ್ಕಿ ಹುಚ್ಚಿಡಿಸದೆ ಇರದು…

ಉರಿ ಬಿಸಿಲಿನ ಝಳದಲ್ಲಿ, ನಿಗಿ ನಿಗಿ ಬೆಂಕಿಯ‌ ಕೆನ್ನಾಲಿಗೆಯ ಬಿಸಿಗೆ ಅಳ್ಳೆದ್ದು ಕುಣಿದು ಕುಪ್ಪಳಿಸುವ “ಉತ್ತರ ಕರ್ನಾಟಕದ” ಫೇಮಸ್ ಮಂಡಕ್ಕಿ(ಚುರುಮುರಿ).
ಸಂಜೆಯಾದರೆ ಸೂರ್ಯನಿಗೆ ಮುಳುಗಿ ಮರೆಯಾಗುವ ಚಿಂತೆಯಾದರೆ, ನಮಗಂತೂ ಮಂಡಕ್ಕಿ, ಮಿರ್ಚಿ, ಚಹಾದ ಚಡಪಡಿಕೆ. ನಮ್ಮ ಮಂದಿಗೆ ಇದೊಂದು Addiction.
ನಾನು ಉತ್ತರ ಕರ್ನಾಟಕದವನಾದರೂ ಅಷ್ಟಾಗಿ ಮಂಡಕ್ಕಿ Addiction ಗೆ ಬಿದ್ದವನಲ್ಲ.

ಹಾವೇರಿಯ ಜಿಲ್ಲಾಸ್ಪತ್ರೆ ಎದುರಿನ “ಚನ್ನಬಸಪ್ಪ ಹೋಟೆಲ್”ನ ಇಡ್ಲಿ, ವಡಾ ರುಚಿಕಟ್ಟಾಗಿರತ್ತೆ. ಶುಚಿಯಾಗಿಯು ಇರೋದ್ರಿಂದ… ಸಂಜೆಯಾದರೆ ಜನ ಕಿಕ್ಕಿರಿದು ನಾಲಿಗೆ ಚಪ್ಪರಿಸುತ್ತಾರೆ.
ನಾನು ಆವಾಗಾವಾಗ ಒಂದಿಷ್ಟು ಬಾಯಾಡಿಸಿ ಬರುವುದಿದೆ.

ನಿನ್ನೆ ಸಂಜೆ…

ಅದೇ ಹೊಟೆಲ್ ಹೊಕ್ಕು ಇಡ್ಲಿ, ವಡಾ ಚಪ್ಪರಿಸುತ್ತಾ, ರೇಟ್ ಬೋರ್ಡನತ್ತ ಸಣ್ಣಗೆ ದಿಟ್ಟಿಸಿದೆ‌.

ಅಲ್ಲಿ ನನಗೆ ಹೆಚ್ಚು ಸೆಳೆದದ್ದು “ನರ್ಗಿಸ್ ಮಂಡಕ್ಕಿ” ಎನ್ನುವ ಸಾಲು.

ನರ್ಗಿಸ್ ಬಾಲಿವುಡ್’ನ ಹಳೆಯ ಸುಂದರ ನಟಿ, ಸಂಜಯ್ ದತ್’ರ ತಾಯಿ. ಆದರೆ ಈ ಮಂಡಕ್ಕಿ ಪಕ್ಕಾ ಲೋಕಲ್. (ಇವಾಗಿವಾಗ ಮಂಡಕ್ಕಿ ವಿದೇಶಗಳಲ್ಲಿಯೂ ಸಿಗುತ್ತಿದೆ)

ತಲೆಗೆ ಹುಳ ಬಿಟ್ಟಂತಾಯಿತು. ನನ್ನೊಳಗೆ ಬೆಚ್ಚನೆಯ ಸಂಶಯ ಮೈ ಮುರಿಯಿತು. ಕಣ್ತಪ್ಪಿ ಕನ್ನಡ ಬರೆದಿರಬಹುದಾ? ಎಲ್ಲಿಯ ನರ್ಗಿಸ್.. ಎತ್ತಣ ಮಂಡಕ್ಕಿ.. ಎತ್ತಣದೆತ್ತ ಸಂಬಂಧ. ??

ನರ್ಗಿಸ್ 1940 ರಿಂದ 1960 ಇಸ್ವಿಯ ಬಾಲಿವುಡ್’ನ ಸ್ಪುರದ್ರೂಪಿ ನಟಿ, ಕಪ್ಪು ಬಿಳುಪು ಪರದೆಯ ಚಿತ್ತಚಂಚಲ ಚೆಲುವೆ. ಅಂದಿನ ಯುವಕರ ಹೃದಯ ಕವಾಟಗಳ ಬಡಿತವನ್ನು ತನ್ನ ಕಣ್ಣೋಟದಿಂದ ದಡಬಡಿಸಿಬಿಟ್ಟಿದ್ದಳು. ಆವಾಗ ಹರೆಯ ಉಕ್ಕುತ್ತಿದ್ದ ಯುವಕರ ಕನಸು ಕದ್ದ ಚಿರಯುವತಿಯಿವಿಳು.

ಇನ್ನೂ “ನರ್ಗಿಸ್ ಚಂಡಮಾರುತ” ಗೊತ್ತು, ೨೦೦೮ ರಲ್ಲಿ ಮ್ಯಾನ್ಮಾರ್ ದೇಶವನ್ನು ಹಿಂಡಿ ಹಿಪ್ಪೆ ಮಾಡಿ ಹುರಿದು ಮುಕ್ಕಿದ್ದ ರಣಭಯಂಕರ ಚಂಡಮಾರುತವದು.
ಆದರೂ ಕುತೂಹಲದ ಕೂಪಕ್ಕೆ ಬಿದ್ದು.,…

(ಚನ್ನಬಸಪ್ಪ ಹೋಟೆಲ್ ಮಾಲೀಕರು )

ಆ ಹೋಟೆಲ್ ಮಾಲೀಕನಿಗೆ ಕೇಳಿದೆ. ಅದೇನು? ಅಂತ.

ಹೌದು!! ಅದು “ನರ್ಗಿಸ್ ಮಂಡಕ್ಕಿ”ಅಂತೆ.

ಮೊದಲೇ ಕುತೂಹಲ ಕೆರಳಿ ಹಾವಿನ ಹೆಡೆಯಂತಾಗಿತ್ತು. ಅಂಥದ್ದೇನು ಸ್ಪೇಷಲ್? ಮಂಡಕ್ಕಿ ಜೊತೆ ಹಿರೋಯಿನ್ ಹೆಸರೇಕೆ? ಅಂತ ತಲೆ ಕೆರೆದುಕೊಳ್ಳುತ್ತಾ…ಒಂದಿಷ್ಟು “ನರ್ಗಿಸ್ ಮಂಡಕ್ಕಿ” ತರಿಸಿಕೊಂಡೆ.

ಹೋಟೆಲ್ ಮಾಲೀಕನ ಗಲ್ಲಾಪೆಟ್ಟಿಗೆಯ ಪಕ್ಕದಲ್ಲಿದ್ದ ಬೆಚ್ಚಗಿನ ಡಬ್ಬಿಯಲ್ಲಿ ಗರಿಗರಿಯಾದ ಮಂಡಕ್ಕಿ ಪವಡಿಸಿದ್ಧವು. ನರ್ಗಿಸ್’ಳ ಪರಿಮಳದೊಂದಿಗೆ.
ಆ ಪೆಟ್ಟಿಗೆ ಯಾವಾಗಲೂ “ಮಂಡಕ್ಕಿ”ಯಿಂದ ತುಂಬಿರತ್ತೆ ಖಾಲಿಯಾಗಿದ್ದು ನಾನು ನೋಡಿಯೇ ಇಲ್ಲ. ಅದು ಕೆಲವೊಮ್ಮೆ “ಮಾಯಾ ಪೆಟ್ಟಿಗೆ” ಮಗದೊಮ್ಮೆ “ಅಕ್ಷಯ ಪಾತ್ರೆ” ತರಹ ಭಾಸವಾಗುತ್ತೆ.
ಒಂದು ಪ್ಲೆಟಿನ ತುಂಬಾ ಗರಿಗರಿ ನರ್ಗಿಸ್ ಮಂಡಕ್ಕಿ, ನೆತ್ತಿಯ ಮೇಲೆ ಉಳ್ಳಾಗಡ್ಡಿ(ಈರುಳ್ಳಿ) ತುಣುಕುಗಳನ್ನ ಹೊತ್ತಿತ್ತು. ಪಕ್ಕದಲ್ಲಿಯೆ ಎಣ್ಣೆಯಲ್ಲಾಡಿದ್ದ ಎರಡು ಹಸಿ ಮೆಣಸಿನಕಾಯಿ ಕಾಲು ಚಾಚಿ ಮಲಗಿದ್ದವು.

ಒಂದಿಷ್ಟು ಮಂಡಕ್ಕಿ ಬಾಯಿಗೆ ಹಾಕಿಕೊಂಡು ಅಗಿಯಲು ಶುರುಮಾಡಿದೆ.

ಹ್ಮ್ಂ…..!! ಮಂಡಕ್ಕಿ ಗರಿಗರಿಯಾಗಿ, ಕುರುಕಲಾಗಿದ್ದವು, ನಾಲಿಗೆಗೆ ಇದೊಂದು ಹೊಸ ರುಚಿ. “ರುಚಿ ಗ್ರಂಥಿ”ಗಳು ಸೆಟೆದು ನಿಂತು, ಕುಣಿದು ಕುಪ್ಪಳಿಸುತ್ತಿದ್ದವು.

ಬಾಯಿ ತುಂಬಾ ಉಪ್ಪು, ಖಾರ, ಕುರುಕಲುತನ, ಉಳ್ಳಾಗಡ್ಡಿ ಖಾಕು, ಮೆಣಸಿನಕಾಯಿಯ ಘಾಟು ಖಾರ..ಪುಠಾಣಿ ಶೇಂಗಾ ಕಾಳಿನ ಖಡಕುತನ ಎಲ್ಲವೂ ಸೇರಿ ನಾಲಿಗೆಯಲ್ಲಿ ನೀರೊಸರಿ ಬಾಯ್ತುಂಬಾ ಅವರ್ಣೀಯ ಆಹ್ಹಾ..!! ಅನ್ನುವ ರುಚಿ ಜಾತ್ರೆ.



ಹೀಗೆ ಹಿಡಿ, ಹಿಡಿ ಮಂಡಕ್ಕಿಯನ್ನು ಇಂಚಿಂಚು ಆಸ್ವಾದಿಸಿ , ಕುರುಕಲಾಡುತ್ತಾ ಮೆಲ್ಲಿದೆ. ಹೌದು..!! ನರ್ಗಿಸ ಸ್ಪುರದ್ರೂಪಿ ಅಂದಿನ ಚೆಲುವೆಯಾಗಿದ್ದರೆ…ಇದು ವರ್ಣಿಸಲಸದಳ ರುಚಿಯ ಸವಾರಿ. ಅವಳ ಚೆಲುವು ಮಂಡಕ್ಕಿಯಲ್ಲಿ ರುಚಿಯ ರೂಪದಲ್ಲಿ ಇಮ್ಮಡಿಯಾಗಿತ್ತು.

ಚನ್ನಬಸಪ್ಪ ಹೋಟೆಲ್” ಸುಮಾರು ೪೫ ವರ್ಷಗಳಷ್ಟು ಹಳೆಯದು. ದಿವಂಗತ ಚನ್ನಬಸಪ್ಪನವರ ಅಂಗಡಿ. ಇವಾಗ ಮಕ್ಕಳು ನಡೆಸುತ್ತಿದ್ದಾರೆ. ಅಂದು ಚನ್ನಬಸಪ್ಪನವರು ದಾವಣಗೇರಿಯಲ್ಲಿ ಕೆಲಸ ಮಾಡುತ್ತಾ ಶ್ರದ್ದೆಯಿಂದ ಕಲಿತು, ಪ್ರಯೋಗಿಸಿ ಯಶಸ್ವಿಯಾಗಿದ್ದ “ಮಂಡಕ್ಕಿಯ ರೆಸಿಪಿ”ಯಿದು ಅಂತ ಮಾಲೀಕ ಮತ್ತು ದಿ.ಚನ್ನಬಸಪ್ಪನವರ ಮಗ “ಪ್ರಶಾಂತ್” ತಿಳಿಸಿದರು.
ಚನ್ನಬಸಪ್ಪನವರು ತಮ್ಮ ಚಿರ ಹರೆಯ ಕಾಲದ ನಟಿ ನರ್ಗಿಸ್’ಳ ಅಭಿಮಾನಿಯಂತ ಕಾಣುತ್ತೆ. ತಾವು ಕಲಿತು, ಪ್ರಯೋಗಿಸಿ ಯಶಸ್ವಿಯಾಗಿದ್ದ ಸ್ಪೇಷಲ್ ಮಂಡಕ್ಕಿಗೆ “ನರ್ಗಿಸ್ ಮಂಡಕ್ಕಿ” ಅಂತ ನಾಮಕರಣ ಮಾಡಿದ್ರಂತೆ.

ಅಂದಿನ ಪಡ್ಡೆಹುಡುಗರ ದಂಡು ಕಿಕ್ಕಿರಿದು ತಿಂದು ಶಹಬ್ಬಾಸಗಿರಿ ಹೇಳುತ್ತಾ. “ನರ್ಗಿಸ್ ಮಂಡಕ್ಕಿ” ರುಚಿಯನ್ನು ಹೊಗಳುತ್ತಿದ್ದರಂತೆ. ಆವಾಗಲೆ ನೋಡಿ “ನರ್ಗಿಸ್” ಅಂದದ ಜೊತೆ ಜೊತೆಗೆ “ಮಂಡಕ್ಕಿ ರುಚಿ” ಸೂಪರ್ ಡುಪರ್ ಯಶಸ್ವಿಯಾಯಿತು.

ಹಾವೇರಿ ಮತ್ತು ಸುತ್ತಮುತ್ತಲಿನ ಊರುಗಳ ಜನರಿಗೆ ಇದು ಸ್ಪೇಷಲ್ ಸಂಜೆ ತಿನಿಸು. ಮಂಡಕ್ಕಿ, ಸೂಸಲ, ಖಾರ, ಮಸಾಲಾ ಮಂಡಕ್ಕಿ ತಿಂದು ಜಿಡ್ಡಿಡಿದ ನಾಲಿಗೆಗಳಿಗೆ “ನರ್ಗಿಸ್ ಮಂಡಕ್ಕಿ” ಅವರ್ಣನೀಯ ರುಚಿ ಹಂಚಿ ಜನಮಾನಸದಲ್ಲಿ ಪ್ರಸಿದ್ದಿಯಾಯಿತು. ಇವಾಗ “ನರ್ಗಿಸ್ ಮಂಡಕ್ಕಿ”ಯ ದಿ.ಚನ್ನಬಸಪ್ಪನವರ ಮಕ್ಕಳು ಹೋಟೆಲ್ ನಡೆಸುತ್ತಿದ್ದಾರೆ. ಜೊತೆಗೆ ಇಡ್ಲಿ, ವಡಾ ಸಹ ಮಾಡುತ್ತಿದ್ದು ಅವುಗಳ ರುಚಿಯು ಸಹ ಬಹು ಯಶಸ್ವಿಯಾಗಿದೆ. ಪ್ರತಿ ಸಾರೆ ಇಡ್ಲಿ, ವಡಾ ತಿಂದು ನಡೆಯುತ್ತಿದ್ದವನನ್ನು “ನರ್ಗಿಸ್ ಮಂಡಕ್ಕಿ”ಯ ರುಚಿ ಮತ್ತೇರಿಸಿಬಿಟ್ಟಿತು. ನಾನು ನಿಧಾನಕ್ಕೆ ನರ್ಗಿಸಳ ಹೆಸರೊಂದಿಗೆ ರುಚಿ ಹೊತ್ತ ಮಂಡಕ್ಕಿಯತ್ತ ವಾಲುತ್ತಿದ್ದೇನೆ ಅನಿಸುತ್ತೆ.

ಇದೊಂಥರಾ ಅಭಿಮಾನಿಯ ತುಂಬು ಅಭಿಮಾನ‌. ಸೌಂದರ್ಯಾರಾಧಕನ ಉತ್ಕಟ ಪ್ರೀತಿ ಅನಿಸುತ್ತೆ. ಹಾವೇರಿಗೆ ಬಂದಾಗ “ಜಿಲ್ಲಾಸ್ಪತ್ರೆ ಎದುರಿನ” ಚನ್ನಬಸಪ್ಪ&ಸನ್ಸ್ ಹೋಟೆಲ್’ನಲ್ಲಿ “ನರ್ಗಿಸ್ ಮಂಡಕ್ಕಿ”ಯ ರುಚಿ ಸವಿದು, ರುಚಿಗ್ರಂಥಿಗಳಿಗೆ Surprise ಕೊಡಿ. ಚಹಾ ಕುಡಿದು ಸಂಜೆ ಕಳೆಯಿರಿ‌. ಹೊಸ ರುಚಿಯ ಸವಾರಿಗೆ ಸಿದ್ದರಾಗಿ.


  • ಡಾ. ಪ್ರಕಾಶ ಬಾರ್ಕಿ, ಕಾಗಿನೆಲೆ

One thought on “ಹಾವೇರಿಯ ‘ನರ್ಗಿಸ್ ಮಂಡಕ್ಕಿ’ ಸ್ಪೇಷಲ್ – ಡಾ. ಪ್ರಕಾಶ ಬಾರ್ಕಿ”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading