ಪ್ಯಾರಸೈಟ್ ಬೆನ್ನತ್ತಿ ಪುಸ್ತಕ ಪರಿಚಯ – ಡಾ ಪ್ರಕಾಶ ಬಾರ್ಕಿ



“ಪ್ಯಾರಾಸೈಟ್” ಕಾದಂಬರಿಯ ಮುಖ್ಯ ವಸ್ತು “ದಾಟು ಬಳ್ಳಿ,ಇಂತಹ ಕೌತುಕದ ಬಳ್ಳಿಯ ಜಾಡು ಹಿಡಿದು ಬದುಕಿದವರ ಮಾಹಿತಿ ಕಲೆಹಾಕಲು ಕಥಾನಾಯಕ ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಅಲೆಯುತ್ತಾನೆ.ಕೊನೆಗೆ ತಾನೆ ಕಾಡು ಹೊಕ್ಕು ಶೋಧನಾ ಯಾತ್ರೆ ಮಾಡುತ್ತಾನೆ. ಡಾ ಪ್ರಕಾಶ ಬಾರ್ಕಿ ಅವರ ಲೇಖನಿಯಲ್ಲಿ ಪ್ಯಾರಸೈಟ್ ಪುಸ್ತಕದ ವಿಮರ್ಶೆ, ಮುಂದೆ ಓದಿ…

ಸಾಯಂಕಾಲದ ಇಳಿ ಹೊತ್ತಿಗೆ ಕೈಗೇರಿದ “ಪ್ಯಾರಾಸೈಟ್” ಮಧ್ಯ ರಾತ್ರಿವರೆಗೂ ತಡೆಯಿಲ್ಲದೆ ತನ್ನನ್ನು ಸರಾಗವಾಗಿ ಓದಿಸಿಕೊಂಡಿತು. ಮಲೆನಾಡಿನ ಬದುಕನ್ನು ಬಯಲು ಸೀಮೆಯ ನನ್ನೆದುರಿಗೆ ತೆರೆದಿಟ್ಟು, ಅಲ್ಲಿನ ಭಾಷೆ, ಜನ ಜೀವನ, ಕಾನನ, ತೊರೆ, ವನ್ಯಜೀವಿ, ದಯ್ಯ, ಜಟ್ಟಿ, ಚೌಡಿ, ಬಲಿ ಆಚರಣೆ, ನಾಗಬನ, ದೈವದ ಕಾಡು.. ಮುಂತಾದ ಭವ್ಯ ಜಗತ್ತನ್ನೆ ಕಣ್ಣಿಗೆ ಕಟ್ಟಿತು‌.
#ಪ್ಯಾರಾಸೈಟ್” ಕಾದಂಬರಿಯ ಮುಖ್ಯ ವಸ್ತು “ದಾಟು ಬಳ್ಳಿ,”

“ಕಾಡಿಗೆ ಬೇಟೆಯಾಡಲು, ಚಾರಣ, ವನೌಷಧಿ ಹುಡುಕಲು, ದನ ಮೇಯಿಸುವವರು.. ಹೀಗೆ ಕಾಡಿನೊಳಗೆ ತೂರಿಕೊಂಡವರು ಅಚಾನಕ್ಕಾಗಿ “ದಾಟು ಬಳ್ಳಿ” ದಾಟಿದರೆ ದಾರಿ ತಪ್ಪಿ, ದಿಕ್ಕು ಸಿಗದೆ ಅಲೆಯುವರಂತೆ, ಮತಿಭ್ರಮಣೆ ಆಗಿ ಅದೇಷ್ಟೋ ಜನ ಕಾಡಿನಿಂದ ಪಾರಾಗಲು ಪರದಾಡಿ ಯಮಪಾದ ಸೇರುವರಂತೆ”

ಇಂತಹ ಕೌತುಕದ ಬಳ್ಳಿಯ ಜಾಡು ಹಿಡಿದು.. ಪತ್ತೆ ಮಾಡಲೇಬೇಕು, ಅದರ ಹಿಂದಿನ ವೈಜ್ಞಾನಿಕ ಕಾರಣ ಶೋಧನೆ ಮಾಡಲೇಬೇಕೆಂದು, “ಬಳ್ಳಿ” ದಾಟಿದವರಿಂದ ಮಾಹಿತಿ ಕಲೆಹಾಕಲು ಕಥಾನಾಯಕ ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಅಲೆಯುತ್ತಾನೆ… ಕೊನೆಗೆ ತಾನೆ ಕಾಡು ಹೊಕ್ಕು ಇಂಚಿಂಚು ತಡಕಾಡುವ ಒಟ್ಟು ವಿಸ್ಮಯದ , ಕುತೂಹಲಭರಿತ ಶೋಧನಾ ಯಾತ್ರೆಯೇ ಕಾದಂಬರಿಯ ಜೀವಾಳ.

ಕೌತುಕದ ಬಳ್ಳಿಯ ಹುಡುಕಾಟದ ನೆಪದಲ್ಲಿ “ಮಲೆನಾಡಿನ ವರ್ತಮಾನದ ಸ್ಥಿತ್ಯಂತರಗಳನ್ನ” ಕಾದಂಬರಿಕಾರ ಮಾರ್ಮಿಕವಾಗಿ ವರ್ಣಿಸಿದ್ದಾರೆ. ಅಪ್ಪಟ ಮಲೆನಾಡಿನ ಭಾಷೆಯ ಕಾದಂಬರಿ… ಮಲೆನಾಡಿಗರಿಗೆ ತಾವೇ ಕಂಡದ್ದು, ಕಾಣುತ್ತಿರುವುದು ಇದನ್ನೇ ಅಲ್ಲವೇ..!? ಎಂದು ಚಿಂತನೆ ಮಾಡುವಂತೆ ಪ್ರೇರೇಪಿಸುತ್ತೆ. ಲೇಖಕ ಬಳ್ಳಿಯ ನೆಪದಲ್ಲಿ ಮಲೆನಾಡಿನ ಬದಲಾದ ಬದುಕು, ಪರಿಸರದ ಮೇಲೆ ಮಾನವನ ದುಷ್ಟ ದಾಳಿ, ಆಹಾರದ ಮೇಲೆ “ರಾಸಾಯನಿಕ”ಗಳ ಪ್ರೋಕ್ಷಣೆ, ವನ್ಯಜೀವಿಗಳ ನಾಶಕ್ಕೆ ಕಾರಣ, ಹಣದಾಸೆಗೆ ಬಿದ್ದು ಅಡ್ಡದಾರಿ ಹಿಡಿಯುವ ಅಬ್ಬೆಪಾರಿಗಳು, ಕ್ಷಯಿಸುತ್ತಿರುವ ಮನುಷ್ಯನ “ರೋಗ ನಿರೋಧಕ ಶಕ್ತಿ”, ಅವೈಜ್ಞಾನಿಕ ಕಾಮಗಾರಿಗಳು, ವಿಷವುಂಡು ಕಸುವು ಕಳೆದುಕೊಳ್ಳುತ್ತಿರುವ ಭೂ ಒಡಲು, ಒಡಲಾಳದ “ಸೂಕ್ಷ್ಮ ಜೀವಿ”ಗಳ ಸರ್ವನಾಶ… ಇವುಗಳಿಗೆಲ್ಲ ಮುಖ್ಯ ಕಾರಣ ಮಾನವನ ದುರಾಸೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

“ಬಯಲು ಸೀಮೆ”ಯ ನನಗೆ ಕೆಲವು “ಮಲೆನಾಡ” ಪದಗಳು ಬೇಗನೆ ದಕ್ಕದೇ ಹೋದವು‌. ಮಲೆನಾಡಿನ ಸ್ಥಿತ್ಯಂತರಗಳನ್ನು ಬಟಾ ಬಯಲಾಗಿಸುತ್ತಾ, ತನ್ನ ಲೇಖನಿಯಿಂದ ಎಚ್ಚರಿಸುತ್ತಾ ಸಾಗುವಾಗ, ಲೇಖಕ ಕಥಾ ಜೀವಾಳ “ದಾಟು ಬಳ್ಳಿ”ಯಿಂದ ಓದುಗನನ್ನು ಅಲ್ಲಲ್ಲಿ ವಿಮುಖನನ್ನಾಗಿಸಿದರು ಎನಿಸುತ್ತದೆ. ತೇಜಸ್ವಿಯವರ “ಕರ್ವಾಲೋ” ಕಣ್ಮುಂದೆ ಪದೇ ಪದೆ ನಡೆದು ಹೋಗುವುದು.
ದಾಟು ಬಳ್ಳಿಯು ಮದ್ದು ತೆಗೆಯುವ ದುಗ್ಗಪ್ಪ, ದೊಡ್ಡಿ, ಎಡಕುಮರಿಯ ಅಯ್ಯಪ್ಪ, ಶಿವರಾಮಣ್ಣ, ಫಾರೆಸ್ಟ್ ಗಾರ್ಡ ಕುಮಾರಪ್ಪ, ಮೊಣ್ಣಪ್ಪ, ದಗಲ್ಬಾಜಿ ಪ್ರಭು, ಇಚ್ಚಾಲಿ, ಡ್ರೈವರ್ ಕೃಷ್ಣ, ಲಿಂಗೇಗೌಡ, ಕುಣುಬಿ ಜನಾಂಗದ ಡೇರೇಕರ್, ನಾಚಿಕೆ..ಸಂಕೋಚ ಆವರಿಸಿದ ನಾನಾ‌ ಮತ್ತು ಅರಣ್ಯಾಧಿಕಾರಿ ಪ್ರಕಾಶ್’ರನ್ನು ಸುತ್ತಿಕೊಂಡೆ ಹಲವರನ್ನು ದಾರಿ ತಪ್ಪಿಸುತ್ತಿದೆ.

ದಟ್ಟಾರಣ್ಯಗಳಲ್ಲಿ ಅಲೆಯುವಂತೆ ಮಾಡಿದೆ.



ನನಗಿಷ್ಟವಾದ ಮತ್ತು ಟಿಪ್ಪಣಿ ಮಾಡಿಟ್ಟುಕೊಳ್ಳುವಂತ ಹಲವಾರು ಮಾರ್ಮಿಕ ಸಾಲುಗಳು…….. ಕಾದಂಬರಿಗೆ ಇನ್ನಿಲ್ಲದ ತಾಕತ್ತು ತುಂಬಿವೆ.

“ಮದ್ದು ತೆಗೆಯುವವನೆ ಮದ್ದು ಹೊಡೆದ”

“ಹರಕೆ, ಹಬ್ಬಕ್ಕೆ ನೆರೆಯುವಷ್ಟೇ ಉತ್ಸಾಹ, ಒಗ್ಗಟ್ಟು ಜನರಲ್ಲಿದ್ದಿದ್ದರೆ ಬಹುಶಃ ಮಲೆನಾಡಿನ ಹಲವಾರು ಸಮಸ್ಯೆಗಳು ಬಗೆಹರಿಯುತ್ತಿದ್ದವೇನೋ..”

“”ಜಗತ್ತಿನ ಬಂಡಿ ಸರಾಗವಾಗಿ ಸಾಗುವಲ್ಲಿ ಪ್ರಕೃತಿಯ ಅತೀ ಮುಖ್ಯ ಪಾತ್ರ ವಹಿಸುವ, ಸೃಷ್ಟಿಕರ್ತನ ಪ್ರತ್ಯಕ್ಷ ರೂಪವೇ ಆಗಿರುವ ಜೇನುಹುಳುಗಳನ್ನು ಸುಟ್ಟು ಕೊಲ್ಲುವ ದೊಡ್ಡಿ ನನಗೆ ಯಾವತ್ತಿಗೂ
ವಿನಾಶಕಾರಿ ಮನುಷ್ಯನ ಅಪ್ಪಟ ಪ್ರತಿನಿಧಿಯಂತೆ ಕಾಣುತ್ತಿದ್ದ”.

(ಪ್ಯಾರಾಸೈಟ್ ಕಾದಂಬರಿ ಲೇಖಕ ಕಾರ್ತಿಕಾದಿತ್ಯ ಬೆಳ್ಗೋಡು)

“ಶೂದ್ರಾಚರಣೆಯಲ್ಲೂ ವೈದಿಕತನವನ್ನು ತುರುಕಿದ್ದು ನೆಲಮೂಲ ಸಂಸ್ಕೃತಿಯ ಮೇಲೆ ನಡೆದ ಅನ್ಯ ಆಚರಣೆಯ ಸವಾರಿ”

“ಮಣ್ಣಿನ ಮೇಲೆ ಹೇಗೆ ಜಗತ್ತಿದೆಯೋ ಹಾಗೆಯೇ ಮಣ್ಣಿನ ಆಂತರ್ಯದಲ್ಲೂ ಕೂಡಾ ಅಪರಿಮಿತ ಜೀವ ವ್ಯವಸ್ಥೆಯಿದೆ……. ಅದೇ ರೈತನ ಬೆನ್ನೆಲುಬಾಗಿ ದುಡಿಯುತ್ತಿದೆ”.

“ನಮ್ಮ ನಡುವಿನ ಬುಡಕಟ್ಟು ಜನಾಂಗದ ಮೂಲ ಸಂಸ್ಕೃತಿ ನಾಗರಿಕ ಜಗತ್ತಿನ ಆಧುನಿಕ ಭರಾಟೆಯಲ್ಲಿ ಪರ್ಯಾವಸನಗೊಂಡಿದೆ”

“ಸೂಕ್ಷಮತೆಯೇ ಇರದ ಶಿಕಾರಿದಾರರ ವಿಕೃತ ತೆವಲಿಗೆ ಸಿಕ್ಕಿ ಕೆಲವು ಅಪರೂಪದ ಪ್ರಾಣಿಗಳಂತೂ ಅಳಿದೇ ಹೋಗಿವೆ”

“ಯಾವ ನಂಬಿಕೆಯು ನಂಬಿದವರ ಹಾಗೂ ಇತರರಿಗೆ ಹಾನಿಕಾರಕವಲ್ಲವೋ ಅದು ಯಾವತ್ತಿಗೂ ಮೂಢನಂಬಿಕೆಯಲ್ಲ”.

“ದನ ಕಾಯುವವರು ಒಂದು ರೀತಿ ಕಾಡುಹಕ್ಕಿಯಂತೆ”.

ಇವೆಲ್ಲ ಸಾಲುಗಳಲ್ಲಿ ಲೇಖಕನ ಜೀವಪರ ದಟ್ಟ ನಿಲುವು ಗೋಚರಿಸುತ್ತೆ. ಇಲ್ಲಿನ ಒಂದೊಂದು ಸಾಲಿಗೆ ಕಥೆಯುಂಟು, ಕಥೆಗೆ ಉಪಕಥೆಗಳುಂಟು. ವಿಶ್ಲೇಷಣೆಗೆ ಹಚ್ಚಿ.. ತಾನೇ ಓದಿಸಿಕೊಳ್ಳುವ ಗಟ್ಟಿತನದ ಬರಹ ಲೇಖಕನದು.

ಹಾಗಾದರೆ… ದಾಟು ಬಳ್ಳಿ ಲೇಖಕರಿಗೆ ಸಿಕ್ಕಿತಾ? ಅದ್ಯಾವುದು? ನಿಸರ್ಗದ ಕೌತುಕತೆಯೇ? ವೈಜ್ಞಾನಿಕ ವಿವರಣೆ ಏನು?

ಸಂಪೂರ್ಣ ತಿಳಿಯಲು “#ಪ್ಯಾರಾಸೈಟ್” ಬೆನ್ನಿಗೆ ಬೀಳಲೇ ಬೇಕು.

“ಪ್ರಕೃತಿಯ ರಹಸ್ಯಗಳನ್ನೆಲ್ಲಾ ಭೇದಿಸುತ್ತೇವೆಂಬ ಭ್ರಮೆಯಲ್ಲಿ ತಿರುಗಾಡುವ ನಾವುಗಳು ಶುದ್ಧ ಅವಿವೇಕಿಗಳು…..”ಎನ್ನುವ ಲೇಖಕ “ಕಾರ್ತಿಕಾದಿತ್ಯ ಬೆಳ್ಗೋಡು”, ನಿಮಗೆ All the best.
ಕೌತುಕತೆಯ ತುದಿಗೆ ತಳ್ಳುವ ನಿಮ್ಮ ಬರಹದ ಕಸುವು ಅದ್ಭುತ‌.


  • ಡಾ. ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

1 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW