ನಮ್ರತೆಗೆ ಇನ್ನೊಂದು ಹೆಸರೇ ಇವರು – ಆರ್. ಪಿ. ರಘೋತ್ತಮ




ಪ್ರತಿಷ್ಠಿತ ಪ್ರಶಸ್ತಿಗಳು ಅವರ ಸಾಧನೆಗೆ ಅರಸಿ ಬಂದಾಗ ಈ ಮೂವರ ನಮ್ರತೆಯಿಂದ ಹೇಳಿದ ಮಾತಿವು, ಆರ್. ಪಿ. ರಘೋತ್ತಮ ಅವರ ಬರಹದಲ್ಲಿ ಮನ ತುಂಬಿ ಬಂದ ಲೇಖನ, ಮುಂದೆ ಓದಿ…

ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ಗಳಲ್ಲೊಬ್ಬರಾದ, ಭಾರತೀಯ ಕ್ರಿಕೆಟ್’ನ ಗೋಡೆ ಎಂದೇ ಜಗತ್ಪ್ರಸಿದ್ಧರಾಗಿರುವ, ನಮ್ಮದೇ ನೆಲದ ರಾಹುಲ್ ದ್ರಾವಿಡ್ ಯಾರಿಗೆ ತಾನೇ ಗೊತ್ತಿಲ್ಲ? ಟೆನಿಸ್ ಬಾಲ್ ಕ್ರಿಕೆಟ್ ಆಡುವ ಪ್ರಾಥಮಿಕ ಶಾಲಾ ಆಟಗಾರನಿಂದ ಹಿಡಿದು ಅರವತ್ತರ ವೃದ್ಧರವರೆಗೂ ಬಹುತೇಕರು ದ್ರಾವಿಡ್’ರ ಆ ಸಾಂಪ್ರದಾಯಿಕ ಆಟವನ್ನು ನೋಡಿ ಸವಿದವರೇ.

2017ರಲ್ಲಿ ಒಮ್ಮೆ ಬೆಂಗಳೂರು ವಿಶ್ವವಿದ್ಯಾಲಯದಿಂದ #ರಾಹುಲ್_ದ್ರಾವಿಡ್ ಗೆ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಲಾಯಿತು. ಆದರೆ ಮರುದಿವಸವೇ ದ್ರಾವಿಡ್ ಅದನ್ನು ಅಷ್ಟೇ ನಯವಾಗಿ, ನಮ್ರತೆಯಿಂದ, ಸ್ವೀಕರಿಸದೆ ನಿರಾಕರಿಸಿದರು. ಆಗ ಅವರಾಡಿದ ಮಾತುಗಳು, ನಿರಾಕರಣೆಗೆ ನೀಡಿದ ಸ್ಪಷ್ಟನೆ ಎಂದೆಂದಿಗೂ ಸ್ಮರಣೀಯ.

ಫೋಟೋ ಕೃಪೆ : google

ದ್ರಾವಿಡ್ ಹೇಳುತ್ತಾರೆ “ನನ್ನ ಹೆಂಡತಿ ಒಬ್ಬ ವೈದ್ಯೆ. ಅವಳು ಆ ವೈದ್ಯಪದವಿಯನ್ನು ಪಡೆಯಲು ಹಲವಾರು ದಿನಗಳನ್ನು ವ್ಯಯಿಸಿದ್ದಾಳೆ, ಲೆಕ್ಕವಿಲ್ಲದಷ್ಟು ನಿದ್ರಾಹೀನ ರಾತ್ರಿಗಳನ್ನು ಸುಟ್ಟಿದ್ದಾಳೆ. ನನ್ನ ತಾಯಿ ಕಲಾವಿಭಾಗದಲ್ಲಿ ಒಬ್ಬ ಪ್ರೊಫೆಸರ್. ಅವರು ಈ ಸ್ಥಾನಕ್ಕೆ ಬರಲು ಸುಮಾರು ಐವತ್ತು ವರ್ಷ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಪಟ್ಟಿದ್ದಾರೆ.

ನಾನು ಕ್ರಿಕೆಟ್ ನಲ್ಲಿ ಒಂದು ನೆಲೆ ಕಂಡುಕೊಳ್ಳಲು ಸಾಕಷ್ಟು ಹೆಣಗಾಡಿದ್ದೇನೆ ಮತ್ತು ಬಹಳಷ್ಟು ಕಷ್ಟಪಟ್ಟಿದ್ದೇನೆ. ಆದರೆ ನಾನು ಅಷ್ಟಾಗಿ ಓದಲು ಆಗಲಿಲ್ಲ. ಸಾಧ್ಯವಾದರೆ ಕ್ರೀಡೆಯ ವಿಷಯದಲ್ಲಿಯೇ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆಯುತ್ತೇನೆಯೇ ಹೊರತು ಈ ಗೌರವ ಡಾಕ್ಟರೇಟ್ ಪದವಿಯನ್ನು ನಾನು ಹೇಗೆ ತಾನೇ ಸ್ವೀಕರಿಸಲಿ?” ಎಂದಿದ್ದರು.

ಪ್ರಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‍ಸ್ಟೈನ್ ( ಫೋಟೋ ಕೃಪೆ : google)

ಜರ್ಮನಿಯಲ್ಲಿ ಜನಿಸಿ, ಭೌತಶಾಸ್ತ್ರದಲ್ಲಿ ಜಗತ್ತೇ ನಿಬ್ಬೆರಗಾಗಿ ತಮ್ಮೆಡೆಗೆ ತಿರುಗಿ ನೋಡುವಂತೆ ಮಾಡಿದವರು ಪ್ರಖ್ಯಾತ ಭೌತಶಾಸ್ತ್ರಜ್ಞ #ಆಲ್ಬರ್ಟ್_ಐನ್‍ಸ್ಟೈನ್. ಇಂತಹ ಐನ್‍ಸ್ಟೈನ್ ರಿಗೆ 1952ರಲ್ಲಿ ಇಸ್ರೇಲ್ ದೇಶ ತನ್ನ ದೇಶಕ್ಕೆ ಆಹ್ವಾನಿಸಿ, ಪ್ರಧಾನಿಯ ಪಟ್ಟವನ್ನು ನೀಡಲು ಬಯಸಿತು. ಆದರೆ ಐನ್‍ಸ್ಟೈನ್ ಅದನ್ನು ನಯವಾಗಿಯೇ ನಿರಾಕರಿಸುತ್ತಾ “ನಾನು ಭೌತಶಾಸ್ತ್ರದ ಒಬ್ಬ ಅನನುಭವಿ ವಿದ್ಯಾರ್ಥಿಯಷ್ಟೇ. ದೇಶದ ಆಡಳಿತ, ನಿರ್ವಹಣೆ ಮತ್ತು ರಾಜಕೀಯ ನನಗೆ ಹೇಗೆ ತಾನೇ ಅರ್ಥವಾದೀತು?” ಎಂದಿದ್ದರು.

ರಷ್ಯಾದ ಗ್ರೆಗೋರಿ ಪೆರೆಲ್ಮಾ (ಫೋಟೋ ಕೃಪೆ : google )

ರಷ್ಯಾದ ಗ್ರೆಗೋರಿ ಪೆರೆಲ್ಮಾ ಜಗತ್ತು ಕಂಡ ಅತ್ಯುತ್ತಮ ಗಣಿತಜ್ಞರಲ್ಲೊಬ್ಬರು. ರೀನಾನಿಯನ್ ಜಾಮಿತಿಯ ಕುರಿತಾದ ಅವರ ಕೆಲಸಗಳು ಇಂದಿಗೂ ಪ್ರಸ್ತುತವಾಗಿದೆ. ಇಂತಹ ವಿಶ್ವವಿಖ್ಯಾತ ಗಣಿತಜ್ಞನನ್ನು ಅರಸಿಕೊಂಡು ಬರದ ಪ್ರಶಸ್ತಿಗಳೇ ಇರಲಿಲ್ಲ. 1996ರಲ್ಲಿ ಯೂರೋಪಿಯನ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಕ್ಸ್, ನಾಲ್ಕು ವರ್ಷಗಳಿಗೊಮ್ಮೆ ಗಣಿತದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿ ಗ್ರೆಗೋರಿಯವರನ್ನು ಅರಸಿಕೊಂಡು ಬಂತು. ಸ್ವೀಕರಿಸಲು ಗ್ರೆಗೋರಿ ನಯವಾಗಿ ನಿರಾಕರಿಸಿದರು. 2006ರಲ್ಲಿ ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್ ರವರು ಜೀವಮಾನದ ಸಾಧನೆಗಾಗಿ ನೀಡುವ ಫೀಲ್ಡ್ಸ್ ಮೆಡಲ್ ಗ್ರೆಗೋರಿಯನ್ನು ಹುಡುಕಿಕೊಂಡು ಬಂತು. ಅತಿದೊಡ್ಡ ಮೊತ್ತದ ಹಣದೊಂದಿಗೆ ನೀಡುವ ಈ ಪ್ರಶಸ್ತಿಯನ್ನು ಗಣಿತದ ನೋಬೆಲ್ ಪ್ರಶಸ್ತಿ ಎಂದೇ ಇಂದಿಗೂ ಪರಿಗಣಿಸಲಾಗುತ್ತದೆ. ಆದರೆ ಗ್ರೆಗೋರಿ ಒಲ್ಲೆ ಅಂದುಬಿಟ್ಟರು.

ಅಮೆರಿಕದ ಕ್ಲೇ ಮ್ಯಾಥಮೆಟಿಕ್ಸ್ ಇನ್ಸ್ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆಯೊಂದು ಗಣಿತದ ಏಳು ಸಮಸ್ಯೆಗಳನ್ನು ಕೊಟ್ಟು, ಅದನ್ನು ಪರಿಹರಿಸಿದವರಿಗೆ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಜೊತೆಗೆ ಮಿಲೇನಿಯಂ ಪ್ರಶಸ್ತಿಯನ್ನು ನೀಡುತ್ತದೆ. 2010ರಲ್ಲಿ ಗ್ರೆಗೋರಿ ಪೆರೆಲ್ಮಾರನ್ನು ಹೊರತುಪಡಿಸಿದರೆ ಈ ಸಂಸ್ಥೆ ಪ್ರಾರಂಭವಾದಾಗಿನಿಂದಲೂ ಯಾರೂ ಈ ಪ್ರಶಸ್ತಿಯನ್ನು ಪಡೆದೇ ಇಲ್ಲ ಎಂದರೆ ಈ ಮೇಧಾವಿಯ ಜ್ಞಾನವನ್ನು ಯಾರೂ ಊಹಿಸಬಹುದು. ಆದರೆ ಸದರಿ ಗ್ರೆಗೋರಿ ಈ ಪ್ರಶಸ್ತಿಯನ್ನೂ ಅತ್ಯಂತ ನಮ್ರತೆಯಿಂದಲೇ ನಿರಾಕರಿಸಿದರು.



ಪ್ರತಿಸಲ ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತು ಬೃಹತ್ ಮೊತ್ತದ ಹಣವನ್ನು ಪಡೆಯಲು ನಿರಾಕರಿಸಿದಾಗಲೂ ಅವರು ಹೇಳಿದ್ದಿಷ್ಟೇ.

“ನಾನು ತೀರಾ ಬಡತನದ ಕುಟುಂಬದಿಂದ ಬಂದವನು. ನನ್ನ ತಾಯಿ ದುಡಿಯುತ್ತಿದ್ದ ಅತೀ ಕಡಿಮೆ ಹಣದಲ್ಲಿಯೇ ನಾವು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಿತ್ತು. ಬಹುಶಃ ಆ ಕಾರಣದಿಂದಲೇ ಏನೋ ನನಗೆ ಗಣಿತ ಕೊಂಚ ಒಲಿದಿದೆ. ಆದರೆ ಈಗ ನನಗೆ ಆ ಬಡತನವಿಲ್ಲ, ಅಷ್ಟೊಂದು ದುಡ್ಡನ್ನಿಟ್ಟುಕೊಂಡು ನಾನಾದರೂ ಏನು ಮಾಡಲಿ?”

ಎಂತಹ ಅದ್ಭುತವಾದ ಮಾತುಗಳಲ್ಲವೇ?

ಮೇಲೆ ಪ್ರಸ್ತಾಪಿಸಿದ ಈ ಮೂವರ ಸರಳತೆಗೆ, ವಿನಯಕ್ಕೆ, ನಮ್ರತೆಗೆ ಎಂತಹವರಾದರೂ ಗೌರವದಿಂದ ತಲೆಬಾಗಲೇಬೇಕು. ಅತೀಸಣ್ಣ ಸಾಧನೆಯನ್ನು ಮಾಡಿ ತನ್ನ ನಗಾರಿಯನ್ನು ತಾನೇ ಬಾರಿಸಿಕೊಂಡು, ನೆಲದಿಂದ ಎರಡು ಅಡಿ ಮೇಲೆ ನಡೆಯುವವರೇ ತುಂಬಿರುವ ಇಂದಿನ ಕಾಲದಲ್ಲಿ, ಇಂತಹ ಮಹಾನುಭಾವರನ್ನು ನೋಡಿದಾಗಲೆಲ್ಲ ಮನಸ್ಸು ತುಂಬಿಬರುತ್ತದೆ. ಇಂತಹವರೇ ಅಲ್ಲವೇ ನಮಗೆ ನಿಜವಾದ ಮಾದರಿಯಾಗಬೇಕಿರುವುದು? ಇಂತಹವರ ಸಂಖ್ಯೆ ಸಾವಿರವಾಗಲಿ.

ನೀವೇನಂತೀರಿ?


  • ಆರ್. ಪಿ. ರಘೋತ್ತಮ  (ಲೇಖಕರು, ಕತೆಗಾರರು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW