ಬಡಿಗೆ ಕೊಟ್ಟು ಬಡಿಸಿಕೊಳ್ಳುವುದೆಂದರೆ ಇದೇನಾ..?

ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಮೊಬೈಲ್ ನಲ್ಲಿ ಕನ್ನಡ ಟೈಪಿಸುವುದು ಹೇಗೆಂದು ಅವರ ಪತ್ನಿಗೆ ಕಲಿಸಿದ್ದಕ್ಕೆ, ಅವರ ಪತ್ನಿ ಕನ್ನಡದಲ್ಲಿ ಕಳಿಸಿದ ಮೊದಲ ಅಕ್ಷರಗಳು ಇಲ್ಲಿದೆ…

” ನೀವು ಕನ್ನಡದಲ್ಲಿ ಅದು ಹೇಗೆ ಅಷ್ಟು ಫ಼ಾಸ್ಟಾಗಿ ಟೈಪ್ ಮಾಡ್ತೀರ ? ಸ್ವಲ್ಪ ಕಷ್ಟ ಅಲ್ವಾ ? ಹೋಗ್ಲೀ ಬರೀ ನೀವು ಮಾತ್ರ ಬರೆಯೋದು ಕಲಿತರೆ ಸಾಕಾ ! ನಮಗೂ ಸ್ವಲ್ಪ ಹೇಳಿ ಕೊಡಿ. ತುಂಬಾ ಅಲ್ಲದಿದ್ರೂ ನಮ್ಮ ಸ್ನೇಹಿತೆಯರಿಗೆ ಯಾವಾಗಲಾದರೂ ಶುಭಾಶಯ ಹೇಳೋದಕ್ಕಾದ್ರೂ ಟೈಪ್ ಮಾಡಲು ಬಂದರೆ ಸಾಕಪ್ಪ..!

ಹೀಗೆ ಮೊಬೈಲ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡೋದು ಹೇಗೆಂದು ಕುತೂಹಲದಿಂದ ಕೇಳಿದ್ದು ನನ್ನ ಶ್ರೀಮತಿಯವರು. ಯಾವತ್ತೂ ಏನನ್ನೂ ಹೀಗೆ ಕೇಳದವಳು ಹೀಗೆ ಇದ್ದಕ್ಕಿದ್ದಂತೆ ಕನ್ನಡದಲ್ಲಿ ವಾಟ್ಸಪ್ ನಲ್ಲಿ ಧನ್ಯವಾದ/ ಶುಭಾಶಯ ಹೇಳಲಿಕ್ಕಾದರೂ ಕಲೀಬೇಕು ಅನ್ನಿಸಿದ್ದು ಅಚ್ಚರಿಯ ಜೊತೆಗೆ ಖುಷಿಯೂ ಆಗಿತ್ತು. ಏಕೆಂದರೆ ಅಲ್ಲಿ ಕನ್ನಡದ ಕೆಲಸವಿತ್ತು.

ಹಾಗೆ ನೋಡಿದರೆ‌ ನಾನೂ ಸಹಾ ಕನ್ನಡವನ್ನು ಮೊಬೈಲ್ ನಲ್ಲಿನ ಆಂಗ್ಲ ಅಕ್ಷರಗಳ ಸಹಾಯದಿಂದಲೇ ಈಗಲೂ ಟೈಪಿಸುವುದು. ಅಪ್ಪಟ ಕನ್ನಡಾಕ್ಷರಗಳ ಟೈಪಿಂಗ್ ನನಗೆ ಬರೋದೇ ಇಲ್ಲ. ಅಂದರೆ “ಕನ್ನಡ ಲಿಪ್ಯಂತರಣ ಎಂಬುದರ ಸಹಾಯದಿಂದಲೇ ನನ್ನೆಲ್ಲಾ ಮೊಬೈಲ್ ಬರಹಗಳನ್ನು ಬರೆಯುವುದು. ಸರಿ, ಯಾವುದೋ ಒಂದು ಬಿಡಿ ! ಈ ಮೊದಲು ಅದೂ ಸಹಾ ಬರುತ್ತಿರಲಿಲ್ಲ.

ಅದಿರಲಿ, ಕೊನೆಗೂ ನನ್ನವಳ ಬೇಡಿಕೆಗೆ ಸ್ಪಂದಿಸಿ ಅವಳಿಗೆ ” ಜಸ್ಟ್ ಕನ್ನಡ ” Aap ಡೌನ್ ಲೋಡ್ ಮಾಡಿಕೊಟ್ಟು ಅದರಲ್ಲಿ ಆಂಗ್ಲ ಲಿಪಿಗಳಿಂದ ಕನ್ನಡ ಟೈಪ್ ಮಾಡುವ ಬಗೆ ಹೇಳಿಕೊಡುತ್ತಿದ್ದೆ. ನನಗೆ ಗೊತ್ತಿರೋದು ಅದೇನೇ. ಆಕೆ ನನ್ನ ಹಾಗಲ್ಲದೇ, ಯಾವುದನ್ನೇ ಆಗಲೀ ಬಹುಬೇಗ ಕಲಿಯುವ ಚುರುಕುತನ ಹಾಗೂ ಜಾಣ್ಮೆಯುಳ್ಳವಳು. ಹೀಗಾಗಿ ಕೇವಲ ಒಂದೇ ಬಾರಿಗೆ ಕನ್ನಡದ ಲಿಪಿಗಳನ್ನು‌ ಬಳಸುವ ಬಗೆ ಹೇಗೆಂದು ಹೇಳಿಕೊಟ್ಟಿದ್ದನ್ನು ಸುಲಭವಾಗಿ ಕಲಿತಳು. ಅವಳು ಇಂದು ಕಲಿತಿದ್ದನ್ನು ನಾನು ಅಂದು ಕಲಿಯಲಿಕ್ಕೆ ಎರಡುವಾರ ತೆಗೆದುಕೊಂಡಿದ್ದೆ.‌!

ಅಂತೂ ನವಂಬರ್ ತಿಂಗಳಲ್ಲಿ ಮೊಬೈಲ್ ನಲ್ಲಿ ಕನ್ನಡ ಟೈಪಿಸುವುದು ಹೇಗೆಂದು ನನ್ನ ಪತ್ನಿಗೆ ಕಲಿಸಿದ್ದಾಯ್ತು.

ಅದಾದ ಮೇಲೆಯೇ ಇರೋದು ಟ್ವಿಸ್ಟು !

ನಾನು ಅಷ್ಟೋ‌ ಇಷ್ಟೋ ಆಕೆಗೆ ಕಲಿಸಿ ತೆಪ್ಪಗಿದ್ದಿದ್ದಲ್ಲಿ ಚೆನ್ನಾಗಿರುತ್ತಿತ್ತು. ಆದರೆ ಅಲ್ಲ್ಲಿಗೇ ಸುಮ್ಮನಾಗದೇ ” ನೋಡೋಣ..‌ಈಗ ಸ್ವಲ್ಪ ಕನ್ನಡದಲ್ಲಿ‌ ಬರೆಯಲು ಬರುತ್ತೆ.

ನಿನಗೆ‌ ಮನಸಿಗೆ ಏನು ಅನಿಸುತ್ತೋ ಅದನ್ನೇ ಕನ್ನಡದಲ್ಲಿ ಬರೆದು ನನ್ನ ವಾಟ್ಸಪ್ ಗೆ ಕಳಿಸು. ಹಾಂ…. ಯಾವುದಕ್ಕೂ ತಪ್ಪಾಗಬಹುದೆಂಬ ಭಯ ಬೇಡ. ಎಲ್ಲರೂ ಮೊದಲಿಗೆ ತಪ್ಪು ತಪ್ಪೇ ಬರೆಯುವುದು…..‌ಇನ್ನೂ ಮುಂತಾಗಿ ಬಿಲ್ಡಪ್ ಕೊಟ್ಟು ಅವಳಲ್ಲಿ ಆತ್ಮ‌ವಿಶ್ವಾಸ ತುಂಬಿ ಕನ್ನಡದಲ್ಲಿ ಬರೆಯುವ ಭರವಸೆ ಮೂಡಿಸಿದೆ.

“ಆಯ್ತುರೀ…ನೋಡ್ತೀನಿ ಟ್ರೈ ಮಾಡುವೆ ” ಎಂದು ಸುಮ್ಮನಾದಳು.

ಕೆಲ ಸಮಯದ ನಂತರ ನನ್ನ ವಾಟ್ಸಪ್ ನಂಬರ್ ಗೆ ಅವಳಿಂದ ಒಂದು ಮೆಸೇಜ್ ಬಂತು ! ಅದನ್ನು ನೋಡಿ ಕನ್ನಡದಲ್ಲಿ ಬರೆದಿದ್ದಾಳಲ್ಲಾ ಎಂಬ ಖುಷಿ ಒಂದು ಕಡೆಯಾದರೆ, ಅವಳು ಬರೆದಿದ್ದ ಕಂಟೆಂಟ್ ನೋಡಿ ತಲೆ ಕೆಟ್ ಹೋಯ್ತು ! ಅವಳು ಬರೆದಿದ್ದು ಸತ್ಯವಾದರೂ, ಅವಳನ್ನು ಕರೆದು ಎಲ್ಲೆಲ್ಲಿ ಕಾಗುಣಿತ ತಪ್ಪಾಗಿದೆ ಎಂಬುದನ್ನು ತೋರಿಸಿಕೊಟ್ಟು ಸರಿಪಡಿಸಿಕೊಳ್ಳುವ ಬಗೆಯನ್ನೂ ಹೇಳಿಕೊಟ್ಟಿದ್ದಾಯ್ತು.

ಅದನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. !!

ಬಡಿಗೆ ಕೊಟ್ಟು ಬಡಿಸಿಕೊಳ್ಳುವುದು ಎಂದರೆ ಇದೇನಾ..ಹೀಗೇನಾ..?

* ಮರೆಯುವ ಮುನ್ನ *

ಹೆಂಡತಿಯಾದವಳು ಅದು ಹೊಸರುಚಿಯಾಗಲೀ ಅಥವಾ ಹೊಸದಾಗಿ ಏನನ್ನೇ ಅನ್ವೇಷಣೆ ಮಾಡಲೀ ಸಂಶೋಧನೆ ಮಾಡಲೀ…. ಅದನ್ನು ಮೊದಲ ಪ್ರಯೋಗಿಸುವುದು ಗಂಡನ‌ಮೇಲೆಯೇ ! ಈ‌ ಅನುಭವ ನನಗೆ ಹೊಸದಲ್ಲ. ಅದರಲ್ಲೂ ಅಡಿಗೆಮನೆಯಲ್ಲಿ ಏನಾದರೂ ಹೊಸರುಚಿ ತಯಾರಾದಲ್ಲಿ ಅದರ ಫಲಿತಾಂಶ ತಿಳಿಯಲು ನನ್ನ ಮೇಲೆಯೇ ಮೊದಲು ಪ್ರಯೋಗವಾಗುವುದು .

ಅದು ಅಷ್ಟರಮಟ್ಟಿಗಿನ ಗಂಡನ ಮೇಲಿನ ಭರವಸೆಯೋ, ಗಂಡನೆಂಬ ಪ್ರಾಣಿ ಹೆಂಡತಿಯಾದವಳ ಎಲ್ಲಾ ಪ್ರಯೋಗಗಳಿಗೆ ಬಳಸಲ್ಪಡುವ ಲ್ಯಾಬೊರೇಟೊರಿಯೆಂಬ ಭಾವನೆಯೋ ಅಥವಾ ನನ್ನ ಹೊಟ್ಟೆಯೊಳಗಿನ ಗ್ರೈಂಡರ್ ಈಗಲೂ ಸ್ಟ್ರಾಂಗಾಗೇ ಇರುವುದರಿಂದ ನನಗೆ ಏನೇ ತಿಂದರೂ ಜೀರ್ಣಿಸಿಕೊಳ್ಳುವುದು ಸಮಸ್ಯೆಯಾಗಲಾರದೆಂಬ ಅದಮ್ಯ ಭರವಸೆಯೋ….ಗೊತ್ತಿಲ್ಲಾರೀ.!

ಆಲ್ ರೈಟ್….ವಿತ್ ಲಿಟ್ಲ್ ಸೀರಿಯಸ್….

ಹೆಂಡತಿಯಾದವಳು ತನ್ನ ಸಂಸಾರವೆಂಬ ಪುಟ್ಟ ಪ್ರಪಂಚದಲ್ಲಿ ತನ್ನೊಳಗಿನ ಕೋಪ-ತಾಪ ; ಪ್ರೀತಿ -ವಿಶ್ವಾಸ ; ವಾದ- ವಿವಾದ; ಸಿಟ್ಟು- ಸೆಡವು; ಸುಖ- ದುಃಖ; ಕಾಲ್ ಮಾಡುವುದು- ಕಾಲೆಳೆಯುವುದು….ಇತ್ಯಾದಿ ಅಂತರ್ಗತ ಭಾವನೆಗಳನ್ನು ಗಂಡನ ಮೇಲೆ ತೋರಿಸಿದ ಹಾಗೆ ಸಲೀಸಾಗಿ ಮತ್ತಾರ ಮೇಲೆ ಪ್ರಯೋಗಿಸಲು ಸಾಧ್ಯ…? ಅವಳ ಎಲ್ಲಾ ಚಿಂತನ -ಮಂಥನಗಳಿಗೂ ಸುಲಭ ಸಾಧ್ಯವಾದ , ಅಷ್ಟೇ ಸೊಗಸಾದ ವೇದಿಕೆಯೆಂದರೆ ಗಂಡನೇ !

ಬಹುಶಃ ಇದೂ ಹಾಗೇನೇ ಅಂದುಕೊಂಡರೆ‌ ಮುಗೀತು ! ಒಟ್ಟಾರೆ ಅವಳಿಗೆ ಮೊಬೈಲ್ ನಲ್ಲಿ ಕನ್ನಡ ಬರೆಯಲು ಬಂತಲ್ಲಾ ಎಂಬುದೇ ನನ್ನ ಖುಷಿ ! ಆ ಖುಷಿಗಾಗಿ ಯಾವ ಪ್ರಯೋಗಕ್ಕಾದರೂ ತಯಾರಾಗಿರಬೇಕಲ್ಲವೇ..?

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading