ಕವಿಯತ್ರಿ ಅಮೃತ ಎಂ ಡಿ ಅವರ “ಭಾವನೆಗಳಿಲ್ಲದವಳ ತೀರ ಯಾನ” ಇವರ ಮೊದಲ ಗಜಲ್ ಸಂಕಲನ. ಈ ಪುಸ್ತಕದಲ್ಲಿ ಒಟ್ಟು 65 ಗಜಲ್ ಗಳಿವೆ. ಲೇಖಕಿ ರಮ್ಯ ನಂದಾ ಅವರು ಈ ಕೃತಿಯ ಕುರಿತು ಬರೆದ ಪುಸ್ತಕ ಪರಿಚಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ , ತಪ್ಪದೆ ಮುಂದೆ ಓದಿ…
ಪುಸ್ತಕ : ಭಾವನೆಗಳಿಲ್ಲದವಳ ತೀರ ಯಾನ
ಲೇಖಕರು: ಅಮೃತ ಎಂ ಡಿ, Amrutha M D
ಪ್ರಕಾಶಕರು: ನೇರಿಶಾ ಪ್ರಕಾಶನ
ಪ್ರಥಮ ಮುದ್ರಣ: 2021
ಪುಟಗಳ ಸಂಖ್ಯೆ: 88,
ಪುಸ್ತಕದ ಬೆಲೆ: ₹100.00
ಕವಿಯತ್ರಿ ಅಮೃತ ಎಂ ಡಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದವರು. “ಭಾವನೆಗಳಿಲ್ಲದವಳ ತೀರ ಯಾನ” ಇವರ ಮೊದಲ ಗಜಲ್ ಸಂಕಲನ.
ನನ್ನ ಸಂಗ್ರಹದಲ್ಲಿ ಕವನ ಸಂಕಲನಗಳು ತುಂಬಾ ಕಡಿಮೆ ಇವೆ. ಇರುವ ಕವನ ಸಂಕಲನಗಳು ಕೂಡ ಇಂಗ್ಲೀಷ್ ಭಾಷೆಯವು. ಗಜಲ್ ಕಾವ್ಯ ಪ್ರಕಾರದ ಪುಸ್ತಕಗಳಂತೂ ಒಂದೂ ಇರಲಿಲ್ಲ. ಆಗಾಗ ಹಿಂದಿ ಗಜಲ್ ಗಳನ್ನು ಕೇಳುತ್ತಿದ್ದೇನಾದರು, ಓದುವಂತೆ ಪುಸ್ತಕಗಳನ್ನು ಇಟ್ಟುಕೊಂಡಿರಲಿಲ್ಲ. ಅಮೃತ ಅವರ ಕೆಲವು ಗಜಲ್ ಗಳನ್ನು ಓದಿದ ಮೇಲೆ ಈ ಪುಸ್ತಕವನ್ನು ತರಿಸಿಕೊಂಡೆ.

ಗಜಲ್ ಕಾವ್ಯ ಪ್ರಕಾರದಲ್ಲಿ ಒಂದು ವಿಶೇಷ ಮೋಡಿ ಇದೆ, ಕಾವ್ಯ ವಾಚನದ ನಂತರವೂ ಮಾರ್ದನಿಸುವ ಗಮ್ಮತ್ತಿದೆ, ಕ್ಷಣಾರ್ಧದಲ್ಲಿ ಭಾವನೆಗಳನ್ನು ನವಿರೇಳಿಸುವ ಆಹ್ಲಾದಕತೆ ಇದೆ. ಈ ಪುಸ್ತಕದಲ್ಲಿ ಒಟ್ಟು 65 ಗಜಲ್ ಗಳಿವೆ. ಪ್ರತಿಯೊಂದು ಗಜಲ್ ಗಳಲ್ಲೂ ವಿಭಿನ್ನವಾದ ಭಾವನೆಗಳ ಅನಾವರಣವಿದೆ. ಪ್ರೀತಿ, ಮಮತೆ, ವಾತ್ಸಲ್ಯ, ಕೃತಜ್ಞತೆ, ನಿರೀಕ್ಷೆ, ಹೊಗಳಿಕೆ, ಅಪೇಕ್ಷೆ, ದೃಢತೆ, ಸ್ವಾಭಿಮಾನ, ಪ್ರೋತ್ಸಾಹ ಉತ್ಸಾಹ ಉಲ್ಲಾಸ ಏಕೆ ವಿವಿಧ ಭಾವರಸಗಳನ್ನು ಸುರಿಸುತ್ತವೆ. ಪ್ರತಿಯೊಂದು ಗಜಲ್ ನಲ್ಲಿಯೂ ಕಾಣಸಿಗುವ ಹೆಸರು ಶಬರಿ.
ಶಬರಿ ಎಂದರೆ ನಿರೀಕ್ಷೆ. ಕವಿಯತ್ರಿ ಶಬರಿಯ ಮೂಲಕ ತಮ್ಮ ಭಾವನೆಗಳನ್ನು ತೆರೆದಿಡುತ್ತಾ ಸಾಗಿದ್ದಾರೆ. ಎರಡು ಸಾಲುಗಳ ಪ್ರತಿಯೊಂದು ಚರಣವನ್ನು ಪ್ರಾಸಬದ್ಧವಾಗಿ ಜೋಡಿಸುತ್ತಾ ಮತ್ತೆ ಮತ್ತೆ ಗುನುಗುವಂತೆ ಮಾಡಿದ್ದಾರೆ.

ಅಮ್ಮನಿಗೆ ಸರಿಸಾಟಿ ಯಾರಿಲ್ಲ ಎನ್ನುವ ಅರ್ಥಗರ್ಭಿತ ಗಜಲ್ ಹೀಗಿದೆ –
“ತೋಳ ತೆಕ್ಕೆಯಲ್ಲಿ ಪ್ರಪಂಚದ ಇರುವುದು ಮರೆತವಳು ನಾನು|
ನಿನ್ನ ಮಡಿಲಲ್ಲಿ ಪದೇಪದೇ ಜನಿಸಲು ಬಯಸುವವಳು ನಾನು||
ಊರೆಲ್ಲ ಅಲೆದರು ನಾ ಪ್ರತ್ಯಕ್ಷ ದೇವರ ಕಾಣದಾದೇ| ಬಸವಳಿದವಳಿದು ನಿನ್ನ ಅಪ್ಪಿ ನಲಿದವಳು ನಾನು||
ಆಪಾದನೆಗೂ ಸಿಗಲಿಲ್ಲ ಅಪರಾಧಿ ಸ್ಥಾನದಲ್ಲಿ ಉಳಿದೆ|
ನಿನ್ನ ನೆರಳ ಅಡಿಯಲ್ಲಿ ಪರಿಶುದ್ಧಳು ನಾನು||
ಪರಿಪೂರ್ಣ ಹೊಲವ ಮೂರ್ತಿ ನಿನ್ನ ಹೆಸರಲ್ಲೇ ಇದೆ|
ಅನುಗಾಲ ಅನುಚಣ ನಿನ್ನೋಲವ ಸವಿದವಳು ನಾನು||
ಶಬರಿಯ ಬಾಳಲ್ಲಿ ಅಮ್ಮನೇ ಸರ್ವಾಧಿಕಾರಿ|
ಮಾತೃ ಹೃದಯದ ಸಂತೋಷವ ಬಯಸುವವಳು ನಾನು||”
ನಿರೀಕ್ಷೆ ಹುಸಿಯಾದಾಗ ಮೂಡಿದ ಭಾವನೆಗಳು ಅಕ್ಷರ ರೂಪ ಪಡೆದಿರುವುದು ಹೀಗೆ –
“ಜನಿಪ ಭಾವನೆಗಳು ಸ್ಮಶಾನದತ್ತ ಮುಖ ಮಾಡಿದೆ| ಉದೀಪ ಕನಸುಗಳು ಪಾತಾಳವಾ ಸೇರುತಲಿದೆ||
ಕಾದ ಕಾವಲಿಯೊಳಗೆ ಬಿದ್ದ ಅನಾಮಿಕಳು ನಾನು|
ಬೇಯಿಸಿದರು ಬೆಂದರೂ ಮುಕ್ತಿ ಮರೆಯಾಗಿದೆ||
ಜೀವಂತ ಶವದ ಮೆರವಣಿಗೆಯಲ್ಲಿ ನಾನೇ ಪ್ರಮುಖಳು|
ಒಡಲಾಳದ ಬೇಗ ಬದುಕನ್ನೇ ಜಗ್ಗಿಸುತ್ತ ಸಾಯಿಸಿದೆ||
ಭಾವಗಳು ಅಕ್ಷರಕ್ಕೆ ಸೀಮಿತವೆಂದು ರುಜವಾಯ್ತು|
ತೃಣದಷ್ಟು ಬೆಲೆ ಸಿಗದ ಜಾಗದಲ್ಲಿ ಪ್ರೀತಿ ಬಿದ್ದಿದೆ||
ಶಬರಿಯ ಕನಸೆಲ್ಲವೂ ಅಸುನೀಗುತ್ತಾ ಅನಾಥವಾದವು|
ಬದುಕಿನ ಬಣ್ಣ ಬವಣೆಗಳು ಪಲ್ಲಂಗದಲ್ಲೇ ನೆಲೆಸಿದೆ||
ರೈತರ ಬಗೆಗಿನ ಈ ಗಜಲ್ ನನಗೆ ತುಂಬಾ ಪ್ರಿಯವಾಯಿತು.
ಹಸಿರುಸಿರು ನೆರಳಲ್ಲೇ ಜೀವಮಾನ ಕಳೆದವನು| ಮಳೆಯೋಟ್ಟಿಗೆ ಕಣ್ಣ ಮುಚ್ಚಾಲೆ ಆಟವಾಡಿದವನು ರೈತ|| ಭೂರಮೆಯ ಸಂಗಡ ಕಲೆತು ಬೆವರ ಜೊತೆ ಸವೆದವನು|
ನಂಬಿಕೆಯಲು ಸಾವಲ್ಲು ಸಾರ್ಥಕತೆಯ ಸಾರಿದವನು ರೈತ|| ಅಪೇಕ್ಷೆ ಇಲ್ಲದೆ ನಿರೀಕ್ಷೆ ಪಡದ ಗಾಣದ ಎತ್ತಿನಂತೆ ದುಡಿದವನು|
ಬೇಸಾಯ ಮಾಡುವುದು ನನ್ನ ಕಾರ್ಯವೆಂದು ಬದುಕಿದವನು ರೈತ||
ಕೈಹಿಡಿದ ಸಂಬಂಧವ ಹೀನಾಯ ಸ್ಥಿತಿಯಲ್ಲೂ ಸಲುಹಿದ|
ಕೈಕಚ್ಚಿದರು ಜಗವೇ ನಿಂತರು ತನ್ನ ಕಾಯಕ ಬಿಡದವನು ರೈತ||
ಗರ್ವದಿ ಹೇಳುವಳು ಶಬರಿ ರೈತಾಪಿ ಕುಟುಂಬದವಳೆಂದು| ಗಗನಕುಸುಮದಂತೆ ವಿಜೃಂಭಿಸುತ್ತ ಸೋಲದವನು ರೈತ||
ಪ್ರತಿಯೊಂದು ಗಜಲ್ ಗಳು ಒಂದೊಂದು ಭಾವನೆಗಳನ್ನು ವ್ಯಕ್ತ ಪಡಿಸುತ್ತಾ ಕಾವ್ಯಪ್ರಿಯರನ್ನು ಭಾವನಾ ಲಹರಿಯೊಳಗೆ ವಿಹರಿಸುವಂತೆ ಮಾಡುತ್ತವೆ.
- ರಮ್ಯ ನಂದಾ
