ಜೇನಿನಂತಹ ಮನಸ್ಸಿನ ಅರ್ಥ

ಜೇನಿನಂತಹ ಮನಸ್ಸೇ? ಎಂಬ ಪ್ರಶ್ನೆ ನನ್ನನ್ನು ಬಹುವಾಗಿ ಕಾಡತೊಡಗಿತು. ಇದಕ್ಕೆ ಉತ್ತರವನ್ನು ಹುಡುಕುತ್ತಾ ಹೊರಟ ಲೇಖಕಿ ಡಾ. ಯಲ್ಲಮ್ಮ ಕೆ ಅವರ ಉತ್ತರ ಇಲ್ಲಿದೆ, ತಪ್ಪದೆ ಮುಂದೆ ಓದಿ…

ಸಾಹಿತ್ಯ ಅಂದ್ರೆ ಒಂಟಿ ಜೀವ ಮತ್ತು ಜೀವನಕ್ಕೆ ಜೊತೆಯಾದ ನೆಚ್ಚಿನ ಮೆಚ್ಚಿನ ಸಂಗಾತಿ! ಇತ್ತೀಚಿಗೆ ‘ಸಂಗಾತಿ’ ಹೆಸರಿನ ಬ್ಲಾಗ್ ವೊಂದರಲ್ಲಿ ಪ್ರಕಟವಾದ ‘ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ!’ ಎಂಬ ನನ್ನ ಲೇಖನವನ್ನು ಓದುಗ ಬಳಗದ ಆಪ್ತಗೆಳತಿಯೊಬ್ಬಳು ಓದಿ, ‘ನಿಜಕ್ಕೂ ನಿನ್ನದು ಜೇನಿನಂತಹ ಮನಸ್ಸು ಕಣೇ!’ [ಮೈ ಡಿಯರ್ ಸ್ವೀಟ್ ಹಾರ್ಟ್] ಎಂದು ಪ್ರತಿಕ್ರಿಯೆ ನೀಡಿದ್ದಳು, ಅವಳ ತುಂಬು ಹೃದಯದ ಪ್ರೀತಿಗೆ ನಾನು ಯಾವತ್ತೂ ಆಭಾರಿಯಾಗಿದ್ದೇನೆ.

ಅವಳಾಡಿದ ಮಾತು ನನ್ನಲ್ಲಿ ಖುಷಿ ತಂದಿತ್ತಾದರೂ ನಿಜಕ್ಕೂ ನನ್ನದು ಜೇನಿನಂತಹ ಮನಸ್ಸೇ? ಎಂಬ ಪ್ರಶ್ನೆ ನನ್ನನ್ನು ಬಹುವಾಗಿ ಕಾಡತೊಡಗಿತು, ಆ ಮನಸ್ಸಿನ ತೊಳಲಾಟವೇ ಲೇಖನ ರೂಪದಿ ನಿಮ್ಮ ಕಣ್ಮುಂದಿದೆ, ಓದಿ ನೀವೂ ಪ್ರತಿಕ್ರಿಯಿಸಿ.

ಜೇನಿನಂತಹ ಮನಸ್ಸು ಎಂದೊಡನೆಯೇ ಎಂ.ಎಂ.ಕಲಬುರ್ಗಿ ಯವರು ಸಂಪಾದಿಸಿದ ‘ಬಸವಣ್ಣನವರ ವಚನ ಸಂಪುಟ – ೦೧, ರಲ್ಲಿನ ವಚನವೊಂದು ಥಟ್ಟನೆ ನೆನಪಿನಾಳದಿಂದ ಕಣ್ಮುಂದೆ ಸುಳಿದಾಡಿತು!

“ವಾಸನೆಯ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು,
ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ,
ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ,
ಕೂಡಲಸಂಗಮದೇವಾ”. ||1352||

ನೊಣದ ಮಲ ವಾಸನೆಯ ದೆಸೆಯಿಂದ ಸಿಹಿಯಾದ ಜೇನುತುಪ್ಪ ಎನಿಸಿದಂತೆ, ಕೋಣನ ಮಾಂಸ ಪರಿಮಳದ ದೆಸೆಯಿಂದ ವಾಣಿಜ್ಯತೆಯ ಇಂಗು, ಆದಾಯ ತರುವ ವಸ್ತು! ಆಗಿರುವಂತೆ, ಭಕ್ತಿಯ ದೆಸೆಯಿಂದ ಎನ್ನಲ್ಲಿಯ ಎಲ್ಲ ಅವಗುಣಗಳು ಹಿಂಗಿದವು ದೇವಾ ಎಂದು ಮುಂದುವರೆದು ಭಕ್ತಿಯ ಚಿಹ್ನೆಗಳನ್ನು ಮತ್ತೊಂದು ವಚನದಲ್ಲಿ ಬಸವಣ್ಣ ವ್ಯಾಖ್ಯಾನಿಸುತ್ತಾನೆ.

ಇಲ್ಲಿ ನನ್ನ ಗೆಳತಿ ನನ್ನ ಕುರಿತಾಗಿ ಹೇಳಿದ ಮಾತು ; ‘ಹೆತ್ತವರಿಗೆ ಹೆಗ್ಗಣವೂ ಮುದ್ದು!’ ಗಂಡ ಹೆಂಡತಿಯ ಮೇಲಿನ ಪ್ರೀತಿಯ ದೆಸೆಯಿಂದ ಪ್ರೇಮದ ಮೂರ್ತರೂಪವಾಗಿ ಹೊರಬಂದ ಮಗುವಿನ ಮೇಲೆ ಮಮತೆ, ವಾತ್ಸಲ್ಯ ಮೂಡಿ ಸಹಜವಾಗಿಯೇ ಅದು ಮುದ್ದಾಗಿ ಕಾಣುತ್ತದೆ. ಹಾಗೆಯೇ ಅವಳು ನನ್ನ ಮೇಲಿರಿಸಿದ ಗೌರವ, ಪ್ರೀತಿ, ಪ್ರೇಮ, ವಿಶ್ವಾಸ, ಜೊತೆಗೆ ಅವಳ ಓದಿನ ಪ್ರೀತಿಯ ದೆಸೆಯಿಂದಾಗಿಯೇ ನನ್ನದು ಜೇನಿನಂತಹ ಮನಸ್ಸು ಎಂದೆನಿಸಿರಬಹುದು, ಹಾಗೇನಿಲ್ಲ ಹುಲುಮಾನವರಲ್ಲಿ ಎಲ್ಲರಂತೆ ನಾನೂ ಒಬ್ಬಳು, ನನ್ನಲ್ಲಿಯೂ ರಾಗ, ದ್ವೇಷ, ಅಸೂಯೆ, ಎಲ್ಲವೂ ಇದೆ, ಪ್ರೀತಿಯ ಭಾವದಿ ಅಭಾವ ತಲೆದೋರಿದಾಗ, ನನ್ನ ನೇರ ನಡೆ-ನುಡಿಗಳ ದೆಸೆಯಿಂದ ಅನೇಕರಿಗೆ ಕಹಿಜೇನಿನಂತೆ, ಕಠೋರಳಾಗಿ ಕಂಡಿರಲೂಬಹುದು, ಈ ಸಿಹಿ-ಕಹಿ ಎನ್ನುವುದು ಗುಣವಷ್ಟೇ, ರಾಗ-ದ್ವೇಷದ ದೆಸೆಯಿಂದ ಒಬ್ಬರು ಮತ್ತೊಬ್ಬರ ಮೇಲೆ ಹೊಂದಿರುವ ಅಭಿಪ್ರಾಯ ಅಷ್ಟೇ!

ಈ ಪ್ರೀತಿ-ಪ್ರೇಮ ಮತ್ತು ಕಾಮ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದನ್ನು ಬಿಟ್ಟು ಮತ್ತೊಂದಿಲ್ಲ, ಒಂದೇ ಮುಖದ ನಾಣ್ಯಕ್ಕೆ ಬೆಲೆ ಬಂದೀತೇ? ಕಾಮವು ಪ್ರೀತಿಯ ದೆಸೆಯಿಂದ ಪ್ರೇಮವಾಗಿ, ಮೋಹವಾಗಿ, ಮಮತೆಯಾಗಿ, ವಾತ್ಸಲ್ಯವಾಗಿ ಬಹುರೂಪದಿ ಇರುಳು-ಬೆಳಕಿನ ಹಾಗೆ! ಒಂದ್ನೊಂದು ಬೆಸೆದುಕೊಂಡಿದೆ. ಕಾಮವನ್ನು ಜಯಿಸುವುದು ಎಂದರೆ ಪ್ರೇಮವನ್ನು ತ್ಯಜಿಸುವುದು ಎಂದರ್ಥ, ಪ್ರೇಮವನ್ನು ತ್ಯಜಿಸುವುದು ಎಂದರೆ ಇಡೀ ಬದುಕನ್ನೇ ತ್ಯಜಿಸುವುದು ಎಂತಲೇ ಅರ್ಥ, ಅಂತಹ ಬದುಕಿಗೆ ಏನರ್ಥ ಇದೆ ನೀವೇ ಹೇಳಿ?

ಅಂತೆಯೇ ಕಾಮ-ಪ್ರೇಮವನ್ನು ತೊರೆದು, ಹೆಂಡತಿ, ಮಕ್ಕಳ ಮೇಲಿನ ಮೋಹ ತೊರೆದು, ರಾಜ್ಯ-ಕೋಶ, ಅಧಿಕಾರದ ಮೇಲಿನ ಅತ್ಯಾಸೆ ಬಿಟ್ಟು ರಾತ್ರೋರಾತ್ರಿ ಎದ್ದು ನಡೆದು, ಹನ್ನೆರೆಡು ವರುಷ ಉಪವಾಸ ವನವಾಸ, ಜಪ-ತಪ, ಧ್ಯಾನದಿ ಮುಳುಗಿದ ಬುದ್ಧ ಪ್ರೀತಿಯ ದೆಸೆಯಿಂದ ಪ್ರೇಮದ ಬಲೆಗೆ ಬಿದ್ದು, ತನ್ನ ಅನುಯಾಯಿಗಳ ಕೋಪ-ತಾಪಕ್ಕೆ ಗುರಿಯಾದರೂ, ಕಾಮ-ಪ್ರೇಮವನ್ನು ಗೆದ್ದು, ಇಡೀ ಜಗತ್ತಿಗೆ ದಾರಿ ದೀಪವಾಗಿ! ಏಷಿಯಾದ ಬೆಳಕು ತಾನೆನಿಸಿದ.


  • ಡಾ. ಯಲ್ಲಮ್ಮ ಕೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading