ಕನ್ನಡ ಶಿಕ್ಷಕರು ಕೊಂಡು ಓದಲೇ ಬೇಕಾದ ಕೆ ಪಿ ಚೋ೦ದಮ್ಮ ಅವರ ‘ಛಂದಸ್ಸಿನ ಮಡಿಲು’ ಕೃತಿಯ ಕುರಿತು ರಾಹುಲ್ ಹಜಾರೆ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಛಂದಸ್ಸಿನ ಮಡಿಲು
ಲೇಖಕಿ : ಕೆ ಪಿ ಚೋ೦ದಮ್ಮ
ಪ್ರಕಾರ : ಕವನ ಸಂಕಲನ
ಪುಸ್ತಕಕ್ಕಾಗಿ ಸಂಪರ್ಕಿಸಿ:- 91675 27069
ಎಲ್ಲರ ಸಾಹಿತ್ಯದ ಶುರುವಾತಾಗೋದು ಕವನಗಳ ಮೂಲಕ. ಹೀಗೆ ಕವನಗಳ ವಾಟ್ಸಾಪ್ ಗ್ರೂಪುಗಳು ನೂರಾರಿವೆ. ಅವರು ಬರೆಯುವ ಕವನಗಳೋ ದೇವರಿಗೇ ಪ್ರೀತಿ. ನಾಲ್ಕಾರು ಪ್ರಾಸ ಹೊಂದಿಸಿ ಮುಗಿಸಿ ಬಿಟ್ಟರೇ ಅದೇ ಒಂದು ಕವನ. ಇನ್ನೂ ಕೆಲವರಂತೂ ಗದ್ಯವನ್ನೇ ಕತ್ತರಿಸಿ ಒಂದರ ಕೆಳಗೊಂದು ಜೋಡಿಸಿ ಮುಗಿಸಿ ಬಿಡುತ್ತಾರೆ. ಅದಕ್ಕಾವ ನಿಯಮವೂ ಇಲ್ಲ. ಗೇಯತೆಯೂ ಇಲ್ಲ ಶಬ್ದಗಳ ಬಳಕೆಯಂತೂ ದೇವರೇ ಬಲ್ಲ. ಎಲ್ಲರೂ ಬರೀತಿದ್ದಾರೆ ನಾನೂ ಬರೆಯುತ್ತೇನೆ ಅಂತ ಹೋಗುವವರು ಸಾವಿರ ಜನ ಅದನ್ನು ಪ್ರಕಟಿಸುವ ಪತ್ರಿಕೆಗಳೂ ಇವೆ. ಅಂಥದ್ದನ್ನು ಸಂಕಲಿಸಿ ನೂರಾರು ಜನರಿಗೆ ಹಂಚೋರೂ ಇದ್ದಾರೆ.

ಕನ್ನಡದಲ್ಲಿ ಕವಿತೆ, ಕವನ, ಕಾವ್ಯ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಛಂದೋಬದ್ಧವಾಗಿ ಬರೆಯುವ ಜನರು ಈಗೆಲ್ಲಿ ಸಿಗುತ್ತಾರೆ. “ಅಮೃತ ಕಾಲ”ದ ಮಾರಾಟದ ಸಂದರ್ಭ ಪರಿಚಿತರಾದ ಲಲಿತ ಬಿಟ್ಟಿರ ಅವರು ತಾವು ಬರೆದ ಛಂದಸ್ಸಿನ ಮಡಿಲು ಪುಸ್ತಕವನ್ನು ಕಳಿಸಿದರು. ಛಂದಸ್ಸು ಎಂದರೆ ಮಾತೃಕೆಗಳು, ಗಣಗಳ ಮೇಲೆ ಗಮನವಿಡಬೇಕು ಎಂದಷ್ಟೇ ಅರಿತ ನನಗೆ ಅದರ ಆಳವಾದ ಮಾಹಿತಿ ಸಿಕ್ಕಿತು. ಇದರಲ್ಲಿ ಹಲವಾರು ನಿಯಮಗಳಿವೆ. ಲಲಿತ ಅವರು ಮೊದಲಿಗೆ ಅಲಂಕಾರಗಳ ಬಗ್ಗೆ ವಿವರ ಕೊಟ್ಟು ನಂತರ ಷಟ್ಪದಿ, ರಗಳೆ, ಮುಕ್ತಕ, ಚೌಪದಿ, ತ್ರಿಪದಿ, ಏಳೆ ಪದ್ಯ, ಸಾಂಗತ್ಯ, ಗೀತಿಕೆ, ಕಂದಪದ್ಯ, ಕರ್ಣಾಟಕಗಳಿಂದ ಚಂಪೂ ಕಾವ್ಯಗಳವರೆಗೆ ಅಂದರೆ ಒಟ್ಟಾರೆ ಛಂದಸ್ಸಿನ ಕುರಿತು ಬರೆದಿದ್ದಾರೆ. ಪ್ರತಿ ಪ್ರಕಾರಕ್ಕೂ ಅವುಗಳ ನಿಯಮಗಳನ್ನು ಅಳವಡಿಸಿ ನಾಲ್ಕು ಐದು ಕವನಗಳನ್ನು ಬರೆದಿದ್ದಾರೆ.
ವಾಚಾನಾಭಿರುಚಿ ಇಲ್ಲದ ಈ ಕಾಲದಲ್ಲಿ ಮಾರ್ಕೆಟಿಂಗ್ ಅರಿಯದೇ ಹೋದರೆ ಪುಸ್ತಕದ ಮಾರಾಟ ಬಹಳ ಕಷ್ಟ. ಸಿನಿಮಾ ಹಾಡುಗಳು ಅದ್ದೂರಿ ಮ್ಯೂಸಿಕ್ ಇರುವ ಕಾಲದಲ್ಲಿ ಛಂದಸ್ಸಿನ ವಿಚಾರದ ಆಸಕ್ತಿ ಇರೋರೂ ಕಡಿಮೆ. ಹೀಗಾಗಿ ಈ ಕೃತಿ ಮೂಲೆಗುಂಪಾಗಿದೆ.

ಈ ಕೃತಿ ವಿಶೇಷವಾಗಿ ಕನ್ನಡ ಶಿಕ್ಷಕರು ಕೊಂಡು ಓದಬೇಕು. ಲಲಿತಾ ಅವರು ಇನ್ನೊಂದು ಪೀಳಿಗೆಗೆ ಈ ಛಂದಸ್ಸಿನ ವಿಚಾರಗಳನ್ನು ದಾಟಿಸುವ ಇಚ್ಛೆಯನ್ನು ಹೊಂದಿದ್ದಾರೆ. ಕೃತಿಯನ್ನು ಪುಕ್ಕಟೆಯಾಗಿ ಕೇಳಬೇಡಿ. ಬಲ್ಕ್ ಆಗಿ ಖರೀದಿಸಿದರೂ ಇದರ ಆಸಕ್ತಿ ಇರುವವರಿಗೇ ಕೊಡಿ. ಆಗ ಮಾತ್ರ ಒಂದು ಅತ್ತ್ಯುತ್ತಮ ಕೃತಿಗೆ ನ್ಯಾಯ ಒದಗಿಸಿದ ಹಾಗಾಗುತ್ತೆ.
ಅಬ್ಬರದ ಕಾಲಘಟ್ಟದಲ್ಲಿ ಸಾತ್ವಿಕತೆಯನ್ನು ಉಳಿಸಲು ಹೋರಾಡುತ್ತಿರುವವರು ಹಲವರಿದ್ದಾರೆ. ಇಳಿವಯಸ್ಸಿನಲ್ಲಿ ಅವರ ಹೋರಾಟಕ್ಕೆ ತಮ್ಮದೂ ಒಂದು ಬೆಂಬಲವಿರಲಿ. ಛಂದಸ್ಸಿನ ಆಸಕ್ತರು ಈ ಪುಸ್ತಕ ಓದಿ. ಕನ್ನಡ ಶಿಕ್ಷಕರಂತೂ ಕೊಳ್ಳಲೇಬೇಕಾದ ಪುಸ್ತಕವಿದು.
- ರಾಹುಲ್ ಹಜಾರೆ
