ಕಿಟೋಸಿಸ್ (ಜಾನುವಾರುಗಳ ಮಧುಮೇಹ) ಕಾಯಿಲೆ – ಡಾ.ಎನ್.ಬಿ.ಶ್ರೀಧರ



ಹಸುವು ಕರು ಹಾಕುವ 3 ವಾರದ ಮೊದಲು ಜಾನುವಾರುಗಳು ಹಿಂಡಿ ತಿನ್ನುವುದನ್ನು ಕ್ರಮೇಣ ಕಡಿಮೆ ಮಾಡಿದಲ್ಲಿ ಅವು ಕಿಟೋಸಿಸ್ ಕಾಯಿಲೆಗೆ ತುತ್ತಾಗುತ್ತವೆ ಎಂದು ತಿಳಿಯಬಹುದು. ಕಿಟೋಸಿಸ್ ಕಾಯಿಲೆಯ ಕುರಿತು ವೈದ್ಯರಾದ ಡಾ. ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಬಹಳ ಜಾನುವಾರು ಪಾಲಕರು “ನಮ್ಮ ಆಕಳು ಹಿಂಡಿ ಮುಟ್ತಾನೇ ಇಲ್ಲ; ಹುಲ್ಲು ತಿನ್ನುತ್ತೆ, ನೀರು ಕುಡಿಯುತ್ತೆ, ಏನು ಮಾಡುವುದು ಡಾಕ್ಟ್ರೇ” ಎಂದು ಅವರ ಆಕಳಿನ ಸಮಸ್ಯೆ ನಿವೇದಿಸಿಕೊಳ್ಳುತ್ತಾರೆ. ಇದನ್ನು ಕಿಟೋಸಿಸ್ ಕಾಯಿಲೆಯ ಒಂದು ಲಕ್ಷಣ ಎನ್ನಬಹುದು.

ಏನಿದು ಕಿಟೋಸಿಸ್?

ಅಧಿಕ ಹಾಲು ನೀಡುವ ಮಿಶ್ರತಳಿ ಆಕಳುಗಳನ್ನು ಬಾಧಿಸುವ ಕಾಯಿಲೆಗಳಲ್ಲಿ ಜಾನುವಾರುಗಳ ಮಧುಮೇಹವೆನ್ನಬಹುದಾದ ಕಿಟೋಸಿಸ್ ಕಾಯಿಲೆ ಒಂದು. ಇದು ಮಿಶ್ರ ತಳಿಯ ಆಕಳುಗಳನ್ನು ಕರು ಹಾಕಿದ ಪ್ರಾರಂಭಿಕ ದಿನಗಳಲ್ಲಿ ಅದರಲ್ಲೂ ಆರಂಭದ 6 ವಾರಗಳಲ್ಲಿ ಹಸುಗಳನ್ನು ಸಾಮಾನ್ಯವಾಗಿ ಬಾಧಿಸುವ ಒಂದು ಕಾಯಿಲೆ. ಕರು ಹಾಕುವ ಮೊದಲು ಕೆಲವು ಆಕಳುಗಳಲ್ಲಿ ಇದು ಅಪರೂಪವಾಗಿ ಬರುತ್ತದೆ. ಈ ಕಾಯಿಲೆ ಪ್ರಪಂಚದಾದ್ಯಂತ ಎಲ್ಲಾ ಹೆಚ್ಚು ಹಾಲು ಹಿಂಡುವ ಮಿಶ್ರ ತಳಿ ಜಾನುವಾರುಗಳನ್ನು ಕಾಡಿಸುವುದು. ಎಮ್ಮೆಗಳಲ್ಲೂ ಸಹ ಈ ಕಾಯಿಲೆ ಬಹಳ ಸಾಮಾನ್ಯ. ಶರೀರದಲ್ಲಿ ಗ್ಲುಕೋಸ್ ಅಂಶವಿದ್ದರೂ ಸಹ ಅದನ್ನು ಬಳಸಿಕೊಳ್ಳುವಲ್ಲಿ ಆಕಳು ವಿಫಲವಾಗುವುದರಿಂದ ರೈತರಿಗೆ vಳಿಯುವ ಹಾಗೇ ಆಡುಭಾಷೆಯಲ್ಲಿ ಇದನ್ನು “ಜಾನುವಾರುಗಳ ಮಧುಮೇಹ”ವೆನ್ನಬಹುದು.

ಫೋಟೋ ಕೃಪೆ : fwi.co.uk

ಹೇಗೆ ಬರುವುದು ?

ಆಕಳು ಕರು ಹಾಕಿದ ಕೂಡಲೇ ಹಾಲು ಉತ್ಪಾದನೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅಗಾಧ ಪ್ರಮಾಣದಲ್ಲಿ ಶಕ್ತಿಯು ಆಕಳಿನ ಶರೀರದಿಂದ ಬಸಿದು ಹೋಗುತ್ತದೆ. ಇದನ್ನು ಭರಿಸಲು ಆಕಳು ಗರ್ಭ ಧರಿಸಿದ ಸಮಯದಲ್ಲಿ ಅಗಾಧವಾದ ಶಕ್ತಿಯ ಅಂಶವನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿ ಇಡಬೇಕಾಗಿರುತ್ತದೆ. ಕರು ಹಾಕಿದ ಕೂಡಲೇ ಜಾನುವಾರಿನ ಶರೀರದಿಂದ ಹಾಲಿನ ರೂಪದಲ್ಲಿ ಅಗಾಧ ಪ್ರಮಾಣದ ಶಕ್ತಿ ಬಸಿದು ಹೋಗುತ್ತದೆ. ಇದನ್ನು ಆಕಳಿಗೆ ಮೇವಿನ ಅಥವಾ ಹಿಂಡಿಯ ರೂಪದಲ್ಲಿ ನೀಡಿದರೆ ಭರಿಸಲು ಸಾಧ್ಯವಿಲ್ಲ. ಏಕೆಂದರೆ ಇಷ್ಟೊಂದು ಅಹಾರವನ್ನು ಹೊಟ್ಟೆಯಲ್ಲಿ ತುಂಬಿಸಿಕೊಳ್ಳುವ ಅಥವಾ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆಕಳಿಗೆ ಇರುವುದಿಲ್ಲ. ಇದನ್ನು ಭರಿಸಲು ಶರೀರದಲ್ಲಿನ ಬೊಜ್ಜು ಅಥವಾ ಜಿಡ್ಡಿನ ಅಂಶವು ಕರಗಲೇಬೇಕಾಗುತ್ತದೆ. ಕರು ಹಾಕುವ ಮೊದಲೇ ಸಾಕಷ್ಟು ಶಕ್ತಿಯ ಅಂಶವು ಅವಶ್ಯಕ ಪ್ರಮಾಣದ ಕೊಬ್ಬು ಅಥವಾ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗದಿದ್ದಲ್ಲಿ ಹಸುವಿನ ಶರೀರದಲ್ಲಿ ಶಕ್ತಿ ಅಂಶವು ಋಣಾತ್ಮಕವಾಗುತ್ತದೆ. ಬೊಜ್ಜು ಶಕ್ತಿಯ ರೂಪದಲ್ಲಿ ಬದಲಾವಣೆಯಾಗಬೇಕಾದಾಗ ಅದರ ಜೊತೆಯೇ ಶರೀರಕ್ಕೆ ಅನವಶ್ಯವಾದ ಕಿಟೋನ್‌ಗಳೆಂಬ ಕಣಗಳೂ ಸಹ ಉತ್ಪನ್ನವಾಗುತ್ತವೆ. ಕಿಟೋನ್ ಕಣಗಳು ಅಸಿಟೋನ್, ಅಸಿಟೋಅಸಿಟೇಟ್ ಮತ್ತು ಬೀಟಾ ಹೈಡ್ರೋಕ್ಸಿಬ್ಯುಟೈರೇಟ್ ರೂಪದಲ್ಲಿರುತ್ತವೆ. ಶರೀರದಲ್ಲಿನ ಕೊಬ್ಬಿನಂಶವೂ ಕಡಿಮೆಯಾಗಿ ಅಹಾರದಲ್ಲಿಯೂ ಸೂಕ್ತ ಶಕ್ತಿಯ ಅಂಶವು ಇರದಿದ್ದರೆ ರಕ್ತದಲ್ಲಿ ಕೀಟೋನ್ ಕಣಗಳ ಅಂಶ ಜಾಸ್ತಿಯಾದಾಗಿ ಕಿಟೋಸಿಸ್ ಕಾಯಿಲೆ ಬರುತ್ತದೆ. ಈ ಕಾಯಿಲೆಯಲ್ಲಿ ಪಿತ್ತಜನಕಾಂಗವು ಸಹ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆನುವಂಶೀಯತೆ ಸಹ ಈ ಕಾಯಿಲೆಗೆ ಒಂದು ಕಾರಣ.

ಲಕ್ಷಣಗಳು 

ಈ ಕಾಯಿಲೆಯಲ್ಲಿ ಮೊದಲು ಜಾನುವಾರು ಮೇವು ತಿನ್ನುವುದನ್ನು ಅದರಲ್ಲೂ ಹಿಂಡಿಯನ್ನು ತಿನ್ನುವುದನ್ನು ನಿಲ್ಲಿಸುತ್ತದೆ. ಆದರೆ ಹುಲ್ಲನ್ನು ತಿನ್ನುವುದನ್ನು ಮುಂದುವರೆಸುತ್ತವೆ. ಕೆಲವು ಜಾನುವಾರುಗಳಲ್ಲಿ ನರಮಂಡಲದ ಉದ್ರೇಕವೂ ಸಹ ಕಂಡು ಬರುವುದು. ಇಂತಹ ಸಂದರ್ಭದಲ್ಲಿ ಜಾನುವಾರು ಅದರ ಮೈಯನ್ನು ನೆಕ್ಕುವುದು, ನಡೆದಾಡುವಾಗ ತೊಡರುವುದು ಕೂಗುವುದು ಮತ್ತು ಸುತ್ತು ಹೊಡೆಯುವುದು ಇತ್ಯಾದಿ ಲಕ್ಷಣಗಳನ್ನು ತೋರಿಸಬಹುದು. ಪ್ರಾರಂಭದಲ್ಲಿ ಹಾಲಿನ ಇಳುವರಿ ಸಾಮಾನ್ಯವಾಗೇ ಇದ್ದರೂ ಸಹ ನಂತರ ಕ್ರಮೇಣ ಕಡಿಮೆಯಾಗುತ್ತದೆ. ಶರೀರದಿಂದ

ಕೊಬ್ಬಿನಂಶವು ಸೋರಿ ಹೋಗಿ ಆಕಳುಗಳು ಸೊರಗುತ್ತವೆ ಮತ್ತು ದೇಹ ತೂಕದಲ್ಲಿ ಗಣನೀಯ ಇಳಿಮುಖವಾಗುತ್ತದೆ.

ಕಿಟೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಹಸು (ಫೋಟೋ ಕೃಪೆ : Wikivet)

ಪತ್ತೆ ಹೇಗೆ ?

ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಅಂತಹ ಕಷ್ಟಕರ ವಿಷಯವಲ್ಲ. ರೋಗಲಕ್ಷಣಗಳು ಮತ್ತು ಕರುಹಾಕಿರುವ ವೃತ್ತಾಂತವನ್ನು ಗಮನಿಸಿದರೆ ರೋಗವನ್ನು ಪತ್ತೆಹಚ್ಚಬಹುದು. ಆದರೆ ಕೆಲವು ಸಲ ಕರುಹಾಕಿದ 6-8 ವಾರದ ನಂತರವೂ ಸಹ ಈ ಕಾಯಿಲೆ ಬಂದಾಗ ಪತ್ತೆ ಹಚ್ಚುವುದು ಸ್ವಲ್ಪ ಕಷ್ಠವಾದರೂ ಸಹ ಅಸಾಧ್ಯವೇನೂ ಅಲ್ಲ. ಅಲ್ಲದೇ ಆಕಳಿನ ಮೂತ್ರ ಮತ್ತು ಹಾಲಿನಲ್ಲಿ ಕೀಟೋನ್ ಕಣಗಳ ಪತ್ತೆಯನ್ನು ಪ್ರಯೋಗಶಾಲೆಯಲ್ಲಿ ಮಾಡಬಹುದು. ಆಕಳಿನ ಉಸಿರಿನ ವಾಸನೆ ಕಾಕಂಬಿಯ ವಾಸನೆಯನ್ನು ಹೋಲುತ್ತದೆ.

ಚಿಕಿತ್ಸೆಯೇನು ?

ತಜ್ಞ ಪಶುವೈದ್ಯರು ಈ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಆಕಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತನಾಳದ ಮೂಲಕ ಗ್ಲುಕೋಸ್ ಮತ್ತು ಇನ್ನಿತರ ಔಷಧಿಗಳನ್ನು ನೀಡುವ ಮೂಲಕÀ ಗುಣಪಡಿಸಬಲ್ಲರು. ಆದರೆ ಯುಕ್ತ ಪರಿಣಾಮ ಬರಲು ಐದಾರು ದಿನಗಳ ಕಾಲಾವಕಾಶ ಬೇಕು. ಸೂಕ್ತ ಪ್ರಮಾಣದಲ್ಲಿ ಶಕ್ತಿಯ ಅಂಶವನ್ನು ನೀಡುವ ಹಿಂಡಿಯನ್ನು ನೀಡದಿದ್ದಲ್ಲಿ ಕಾಯಿಲೆ ಮರುಕಳಿಸುವ ಸಾಧ್ಯತೆ ಬಹಳ ಇದೆ. ಕೆಲವು ಪ್ರಕರಣಗಳಲ್ಲಿ ತೀವ್ರತರವಾದ ರೋಗಲಕ್ಷಣಗಳು ಇದ್ದಲ್ಲಿ ಗ್ಲುಕೋಸ್ ನೀಡಿದ ನಂತರ ಇನ್ಸುಲಿನ್ ಸಹ ಬೇಕಾದೀತು. ಕೆಲವು ಸಲ 400-500 ಮಿಲಿ ಗ್ಲಿಸರಿನ್‌ನನ್ನು ನಿಧಾನವಾಗಿ ಎಚ್ಚರದಿಂದ ದಿನಕ್ಕೆ ಎರಡು ಸಲ ಮೂರು ದಿನ ಕುಡಿಸಿದಲ್ಲಿ ಪರಿಣಾಮಕಾರಿಯಾಗುತ್ತದೆ. ಎಮ್ಮೆಗಳು ಕರು ಹಾಕುವ ಸಮಯದಲ್ಲಿ ತುಂಬಾ ಕೊಬ್ಬಿದರೆ ಅವುಗಳಲ್ಲಿ ಈ ಕಾಯಿಲೆ ಬರುವುದು ಜಾಸ್ತಿ. ಎಮ್ಮೆಗಳಲ್ಲಿ ಈ ಕಾಯಿಲೆಯ ಚಿಕಿತ್ಸೆ ಸ್ವಲ್ಪ ಕಷ್ಠವೇ ಸರಿ. ಶರೀರದಲ್ಲಿನ ಕೊಬ್ಬಿನಂಶ ಸಂಪೂರ್ಣವಾಗಿ ಕರಗಿದ ನಂತರ ಅವು ಸಾಮಾನ್ಯ ಪರಿಸ್ಥಿತಿಗೆ ಮರಳುತ್ತವೆ.

ಕಿಟೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಎಮ್ಮೆ

 

ಪರಿಹಾರವಿದೆಯೇ ?

ಎಲ್ಲ ಕಾಯಿಲೆಗಳ ತರಹವೇ ಈ ಕಾಯಿಲೆಯಲ್ಲೂ ಸಹ ಕಾಯಿಲೆಯು ಬರದಂತೆ ತಡೆಯುವುದು ಸೂಕ್ತ. ಆಕಳು ಗರ್ಭಧರಿಸಿದ ಏಳು ತಿಂಗಳುಗಳ ನಂತರ ಅದು ಜಾಸ್ತಿ ಕೊಬ್ಬದಂತೆ ನೋಡಿಕೊಳ್ಳಬೇಕು. ಆದರೆ ಅದಕ್ಕೆ ಪೋಷಕಾಂಶಗಳ ಕೊರತೆಯೂ ಆಗಬಾರದು. ಅದರಲ್ಲೂ ಕರು ಹಾಕುವ 3 ವಾರದ ಮೊದಲು ಜಾನುವಾರುಗಳು ಹಿಂಡಿ ತಿನ್ನುವುದನ್ನು ಕ್ರಮೇಣ ಕಡಿಮೆ ಮಾಡಿದಲ್ಲಿ ಅವು ಕಿಟೋಸಿಸ್ ಕಾಯಿಲೆಗೆ ತುತ್ತಾಗುತ್ತವೆ ಎಂದು ತಿಳಿಯಬಹುದು. ಗರ್ಭಧರಿಸಿದ ಜಾನುವಾರುಗಳಿಗೆ 7 ತಿಂಗಳ ನಂತರ ಹಾಲು ಬತ್ತಿಸಿ ಶರೀರದ ನಿರ್ವಹಣೆಗೆ 2 ಕಿಲೋ ಮತ್ತು ಕರುವಿನ ಬೆಳವಣಿಗೆಗೆ 1 ಕಿಲೋ ಸೂಕ್ತ ಗುಣ ಮಟ್ಟದ ಪಶು ಅಹಾರವನ್ನು ಉತ್ತಮ ನಾರಿನಂಶ ಹೊಂದಿದ ರಾಗಿ ಹುಲ್ಲು ಅಥವಾ ಜೋಳದ ದಂಟಿನ ಜೊತೆ ನೀಡಬೇಕು. ಕರು ಹಾಕಿದ ಕೂಡಲೇ ಸುಲಭವಾಗಿ ಜೀರ್ಣವಾಗುವಂತಹ ಹೆಚ್ಚಿನ ಶಕ್ತಿ ಅಂಶ ಹೊಂದಿದ ಪಶು ಅಹಾರವನ್ನು ನೀಡಬೇಕು. ದಿನಕ್ಕೆ ಎರಡು ಕಿಲೋ ಗೋವಿನ ಜೋಳದ ಹುಡಿಯನ್ನು ಪಶು ಅಹಾರದ ಜೊತೆ ಬೆರೆಸಿ ಕೊಡಬೇಕು ಎಂದು ತಜ್ಞರ ಅಭಿಪ್ರಾಯ. ಅದರಲ್ಲೂ ಆಕಳುಗಳು ಕರು ಹಾಕಿದ ನಂತರ 3-7 ವಾರದ ವರೆಗೆ ಅವುಗಳ ಪೋಷಣೆಯ ಬಗ್ಗೆ ಸೂಕ್ತ ಗಮನ ನೀಡಿದಲ್ಲಿ ಧೀರ್ಘಾವಧಿಯಲ್ಲಿ ಆಗುವ ನಷ್ಟವನ್ನು ತಪ್ಪಿಸಬಹುದು.


  • ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW