ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ – ವಿಂಗ್ ಕಮಾಂಡರ್ ಸುದರ್ಶನ



ಯುದ್ಧ ಸಾಮಗ್ರಿಗಳನ್ನು ಬಹು ದೊಡ್ಡ ಮೊತ್ತದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಭವಿಷ್ಯದಲ್ಲಿ ಬಹುದೊಡ್ಡ ನಿರ್ಯಾತದ ಮಾರುಕಟ್ಟೆಯಾಗಲಿದೆ ಮುಂದೆ ಓದಿ ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನಿಯಲ್ಲಿ…

ಕಳೆದ ವರ್ಷ ಅಂದರೆ 2021-2022 ವರ್ಷದಲ್ಲಿ ರಕ್ಷಣಾ ವಲಯಕ್ಕೆ ಕೊಟ್ಟ ಅನುದಾನ 4.78 ಲಕ್ಷ ಕೋಟಿ ರೂಪಾಯಿಗಳು. ಅದರಲ್ಲಿ 1.35 ಲಕ್ಷ ಕೋಟಿಯಷ್ಟನ್ನು ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಕೊಡಲಾಗಿತ್ತು. ಈ ವರ್ಷದ ಬಜೆಟ್ಟಿನಲ್ಲಿ ರಕ್ಷಣಾ ಇಲಾಖೆಗೆ 1.52 ಲಕ್ಷ ಕೋಟಿ ರೂಪಾಯಿಗಳನ್ನು ರಕ್ಷಣಾ ಇಲಾಖೆಗೆ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಕೊಡಲಾಗಿದೆ, ಇದನ್ನು capital outlay ಎನ್ನುತ್ತಾರೆ. ಇದರಲ್ಲಿ ಒಟ್ಟಾರೆ 12% ಗಳಷ್ಟು ಹೆಚ್ಚಳವಾಗಿದೆ. ಕೊರೋನಾ ಮಹಾಮಾರಿಯಿಂದಾಗಿ ದೇಶದ ಆರ್ಥಿಕತೆಯಲ್ಲಾದ ಏರುಪೇರು ಮತ್ತು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿನ ಆತಂಕದ ಪರಿಸ್ಥಿತಿಯನ್ನು ಗಮನಿಸಿ ಈ ಬಜೆಟ್ಟಿನಲ್ಲಿ ಒಂದು ಮಟ್ಟದ ಸಮತೋಲನವನ್ನು ಕಾಪಾಡುವ ಪ್ರಯತ್ನ ನಡೆದಿದೆ ಎನ್ನಬಹುದು.

ಆತ್ಮನಿರ್ಭರತ ಭಾರತದ ಧ್ಯೇಯವನ್ನು ಬಲಪಡಿಸುವ ಉದ್ದೇಶದಿಂದ ಮತ್ತು ಈ ಅನುದಾನ ವಿದೇಶಗಳಿಗೆ ಮತ್ತು ಕೆಲವು ಕಮಿಷನ್ ಏಜೆಂಟರುಗಳಿಗೆ ಹರಿದು ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.

ಸೈನ್ಯದ ಆಧುನೀಕರಣ, ಸಮರ ಸಾಮಗ್ರಿಗಳ ಸಂಶೋಧನೆ ಮತ್ತು ಅಭಿವೃದ್ಧಿ ( R&D) ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಳಿಗೆ ಒತ್ತು ನೀಡುವುದು ಬಹಳ ಪ್ರಮುಖವಾದ ಅಂಶ. ಈ ಬಜೆಟ್ಟಿನಲ್ಲಿ ಹೊರಬಂದಿರುವ ಬಹಳ ಪ್ರಮುಖ ಮತ್ತು ವಿಶೇಷ ಅಂಶವೆಂದರೆ 25% ರಕ್ಷಣಾವಲಯದ ಬಜೆಟ್ಟಿನ Capital outlay ಅಂಶದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ನಡೆಯುವ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂಬುದು ಮತ್ತು ಈ R&D ಕ್ಷೇತ್ರವನ್ನು ಸ್ಟಾರ್ಟ್ ಅಪ್, ಖಾಸಗಿ ಉದ್ಯಮಿಗಳಿಗೆ ಮತ್ತು IIT, IISc ಯಂತಹಾ ಶಿಕ್ಷಣ ಸಂಸ್ಥೆಗಳಿಗೆ ಮುಕ್ತವಾಗಿ ತೆರೆಯಬೇಕು ಎಂಬುದು. ಇಂತಹ ಮಹತ್ವದ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಹಲವಾರು ಅವಿಷ್ಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷದಿಂದ ರಕ್ಷಣಾ ವಲಯದಲ್ಲಿ ವಿದೇಶಿ ಹೂಡಿಕೆಯನ್ನು(FDI) 74% ವರೆಗೂ ಹೆಚ್ಚಿಸಲಾಗಿತ್ತು ಮತ್ತು ಸರ್ಕಾರದ ಅನುಮತಿ ಪಡೆದು ಅದನ್ನು 100% ವರೆಗೂ ವಿಸ್ತರಣೆಗೆ ಅವಕಾಶವಿದೆ. ಇದರಿಂದ ದೇಶದಲ್ಲಿ ನೇರವಾಗಿ ಸಮರ ಸಾಧನಗಳ ಉತ್ಪಾದನೆ ಹೆಚ್ಚಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿವರೆಗೂ ರಕ್ಷಣಾ ವಲಯಕ್ಕೆ ಬೇಕಾದ ಸುಮಾರು 2800 ವಿವಿಧ ವಸ್ತುಗಳನ್ನು ಆಮದು ಮಾಡಿಕೊಳ್ಳದೆ ಅವುಗಳನ್ನು ಭಾರತದಲ್ಲೇ ತಯಾರಿಸಬೇಕು ಎನ್ನುವ ಆದೇಶ ಹೊರಟಿದೆ. ಇದರಿಂದ ಆಗುವ ಪರಿಣಾಮವೇನೆಂದರೆ, ಅತಿ ಚಿಕ್ಕ( ಒಂದು ಕೋಟಿ ರೂಪಾಯಿ ಹೂಡಿಕೆ) ಸಣ್ಣ (ಹತ್ತು ಕೋಟಿ) ಮತ್ತು ಮಧ್ಯಮ ಗಾತ್ರದ (ಐವತ್ತು ಕೋಟಿ) ಉದ್ಯೋಗಪತಿಗಳಿಗೆ ಪ್ರೋತ್ಸಾಹ ದೊರೆತಿದೆ.

ಕಳೆದ ವರ್ಷದ ಬಜೆಟ್ಟಿನಲ್ಲಿ 58% ಅನುದಾನವನ್ನು ಸ್ಥಳೀಯ ಸಮರ ಸಾಮಗ್ರಿಗಳನ್ನು ಉತ್ಪಾದನೆ ಮಾಡುವ ಕಂಪನಿಗಳಿಗೆ ಮೀಸಲಿಡಬೇಕು ಎಂದಿತ್ತು, ಈ ವರ್ಷದ ಬಜೆಟ್ಟಿನಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ 68% ಅನುದಾನವನ್ನು ಸ್ಥಳೀಯ ಉತ್ಪಾದಕರಿಗೆ ಮೀಸಲಿಡಲಾಗಲಿದೆ.

ಇದರಿಂದ ಕಳೆದ ವರ್ಷ ಏಳು ಹೊಸ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (Defence PSU) ಪ್ರಾರಂಭವಾದವು. ಈ ವರ್ಷದ ಬಜೆಟ್ ಸಹಾ ಹೊಸ ಉದ್ಯಮಗಳಿಗೆ ಒತ್ತು ಕೊಡಲಿದೆ ಮತ್ತು ಇನ್ನಷ್ಟು ಹೊಸ DPSU ಗಳು ಸೃಷ್ಟಿಯಾಗಲಿವೆ.

ಫೋಟೋ ಕೃಪೆ : PSU watch

Defence Research Development Organisation (DRDO) ಮತ್ತು ISRO ಗಳಂತಹ ಸಂಶೋಧನಾ ಸಂಸ್ಥೆಗಳಲ್ಲಿ ಇರುವಂತಹ ಪ್ರಯೋಗಾಲಯಗಳನ್ನು ಖಾಸಗಿ ಸಂಸ್ಥೆಗಳು ಸಹಾ ಮುಕ್ತವಾಗಿ ಉಪಯೋಗಿಸಿ ಕೊಳ್ಳಬಹುದು ಎನ್ನುವ ಸರ್ಕಾರದ ನೀತಿಯಿಂದಾಗಿ ಸಣ್ಣ ಪುಟ್ಟ ಕಂಪನಿಗಳೂ ರಕ್ಷಣಾ ಸಾಮಗ್ರಿಗಳ ಉತ್ಪಾದಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ.

83 ತೇಜಸ್ ಯುದ್ಧ ವಿಮಾನಗಳನ್ನು #ವಾಯುಸೇನೆಗೆ ಹಂತ ಹಂತವಾಗಿ ಒದಗಿಸಿ ಕೊಡಲು ಸರ್ಕಾರದ ಅನುಮತಿ ದೊರೆತಿದೆ, ಹಾಗಾಗಿ ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ತೇಜಸ್ ವಿಮಾನಗಳ ಉತ್ಪಾದನೆಯನ್ನು ಪ್ರತಿ ವರ್ಷ ಮೂವತ್ತೆರಡು ವಿಮಾನಗಳಿಗೆ ಹೆಚ್ಚಿಸಲಾಗಿದೆ.

ಯುದ್ಧ ಸಾಮಗ್ರಿಗಳನ್ನು ಬಹು ದೊಡ್ಡ ಮೊತ್ತದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಭವಿಷ್ಯದಲ್ಲಿ ಬಹುದೊಡ್ಡ ನಿರ್ಯಾತದ ಮಾರುಕಟ್ಟೆಯಾಗಲಿದೆ.


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading