ಮೂಗಿನ ವಿಷಯ ಸಾಮಾನ್ಯವಾದದ್ದಲ್ಲ. ಅದು ಮನುಷ್ಯನ ಉಸಿರಾಟದ, ವಾಸನೆ ಘ್ರಾಣಿಸುವ ಅಂಗ ಎಂಬ ಮೂಲಭೂತ ತಿಳಿವಳಿಕೆಗಿಂತ, ಮೂಗು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಗ ಎಂಬಲ್ಲಿಗೆ ಅದರ ವಿಷಯದ ಹರವು ವಿಸ್ತರಿಸಿದೆ.ಹಿರಿಯೂರು ಪ್ರಕಾಶ್ ಅವರ ಮೂಗಿನ ವಿಷ್ಯದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಇಂದು ಬೆಳಿಗ್ಗೆ ನನ್ನ ಪರಿಚಯದವರೊಬ್ಬರು ಕರೆ ಮಾಡಿ ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಷಯ ಸ್ವಲ್ಪ ಗಂಭೀರವಾದ್ದರಿಂದ ಮಾತುಕತೆ ಸ್ವಲ್ಪ ದೀರ್ಘವಾಗಿತ್ತು. ಈ ಮಧ್ಯೆ , ನಾನು ಅವರು ಕೇಳಿದರು ಅಂತ ಅವರ ಪರಿಸ್ಥಿತಿಯನ್ನರಿತು ಅವರ ಹಿತಾಸಕ್ತಿಗೆ ಪೂರಕವಾಗಿ ನನಗೆ ಸರಿಯೆಂದು ತೋಚಿದ್ದ ಸಲಹೆ ಕೊಡುತ್ತಿದ್ದೆ. ನಮ್ಮ ಮಾತಿನ ನಡುವೆ ನನ್ನ ಶ್ರೀಮತಿ ಎರಡು ಮೂರು ಬಾರಿ ಏನೋ ಹೇಳಲು ಬಂದವರು ನನ್ನ ಸತತ ಬಿಜ಼ಿ ಸಂಭಾಷಣೆ ನೋಡಿ ಸುಮ್ಮನಾಗಿದ್ದರು.
ನನ್ನ ಫೋನ್ ಮಾತುಕತೆ ಮುಗಿದ ಮೇಲೆ ನನ್ನತ್ತ ಧುತ್ತನೇ ಬಂದ ನನ್ನಾಕೆ ” ನಿಮಗ್ಯಾಕ್ರೀ ಬೇಕು ಈ ಉಸಾಬರಿ ? ಸುಮ್ನೆ ಇರೋದು ಬಿಟ್ಟು ಅವರಿಗೆ ಏನೇನೋ ದೊಡ್ಡದಾಗಿ ಉಪದೇಶ ಮಾಡೋಕೆ ಬೇರೆ ಹೋಗಿದೀರ ! ಅವರ ವೈಯಕ್ತಿಕ ಸಮಸ್ಯೆ ಏನಿರುತ್ತೋ ಏನೋ ? ನೀವೇನು ದೊಡ್ಡ ಕೌನ್ಸೆಲ್ಲರ್ರಾ , ಲಾಯರ್ರಾ, ಡಾಕ್ಟರ್ರಾ…? ಮೂಗು ಉದ್ದ ಇದೇ ಅಂತ ಎಲ್ಲರ ವಿಚಾರಕ್ಕೂ ತೂರಿಸೋಕೆ ಹೋಗಬಾರದು.
ಹೀಗೆ ಇನ್ನೂ ಕೆಲವು ಮಾಮೂಲಿ ಶೈಲಿಯ ನಿರರ್ಗಳ ಡೈಲಾಗುಗಳ ನಿರಂತರ ನುಡಿನಮನಗಳಲೆಯಲ್ಲಿ ಸೈಲೆಂಟಾಗಿ ಕರಗಿ ಹೋಗಿದ್ದೆ. ಆ ಮಾತಿಗೆ ನಾನು ” ನೀನು ಹೇಳೋದು ನಿಜ, ಆದರೆ ಅರ್ಥ ಮಾಡಿಕೊಂಡಿರೋದು ತಪ್ಪು. ನಾನಾಗಿಯೇ ಅವರಿಗೆ ಏನೂ ಹೇಳಿಲ್ಲ. ಅವರು ಕೇಳಿದ್ದಕ್ಕೆ “ಹೀಗೆ ಮಾಡಿದರೆ ಒಳ್ಳೆಯದು” ಎಂಬ ಸಲಹೆ ಕೊಟ್ಟೆ. ಅವರಾಗೇ ಹೇಳಿಕೊಳ್ಳದಿದ್ದರೆ ನಾನಾಗಿಯೇ ಯಾವತ್ತೂ ಯಾರ ವಿಷಯಾನೂ ಕೇಳೋಲ್ಲಮ್ಮ… ಮೇಲಾಗಿ, ನಮಗೆ ಗೊತ್ತಿರುವ ಒಳ್ಳೆಯ ವಿಚಾರವನ್ನು ಸರಿಯೆನಿಸಿದ ಮಾರ್ಗವನ್ನು ಹೇಳಿದರೆ ತಪ್ಪೇನು? ಕೊನೆಗೆ ಅವರಿಗೆ ಏನು ಅನಿಸುತ್ತೋ ಅದನ್ನೇ ಅವರು ಮಾಡೋದು, ಅಲ್ವೇ.?
ಹೀಗೆ ಡಿಫ಼ೆಂಡ್ ಮಾಡಿಕೊಳ್ಳುತ್ತಲೇ ಇರುವಾಗ ” ಸಾಕು ಸಾಕು… ಮೂಗು ಉದ್ದ ಇದೆ ಅಂತ ನೀವು ಎಲ್ಲರ ವಿಷಯದಲ್ಲಿಯೂ ಹೀಗೇನೆ.! ಜೀವನದಲ್ಲಿ ಎಲ್ಲರಿಗೆ ಒಳ್ಳೆಯದನ್ನು ಮಾಡಿಯೂ ಸಾಕಷ್ಟು ಪೆಟ್ಟು ತಿಂದ್ರೂ ಈ ಜನ್ಮದಲ್ಲಿ ಬುದ್ದಿ ಬರೋಲ್ಲ ಬಿಡೀ.! ಎನ್ನುತ್ತಲೇ ಅಡಿಗೆ ಮನೆಯತ್ತ ತೆರಳಿದಳು.
ಇವೆಲ್ಲಾ ಎಲ್ಲರ ಸಂಸಾರದಲ್ಲೂ ಆಗಾಗ್ಗೆ ಇದ್ದದ್ದೇ, ಬಿಟ್ಟಾಕಿ ! ಆದರೆ ಈ ವೃತ್ತಾಂತದಲ್ಲಿ ” ಮೂಗು ಉದ್ದ” ಎನ್ನುವ ಮಾತು ನನಗೆ ಸ್ವಲ್ಪ ಕ್ಯಾಚೀಯಾಗಿ ಕಂಡಿತ್ತು. ಅರೆ ನನ್ನ ಮೂಗನ್ನು ಇದುವರೆಗೂ ನಾನೇ ಸೂಕ್ಷ್ಮವಾಗಿ ಗಮನಿಸಿಕೊಂಡಿಲ್ಲವಲ್ಲ ಎಂದುಕೊಂಡು ಒಮ್ಮೆ ಕನ್ನಡಿಯಲ್ಲಿ ನನ್ನ ಮೂಗನ್ನು ಸರಿಯಾಗಿ ನೋಡಿಕೊಂಡಾಗ ಅದು ಅಂತಹ ಉದ್ದವಾಗಿ ಕಾಣದಿದ್ದರೂ, ಪರವಾಗಿಲ್ಲ ಸ್ವಲ್ಪಮಟ್ಟಿಗೆ ಉದ್ದವೇ ಇದೆ ಅನಿಸಿದ್ದು ನಿಜ.
ಈ ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ತರಹದ ಅಂಗಾಂಗದ ವೈಶಿಷ್ಟ್ಯಗಳನ್ನು ಭಗವಂತ ತಯಾರಿಕೆ ಹಂತದಲ್ಲಿ ಫ಼ಿಕ್ಸ್ ಮಾಡಿಯೇ ಕಳಿಸಿರುತ್ತಾನೆ. ಹಾಗೆಯೇ ಈ ಮೂಗು ಸಹಾ ! ನನಗನ್ನಿಸಿದ ಮಟ್ಟಿಗೆ ನಿಮ್ಮ ಮುಖದ ಲಕ್ಷಣ ಹೆಚ್ಚಿಸುವಲ್ಲಿ ಕಣ್ಣು, ಮೂಗು, ಬಾಯಿ, ಬಣ್ಣ, ಕೂದಲು ಚರ್ಮ… ಎಲ್ಲವೂ ಸಹಕಾರಿಯಾಗಿರುವುದು ನಿಜವಾದರೂ ವ್ಯಕ್ತಿಯ ಬಾಹ್ಯ ಲಕ್ಷಣಕ್ಕೆ ಈ ಮೂಗು ಮತ್ತು ಕಣ್ಣಿಗೆ ಸ್ವಲ್ಪ ಪ್ರಾಶಸ್ತ್ಯ ಹೆಚ್ಚು ಎಂತಲೇ ಹೇಳಬಹುದು.

ಕನ್ನಡದ ಸ್ಪುರಧ್ರೂಪಿ ನಟರಾಗಿದ್ದ ಶಶಿಕುಮಾರ್ ಅಪಘಾತಕ್ಕೀಡಾದಾಗ ಅವರ ಮೂಗಿನ ಸ್ವರೂಪವೇ ಬದಲಾಗಿ ಅವರು ಗುರುತು ಹಿಡಿಯಲಾರದಷ್ಟು ಬದಲಾದರು. ಕೇವಲ ಮೂಗಿನ ಶೇಪ್ ಬದಲಾಗಿದ್ದಕ್ಕೇ ಇವರೇನಾ ಶಶಿಕುಮಾರ್… ಎನ್ನುವಷ್ಟರ ಮಟ್ಟಿಗೆ ಅವರ ಮುಖಚಹರೆ ಬದಲಾಗಿತ್ತು. ಅಲ್ಲಿಗೆ ನಮ್ಮೆಲ್ಲರ ಮೂತಿಗಳಿಗೆ ಮೂಗು ಎಷ್ಟೆಲ್ಲಾ ಪ್ರಮುಖ ಎಂಬುದನ್ನು ಅರ್ಥಮಾಡಿಕೊಳ್ಳಬಹುದು .
ಹಾಗೇ ಸುಮ್ಮನೇ ಈ ಮೂಗಿನ ಪುರಾಣದ ಎಳೆಯೊಂದನ್ನು ಹೆಕ್ಕಿ ತೆಗೆಯುತ್ತಾ ಹೋದಾಗ ಸಕತ್ ಇಂಟರೆಸ್ಟಿಂಗಾಗಿದೆ ಅನಿಸ್ತು. ನಮ್ಮ ಸುತ್ತ ಮುತ್ತಲಿನ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾನಾ ತರಹದ ವಿನ್ಯಾಸವನ್ನುಳ್ಳ ಮೂಗನ್ನು ಹೊಂದಿರುವವರನ್ನು ಕಾಣಬಹುದು. ಕೆಲವರಿಗೆ ಮೂಗು ಉದ್ದ ಇದ್ದರೆ, ಕೆಲವರಿಗೆ ಗಿಡ್ಡ ಇರುತ್ತೆ. ಮತ್ತೇ ಕೆಲವರಿಗೆ ಮೂಗು ಮುಖದ ತುಂಬಾ ಹರಡಿಕೊಂಡಿದ್ದರೆ ಇನ್ನೂ ಹಲವರಿಗೆ ಅದು ಸಣ್ಣದಾಗಿ ಇದ್ದೂ ಇಲ್ಲದಂತೆ ತೋರುತ್ತೆ. ಮತ್ತೆ ಕೆಲವರಿಗೆ ಮೂಗು ಉದ್ದವಿರಲಿ ಗಿಡ್ಡವಿರಲಿ ತುದಿಯಲ್ಲಿ ಒಂದು ರೀತಿ ಶಾರ್ಪ್ ಆಗಿ ಗೆರೆ ಹಾಕಿದಂತೆ ಇರುತ್ತದೆ. ಕೆಲವು ಮೂಗುಗಳ ವಿನ್ಯಾಸದಲ್ಲಿ ಮೂಗು ಮತ್ತು ಬಾಯಿಯ ನಡುವಿನ ಅಂತರ ತುಂಬಾ ಇದ್ದರೆ, ಮತ್ತೇ ಹಲವರಲ್ಲಿ ಅದು ತುಂಬಾನೇ ಕಡಿಮೆ ಇರುತ್ತದೆ. ಕೆಲವರಿಗೆ ಗಿಳಿಯಂತೆ ಮುಂದಕ್ಕೆ ಚೂಪಾಗಿಯೂ ಇರಬಲ್ಲ ಮೂಗಿರಬಹುದು ಅಥವಾ ಮುಂದಕ್ಕೆ ಮೊಂಡಾಗಿ ಹರಡಿಕೊಂಡೂ ಇರಬಹುದು.
ಸಾಮಾನ್ಯವಾಗಿ ಉದ್ದನೆಯ, ನೇರಕ್ಕೆ ಇರುವ ಮೂಗು , ಹಾಗೇ ಕೆಳಕ್ಕೆ ಹೋದಂತೆ ಡೌನ್ವರ್ಡ್ ನಲ್ಲಿ ಶಾರ್ಪ್ ಆಗಿ ಕೊನೆಗೊಳ್ಳುವಂತಿರುವ ಮೂಗು ಇದ್ದಲ್ಲಿ , ಮೊಗದಲ್ಲಿ ಬೇರೇನೇ ಕೊರತೆಗಳಿದ್ದರೂ ಅದನ್ನು ಮರೆಮಾಚಿ ಮುಖದ ಆಕರ್ಷಣೆಯನ್ನು ಅದು ಹೆಚ್ಚಿಸಬಲ್ಲದು. ಮುಖ ಲಕ್ಷಣಕ್ಕೆ ಕೇವಲ ಮೂಗಷ್ಟೇ ಅಲ್ಲ, ಮೂಗಿನ ಎರಡು ಹೊರಳೆಗಳು ಸಹಾ ಅಷ್ಟೇ ಮುಖ್ಯವಿದ್ದು, ಅವುಗಳ ಕಟಿಂಗ್ ಸಹಾ ಭಿನ್ನವಾಗಿರುವುದನ್ನು ನೋಡಬಹುದು. ಅಂದರೆ ಒಬ್ಬೊಬ್ಬರಲ್ಲಿ ಚಿಕ್ಕದಾಗಿ, ದೊಡ್ಡದಾಗಿ, ಗುಂಡಗೆ ಅಥವಾ ಓವಲ್ ಶೇಪ್ ನಲ್ಲಿ ಇತ್ಯಾದಿ ವಿನ್ಯಾಸಗಳಲ್ಲಿ ಹೊರಳೆಗಳಿದ್ದು ಮೂಗಿಗೆ ಹಾಗೂ ಒಟ್ಟಾರೆ ಮುಖ ಲಕ್ಷಣಕ್ಕೆ ಅವು ಮೆರುಗು ಕೊಡುವುದಂತೂ ನಿಜ.
ಕೆಲವರಿಗೆ ಮಾತನಾಡುವಾಗ ಹಾಡುವಾಗ ಮೂಗಿನ ಹೊರಳೆಗಳು ಪೂರಾ ಓಪನ್ ಆಗಿ , ಮೂಗನ್ನೇ ಮರೆಮಾಚಿ ಎರಡು ರಂಧ್ರಗಳಂತೆಯೂ ತೋರುತ್ತವೆ. ಮತ್ತೇ ಕೆಲವರು ಬುಸುಗುಟ್ಟುವಾಗ ಇಲ್ಲವೇ ಕೋಪ ಮಾಡಿಕೊಂಡಾಗಲೂ ಮೂಗಿನ ಹೊರಳೆಗಳು ಲಾಸ್ಯವಾಡುತ್ತಲಿರುತ್ತವೆ. ಮೂಗು ಗಾಳಿಪಟ ಆದರೆ ಈ ಹೊರಳೆಗಳು ಒಂಥರಾ ಬಾಲಂಗೋಚಿಯಂತೆ.!

ಉದ್ದ ಮೂಗಿರುವವರು, ಅಥವಾ ಮೂಗಿನ ತುದಿಯಲ್ಲಿ ಶಾರ್ಪ್ ನೆಸ್ ಉಳ್ಳವರು ತುಂಬಾ ಯಶಸ್ವಿ ವ್ಯಕ್ತಿಗಳು ಹಾಗೂ ಅದೃಷ್ಟವಂತರೆಂಬ ಮಾತೂ ಅಲ್ಲಲ್ಲಿ ಕೇಳಿದ್ದೇನೆ. ಇದಕ್ಕೆ ಉದಾಹರಣೆಗಾಗಿ ನಮ್ಮ ಡಾ. ರಾಜ್ ಕುಮಾರ್ , ಪುನೀತ್ ರಾಜ್ಕುಮಾರ್, ಶ್ರೀಮತಿ ಇಂದಿರಾಗಾಂಧಿ, ಅಮಿತಾಭ್ ಬಚ್ಚನ್, ವಿಷ್ಣುವರ್ಧನ್, ಎನ್.ಟಿ.ರಾಮಾರಾವ್, ಕಿಚ್ಚ ಸುದೀಪ, ಮುಂತಾದವರನ್ನು ನೋಡಿದರೆ, ನಟರಾದ ನಾಗಾರ್ಜುನ, ದ್ವಾರಕೀಶ್, ಓಂಪುರಿ ಯಂಥವರ ಮೂಗು ಉದ್ದವಾಗಿ ಲಕ್ಷಣವಾಗಿಲ್ಲದಿದ್ದರೂ ಯಶಸ್ವಿಯಾದವರೇ !
ಬಾಲಿವುಡ್ ನಟಿಯರಾದ ಐಶ್ವರ್ಯ ರೈ, ಕತ್ರೀನ ಕೈಫ಼್, ಅನುಷ್ಕಾ ಶೆಟ್ಟಿ,, ಜಯಪ್ರದಾ, ಮಾಧುರಿ ದೀಕ್ಷಿತ್ ಹಾಗೂ ನಮ್ಮವರೇ ಆದ ಭಾರತಿ ವಿಷ್ಣುವರ್ಧನ್ ಮುಂತಾದವರ ಸೌಂದರ್ಯಕ್ಕೆ ಅವರ ಮೂಗು ಲಕ್ಷಣವಾಗಿ ಸಾಥ್ ನೀಡಿದ್ದರೆ, ಶಿಲ್ಪಾ ಶೆಟ್ಟಿ, ಸೊಹಾಲಿ ಖಾನ್, ಕರಿಷ್ಮಾ ಕಪೂರ್, ಶ್ರೀದೇವಿ, ಪರಿಣಿತಿ ಚೋಪ್ರಾ, ಪ್ರಿಯಾಂಕ ಮುಂತಾದವರದ್ದು ಸ್ವಲ್ಪ ಮಟ್ಟಿಗೆ ಅದಕ್ಕೆ ತದ್ವಿರುದ್ಧವಾದ ಆರ್ಡಿನರಿ ಮೂಗು. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೋಟಿಗಟ್ಟಲೆ ದುಡ್ಡು ಸುರಿದು ಮೂಗನ್ನು ತಮಗೆ ಬೇಕಾದ ರೀತಿಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಆನಂತರ ಅವಲಕ್ಷಣ ಮಾಡಿಕೊಂಡ ನಟಿಯರೂ ಇದ್ದಾರೆ.
ಒಟ್ಟಾರೆ, ಈ ಮೂಗಿನ ವಿಷಯ ಸಾಮಾನ್ಯವಾದದ್ದಲ್ಲ. ಅದು ಮನುಷ್ಯನ ಉಸಿರಾಟದ, ವಾಸನೆ ಘ್ರಾಣಿಸುವ ಅಂಗ ಎಂಬ ಮೂಲಭೂತ ತಿಳಿವಳಿಕೆಗಿಂತ, ಮೂಗು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಗ ಎಂಬಲ್ಲಿಗೆ ಅದರ ವಿಷಯದ ಹರವು ವಿಸ್ತರಿಸಿದೆ.
ಅರೆ, ಮ್ಯಾಟರ್ರು ಎಲ್ಲಿಂದ ಎಲ್ಲಿಗೋ ಜಾರಿತಲ್ಲವೇ !
ಮತ್ತೊಬ್ಬರ ವಿಚಾರಕ್ಕೆ ಮೂಗು ತೂರಿಸುವ ವಾದಕ್ಕೆ ಬಂದರೆ , ” ಮೂಗು ಉದ್ದವಿದ್ದವರು ಮತ್ತೊಬ್ಬರ ವಿಚಾರಕ್ಕೆ ಮೂಗು ತೂರಿಸುತ್ತಾರೆ ಹಾಗೆ ಹೀಗೆ ಎಂಬುದು ಕೇವಲ ಒಬ್ಬರನ್ನು ತಿವಿಯಲು ಬಳಸುವ ಆಡುಮಾತುಗಳಷ್ಟೇ . ಮತ್ತೊಬ್ಬರ ವಿಷಯಕ್ಕೆ ಮೂಗು ತೂರಿಸುವವರ ವರ್ತನೆಗಳು ಮನುಷ್ಯನ ಗುಣ – ಸ್ವಭಾವಕ್ಕೆ ಡೈರೆಕ್ಟಾಗಿ ಲಿಂಕ್ ಆಗಿರುವುದರಿಂದ ಮೂಗಿನ ಗಾತ್ರಕ್ಕೂ ಅದಕ್ಕೂ ಸಂಬಂಧವಿರದು ಎಂಬುದು ನನ್ನ ಅನಿಸಿಕೆ !
ಇದು ಸಮರ್ಥನೆ ಅಲ್ಲ, ಸಂಶೋಧನೆ !!
** ಮರೆಯುವ ಮುನ್ನ **
ನೆನಪಿಡಿ , ದೇಹದ ಯಾವುದೇ ಅಂಗಾಂಗವಾಗಲೀ ಅದು ಮೂಗೋ, ಚರ್ಮದ ಬಣ್ಣವೋ, ಒರಿಜಿನಲ್ಲಾಗಿ ಸಹಜವಾಗಿದ್ದರೇನೇ ಚಂದ. ಸ್ವಾಭಾವಿಕವಾಗಿ ಜನ್ಮತಃ ಬಂದ ಶೇಪುಗಳನ್ನು ಪ್ರಕೃತಿಗೆ ವಿರುದ್ಧವಾಗಿ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಆ ಶೇಪುಗಳು ಏಪುಗಳಾಗಿಯೂ ಬದಲಾಗಬಹುದೆಂಬ ಸಣ್ಣ ಎಚ್ಚರಿಕೆಯಿದ್ದಲ್ಲಿ ಬೆಟರ್.
ಹಾಗೆಯೇ ಒಬ್ಬರ ಸಂಕಷ್ಟದಲ್ಲಿ ನಮ್ಮ ಮಿತಿಯೊಳಗೆ ಸಾಥ್ ಕೊಡುವುದು ತಪ್ಪಲ್ಲ. ಆದರೆ ಅವರು ಬಯಸದಿದ್ದರೂ ವಿನಾಕಾರಣ ಮತ್ತೊಬ್ಬರ ವಿಚಾರದಲ್ಲಿ ತಲೆಕೆಡಿಸಿಕೊಂಡು ಇಣುಕುವುದು ಅಥವಾ ಕೆಟ್ಟಕುತೂಹಲದಿಂದ ಮೂಗು ತೂರಿಸುವುದು ಎರಡೂ ಸರಿಯಲ್ಲ .
ಇಷ್ಟೆಲ್ಲಾ ಓದಿದ ಮೇಲೆ ಕನ್ನಡಿ ಮುಂದೆ ನಿಂತು ನಿಮ್ಮ ನಿಮ್ಮ ಮೂಗಿನ ವಿನ್ಯಾಸವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಲು ರೆಡಿನಾ..?
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
