ರಾಜಶೇಖರ ಮಠಪತಿ ರಾಗಂ ಅವರ ‘ಯೋಗಸ್ಥ’ ಕೃತಿಯ ಕುರಿತು ಶಿಕ್ಷಕಿ, ಲೇಖಕಿ ಅನುಸೂಯ ಯತೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ಈ ಕೃತಿ ಸಿದ್ದೇಶ್ವರ ಸ್ಚಾಮೀಜಿಗಳ ವ್ಯಕ್ತಿತ್ವ ಕುರಿತಾಗಿದ್ದು ಸಾಕಷ್ಟು ವಿಷಯಗಳನ್ನು ರಾಗಂ ಅವರು ಓದುಗರಿಗೆ ತಲುಪಿಸಿದ್ದಾರೆ, ತಪ್ಪದೆ ಮುಂದೆ ಓದಿ….
ಕೃತಿ : ಯೋಗಸ್ಥ
ಲೇಖಕರು : ರಾಜಶೇಖರ ಮಠಪತಿ ರಾಗಂ
ಪ್ರಕಾರ : ಸಿದ್ದೇಶ್ವರ ಸ್ಚಾಮೀಜಿಗಳ ವ್ಯಕ್ತಿತ್ವ ಕುರಿತಾದ ಕೃತಿ
ಪ್ರಕಾಶಕರು : ಪಿ.ಆರ್. ಪಬ್ಲಿಕೇಶನ್
ಬೆಲೆ : ೩೦೦.೦೦
1990 ರಲ್ಲಿ “ಅರ್ಪಣೆ” ಕವನ ಸಂಕಲನದ ಮೂಲಕ ವಿಧ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯಯಾನ ಆರಂಭಿಸಿ ಈಗ 102 ನೇ ಕೃತಿಯಾಗಿ ” ಯೋಗಸ್ಥ” ಕೃತಿಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ನಮ್ಮ ನಡುವಿನ ಲೇಖಕರೆಂದರೆ ರಾಗಂ . ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಸಿನಿಮಾ, ಸಂಶೋಧನೆ, ಅನುವಾದ ಸೇರಿದಂತೆ ವಿಭಿನ್ನ ಪ್ರಕಾರಗಳಲ್ಲಿ ಸಮಾನ ಹಿಡಿತ ಸಾಧಿಸಿರುವ ಬಹುಮುಖಿ ಪ್ರತಿಭೆ ರಾಜಶೇಖರ ಮಠಪತಿ. ಇವರು ಈ ನಾಡು ಕಂಡ ಪ್ರಬುದ್ದ ಲೇಖಕರಲ್ಲಿ ಒಬ್ಬರು. ಎಲೆಮರೆ ಕಾಯಂತೆ ಇದ್ದುಕೊಂಡು ನಿರಂತರ ಓದು, ಅಧ್ಯಯನ, ಅಧ್ಯಾಪನ ಮತ್ತು ಬರಹಗಳಲ್ಲಿ ತೊಡಗಿಸಿಕೊಂಡು ಅವಿರತ ಸಾಹಿತ್ಯ ಕೃಷಿ ಮಾಡುತ್ತಾ ಶತ ಕೃತಿಗಳ ಕತೃವಾದ ಅಕ್ಷರದೊಲವಿನ ಬರಹಗಾರರಿವರು.
ರಾಗಂ ಅವರ ಪ್ರಕಾರ “ಬರಹಗಾರ ಸದ್ದು ಮಾಡಬಾರದು.
ಅವರ ಬರಹಗಳು ಓದುಗ ವರ್ಗದ ನಡುವೆ ಸದ್ದು ಮಾಡಬೇಕು”.
ನಾನು 2023ರ ರಲ್ಲಿ ಇಡೀ ವರ್ಷ ರಾಗಂ ಅವರ ಬದುಕು, ಬರಹ ಕುರಿತಂತೆ ಸುದೀರ್ಘ ಅಧ್ಯಯನ ನಡೆಸಿ ರಾಗಂ ಸಾಹಿತ್ಯವನ್ನು ತಕ್ಕಮಟ್ಟಿಗೆ ದಕ್ಕಿಸಿಕೊಂಡಿರುವೆ ಎಂಬ ವಿಶ್ವಾಸ ನನ್ನದು.
ಇದೀಗ ಅವರ 102ನೇ ಕೃತಿಯಾಗಿ ಯೋಗಸ್ಥ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ರಾಗಂ ಅವರ ಬಹುತೇಕ ಕೃತಿಗಳ ಅಧ್ಯಯನ ಮಾಡಿರುವ ನನಗೆ ಯೋಗಸ್ಥ ಕೃತಿಯ ಬಗ್ಗೆ ತುಸು ಹೆಚ್ಚೇ ಕುತೂಹಲವಿತ್ತು. ಸಿದ್ದೇಶ್ವರ ಶ್ರೀಗಳ ಬಗ್ಗೆ ಬಹಳಷ್ಟು ಓದಿದ್ದೆ, ಕೇಳಿದ್ದೆ. ಈಗ ಇಡೀ ಕೃತಿ ಅವರನ್ನು ಕಟ್ಟಿಕೊಡುತ್ತದೆ ಎಂದಾಗ ನಿರೀಕ್ಷೆ ಮಾತ್ರ ಬಹುದೊಡ್ಡದೆ ಆಗಿತ್ತು. ಅದನ್ನರಸಿ ಕೃತಿಯ ಒಳಹೊಕ್ಕಾಗ ದ್ದಕ್ಕಿದ್ದು ಅಗಾಧ, ಅನುಪಮ, ಅಮೋಘ, ಅನನ್ಯ ಹಾಗೂ ಅವಿಸ್ಮರಣೆಯ ಅನುಭೂತಿ.
ಶ್ವೇತ ವಸ್ತ್ರಧಾರಿ, ಜೇಬು ಇಲ್ಲದ ಪಕೀರ, ಗುರು, ಶರಣ, ಪಂಥಾತೀತ ಸಂತ, ಅಂಕಣಕಾರರು, ಚಿಂತಕರು, ಲೇಖಕರು, ಪ್ರವಚನಕಾರರು ಆಗಿ ಬಸವಣ್ಣನವರ ಕಾಯಕಯೋಗದ ದಾರಿಯಲ್ಲಿ ಕ್ರಮಿಸಿದ ಶ್ರೀ ಸಿದ್ದೇಶ್ವರ ಶ್ರೀಗಳ ಕುರಿತಾದ ಕೃತಿಯೇ ರಾಗಂ ಅವರ “ಯೋಗಸ್ಥ”.
ಈ ಕೃತಿಯ ಮುಖಪುಟವು ವಿಶೇಷವಾಗಿದ್ದು ಪರಶಿವನನ್ನು, ಬುದ್ಧನನ್ನು ಸಿದ್ದೇಶ್ವರ ಶ್ರೀಗಳಲ್ಲಿ ರಾಗಂ ಅವರು ಕಾಣಬಯಸಿದ್ದಾರೆ. ಸರ್ವಧರ್ಮ ಸಮನ್ವಯದ ಬೀಡಾಗಿ, ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಜನ ಮನ್ನಣೆ ಪಡೆಯುತ್ತಾ, ಸಮಾಜದ ಒಳಿತಿಗಾಗಿ ಹೋರಾಡುತ್ತಿರುವ ಮಠಗಳಲ್ಲಿ ಗುಮ್ಮಟನಗರಿಯ “ಶ್ರೀ ಜ್ಞಾನ ಯೋಗಾಶ್ರಮ”ವು ಪ್ರಧಾನವಾಗಿದೆ. ಯಾವುದೇ ಆಡಂಬರಕ್ಕೆ ಜೋತು ಬೀಳದೆ ವೈಭವೋಪೇತ ಬದುಕಿನಿಂದ ವಿಮುಖರಾಗಿ ಸರಳ ಜೀವನ ನಡೆಸುತ್ತಾ, ಸಮಾಜದ ಜನಸಾಮಾನ್ಯರಲ್ಲಿ ತಾವು ಒಬ್ಬರಾಗಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ವ್ಯಕ್ತಿ ಶ್ರೀ ಸಿದ್ದೇಶ್ವರ ಶ್ರೀಗಳು.

ಅವರ ಸಂಪೂರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಕೃತಿಯೇ ಯೋಗಸ್ಥ :
ಈ ಯೋಗಸ್ಥ ಕೃತಿಯಲ್ಲಿ 30 ಅಧ್ಯಾಯಗಳಿದ್ದು ಪ್ರತಿಯೊಂದು ವಿಶಿಷ್ಟ ವಾದ ಹಾಗೂ ಅಗಾಧವಾದ ಒಳನೋಟಗಳನ್ನು ಗರ್ಭಿಕರಿಸಿಕೊಂಡ ಶೀರ್ಷಿಕೆಗಳಿಂದ ತುಂಬಿವೆ. ರಾಗಂ ಅವರ ಎದೆಯ ತುಂಬಾ ಸಿದ್ಧೇಶ್ವರರೆ ತುಂಬಿಕೊಂಡಿದ್ದಾರೆ. ಅವರ ಅಗಲಿಕೆ ನಂತರ ಮೌನಕ್ಕೆ ಶರಣಾಗಿದ್ದ ಇವರಿಂದ ಯೋಗಸ್ಥದಂತಹ ಕೃತಿ ರಚನೆಗೆ ಮೂಲ ಪ್ರೇರಣೆಯಾದವರು ಕೆ ಸಿ. ಶಿವಪ್ಪನವರು. “ಶ್ರೀಗಳ ಕುರಿತು ಆಗಬೇಕಾದ ಕೆಲಸ ತುಂಬಾ ಇದೆ. ಅವರ ಕಾಳಜಿಗಳನ್ನು, ಚಿಂತೆಗಳನ್ನು ಅರ್ಥ ಮಾಡಿಕೊಳ್ಳದ ನಾವು, ನಮ್ಮ ಆಚರಣೆಗಳು ಬರಿ ಉತ್ಸವಗಳಾಗುತ್ತವೆ. ಅವರು ಉತ್ಸವದವರಲ್ಲ, ಉತ್ಸಾಹದವರು. ಸದಾ ಏನಾದರೂ ಹೊಸದನ್ನು ಮಾಡುತ್ತಿರಬೇಕು ಎಂಬ ಹಂಬಲದವರು. ಹೀಗಾಗಿ ಅವರ ಎಲ್ಲಾ ಕಾಳಜಿಯನ್ನು, ನೆನಪುಗಳನ್ನು ಕ್ರೂಢೀಕರಿಸಿ ದಾಖಲಿಸಿ, ಸಾಧ್ಯವಾದಷ್ಟು ಚಾಲನೆಗೆ ತರುವ ಕಾರ್ಯವನ್ನು ನೀವು ಮಾಡಬೇಕು. ಅದು ನಿಮ್ಮಿಂದ ಸಾಧ್ಯ” ಎಂದಾಗಲೇ ಯೋಗಸ್ಥ ಕೃತಿ ರಚನೆಯ ಬೀಜ ರಾಗಂ ಅವರೊಳಗೆ ಮೊಳಕೆ ಒಡೆಯಿತು.
ಆ ಕೃತಿಯಲ್ಲಿ ಬಾಲ್ಯದಿಂದಲೂ ಕಂಡಿದ್ದ ಗುರುಗಳನ್ನು ಅಕ್ಷರ ರೂಪಕ್ಕೆ ಇಳಿಸಿದರು. ಇದುವರೆಗೂ ರಾಗಂ ಅವರ ಎದೆಯೊಳಗೆ ಚೈತನ್ಯ ಶಕ್ತಿಯಾಗಿ ಉಳಿದಿದ್ದ ಶ್ರೀ ಗಳನ್ನು ಅವರು ಯೋಗಸ್ಥದ ಮೂಲಕ ಓದುಗರೆದೆಗೆ ನಾಟಿ ಮಾಡಿದರು.
ಶ್ರೀಗಳ ವ್ಯಕ್ತಿತ್ವವನ್ನು ಪ್ರತಿ ಲೇಖನದಲ್ಲೂ ರಾಗಂ ಅವರು ಸಾಣೆ ಹಿಡಿಯುತ್ತ ಸಾಗಿದ್ದಾರೆ. ಪದ್ಯಲಯದಲ್ಲಿ ಇರುವ ಇವರ ಗದ್ಯ ಬರಹಕ್ಕೆ ಮನ ಸೋಲದವರಾರು? ಈ ಕೃತಿ ಶ್ರೀಗಳ ಜೊತೆಗೆ ರಾಗಂ ಒಳಗಿನ ಅಪಾರವಾದ ಜ್ಞಾನವನ್ನು ಓದುಗರ ಮುಂದಿಡುತ್ತದೆ. ಇಲ್ಲಿ ಲೇಖಕರು ಗುರುವನ್ನು, ಸಮಾಜವನ್ನು ನೋಡುವ ಪರಿಯೇ ವಿಭಿನ್ನ. ಉತ್ತರ ಕರ್ನಾಟಕದ ಅದರಲ್ಲೂ ವಿಜಯಪುರ, ಚಡಚಣದ ಸಾರಸ್ವತ ಲೋಕವನ್ನು, ಸಾಂಸ್ಕೃತಿಕ ಜಗತ್ತನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಬಂದು ಹೋಗುವ ಸಾಹಿತಿಗಳು ಅನೇಕ. ಈ ಕೃತಿಯು ಮೌಢ್ಯತೆ ಹಾಗೂ ಅಂಧಾನುಕರಣೆಯ ಸಂಪುಟವಲ್ಲ. ಸಿದ್ದೇಶ್ವರ ಶ್ರೀಗಳೊಂದಿಗೆ ರಾಗಂ ಅವರು ನಡೆಸಿದ ಸಮಾಜಮುಖಿ ಸಂವಾದಗಳು.
ಸಿದ್ದೇಶ್ವರ ಶ್ರೀಗಳು ಗುರುವಾಗಿ ರಾಗಂ ಅವರನ್ನು ಬಹುವಾಗಿ ಕಾಡಿದ್ದಾರೆ. ಗುರುವಿನ ಬಗ್ಗೆ ಇವರಿಗೆ ಅಪಾರ ಅಭಿಮಾನ. ಗುರು ಶಿಷ್ಯರ ಸಂಬಂಧವನ್ನು ಅಲೆಕ್ಸಾಂಡರ್ ಮತ್ತು ಅರಿಸ್ಟಾಟಲ್ ನ ಮೂಲಕ ನಿರೂಪಿಸಿದ್ದಾರೆ.
“ಇಡೀ ಸಾಮ್ರಾಜ್ಯವನ್ನು ಕೊಟ್ಟ ತಂದೆಗಿಂತ, ನೀವು ನಿಮ್ಮ ಸಾಮಾನ್ಯನಾದ ಗುರು ಅರಿಸ್ಟಾಟಲ್ ಕುರಿತು ಇಷ್ಟೊಂದು ಪೂಜ್ಯತೆ ಇಟ್ಟುಕೊಂಡಿದ್ದೀರಲ್ಲ ಯಾಕೆ? ಎಂದು ಕೇಳಿದರಂತೆ. ಅದಕ್ಕೆ ಅಲೆಕ್ಸಾಂಡರ್ ಕೊಡುವ ಉತ್ತರ ಇಲ್ಲಿ ಮನನೀಯವಾಗಿದೆ. ಆ ಎರಡು ಕಾರಣಗಳೆಂದರೆ ಮೊದಲನೆಯದು ತಂದೆಯಿಂದ ನಾನು ದೇಹವನ್ನು ಪಡೆದೆ ಆದರೆ ಅದು ನಾಶವಾಗುವಂತಹದ್ದು. ಅರಿಸ್ಟಾಟಲ್ ಗುರುವಿನಿಂದ ನಾನು ಅಮರ ಜೀವನವನ್ನು ಪಡೆದೆ. ನನ್ನ ತಂದೆ ಆಕಾಶದಿಂದ ಭೂ ಮಂಡಲಕ್ಕೆ ನನ್ನನ್ನು ತಂದಿಟ್ಟ. ಆದರೆ ನನ್ನ ಗುರು ನನ್ನನ್ನು ಭೂಮಿಯಿಂದ ಆಕಾಶದ ಎತ್ತರಕ್ಕೆ ಏರಿಸಿಬಿಟ್ಟ. ಯಾರಿಗೆ ಹೆಚ್ಚು ಪೂಜ್ಯ ಸ್ಥಾನವಿರಬೇಕು ಈಗ ನೀನೆ ಹೇಳು ಇದು ಅಲೆಕ್ಸಾಂಡರ್ ತನ್ನ ಗುರುವನ್ನು ಕುರಿತು ಹೇಳಿದರಂತೆ. ದುಷ್ಟಾಂತವಾದರೂ ಪ್ರಪಂಚದ ಎಲ್ಲಾ ಸದ್ಗುರುಗಳಿಗೆ ಅನ್ವಯವಾಗುವ ಮಾತೇ ಆಗಿದೆ. ಆ ಮೂಲಕ ಗುರು ಮಹಿಮೆಯನ್ನು ಜಗಕ್ಕೆ ಸಾರಿದ್ದಾರೆ.
“ಸಿದ್ದೇಶ್ವರ ಶ್ರೀಗಳು ಸರಳರೇಖೆ. ಅವರು ನೇರ ನೇರವಾಗಿ ಮತ್ತು ಎತ್ತರವಾಗಿ ಬೆಳೆದವರು. ವಕ್ರರೇಖೆಯಂತೆ ಅತ್ತ ಇತ್ತ ಮತ್ತು ಅಲ್ಲಿ ಇಲ್ಲಿ ತಮ್ಮನ್ನು ವಿಸ್ತರಿಸಿಕೊಳ್ಳಲಿಲ್ಲ ” ಎಂದು ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ತಮ್ಮ ಮುನ್ನುಡಿಯಲ್ಲಿನ “ಗಗನಂ ಗಗನಾಕಾರಂ” ಲೇಖನದಲ್ಲಿ ಬರೆಯುತ್ತಾರೆ. ಹೌದು ಸಿದ್ದೇಶ್ವರ ಶ್ರೀಗಳ ಬದುಕು, ಅವರ ಜೀವನ ಶೈಲಿ, ಸಾಧನೆಯ ಮಜಲುಗಳನ್ನು, ಸಾರ್ವಜನಿಕ ಬದುಕು ಕಟ್ಟಿಕೊಳ್ಳಲು ಸಾಗಿದ ದಾರಿ ಎಂತಹುದು ಎಂಬುದನ್ನ ಪರಿಚಯಿಸುತ್ತದೆ. ಶ್ರೀಗಳಿಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಅಥವಾ ರಾಜಕಾರಣದ ನೆರಳಿನಿಂದ ದೂರ ಉಳಿದು ಸಮಾಜ ಸೇವೆ ಮಾಡಿದ್ದು ಶ್ಲಾಘನೀಯವಾದದ್ದು.
ಸಿದ್ದೇಶ್ವರ ಶ್ರೀಗಳ ಒಡನಾಟದಲ್ಲಿದ್ದು ಗುರುಗಳ ಬಗ್ಗೆ ಹತ್ತು ಹಲವು ವಿಚಾರಗಳನ್ನ ಸ್ವಾನುಭವದಿಂದ ದಕ್ಕಿಸಿಕೊಂಡಿದ್ದ ರಾಗಂ ಅವರ ಈ ಕೃತಿ ಶ್ರೀಗಳ ಬಗ್ಗೆ ಅತಿ ಹೆಚ್ಚು ಅರಿಯಲು ಹಾಗೂ ನೈಜ ಸಂಗತಿಗಳ ಮೇಲೆ ಬೆಳಕು ಚೆಲ್ಲಲು ಪ್ರಧಾನ ಭೂಮಿಕೆಯಾಗುತ್ತದೆ.
ಕಾವಿ, ರುದ್ರಾಕ್ಷಿ, ಮರದ ಪಾದುಕೆಗಳಿಂದ ದೂರ ಉಳಿದಿದ್ದ ಶ್ರೀಗಳು ಸತ್ಯ, ಶಾಂತಿ, ಪ್ರಾಮಾಣಿಕತೆ, ಶುದ್ಧತೆಯ ಪ್ರತೀಕವಾದ ಬಿಳಿ ವಸ್ತ್ರ ಧರಿಸುತ್ತಿದ್ದರು. ಇದನ್ನು ಅತ್ಯಂತ ಹೆಮ್ಮೆಯಿಂದ ಅಷ್ಟೇ ಗೌರವ ಮತ್ತು ಅಭಿಮಾನದಿಂದ ರಾಗಂ ಅವರು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ಜೀವ ಪರ ಕಾಳಜಿಯುಳ್ಳ ಒಬ್ಬ ಸಮಾಜಮುಖಿ ಧೀಮಂತ ವ್ಯಕ್ತಿತ್ವ ಹೊಂದಿರುವ ಇವರು ಸಾಮಾಜಿಕ ಜನಾಂದೋಲನ ರೂಪಿಸುವ ಮಹದಾಶಯ ಹೊಂದಿದ್ದರು. ತಮ್ಮ ನಡೆ, ನುಡಿ, ಆಚಾರ, ವಿಚಾರ, ಪ್ರೀತಿ, ನೀತಿಗಳಲ್ಲಿ ತಮ್ಮ ಸಂದೇಶಗಳನ್ನ ಪ್ರವಚನಗಳನ್ನ ಪಾಲಿಸುತ್ತಿದ್ದರು. ‘ಹೇಳಿದಂತೆ ಬದುಕುತ್ತಿದ್ದವರು. ಬದುಕಿದಂತೆ ಹೇಳುತ್ತಿದ್ದವರು. ತಮ್ಮ ನಡೆ ನುಡಿಗಳ ನಡುವೆ ಅಂತರ ಉಂಟಾಗದಂತೆ ಬದುಕಿದವರು’. ಇಂದು ಸಂತರ ವೇಷದಲ್ಲಿ ಬದುಕುವ ಅನೇಕ ಮುಖವಾಡಿಗಳ ನಡುವೆ ಇವರು ನಕ್ಷತ್ರದಂತೆ ಮಿನುಗುತ್ತಾರೆ.
ನಮ್ಮ ದಕ್ಷಿಣದಲ್ಲಿ ತುಮಕೂರಿನ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳ ಬದುಕು ನಮಗೆಲ್ಲ ಮಾದರಿಯಾಗಿದೆ. ಅಂತೆಯೇ ಉತ್ತರ ಕರ್ನಾಟಕ ಭಾಗದ ಜನರು ಎಂದು ಮರೆಯದ,
ಮರೆಯಲಾಗದ ವ್ಯಕ್ತಿತ್ವ ಎಂದರೆ ಅದು ಶ್ರೀ ಸಿದ್ದೇಶ್ವರ ಶ್ರೀಗಳು. ಇವರ ಮುಖಭಾವ ನೋಡಿದವರಿಗೆ ಇವರಲ್ಲೊಂದು ಮುಗ್ಧ ಮನಸ್ಸಿನ ಮಗು ಕಾಣುತ್ತದೆ. ಪ್ರೀತಿ, ವಾತ್ಸಲ್ಯ, ಮಮತೆ, ಅಂತಃಕರಣ ತುಂಬಿದ ತಾಯಿಯು ಕಾಣುತ್ತಾಳೆ. ಕೋಪವೆಂಬುದು ಇವರಿಂದ ಬಹು ದೂರ ಎನ್ನುವ ರಾಗಂ ಅವರು ಕೋಪ ಬಂದಾಗ ಶ್ರೀಗಳು ಮೌನಕ್ಕೆ ಶರಣಾಗುತ್ತಿದ್ದರು ಎನ್ನುವ ಅಂಶಗಳನ್ನ ದಾಖಲಿಸುತ್ತ ಹೋಗಿದ್ದಾರೆ. ತತ್ ಕ್ಷಣದ ಕೋಪ ಅನರ್ಥಗಳಿಗೆ ದಾರಿಯಾಗುತ್ತದೆ. ಆ ಕ್ಷಣ ದಾಟಿದರೆ ನಮ್ಮ ಮನಸ್ಸು ವಿವೇಚನಾ ಪೂರ್ಣವಾಗುತ್ತದೆ. ಹಾಗಾಗಿ ಅಂತಹ ದಾರಿಯನ್ನ ಸಿದ್ದೇಶ್ವರರು ಆಯ್ದುಕೊಂಡಿದ್ದರು. ಯಾವುದೇ ಗಲಾಟೆ ಗದ್ದಲ ಲಾಭಿಗಳಿಲ್ಲದಂತೆ ಜ್ಞಾನ ಯೋಗಾಶ್ರಮ ನಡೆಸಿಕೊಂಡು ಹೋಗುವ ಶ್ರೀಗಳನ್ನರಸಿ ಬರುತ್ತಿದ್ದ ಭಕ್ತಸಾಗರ ಇವರ ಪ್ರೀತಿಯ ಸಮೃದ್ಧ ಮತ್ತು ಶ್ರೀಮಂತ ಆಸ್ತಿಯಾಗಿತ್ತು. ಅವರು ಬದುಕಿದ್ದು ನೊಂದವರು, ಶೋಷಿತರು, ದಿನದಲಿತರ ನಡುವೆ ತಮ್ಮನ್ನು ಕಂಡುಕೊಂಡವರು. ಇವರ ಆಧ್ಯಾತ್ಮ ಅನುಭವವೆಲ್ಲವೂ ಮೌಢ್ಯ ರಹಿತವಾಗಿದ್ದು ವೈಜ್ಞಾನಿಕ ಹಾಗೂ ವೈಚಾರಿಕತೆಯೆಡೆಗೆ ತೆರೆದುಕೊಂಡಿದ್ದವು. ಬಾಲ್ಯದಲ್ಲಿ ಸ್ಥಾವರವನ್ನು ಅಂಟಿಕೊಂಡಿದ್ದ ಶ್ರೀಗಳು ತಮ್ಮ ಗುರುಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಜಂಗಮದೆಡೆಗೆ ಹೊರಳಿದರು. ಇವರು “ದೇವರನ್ನ ಗುಡಿ ಗೋಪುರಗಳಲ್ಲಿ ಹುಡುಕಬೇಡಿ. ಅವನು ನಿಮ್ಮೆದುರಿಗೆ ಇದ್ದಾನೆ. ಕಣ್ತೆರೆದು ನೋಡಿ ಎಂದವರು. ಪ್ರಕೃತಿಯೇ ದೇವರು, ಸೂರ್ಯೋದಯ, ಸೂರ್ಯಾಸ್ತ, ಹೂವು, ಗಿಡ, ಮರ, ಬಳ್ಳಿ, ಹರಿವ ನೀರು, ಬೀಸುವ ಗಾಳಿ, ಮುಗ್ಧ ಮಗುವಿನ ನಗುವಿನಲ್ಲಿ ದೇವರನ್ನು ಕಂಡವರು. ತನ್ನ ಭಕ್ತರಿಗೂ ಅದನ್ನೇ ಉಪದೇಶಿಸಿದವರು. ಸಿದ್ದೇಶ್ವರ ಶ್ರೀಗಳ ಆಧ್ಯಾತಿಕ ಜ್ಞಾನವನ್ನು ಸಾಣೆ ಹಿಡಿಯುವಲ್ಲಿ ಅವರ ಗುರುಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಪಾತ್ರ ಬಹುದೊಡ್ಡದು. ಇದನ್ನು ರಾಗಂ ಅವರು ಕೃತಿಯ ಆದಿಯಿಂದ ಮುಕ್ತಾಯದವರೆಗೂ ಹತ್ತಾರು ಘಟನೆಗಳು ಮತ್ತು ನಿದರ್ಶನಗಳ ಮೂಲಕ ನಿರೂಪಿಸಿದ್ದಾರೆ.
ಇಡೀ ಸಂಕಲನದಲ್ಲಿ ನನಗೆ ಆಧ್ಯಾತ್ಮಕಿಂತ ಗುರು ಹೆಚ್ಚು ಲಭ್ಯವಾದರು. ಶಿಕ್ಷಕಿಯಾದ ನನಗೆ ಈ ಕೃತಿ ಗುರು ಮಹಿಮೆಯನ್ನ ಗುರುತರವಾಗಿ ಪರಿಚಯಿಸಿತು. ನನಗಿದ್ದ ಬಹುತೇಕ ನಿರೀಕ್ಷೆಗಳು ಇಲ್ಲಿ ನನಗೆ ಪ್ರಾಪ್ತವಾದವು. ರಾಗಂ ಅವರ ಗುರುಗಳಾಗಿ ಸಿದ್ದೇಶ್ವರರು, ಶ್ರೀ ಸಿದ್ದೇಶ್ವರರ ಗುರುಗಳಾಗಿ ಎಂ.ಆರ್. ಜಹಾಂಗೀರದಾರು, ಆಧ್ಯಾತ್ಮಿಕ ಗುರು ಆಗಿ ಮಲ್ಲಿಕಾರ್ಜುನ ಸ್ವಾಮಿಗಳು ಇವರೆಲ್ಲರ ಧ್ಯೇಯ ಒಂದೇ ಸಮಾಜದ ಜನರ ಬದುಕು ಹಸನಾಗಿಸುವುದು. ತನ್ನ ಶಿಷ್ಯರ ಏಳ್ಗೆಯನ್ನು ನೋಡುವುದು. ಹಾಗೆ ನೋಡಿದಾಗ ರಾಗಂ ಅವರು ಸಿದ್ದೇಶ್ವರ ಶ್ರೀಗಳು ಮತ್ತು ಎಮ್ ಆರ್ ಜಿ ಅವರ ಆಪ್ತ ಒಡನಾಟ, ಪರಸ್ಪರ ಸಮಾಲೋಚನೆ, ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನ ಇವರ ಮಾತುಗಳಲ್ಲಿ ವ್ಯಕ್ತವಾಗಿದೆ.
“ಸಂತೆಯಿಂದ ಸಂತ ನೆಡೆಗೆ” ಎಂಬ ಟ್ಯಾಗ್ ಲೈನ್ ಬಹಳಷ್ಟು ಕುತೂಹಲ ಮೂಡಿಸಿತು. ಇದು ಎರಡು ಆಯಾಮಗಳಲ್ಲಿ ಇಲ್ಲಿ ಬಿತ್ತರಗೊಂಡಿದೆ. “ಬದುಕಿನ ಸಂತೆಯಿಂದ ಆಧ್ಯಾತ್ಮಿಕರಾದ ಸಂತನೆಡೆಗೆ ನಡೆಯುವುದು” ಅಂದರೆ ಆಲಯದಿಂದ ಬಯಲಿನೆಡೆಗೆ ಸಾಗುವುದು ಎಂದು ಕೂಡ ಅರ್ಥೈಸಬಹುದು. ಆದರೆ ಇಲ್ಲಿ ರಾಗಂ ಅವರು ‘ಸಂತೆ ಶಾಲೆ’ ಯಿಂದ ಸಿದ್ದೇಶ್ವರರು ಓದಿದ ಶಾಲೆಗಳನ್ನ ಮುಖಾಮುಖಿಯಾಗಿದ್ದಾರೆ. ಇಡೀ ಸಂಕಲನದಲ್ಲಿ ನನ್ನನ್ನು ಬಹುವಾಗಿ ಸೆಳೆದಿದ್ದು ‘ಹಳ್ಳ ದಾಟುವ ಹೊತ್ತು’ ಲೇಖನ. ಈ ಹಳ್ಳವು ಲೇಖಕರು ಓದುತ್ತಿದ್ದ ಸಂತೆಶಾಲೆ ಮತ್ತು ಸಿದ್ದೇಶ್ವರರು ಓದುತ್ತಿದ್ದ ಸಂಗಮೇಶ್ವರ ಹೈಸ್ಕೂಲ್ ಗಳ ನಡುವೆ ಹರಿಯುತ್ತದೆ. ರಾಗಂ ಅವರು ಓದುತ್ತಿದ್ದ ಈ ಶಾಲೆ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಗುರುಗಳು ಓದುತ್ತಿದ್ದ ಸಂಗಮೇಶ್ವರ ಹೈಸ್ಕೂಲ್ ಶಾಲೆ.

ಇಲ್ಲಿನ ಗುರುಗಳ ವೃತ್ತಿ ನಿಷ್ಠೆಗೆ ಬೆಲೆ ಕಟ್ಟಲಾಗದು. ಹಾಗೂ ತನ್ನ ತರಗತಿಯಿಂದ ಮುಂದಿನ ತರಗತಿಗೆ ಸಾಗಿ ಹಾಕೋಣ ಮುಂದಿನದನ್ನ ಅವರೇ ಕಲಿಸಿಕೊಳ್ಳಲಿ ಎನ್ನುವ ಮನಸ್ಥಿತಿಯಿಂದ ಹೊರಗೆ ಬಂದು ತಮ್ಮ ಪ್ರಾಮಾಣಿಕತೆ ಹಾಗೂ ವೃತ್ತಿಬದ್ಧತೆಯಿಂದ ಶೈಕ್ಷಣಿಕ ಸೇವೆ ಮಾಡುತ್ತಾ ಮುಂದಿನ ಶಾಲೆಯವರು ಅಭಿಮಾನಿಸುವಂತಹ ಶಿಷ್ಯರನ್ನ ತಯಾರಿಸುವ ಶಿಕ್ಷಕರ ಬಗ್ಗೆ ಓದುವಾಗ ಗೌರವ ಭಾವ ಆವರಿಸಿಕೊಳ್ಳುತ್ತದೆ. ಶಿಕ್ಷಕರು ತನ್ನ ವಿದ್ಯಾರ್ಥಿಗಳೊಂದಿಗೆ ಇಷ್ಟೆಲ್ಲಾ ಸಲುಗೆಯಿಂದ ಇರುತ್ತಾರೆಂಬದು ಹರ್ಷದ ಸಂಗತಿ. ಗುರು ಶಿಷ್ಯರ ನಡುವೆ ಇರುವ ಲಘು ಹಾಸ್ಯ ಸೊಗಸಾಗಿ ಚಿತ್ರಿತವಾಗಿದೆ. ಬಹಳ ಮುಖ್ಯವಾಗಿ ತನ್ನ ವಿದ್ಯಾರ್ಥಿಗಳೆಲ್ಲರೂ ಸಿದ್ದೇಶ್ವರ ಶ್ರೀಗಳಂತೆ ಬುದ್ಧಿವಂತರಾಗಿ ಮಾನವೀಯ ಅಂತಃಕರಣವನ್ನು ಹೊಂದಿ, ಸಮಾಜದ ನೋವುಗಳಿಗೆ ತುಡಿಯುವಂತೆ ಆಗಲಿ ಇವರಿಂದ ಮತ್ತಷ್ಟು ಜನರ ಕುಟುಂಬಗಳಲ್ಲಿ ಬೆಳಕು ಕಾಣಲಿ ಎಂದು ಬಯಸುತ್ತಿದ್ದ ಎಮ್. ಆರ್. ಜಿ ಅವರ ಹೃದಯ ವೈಶಾಲ್ಯತೆ ಶಿಕ್ಷಕ ವೃತ್ತಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ಅನೇಕ ಅಂಶಗಳನ್ನು ರಾಗಂ ಅವರು ತಮ್ಮ ಸರಾಗ ಹಾಗೂ ಮನೋಜ್ಞ ಬರವಣಿಗೆಯ ಮೂಲಕ ಚಿತ್ರಿಸುತ್ತಾ ಸಾಗಿದ್ದಾರೆ.
ರಾಗಂ ಮತ್ತು ಸಿದ್ದೇಶ್ವರ ಶ್ರೀಗಳ ಆತ್ಮೀಯ ಒಡನಾಟ, ದಾರ್ಶನಿಕತೆಯ ದರ್ಶನ, ಆಧ್ಯಾತ್ಮಿಕ ಚಿಂತನೆಗಳು, ತಾತ್ವಿಕತೆ, ಜಾಗತಿಕ ಸಾಹಿತ್ಯ, ಗುರು ಭಕ್ತಿ, ಅಂಬೇಡ್ಕರ್ ವಿಚಾರಧಾರೆಗಳು, ಬುದ್ಧನ ಬೆಳದಿಂಗಳು, ಸಮುದಾಯದ ಬಗ್ಗೆ ಶಿಷ್ಯಂದಿರ ಬಗ್ಗೆ ಗುರುಗಳ ಪ್ರೀತಿ ಕಾಳಜಿ ಹೆಮ್ಮೆಯ ಭಾವ, ರಾಗಂ ಬಾಲ್ಯದ ಅನುಭವ ಇವೆಲ್ಲವೂ ಯೋಗಸ್ಥ ಕೃತಿಯ ಜೀವದ್ರವ್ಯಗಳಾಗಿವೆ. ತಮ್ಮ ಪ್ರಭುದ್ಧ ಪ್ರವಚನಗಳ ಮೂಲಕವೇ ಜನ ಮಾನಸದಲ್ಲಿ ಅವಿಸ್ಮರಣೀಯವಾಗಿ ಉಳಿದಿರುವ ಶ್ರೀಗಳ ಪ್ರವಚನ ಕೇಳಲು ಜನ ದಂಡಿ ದಂಡಿಯಾಗಿ ಬಂದು ಸೇರುತ್ತಿದ್ದರು. ಮಹಿಳೆಯರು ಮಕ್ಕಳು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಇವರ ಪ್ರವಚನ ಆಲಿಸುತ್ತಿದ್ದರು ಎಂಬ ವಿಚಾರಗಳನ್ನು ಓದಿದಾಗ ಶ್ರೀಗಳ ಜ್ಞಾನವನ್ನು ಅಳೆಯಲು ಸಾಧ್ಯವಿಲ್ಲ. ಆದರೇ ಅವರು ಕೇವಲ ಪ್ರವಚನಕಾರರು ಮಾತ್ರವಲ್ಲ. ಅವರು ಸಾಹಿತ್ಯ ಪ್ರೇಮಿ. ಹತ್ತಾರು ಪುಸ್ತಕಗಳನ್ನು ಬರೆದವರು. ನೂರಾರು ಕೃತಿಗಳನ್ನು ಓದಿ ತನ್ನ ಶಿಷ್ಯರಿಗೆ ಅರ್ಥೈಸಿದವರು. ತನ್ನೆಲ್ಲ ಶಿಷ್ಯರನ್ನು ಓದಲು ಪ್ರೇರೆಪಿಸಿದವರು. ಇವರ ಈ ಪ್ರೋತ್ಸಾಹವೇ ರಾಗಂ ಅವರಿಗೆ ಅನೇಕ ಪಾಶ್ಚಾತ್ಯ ಸಾಹಿತಿಗಳನ್ನು ಕನ್ನಡಕ್ಕೆ ತರಲು ಸಾಧ್ಯವಾಯಿತು.
ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಭಾವ ರಾಗಂ ಅವರ ಮೇಲೆ ಅದೆಷ್ಟು ಇತ್ತು ಎಂದರೆ ಅವರ ಭಾಷಣವನ್ನು ಯಥಾವತ್ತಾಗಿ ಅನುಕರಿಸುವ ಮೂಲಕ ರಾಗಂ ಅವರು ರೆಕಾರ್ಡ್ ಮಾಡಿಕೊಂಡು ಕಾರ್ಯಕ್ರಮ ಒಂದರಲ್ಲಿ ಬಿತ್ತರಪಡಿಸಿದರು ಹಾಗೂ ತನ್ನ ತಂದೆ ಮತ್ತು ಗುರುಗಳಾದ ಎಮ್. ಆರ್. ಜಿ ಯವರಿಗೂ ಅದನ್ನ ಕೇಳಿಸಿದರು. ಆಗ ಅವರಿಂದಲೂ ಇದು ಸಿದ್ದೇಶ್ವರ ಶ್ರೀಗಳ ದನಿಯಲ್ಲ ರಾಗಂ ಅವರ ಅನುಕರಣೆ ಎಂದು ಗುರುತಿಸಲು ಸಾಧ್ಯವಾಗಲಿಲ್ಲವಂತೆ. ಅವರ ಈ ಮಾತನ್ನು ಅವರ ಈಗಿನ ವಿದ್ವತ್ಪೂರ್ಣ ಭಾಷಣಗಳೇ ಸಾಕ್ಷಿಕರಿಸುತ್ತವೆ. ಮಗನ ಮೇಲೆ ತಂದೆಯ ಪ್ರೀತಿ, ತನ್ನ ಗುರುಗಳ ಮೇಲಿನ ಅಭಿಮಾನ ರಾಗಂ ಅವರಿಗೆ ಶ್ರೀರಕ್ಷೆಯಾಗಿ ಸಾಹಿತ್ಯಿಕವಾಗಿ ಮುನ್ನಡೆಸುತ್ತಿದೆ.
ಶ್ರೀ ಸಿದ್ದೇಶ್ವರ ಶ್ರೀಗಳು ಮತ್ತು ಅವರ ಗುರುಗಳಾದ ಎಮ್ ಆರ್ ಜಿ ಅವರ ಒಡನಾಟ ರಾಗಂ ಅವರಿಗೆ ಲಬಿಸಿದ್ದು ವಿಸ್ಮಯದ ಕಥೆ. ಬಂದೂಕಿನಿಂದ ಬದುಕಿನೆಡೆಗೆ ಲೇಖನವು ರಾಗಂ ಅವರಿಗೆ ಶ್ರೀಗಳ ಆಪ್ತತೆ ದೊರಕಲು ಕಾರಣವಾದ ಸಂದರ್ಭವನ್ನು ನಿರೂಪಿಸಿದ್ದಾರೆ. ರಾಗಂ ಅವರ ತಂದೆ. ಗಂಗಯ್ಯ ಮಠಪತಿ ಅವರ ಉಪನ್ಯಾಸಕ ವೃತ್ತಿಗೆ ಸಿದ್ದೇಶ್ವರ ಶ್ರೀಗಳ ಸಹಕಾರ ದೊರೆತು ಕೌಟುಂಬಿಕವಾಗಿ ಶ್ರೀಗಳು ಇವರ ಕುಟುಂಬಕ್ಕೆ ಹತ್ತಿರವಾದರು. ರಾಗಂ ಅವರ ಅಪಾರ ಪ್ರತಿಭೆ, ಇಚ್ಛಾಶಕ್ತಿ, ಗುರುಭಕ್ತಿ, ಸಾಧಿಸುವ ಛಲಗಾರಿಕೆ, ಶ್ರೀಗಳ ಅರಿವಿಗೆ ಬಂದು ರಾಗಂ ಅವರನ್ನು ಸಾಹಿತ್ಯಿಕವಾಗಿ ಹುರಿದುಂಬಿಸಿದರು ಮಾತ್ರವಲ್ಲ ಅವರ ಪ್ರಥಮ ಕೃತಿ ಅರ್ಪಣೆಯನ್ನು ತಾವೇ ಬಿಡುಗಡೆ ಮಾಡಿ ಹಾರೈಸಿದರು. ಇದನ್ನ ರಾಗಂ ಅವರು ತಮ್ಮ ಅನೇಕ ಕೃತಿಗಳಲ್ಲಿ ದಾಖಲಿಸಿದ್ದಾರೆ.
ಇದೆಲ್ಲಾ ಸಾಧ್ಯವಾಗಿದ್ದು ಸಿದ್ದೇಶ್ವರ ಶ್ರೀಗಳು ದೇಶಿಯ ಸಾಹಿತ್ಯ, ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿದ್ದರು. ಶ್ರೀಗಳ ಓದಿನ ವ್ಯಾಪ್ತಿ ವಿಶಾಲವಾದದ್ದು. ಅವರ ಜ್ಞಾನದ ಹರವು ಅಚ್ಚರಿ. ಬಾಲ್ಯದಲ್ಲಿ ಹೈಸ್ಕೂಲ್ ಓದುವಾಗಲೇ ತಮ್ಮ ಗುರುಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಭಾಷಣಗಳ ಸಂಪಾದನಾ ಕೃತಿ ಹೊರತಂದಿದ್ದರು. ಸದಾ ಕೈಯೆಲ್ಲೊಂದು ಪುಸ್ತಕ ಹಿಡಿಯುವುದು ಇವರ ಮೆಚ್ಚಿನ ಕೆಲಸವಾಗಿತ್ತು.
ಸಿದ್ಧೇಶ್ವರ ಶ್ರೀಗಳು ಜ್ಞಾನಯೋಗಾಶ್ರಮ ಮಠದಲ್ಲಿ ಇದ್ದರೂ ಇವರ ಹೆಸರಿನಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಾಗಲಿ, ಆಸ್ತಿಯಾಗಲಿ, ಮಠವಾಗಲಿ ಇರಲಿಲ್ಲ. ಈ ಆಶ್ರಮ ಕೇವಲ ಎರಡು ಎಕರೆ ಜಾಗ ಮತ್ತು ಸಾಧಾರಣ ಕಟ್ಟಡವನ್ನು ಮಾತ್ರ ಹೊಂದಿತ್ತು. ಸರ್ಕಾರದಿಂದ ಬಂದ ಅನುದಾನವನ್ನು ನಯವಾಗಿ ತಿರಸ್ಕರಿಸಿ ಜ್ಞಾನ ಪ್ರಸಾರಕ್ಕೆ ಹಣದ ಅಗತ್ಯವಿಲ್ಲ ಎಂಬ ಭಾವ ಹೊಂದಿದ್ದವರು. ರಾಗಂ ಅವರು ಎತ್ತಿದ ಈ ವಿಚಾರಗಳಿಂದ ಶ್ರೀಗಳ ವ್ಯಕ್ತಿತ್ವ ಮತ್ತಷ್ಟು ಮಗದಷ್ಟು ವಜ್ರದಂತೆ ಹೊಳೆಯುತ್ತದೆ.
ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆಯಲ್ಲಿ ಸೇರಿದ ಭಕ್ತ ಸಾಗರ ನೋಡಿದಾಗ ಒಬ್ಬ ವ್ಯಕ್ತಿಯ ಸಂಪಾದನೆ ಏನು ಎಂಬುದು ಅರಿವಾಗುತ್ತದೆ. ಅಂತಹ ಲಕ್ಷಾಂತರ ಜನರ ಪ್ರೀತಿ ವಿಶ್ವಾಸ ಅಭಿಮಾನ ಗಳಿಸಿದ್ದ ಶ್ರೀ ಸಿದ್ದೇಶ್ವರ ಶ್ರೀಗಳು ಬಹುಬೇಗ ಇಹಲೋಕ ತ್ಯಜಿಸಿದ್ದು ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಯೋಗಸ್ಥ ಕೃತಿಯಲ್ಲಿ ದಾಖಲಾದ ಮತ್ತೊಂದು ಅರ್ಥಪೂರ್ಣವಾದ ಮಾಹಿತಿ ಎಂದರೆ ಸಿದ್ದೇಶ್ವರ ಶ್ರೀಗಳ ಗುರುಗಳಾದ ಎಂ.ಆರ್. ಜಿ. ಅವರ ಜೀವಿತಾವಧಿಯ ಕೊನೆಯ ಕೃತಿಯ ಪ್ರಸ್ತಾಪ. “ಕ್ರಾಂತಿಯ ಕಿಡಿ ಡಾ. ಬಿ. ಆರ್ ಅಂಬೇಡ್ಕರ್. ಇದು ಎಂ ಆರ್ ಜಿ ಅವರಿಗೆ ಅಧ್ಯಯನ ಹಾಗೂ ಪುಸ್ತಕಗಳಿಂದ ದಕ್ಕಿದ ಮಾಹಿತಿಯಲ್ಲ. ಪೂನಾ ಸೇರಿದಂತೆ ಇತರ ಸ್ಥಳಗಳಲ್ಲಿ ಬಿ ಆರ್ ಅಂಬೇಡ್ಕರ್ ಅವರು ಮಾಡಿದ ಭಾಷಣಗಳನ್ನು ಖುದ್ದಾಗಿ ಜಹಾಗೀರದಾರ ಅವರು ಹಾಜರಿದ್ದು ಟಿಪ್ಪಣಿ ಮಾಡಿಕೊಂಡು ಅದರಲ್ಲಿ ಇರುವಂತಹ ಪ್ರಮುಖ ಅಂಶಗಳನ್ನು ಆಧರಿಸಿ ರಚಿಸಿದಂತಹ ಕೃತಿ ಇದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಅನೇಕ ಹೇಳಿಕೆಗಳು ಓದುಗರಿಗೆ ಅಂಬೇಡ್ಕರ್ ಅವರ ಸಮ ಸಮಾಜದ ನಿರ್ಮಾಣದ ಕನಸನ್ನು ಇಲ್ಲಿ ಇರತಕ್ಕಂತಹ ಅಂಶಗಳು ತೋರಿಸುತ್ತವೆ.

ಅಂಬೇಡ್ಕರ್ ತಮ್ಮ ಬದುಕಿ ನುದ್ದಕ್ಕೂ ಏನೆಲ್ಲಾ ಹೇಳುತ್ತಾ ಸಾಗಿದ್ದರು ಅದರ ಪ್ರಮುಖ ಅಂಶಗಳು ಎಂ.ಆರ್.ಜಿ ಅವರ ಶಿಷ್ಯಂದಿರಾದ ಸಿದ್ದೇಶ್ವರ ಶ್ರೀಗಳು ಮತ್ತು ರಾಗಂ ಅವರನ್ನು ಕಾಡದೇ ಬಿಟ್ಟಿಲ್ಲ. ಹಾಗಾಗಿ ಗುರುಗಳ ಈ ಕಾರ್ಯವನ್ನು ತುಂಬಾ ಅಭಿಮಾನದಿಂದ ಮೆಚ್ಚಿದವರು. ಅದರ ಪ್ರಭಾವ ಸಿದ್ದೇಶ್ವರ ಶ್ರೀಗಳು ಕೂಡ ಸಮಾನತೆಯ ನಾಡು ಕಟ್ಟ ಬಯಸಿದರು ಎಂದು ರಾಗಂ ಹರ್ಷಿಸುತ್ತಾರೆ.
ಅಂಬೇಡ್ಕರ್ ಅವರು ಯಾವ ಹಿಂಬಲ ಮುಂಬಲವಿಲ್ಲದೆ ದಲಿತರನ್ನು ಮೇಲೆತ್ತಲು ತಮ್ಮ ಜೀವನದ ಉದ್ದಕ್ಕೂ ಏಕಾಂಗಿಯಾಗಿ ಹೋರಾಡಿದರು. ಹೀಗೆ ಹೋರಾಡುತ್ತಲೇ ಹಿಮಾಲಯದಂತೆ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡರು ಎಂದು ಹೇಳುವ ರಾಗಂ ಅವರು ಅದರ ಪ್ರಭಾವ ಸಿದ್ದೇಶ್ವರ ಶ್ರೀಗಳ ಮೇಲು ಇತ್ತು. ಇದಕ್ಕೆ ಕಾರಣ ಅವರ ಗುರುಗಳಾದ ಎಮ್ ಆರ್ ಜಿ ಯವರು. ಅವರು ವೈಚಾರಿಕವಾಗಿದ್ದರು, ಪ್ರಗತಿಶೀಲರೂ ಆಗಿದ್ದರು. ಸಾಮಾಜಿಕತೆಯ ಮರು ಓದು ಅಗತ್ಯವೆಂದು ನಂಬಿದ್ದರು. ಇವೆಲ್ಲ ಸಿದ್ದೇಶ್ವರ ಶ್ರೀಗಳನ್ನು ಪಂಥಾತೀತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ನೆರವಾದವು ಎಂಬುದು ರಾಗಂ ಅವರ ಅಭಿಮತವಾಗಿದೆ .
ಈ ಕೃತಿಯಲ್ಲಿ ಶ್ರೀಗಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಿಸಿದ ಅನೇಕರನ್ನು ಇಲ್ಲಿ ಲೇಖಕರು ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಈಶ ಈಶ್ಯೋಪನಿಷತ್ ಕುರಿತು ಆಚಾರ್ಯ ರಜನೀಶರ ಹೇಳಿಕೆಗಳು ಈ ಕೃತಿಯಲ್ಲಿ ಗಮನ ಸೆಳೆಯುತ್ತವೆ. ಅವರು ‘ಈಶ’ನಲ್ಲಿ ಏಸುವನ್ನು ಕಾಣುತ್ತಾರೆ. ಶ್ರೀ ಸಿದ್ದೇಶ್ವರರು ಈಶ ಕುರಿತಾದ ಟೀಕಾ ಗ್ರಂಥವನ್ನು ರಚಿಸಿರುವ ವಿಚಾರದ ಪ್ರಸ್ತಾಪವಿದೆ. ಈಶ ಯೋಗ ಗಾಂಧೀಜಿ, ಸ್ವಾಮಿ ಆದಿ ದೇವಾನಂದ, ಸ್ವಾಮಿ ಪರಮಾನಂದ, ಶ್ರೀ ವಿನೋಬಾ ಭಾವೆ, ವಿವೇಕಾನಂದರು, ಚಿನ್ಮಯಾನಂದರ ವ್ಯಾಖ್ಯಾನ ನೀಡಿರುವುದನ್ನು ಇಲ್ಲಿ ಸ್ಮರಿಸುತ್ತಾರೆ. ಅನೇಕರು ಅದರ ಮೇಲೆ ರಚಿಸಿರುವ ಕೃತಿಗಳನ್ನು ಮೆಲುಕು ಹಾಕುತ್ತಾ ಸಿದ್ದೇಶ್ವರರು ಮತ್ತು ರಾಗಂ ಅವರ ಪ್ರಭಾವವನ್ನು ಅಪ್ಯಾಯಮಾನವಾಗಿ ಚಿತ್ರಿಸಿದ್ದಾರೆ.
ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮ ಗುರುಗಳಾದ ಸದಾಶಿವಯ್ಯನವರು “ಶಿವ ಶಿವ ಎಂದರೆ ಭಯವಿಲ್ಲ” ಎಂಬ ಭಕ್ತಿ ಗೀತೆ ಹೇಳಿಕೊಡುತ್ತಿದ್ದರು. ಅದರ ಅರ್ಥ ಅರಿಯದ ನಾನು ಈ ಹಾಡು ಹೇಳಿದ ನಂತರ ಶಿವಪ್ಪ ಶಿವಪ್ಪ ನಮ್ಮ ಮೇಷ್ಟ್ರು ಶಿವಶಿವ ಎಂದರೆ ಭಯವಿಲ್ಲ ಎಂದು ಹೇಳಿಕೊಡುತ್ತಾರೆ. ನಾನೇನು ಮಾಡಲಿ? ಮೇಷ್ಟ್ರು ಮಾತು ಕೇಳಬೇಕಲ್ಲ. ನನಗೆ ನಿಜವಾಗ್ಲೂ ನಿನ್ನ ಕಂಡರೆ ಭಯವಿದೆ. ನಿನಗೆ ಹೆದರದಿದ್ದರೆ ನಾವು ಬದುಕಲು ಆಗುವುದೇ? ಅಂತ ಮನಸ್ಸಿನಲ್ಲಿ ತಪ್ಪೊಪ್ಪಿಗೆ ಸಲ್ಲಿಸುತ್ತಿದ್ದೆ. ನನ್ನ ಮುಗ್ಧತೆ ಈಗಲೂ ನೆನಪಾದಾಗೆಲ್ಲ ಮೊಗದಲ್ಲೊಂದು ನಗುವನ್ನು ತರಿಸದೆ ಇರದು. ಇಂತಹುದೇ ಹಾಸ್ಯ ಪ್ರಸಂಗವೊಂದನ್ನು ರಾಗಂ ಅವರು ಇಲ್ಲಿ ದಾಖಲಿಸಿದ್ದಾರೆ. ಶ್ರೀಗಳ ಪ್ರವಚನ ಕೇಳಿದ ರಾಗಂ ಮತ್ತು ಅವರ ಗೆಳೆಯರ ಮನಸಿನಲ್ಲಿ ಘಟಿಸಿದ ವಿಚಾರ ವಿನೋದ ಸಂಗತಿಯನ್ನು ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಸಿದ್ದೇಶ್ವರ ಗುರುಗಳು ತಮ್ಮ ಪ್ರವಚನದಲ್ಲಿ ಹೇಳಿಕೊಡುತ್ತಿದ್ದ ಶಾಂತಿ ಮಂತ್ರದ ‘ಶಾಂತಿ’ ಯಾರಿರಬಹುದು? ಎಂದು ಗೆಳೆಯರೆಲ್ಲ ತಲೆ ಕೆಡಿಸಿಕೊಂಡಿರುವಾಗ ಇವರೊಬ್ಬ ಗೆಳೆಯ ಶಾಂತಿ ಬೇರೆ ಯಾರು ಅಲ್ಲ ಸಿನಿಮಾದಲ್ಲಿ ಬರುವ ಡಿಸ್ಕು ಶಾಂತಿ ಎಂದು ಎಲ್ಲರಿಗೂ ಅರ್ಥ ಮಾಡಿಸುವ ಪ್ರಸಂಗ ಸೊಗಸಾಗಿ ಮೂಡಿಬಂದಿದೆ.
ಸಿದ್ದೇಶ್ವರ ಶ್ರೀಗಳ ಇಹಲೋಕ ಯಾತ್ರೆ ಮುಗಿಸಿ ಹೊರಟಾಗಿನ ವಾತಾವರಣ ರಾಗಂ ಅವರೊಳಗಿನ ತೊಳಲಾಟ, ನೋವು, ಸಂಕಟ, ಆದ್ರತಾ ಭಾವದಲ್ಲಿ ಮೂಡಿಬಂದಿದೆ. ಗುರುವನ್ನು ಕಳೆದುಕೊಂಡ ಶಿಷ್ಯನ ಮೌನ ಅರ್ಥನಾದ ಸಂಕಲನದ ಪ್ರಾರಂಭದಲ್ಲೆ ಹೆಣೆದಿದ್ದಾರೆ. ಇದು ಓದುಗರನ್ನು ಕರುನಾಡಿನ ಭಕ್ತ ಸಾಗರದ ನೋವನ್ನು ಅಕ್ಷರ ರೂಪದಲ್ಲಿ ಬಿತ್ತರಿಸುತ್ತದೆ.
ಈ ಕೃತಿಯಲ್ಲಿ ಸಿದ್ದೇಶ್ವರರು ಮಾತ್ರ ನಮಗೆ ಲಭಿಸುವುದಿಲ್ಲ. ಜೊತೆಗೆ ಅವರು ಓದಿದ ದಾರ್ಶನಿಕರು, ತತ್ವಜ್ಞಾನಿಗಳು, ಸಾಹಿತಿಗಳು ಎದುರಾಗುತ್ತಾರೆ. ಅವರು ಬದುಕಿದ ರೀತಿ, ಸಮಾಜಕ್ಕಾಗಿ ಮಾಡಿದ ತ್ಯಾಗ, ಅವರ ತತ್ವ ಆದರ್ಶ ಆಶಯಗಳನ್ನು ತಿಳಿಸುತ್ತವೆ. ಎಕಾರ್ಟ್ ಕೂಡ ಈ ಕೃತಿಯ ಭಾಗವಾಗಿದ್ದಾರೆ ಎಂಬುದು ಗಮನಾರ್ಹ.
“ಇದರಲ್ಲಿ ಶಬ್ದಗಳಿಗೆ ಅಂಟಿಕೊಳ್ಳಬೇಡಿ ಎಂಬ ಸಂದೇಶವಿದೆ. ಜೊತೆಗೆ ಕುವೆಂಪು ಕೂಡ ಈ ಕೃತಿಯಲ್ಲಿ ಓದುಗರನ್ನು ಕಾಡುತ್ತಾರೆ. ಕುವೆಂಪು ಬರೀ ಕವಿಯಲ್ಲ. “ಕನ್ನಡದ ಪ್ರಜ್ಞೆ” ಎನ್ನುವ ಲೇಖಕರು ಅನಂತಾನಂತವನ್ನು ದರ್ಶಿಸಿ ಅಮರತ್ವ ದೆಡಗೆ ನಡೆದ ಸಾಧಕರು ಕುವೆಂಪು ಎನ್ನುತ್ತಾ ಅದೇ ದಾರಿಯಲ್ಲಿ ಸಿದ್ದೇಶ್ವರರು ಸಾಗುತ್ತಿದ್ದರು ಎಂಬುದು ರಾಗಂ ಮಾತು.
ತನ್ನ ಮೊದಲ ಕೃತಿ ಅರ್ಪಣೆಯನ್ನು ಶ್ರೀಗಳ ಕೈಯಲ್ಲಿ ಬಿಡುಗಡೆ ಮಾಡಿಸಿದ್ದರು. ಈದೀಗ ಅವರ ಸ್ನೇಹಿತರಾದ ಮಂಜುನಾಥ ಗುಳೇದಗುಡ್ಡ ಅವರ ‘ಮನದ ಮಂದಾರ’. ಕವನ ಸಂಕಲನ. ಇದು ಸಿದ್ದೇಶ್ವರ ಶ್ರೀಗಳ ಕೈಯಿಂದ ಬಿಡುಗಡೆಗೊಂಡ ಕೊನೆಯ ಪುಸ್ತಕ ಎನ್ನುವ ರಾಗಂ ಅವರು “ಆಯುಷ್ಯ ಕಳಚಿ ಹೋಗುವ ಬಟ್ಟೆ. ಮುಪ್ಪು ಮತ್ತು ಸಾವಿನಿಂದ ಮೀರಿ ಹೋಗುವ ಯಾವುದೇ ಸಾಧನೆಗಳಿಲ್ಲ. ಅದು ಕಳೆದು ಕಳೆದೆ ತೀರಿಸಬೇಕಾದ ಕರ್ಮ. ಅದು ಸಿದ್ದೇಶ್ವರ ಶ್ರೀಗಳಿಗೂ ಅನ್ವಯ” ಎನ್ನುವ ರಾಗಂ ಸಿದ್ದೇಶ್ವರ ಶ್ರೀಗಳನ್ನು ಆಪ್ತವಾಗಿ ಆವರಿಸಿಕೊಂಡಿದ್ದಾರೆ.
ಒಟ್ಟಾರೆ ಮುನ್ನುಡಿಕಾರರು ಹೇಳುವಂತೆ “ಸಿದ್ದೇಶ್ವರ ಶ್ರೀಗಳನ್ನು ವ್ಯಾಖ್ಯಾನಿಸುವುದು, ವಿಮರ್ಶಿಸುವುದು ಹಾಗೂ ಪದಗಳಲ್ಲಿ ಅವರನ್ನು ಬಂಧಿಸುವುದು ಕಷ್ಟ” ಇದೊಂದು ಸುದೀರ್ಘ ಪಯಣವೇ ಸರಿ. ಅಂತಹ ಪಯಣಿಗನಾಗಿ ರಾಗಂ ಅವರು ತಮ್ಮ ಬರಹ ಆರಂಭಿಸಿ ಸಿದ್ದೇಶ್ವರ ಶ್ರೀಗಳ ಜನನದಿಂದ ಬಾಲ್ಯ, ಶಿಕ್ಷಣ, ಸಾಹಿತ್ಯ, ಪ್ರವಚನಗಳು, ಅವರ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಸೇವೆ, ಮಾನವೀಯತೆ ಮುಂತಾದವುಗಳನ್ನು ತೆರೆದಿಡುತ್ತಲೇ ಅಸಾಮಾನ್ಯ ವ್ಯಕ್ತಿ ಒಬ್ಬರು ಸಾಮಾನ್ಯರಂತೆ ಆದರು. ಸಾಮಾನ್ಯ ಜನರ ಮಧ್ಯದಲ್ಲಿ ಬಾಳಿ ಸಾಮಾಜಿಕ ಉಪಯುಕ್ತ ವ್ಯಕ್ತಿಯಾಗಿ ಬೆಳೆದ ಮಹಾನ್ ಚೇತನ ಒಂದರ ದಿವ್ಯದರ್ಶನವನ್ನು ದರ್ಶಿಸಿದ್ದಾರೆ. ಇಲ್ಲಿ ರಾಗಂ ಅವರ ಅನುಭವಗಳು ಶ್ರೀಗಳ ಅನುಭಾವಗಳು ಅನುಸಂಧಾನಗೊಂಡಿವೆ. ಈ ಕೃತಿ ಓದಿ ಮುಗಿಸುವುದರೊಳಗೆ ನನಗೆ ಪ್ರೀತಿ ವಾತ್ಸಲ್ಯ ಮಮತೆ ಅಂತಃಕರಣ ತುಂಬಿದ ಗುರುಗಳೊಬ್ಬರು ದಕ್ಕಿದರು. ಅವರ ಮೌಲ್ಯಗಳನ್ನು, ವೈಚಾರಿಕ ಚಿಂತನೆಗಳನ್ನು, ವೈಜ್ಞಾನಿಕ ದೃಷ್ಟಿಕೋನವನ್ನು ಅಕ್ಷರ ರೂಪಕ್ಕೆ ಇಳಿಸಿದ ರಾಗಂ ಅವರಿಗೆ ಶರಣು ಏಳದಿರಲಾರೆ.
“ಪ್ರಶಸ್ತಿ ಬಹುಮಾನಗಳೇ ಉತ್ಸವಗಳಾಗುವ ಇಂದಿನ ದಿನಗಳಲ್ಲಿ ತಮ್ಮ ಪಾಲಿಗೆ ಧಕ್ಕಿದ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ “ಪದ್ಮಶ್ರೀ” ಪ್ರಶಸ್ತಿಯನ್ನು ನಿರಾಕರಿಸಿ “ನಾನು ಅದಕ್ಕೆ ಅರ್ಹನಲ್ಲ. ನನಗಿಂತ ಹೆಚ್ಚಾಗಿ ಸಾಧನೆ ಮಾಡಿರುವವರು ಸಾಕಷ್ಟು ಜನರು ಇದ್ದಾರೆ. ಅವರಿಗೆ ನೀಡಿ ನಮ್ಮ ಮೇಲಿನ ಪ್ರೀತಿ ಗೌರವಕ್ಕೆ ಧನ್ಯವಾದಗಳು” ಎಂದ ಧೀಮಂತ ನಡೆ ತೋರಿದವರು. “ಮೈಸೂರು ದಸರಾ ಉದ್ಘಾಟನೆ” ಮತ್ತು “ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್” ಗಳನ್ನು ಇದೇ ಕಾರಣದಿಂದ ಬೇಡವೆಂದವರು. ಇಂತಹ ನಿಸ್ವಾರ್ಥ ಜೀವಿ ಈ ಕರುನಾಡಿನ ಹೆಮ್ಮೆ.
- ಅನುಸೂಯ ಯತೀಶ್ – ಶಿಕ್ಷಕರು, ಲೇಖಕರು, ಬೆಂಗಳೂರು
