‘ಮಿಂಚು ಹುಳು’ಮಿಂಚಿನಂತೆ ಸದ್ದು ಮಾಡಲಿ

ಪುನೀತ್ ರಾಜಕುಮಾರ್ ಅವರು ಮುಹೂರ್ತದಲ್ಲಿ ಕ್ಲಾಪ್ ಮಾಡಿ ಶುಭ ಹಾರೈಸಿದ ಒಳ್ಳೆ ಕಥಾ ಹಂದರ ಇರುವ ಮಕ್ಕಳ ಚಿತ್ರ ‘ಮಿಂಚು ಹುಳು’ ಸಿನಿಮಾ ಅಕ್ಟೋಬರ್ ೪ ರಂದು ಎಲ್ಲ ಚಿತ್ರಮಂದಿರದಲ್ಲಿ ತೆರೆಕಾಣಲಿದೆ, ರಾಜಕುಮಾರ್ ಅವರ ಕುಡಿ ಪೃಥ್ವಿ ರಾಜ್ ಅಭಿನಯದ ಮೊದಲ ಚಿತ್ರ ಇದಾಗಿದ್ದು, ಸಿನಿಮಾವನ್ನು ತಪ್ಪದೆ ನೋಡಿ, ಚಿತ್ರತಂಡಕ್ಕೆ ಶುಭ ಹಾರೈಸಿ…

ಲಾಂಛನ: ಭೂನಿ ಪಿಕ್ಚರ್ಸ್
ನಿರ್ಮಾಪಕರು:ರಾಜಗೋಪಾಲ್ ದೊಡ್ಡಹುಲ್ಲೂರು
ಕಾರ್ಯಕಾರಿ ನಿರ್ಮಾಪಕರು:ವಿಜಯ್ ಕುಮಾರ್
ಸಹನಿರ್ಮಾಪಕರು: ಅಬ್ದುಲ್ ರಫೀಕ್ಉಲ್ಲಾ
ರಚನೆ , ನಿರ್ದೇಶನ: ಮಹೇಶ್ ಕುಮಾರ್
ಛಾಯಾಗ್ರಹಣ:ಚಲ್ಲ
ಸಂಗೀತ:ರಾಜ್ ಭಾಸ್ಕರ್
ಸಂಭಾಷಣೆ:ಪುಷ್ಪರಾಜ್
ಸಂಕಲನ: ಅಂಜಿ ಕೆ ವೀರ

ಇತ್ತೀಚಿಗೆ ಪ್ರಿಮಿಯರ್ ಶೋ ನಲ್ಲಿ ನೋಡಿದ  ಮಕ್ಕಳ ಸಿನಿಮಾ “ಮಿಂಚು ಹುಳು”  ಇಷ್ಟವಾಯಿತು. ಮಕ್ಕಳಿಗೆ ಅಪ್ಪ ಇಲ್ಲಾ ಅಂದ್ರೂ… ಅಮ್ಮ ಇರಬೇಕು ಅಂತಾರೆ… ಈ ಮಾತು ಎಷ್ಟು ಸಮಂಜಸವೋ ಗೊತ್ತಿಲ್ಲ. ಅಮ್ಮ ಇದ್ರು ಇಲ್ಲದೆ ಹೋದ್ರು ಅಪ್ಪ ಜವಾಬ್ದಾರಿ ಮನುಷ್ಯನಾಗಿರಬೇಕು. ಇಲ್ಲವಾದರೆ ಮಕ್ಕಳ ಬದುಕು ಅತಂತ್ರವಾಗಿ ಬಿಡುತ್ತದೆ. ವಿಪರ್ಯಾಸವೆಂದರೆ ಒಮ್ಮೊಮ್ಮೆ ತಂದೆಯ ಬೇಜವಾಬ್ದಾರಿತನವು ಮಕ್ಕಳ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಬಲ್ಲದು ಎನ್ನುವುದನ್ನು “ಮಿಂಚುಹುಳ” ಸಿನಿಮಾದಲ್ಲಿ ನೋಡಬಹುದು. ಹಾಗಂತ ಸಿನಿಮಾ ಬೇಜವಾಬ್ದಾರಿ ತಂದೆಯನ್ನು ಪೋಷಿಸಿಲ್ಲ. ತಂದೆಯ ನಿರ್ಲಕ್ಷ ಮಕ್ಕಳ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಮತ್ತು ಸಾಧಿಸುವ ಹಠ ಇರುವ ಮಕ್ಕಳು ಹೇಗೆಲ್ಲ ಮುಂದೆ ಬರುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ಜೀವ ತುಂಬಿದ್ದಾರೆ.

ಓದಬೇಕು ಎನ್ನುವ ಹಂಬಲ ಇರುವ ಮುಗ್ದ, ಬುದ್ದಿವಂತ ಹುಡುಗನ ಸುತ್ತ ಹೆಣೆದಿರುವ ಕತೆ ಇದು. ಚನ್ನಾಗಿ ಓದಿ, ಸಾಧಿಸಬೇಕು ಎನ್ನುವ ಛಲ ಇರುವ ಹುಡುಗನ ಅಪ್ಪ ಮಹಾ ಕುಡುಕ. ಮಗನ ಬೇಕು ಬೇಡವನ್ನು ಕೇಳುವುದಿರಲಿ ಅಪ್ಪನಿಗೆ ಕುಡಿತವೇ ಪ್ರಪಂಚವಾಗಿ,  ಕೊನೆಗೊಂದು ದಿನ ಅವರನ್ನು ರಸ್ತೆಯಲ್ಲಿ ಬರುವಂತೆ ಮಾಡುತ್ತದೆ. ಎಲ್ಲೇ ಇದ್ರು ಓದಲೇ ಬೇಕು ಎನ್ನುವ ಹಠ ಇರುವ ಹುಡುಗ ಕೊನೆಗೆ ವಿದ್ಯುತ್ ಇಲ್ಲದ ಒಂದು ಪಾಳು ಬಿದ್ದ ಮನೆಗೆ ಅಪ್ಪನೊಂದಿಗೆ ಬಂದು ಸೇರಿಕೊಳ್ಳುತ್ತಾನೆ.

ಕತ್ತಲೆ ಮನೆಯಲ್ಲಿ ಓದಲಾಗದೆ ದುಃಖಿಸುವ ಹುಡುಗ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸಲು ಪೇಪರ್ ಹಾಕುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಪೇಪರ್ ಹಾಕಿ ಬಂದ ಹಣದಲ್ಲಿ ಇನ್ನೇನು ಮನೆಗೆ ವಿದ್ಯುತ್ ಸಂಪರ್ಕ ತಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಒಂದು ನಿರಾಸೆ ಕಾದಿರುತ್ತದೆ. ಸೋತ ಮನಸ್ಸಿಗೆ ಔಷಧಿಯಂತೆ ಮಿಂಚು ಹುಳುಗಳು ಅವನಿಗೆ ಕಾಣಿಸುತ್ತದೆ. ಓದಿನ ಹಸಿವಿರುವ ಬಾಲಕ ಮುಂದೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಾನೆ. ಅಂತಹ ಸಾಧನೆ ಆ ಬಾಲಕ ಏನು ಮಾಡುತ್ತಾನೆ ಎನ್ನುವ ಕುತೂಹಲ ನೋಡುಗರಿಗೆ ಬಿಟ್ಟಿದ್ದೇನೆ.

ಈ ಸಿನಿಮಾದಿಂದ ಪಾಲಕರ ಕಷ್ಟವನ್ನು ಮಕ್ಕಳು ಅರ್ಥೈಸಿಕೊಂಡರೆ, ಕುಡಿತದಿಂದ ಮಕ್ಕಳ ಭವಿಷ್ಯ ಅದೋಗತಿಗೆ ಒಯ್ಯುವುದನ್ನು ಪಾಲಕರು ಅರ್ಥೈಸಿಕೊಳ್ಳಬಹುದು. ಮಕ್ಕಳು ಬೆರಳು ಮಾಡಿ ತೋರಿಸಿದ್ದನ್ನೆಲ್ಲ ಕೈಗಿಡುವ ಇಂದಿನ ಪಾಲಕರು, ತೃಪ್ತಿಯಿಲ್ಲದ ಇಂದಿನ ಮಕ್ಕಳು ಈ ಸಿನಿಮಾವನ್ನು ತಪ್ಪದೆ ನೋಡಲೇ ಬೇಕು. ಇಂತಹ ಕಥಾಹಂದರ ಇರುವ ಸಿನಿಮಾ ಇಂದಿನ ಸಮಾಜಕ್ಕೆ ಬೇಕಿತ್ತು.

ಸಿನಿಮಾ ನೋಡುವಾಗ ಪುನೀತ್ ರಾಜಕುಮಾರ ಅವರ ಅಭಿನಯದ ‘ಬೆಟ್ಟದ ಹೂ’ ಸಿನಿಮಾ ನೆನಪಿಗೆ ಬಂತು. ಬೆಟ್ಟದ ಹೂವು ಸಿನಿಮಾದಲ್ಲಿ ಬಾಲಕನಿಗೆ ಇದ್ದ ಓದಿನ ಹಸಿವು ಮಿಂಚು ಹುಳು ಸಿನಿಮಾದಲ್ಲಿನ ಬಾಲಕ ಕಿರಣ್ ಪಾತ್ರದಲ್ಲಿಯೂ ನೋಡಿದೆ. ಕಿರಣ್ ಪಾತ್ರದಲ್ಲಿ ಮಾಸ್ಟರ್ ಪ್ರೀತಂ ತಮ್ಮ  ನೈಜ ಅಭಿನಯದಿಂದ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೆ ಕೂರುತ್ತಾನೆ. ರಾಜಕುಮಾರ್ ಕುಟುಂಬದವರು ಸಿನಿಮಾವನ್ನು ಸದಾ ಪ್ರೀತಿ, ಗೌರವದಿಂದ ಕಂಡವರು, ರಾಜಕುಮಾರ್ ರವರ ಸೋದರ ವರದಪ್ಪರವರ ಮಗಳ‌ ಮಗ ಪೃಥ್ವಿರಾಜ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವಂತ ಪಾತ್ರವನ್ನು ಮಾಡಿದ್ದಾರೆ. ಇನ್ನೂ ಬಾಲಕನ ತಂದೆಯಾಗಿ ಪರಶಿವ ಮೂರ್ತಿ ಅವರು ಅಮೋಘವಾಗಿ ಅಭಿನಯಿಸಿದ್ದಾರೆ. ಮಾದೇವ್ ಮೂರ್ತಿ, ರಶ್ಮಿ ಗೌಡ, ಪೂರ್ವಿಕ, ಹಿಸಾಕ್ ಎಲ್ಲರೂ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

This slideshow requires JavaScript.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಜ್ ಗೋಪಾಲ್ ದೊಡ್ಡಹುಲ್ಲೂರು , ಕಾರ್ಯಕಾರಿ ನಿರ್ಮಾಪಕರಾದ ವಿಜಯ್ ಕುಮಾರ್ ಮತ್ತು  ಸಹನಿರ್ಮಾಪಕರು ಅಬ್ದುಲ್ ರಫೀಕ್ಉಲ್ಲಾ ಮಾತಾಡಿ ‘ದೊಡ್ಡ ಹುಲ್ಲೂರು ರುಕ್ಕೋಜಿಯವರು ಈ ಕತೆಯನ್ನು ಸಿನಿಮಾ ಮಾಡಬೇಕು ಎಂದಾಗ ಯೋಚ್ನೆ ಮಾಡದೇ ನಿರ್ಮಾಣ ಮಾಡಲು ಕೈ ಹಾಕಿದೇವು. ಈ ಸಿನಿಮಾ ಮಾಡಲು ಮುಖ್ಯ ಕಾರಣ ಪುನೀತ ರಾಜಕುಮಾರ್ ಅವರು. ಚಿತ್ರತಂಡ ಸಿನಿಮಾವನ್ನು ನಾಲ್ಕು ವರ್ಷ ಕಷ್ಟಪಟ್ಟು ಮಾಡಿದೆ, ದಯವಿಟ್ಟು ಚಿತ್ರ ನೋಡಿ ಹರಸಿ ‘ ಎಂದರು.

‘ಒಳ್ಳೆ ಕಥೆಯುಳ್ಳ ಸಿನಿಮಾ, ತುಂಬಾ ವರ್ಷದ ನಂತರ ಮಕ್ಕಳ ಸಿನಿಮಾ ಮಾಡಿದೆ. ಕಲಾವಿದರೆಲ್ಲ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯರಿಂದ ಕಿರಿಯರು ನೋಡಬಹುದಂತಹ ಸಿನಿಮಾ’… ಎಂದು ನಿರ್ದೇಶಕರು ಮಹೇಶ್ ಕುಮಾರ್ ಅವರು  ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಪಿ.ಶೇಷಾದ್ರಿ, ಹಂಸಲೇಖ, ಹಿರಿಯನಟಿ ಜಯಮಾಲಾ, ಶಾಸಕ ಶರತ ಬಚ್ಚೇಗೌಡ, ಲಹರಿ ವೇಲು, ನಿವೃತ್ತ ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಬೆಟ್ಟದ ಹೂ’, ‘ಚಿನ್ನಾರಿ ಮುತ್ತಾ’  ಗಳಂತಹ ಯಶಸ್ವಿ ಮಕ್ಕಳ ಸಿನಿಮಾ ನೋಡಿದ ಮೇಲೆ ಬಹು ವರ್ಷದ ನಂತರ ಮತ್ತೊಂದು ಮಕ್ಕಳಿಗಾಗಿ ಮಾಡಿದಂತ ಒಳ್ಳೆ ಸಿನಿಮಾವನ್ನು ನಾನು ನೋಡಿದೆ. ಚಿತ್ರ ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿದೆ. ರಾಜ್ಯಾದ್ಯoತ ಅಕ್ಟೋಬರ್ 4 ರಂದು ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾವನ್ನು ಮಕ್ಕಳ ಜೊತೆಗೆ ಕೂತು ನೋಡಿದರೆ ಚಂದ.

ಚಿತ್ರ ತೆರೆಯ ಮೇಲೆ ಮಿಂಚಿನಂತೆ ಸದ್ದು ಮಾಡಲಿ ಎಂದು ಚಿತ್ರತಂಡಕ್ಕೆ ಆಕೃತಿಕನ್ನಡ ಶುಭ ಹಾರೈಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಅಂತರ್ಜಾಲ ಪತ್ರಿಕೆ ಸಂಪಾದಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW