“ಮಧುಬಾಲ- ರಮೇಶ ಅರೋಲಿ”

ಮಧುಬಾಲಾ ಹಿಂದಿ ಚಿತ್ರರಂಗವನ್ನು ಎರಡು ದಶಕಗಳ ಕಾಲ ಆಳಿದವಳು. ಅವಳ ನಟನೆ, ಬೆಳದಿಂಗಳಂತಹ ನಗು, ಚಿಮ್ಮುವ ಉತ್ಸಾಹದ ಬುಗ್ಗೆ ಯಂತ ನಡೆ, ಬಾಯಿ ಕೊಂಕಿಸಿ ಡೈಲಾಗ್ ಹೇಳುವ ಪರಿ, ಕಣ್ಣು ಮಿಟುಕಿಸುವ ರೀತಿ ಒಂದೇ ಎರಡೆ ಅವಳ ಕುರಿತು ಬಣ್ಣಿಸಿದರೆ ಅವಳು ಪದಕ್ಕೆ ದಕ್ಕಲ್ಲ.ಡಾ.ಶೈಲಜಾ.ಎನ್ ಬಾಗೇವಾಡಿ ಅವರು ರಮೇಶ್ ಅರೋಲಿ ಅವರ ಮಧುಬಾಲ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಧುಬಾಲ
ಲೇಖಕರು :ರಮೇಶ್ ಅರೋಲಿ
ಬೆಲೆ : ೧೭೦.೦೦
ಪುಟ : ೧೪೦
ಪ್ರಕಾಶನ : ಸಂಗಾತ ಪುಸ್ತಕ
ಖರೀದಿಗಾಗಿ :9341757653

ಹಿಂದಿ ಚಿತ್ರರಂಗದ ಮಿನುಗು ತಾರೆ ಮುಮ್ತಾಜ್ ಜಿಹನ್ ಬೇಗಂ ದೆಹಲ್ವಿ ,ಉರ್ಫ ಮಧುಬಾಲಾ, ಹಿಂದೂಸ್ತಾನ್ ಕಿ ಮರ್ಲಿನ್ ಮನ್ರೋ ಎಂದೆ ಹೆಸರು ಪಡೆದ ನಟಿಯ ಏಳು ಬೀಳಿನ ಕಥಾನಕವಿದು.ಬಣ್ಣದ ಲೋಕದ ತಾರೆಯರ ತೆರೆಯ ಹಿಂದಿನ ಬದುಕು ನಾವಂದುಕೊಂಡಂತೆ ಬಣ್ಣದಿಂದ ಕೂಡಿರುವುದಿಲ್ಲ.ಉದಾಹರಣೆಗಾಗಿ ಮೊದಲ ಸಾಲಿನ ಶಾಂತ ಹುಬ್ಬಳ್ಳಿಕರ,ಮೀನಾಕುಮಾರಿ ಯಿಂದ ಇತ್ತೀಚಿಗೆ ತೀರಿದ ಶ್ರೀದೇವಿ ವರೆಗೆ ಅನೇಕ ನಟಿಯರ ಅಂತ್ಯ ಧಾರುಣ ವಾಗಿ ಅಭಿಮಾನಿಗಳ ಪಾಲಿಗೆ ನಿಗೂಢವಾಗಿಯೆ ಉಳಿಯುತ್ತಾರೆ.

ಮಧುಬಾಲಾ ಹಿಂದಿ ಚಿತ್ರರಂಗವನ್ನು ಎರಡು ದಶಕಗಳ ಕಾಲ ಆಳಿದವಳು.ಮೂಲತಃ ಅವಿಭಜಿತ ಹಿಂದೂಸ್ತಾನ್ ದ ಪೇಶಾವರ ದವಳು.ಪಠಾಣ್ ಕುಟುಂಬದ ಕುಡಿ. ತನ್ನ ಬದುಕೆಲ್ಲಾ ಸಂಸಾರದ ನೊಗಕ್ಕೆ ಹೆಗಲು ಕೊಡುವ ಅನಿವಾರ್ಯತೆಯನ್ನು ತಂದೆ ಅತೌವುಲ್ಲಹ ಖಾನ್ ತರುತ್ತಾನೆ.ಪೇಶಾವರ ದಿಂದ ದೆಹಲಿ, ದೆಹಲಿಯಿಂದ ಮುಂಬಯಿ ನಂತರ ಮತ್ತೆ ದೆಹಲಿಗೆ ಅಲೆಯುವಾಗ ಮಗಳು ಚಿತ್ರರಂಗದಲ್ಲಿ ಬಾಲನಟಿಯಾಗಿ ನೆಲೆ ಕಂಡಾಗ ಮುಂಬಯಿ ನಲ್ಲಿ ಉಳಿಯುತ್ತಾರೆ. ಹುಟ್ಟಿದ್ದು ೧೯೩೩ ಪೆಬ್ರವರಿ ೧೪ ರಂದು,ಅಂದರೆ ಪ್ರೇಮಿಗಳ ದಿನದಂದು ಆದರೆ ಇಡೀ ಬದುಕು ಹಿಡಿ ಪ್ರೀತಿ ಗಾಗಿ ಹಪಾಹಪಿಸಿದ್ದು ಖೇದಕರ.ಆರು ಮಕ್ಕಳ ಮದ್ಯದಲ್ಲಿ ಹುಟ್ಟಿದ ಇವಳು ದೊಡ್ಡ ಕುಟುಂಬ ಸಂಭಾಳಿಸುತ್ತ ೩೬ ವರ್ಷ ಬದುಕಿ ೭೨ ಯಶಸ್ವಿ ಚಿತ್ರ ನೀಡದ ಹೆಗ್ಗಳಿಕೆ ಅವಳದು.ಹುಟ್ಟುವಾಗಲೇ ಹೃದಯಕ್ಕೆ ರಂದ್ರ ಹೊಂದಿರುವ ಅವಳು ಹೃದಯದಲ್ಲಿ ಯಾರನ್ನು ಕಾಪಿಟ್ಟುಕೊಳ್ಳಲಾಗದೆ, ಪ್ರೀತಿಸಿದವರೆಲ್ಲ ಸೋರಿ ಹೋಗುವ ಶೋಚನೀಯ ಸ್ಥಿತಿ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮದುಭಾಲ, ನಂತರ ಹತ್ತು ಹಲವು ಮಹತ್ವದ ಪಾತ್ರವನ್ನು ನಿರ್ವಹಿಸಿದರು.ಅವರ ಕ್ಲಾಸ್ ಮೂವಿ ಎಂದರೆ ಮುಘಲ್- ಎ- ಅಜಾಂ ಚಿತ್ರ. ದಿಲೀಪ್ ಕುಮಾರ್ ಜೊತೆ ನಟಿಸಿದ ಆ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅಜರಾಮರ.ತೆರೆಯ ಮೇಲೆ ಮಿಂಚಿದ ಈ ಜೋಡಿ ತೆರೆಯ ಹಿಂದೆ ಕೂಡ ಒಂದಾಗಬೇಕಿತ್ತು.ಆದರೆ ತಂದೆಯ ಮೊಂಡುತನ,ದೀಲಿಪ್ ನ ಅಹಂ ನಿಂದ ಇಬ್ಬರ ಮದ್ಯ ಮಧುಬಾಲಾ ತೊಳಲುವಂತಾಯಿತು.ಜೀವನ ಪರ್ಯಂತ ಪುರುಷಹಂಕಾರ ದಿಂದ ತನ್ನಿಚ್ಛೆಯ ಬದುಕು ಕಟ್ಟಿಕೊಳ್ಳಲು ಆಗದೆ ತಹತಹಿಸಿದಳು.ತನಗೆ ದೊರೆಯದ ಪ್ರೀತಿ ಮಿಕ್ಕವರಲ್ಲಿ ಅರಸಿದಾಗ ಯಾವುದು ಯಶ ಕಾಣದೆ ಹೋಯಿತು. ಅವಳನ್ನು ಬಯಸುವವರ ಸಂಖ್ಯೆ ಕೂಡ ದೊಡ್ಡದು ಅದರಲ್ಲಿ ಪಾಕಿಸ್ತಾನದ ಪ್ರಧಾನಿ ಝುಲ್ಫಿಕರ್ ಬುಟ್ಟೊ ಕೂಡ ಒಬ್ಬನು.ಅವಳಿಗಾಗಿ ಹಲವರು ಹಂಬಲಿಸಿದರು.ಅವಳು ಮಾತ್ರ ಯಾರಿಗೂ ದಕ್ಕದೆ ಮನದಲ್ಲಿ ದಿಲೀಪ್ ಕುಮಾರ್ ನನ್ನು ಬಯಸುತ್ತ ,ಅವನು ಬೇರೆ ಮದುವೆ ಆಗುವ ಸಂಗತಿ ತಿಳಿದಾಗ ಈ ನೋವಿನಿಂದ ಹೊರಬರಲು ಕಿಶೋರ್ ಕುಮಾರ್ ನನ್ನು ಮದುವೆ ಆಗುತ್ತಾಳೆ.ಆದರೆ ಅದು ಆತುರದ ಮದುವೆ ಆಗುತ್ತದೆ. ಅವನ ಹುಡಗಾಟಿಕೆ ಸ್ವಭಾವ ಇಷ್ಟವಾಗುತ್ತದೆ ಅದರಿಂದ ತನ್ನ ನೋವು ಮರೆಯಬಹುದು ಎಂಬ ಭಾವ .ಅವನೊಂದಿಗೆ ಮಾಡಿದ ಹಾಫ್ ಟಿಕೇಟ, ಚಲತಿಕಾ ನಾಮ ಗಾಡಿ ಯಶಸ್ಸು ಪಡೆಯುತ್ತದೆ.ಮೊದಲ ಹೆಂಡತಿ ಬಿಟ್ಟು ಇವಳನ್ನು ಮದುವೆ ಆದದ್ದು ಅವರ ಮನೆಯವರಿಗೆ ಹಿಡಿಸದೆ ಇದ್ದದ್ದು, ಆತನ ವಿಕ್ಷಿಪ್ತ ನಡವಳಿಕೆ ಅವಳು ಇನ್ನಷ್ಟು ಘಾಸಿಗೊಳಗಾಗುವಂತೆ ಮಾಡುತ್ತದೆ. ದೈಹಿಕವಾಗಿ ಕೂಡ ಕುಸಿಯುತ್ತಾಳೆ.ಹೃದಯದ ಖಾಯಿಲೆಗೆ ಇಂಗ್ಲೆಂಡ್ ಗೆ ಹೋಗಿ ಬಂದರು ಫಲಕಾರಿ ಆಗದೆ ತನ್ನ ಅರೇಬಿಯನ್ ವಿಲ್ಲಾ ಮನೆಗೆ ಮರಳುತ್ತಾಳೆ.ಕೊನೆಯ ದಿನಗಳಲ್ಲಿ ಏಕಾಂಗಿ ಆಗಿ ಎಲುಬಿನ ಹಂದಿರವಾಗುತ್ತಾಳೆ.ತನಗಿನ್ನು ಬದುಕುವ ಆಸೆ ಇದೆ,ತನ್ನನ್ನು ಉಳಿಸಿ ಎನ್ನುತ್ತಲೆ ಉಸಿರುಬಿಡುತ್ತಾಳೆ.ಮುಂಬಯಿಯಲ್ಲಿ ಅಂತ್ಯ ಕ್ರಿಯೆ ಜರುಗುತ್ತದೆ. ಕೆಲವು ದಿನಗಳಲ್ಲಿ ಅವಳ ಸಮಾಧಿ ಕೂಡಾ ನಾಮವಶೇಷ ವಾಗುವುದು.ಆದರೆ ಅವಳು ಮಾತ್ರ ಸಿನಿಪ್ರಿಯರ ಹೃದಯದ ದಲ್ಲಿ ಶಾಶ್ವತವಾಗಿ ಉಳಿಯುತ್ತಾಳೆ.

ಅವಳ ನಟನೆ,ಬೆಳದಿಂಗಳಂತಹ ನಗು,ಚಿಮ್ಮುವ ಉತ್ಸಾಹದ ಬುಗ್ಗೆ ಯಂತ ನಡೆ,ಬಾಯಿ ಕೊಂಕಿಸಿ ಡೈಲಾಗ್ ಹೇಳುವ ಪರಿ,ಕಣ್ಣು ಮಿಟುಕಿಸುವ ರೀತಿ ಒಂದೇ ಎರಡೆ ಅವಳ ಕುರಿತು ಬಣ್ಣಿಸಿದರೆ ಅವಳು ಪದಕ್ಕೆ ದಕ್ಕಲ್ಲ. ನೈಜ ನಟನೆಯಿಂದ ಮನಸೂರೆಗೊಂಡ ಅವಳು ಇಂದಿಗೂ ನೆನಪಿಸಿಕೊಂಡರೆ ನಾಡಿ ಮಿಡಿತ ತಪ್ಪುವುದು.ಹಾಗಾಗಿಯೇ ಅವಳು ತೀರಿದ ನಂತರ ೨೦೦೮ರಲ್ಲಿ ಮಧುಬಾಲ ಹೆಸರಿನ ಸ್ಟಾಂಪು ಮುದ್ರಿಸಿದರು,ಮೇಣದ ಪ್ರತಿಮೆ ಮಾಡಿದರು. ಸಿನಿಮಾ ರಂಗದಲ್ಲಿ ಎಷ್ಟು ನೀರು ಹರಿದು ಹೋದರು ಅನಾರ್ಕಲಿ ಅಮರ.ಸಲಿಂ ತೆರೆಯ ಮೇಲೆ ಅಥವಾ ಹಿಂದೆ ಎಂದು ನ್ಯಾಯ ನೀಡಲಿಲ್ಲ. ಅವಳು ಮಾತ್ರ ಪ್ಯಾರ್ ಕಿಯಾ ತೊ ಡರನಾ ಕ್ಯಾ ಎಂಬ ದಿಟ್ಟ ನಿಲುವಿನಲ್ಲಿ ನಗು ಚೆಲ್ಲುತಲೆ ಮರೆಯಾದಳು.

ಮಧುಬಾಲಾಳ ಜೀವನ ಕಥನ ಬೆಳ್ಳಿಪರದೆಗೆ ಕಾಲ ಬರೆದ ಕಾಗದ ಎಂಬ ಹೆಸರಿನ ಕೃತಿ ಕನ್ನಡದಲ್ಲಿ ಬರೆದ ಅರೋಲಿ ಅವರಿಗೆ ನಮನಗಳು.೧೦೦ ಪುಟದಲ್ಲಿ ಅವಳ ಅಪರೂಪದ ಪೋಟೋ ಗಳು, ಅವಳ ಒಟ್ಟು ಚಲನಚಿತ್ರಗಳ ಪಟ್ಟಿ ಜೊತೆಗೆ ಅವಳ ಬದುಕನ್ನು ಆಧಾರದ ಜೊತೆಗೆ ವಿವರಿಸಿದ ರೀತಿ ಗಮನಿಸಿದಾಗ ಸಂಶೋಧನಾ ಪ್ರಬಂಧ ರೂಪದಲ್ಲಿ ಮೂಡಿಬಂದಿದೆ. ಚಲನಚಿತ್ರ ಜಗತ್ತಿನ ಇನ್ನೊಂದು ಮುಖ,ರೀಲ್ ಅಲ್ಲದ ರೀಯಲ್ ಸ್ಟೋರಿ ಹೇಳಿದ ಲೇಖಕರಿಗೆ ಧನ್ಯವಾದಗಳು .


  • ಡಾ.ಶೈಲಜಾ.ಎನ್ ಬಾಗೇವಾಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading