“ಬಯಲುಂಡ ಬೆಳಗು” ಕಾದಂಬರಿ ಪರಿಚಯ

ಡಾ.ಲಕ್ಷ್ಮಣ ಕೌಂಟೆ ಅವರ”ಬಯಲುಂಡ ಬೆಳಗು” ಕಾದಂಬರಿಯನ್ನು ಮೂರು ಹಂತದಲ್ಲಿ ವಿಂಗಡಿಸಬಹುದು. ಮೊದಲ ಭಾಗ ಸಿದ್ದರಾಮನ ಬಾಲ್ಯ ಮತ್ತು ಸಾಧನೆ,ಎರಡನೇ ಭಾಗದಲ್ಲಿ ಕಲ್ಯಾಣದ ಶರಣರ ಪ್ರಭಾವ, ಮೂರನೇ ಭಾಗದಲ್ಲಿ ಶರಣರ ಅಳಿವು ಉಳಿವು. ಹೀಗೆ ಮೂರು ಘಟ್ಟದಲ್ಲಿ ಕಾಣಬಹುದು. ಕೃತಿಯುದ್ದಕ್ಕು ಶೀರ್ಷಿಕೆ, ಉಪಶಿರ್ಷಿಕೆ ನೀಡಿ ಓದುಗನಿಗೆ ಅನುಕೂಲ ಕಲ್ಪಿಸುತ್ತದೆ. ಡಾ.ಶೈಲಜಾ ಎನ್.ಬಾಗೇವಾಡಿ ಅವರು ಕಾದಂಬರಿ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ : “ಬಯಲುಂಡ ಬೆಳಗು”
ಲೇಖಕರು : ಡಾ.ಲಕ್ಷ್ಮಣ ಕೌಂಟೆ
ಪ್ರಕಾರ : ಕಾದಂಬರಿ 

ಹನ್ನೆರಡನೆಯ ಶತಮಾನದ ವಚನ ಚಳುವಳಿಯು ಜಾಗತಿಕ ಇತಿಹಾಸದಲ್ಲಿಯೇ ಅತ್ಯಂತ ಅಪೂರ್ವ ಮತ್ತು ಅಚ್ಚರಿಯ ಕಾಲಘಟ್ಟ.ಪರಂಪರೆಯಿಂದ ನಡೆದು ಬಂದಂತಹ ವೈದಿಕ ಆಚರಣೆಯನ್ನು ಧಿಕ್ಕರಿಸಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಬಸವಾದಿ ಶಿವಶರಣರ ಆಲೋಚನಾ ಕ್ರಮ ನಿಬ್ಬೆರಗು ಮೂಡಿಸುತ್ತದೆ.ಸಮಸಮಾಜದ ಪರಿಕಲ್ಪನೆ, ಮೂರ್ತಿ ಪೂಜೆ ನಿರಾಕರಣೆ,ವರ್ಣ-ವರ್ಗ- ಲಿಂಗವನ್ನು ಮೀರುವಿಕೆ,ಕಾಯಕ- ದಾಸೋಹ ತತ್ವ ಈ ಎಲ್ಲ ಸಂಗತಿಗಳು ಸಮಾಜೋ – ಧಾರ್ಮಿಕ ಕ್ರಾಂತಿಗೆ ಕಾರಣವಾಯಿತು. ಬಸವಣ್ಣನ ಕಾರ್ಯಕ್ಷೇತ್ರವಾದ ಕಲ್ಯಾಣ ಎಂಬುದು ನಾಡಿನ ಮತ್ತು ನಾಡಿನಾಚೆಯ ಶರಣರ ಅನುಭಾವದ ನೆಲೆಯಾಯಿತು. ಅನುಭವ ಮಂಟಪ ಎಂಬ ವಿನೂತನ ಕಲ್ಪನೆಯು ಶರಣರ ಅಭಿವ್ಯಕ್ತಿಗೆ ವೇದಿಕೆ ಆಯಿತು. ಆಧ್ಯಾತ್ಮಿಕ ವಿಚಾರಗಳ ಚರ್ಚೆ, ಅನುಸಂಧಾನದ ಜೊತೆಗೆ ವಚನಗಳ ರಚನೆಯ ಮೂಲಕ ಸಾಹಿತ್ಯದಲ್ಲಿ ನೂತನ ಬದಲಾವಣೆ ತಂದರು. ಶರಣರ ಆದರ್ಶಗಳು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಿನಲ್ಲಿ , ವಿಲೋಮ ವಿವಾಹದ ನೆಪದಲ್ಲಿ ಇಡೀ ಶರಣ ಸಂಕುಲವನ್ನು ಅರಸೊತ್ತಿಗೆ ಅಳಸಿ ಹಾಕುವ ಪ್ರಯತ್ನ ಮಾಡಿತು.ಶರಣರು ಅಳಿದು ಹೋದರು ಆದರೆ ಅವರ ತತ್ವ ವಿಚಾರಗಳಲ್ಲ. ಯಾವ ವೇಗದಲ್ಲಿ ಬಸವ ಚಳವಳಿ ಪಸರಿಸಿತ್ತೊ,ಅಷ್ಟೇ ವೇಗದಲ್ಲಿ ಅವನತಿಯ ಕಡೆ ಮುಖ ಮಾಡಿತು.ವಚನ ಸಾಹಿತ್ಯದ ಉಳಿವಿಗಾಗಿ ಪರದಾಡುವಂತಾಯಿತು.ಎಲ್ಲಾ ಶರಣರು ಒಂದು ಸದುದ್ದೇಶಕ್ಕಾಗಿ ಒಂದೆಡೆ ಸೇರಿದ್ದರು. ಆದರೆ ಪ್ರಭುತ್ವದ ಹೊಡೆತಕ್ಕೆ ಸಿಕ್ಕಿ ದಿಕ್ಕುದೆಸೆಯಿಲ್ಲದಂತಾಗಿ ಛಿದ್ರಗೊಂಡರು.ಕಲ್ಯಾಣ ಎಂಬುದು ಕೆಟ್ಟಿತು, ಶರಣರು ಹೊಸ ನೆಲೆಯರಸಿ ಹೊರಟು ಹೋದರು. ಇಡೀ ಈ ಚಳುವಳಿಗೆ ಸಾಕ್ಷಿ ಆದವರು ಎಂದರೆ ಸೊನ್ನಲಿಗೆಯ ಸಿದ್ದರಾಮ. ತುಂಬು ಬಾಳನ್ನು ಬಾಳಿದ ಈತ ಶರಣ ಚಳುವಳಿಯ ಆರಂಭ ಮತ್ತು ಅಂತ್ಯ ಕಂಡವನು. ಆತನ ಕುರಿತಾಗಿ ರಚನೆಯಾದ ಐತಿಹಾಸಿಕ ಕಾದಂಬರಿಯೆ ‘ಬಯಲುಂಡ ಬೆಳಗು’. ಶೀರ್ಷಿಕೆ ಅರ್ಥಪೂರ್ಣವಾಗಿದೆ.

ಕಾದಂಬರಿಯು ಸೊನ್ನಲಿಗೆ ಸಿದ್ದರಾಮನ ಇಡೀ ಜೀವನ ವೃತ್ತಾಂತ ಹೇಳುತ್ತ ಆತನ ಸಮಕಾಲೀನ ಶರಣರ ಬದುಕು,ರಾಜಕೀಯ ಚಿತ್ರಣ,ಧಾರ್ಮಿಕ ಜಿಜ್ಞಾಸೆ ಹಾಗೆ ಶರಣ ಚಳುವಳಿಯ ನಂತರ ಹುಟ್ಟಿಕೊಂಡ ಅನೇಕ ಊಹಾಪೋಹಗಳು ಪವಾಡಗಳಾಗಿ,ಕಟ್ಟುಕಥೆಯಾಗಿ ಜನಜನಿತಾದದ್ದನ್ನು ಕೌಂಟೆ ಅವರು ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಸಿದ್ದರಾಮನ ತಂದೆ-ತಾಯಿ,ಹುಟ್ಟು, ಬಾಲ್ಯ,ಶ್ರೀಶೈಲದ ಪಯಣ, ಆತ ಪಡೆದ ಶಿವಜ್ಞಾನ, ಆತನ ಸಾಮಾಜಿಕ ಕೆಲಸ ಕಾರ್ಯ,ಮಾಯಾ ಪ್ರಕರಣ,ಅಲ್ಲಮನ ಆಗಮನ ಹೀಗೆ ಎಲ್ಲ ಪ್ರಸಂಗಗಳು ಸಾಕಷ್ಟು ಕಲ್ಪಿತ ಕಥೆಗಳಾಗಿದ್ದವು. ಅವುಗಳನ್ನು ಸರಳವಾಗಿ ವಾಸ್ತವವಾಗಿ ವಿವರಿಸಿದ್ದಾರೆ.

ಕಾದಂಬರಿಯ ಆರಂಭ ಸಿದ್ದರಾಮನ ಹುಟ್ಟಿನ ಹಿನ್ನೆಲೆಯ ಮೂಲಕ ಆರಂಭವಾಗುತ್ತದೆ. ವಯಸ್ಸಾದ ತಂದೆ ಮುದ್ದೇಗೌಡ ಮತ್ತು ಸುಗ್ಗಲೆ ದಂಪತಿಗಳಿಗೆ ಯೋಗಿ ರೇವಣಸಿದ್ದರ ಅಣತಿಯಂತೆ ಸಿದ್ದರಾಮನ ಜನನವಾಗುವುದು.ಆತ ಮುಗ್ಧ ಮತ್ತು ಮಾತುಬಾರದವ ,ಆತನು ಮಲ್ಲಯ್ಯನನ್ನು ಅರಸಿ ಶ್ರೀಶೈಲದ ಕಡೆ ಹೋಗುತ್ತಾನೆ.ಅಲ್ಲಿ ಯೋಗಿನಾಥನ ಬಳಿ ವಿದ್ಯೆ ಕಲಿತು,ಶಿವಯೋಗ ಅರಿತು ಮರಳಿ ಸೊನ್ನಲಿಗೆಗೆ ಶಿವಯೋಗಿ ಸಿದ್ದರಾಮನಾಗಿ ಬರುತ್ತಾನೆ.ಶಿವನ ಕೃಪೆಗೆ ಒಳಗಾಗಿ ಮೂರನೇ ಕಣ್ಣು ಪಡೆದನೆಂಬ ಉಹಾಪೋಹ ಹುಟ್ಟಿರುತ್ತದೆ. ಸೊನ್ನಲಿಗೆಯಲ್ಲಿರಾಣಿ ಚಾಮಲಾದೇವಿಯ ಸಹಕಾರದಿಂದ ಕೆರೆ ಕಟ್ಟೆ, ಮಂದಿರ, ಹಲವಾರು ಲಿಂಗಗಳ ಸ್ಥಾಪನೆಗೆ ಚಾಲನೆ ನೀಡುತ್ತಾನೆ.ಶಿವನನ್ನೆ ಒಲಿಸಿಕೊಂಡ ಶಿವನ ಅಪರಾವತಾರ ಎಂಬ ಹೆಸರು ಎಲ್ಲೆಡೆ ಪಸರಿಸುತ್ತದೆ.ಆಗ ಆತನನ್ನು ಪರೀಕ್ಷಿಸಲು ಅಲ್ಲಮನ ಆಗಮನ ಸಿದ್ದರಾಮನ ಬದುಕಿಗೆ ಹೊಸ ತಿರುವು ಮೂಡುತ್ತದೆ.

ಅಲ್ಲಮ ಸಿದ್ದರಾಮನ ವ್ಯಕ್ತಿತ್ವ ಅರಿಯಲು ಬಂದು ಆತನನ್ನು ಒಡ್ಡರಾಮಯ್ಯ ಎಂದು ಉದ್ದೇಶ ಪೂರ್ವಕವಾಗಿ ಟೀಕಿಸಿದಾಗ ಕೋಪಗೊಂಡು ವಾದಕ್ಕೆ ನಿಲ್ಲುತ್ತಾನೆ. ಆಗ ಅಲ್ಲಮನು ಸ್ಥಾವರ ಲಿಂಗ ಪೂಜೆ ಮಾಡದೆ ಜಂಗಮ ಪೂಜೆ ಮಾಡಲು,ದೇಹವೆ ದೇವಾಲಯ ಎಂಬ ಶರಣರ ನಿಲುವು ಪ್ರತಿಪಾದಿಸುತ್ತಾನೆ.ಅವರಿಬ್ಬರ ಸಂವಾದ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ.ಆಗ ಸಿದ್ದರಾಮನಿಗೆ ತನ್ನ ಅಹಂಕಾರ ಮತ್ತು ಲಿಂಗ ಸ್ಥಾಪನೆ ಕುರಿತು ಮುಜುಗರ ಮೂಡಿ ಅಲ್ಲಮನಿಗೆ ಶರಣು ಹೋಗುತ್ತಾನೆ. ನಂತರ ಕಲ್ಯಾಣ ಕ್ಕೆ ಬಂದು ಚೆನ್ನಬಸವಣ್ಣ ನಿಂದ ಲಿಂಗ ದೀಕ್ಷೆ ಪಡೆಯುತ್ತಾನೆ.ಕಲ್ಯಾಣ ದಲ್ಲಿ ಅನೇಕ ಶರಣರನ್ನು ಭೇಟಿ ಆಗಿ ತಾತ್ವಿಕ ಚಿಂತನೆ ನಡೆಸುತ್ತಾರೆ.ಅವರಲ್ಲಿ ಬೊಂತಾದೇವಿ,ಮರುಳ ಶಂಕರದೇವ,ಬಸವಣ್ಣ, ಚೆನ್ನಬಸವಣ್ಣ, ಗಜೇಶ ಮಸಣಯ್ಯ ಹೀಗೆ ಹಲವು ಶರಣರ ಜೊತೆಗಿನ ಸಂವಾದ ಲಿಂಗಾಯತ ಧರ್ಮದ ತಿರುಳನ್ನು ತಿಳಿಯಲು ಅನುಕೂಲವಾಗುವಂತೆ ಸಂವಾದ ರೂಪದಲ್ಲಿ ಕತೆ ಹೆಣದಿದ್ದು ಉತ್ತಮ ತಂತ್ರಗಾರಿಕೆ ಮತ್ತು ಕತೆಯ ಮುಂದುವರಿಕೆಗೆ ಅನುಕೂಲ ವಾಗಿದೆ.

ಕಲ್ಯಾಣದ ಕ್ರಾಂತಿ, ಶರಣರ ಕಗ್ಗೊಲೆ, ಬಸವಣ್ಣನವರ ಗಡಿಪಾರು, ಅರಸ ಬಿಜ್ಜಳನ ಹತ್ಯೆ ಹೀಗೆ ಏನೆಲ್ಲಾ ಘಟನೆಗಳು ಘಟಿಸುತ್ತವೆ..ಶರಣರು ಉಳಿವಿಗಾಗಿ ಶ್ರೀಶೈಲ,ಕಪ್ಪಡಿ,ಸೊನ್ನಲಿಗೆ ಹೀಗೆ ಚದುರಿ ಹೋಗುತ್ತಾರೆ. ಅಲ್ಲಮ ಶ್ರಿಶೈಲದ ಕಡೆ, ಬಸವಣ್ಣ ಕಪ್ಪಡಿಯ ಕಡೆ ,ಆದರೆ ಒಂದು ದೊಡ್ಡ ಗುಂಪು ಸೊನ್ನಲಿಗೆ ಮೂಲಕ ಹಲಸಂಗಿ, ನಿಂಬಾಳ,ವಿಜಯಪುರ, ಬಬಲೇಶ್ವರ, ಮಂಟೂರು,ಮುಧೋಳ, ಯಾದವಾಡ,ಸತ್ತಿಗೇರಿ, ಯರಹಟ್ಟಿ,ಮುರಗೋಡ. ಕಾರಿಮನಿ, ಹೊಸೂರು, ಸಂಪಗಾಂವಿ ಬೈಲಹೊಂಗಲ, ತಿಗಡಿ, ಕಾದರವಳ್ಳಿ ಮುಂದೆ ಗೋವೆಯ ಕದಂಬ ದೊರೆ ಪೆರ್ಮಾಡಿರಾಯನ ಆಶ್ರಯ ಬಯಸಿ ಶರಣರು ವಚನಗಳ ಕಟ್ಟನ್ನು ಹೊತ್ತು ಹೊರಟು ನಿಲ್ಲುತ್ತಾರೆ.ಮಾರ್ಗದಲ್ಲಿ ವಚನಗಳನ್ನು ಸಾಲಿಮಠ,ಓಲೆಮಠಗಳಲ್ಲಿ ಪ್ರತಿಮಾಡಲು ನೀಡುತ್ತಾ ಹೊರಟಾಗ,ಬಿಜ್ಜಳನ ಮಗ ಸೋಮಿದೇವ ಮಾತ್ರ ಶರಣರನ್ನು ಬೆನ್ನಟ್ಟಿ ರಕ್ತ ಪಾತ ಮಾಡುತ್ತಲೆ ಬರುವನು. ದಾರಿಯಲ್ಲಿ ಕ್ರಾಂತಿಗೆ ಕಾರಣಳಾದ ಲಾವಣ್ಯ, ಮಡಿವಾಳ ಮಾಚಿದೇವ, ಗಂಗಾಂಬಿಕೆ, ಡೋಹಾರ ಕಕ್ಕಯ್ಯ, ಬಿಷ್ಟಾದೇವಿ,ಕಲ್ಯಾಣಮ್ಮ ಹೀಗೆ ಹಲವಾರು ಶರಣರು ಬಲಿಯಾದರು. ಇತ್ತ ಕಪ್ಪಡಿಯಲ್ಲಿ ಬಸವಣ್ಣ ಲಿಂಗೈಕ್ಯನಾದ ಜೊತೆಗೆ ನೀಲಾಂಬಿಕೆ,ಹಡಪದ ಅಪ್ಪಣ್ಣ ಹೀಗೆ ಶರಣ ಸಂಕುಲ ಅಳಿಯಿತು. ಅಳಿದುಳಿದ ಶರಣರು ಉಳವಿಯಲ್ಲಿ ಹತರಾದರು ಅದರಲ್ಲಿ ಪ್ರಮುಖರಾದವರು ಚೆನ್ನಬಸವಣ್ಣ. ಅಲ್ಲಿಂದ ಮುಂದೆ ಹೋದವರಲ್ಲಿ ಅಕ್ಕನಾಗಮ್ಮ ಮತ್ತು ನುಲಿಯ ಚಂದಯ್ಯ ಮಾತ್ರ. ಅವರಿಬ್ಬರೂ ಎಣ್ಣೆಹೊಳೆಯ ಬಳಿ ನೆಲೆನಿಂತು ವಚನ ಪ್ರಚಾರದಲ್ಲಿ ತೊಡಗಿದ್ದಾಗಿ ತಿಳಿದು ಬರುತ್ತದೆ. ಇದನ್ನೆಲ್ಲಾ ಕಂಡು, ಕೇಳಿದ ಸಿದ್ದರಾಮನಿಗೆ ಜಿಗುಪ್ಸೆ ಮೂಡಿ ಮೌನಕ್ಕೆ ಶರಣಾಗುತ್ತಾನೆ. ಹಾವಿನಾಳ ಕಲ್ಲಯ್ಯ ಸಿದ್ದರಾಮನ ಅಂತರಂಗದ ಅನುಯಾಯಿ ಮಾತ್ರ ಕೊನೆಯವರೆಗೆ ಜೊತೆಗಿದ್ದು ಆತನ ಆಜ್ಞಾನುವರ್ತಿಯಾಗಿರುತ್ತಾನೆ. ಅಂತಿಮವಾಗಿ ಸಿದ್ದರಾಮ ತಾನು ಕಟ್ಟಿಸಿದ ಕೆರೆಯಲ್ಲಿ ಜೀವಂತ ಸಮಾಧಿ ಹೊಂದುತ್ತಾನೆ.

ಇಡೀ ಕಾದಂಬರಿ ಮೂರು ಹಂತದಲ್ಲಿ ವಿಂಗಡಿಸಬಹುದು. ಮೊದಲ ಭಾಗ ಸಿದ್ದರಾಮನ ಬಾಲ್ಯ ಮತ್ತು ಸಾಧನೆ,ಎರಡನೇ ಬಾಗದಲ್ಲಿ ಕಲ್ಯಾಣದ ಶರಣರ ಪ್ರಭಾವ, ಮೂರನೇ ಭಾಗದಲ್ಲಿ ಶರಣರ ಅಳಿವು ಉಳಿವು.ಹೀಗೆ ಮೂರು ಘಟ್ಟದಲ್ಲಿ ಕಾಣಬಹುದು. ಕೃತಿಯುದ್ದಕ್ಕು ಶೀರ್ಷಿಕೆ, ಉಪಶಿರ್ಷಿಕೆ ನೀಡಿ ಓದುಗನಿಗೆ ಅನುಕೂಲ ಕಲ್ಪಿಸುತ್ತದೆ. ಅನೇಕ ವಚನಗಳನ್ನು ಉದಾಹರಿಸುತ್ತ, ವಿಶ್ಲೇಷಣೆ ಮಾಡುತ್ತ ಶರಣರ ನಿಲುವು, ಅವರ ತತ್ವ ಸಿದ್ಧಾಂತಗಳನ್ನು ಸ್ಪಷ್ಟವಾಗಿಸಿದ್ದಾರೆ. ಕೆಲವು ಪವಾಡ ,ಕಟ್ಟುಕತೆ ಸರಳಗೊಳಿಸಿದ್ದಾರೆ.ಕೆಲವು ಸಂದರ್ಭವನ್ನು ಇತಿಹಾಸಕ್ಕೆ ಧಕ್ಕೆಯಾಗದಂತೆ ಭಿನ್ನವಾಗಿ ನಿರೂಪಿಸಿದ್ದಾರೆ. ಶರಣರ ಧಾರುಣ ಅಂತ್ಯ ಮಾತ್ರ ಮಾರ್ಮಿಕವಾಗಿ ಚಿತ್ರಿಸಿ ಓದುಗ ಭಾವುಕನಾಗುವಂತೆ ಮಾಡಿದ್ದಾರೆ. ಒಟ್ಟಾರೆ ಇಡೀ ಕಾದಂಬರಿ ಹನ್ನೆರಡನೇ ಶತಮಾನದ ಶರಣ ಚಳುವಳಿಯ ಸಾಕ್ಷಿ ಪ್ರಜ್ಞೆಯಾಗಿ ಸಿದ್ದರಾಮನ ಪಾತ್ರ ಚಿತ್ರಿಸುವಲ್ಲಿ ಕೌಂಟೆಯವರು ಯಶ ಕಂಡಿದ್ದಾರೆ. ಐತಿಹಾಸಿಕ ಕಾದಂಬರಿ ಮೂಲ ಕಥನಕ್ಕೆ ಚ್ಯುತಿ ಬಾರದಂತೆ ೩೮೦ ಪುಟಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ವಸ್ತು, ತಂತ್ರ, ಭಾಷೆ,ಶೈಲಿ ಎಲ್ಲವೂ ಹೊಂದಿಕೆಯಾಗಿದ್ದು, ಅರ್ಥಪೂರ್ಣವಾಗಿ ಮೂಡಿಬಂದಿದೆ.


  • ಡಾ.ಶೈಲಜಾ ಎನ್.ಬಾಗೇವಾಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW