ಇದು ಸೀರೆಯ ವಿಷ್ಯಾ…

ಸೀರೆ ನಮ್ಮ ಸಂಸ್ಕೃತಿ. ಆ ಅಂದ ಚಂದವನ್ನು ಫ್ಯಾಷನ್ ಹೆಸರಿನಲ್ಲಿ ಹಾಳು ಮಾಡಬೇಡಿ. ಸೀರೆ ಎಂದರೆ ಕೇವಲ ಒಂದು ಬಟ್ಟೆಯಲ್ಲ. ಭಾವನೆಯ ಬುತ್ತಿ. ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು ಸೀರೆಯ ಕುರಿತು ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…

ಸೀರೆ ನಮ್ಮ ಸಂಸ್ಕೃತಿ. ಆಧುನಿಕ ಗುಂಗಿನಲಿ ಮಾಡದಿರಿ ವಿಕೃತಿ. ತಲೆ ಮಾರುಗಳಿಂದ ಬಂದ ಸೀರೆಯುಡುವ ವಿಧಾನವೇ ಸುಕೃತಿ. ನಿಜಾ, ಸೀರೆ ನಾರಿಗೆ ಬಹು ಚಂದ. ಭಾರತೀಯ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದ ಉಡುಗೆ. ಭಾರತೀಯ ಸಂಸ್ಕೃತಿಯನ್ನು ಸಾರುವ ಉಡುಗೆ ಕೂಡಾ ಹೌದು. ರಾಜ್ಯದಿಂದ ರಾಜ್ಯಕ್ಕೆ ಅಲ್ಪ ಸ್ವಲ್ಪ ಬದಲಾವಣೆಯಲ್ಲಿ ಸೀರೆಯುಡುವ ಶೈಲಿ ಇದೆಯಾದರೂ, ಅಲ್ಲಲ್ಲಿಯ ಆಚಾರ ವಿಚಾರಕ್ಕೆ ತಕ್ಕಂತೆ ಸೀರೆ ಉಡುತ್ತಾರೆ ಹೆಣ್ಣು ಮಕ್ಕಳು. ಹಾಗೇ ಒಂದೊಂದು ಕಡೆಗೆ ಒಂದೊಂದು ತರನಾದ ಸೀರೆಯ ಪ್ರಭೇದ ಕೂಡಾ. ರೇಶ್ಮೆ ಸೀರೆ, ಇಳಕಲ್ ಸೀರೆ ಹೀಗೇ ಬಹು ವಿಧಾವಳಿ ಸೀರೆಗಳಿವೆ. ಪಂಜಾಬಿ ಶೈಲಿ ಬೇರೆ, ಉತ್ತರ ಕರ್ನಾಟಕದ ಶೈಲಿ ಬೇರೆ. ಓರಿಸ್ಸಾ ಕಡೆ ಶೈಲಿ ಬೇರೆ. ಕೊಡಗಿನ ಶೈಲಿ ಬೇರೆ. ಕೇರಳದ ಕಡೆ ಶೈಲಿ ಬೇರೆ. ಎಷ್ಟು ತರತರಾವರಿ ಶೈಲಿಗಳ ಸಂಘಮವಾದರೂ, ಭಾರತೀಯತೆಯ ಕಿಚ್ಚಭಿಮಾನವ ಹೊತ್ತಿಸಿ, ಹೆಣ್ಣಿಗೆ ಪೂಜ್ಯ ಭಾವವ ನೀಡುವ ಉಡುಗೆ ಈ ಸೀರೆ.

ಫೋಟೋ ಕೃಪೆ :google

ಆಧುನಿಕತೆಯ ಗುಂಗಿನಲಿ ಮೈಮರೆತು, ಪಾಶ್ಚಿಮಾತ್ಯದ ಸಂಸ್ಕೃತಿಯ ಆಧರಿಸಿ, ಇಂದಿನ ಹೆಣ್ಣು ಮಕ್ಕಳು ಸೀರೆಯ ಪಾವಿತ್ರ್ಯವುಳ್ಳ ಗೌರವವನ್ನು ದುರುಪಯೋಗಕ್ಕೆ ಒಳಪಡಿಸುತ್ತಿರುವುದು ವಿಷಾದನೀಯ. ಹಣೆಗೆ ಬೊಟ್ಟು, ಕೈಗೆ ಬಳೆ, ಕಿವಿಗೆ ಓಲೆ, ಮೂಗಿಗೆ ನತ್ತು, ತಲೆ ಮೇಲೆ ಸೆರಗು ಹೊದ್ದ ಮಹಿಳೆಯನ್ನು ನೋಡಿದರೆ, ಎಂತ ಕಲ್ಲು ಮನಸ್ಸು ಕೂಡ ಕರಗಿ ಆ ಹೆಣ್ಣಿಗೆ ಪೂಜ್ಯತೆಯಲ್ಲಿ ಕೈ ಮುಗಿಯಬಲ್ಲದು ಅಂತ ಒಂದು ಶಕ್ತಿ ಈ ಸೀರೆಗಿದೆ. ಆದರೆ ಇಂದಿನ ಸಿನಿಮಾಗಳು ಕೂಡಾ ಹೆಣ್ಣಿಗೆ ಸೀರೆ ಯಾಕೆ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಅಂತ. ಸೀರೆಯನ್ನು ಮಾದಕವಾಗಿ ಬಳಸಿಕೊಳ್ಳುತ್ತಿರುವುದು ವಿಷಾಧನೀಯ.

ತೊಡುಗೆ ಯಾವುದೇ ಇರಲಿ. ಆದರೆ ನೋಡಿದರೆ ಗೌರವ ಉಕ್ಕುವಂತ ಉಡುಗೆ ತೊಡಬೇಕು. ಅನಿವಾರ್ಯತೆಯ ಜಂಜಾಟಗಳಿಗೆ ಸಿಕ್ಕಿ, ಧಾವಂತದ ನಾಗಾಲೋಟದ ಬದುಕಿನಲ್ಲಿ ಜೀನ್ಸ್, ಶರ್ಟ್, ಮಿಡಿ, ಚೂಡಿದಾರ್ ಗಳೇ ದಿನನಿತ್ಯ ಹಾಸುಹೊಕ್ಕಿ ಬಿಟ್ಟಿದೆ. ಮದುವೆ ಮನೆಗೂ ಆಧುನಿಕ ಧಿರಿಸುಗಳೇ ಕಾಲಿಕ್ಕುತ್ತಿರುವುದು ತುಂಬಾ ದುಃಖಕರ. ಸೀರೆ ಉಡಲೂ ಅದರದೇ ಆದ ರೀತಿ ನೀತಿಗಳಿವೆ, ಹಾಗೆ ಉಟ್ಟರೇ ಅದಕೊಂದು ಗೌರವ, ಮರ್ಯಾದೆ, ಅಂದ ಚಂದ. ಅದು ಬಿಟ್ಟು ಸೀರೆಯಲ್ಲೂ ಆಧುನಿಕವಾಗಿ  ಕಾಣಿಸಿಕೊಳ್ಳುವ ಇಂದಿನ ಯುವತಿಯರ ಪ್ಯಾಷನ್ ಹುಚ್ಚು, ಸೀರೆಯ ಗೌರವವನ್ನೇ ಮಣ್ಣು ಪಾಲು ಮಾಡುತ್ತಿದೆ. ಯಾವ ಧಿರಿಸನ್ನಾದರೂ ನೆಟ್ಟಗೆ ತೊಟ್ಟು ಕೊಳ್ಳುವವರೇ? ಇಂದಿನವರು. ಎಲ್ಲಾ ಹರಕು ಮುರುಕು. ಅದರಲ್ಲೂ ಸೀರೆಯನ್ನೂ ಎಳೆದು ಪ್ಯಾಷನ್ ಅಡಿಯಲ್ಲಿ ಸೀರೆಯ ನೈಜತೆಗೇ ಧಕ್ಕೆ ತರುತ್ತಿದ್ದಾರೆ. ಅರೆ ಬರೆ ಬಟ್ಟೆ ತೊಡುವ ಹೆಣ್ಣು ಮಕ್ಕಳಿಗೆ, ಸೀರೆಗಿರುವ ಅಮೂಲ್ಯ ಭಾವನೆಗಳ ಅರಿವಿರದು. ಆಧುನಿಕತೆಯ ಭರದ ಓಟದಲ್ಲಿ, ತಲತಲಾಂತರದಿಂದ ಬಂದ ಸೀರೆಯ ಚಂದದ ಸಂಸ್ಕೃತಿಯನ್ನು ವಿಕೃತಿಗೊಳಪಡಿಸಿ, ನಮ್ಮ ಚಂದದ ಸಾಂಸ್ಕೃತಿಕ ದಿವ್ಯ ಪರಂಪರೆಗೆ ಕಪ್ಪು ಚುಕ್ಕಿ ಇಡುತ್ತಿರುವುದು ತುಂಬಾ ಅವಮಾನಕರ.

ಫೋಟೋ ಕೃಪೆ :google

ಸೀರೆ ಮಕ್ಕಳ ಜೋಳಿಗೆಯಾಗಿ ಮಗುವಿನ ಸಿಂಬಳ ತೆಗೆವ ವಸ್ತ್ರವಾಗಿ, ದಣಿದು ಬರುವ ಗಂಡನ ಬೆವರ ಹನಿ ಒರೆಸುವ ಕೈ ವಸ್ತ್ರವಾಗಿ, ಮನೆಯೊಡತಿಯ ಬಿಡುವಿಲ್ಲದ ಕಾಯಕದಲ್ಲಿ ಕೈ ಒರೆಸುವ ಬಟ್ಟೆಯಾಗಿ. ಆಹಾ…ಸೀರೆ ನಿನಗೆ ನೀನೇ ಸಾಟಿ.

ಸೀರೆ ಅಂದರೆ ಒತ್ತರಿಸಿ ಬರುವ ಅಮ್ಮನ ನೆನಪು. ಸೀರೆ ಅಂದರೆ ಸಿರಿ ಸೌಭಾಗ್ಯವತಿಯಾಗಿ ಕಣ್ಣಿಗೆ ಕಟ್ಟುವ ಮನೆಯೊಡತಿಯ ನೆನಹುವ ಪತಿ. ಸೀರೆ ಎಂದರೆ ನಮ್ಮ ಭಾರತೀಯ ಸಂಸ್ಕೃತಿ ಸಾರುವ ಪೂಜ್ಯ ಭಾವದ ಗೌರವಯುತವಾದ ಹೆಣ್ಮಗಳ ಭಾವಚಿತ್ರ ಮೂಡುವ ಪರಿ. ಇಷ್ಟೊಂದು ಮೃದುಮಧುರ ಭಾವನೆಗಳ ಸಂಘಮ ಈ ಸೀರೆ. ಸೀರೆ ನಾರಿಗೆ ತರಲಿ ಶೋಭೆ. ನೆರಿಗೆ ಚಿಮ್ಮುವ ಸೀರೆ ಮನೆಯ ನಂದನವನಕೆ ಕಾರಣವಾಗಲಿ. ಯಾಕೆಂದರೆ ಸೀರೆ ನಮ್ಮ ಸಂಸ್ಕೃತಿ. ಆದರೆ ದಯವಿಟ್ಟು ಆಧುನಿಕ ಗುಂಗಿನಲಿ ಮಾಡದಿರಿ ವಿಕೃತಿ ವಿಲಕ್ಷಣ .


  • ಶೋಭಾ ನಾರಾಯಣ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading