ಶ್ರೀಕಾಂತ್ ಸಿನಿಮಾ ಬಯೋಪಿಕ್

ಶ್ರೀಕಾಂತ ಬೊಲ್ಲ ಅವರ ನೈಜ ಬದುಕಿನ ಚಿತ್ರಣವೇ ಶ್ರೀಕಾಂತ. ಲೇಖಕಿ ರಶ್ಮಿ ಉಳಿಯಾರು ಅವರು ಈ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬಹಳ ದಿನಗಳಿಂದ ಸಿನಿಮಾ‌ ನೋಡಿರಲಿಲ್ಲ. ಅದಕ್ಕೆ ಈ ವಾರಾಂತ್ಯ ಮೂರು ಸಿನಿಮಾ ನೋಡಿದೆ.‌ ಒಂದೇ ಸಲಕ್ಕೆ ಅಲ್ಲ, ಬಹಳಷ್ಟು ವಿರಾಮ ತೆಗೆದುಕೊಂಡು ಅಂತ ಪ್ರತ್ಯೇಕವಾಗಿ ಹೇಳಬೇಕಂತಿಲ್ಲ.

ಅವು ಸೂಕ್ಷ್ಮದರ್ಶಿನಿ, ಎ ಆರ್ ಎಂ ಮತ್ತು ಶ್ರೀಕಾಂತ್. ಮೊದಲೆರಡು ಕನ್ನಡದಲ್ಲೇ ನೋಡಿದ್ದು. ಹಾಗಾಗಿ ಜಾಸ್ತಿ ಅರ್ಥ ಆಯ್ತು. ಕೊನೆಯದ್ದು ಹಿಂದಿಯಲ್ಲೇ. ಎಲ್ಲವೂ ಚೆನ್ನಾಗಿದೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳು. ನಂಗೆ ಶ್ರೀಕಾಂತ್ ಜಾಸ್ತಿ ಇಷ್ಟ ಆಯ್ತು. ನೋಡುತ್ತಾ ಕಣ್ಣೀರು ಸಹ ಬಂತು. ನೈಜ ಬದುಕಿನ ನಾಯಕನ ಕಥೆ. ಮಚಲಿಪಟ್ಟಣದ ಕೆಳವರ್ಗದ ರೈತರ ಮಗ ಶ್ರೀಕಾಂತ ಬೊಲ್ಲ ಎಂಬಾತನು ತ್ಯಾಜ್ಯದಿಂದ ಪ್ಯಾಕಿಂಗ್ ಪೇಪರ್ ಕವರ್ ಮಾಡುವ ಉದ್ಯಮಿಯಾದ ಕಥೆ. ಏನು ವಿಶೇಷ ಅಂತೀರಾ? ಆತ ಹುಟ್ಟಿನಿಂದ ಅಂಧ ವ್ಯಕ್ತಿ. ಹತ್ತನೇ ಆದ ಮೇಲೆ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಲು ಯಾವ ಕಾಲೇಜುಗಳು ಸಹ ಒಪ್ಪದಾಗ ಕೋರ್ಟ್’ನಲ್ಲಿ ಸರಕಾರದೊಡನೆ ವಾದ ಮಾಡಿ ಗೆದ್ದು ೯೮ ಶೇಕಡಾ ಅಂಕ ಪಡೆದರೂ ಸಹ ಇಂಜಿನಿಯರಿಂಗ್ ಓದಲು ಭಾರತದಲ್ಲಿ ಅವಕಾಶ ಸಿಗದೇ ಬೋಸ್ಟನ್‌ನ ಎಂ.ಐ.ಟಿಯಲ್ಲಿ ಫ್ರೀ ಸ್ಕಾಲರ್ಶಿಪ್ ಪಡೆದು ಓದಿದವರು. ಅವರ ಆ ಹೋರಾಟದ ತದನಂತರದಲ್ಲಿ ಮಕ್ಕಳಿಗೆ ಬ್ರೈಲ್ ಲಿಪಿಯಲ್ಲಿ ಪಠ್ಯಪುಸ್ತಕಗಳು ಲಭ್ಯವಾದವು.

ಸಿನಿಮಾ ಅವರ ಬಯೋಪಿಕ್. ಇದರಲ್ಲಿ ಅವರ ಅಸಾಧಾರಣ ಬುದ್ಧಿಮತ್ತೆ, ಸ್ವಾರಸ್ಯಕರ ಮಾತಿನ ಶೈಲಿ, ಒಳ್ಳೆತನ, ಧೈರ್ಯ, ಯೂ ಕಾಂಟ್ ಅಂದದನ್ನು ವೈ ಕಾಂಟ್, ಐ ಕ್ಯಾನ್ ಅಂದು ಸಾಧಿಸಿ ತೋರಿಸುವ ಛಲ, ನಾನು ಹೀರೋ, ನನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ, ನಂಗೆ ಕಣ್ಣಿಲ್ಲ ಅಷ್ಟೇ, ನನ್ನ ದರ್ಶನ (vision) ಸರಿ ಇದೆ ಎಂಬ ಸಕಾರಾತ್ಮಕ ಮನೋಭಾವ…‌ಎಲ್ಲವನ್ನೂ ತೋರಿಸಿದಂತೆ ಒಂದು ಹಂತದಲ್ಲಿ ಅವರಿಗೆ ಹುಟ್ಟುವ ಧೋರಣೆಯ (attitude) ಸಮಸ್ಯೆ ಅದರಿಂದ ಉಂಟಾದ ಕಹಿ ಪರಿಸ್ಥಿತಿಗಳನ್ನು ಸಹ ಚಿತ್ರಿಸಲಾಗಿದೆ. ಯಾವುದಣೆ ವೈಭವೀಕರಣ ಇಲ್ಲ. ನಾಯಕನಾಗಿ ರಾಜ್ಕುಮಾರ್ ರಾವ್ ಅಭಿನಯ ಉತ್ಕೃಷ್ಟ. ‌ಅಂಧ ವ್ಯಕ್ತಿಯಂತೆ ಡೈಲಾಗ್ ಹೇಳುತ್ತಾ ನಟಿಸುವುದು ಸುಲಭವಲ್ಲ. ಅವರ ಗೆಳೆಯ ಹಾಗೂ ಪಾಲುದಾರ ರವಿ ಪಾತ್ರ ಬಹಳ ಮೆಚ್ಚುಗೆ ಮೂಡಿಸಿತು. ಎಷ್ಟೇ ನೋವಾದರೂ ಆತ ಶ್ರೀಕಾಂತ್ ನನ್ನು ಬಿಟ್ಟು ಹೋಗುವುದಿಲ್ಲ. ಇನ್ನು ಅಂಧ ಮಕ್ಕಳ ಶಿಕ್ಷಕಿ ದೇವಿಕಾ ಪಾತ್ರಧಾರಿ ಜ್ಯೋತಿಕಾ ಅಭಿನಯ ಚೆನ್ನಾಗಿದೆ. ಆಕೆ ನಿಜವಾದ ಅರ್ಥದಲ್ಲಿ ಶ್ರೀಕಾಂತ್ ಬಾಳಿನ‌ ಶಿಲ್ಪಿ‌. ಶ್ರೀಕಾಂತ್ ಅನ್ನು ಬಯಸಿ ಇಷ್ಟಪಡುವ ಸ್ವಾತಿ ಸಹ ಅವರ ಬದುಕಿನಲ್ಲಿ ಮಹತ್ವದ ಅರಿವನ್ನು ತರುತ್ತಾಳೆ. ಅದಕ್ಕೆಂದೇ ವಿಶೇಷ ವಿಭಾಗದಲ್ಲಿ ತಾನು ಕನಸು ಕಟ್ಟಿದ ಔದ್ಯೋಗಿಕ ಪ್ರಶಸ್ತಿ ಘೋಷಣೆ ಆದರೂ ವೇದಿಕೆಯಲ್ಲಿ ನಿರಾಕರಿಸುವ ಶ್ರೀಕಾಂತ್ ತನ್ನನ್ನು ರೂಪಿಸಿದ್ದು ತನ್ನ ಶಿಕ್ಷಕಿ, ಗೆಳೆಯ ಹಾಗೂ ಪ್ರೇಯಸಿ…‌ಇವರಂತಹವರು ಬದುಕಿನಲ್ಲಿ ಸಿಕ್ಕಿದರೆ ಬಹಳ ಜನ ಶ್ರೀಕಾಂತ್’ ನಂತಹವರು ಮೂಡಿ ಬರುತ್ತಾರೆ ಎನ್ನುತ್ತಾರೆ. ಸಾಮಾನ್ಯ ವಿಭಾಗದಲ್ಲಿ ಪ್ರಶಸ್ತಿ ಪಡೆದೇ ತೀರುತ್ತೇನೆ ಎನ್ನುತ್ತಾರೆ.

ನನಗೆ ಇವರ ಬಗ್ಗೆ ಏನೂ ಗೊತ್ತಿರಲಿಲ್ಲ. ಸಿನಿಮಾ‌ ನೋಡುತ್ತಲೇ ಹುಡುಕಿ ಮಾಹಿತಿ ಓದಿದೆ.‌ಅವರೊಬ್ಬ ಸ್ಪೂರ್ತಿದಾಯಕ ಮಾತುಗಾರ ಸಹ ಹೌದು. ಎಲ್ಲಕ್ಕಿಂತ ಮುಖ್ಯ ವಿಷಯ ಎಂದರೆ ಅವರು ಲೀಡ್ ಇಂಡಿಯಾ ೨೦೨೦ರಲ್ಲಿ ಭಾಗವಹಿಸಿ, ತಮ್ಮ‌ಉದ್ಯಮಕ್ಕೆ ಡಾ. ಅಬ್ದುಲ್ ಕಲಾಂರಿಂದ ಮೊದಲ ಬಂಡವಾಳ ಪಡೆದಿದ್ದರು ಮಾತ್ರವಲ್ಲದೆ ತಾವು ಮುಂದೆ‌ ಒಂದು ದಿನ ಭಾರತದ ಮೊದಲ ದೃಷ್ಟಿ ಹೀನ ರಾಷ್ಟ್ರಪತಿ ಆಗುವ ಕನಸನ್ನು ಕಲಾಂರಲ್ಲಿ ಹಂಚಿಕೊಂಡಿದ್ದರು.

ಸಿನಿಮಾ ಮಕ್ಕಳೊಂದಿಗೆ ಖಂಡಿತವಾಗಿ ನೋಡಬಹುದಾಗಿದೆ. ಮತ್ತು ಯಾವುದೇ ವಯಸ್ಕರ ದೃಶ್ಯಗಳಿಲ್ಲ. ಮನೋಜ್ಞವಾಗಿ ಮೂಡಿ ಬಂದಿದೆ. ಮಕ್ಕಳು ನೋಡಲೇಬೇಕಾದ ಸಿನಿಮಾ‌ ಇದು. ಶ್ರೀಕಾಂತ್ ಅವರ ಏನನ್ನಾದರೂ ಸಾಧಿಸಲು ದೈಹಿಕ ವಿಕಲತೆಯೊಂದು ಅಡ್ಡಿಯಲ್ಲ ಎಂಬ ಅದಮ್ಯ ಸಾಹಸಿ ಮನೋಭಾವ ಬಹಳ ಇಷ್ಟವಾಯಿತು.


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW