‘ದಿವ್ಯ ಅಸ್ಮಿತೆಯು ನೀನೆಮಗೆ ರಾಮ’ ಕವನ

ಸತ್ಯ ಪಾಲನೆಗೆ ಧೃತಿಗೆಡದ ರಾಮ, ನಿತ್ಯ ನಿರ್ಮಲ ನರಶ್ರೇಷ್ಠ ರಾಮ… ರಾಮನ ಜಪದಲ್ಲಿ ರಚನೆಯಾದ ಕವಿಯತ್ರಿ ಪ್ರಭಾವತಿ ಹೆಗಡೆ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ….

ಇನಕುಲ ಕಣ್ಮಣಿ ಶ್ರೀ ರಘುರಾಮ |
ಜನಕಜೆ ವಲ್ಲಭನೆ ಜಯ ಜಯ ರಾಮ ||

ಅಗಣಿತ ಗುಣನಿಧಿ ಕೋದಂಡರಾಮ |
ಅಘವೆಲ್ಲ ಕಳೆವ ಕರುಣಾಳು ರಾಮ |
ಅರಿಗಳ ತರಿಯಲು ಬಾ ಮತ್ತೆ ರಾಮ |
ಭರತಭೂಮಿಯನು ಉದ್ಧರಿಸು ರಾಮ ||

ಸತ್ಯ ಪಾಲನೆಗೆ ಧೃತಿಗೆಡದ ರಾಮ |
ನಿತ್ಯ ನಿರ್ಮಲ ನರಶ್ರೇಷ್ಠ ರಾಮ |
ಸದಮಲಚರಿತನೆ ಬಾ ಮತ್ತೆ ರಾಮ |
ಮದಿಸಿದ ಅಹಮಿಕೆಯ ಮರ್ದಿಸು ರಾಮ ||

ಅತುಲಿತ ಸಂಯಮಿ ಧರ್ಮಿಷ್ಠ ರಾಮ |
ಋತವಂತ ಸತ್ಕುಲ ದೀಪಕ ರಾಮ |
ದುರುಳರ ಶಿಕ್ಷಿಸು ಬಾ ಮತ್ತೆ ರಾಮ |
ಮೆರೆಯುವ ದನುಜರ ನಿಯಂತ್ರಿಸು ರಾಮ ||

ರಮಣೀಯ ಕಾಯ ಹಸನ್ಮುಖಿ ರಾಮ |
ಸಮಚಿತ್ತಶೀಲ ಸುಜ್ಞಾನಿ ರಾಮ |
ತಮಗಳ ಕರಗಿಸು ಬಾ ಮತ್ತೆ ರಾಮ |
ವಿಮಲಭಾವಗಳ ವರ್ಧಿಸೋ ರಾಮ ||

ನಿನಗರ್ಪಿಸುವೆವು ಧಾಮವನು ರಾಮ |
ಘನ ಮಹಿಮ ಇದನು ಒಪ್ಪಿಸಿಕೊ ರಾಮ |
ಅಭಿಮಾನದುತ್ಸವ ನಿನಗಿಂದು ರಾಮ |
ಸುಭಿಕ್ಷವಾಗಿರಿಸು ನಾಡನ್ನು ರಾಮ ||

ನಾಮ ಗಾನಗಳ ಲಾಲಿಸೋ ರಾಮ |
ಕಾಮಿತಾರ್ಥಗಳ ನೀ ನೀಡು ರಾಮ |
ಮನ್ನಿಸಿ ಲೋಪವ, ನೀ ಹರಸು ರಾಮ |
ನಿನ್ನಂತಃಶಕ್ತಿಯ ಕರುಣಿಸು ರಾಮ ||

ದಿವ್ಯ ಅಸ್ಮಿತೆಯು ನೀನೆಮಗೆ ರಾಮ |
ಭವ್ಯ ಮಂದಿರದೊಳು ರಾಜಿಸು ರಾಮ |
ಜನಮನದ ಹೃದಯದಿ ನೀ ನೆಲೆಸು ರಾಮ |
ಅನವರತ ಈ ನೆಲವ ರಕ್ಷಿಸು ರಾಮ ||


  • ಪ್ರಭಾವತಿ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW