ಲೇಖಕಿ ವಸುಧಾ ಪ್ರಭು ಅವರ ” ಮುಂಬೈ ಜೀವನ” ಕಾದಂಬರಿ ಕುರಿತು ಸಿದ್ದ ವೈದ್ಯೆರಾದ ನಾಗರತ್ನ ಜಿ ರಾವ್ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಓದಿ….
ಪುಸ್ತಕ : ಮುಂಬೈ ಜೀವನ
ಲೇಖಕಿ : ವಸುಧಾ ಪ್ರಭು
ಪ್ರಥಮ ಮುದ್ರಣ : 2023.
ಪ್ರಕಾಶಕರು : ಹೆಚ್.ಎಸ್.ಆರ್.ಎ ಪ್ರಕಾಶನ.
ಬೆಲೆ : 200.00
‘ಹೆಜಮಾಡಿಯ ಕೊಂಕಣಿ ಹುಡುಗಿ, ಮುಂಬೈನ ಮರಾಠಿಯಾಗಿ, ಬೆಂಗಳೂರಿನ ಕನ್ನಡತಿಯಾದ ಎಂಬತ್ತಾರು ಹಂತಗಳ ಚಿತ್ರಣ ‘ಮುಂಬೈ ಜೀವನ”.
ಎಲೆಮರೆಯಕಾಯಂತಿದ್ದ ವಸುಧಾಪ್ರಭು ಝಗಮಗಿಸುವ ವೇದಿಕೆಯಲ್ಲಿ ಅತಿಥಿಗಳೊಂದಿಗೆ ಕುಳಿತು ಸನ್ಮಾನ ಸ್ವೀಕರಿಸುವ ಸಾಧಕಿಯಾಗುತ್ತಾರೆ.ಈ ವಿಕ್ರಮನ ಹೆಜ್ಜೆಗಳು ಒಮ್ಮೆಗೇ ಬಂದುದ್ದಲ್ಲ.ಅವರ ತಾಳ್ಮೆ, ಸಂಯಮ, ಹೊಂದಾವಣಿಕೆ, ಬದುಕನ್ನು ಪ್ರೀತಿಸಬೇಕೆಂಬ ಛಲ ಅವರ ಜೀವನವನ್ನು ಗೆಲ್ಲಿಸಿರುವುದನ್ನು ಈ ಯಶೋಗಾಥೆಯಲ್ಲಿ ಕಾಣಬಹುದು.
ಹೆಜಮಾಡಿಯ ದೊಡ್ಡ ಮನೆಯಿಂದ ಬಂದ ಹುಡುಗಿಗೆ ಮುಂಬೈನ ಕೋಣೆಗಳೇ ಇಲ್ಲದ ಚಾಳ್ ಅಚ್ಚರಿ ತರಿಸುತ್ತದೆ. ಆದರೆ ಮುಂಬೈನ ಜೀವನಾಡಿಯೇ ಈ ಚಾಳ್ಗಳು ಎಂದು ಅರಿತ ಹುಡುಗಿ ಬದುಕಲು ಕಲಿಯುತ್ತಾಳೆ.
ಮರಾಠಿ ಭಾಷೆ ಗೊತ್ತಿಲ್ಲದ ಬಾಲೆ ಕೇಳುಕೇಳುತ್ತಲೇ ಭಾಷೆ ಕಲಿತು ಹೊಲಿಗೆ, ಭವಿಷ್ಯ ಹೇಳುವುದು, ಫಸ್ಟ ಏಯ್ಡ, ನಟನೆ ರೇಖಿ, ನಿರ್ದೇಶನವನ್ನೂ ಕಲಿಯುತ್ತಾಳೆ. ತನ್ನ ಜೀವನದ ಸಾಕಾರ ಅನ್ಯರನ್ನು ಶೃಂಗರಿಸಿರುವುದರಲ್ಲಿರುವ ಆನಂದದಲ್ಲಿದೆ ಎಂದು ಕಂಡುಕೊಂಡು ಬ್ಯೂಟೀಷಿಯನ್ ಆಗುತ್ತಾಳೆ. ಹಂತಹಂತಕ್ಕೂ ಆಡಿಕೆಯ ಮಾತುಗಳಿದ್ದರೂ ಧೃಡತೆಯಿಂದ ಬ್ಯೂಟಿ ಪಾರ್ಲರ್ ತೆರೆದು ಸಾಧಕಿಯರ ಸಾಲಿಗೆ ಸೇರುವ ಕಥೆ ರೋಮಾಂಚನಗೊಳಿಸುತ್ತದೆ.
‘ಮುಂಬೈ ಜೀವನ’ ಕಾದಂಬರಿ ಲೇಖಕಿ ವಸುಧಾ ಪ್ರಭು
ಸಾವಿಗೆ ಮುಖಾ ಮುಖಿಯಾಗುವ ಬೆಂಕಿಯ ಅವಘಡ ಭಯ ತರಿಸುತ್ತದೆ. ಸತ್ಸಂಗದ ಹೆಸರಿನಲ್ಲಿನ ವಿಷವರ್ತುಲಕ್ಕೆ ಸಿಲುಕಿ ಹೊರಬರಲಾಗದೆ ಚಡಪಡಿಸುವುದನ್ನು ಓದುವಾಗ ಓದುಗರಿಗೆ ತಾವೇ ಬಂಧಿಗಳೇನೋ ಎನಿಸುತ್ತದೆ.
ಸರಳಭಾಷೆಯಲ್ಲಿ ಮುಂಬೈಜೀವನದ ತಳುಕು ಬಳಕುಗಳು, ನಿರ್ಮಲ ಕಲ್ಮಶಗಳು, ಆಗು ಹೋಗುಗಳ ಬಗೆಗಿನ ಅದ್ಬುತ ಚಿತ್ರಣವನ್ನು ನೀಡಿರುವ ವಸುಧಾಪ್ರಭುರವರಿಗೆ ಅಭಿನಂದನೆಗಳು
- ನಾಗರತ್ನ ಜಿ ರಾವ್