ಅಮೇರಿಕಾ ದೇಶವನ್ನು ಹನ್ನೆರಡು ಬಾರಿ ಸುತ್ತಿರುವ ಲೇಖಕಿ ಡಾ.ಡಿ.ಮಂಗಳ ಪ್ರಿಯದರ್ಶಿನಿ ಅವರಿಗೆ ಇಷ್ಟವಾಗಿದ್ದು ಆಫ್ರಿಕಾ ದೇಶ, ‘ನಾ ಕಂಡ ಉಗಾಂಡ’ ಕೃತಿಯಲ್ಲಿ ಅವರ ಪ್ರವಾಸ ಕಥನದ ಅನುಭವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ನಾ ಕಂಡ ಉಗಾಂಡ
ಲೇಖಕರು :ಡಾ.ಡಿ.ಮಂಗಳ ಪ್ರಿಯದರ್ಶಿನಿ
ಪ್ರಕಾಶನ : ಸ್ವಪ್ನ ಪ್ರಕಾಶನ
ಪ್ರಕಾರ : ಪ್ರವಾಸ ಕಥನ
ಬೆಲೆ : ೩೫೦.೦೦
ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ , ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು. ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ ಆ ದೇಶವನ್ನು ಕುರಿತಂತೆ ಪ್ರವಾಸ ಕಥನ ಬರೆದಿಲ್ಲ. ಟೂರಿಸಂ ಸೌಲಭ್ಯವಿರುವ ಅಮೇರಿಕಾ, ಯುರೋಪ್, ಸಿಂಗಾಪುರ , ಮಲೇಷಿಯಾ , ಕೆನಡಾ , ಜಪಾನ್, ಚೀನಾ, ಶ್ರೀಲಂಕಾ, ಈಜಿಪ್ಟ್ – ಮುಂತಾದ ದೇಶಗಳಿಗೆ ಪ್ರವಾಸ ಮಾಡುವುದು ಸುಲಭ. ನಾನು ಈ ನಾಡುಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇನೆ . ಆಫ್ರಿಕಾ ದೇಶಗಳಿಗೆ ಟೂರಿಸಂ ಇಲ್ಲ. ನಾವೇ ಸುತ್ತಿ ಬರಲು ಬಹಳಷ್ಟು ಖರ್ಚು- ವೆಚ್ಚ.

ನನಗೆ ಆಫ್ರಿಕಾ ದೇಶಗಳಿಗೆ ಹೋಗಿ ತಿಂಗಳಾನುಗಟ್ಟಲೆ ಪ್ರವಾಸಿ ಪರಿಧಿಯನ್ನು ಮೀರಿ ಉಳಿದುಕೊಳ್ಳುವ ಅಪರೂಪದ ಅವಕಾಶಗಳು ದೊರೆತವು . ಈ ಹಿನ್ನೆಲೆಯಲ್ಲಿ ನನ್ನ ‘ ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು ‘ – ತಾಂಜಾನಿಯಾ ಪ್ರವಾಸ ಕಥನ, ಪ್ರಿಯ ಗೆಳತಿ ಡಾ ಆರ್ ಪೂರ್ಣಿಮಾ ಅವರ ವಿಕಾಸ ಪ್ರಕಾಶನದಿಂದ ಮೂಡಿ ಬಂದಿತ್ತು . ಅದರ ಬೆನ್ನಲ್ಲೇ ಮತ್ತೊಂದು ಆಫ್ರಿಕಾ ದೇಶ ಉಗಾಂಡ, ನನಗೆ ಅಪರೂಪದ ಅನುಭವಗಳನ್ನು ನೀಡಿದೆ . ಅದೇ ‘ ನಾ ಕಂಡ ಉಗಾಂಡ ‘ , ಪ್ರವಾಸ ಕಥನವಾಗಿ ಮೂಡಿ ಬಂದಿದೆ.

ಇದೊಂದು ವೈವಿಧ್ಯಮಯ ನಾಡು , ವೈಪರಿತ್ಯಗಳನಾಡು , ವಿರೋಧಾಭಾಸಗಳ ನಾಡು . ಹನ್ನೊಂದು ರಾಷ್ಟಗಳಲ್ಲಿ ಹರಿದು ಜನತೆಯ ಹಸಿವನ್ನು ಹಿಂಗಿಸಿ ಸದಾ ಸೃಷ್ಟಿಶೀಲ ನದಿಯಾಗಿ
ಹರಿಯುವ ಮಹಾನದಿ ನೈಲ್ ಗಂಗೆ ಹುಟ್ಟುವ ನಾಡಾಗಿ , ‘ ಮನುಷ್ಯನ ರಕ್ತ ಉಪ್ಪುಪ್ಪು ‘ ಎಂದ ನರಭಕ್ಷಕ ಈದೀ ಅಮೀನನಂಥ ಕ್ರೂರಿಯ ಅಡಳಿತಕ್ಕೆ ಸಿಕ್ಕು ನುಚ್ಚು ನೂರಾದ ಉಗಾಂಡ ಅದೆಷ್ಟೋ ನಿಗೂಢ , ಕ್ರೂರ , ಅಮಾನವೀಯ ಆಚರಣೆಗಳ ತವರೂರು . ಈ ಕೃತಿ ಕ್ವೀನ್ ಎಲಿಜಬತ್ ರಾಷ್ರೀಯ ಉದ್ಯಾನ ವನ , ಭೂ ಮಧ್ಯ ರೇಖೆ , ಪರ್ವತ ಗೊರಿಲ್ಲ ರಾಷ್ಟ್ರೀಯ ಉದ್ಯಾನ ವನ , ಕ್ರೇಟರ್ ಕುಳಿಗಳು , ಸಾಗರದಂಥ ವಿಕ್ಟೇರಿಯಾ ಸರೋವರ …”.
ಹೀಗೆ – ಈ ನಾಡಿನ ಅನೇಕ ವಿಶೇಷತೆಗಳ ಮೇಲೆ ಬೆಳಕು ಚೆಲ್ಲುವ ಬಗಂಡಾ ಸಂಸ್ಕೃತಿಯ ಕಥಾನಕವಾಗಿದೆ. ನಾನ್ನೂರಾ ಹದಿನಾಲ್ಕು ಪುಟಗಳ ಉಗಾಂಡ ಸಾಂಸ್ಕೃತಿಕ ಕಥನ , ಸಪ್ನಾ ಬುಕ್ ಹೌಸಿನಿಂದ , ಚ .ಹ ರಘುನಾಥ ಅವರ ಬೆನ್ನುಡಿಯೊಂದಿಗೆ ಪ್ರಕಟಗೊಂಡಿದೆ , ಎಂದು ತಿಳಿಸಲು ಸಂತಸವಾಗಿದೆ.
- ಡಾ.ಡಿ.ಮಂಗಳ ಪ್ರಿಯದರ್ಶಿನಿ
