‘ವಯಸು ತೊಂಬತ್ತಾಯ್ತು’ ಕವನ

ಎರಡು ಮಕ್ಕಳ ಹೆತ್ತು ಬೆಳೆಸಿದ್ದೆ ಧೈರ್ಯದೊಳು ಯಾರ ಹಂಗಿಗು ನಾನು ಸಿಲುಕದೇನೆ, ಬೆಳೆದ ಮಕ್ಕಳು ನನ್ನೆ ದೂಡಿ ದಿಕ್ಕರಿಸಿರಲು ಮತ್ತೆ ಮೈಕೊಡುವುತಲಿ ಎದ್ದೆ ನಾನೆ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ವಯಸು ತೊಂಬತ್ತಾಯ್ತು….
ಯಾರಿಗೆ ಅಂತೀರಾ?
ಹಾಗಿದ್ರೆ ಮುಂದೆ ನೀವೇ ಓದಿ
ಓದಿದವರು ಕಡ್ಡಾಯವಾಗಿ ಕಮೆಂಟ್ ಮಾಡಲೇಬೇಕು.
ಕವಿತೆಯೊಳಡಗಿರುವ ಗೂಢ ಭಾವಾರ್ಥವನ್ನು ಒಂದೆರಡು ಸಾಲಿನಲ್ಲಿ ಬರೆಯಿರಿ.

ವಯಸು ತೊಂಬತ್ತಾಯ್ತು ಜವರಾಯ ಬರಲಿಲ್ಲ
ಬೇಸರದಿ ಮುನಿಸಿಕೊಂಡಿರುವನೇನೊ
ಹದಿಹರೆಯದವರನ್ನೆ ಹೊತ್ತೊಯ್ಯುತಿಹನಲ್ಲ
ಹಳೆಮುದುಕಿಯೆಂದೆನುತ ಮರೆತನೇನೊ

ಹದಿನೆಂಟು ಹರೆಯಕ್ಕೆ ಬಂದು ಕಂಕಣ ಭಾಗ್ಯ
ಮುಂದೈದು ವರ್ಷಕ್ಕೆ ಮಕ್ಕಳೆರಡು
ಮುಂದೆರಡು ವರ್ಷಗಳು ಉರುಳಿ ಸಾಗಿರಲಾಗಿ
ಪತಿರಾಯ ಜೊತೆಗಿಲ್ಲ ಬಾಳು ಬರಡು

ಎರಡು ಮಕ್ಕಳ ಹೆತ್ತು ಬೆಳೆಸಿದ್ದೆ ಧೈರ್ಯದೊಳು
ಯಾರ ಹಂಗಿಗು ನಾನು ಸಿಲುಕದೇನೆ
ಬೆಳೆದ ಮಕ್ಕಳು ನನ್ನೆ ದೂಡಿ ದಿಕ್ಕರಿಸಿರಲು
ಮತ್ತೆ ಮೈಕೊಡುವುತಲಿ ಎದ್ದೆ ನಾನೆ

ಬಿರುಬಿಸಿಲು ಛಳಿಮಳೆಯು ಮೇಲೆರಗಿ ಬಂದರೂ
ಬಾಳಿ ಬದುಕಿದೆನಲ್ಲ ಒಬ್ಬಳೇನೆ
ಸುಖದುಃಖವೆರಡನ್ನು ಉಂಡು ಬೀಗಿದೆನಿನ್ನು
ಕಾದಿಹೆನು ಜವರಾಯ ಕರೆಯನೇನೆ.

ಬಾಳಿ ಬದುಕುವ ಮಂದಿ ಕಷ್ಟಗಳನೆದುರಿಸದೆ
ಕೊಡುತಿಹರು ಕೊರಳನ್ನೆ ನೇಣಿಗೇನೆ
ಸುಖದುಃಖವೆದುರಿಸುತ ನನ್ನ ನೋಡುತ ಬಾಳಿ
ಇನ್ನೊಮ್ಮೆ ಜವನನ್ನು ಕರೆಯದೇನೆ.


  • ಚನ್ನಕೇಶವ ಜಿ ಲಾಳನಕಟ್ಟೆ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading