ಈಗೋ ಬಿಟ್ಟು ಈಶಾಕ್ಕೆ ಹೊರಡಿ

ಕೊಯಂಬತ್ತೂರಿನ ಈಶಾ ಫೌಂಡೇಶನ್ ಆವರಣ ಬಹಳ ವಿಸ್ತಾರವಾದದ್ದು. ಶಿವನ ಮೂರ್ತಿಯ ಮೇಲೆ ಲೇಸರ್ ಶೋನ ನೆರಳು ಬೆಳಕಿನ ಆಟ ಇನ್ನಷ್ಟು ರೋಮಾಂಚನ ಹುಟ್ಟಿಸುತ್ತದೆ. ಲೇಖಕರಾದ ಕವಿತಾ ಹೆಗಡೆ ಅಭಯಂ ಅವರು ನೆನಪಿನಂಗಳದಲ್ಲಿ ಈಶಾ ಫೌಂಡೇಶನ್, ತಪ್ಪದೆ ಮುಂದೆ ಓದಿ…

ಕೊಯಂಬತ್ತೂರಿನ ಈಶಾ ಫೌಂಡೇಶನ್ನಿಗೆ ಹೋಗುವಾ ಎಂದು ಮಗಳು ಐದು ವರ್ಷಗಳಿಂದ ಹೇಳುತ್ತಿದ್ದರೂ ಹೇಗೋ ಮುಂದೆ ಹೋಗುತ್ತಲೇ ಇತ್ತು. ಅಂತೂ ಕೊನೆಗೆ ಒಂದೇ ದಿನದಲ್ಲಿ ಎಲ್ಲವೂ ಥಟ್ ಅಂತ ಕೈಗೊಡಿಬಿಟ್ಟಿತು.

ಅವತ್ತು ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ತಲುಪಬೇಕೆಂದರೆ ಹುಬ್ಬಳ್ಳಿಯಲ್ಲಿ ನಭೂತೋ ನ ಭವಿಷ್ಯತಿ ಅನ್ನುವಂಥ ಟ್ರಾಫಿಕ್; ಅದರಲ್ಲಿ ಸಿಕ್ಕಿಕೊಂಡು ಅಂತೂ ಇಂತೂ ಸ್ಟೇಷನ್ ಸೇರಿದರೆ ನಮ್ಮ ಪ್ರೀತಿಯ ವಂದೇ ಭಾರತ್ ಹೊರಡಲಿಕ್ಕೆ ಸಿದ್ಧವಾಗಿತ್ತು. ಹತ್ತಿದ ತಕ್ಷಣವೇ ಹೊರಟೇ ಬಿಟ್ಟಿತು. ಒಂದೇ ಸೆಕೆಂಡ್ ಹೆಚ್ಚಾಗಿದ್ದರೂ ಇಡೀ ಟ್ರಿಪ್ ಉಲ್ಟಾಪಲ್ಟಾ ಆಗುತ್ತಿತ್ತು! ಕಡೇ ಕ್ಷಣದಲ್ಲಿ ಬೇರೆ ಆಯ್ಕೆ ಕೂಡ ಇರಲಿಲ್ಲ. ಬೆಂಗಳೂರಿನಿಂದ ಕೊಯಂಬತ್ತೂರು ಸೇರಿ ಈಶಾದ ನೆಲದಲ್ಲಿ ನಮ್ಮ ಪುಟ್ಟ ಹೆಜ್ಜೆಯನ್ನೂ ಇಟ್ಟೆವು.

ಮೊದಲ ನೋಟದಲ್ಲೇ ಮನಸೊರೆಗೊಳ್ಳುವ ದಕ್ಷಿಣದ ಹಿಮಾಲಯ ಎಂದೇ ಖ್ಯಾತವಾದ ವೆಲ್ಲಿಯಂಗಿರಿ ಪರ್ವತಶ್ರೇಣಿ ಎಂಥವರನ್ನೂ ಕರಗಿಸಿಬಿಡುತ್ತದೆ. ಮಲಯ ವಸಲ್ ಎನ್ನುವ ನಾಗ ದ್ವಾರ ದಾಟಿ ಚೆಕಿನ್ ಮುಗಿಸಿ ನಮ್ಮ ಕಾಟೇಜು ಸೇರಿದ ತಕ್ಷಣವೇ ಅದೆಷ್ಟು ಸಂತೋಷವಾಯಿತು! ಎಷ್ಟು ಅಚ್ಚು ಕಟ್ಟು, ಶುಭ್ರ ಮತ್ತು ದಿವ್ಯ ಭಾವ! ಅಲ್ಲಿ ಹೊರಗಿಟ್ಟ ಸ್ಟ್ಯಾಂಡಿನಲ್ಲಿ ನಮ್ಮ ಶೂಸ್ ಬಿಟ್ಟೇ ಹೊರಟೆವು.

ಈಶಾ ಆವರಣ ಬಹಳ ವಿಸ್ತಾರವಾದದ್ದು. ಕಾಟೇಜ್ ನಿಂದ ನಡೆದು ತಲುಪುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ ನಮ್ಮ ವಾಸದತ್ತ ಬರುವ EV ಶಟಲ್ ನಲ್ಲಿ ಕುಳಿತು ಧ್ಯಾನಸ್ಥ ಭಾವದಲ್ಲಿ ವೆಲ್ಕಮ್ ಪಾಯಿಂಟ್ ತಲುಪಿ ಅಲ್ಲಿಂದ ಬೇಕಾದ ಸ್ಥಾನದತ್ತ ನಡೆದೇ ತೆರಳುವುದು ಪದ್ಧತಿ ಮತ್ತು ಚೆಂದದ ಅನುಭವ ಕೂಡ. ಬರಿಗಾಲಿನಲ್ಲಿ ಅಷ್ಟೆಲ್ಲ ಓಡಾಡದ ನಾವು ಅಲ್ಲಿರುವಷ್ಟು ಕಾಲ ಚಪ್ಪಲಿಯನ್ನೇ ಮರೆತು ಹಾಗೆಯೇ ಓಡಾಡಿದ್ದು, ದೊಡ್ಡ ದೊಡ್ಡ ಮೆಟ್ಟಿಲುಗಳನ್ನು ಸಲೀಸಾಗಿ ಏರಿದ್ದು, ಮೊಬೈಲಿನ ಹಂಗೇ ಇಲ್ಲದ ಓಡಾಟ ಮಾಡಿದ್ದು ಬಹಳ ಖುಷಿಯ ಸಂಗತಿ.

ಫೋಟೋ ಕೃಪೆ : ಅಂತರ್ಜಾಲ

ಚಂದ್ರ ಕುಂಡದ ಸ್ನಾನ ಸ್ತ್ರೀಯರಿಗೆ ಮತ್ತು ಸೂರ್ಯ ಕುಂಡದ ಸ್ನಾನ ಪುರುಷರಿಗೆ; ಒಳಗಿನ ಕಣ್ಣು ತೆರೆಸಲು ಇವು ಬಹಳ ಶಕ್ತವಾಗಿವೆ. ಒಮ್ಮೆ ಜೀವನದಲ್ಲಿ ಅನುಭವಿಸಲೇಬೇಕಾದ ಪಾದರಸದ ನೀರಿರುವ ಈ ಪುಣ್ಯ ಸ್ನಾನ ಅವಿಸ್ಮರಣೀಯವಾದದ್ದು. ಆಮೇಲೆ ನೋಡಲೇಬೇಕಾದದ್ದು ಸದ್ಗುರು ಸ್ವತಃ ಧ್ಯಾನಲಿಂಗವನ್ನು ಪ್ರಾಣ ಪ್ರತಿಷ್ಠಾಪನೆ ಮಾಡಿದ ಗುಮ್ಮಟದೊಳಗಿನ ಧ್ಯಾನಲಿಂಗದ ರಚನೆ. ಇದಂತೂ ಬಹಳ ಸುಂದರ, ಅನನ್ಯವಾದದ್ದು. ಅಲ್ಲಿನ ಎತ್ತರದ ಶಿವಲಿಂಗ, ಸುತ್ತ ಉರಿವ ಜ್ಯೋತಿಗಳು, ಮೌನವಾಗಿ ಧ್ಯಾನನಿರತ ಸಾಧಕರು ಅರೆಕ್ಷಣದಲ್ಲಿ ಆ ಸ್ಥಾನದ ಮಹತ್ವವನ್ನು ಸಾರಿಬಿಡುತ್ತವೆ.

ಅಲ್ಲಿ ಲಿಂಗದ ಮುಂದೆ ಕುಳಿತು ಕಣ್ಮುಚ್ಚಿದ ಮರುಗಳಿಗೆಯಲ್ಲಿ ಯಾರೋ ಸಂಮೋಹಿನಿಗೊಳಪಡಿಸಿದ ಹಾಗೆ ಅದ್ಭುತ ಆನಂದಲೋಕವೊಂದು ತೆರೆದುಕೊಂಡಿತು. ಹದಿನೈದು ನಿಮಿಷಗಳಾಗಿರಬೇಕು, ಈಶಾದ ಸ್ವಯಂಸೇವಕರೊಬ್ಬರು ಈಗ ನಾದಾರಾಧನೆ ಶುರುವಾಗುತ್ತದೆ, ಆಗ ಸುಮಾರು ಇಪ್ಪತ್ತೈದು ನಿಮಿಷ ಇಲ್ಲೇ ಇರಬೇಕು, ಹೊರ ಹೋಗುವುದಾದಲ್ಲಿ ಮೊದಲೇ ತೆರಳಬಹುದು ಎಂದು ತುಂಬಾ ಆಪ್ತ ಹಾಗೂ ಮೆಲು ದನಿಯಲ್ಲಿ ಉಸುರಿದರು. ಧ್ಯಾನಸ್ಥಳಾದ ನನಗೆ ಏಳುವುದೇ ಸಾಧ್ಯವಿರಲಿಲ್ಲ. ಓಂಕಾರದಿಂದ ಆರಂಭವಾದ ನಾಧಾರಾಧನೆ ಸಂಗೀತ ಸೃಷ್ಟಿಸಬಹುದಾದ ಪರಮ ದಿವ್ಯ ವಾತಾವರಣವೊಂದನ್ನು ದರ್ಶಿಸಿತು. ಅಷ್ಟು ಹೊತ್ತೂ ನನ್ನ ಕಣ್ಣುಗಳು ನಿಜಕ್ಕೂ ಹೊಲಿದ ಹಾಗಿದ್ದವು. ಇಂಥ ಪರಮಾನಂದದ ಸ್ಥಿತಿಯ ಅನುಭವ ಕೆಲವೇ ಕೆಲವು ಶಕ್ತಿ ಸ್ಥಳಗಳಲ್ಲಿ ಮಾತ್ರ ಆಗುತ್ತದೆ. ನಾದಾರಾದನೆ ಪೂರ್ತಿ ಮುಗಿದ ಮೇಲೆ ಮಾತ್ರವೇ ನನಗೆ ಕಣ್ಣು ತೆರೆಯಲು ಸಾಧ್ಯವಾಯಿತು. ದೇಹ – ಮನಸ್ಸುಗಳ ಐಕ್ಯತೆಯ ತಾಣವಾದ ಪರಮಪ್ರಿಯ ಧ್ಯಾನ ಲಿಂಗವನ್ನು ಬಿಟ್ಟು ಅಲ್ಲಿಂದ ಹೊರಬರುವುದು ಬಹಳ ಕಠಿಣ ಎನಿಸಿತು.

ಮುಂದೆ ಅಲ್ಲಿಂದ ಲಿಂಗ ಭೈರವಿಯ ದಿವ್ಯ ಭವ್ಯ ಆರತಿಯನ್ನು ನೋಡಿ ಧನ್ಯ ಭಾವ ತಾಳಿ ಮೌನವಾಗಿ ನಡೆದೇ ನಡೆದು ಆದಿಯೋಗಿಯ ಬೃಹತ್ ಮೂರ್ತಿಯ ಎದುರು ವಿಸ್ಮಯಭರಿತ ಭಾವದಲ್ಲಿ ನಿಂತ ಕ್ಷಣ ಅಮೂಲ್ಯವಾದದ್ದು.

ಶಿವನ ಮೂರ್ತಿಯ ಮೇಲೆ ಲೇಸರ್ ಶೋನ ನೆರಳು ಬೆಳಕಿನ ಆಟ ಇನ್ನಷ್ಟು ರೋಮಾಂಚನ ಹುಟ್ಟಿಸುತ್ತದೆ. ಒಳಗೂ ಮಿಂಚು ಹುಟ್ಟಿಸುವ ಆ ಗಳಿಗೆಯನ್ನೇ ಮೆಲುಕು ಹಾಕುತ್ತ ಭಿಕ್ಷಾ ಹಾಲ್ ತಲುಪಿದರೆ ತಟ್ಟೆ ತುಂಬ ಸಾತ್ವಿಕ ಭೋಜನ! ಇಂಟೆರ್ ಮಿಟೆಂಟ್ ಫಾಸ್ಟ್ ಅನುಸರಿಸುವ ಈಶಾದಲ್ಲಿ ದಿನಕ್ಕೆ ಎರಡೇ ಹೊತ್ತು ಊಟವಿರುವ ಕಾರಣ ದೊಡ್ಡ ತಟ್ಟೆ ತುಂಬ ರಾಶಿ ಊಟ ಕೊಡಲಾಗುತ್ತದೆ. ಹಾಗಾಗಿ ಕಡಿಮೆ ತಿನ್ನುವವರು ಮೊದಲೇ ನೋಡಿ ಹಾಕಿಸಿಕೊಳ್ಳುವುದು ಉತ್ತಮ. ಆದರೆ ಇಲ್ಲಿ ಹಲವು ಸಾಧನಾ ಪಥದಲ್ಲಿ ಮಗ್ನರಾದವರಿಗೆ ಪೌಷ್ಟಿಕ ಊಟ ಬೇಕೇ ಬೇಕು.

ಬಾಯಿ ರುಚಿಯವರಿಗೆ ಪೆಪ್ಪರ್ ವೈನ್ ಈಟರಿ ಎಂಬ ಅದ್ಭುತ ರುಚಿಯುಣಿಸುವ ಪಾಕಶಾಲೆಯಿದೆ. ನೀವು ಆಹಾರ ಸೇವಿಸುವಾಗ ಸಾಂಬ್ರಾಣಿಯ ಘಮವನ್ನು ಹರಡುತ್ತ ಬರುವ ಕ್ಷಣ ಒಂದು ಅಲೌಕಿಕವಾತಾವರಣವನ್ನೇ ಸೃಷ್ಟಿಸುತ್ತದೆ.

ಮರುದಿನ ಗುರುಪೂಜೆಯನ್ನು ಕಣ್ತುಂಬಿಕೊಂಡು, ಈಶಾ ಭೇಟಿಯ ಸ್ಮರಣೆಗಾಗಿ ನಮಗೆ ಬೇಕಾಗಿದ್ದ ಕೆಲವನ್ನು ಕೊಂಡು ಮನೆಗೆ ವಾಪಸ್ಸು ಹೊರಟಾಗ ಒಂದು ಸಾರ್ಥಕ ಭಾವ. ಮನೆಗೆ ಮರಳುವಾಗ ಶಿವನನ್ನು ಮತ್ತಷ್ಟು ಒಳಗೊಳ್ಳುತ್ತ ಬಂದೆವು.

ಫೋಟೋ ಕೃಪೆ : ಅಂತರ್ಜಾಲ

ಪ್ರಪಂಚದ ಲಕ್ಷಾಂತರ ಜನರಿಗೆ ಶಿವಲೀಲೆಯ ಸೊಬಗು ತೋರಿದ್ದು, ಶಿವ ನಾಮ ಸ್ಮರಣೆಯ ರುಚಿ ಹತ್ತಿಸಿದ್ದು, ಭಾರತೀಯ ಸಂಸ್ಕೃತಿ ಮತ್ತು ಕಲೆಯ ಪ್ರಸರಣದತ್ತ ದೊಡ್ಡ ಹೆಜ್ಜೆಯಿಟ್ಟಿದ್ದು, ಯುವ ಜನತೆಯನ್ನು ಯೋಗ, ಧ್ಯಾನ, ಪ್ರಾಣಾಯಾಮ, ಸನ್ನಡತೆ ಮತ್ತು ಸ್ಪಿರಿಚುಯಲ್ ಪಥದತ್ತ ನಡೆಸುತ್ತಿರುವುದನ್ನು ನೋಡಿದರೆ ವಿಸ್ಮಯವಾಗುತ್ತದೆ.

ಈಶಾದ ದಿ ಬೆಸ್ಟ್ ಅನುಭವ ಅಂದರೆ ಅಲ್ಲಿ ಯಾವ ತೋರಿಕೆಯೂ ಬೇಕಿಲ್ಲ. ನಮ್ಮ ದುಬಾರಿ ಉಡುಗೆ – ತೊಡುಗೆ, ಅಲಂಕಾರ ಯಾವುದಕ್ಕೂ ಅಲ್ಲಿ ಮಹತ್ವವಿಲ್ಲ. ಅಲ್ಲಿ ಸಾಧನಾ ಪಥ ಮಾತ್ರ ಮುಖ್ಯ. ಒಂದು ಕಾಟನ್ ಕುರ್ತಾ, ಪೈಜಾಮದಂಥ ಸರಳ ಉಡುಗೆ, ಮೇಕಪ್ಪಿನ ಹಂಗಿಲ್ಲದ ನೈಜ ರೂಹು ಸಾಕು. ಸ್ಪಿರಿಚುಯಲ್ ಲೋಕದಲ್ಲಿ ವಿವಿಧ ಸಾಧನೆಗಳಲ್ಲೇ ಪರಮಾನಂದ ಕಾಣುವ ಜೀವಗಳ ಶಿಸ್ತನ್ನು ನೋಡುವುದೇ ಒಂದು ಸುಖ. ಸ್ವಯಂ ಸೇವಕರೆನ್ನುವ ಅಸಾಮಾನ್ಯ ಪಡೆ ಇಡೀ ಆವರಣದ ದೊಡ್ಡ ಶಕ್ತಿ. ಇವರೊಟ್ಟಿಗೆ ಎಲ್ಲೆಲ್ಲೂ ಎಲ್ಲರನ್ನೂ ಅಕ್ಕಾ, ಅಣ್ಣಾ ಎಂದು ಕರೆಯುತ್ತ ಆಪ್ತ ಭಾವ ಮೂಡಿಸುವ ವಾತಾವರಣ ಮತ್ತೆ ಮತ್ತೆ ಈಶಾವನ್ನು ಬಯಸುತ್ತದೆ.

ಸದ್ಗುರು ಎಂಬ ಒಂದು ಶಕ್ತಿ ಕಟ್ಟಿದ ಈಶಾ ಎಂಬ ಅಲೌಕಿಕ ಲೋಕದ ಅಗಾಧತೆ ವಿಸ್ಮಯಕರ. ಇದು ಹುಟ್ಟು ಹಾಕಿದ ಕಮ್ಯೂನಿಟಿ ಎಲ್ಲೆಡೆ ಹಂಚಿದ ಸೋದರತ್ವದ ಭಾವ ಕೂಡ ಯಾರೂ ಎಷ್ಟು ಪ್ರಯತ್ನ ಮಾಡಿದರೂ ಮುರಿಯಲಾಗದ್ದು.

ಧಾವಂತದ ಬದುಕಿನಲ್ಲಿ ಒಮ್ಮೆ ನಿಂತು ಉಸಿರಾಡುವ ಆ ಒಂದು ಗಳಿಗೆ ಬೇಕೆಂದರೆ, ಒಂದಿಷ್ಟು ದಿನ ಎಲ್ಲ ಇಸಮುಗಳಿಗೆ ವಿದಾಯ ಹೇಳಬೇಕೆಂದರೆ, ನೀವು ನೀವಾಗಿ ಇರಬೇಕೆಂದರೆ
ಎಲ್ಲ ಈಗೋ ಬಿಟ್ಟು ಈಶಾಕ್ಕೆ ಹೊರಡಿ, ಅಷ್ಟೇ.


  • ಕವಿತಾ ಹೆಗಡೆ ಅಭಯಂ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW